ಪಂಜಾಬ್ ಮತ್ತು ಹರಿಯಾಣ ನಡುವೆ ಕಳೆದ ಐದು ದಶಕಗಳಿಂದ ಸಾಗಿದ್ದ ಜಲವಿವಾದಕ್ಕೆ ಸುಪ್ರೀಂಕೋರ್ಟ್ ತನ್ನ ತೀರ್ಪಿನ ಮೂಲಕ ಅಂತ್ಯಹಾಡಿದೆ. ಹರಿಯಾಣ ಸೇರಿ ಇತರೆ ರಾಜ್ಯಗಳೊಂದಿಗೆ ಮಾಡಿಕೊಂಡಿದ್ದ ಜಲಒಪ್ಪಂದವನ್ನು 2004ರಲ್ಲಿ ‘ಪಂಜಾಬ್ ಟರ್ವಿುನೇಶನ್ ಆಫ್ ಅಗ್ರಿಮೆಂಟ್ ಆಕ್ಟ್’ ಮೂಲಕ ಕೊನೆಗೊಳಿಸಿದ್ದ ಪಂಜಾಬ್ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಅಸಾಂವಿಧಾನಿಕ ಎಂದು ಹೇಳಿ, ಆ ಕಾನೂನನ್ನೇ ಅನೂರ್ಜಿತಗೊಳಿಸಿದೆ. ಅಲ್ಲದೆ, ಸಟ್ಲೇಜ್-ಯಮುನಾ ಸಂಪರ್ಕ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆಯೂ ಪಂಜಾಬ್ಗೆ ಸೂಚಿಸಿದೆ. ಸುಪ್ರೀಂಕೋರ್ಟ್ನ ಈ ತೀರ್ಪಿನಿಂದ ದಶಕಗಳ ಜಲಜಗಳ ಅಂತ್ಯವಾಗುವ ಕಾಲ ಸಮೀಪಿಸಿದೆ ಎನ್ನಬಹುದು.
ನ್ಯಾ.ಎ.ಆರ್.ದವೆ ನೇತೃತ್ವದ ಐವರು ಸದಸ್ಯರನ್ನು ಒಳಗೊಂಡ ಪೀಠ ಎಸ್ವೈಎಲ್ ಜಲವಿವಾದದ ಕುರಿತಂತೆ ನೀಡಿದ ಆದೇಶದಲ್ಲಿ-ಏಕಪಕ್ಷೀಯ ನಿರ್ಣಯ ತೆಗೆದುಕೊಂಡು ಉಳಿದ ರಾಜ್ಯಗಳ ಪಾಲಿನ ನೀರನ್ನು ತಡೆಯುವ/ನಿಲ್ಲಿಸುವ ಅಧಿಕಾರ ಪಂಜಾಬ್ಗಿಲ್ಲ ಎಂದಿದೆ. 2004ರಲ್ಲಿ ಕಾಂಗ್ರೆಸ್ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಜಲಒಪ್ಪಂದ ರದ್ದುಗೊಳಿಸುವ ಕಾನೂನು ರೂಪಿಸಿದ್ದರು.
ಅಷ್ಟಕ್ಕೂ, ಪಂಜಾಬ್ನಿಂದ ಹರಿಯಾಣ ಬೇರ್ಪಟ್ಟಾಗಲೇ (1966) ರಾವಿ- ಬಿಯಾಸ್ ನದಿ ನೀರು ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 1976ರಲ್ಲಿ ಆಗಿನ ಕೇಂದ್ರ ಸರ್ಕಾರ, ಒಟ್ಟು ಜಲಸಂಗ್ರಹವಿರುವ 7.2 ಎಂಎಎಚ್ (ಮಿಲಿಯನ್ ಎಕರೆ ಅಡಿ) ಪೈಕಿ ಹರಿಯಾಣಕ್ಕೆ 3.5 ಎಂಎಎಚ್ ನೀರನ್ನು ಹರಿಸಲು ಸೂಚಿಸಿತ್ತು. ಆದರೆ, ಪಂಜಾಬ್ ಆ ಆದೇಶ ಪಾಲಿಸದ್ದರಿಂದ ಹರಿಯಾಣ ನ್ಯಾಯಾಲಯದ ಮೊರೆ ಹೋಯಿತು. ಆದಾಗ್ಯೂ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1981ರಲ್ಲಿ ಮಧ್ಯಸ್ಥಿಕೆ ವಹಿಸಿ ಪಂಜಾಬ್, ಹರಿಯಾಣ, ರಾಜಸ್ಥಾನ ರಾಜ್ಯಗಳ ಮುಖ್ಯಮಂತ್ರಿಗಳಿಂದ ಒಪ್ಪಂದಕ್ಕೆ ಸಹಿ ಹಾಕಿಸಿ, ಎಸ್ವೈಎಲ್ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಆದರೆ, ಮುಂದೆ ಪಂಜಾಬ್ ಕಾಲುವೆ ಕಾಮಗಾರಿ ಪೂರ್ಣಗೊಳಿಸದ್ದರಿಂದ ಹರಿಯಾಣ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು ಎನ್ನುವುದೀಗ ಇತಿಹಾಸ.
ಭಾರತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದ್ದು, ಎಲ್ಲ ರಾಜ್ಯಗಳು ಪರಸ್ಪರ ಸಹಕಾರ, ವಿಶ್ವಾಸದಿಂದ ನಡೆದುಕೊಂಡಲ್ಲಿ ಅಭಿವೃದ್ಧಿಯ ದಾರಿಯಲ್ಲಿ ಸಾಗಬಹುದು. ಆದರೆ, ಜಲವಿವಾದಗಳು ಅದೆಷ್ಟು ತೀವ್ರಸ್ವರೂಪ ಪಡೆದುಕೊಳ್ಳುತ್ತಿವೆ ಎಂದರೆ ಇದರಿಂದ ರಾಜ್ಯ-ರಾಜ್ಯಗಳ ನಡುವಿನ ಸಂಬಂಧ, ಸೌಹಾರ್ದಗಳೇ ಹಾಳಾಗುತ್ತಿವೆ. ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿವೆ. ಯಾವುದೇ ರಾಜ್ಯವಾಗಿರಲಿ ಅದು ಪಕ್ಕದ ರಾಜ್ಯದೊಂದಿಗೆ ನೀರು ಹಂಚಿಕೊಳ್ಳುವುದಿಲ್ಲ ಎಂದು ಹೇಳಲಾಗದು. ನೀರು ಕೊಡುವುದಿಲ್ಲ ಎಂಬ ಹಠಮಾರಿ ಧೋರಣೆಯಿಂದ ಎರಡೂ ರಾಜ್ಯಗಳ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ ಎಂಬುದನ್ನು ಮರೆಯಬಾರದು.
ಕರ್ನಾಟಕ ಮತ್ತು ತಮಿಳುನಾಡು ನಡುವೆಯೂ ದೀರ್ಘಾವಧಿಯಿಂದ ಕಾವೇರಿ ಜಲವಿವಾದ ಇದೆ. ಆದರೆ, ಕರ್ನಾಟಕ ಎಂದೂ ನೀರು ಬಿಡುವುದಿಲ್ಲ ಎಂದು ಹೇಳಿಲ್ಲ. ಸಂಕಷ್ಟದ ಸಮಯ ಅಂದರೆ ಮಳೆಯಿಲ್ಲದೆ ರಾಜ್ಯದ ಜನರೇ ಕುಡಿಯುವ ನೀರಿಗಾಗಿ ತತ್ವಾರ ಪಡುವಂಥ ಸ್ಥಿತಿಯಲ್ಲಿ ಪರಿಹಾರಸೂತ್ರಗಳನ್ನು ಕಲ್ಪಿಸಬೇಕೆಂದಷ್ಟೇ ಹೇಳಿದೆ. ರಾಜ್ಯ-ರಾಜ್ಯಗಳ ನಡುವೆ ಕೊಡುಕೊಳ್ಳುವಿಕೆ ಇರಲೇಬೇಕು. ಮುಖ್ಯವಾಗಿ, ಜಲವಿವಾದಗಳನ್ನು ನ್ಯಾಯಾಲಯಗಳವರೆಗೆ ತೆಗೆದುಕೊಂಡು ಹೋಗುವುದರಿಂದ ಅಪಾರ ಪ್ರಮಾಣದ ಸಮಯ ಹಾಗೂ ಹಣ ಖರ್ಚಾಗುತ್ತಿದೆ. ರಾಜ್ಯಗಳು ಪರಸ್ಪರ ಮಾತುಕತೆ, ಸೌಹಾರ್ದದ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಯತ್ನಿಸುವುದು ಉತ್ತಮ. ನಮ್ಮ ರಾಜಕೀಯ ನಾಯಕರು ಆ ಬಗ್ಗೆ ವಿವೇಚನೆ ತೋರುವರೇ? ಪಂಜಾಬ್ ಇನ್ನಾದರೂ ಹಠಮಾರಿ ಧೋರಣೆ ಬಿಟ್ಟು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಕು. ಮುಖ್ಯವಾಗಿ ರಾಜಕೀಯ ಪಕ್ಷಗಳು ನೀರಿನಂಥ ಭಾವನಾತ್ಮಕ ವಿಷಯದ ಮೇಲೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಬಾರದು.
No comments:
Post a Comment