ಚುನಾವಣೆ ಹೊತ್ತಲ್ಲಿ ಮತಗಳನ್ನು ಸೆಳೆಯಲು ಬಣ್ಣಬಣ್ಣದ ಆಶ್ವಾಸನೆಗಳನ್ನು ನೀಡುವುದು ರಾಜಕೀಯ ಪಕ್ಷಗಳಿಗೆ ರೂಢಿಯಾಗಿಬಿಟ್ಟಿದೆ. ಆ ಭರವಸೆಗಳ ಅನುಷ್ಠಾನದ ಸಾಧ್ಯಾಸಾಧ್ಯತೆ, ಖಜಾನೆಯ ಸ್ಥಿತಿಗತಿ ಇದ್ಯಾವುದನ್ನೂ ಅವಲೋಕಿಸದೆ ಆಶ್ವಾಸನೆಗಳನ್ನು ಹರಿಯಬಿಡುತ್ತಾರೆ. ಈ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ರೈತರ ಸಾಲಮನ್ನಾ ಮಾಡುವ ಆಶ್ವಾಸನೆ ನೀಡಿದವು. ಇದನ್ನು ಈಗ ಅನುಷ್ಠಾನರೂಪಕ್ಕೆ ತರುವ ಸವಾಲು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ರೈತರ ಸಭೆ ನಡೆಸಿದ್ದು, ಕಾಲಾವಕಾಶ ಕೋರಿದ್ದಾರೆ. ಸಾಲಮನ್ನಾಕ್ಕೆ ಸುಮಾರು 53 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದ್ದು, ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಹಲವು ಕಸರತ್ತುಗಳನ್ನು ನಡೆಸಲಾಗುತ್ತಿದೆ; ಇಲಾಖೆಗಳಿಗೆ ಈ ನಿಟ್ಟಿನಲ್ಲಿ ಸೂಚನೆಯೂ ಹೋಗಿದೆ. ಸಾಲಮನ್ನಾಕ್ಕಾಗಿ ಸಂಪನ್ಮೂಲ ಸಂಗ್ರಹಕ್ಕೆ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಲು (60ರಿಂದ 62ಕ್ಕೆ), ಹೊಸ ನೇಮಕಾತಿಗಳಿಗೆ ಬ್ರೇಕ್ ಹಾಕಲು ಹಣಕಾಸು ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮಂಜೂರಾಗಿರುವ 7.20 ಲಕ್ಷ ಹುದ್ದೆಗಳಿದ್ದು, 1.67 ಲಕ್ಷ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳನ್ನು ಭರ್ತಿ ಮಾಡಬೇಕು, ಅಲ್ಲದೆ ಹೊಸ ಹುದ್ದೆಗಳನ್ನೂ ಸೃಷ್ಟಿಸಬೇಕು ಎಂದು ಲಕ್ಷಾಂತರ ನಿರುದ್ಯೋಗಿಗಳ ಯುವಸಮೂಹ ಆಗ್ರಹಿಸುತ್ತಿದೆ. ಸಮಾಜದ ಒಂದು ವರ್ಗಕ್ಕೆ ಸ್ವಲ್ಪ ನಿರಾಳತೆ ಒದಗಿಸಲು ಹೋಗಿ ಯುವಕರ ಆಶಯ, ಕನಸುಗಳೊಂದಿಗೆ ಆಟವಾಡುವ ಅಪಾಯಕಾರಿ ಚಿಂತನೆಯೇ ಇದು ಎಂಬ ಅನುಮಾನವೂ ಕಾಡುತ್ತಿದೆ. ವಯಸ್ಸಾಗುತ್ತಿದ್ದಂತೆ ನೌಕರರ ಕಾರ್ಯಕ್ಷಮತೆ ತಗ್ಗುತ್ತದೆ ಎಂಬ ಕಾರಣಕ್ಕಾಗಿಯೇ ನಿವೃತ್ತಿ ವಯಸ್ಸನ್ನು 58ಕ್ಕೆ ನಿಗದಿ ಮಾಡಲಾಗಿತ್ತು. ಆ ಬಳಿಕ ಅದನ್ನು 60ಕ್ಕೆ ಏರಿಸಲಾಯಿತು. ಈಗ ಇದನ್ನು 62ಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ. ಕೇವಲ ಸಂಪನ್ಮೂಲ ಸಂಗ್ರಹ ಉದ್ದೇಶದಿಂದ ಇಂಥ ಚಿಂತನೆ ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ, ಆರ್ಥಿಕ ಹೊಂದಾಣಿಕೆಯ ಕಸರತ್ತಿನಲ್ಲಿ ಮುಳುಗಿರುವ ಸರ್ಕಾರ ಯಾವ ಮೂಲದಿಂದಾದರೂ ಸರಿ ದುಡ್ಡು ಉಳಿಸಿ ಸಾಲಮನ್ನಾ ಸವಾಲಿನಿಂದ ಪಾರಾಗಲು ಬಯಸುತ್ತಿದೆ. ಎರಡು ವರ್ಷದಲ್ಲಿ 30,162 ನೌಕರರು ನಿವೃತ್ತರಾಗಲಿದ್ದು, ವಯೋಮಿತಿ ಹೆಚ್ಚಳ ಮಾಡಿದರೆ ನಿವೃತ್ತಿ ನಂತರ ನೀಡಬೇಕಾದ ಸೌಲಭ್ಯಗಳಲ್ಲಿ ಸುಮಾರು 5 ಸಾವಿರ ಕೋಟಿ ರೂ. ಉಳಿತಾಯ ಮಾಡಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಅತ್ತ ಕೇಂದ್ರ ಸರ್ಕಾರ ಕೂಡ ಏಳನೇ ವೇತನ ಆಯೋಗದ ವರದಿಯನ್ವಯ ನೌಕರರ ನಿವೃತ್ತಿ ವಯಸ್ಸನ್ನು ಏರಿಸಲು ಚಿಂತನೆ ನಡೆಸುತ್ತಿದೆಯೆಂಬ ವರದಿಗಳಿವೆ.
ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ಖಾಲಿ ಹುದ್ದೆಗಳ ನೇಮಕಾತಿ ಹಾಗೂ ನೂತನ ಉದ್ಯೋಗಸೃಷ್ಟಿ ಕುರಿತಂತೆ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿವೆ. ಈಗ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಯುವಸಮುದಾಯದ ಆಕ್ರೋಶ, ಅಸಮಾಧಾನಕ್ಕೆ ಗುರಿ ಆಗಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ರೈತರ ಬವಣೆಗಳನ್ನು ಕಡಿಮೆ ಮಾಡಲು ಸಾಲಮನ್ನಾದಂಥ ಕ್ರಮವೇನೋ ಅಗತ್ಯ. ಆದರೆ, ಅದಕ್ಕಾಗಿ ಉದ್ಯೋಗಕ್ಷೇತ್ರವನ್ನು, ಸರ್ಕಾರಿಯಂತ್ರವನ್ನು ದುರ್ಬಲಗೊಳಿಸಿ ದುಡಿಯುವ ಕೈಗಳನ್ನು, ಯುವ ಕನಸುಗಳನ್ನು ನಿರಾಶೆಗೊಳಿಸುವುದು ಸಾಧುವೆ? ಸಾಧ್ಯವೇ? ಈ ವಿಷಯದ ಸಾಧಕ-ಬಾಧಕ ಕುರಿತು ವ್ಯಾಪಕ ಚರ್ಚೆಗಳಾಗಲಿ.
No comments:
Post a Comment