ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ನಗರಗಳು ವಾಯುಮಾಲಿನ್ಯದಿಂದ ತತ್ತರಿಸಿ ಜನರು ಸಂಕಷ್ಟಕ್ಕೆ ಒಳಗಾಗಿರುವಾಗಲೇ ಕರ್ನಾಟಕದಲ್ಲಿ ಜೀವವೈವಿಧ್ಯಕ್ಕೆ ಧಕ್ಕೆ ತರುವಂಥ ಮರಗಳನ್ನು ‘ಸಾಮಾಜಿಕ ಅರಣ್ಯೀಕರಣ’ದ ಸೋಗಿನಲ್ಲಿ ಅರಣ್ಯ ಇಲಾಖೆಯೇ ಬೆಳೆಸುತ್ತಿರುವ ಆಘಾತಕಾರಿ ನಡೆಸಿದ ತನಿಖೆಯಿಂದ ಹೊರಬಿದ್ದಿದೆ. ಅರಣ್ಯಗಳು ಜೀವವೈವಿಧ್ಯ ಕಾಪಾಡುವ ಜತೆಗೆ ಪರಿಸರ ಸಮತೋಲನಕ್ಕೂ ಸಹಕಾರಿ. ಅದರಲ್ಲೂ, ರಾಜ್ಯದಲ್ಲಿನ ಪಶ್ಚಿಮ ಘಟ್ಟಗಳು ಹಾಗೂ ಮಲೆನಾಡಿನ ಅರಣ್ಯಪ್ರದೇಶ ಪ್ರಾಕೃತಿಕವಾಗಿ ಸಂಪದ್ಭರಿತವಾದಂಥವು. ಆದರೆ, ಅರಣ್ಯ ಇಲಾಖೆಯು ಮಲೆನಾಡಿನಲ್ಲಿ ಹಲಸು, ಮಾವು, ಬೀಟೆಯಂತಹ ಸಾಂಪ್ರದಾಯಿಕ ಮರಗಳನ್ನು ಬೆಳೆಸುವುದು ಬಿಟ್ಟು ಅಕೇಶಿಯಾ, ನೀಲಗಿರಿ ಮರಗಳನ್ನು ಭಾರಿ ಪ್ರಮಾಣದಲ್ಲಿ ಬೆಳೆಸುತ್ತಿದೆ. ಕಳೆದೊಂದು ದಶಕದಲ್ಲಿ ಕರ್ನಾಟಕವು 1.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣವನ್ನು ಮಾಡಬೇಕಿತ್ತು. ವಿಪರ್ಯಾಸವೆಂದರೆ, ಈ ಪೈಕಿ 93 ಸಾವಿರ ಹೆಕ್ಟೇರ್ ಅರಣ್ಯೀಕರಣವು ಅಕೇಶಿಯಾ ಹಾಗೂ ನೀಲಗಿರಿ ಮರಗಳಿಂದ ತುಂಬಿಕೊಂಡಿದ್ದು, ಇದನ್ನು ಅರಣ್ಯ ಇಲಾಖೆಯ ಲೆಕ್ಕಪರಿಶೋಧನೆ ವರದಿಯೇ ದೃಢಪಡಿಸಿದೆ.
ಅಕೇಶಿಯಾ ಹಾಗೂ ನೀಲಗಿರಿ ಎಲೆಗಳು ಪಶ್ಚಿಮ ಘಟ್ಟಗಳ ಸಾಂಪ್ರದಾಯಿಕ ಮರಗಳ ಎಲೆಗಳಿಗಿಂತ ದಪ್ಪ ಇರುತ್ತವೆ. ಇವು ಮಣ್ಣಿನಲ್ಲಿ ಬೇಗ ಕರಗುವುದೂ ಇಲ್ಲ, ಮಳೆನೀರು ಸುಲಭವಾಗಿ ಇಂಗುವುದಕ್ಕೂ ಅವಕಾಶ ಕೊಡುವುದಿಲ್ಲ. ಹೀಗಾಗಿ, ಈ ಮರಗಳು ದೊಡ್ಡವಾಗುವಷ್ಟರಲ್ಲಿ ಫಲವತ್ತಾದ ಭೂಮಿ ಬರಡಾಗಿರುತ್ತದೆ. ಈ ಕಾರಣಕ್ಕಾಗಿಯೇ, ಹಿಂದಿನ ಬಿಜೆಪಿ ಸರ್ಕಾರ ಅಕೇಶಿಯಾ ನೆಡುತೋಪನ್ನು ನಿಷೇಧಿಸಿತ್ತು ಎಂಬುದಿಲ್ಲಿ ಸ್ಮರಣಾರ್ಹ. ಅರಣ್ಯಗಳಿಗೆ ಮಾತ್ರವಲ್ಲದೆ ಕೃಷಿ ಮತ್ತು ಹೈನು ಚಟುವಟಿಕೆಗಳಿಗೂ ಅಕೇಶಿಯಾ ಮಾರಕವಾಗಿ ಪರಿಣಮಿಸುತ್ತದೆ ಎಂಬ ಅಂಶ ಗಾಬರಿ ಹುಟ್ಟಿಸುವಂಥದ್ದು. ಅಕೇಶಿಯಾ ನೆಡುತೋಪು ಕಾಡನ್ನು ಅತೀವವಾಗಿ ವ್ಯಾಪಿಸುತ್ತಿರುವ ಕಾರಣ, ವನ್ಯಜೀವಿಗಳ ಆಹಾರಕ್ಕೆ ಸಂಚಕಾರ ಒದಗಿ ಅವು ಹಸಿವು ನೀಗಿಸಿಕೊಳ್ಳಲು ಕೃಷಿಭೂಮಿ ಮೇಲೆ ದಾಳಿಮಾಡುತ್ತಿದ್ದು ರೈತರು ಕಂಗಾಲಾಗುವಂತಾಗಿದೆ. ಇನ್ನು ಅಕೇಶಿಯಾ ಎಲೆಯನ್ನು ಗೊಬ್ಬರದ ಗುಂಡಿಗೆ ಹಾಕಿ ತರುವಾಯ ತೋಟದಲ್ಲಿ ಬಳಸಿದಾಗ ಏಲಕ್ಕಿ, ಮೆಣಸು ಹಾಗೂ ವೆನಿಲಾ ಬಳ್ಳಿಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ. ಇಷ್ಟೇ ಅಲ್ಲ, ಅಕೇಶಿಯಾ ಎಲೆಯಿಂದ ಉತ್ಪತ್ತಿಯಾಗುವ ವಿಷಕಾರಿ ಅಂಶವು, ಬೆಳೆಗಳ ಪರಾಗಸ್ಪರ್ಶಕ್ಕೆ ಅಗತ್ಯವಿರುವ ಕೀಟಗಳಿಗೆ ಮಾರಕವಾಗಿ, ಕೃಷಿ ಆದಾಯದಲ್ಲಿ ಗಣನೀಯ ಕುಸಿತವಾಗುತ್ತದೆ ಎಂಬ ಸಂಗತಿಯೂ ಹೊರಬಿದ್ದಿದೆ. ಜತೆಗೆ, ಕಳೆಗಿಡಗಳು ಅಥವಾ ಹುಲ್ಲಿನ ಬೆಳವಣಿಗೆಗೂ ಅಕೇಶಿಯಾ ಅಥವಾ ನೀಲಗಿರಿ ಮರಗಳು ಆಸ್ಪದ ನೀಡುವುದಿಲ್ಲವಾದ್ದರಿಂದ, ಜಾನುವಾರುಗಳಿಗೆ ಮತ್ತು ಭೂಮಿಯ ಫಲವತ್ತತೆ ಹೆಚ್ಚಿಸಲು ಬಳಸುವುದಕ್ಕೆ ಹುಲ್ಲು ಕೂಡ ಸಿಗುವುದಿಲ್ಲ ಎಂದು ತಿಳಿದುಬಂದಿದೆ.
ಇಷ್ಟೆಲ್ಲ ನಕಾರಾತ್ಮಕ ಪರಿಣಾಮಗಳಿದ್ದರೂ, ಸರ್ಕಾರವು ಅರಣ್ಯೀಕರಣದ ಹೆಸರಿನಲ್ಲಿ ಅಕೇಶಿಯಾ ಮತ್ತು ನೀಲಗಿರಿ ಮರಗಳಿಗೆ ಮಣೆಹಾಕುತ್ತಿರುವುದೇಕೋ ತಿಳಿಯುತ್ತಿಲ್ಲ. ಕೃಷಿರಂಗ ಮತ್ತು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ನಿರೀಕ್ಷಿತ ಮಳೆ ಬಾರದೆ ಪೈರು ಒಣಗಿಹೋಗುವ ಅಥವಾ ಕಟಾವಿಗೆ ಬಂದಿದ್ದ ಪೈರು ಅತಿವೃಷ್ಟಿಯಿಂದಾಗಿ ಕೊಚ್ಚಿಹೋಗುವ ಸಮಸ್ಯೆಗಳನ್ನು ಎದುರಿಸುತ್ತಿರುವ, ಸಾಲದ ಶೂಲಕ್ಕೆ ಎದೆಯೊಡ್ಡಿ ನಿಂತಿರುವ ರೈತಬಾಂಧವರ ಸಮಸ್ಯೆಗಳ ಪಟ್ಟಿಗೆ ಮತ್ತೊಂದು ಕಿರಿಕಿರಿ ಸೇರುವಂತಾಗಬಾರದು. ಅರಣ್ಯ ಇಲಾಖೆಯು ಇನ್ನಾದರೂ ಎಚ್ಚೆತ್ತುಕೊಂಡು, ಇಂಥ ಮಾರಕಸಸ್ಯಗಳಿಗೆ ಮಣೆಹಾಕುವುದನ್ನು ನಿಲ್ಲಿಸಿ, ಪರಿಸರ ಸ್ನೇಹಿ ಮತ್ತು ಕೃಷಿಸ್ನೇಹಿ ಅರಣ್ಯೀಕರಣಕ್ಕೆ ಮುಂದಾದರೆ ಒಳಿತು.
No comments:
Post a Comment