ಭಾರತವನ್ನು ಡಿಜಿಟಲೀಕರಣಗೊಳಿಸುವ ಮಹತ್ವಾಕಾಂಕ್ಷೆಯಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ, ಕೈಗೊಳ್ಳುತ್ತಿದೆ. ಅದರಲ್ಲೂ, ನೋಟು ಅಮಾನ್ಯೀಕರಣದ ಕ್ರಮದ ಬಳಿಕ ನಗದುರಹಿತ ಆರ್ಥಿಕತೆ ಸ್ಥಾಪಿಸಲು ಕೇಂದ್ರ ಮುಂದಾಗಿದ್ದು, ಅದಕ್ಕಾಗಿ ಡಿಜಿಟಲ್ ಆರ್ಥಿಕತೆಗೆ ಪ್ರೋತ್ಸಾಹ ನೀಡುತ್ತಿದೆ. ಮೊಬೈಲುಗಳ ಮೂಲಕ ಆರ್ಥಿಕ ವಹಿವಾಟುಗಳನ್ನು ನಡೆಸಲು ಹಲವು ಆಪ್ಗಳು, ವಿವಿಧ ತಂತ್ರಜ್ಞಾನಗಳು ಜಾರಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆಯೇ. ಆದರೆ, ಈ ಇಡೀ ಡಿಜಿಟಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಇಂಟರ್ನೆಟ್ ವೇಗವಾಗಿರಬೇಕು, ಇಂಟರ್ನೆಟ್ನ ಲಭ್ಯತೆ ಗ್ರಾಮೀಣ ಪ್ರದೇಶಕ್ಕೂ ತಲುಪಬೇಕು. ಆದರೆ, ಇಂಥ ಕೆಲ ಮೂಲಭೂತ ಸಂಗತಿಗಳಲ್ಲೇ ಭಾರತ ಸಾಗಬೇಕಾದ ದಾರಿ ತುಂಬ ದೂರವಿದೆ ಎಂಬುದನ್ನು ಅಕಾಮೈ ಎಂಬ ಖ್ಯಾತ ಇಂಟರ್ನೆಟ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಬೊಟ್ಟುಮಾಡಿದೆ.
ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಾದರೂ ಡೌನ್ಲೋಡ್ನ ವೇಗ ಮಾತ್ರ ಕಡಿಮೆ. ಈ ವಿಷಯದಲ್ಲಿ ಭಾರತವು ನೇಪಾಳ ಮತ್ತು ಬಾಂಗ್ಲಾದೇಶಗಳಿಗಿಂತಲೂ ಹಿಂದುಳಿದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ತರಂಗಾಂತರ ಲಭ್ಯತೆಯಲ್ಲಿ ನಮ್ಮ ದೇಶವು 105ನೇ ರ‍್ಯಾಂಕಿಂಗ್ ಹೊಂದಿದ್ದರೆ ಡೌನ್ಲೋಡ್ ವೇಗದಲ್ಲಿ 96ನೇ ಸ್ಥಾನ ಹೊಂದಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ನ ಲಭ್ಯತೆ ಪ್ರಮಾಣ ತುಂಬ ಕಡಿಮೆಯಿದ್ದು, ಇದು ಡಿಜಿಟಲ್ ಆರ್ಥಿಕತೆಗೆ ಬಹುದೊಡ್ಡ ಅಡ್ಡಿಯಾಗಿದೆ ಎಂದಿದೆ. ನಗರಪ್ರದೇಶಗಳಲ್ಲಿ ಬಳಕೆದಾರರ ದಟ್ಟಣೆಯೂ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ನಗರಪ್ರದೇಶದಲ್ಲೂ ಡೌನ್ಲೋಡ್ ವೇಗ ಕ್ಷೀಣಿಸಿದೆ. ಆದರೆ, ಇಂಟರ್ನೆಟ್ ಈಗಿರುವ ವೇಗದಲ್ಲೇ ಕಾರ್ಯನಿರ್ವಹಿಸಿದರೆ ಜನರಿಗೆ ಆರ್ಥಿಕ ವಹಿವಾಟುಗಳನ್ನು ನಡೆಸಲು ತೀವ್ರ ತೊಂದರೆಯಾಗುತ್ತದೆ ಎಂಬುದಂತೂ ದಿಟ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ, ಷಾಪಿಂಗ್ ಹೀಗೆ ಯಾವುದೇ ವಹಿವಾಟಿನ ಪ್ರಕ್ರಿಯೆ ಮೊಬೈಲ್ ಮೂಲಕ ಪೂರೈಸಬೇಕಾದರೆ ಇಂಟರ್ನೆಟ್ ವೇಗ ಹೊಂದಿರುವುದು ಅತ್ಯಗತ್ಯ. ಇನ್ನು, ವಾಣಿಜ್ಯ ಬಳಕೆಯ ಅದರಲ್ಲೂ ಬ್ಯಾಂಕುಗಳಲ್ಲಿರುವ ಸಾಫ್ಟ್ವೇರ್ಗಳನ್ನು ಮೇಲ್ದರ್ಜೆಗೆ ಏರಿಸಬೇಕಿದ್ದು, ಇಂಟರ್ನೆಟ್ನ ತಲುಪುವಿಕೆ ಹೆಚ್ಚಬೇಕಿದೆ. ಮತ್ತೊಂದು ಪ್ರಮುಖ ಸವಾಲಾಗಿ ಕಾಡುತ್ತಿರುವುದು ಸೈಬರ್ ಸುರಕ್ಷತೆ. ಎಲ್ಲ ಆರ್ಥಿಕ ವಹಿವಾಟುಗಳು ಡಿಜಿಟಲೀಕರಣಗೊಂಡರೆ ಅದಕ್ಕೆ ಕನ್ನ ಹಾಕುವ ಅಪಾಯವೂ ಇದ್ದದ್ದೇ. ಈ ನಿಟ್ಟಿನಲ್ಲಿ ಸರ್ಕಾರ ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದೆಯಾದರೂ ಇದನ್ನು ಗಂಭೀರ ಸಮಸ್ಯೆಯಾಗಿ ಸ್ವೀಕರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವುದು ಒಳಿತು. ಭಾರತ ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ಮನ್ನಣೆ ಪಡೆದುಕೊಂಡಿರುವ ರಾಷ್ಟ್ರ. ಹೀಗಿದ್ದರೂ ಇತರೆ ದೇಶಗಳಿಗಿಂತ ಇಂಟರ್ನೆಟ್ ಸೇವೆ ಕಡಿಮೆವೇಗ ಹೊಂದಿರುವುದು, ತರಂಗಾಂತರ ಹಂಚಿಕೆಯಲ್ಲೂ ಹಿಂದಿರುವುದು ಏಕೆ ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಡಿಜಿಟಲ್ ಯುಗದಿಂದ ಪಾರದರ್ಶಕತೆ ಹೆಚ್ಚಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂಬುದೇನೋ ನಿಜ. ಆದರೆ, ಈ ಹಾದಿಯಲ್ಲಿನ ಕೊರತೆಗಳನ್ನು ನಿವಾರಿಸಿಕೊಂಡರೆ ಮಾತ್ರ ಸರ್ಕಾರ ತನ್ನ ಮೂಲೋದ್ದೇಶದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂಬುದನ್ನು ಮರೆಯಬಾರದು.
No comments:
Post a Comment