ವಿದ್ಯಾರ್ಥಿ ಸ್ನೇಹೀ ಸತತ ಸಮಗ್ರ ಮೌಲ್ಯಮಾಪನ
ಪರೀಕ್ಷಾ ಸುಧಾರಣೆಯ ಭಾಗವಾಗಿ ಸತತ ಸಮಗ್ರ ಮೌಲ್ಯಮಾಪನವನ್ನು ದೇಶದುದ್ದಗಲ ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸಿದ ಬಳಿಕ ಅದು ಒಂದು ಸಂಚಲನವನ್ನೇ ಉಂಟುಮಾಡಿದೆ. ಶಿಕ್ಷಕರು ‘ಫಾರ್ಮೇಟಿವ್’, ‘ಸಮ್ಮೇಟಿವ್’ ಎಂಬಿತ್ಯಾದಿ ಪದಗಳನ್ನು ಸಲೀಸಾಗಿ ಬಳಸುವುದಕ್ಕೆ ಶುರು ಮಾಡಿದ್ದಾರೆ. ಇದು ಸ್ವಾಗತಾರ್ಹ. ದೇಶದ ದೂರ ದೂರದ ಜಿಲ್ಲೆಗಳಲ್ಲಿ ಈ ಹೊಸ ಪ್ರಯತ್ನವನ್ನು ಇವರೆ ತಾನೇ ಫಲಪ್ರದಗೊಳಿಸುವವರು. ಹಲವು ರಾಜ್ಯ ಸರ್ಕಾರಗಳು ತಂತಮ್ಮ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಅಂದರೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ- ಜಿಲ್ಲಾ ಬ್ಲಾಕು ಮತ್ತು ಕ್ಲಸ್ಟರ್ ಹಂತದ ಅಧಿಕಾರಿಗಳಿಗೆ.ಮುಖ್ಯೋಪಾಧ್ಯಾಯರಿಗೆ,ಶಿಕ್ಷಕರಿಗೆ ತಕ್ಕುದಾದ ತರಬೇತಿ ನೀಡಿ ಸಜ್ಜುಗೊಳಿಸಿದ ಕಾರಣ ಇದು ಸಾಧ್ಯವಾಗಿದೆ. ಮಕ್ಕಳಿಗೂ ಇಂದು ಇದರ ಬಗ್ಗೆ ಗೊತ್ತು. ಎಲ್ಲರೂ ಜವಾಬ್ದಾರೀ ಪ್ರಜ್ಞೆಯಿಂದ ಭಾಗವಹಿಸಿದ ಅಪರೂಪದ ಪ್ರಯೋಗ ಇದು.
ಮಕ್ಕಳನ್ನು ಅಂಕಗಳಿಕೆಗಾಗಿ ಸ್ಫರ್ಧೆಯ ಆತ್ಮಘಾತಿ ದೊಂಬರಾಟದಿಂದ ಪಾರುಮಾಡಲು ಕನಿಷ್ಠ ಒಂದು ದಶಕ ಕಾಲ ನೂರಾರು ಸಮ್ಮೇಳನಗಳು,ಸಮಾವೇಶಗಳು ಕಮ್ಮಟಗಳು ವಿಚಾರಸಂಕಿರಣಗಳು, ಸಮಿತಿಗಳು, ಆಯೋಗಗಳು ಈ ದಿಸೆಯಲ್ಲಿ ಕೆಲಸಮಾಡಿವೆ. ಆದ್ದರಿಂದಲೇ ಮೊದಲ ನೋಟಕ್ಕೆ ನನಗೆ ಅಅಇ ಜಾರಿಗೆ ಬಂದದ್ದು ಬಹಳ ಸೂಕ್ತ ಎನಿಸಿತು ಮತ್ತು ಇದರ ಬಗ್ಗೆ ನನ್ನ ಉತ್ಸಾಹ ಗರಿಕೆದರಿತ್ತು.
ಆದರೆ, ವ್ಯವಸ್ಥೆಯ ಒಳ ರಚನೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದಂತೆ ವಿಷಯ ಇನ್ನಷ್ಟು ಸ್ಪಷ್ಟವಾಗಿ ನನ್ನ ಉತ್ಸಾಹವೆಲ್ಲ ಜರ್ರನೆ ಇಳಿದುಹೋಯಿತು.ಈ ರೀತಿ ಉತ್ಸಾಹ ಇಳಿದಿದ್ದರಿಂದಲೇ CCE ಕುರಿತು ವಾಸ್ತವಾಂಶ ಅರಿಯಲು ಮನಸ್ಸು ಮಾಡಿದೆ. ನಾನು ಸತತ ಸಮಗ್ರ ಮೌಲ್ಯಮಾಪನದ ಪರಿಣಾವiಗಳೇನು ಎಂಬುದನ್ನು ಗಮನಿಸುತ್ತಾ ಹೋದಂತೆ, ಎರಡು ಅಭಿಪ್ರಾಯಗಳು ಮೂಡಿರುವುದು ಕಂಡುಬಂತು. ಒಂದು, ಈ ಸ.ಸ.ಮೌ. ಎಂಬುದು ಹೊಸ ಬಾಟಲಿಯಲ್ಲಿ ತುಂಬಿದ ಹಳೇ ಮದ್ಯ ಎಂಬ ಅಭಿಪ್ರಾಯ; ಇನ್ನೊಂದು, ಕೆಲವು ಪ್ರಾಯೋಗಿಕ ಪ್ರಯತ್ನಗಳ ಮೂಲಕ ಇದನ್ನು ಫಲಪ್ರದಗೊಳಿಸಬಹುದು ಎಂಬ ಆಶಾದಾಯಕ ಧೋರಣೆ. ಇಲ್ಲಿದೆ ನನ್ನ ವಿಚಾರಧಾರೆ.
ತಾತ್ವಿಕವಾಗಿ ಸ.ಸ.ಮೌ. ನಮ್ಮ ಶಿಕ್ಷಣದ ಪ್ರೆಶರ್ ಕುಕರ್‍ನಂಥಾ ಒತ್ತಡದ ಸ್ಥಿತಿಯಿಂದ ಮಕ್ಕಳನ್ನು ಪಾರು ಮಾಡಿ, ವಿದ್ಯಾರ್ಥಿಯ ಕಲಿಕೆಯ ಸುಸಂಗತ ನಿರ್ಧರಣೆ ಮಾಡಲು ಸಹಾಯ ಮಾಡುತ್ತದೆ. ಆವರ್ತಕವಾಗಿ ಬರುವ ಘಟಕ ಪರೀಕ್ಷೆ ಔಪಚಾರಿಕ ಮತ್ತು ಅನೌಪಚಾರಿಕ ಪರೀಕ್ಷೆಗಳಿಂದ ದೂರ ಸರಿದು, ಪುಟ್ಟ ಪುಟ್ಟ ಸತತ ಕಲಿಕಾ ನಿರ್ಧರಣೆಗಳ ಮೂಲಕ ವಿದ್ಯಾರ್ಥಿಯ ಸಾಧನೆಯನ್ನು ರೂಪಣ ಕಲಿಕಾನಿರ್ಧರಣೆ ಮೂಲಕ ಅಳೆಯ ಬೇಕಾದ ಜವಾಬ್ದಾರಿ ಉಪಾಧ್ಯಾಯರ ಮೇಲೆ ಬಿದ್ದಿದೆ ಇದರ ಜೊತೆಯಲ್ಲೇ ಟರ್ಮ್ ಅಂತ್ಯದಲ್ಲಿ ಸಮಗ್ರ ಮೌಲ್ಯಮಾಪನವೂ ಇರುತ್ತದೆ. ತಪ್ಪುಹೆಜ್ಜೆ ಇಡುತ್ತಿದ್ದ ಕಾಲದಿಂದಲೂ ಮಕ್ಕಳನ್ನು ಕಾಡುತ್ತಿದ್ದ ಮಾಸಿಕ, ವಾರ್ಷಿಕ ಪರೀಕ್ಷೆಗಳೆÉಂಬ ಪೆಡಂಭೂತದಿಂದ ಕಾಪಾಡಿದ್ದು ಸ.ಸ.ಮೌ.(ಸಿಸಿಇ)ಯ ಬಲು ದೊಡ್ಡ ಸಾಧನೆ.ಅಲ್ಲಿವರೆಗೆ ಎಲ್ಲ ಸರೀನೇ..!
ಆದರೂ ಸ.ಸ.ಮೌ. (ಸಿಸಿಇ)ಯ ಸೂಕ್ಷ್ಮ ವಿವರಗಳಲ್ಲಿ ಮತ್ತು ಅದರ ವ್ಯಾಖ್ಯಾನದಲ್ಲಿ ಹೊಸ ಸಮಸ್ಯೆ ಹೆಡೆಯೆತ್ತುತ್ತಿದೆ. ಅದನ್ನು ಜಾರಿಗೆ ತಂದಾಗ ಇಟ್ಟುಕೊಂಡ ಗುರಿಸಾಧನೆಯಾಗದಂತೆ ಮಾಡುತ್ತಿವೆ. ಒಂದೆಡೆ, ಮಕ್ಕಳನ್ನು ಈಗ ಯಾವಾಗೆಂದರೆ ಆವಾಗ ಪ್ರಶ್ನೆಗಳಿಗೆ ಗುರಿ ಮಾಡಲಾಗುತ್ತಿದೆ. ಅದಕ್ಕಿರುವ ಅಂಕ ಹತ್ತೋ ಐದೋ, ಇಲ್ಲ ಒಂದೋ–ಅದು ಬೇರೆ ವಿಚಾರ,. ಆದರೆ ಮಕ್ಕಳು ಅದರಲ್ಲಿ ಸರಿಯಾಗಿ ಮಾಡಬೇಕಾಗಿದ್ದರೆ ಸದಾ ಓದಿ ತಯಾರಾಗಿ ತುದಿಗಾಲಲ್ಲಿರಬೇಕಾದ ಸ್ಥಿತಿ ಇದೆ. ಶಿಕ್ಷಕರೋ, ಈ ಹೊಸ ಮೃಗದ ಸತತ ಮತ್ತು ಸಮಗ್ರ ಸ್ವರೂಪದ ನಿರ್ಧರಣೆಯನ್ನು ಪೂರೈಸಬೇಕಾದರೆ ಪ್ರತಿ ವಿಷಯದ ಮೇಲೆ ಮತ್ತು ಸಹಪಠ್ಯ ವಿಷಯದ ಮೇಲೆ ಪುಟ್ಟ ಪುಟ್ಟ ರೂಪಣ ಕಲಿಕಾ ನಿರ್ಧರಣೆಯನ್ನು ಅವ್ಯಾಹತವಾಗಿ ಮಾಡಬೇಕಾಗಿ ಬಂದಿದೆ. ಶಿಕ್ಷಕರು ದಿನದಿನವೂ ಮಕ್ಕಳನ್ನು ಗಮನಿಸಿ ಅವರಿಗೆ ಗ್ರೇಡ್ ನಿರ್ಧರಿಸುವ ಒತ್ತಡ ನಿರ್ಮಾಣವಾಗಿದೆ. ಶಿಕ್ಷಕರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಪುಟ್ಟ ತನಿಖೆ ಕೈಗೊಂಡೆವು. ಅದರಲ್ಲಿ ಕಂಡುಬಂದಿದ್ದೆಂದರೆ, ಶಿಕ್ಷಕರು, ಮಾಮೂಲಿ ಪರೀಕ್ಷೆಯಲ್ಲಿ ಪಡೆವ ಅಂಕಗಳಿಗೆ ಸರಿಹೊಂದುವಂತೆ ಈ ಗ್ರೇಡ್‍ಗಳನ್ನು ಮನಸೋಇಚ್ಛೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ!
‘ಫುಟ್ ಬಾಲ್ ಮೈದಾನದಲ್ಲಿ ಇರುವೆ ಇದ್ದ ಹಾಗೆ ನಮ್ಮ ಸ್ಥಿತಿ’ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದ್ದು ನಿಜ ಅನ್ನಿಸುತ್ತೆ. ಆತಂಕದ ಹೊರೆ ಮಕ್ಕಳ ಬೆನ್ನು ತೊರೆದಿಲ್ಲ.
ನಿರೀಕ್ಷಿತ ಕಲಿಕಾಉದ್ದೇಶಗಳೇನು, ಫಲಿತಾಂಶಗಳೇನು ಎಂಬುದನ್ನು ಯೋಜಿಸಿಕೊಂಡು ತರಗತಿಯ ಕೆಲಸವನ್ನು ಮನ್ನಡೆಸುವಂತೆ ಈ ಸತತ ಸಮಗ್ರ ಮೌಲ್ಯಮಾಪನವನ್ನ ರೂಪಿಸಿದರೆ ಮಾತ್ರ ಅದು ವಿದ್ಯಾರ್ಥಿ ಸ್ನೇಹಿ ಆಗಬಲ್ಲದು. ಒಂದು ಪಾಠ ಮಾಡಿ ಮಕ್ಕಳಲ್ಲಿ ಪರಿಕಲ್ಪನೆಯ ಎಷ್ಟರ ಮಟ್ಟಿಗಿನ ಗ್ರಹಿಕೆಯನ್ನು ಮತ್ತು ಯಾವ ಕೌಶಲವನ್ನು ಬೆಳೆಸಬಹುದು, ಏನು ಬದಲಾವಣೆ ತರಬಹುದು ಎಂಬ ಸ್ಪಷ್ಟತೆ ಇದ್ದಾಗ ಮಾತ್ರ ಕಲಿಕೆಯ ನಿರ್ಧರಣೆಯ ಗುಣಮಟ್ಟವನ್ನು ಅವರಿಗೆ ಸಹಾಯವಾಗುವಂತೆ ಮತ್ತು ಎಡೆಬಿಡದೆ ಮಾಡಬಹುದು. ಈ ಲೇಖನದ ಉಳಿದ ಭಾಗದಲ್ಲಿ CCE ಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಹಾಯಕವಾದ ಕೆಲವೊಂದು ವಿದ್ಯಾರ್ಥಿ ಸ್ನೇಹಿ ತಂತ್ರಗಳನ್ನು ನೀಡಲಾಗಿದೆ.
ವಿದ್ಯಾರ್ಥಿ ಸ್ನೇಹೀ ಧೋರಣೆಯನ್ನು ಹೆಚ್ಚಿಸಲು, ಮೊದಲು ಕಲಿಕಾ ನಿರ್ಧರಣೆ, ಮೌಲ್ಯಮಾಪನ, ರೂಪಣಾತ್ಮಕ ನಿರ್ಧರಣೆ, ಸಮಗ್ರ ಮೌಲ್ಯಮಾಪನ- ಈ ಪದಪುಂಜಗಳು ಏನನ್ನು ಹೇಳುತ್ತವೆ ಎಂಬುದನ್ನು ಪರಿಶೀಲಿಸೋಣ.
ವಿದ್ಯಾರ್ಥಿ ಸ್ನೇಹೀ ಧೋರಣೆಯನ್ನು ಹೆಚ್ಚಿಸಲು, ಮೊದಲು ಕಲಿಕಾ ನಿರ್ಧರಣೆ, ಮೌಲ್ಯಮಾಪನ, ರೂಪಣಾತ್ಮಕ ನಿರ್ಧರಣೆ, ಸಮಗ್ರ ಮೌಲ್ಯಮಾಪನ- ಈ ಪದಪುಂಜಗಳು ಏನನ್ನು ಹೇಳುತ್ತವೆ ಎಂಬುದನ್ನು ಪರಿಶೀಲಿಸೋಣ.
assessment-ಕಲಿಕಾ ನಿರ್ಧರಣೆ-ಈ ಪದದ ಬೇರು assidere ಎಂಬ ಲ್ಯಾಟಿನ್ ಪದದಲ್ಲಿದೆ. ಮೂಲ ಪದದ ಅರ್ಥ ‘ಬಳಿಕೂತು ಹೆಚ್ಚಿನ ಸಾಧನೆಗೆ ಮಾರ್ಗ ದರ್ಶನ ಮಾಡುವುದು ‘ಎಂದು. (ಉಪನಿಷದ್ ಎಂಬರ್ಥದಲ್ಲಿ. ಉಪನಿಷದ್ ಅಂದರೆ, ಬಳಿ ಕೂತುಕೋ ಎಂದು ಅರ್ಥ -ಸಂ)
ಮೌಲ್ಯಮಾಪನವೆಂದರೆ, ಸೂಕ್ಷ್ಮ ಪರೀಕ್ಷೆಯ ಬಳಿಕ ಅದಕ್ಕೊಂದು ಮೌಲ್ಯ ನಿಗದಿಪಡಿಸೋದು. ರೂಪಣಾತ್ಮಕ ನಿರ್ಧರಣೆ ಅಂದರೆ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಅದರ ಒಂದೊಂದೂ ಭಾಗದ ಕಲಿಕೆಯ ಪ್ರಗತಿಯನ್ನು ಗುರುತಿಸಿ ದಾಖಲಿಸೋದು. ಸಮಗ್ರ ನಿರ್ಧರಣೆ ಅಂದರೆ, ಕಲಿಕೆ ಪೂರ್ಣವಾದ ಬಳಿಕ ಅದರ ಸಮಗ್ರ ಮೌಲ್ಯಮಾಪನ. ಶಾಲೆಗಳಲ್ಲಿ ಇದನ್ನು ಅನ್ವಯಿಸಿದಾಗ- ರೂಪಣಾತ್ಮಕ ನಿರ್ಧರಣೆ ಎಂದರೆ ಕಲಿಕೆಯ ಗುರಿಯೇನು, ಅದರ ಫಲಿತಾಂಶಗಳೇನು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ರೂಪಿಸಿದ ಪಠ್ಯದ ಫಲಿತಾಂಶ. ಅದನ್ನು ಮಕ್ಕಳೊಂದಿಗೆ ಹಂಚಿಕೊಂಡಾಗ, ತರಗತಿಯೆಂಬುದು ಕಲಿಕೆಯ ಕೇಂದ್ರವಾಗುತ್ತದೆ. ಮಕ್ಕಳು ಕಲಿಕೆಯ ತತ್ವ ಮತ್ತು ಅದು ನಿರೀಕ್ಷಿಸುವ ಕೌಶಲ್ಯಗಳನ್ನು ಕಲಿಯುವಾಗ ಶಿಕ್ಷಕರು ಹೆಜ್ಜೆಹೆಜ್ಜೆಗೂ ಅವರಿಗೆ ಮಾರ್ಗದರ್ಶನ ಮಾಡಲು ಅನುವು ಮಾಡಿಕೊಡುವ ಪ್ರಕ್ರಿಯೆ ಇದು. ತರಗತಿಯ ಕಾರ್ಯದಲ್ಲಿ ಸತತವಾಗಿ ಈ ಉದ್ದೇಶಗಳ ಬಗ್ಗೆ ಹೇಳುತ್ತಿದ್ದರೆ, ಕಲಿಕೆಯ ಸಾಧನೆಯನ್ನು ಅಳೆಯುವುದು ಶಿಕ್ಷಕ-ವಿದ್ಯಾರ್ಥಿ ಇಬ್ಬರಿಗೂ ಸಹಾಯಕವಾಗುತ್ತದೆ. ಪ್ರತಿ ಪಠ್ಯದ ಪ್ರತಿ ಭಾಗದ ಕಲಿಕೆಯನ್ನು ಗುರುತಿಸುತ್ತಾ ಇಡೀ ಪಠ್ಯ ಮನನವಾಗುವವರೆಗೂ ನಡೆಯುವ ಪ್ರಕ್ರಿಯೆ ಇದು.
‘ಸಮಗ್ರ ನಿರ್ಧರಣೆ’ ವರ್ಷದ ಕೊನೆಗೆ, ಕಲಿಕೆಯ ಗುಣಮಟ್ಟವನ್ನು ನಿರ್ಧರಿಸಲು ಬಳಸುವ ವಿಧಾನ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ‘ರೂಪಣಾತ್ಮಕ ನಿರ್ಧರಣೆ’ಯನ್ನು ‘ಕಲಿಕೆಗಾಗಿ ನಿರ್ಧರಣೆ’ ಎನ್ನಬಹುದು. ಕಲಿಕೆಯ ಫಲಿತಾಂಶಗಳನ್ನು ಹಂಚಿಕೊಂಡು, ಕಲಿಕಾ ಪ್ರಕ್ರಿಯೆ ಸಂದರ್ಭದಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ಎತ್ತರಿಸಲು ಈ ‘ರೂಪಣಾತ್ಮಕ ನಿರ್ಧರಣೆ’ ಸಹಾಯ ಮಾಡುತ್ತದೆ. ‘ಅಂತಿಮ ನಿರ್ಧರಣೆ’ಯನ್ನು ‘ಕಲಿಕೆಯ ನಿರ್ಧರಣೆ’ ಎನ್ನಬಹುದು, ಯಾಕೆಂದರೆ, ಫಲಿತಾಂಶಗಳ ಸೂಚಿ ಒಂದೇ ಆಗಿದ್ದರೂ, ನಿರ್ದಿಷ್ಟ ಅಂಕದ ಮೂಲಕ ಕಲಿಕೆಯನ್ನು ನಿರ್ಧರಿಸುವ ಸೀಮಿತ ಕ್ರಿಯೆ ಇದು.
ಈ ಎರಡೂ ನಿರ್ಧರಣೆಗಳ ಸೂಕ್ಷ್ಮ ವಿವರ, ವ್ಯತ್ಯಾಸಗಳನ್ನು ಪಟ್ಟಿ ಮಾಡುವುದರ ಮೂಲಕ ವಿದ್ಯಾರ್ಥಿ ಸ್ನೇಹೀ ಸ.ಸ.ಮೌ.ವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
ಕಲಿಕೆಗಾಗಿ ನಿರ್ಧರಣೆ( ರೂಪಣಾತ್ಮಕ ನಿರ್ಧರಣೆ) | ಕಲಿಕೆಯ ನಿರ್ಧರಣೆ( ಅಂತಿಮ ನಿರ್ಧರಣೆ) |
ಮುನ್ನೋಟ ಉಳ್ಳದ್ದು. ಯಾಕೆಂದರೆ ಫಲಿತಾಂಶದ ಸೂಚಿಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುನ್ನುಗ್ಗುವಾಗ ಅದನ್ನು ಅಳೆಯುತ್ತಾ , ಮುಂದಿನ ಹಂತವನ್ನೂ ಸೂಚಿಸುವ ಗುಣವನ್ನು ಹೊಂದಿದೆ. |
ಹಿನ್ನೋಟದ ಗುಣವುಳ್ಳದ್ದು. ವಿದ್ಯಾರ್ಥಿಯ ಕಲಿಕೆ ಮುಗಿದ ಬಳಿಕ ಶಿಕ್ಷಕರು ನಡೆಸುವ ಮೌಲ್ಯಮಾಪನ ಮತ್ತು ವಿದ್ಯಾರ್ಥಿಯ ಕಲಿಕೆಯ ಗುಣಮಟ್ಟದ ಸಾರಾಂಶೀಕರಣ
|
ಸ್ಥಿರ : ಶಿಕ್ಷಕ ವಿದ್ಯಾರ್ಥಿ ಇಬ್ಬರೂ ಸತತವಾಗಿ ತೊಡಕುಗಳನ್ನು ಎದುರಿಸುತ್ತಾ ಕಲಿಕಾ ನಿರ್ಧರಣೆ ಮಾಡುವ ಪ್ರಕ್ರಿಯೆ. | ಚಕ್ರಾನುವರ್ತಿ. ಕಾಲಕಾಲಕ್ಕೆ ನಡೆಸುವ ಮೌಲ್ಯಮಾಪನ. |
ವಿಭಿನ್ನ: ವಿದ್ಯಾರ್ಥಿಗಳು ಸ್ವತಂತ್ರವಾಗಿ ತಮ್ಮದೇ ವೇಗದಲ್ಲಿ ಕಲಿಯುತ್ತಾ ಬೆಳೆಯುವ ಪ್ರಕ್ರಿಯೆ. | ಕೇಂದ್ರೀಕೃತ. ಎಲ್ಲಾ ವಿದ್ಯಾರ್ಥಿಗಳಿಂದ ಏಕ ರೀತಿಯ ಫಲಿತಾಂಶವನ್ನು ನಿರೀಕ್ಷಿಸುತ್ತದೆ. |
ಕಲಿಕಾ ಅವಧಿಯಲ್ಲಿ: ಈ ನಿರ್ಧರಣೆ ತಕ್ಷಣ ಸ್ಪಂದಿಸುವ ಗುಣವನ್ನು ಹೊಂದಿದೆ. ವಿದ್ಯಾರ್ಥಿಗೆ ಶಿಕ್ಷಕರ ಸಹಾಯದಿಂದ ತನ್ನ ಪ್ರಗತಿಯ ನಿರ್ಧರಣೆ ಸಾಧ್ಯ. ತಾನು ಎಲ್ಲಿ ಇದ್ದೇನೆ, ಎಲ್ಲಿ ತಲುಪಬೇಕು, ತಲುಪುವ ದಾರಿ ಹೇಗೆ ಎಲ್ಲವೂ ಗೊತ್ತಿರುತ್ತದೆ. | ಕಲಿಕೆಯ ಕೊನೆ. ಯಾಕೆಂದರೆ ಸಾಧನೆಯ ಪರೀಕ್ಷೆ ಕಲಿಕೆಯ ಅಂತ್ಯದಲ್ಲಿ ಆಗುತ್ತದೆ. |
ವಿವರಣಾತ್ಮಕ. ಕಲಿಕೆಯ ಉದ್ದೇಶಗಳನ್ನು ಹಂಚಿಕೊಂಡು, ತನ್ಮೂಲಕ, ವಿದ್ಯಾರ್ಥಿಗೆ ಪಠ್ಯದ ಉದ್ದೇಶ ಏನು? ಯಾವ್ಯಾವ ತತ್ವ ಮತ್ತು ಕೌಶಲ್ಯಗಳನ್ನು ಕರಗತಮಾಡಬೇಕೆನ್ನುವ ಅರಿವು ಮೂಡಿಸುತ್ತದೆ. | ಕಲಿಕೆಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಕಾರಣ ತೀರ್ಪಿನ ಗುಣ ಹೊಂದಿದೆ. |
ತಿದ್ದುಪಡಿಯನ್ನು ಸೂಚಿಸುವ ಗುಣ ಹೊಂದಿದೆ. ಪಠ್ಯದ ಕಲಿಕೆಯುದ್ದಕ್ಕೂ ಸಾಧನೆಗೆ ತೊಡಕಾಗುವ ಅಂಶಗಳಬಗ್ಗೆ ಶಿಕ್ಷಕರ ಸಹಾಯವನ್ನು ಪಡೆಯಬಹುದು. | ತಿದ್ದುಪಡಿಯ ಅವಕಾಶ ಇಲ್ಲ. ಕಲಿಕೆಯನ್ನು ಸುಧಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳುವ ಅವಕಾಶ ಇಲ್ಲದ ಮೌಲ್ಯಮಾಪನ. |
ಗುಣಾತ್ಮಕ. ಸಾಮಾನ್ಯ ಉದ್ದೇಶಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ಮತ್ತು ಶಿಕ್ಷಕ ಇಬ್ಬರೂ ನಿರಂತರವಾಗಿ ಕಲಿಕೆಯ ಗುಣಮಟ್ಟವನ್ನು ಅಳೆಯಬಹುದು | ಪರಿಮಾಣ ಭೂತ. ಅಂಕ, ಗ್ರೇಡ್‍ಗಳ ಮೂಲಕ ಮೌಲ್ಯಮಾಪನವನ್ನು ಪರಿಮಾಣಬದ್ಧಗೊಳಿಸುತ್ತದೆ. |
ಶಿಕ್ಷಕ-ವಿದ್ಯಾರ್ಥಿ ಇಬ್ಬರ ಸಹಯೋಗದ ಗುಣ ಹೊಂದಿದೆ. ಶಿಕ್ಷಕ ಮತ್ತು ವಿದ್ಯಾರ್ಥಿಯ ಸತತ ಚಲನಶೀಲ ಪ್ರಯತ್ನದ ಫಲ | ಶಿಕ್ಷಕ ಕೇಂದ್ರಿತ, ಯಾಕೆಂದರೆ, ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯ ಜೊತೆ ಕಾರ್ಯನಡೆಸುವ ಕ್ರಮ ಇರುವುದಿಲ್ಲ. |
ವಿದ್ಯಾರ್ಥಿ ಸ್ನೇಹೀ ಕಲಿಕಾ ನಿರ್ಧರಣೆಯು ಮಕ್ಕಳು ಪ್ರಶ್ನೆ ಕೇಳುವ ತರಗತಿಗಳಲ್ಲಿ ಯಶಸ್ವಿಯಾಗುತ್ತದೆ, ಪ್ರಶ್ನೆಗೆ ಉತ್ತರಿಸುವತರಗತಿಗಳಲ್ಲಲ್ಲ. ತಾವು ತೊಡಗಿಸಿಕೊಂಡಿರುವ ಕೆಲಸದ ಬಗ್ಗೆ ಏನು, ಯಾಕೆ ಎಂಬಿತ್ಯಾದಿ ಕೇಳುತ್ತ ಆ ನಿಟ್ಟಿನಲ್ಲಿ ಶಿಕ್ಷಕರ ಗಮನ ಸೆಳೆದು, ಅವರಿಂದ ಸಹಾಯ ಪಡೆಯುತ್ತಾ ತಮ್ಮ ಸಾಧನೆಯ ಮಟ್ಟವನ್ನು ಎತ್ತರಿಸುವ ಅವಕಾಶವಿದ್ದಲ್ಲಿ ಮಾತ್ರ ಈ ಕಲಿಕಾ ನಿರ್ಧರಣೆ ಗೆಲ್ಲುತ್ತದೆ. ಚಿಂತನೆ ಮತ್ತು ಕಲಿಕೆಯನ್ನು ಬೆಳೆಸಲು ಪ್ರತಿ ಪಠ್ಯದ ಆರಂಭದಲ್ಲೇ ಕಲಿಕಾ ಉದ್ದೇಶ ಮತ್ತು ಗುರಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು. ಸ್ವತಂತ್ರ ಕಲಿಕೆಯನ್ನು ಪ್ರೋತ್ಸಾಹಿಸುತ್ತಾ, ಪ್ರತೀ ಹಂತದಲ್ಲೂ ವಿದ್ಯಾರ್ಥಿಗೆ ತನ್ನ ಪ್ರತಿಕ್ರಿಯೆಯನ್ನು ತಿಳಿಸುತ್ತಾ ಪ್ರತೀ ಪಠ್ಯದ ಕೊನೆಗೆ ಸಾಧನೆಯನ್ನು ಅಳೆಯುತ್ತಾ, ವಿದ್ಯಾರ್ಥಿಯ ಕಲಿಕಾ ವೇಗಕ್ಕೆ ತಕ್ಕಂತೆ ಬೋಧನೆಯನ್ನು ಹೊಂದಿಸಿಕೊಳ್ಳುತ್ತಾ ಶಿಕ್ಷಕರು ಕೆಲಸ ಮಾಡಬೇಕು. ಈ ಸತತ ರೂಪಣಾತ್ಮಕ ನಿರ್ಧರಣೆಯ ಬಳಿಕ ಸಮಗ್ರ ನಿರ್ಧರಣೆ ಮಾಡಬೇಕು. ಈ ಮೂಲಕ ವಿದ್ಯಾರ್ಥಿಯನ್ನು ತನ್ನ ಸಾಧನೆಯ ಮಟ್ಟವನ್ನು ಹೆಚ್ಚಿಸಲು ಪ್ರೇರೇಪಿಸಬೇಕು.
ವಿದ್ಯಾರ್ಥಿಯ ಮೇಲೆ ಏನು ಸತ್ಪರಿಣಾಮ ಬೀರಿದೆ ಎಂಬುದೇ ಒಂದು ತಂತ್ರೋಪಾಯದ ಒರೆಗಲ್ಲು. ವಿದ್ಯಾರ್ಥಿ ಕಲಿಕೆ ಎಷ್ಟು ಚೆನ್ನಾಗಿ ಆಯಿತು ಎಂಬುದೇ ಮುಖ್ಯ. ಇದೇನು ಅಸಾಧ್ಯ ರಾಕೆಟ್ ತಂತ್ರಜ್ಞಾನವಲ್ಲ. ಒಳ್ಳೆ ಶಿಕ್ಷಕರು ಸಹಜ ಸ್ಫೂರ್ತಿಯಿಂದ ಇದನ್ನು ಅರಿತು ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಹಿಂದೆಯೂ ಯಾವುದೇ ಒತ್ತಡವಿಲ್ಲದೇ ಸಾಧಿಸಿದ್ದಾರೆ.
ಆದ್ದರಿಂದಲೇ ಸತತ ಸಮಗ್ರ ಮೌಲ್ಯಮಾಪನವನ್ನು ಸರಿಯಾಗಿ ಅರ್ಥಮಾಡಿಕೊಂಡು, ಜಾರಿಗೆ ತಂದರೆ ಅಭೂತಪೂರ್ವ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ. ಹಾಗಾದಾಗ ಮಾತ್ರ ಅದು ನಮ್ಮ ಶಿಕ್ಷಣ ಕ್ಷೇತ್ರದ ಅಸಹನೀಯ ಒತ್ತಡದಿಂದ ನಮ್ಮ ಮಕ್ಕಳನ್ನು ಪಾರು ಮಾಡೀತು.
ಆದ್ದರಿಂದಲೇ ಸತತ ಸಮಗ್ರ ಮೌಲ್ಯಮಾಪನವನ್ನು ಸರಿಯಾಗಿ ಅರ್ಥಮಾಡಿಕೊಂಡು, ಜಾರಿಗೆ ತಂದರೆ ಅಭೂತಪೂರ್ವ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ. ಹಾಗಾದಾಗ ಮಾತ್ರ ಅದು ನಮ್ಮ ಶಿಕ್ಷಣ ಕ್ಷೇತ್ರದ ಅಸಹನೀಯ ಒತ್ತಡದಿಂದ ನಮ್ಮ ಮಕ್ಕಳನ್ನು ಪಾರು ಮಾಡೀತು.
ವಿದ್ಯಾರ್ಥಿ ಸ್ನೇಹಿ ಸತತ ಸಮಗ್ರ ಮೌಲ್ಯಮಾಪನವು ವ್ಯವಸ್ಥೆಯ ಒತ್ತಡ ಕಡಿಮೆಯಾದಾಗ ಮಾತ್ರ ಯಶಸ್ವಿಯಾಗುತ್ತದೆ
No comments:
Post a Comment