ವಾಷಿಂಗ್ಟನ್ (ಎಎಫ್‌ಪಿ): ಬಾಹ್ಯಾಕಾಶದ ಕಕ್ಷೆಯಲ್ಲಿ 1990ರಿಂದ ಕಾರ್ಯಾಚರಿಸುತ್ತಿರುವ ಹಬಲ್ ಅಂತರಿಕ್ಷ ದೂರದರ್ಶಕವು ಅದರಲ್ಲಿನ ಪರಿಭ್ರಮಣ ದರ್ಶಕವೊಂದು (ಜೈರೋಸ್ಕೋಪ್) ವಿಫಲವಾದ ಕಾರಣಕ್ಕೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಹಬಲ್‌ನಲ್ಲಿ ಸಕ್ರಿಯ ಸ್ಥಿತಿಯಲ್ಲಿ ಇರಬೇಕಾದ ಜೈರೊಸ್ಕೋಪ್‌ಗಳಲ್ಲಿ ಒಂದು ವಿಫಲವಾಗಿದ್ದರಿಂದ ಹಬಲ್ ಶುಕ್ರವಾರ ‘ಸುರಕ್ಷಿತ ಸ್ಥಿತಿ’ಗೆ (ಸೇಫ್ ಮೋಡ್) ಹೋಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
‘ಭೂಮಿ ಮೇಲಿನ ನಿಯಂತ್ರಣ ಕೇಂದ್ರದಿಂದಲೇ ಜೈರೊಸ್ಕೋಪ್ ಅನ್ನು ದುರಸ್ತಿಪಡಿಸಬಹುದಾಗಿದ್ದು, ನಂತರ ಹಬಲ್ ಟೆಲಿಸ್ಕೋಪ್ ‘ಸೇಫ್ ಮೋಡ್’ನಿಂದ ಹೊರಬಂದು, ಮರಳಿ ಕಾರ್ಯಾಚರಣೆ ಆರಂಭಿಸಲಿದೆ’ ಎಂದು ನಾಸಾ ಸೋಮವಾರ ಪ್ರಕಟಣೆಯಲ್ಲಿ ವಿವರಿಸಿದೆ.
ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರ ಮತ್ತು ಬಾಹ್ಯಾಕಾಶ ಟೆಲಿಸ್ಕೋಪ್ ಸೈನ್ಸ್ ಇನ್‌ಸ್ಟಿಟ್ಯೂಟ್ ಸಿಬ್ಬಂದಿಯು ವಿಫಲವಾಗಿರುವ ಜೈರೊಸ್ಕೋಪ್‌ನ ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸುತ್ತಿದ್ದಾರೆ. ಹಬಲ್‌ನಲ್ಲಿರುವ ಉಪಕರಣಗಳು ಇನ್ನೂ ಸಂಪೂರ್ಣ ಕಾರ್ಯ ನಿರ್ವಹಣಾ ಸಾಮರ್ಥ್ಯ ಹೊಂದಿವೆ. ಮುಂಬರುವ ವರ್ಷಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯುತ್ತಮ ಫಲಿತಾಂಶಗಳು ಅದರಿಂದ ಸಿಗುವ ನಿರೀಕ್ಷೆ ಇದೆ ಎಂದು ನಾಸಾ ಹೇಳಿದೆ.
ಹಬಲ್ ಅನ್ನು ನಿರ್ದೇಶಿಸಲು ಆರು ಜೈರೊಸ್ಕೋಪ್‌ಗಳನ್ನು ಅಳವಡಿಸಲಾಗಿದೆ.
ಸದ್ಯಕ್ಕೆ ಅದರ ಎರಡು ಜೈರೊಸ್ಕೋಪ್‌ಗಳು ಸ್ಥಗಿತಗೊಂಡಿವೆ.
ಹಬಲ್‌ನ ತರುವಾಯ, ದಿ ಜೇಮ್ಸ್ ವೆಬ್ ಅಂತರಿಕ್ಷ ದೂರದರ್ಶಕವನ್ನು 2021ರ ಮಾರ್ಚ್‌ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ.
No comments:
Post a Comment