ಸದ್ಯ ಹಲವು ಕ್ರಿಪ್ಟೊ ಕರೆನ್ಸಿಗಳು (ಡಿಜಿಟಲ್ ಕರೆನ್ಸಿ) ಚಾಲ್ತಿಯಲ್ಲಿವೆ. ಅವುಗಳ ಮೌಲ್ಯಗಳಲ್ಲಿ ಏರಿಳಿತ ಕಾಣುತ್ತಿರುತ್ತೇವೆ. ಇಂತಹ ಏರಿಳಿತವನ್ನು ಗ್ರಾಹಕರಿಗೆ ಸಕಾಲದಲ್ಲಿ ತಿಳಿಸುವಂತಹ ತಂತ್ರಾಂಶಗಳು ಈಗ ಮಾರುಕಟ್ಟೆ ಪ್ರವೇಶಿಸಿವೆ.
ಡಿಜಿಟಲ್ ಕರೆನ್ಸಿಗಳು ನಿಂತಿರುವುದೇ ಮೌಲ್ಯದ ಮೇಲೆ. ಇಂತಹ ಕರೆನ್ಸಿಗಳಲ್ಲಿನ ಮೌಲ್ಯಗಳಲ್ಲಿ ಆಗುವ ಏರಿಳಿತವನ್ನು ತಿಳಿಸಲು ಲೆಕ್ಕವಿಲ್ಲದಷ್ಟು ಸೇವೆಗಳು ಗ್ರಾಹಕರಿಗೆ ಲಭ್ಯ ಇವೆ. ಹಲವು ವೆಬ್‌ಸೈಟ್‌ಗಳಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಅವುಗಳಲ್ಲಿ ಪ್ರಮುಖವಾದವು Coinmarketcap.com ಮತ್ತು Onchainfx.com. ಹಲವು ಅಂಕಿ–ಅಂಶಗಳೊಂದಿಗೆ ಮಾರುಕಟ್ಟೆಯ ಮಾಹಿತಿಯನ್ನು ಈ ವೆಬ್‌ಸೈಟ್‌ಗಳು ತೆರೆದಿಡುತ್ತವೆ. ಆ ಮೂಲಕ ಡಿಜಿಟಲ್ ಕರೆನ್ಸಿಗಳಲ್ಲಿನ ವ್ಯತ್ಯಾಸವನ್ನು ನೀವು ಹೋಲಿಸಿ ನೋಡಬಹುದು. ಸದ್ಯ ಎಷ್ಟು ಜನ ನಿರ್ದಿಷ್ಟ ಕರೆನ್ಸಿಯನ್ನು ಬಳಸುತ್ತಿದ್ದಾರೆ ಮತ್ತು ಎಷ್ಟು ಪ್ರೋಗ್ರಾಮರ್‌ಗಳು ಈ ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ ಎಂಬಂತಹ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ನಿಮಗೆ ಸಿಗುತ್ತದೆ.
ಬೆಲೆ ಅಥವಾ ಮೌಲ್ಯವನ್ನು ಹೊರತುಪಡಿಸಿ, ಬಳಕೆದಾರರು ತಮ್ಮ ಸಮುದಾಯವನ್ನು ಅಭಿವೃದ್ಧಿ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಈ ಕ್ರಿಪ್ಟೊ ಕರೆನ್ಸಿಗಳು ಕೊಡುಗೆ ನೀಡುತ್ತವೆ. ಆನ್‌ಲೈನ್ ಬಳಕೆದಾರರನ್ನು ಒಗ್ಗೂಡಿಸುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಕರೆನ್ಸಿಗಳನ್ನು ಬಳಸಿ ವ್ಯವಹಾರ ನಡೆಸುವವರ ಆಸಕ್ತಿಗಳನ್ನು ತಿಳಿದುಕೊಳ್ಳಲು ಕಂಪನಿಗಳಿಗೂ ಇದರಿಂದ ಅನುಕೂಲವಾಗುತ್ತದೆ.
ಆನ್‌ಲೈನ್ ಬ್ಯಾಂಕಿಂಗ್ ಸಹಕಾರಿ
ಡಿಜಿಟಲ್ ಕರೆನ್ಸಿಗಳಿಂದ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಹೊಸ ಮಜಲನ್ನು ತಲುಪಿದೆ. ಆದರೆ, ಬಹಳಷ್ಟು ಜನ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿಲ್ಲ. ಆನ್‌ಲೈನ್‌ನಲ್ಲೇ ಚೆಕ್ ಡೆಪಾಸಿಟ್ ಮಾಡುವ ಸೌಲಭ್ಯ ಇರುವುದರಿಂದ ಬ್ಯಾಂಕಿಗೆ ಅಲೆಯುವುದು ತಪ್ಪುತ್ತಿದೆ. ಬಡ್ಡಿ ದರ ಮತ್ತು ಲಾಭದ ದೃಷ್ಟಿಯಿಂದಲೂ ಆನ್‌ಲೈನ್ ಬ್ಯಾಂಕಿಂಗ್ ಲಾಭದಾಯಕವಾಗಿದೆ. Bankrate ಮತ್ತು NerdWalletನಂತಹ ವೆಬ್‌ಸೈಟ್‌ಗಳಲ್ಲಿ ಹಲವು ಆಫರ್‌ಗಳು ಇರುತ್ತವೆ. ನಿರ್ದಿಷ್ಟ ಸೇವೆ ಪಡೆದವರಿಗೆ ರಿಯಾಯ್ತಿ ದೊರೆಯುವುದಲ್ಲದೆ, ‘ಕ್ಯಾಷ್ ಬ್ಯಾಕ್’ ಕೊಡುಗೆಯೂ ಇರುತ್ತದೆ. ಅಲ್ಲದೆ, ಬೇರೆ ನೆಟ್‌ವರ್ಕ್‌ನ ಎಟಿಎಂ ಕೇಂದ್ರಗಳನ್ನು ಹೆಚ್ಚು ಬಾರಿ ಬಳಸಿದರೆ ಹಾಕುವ ಶುಲ್ಕದಿಂದಲೂ ನಾವು ತಪ್ಪಿಸಿಕೊಳ್ಳಬಹುದು.
ಸಾಲ ಸೌಲಭ್ಯಕ್ಕೂ ವೆಬ್‌ಸೈಟ್
ಮನೆ ಖರೀದಿಗೆ ಅಥವಾ ಇನ್ನಾವುದೇ ಉದ್ದೇಶಕ್ಕೆ ಸಾಲ ಬಯಸುವವರು ಮಾಹಿತಿಗೆ ಹೆಚ್ಚಾಗಿ Credit Karma ವೆಬ್‌ಸೈಟ್ ಬಳಸಬಹುದು. ಸಾಲ ಬಯಸುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ಇಲ್ಲಿ ತಿಳಿದುಕೊಳ್ಳಬಹುದು. ಈ ವೆಬ್‌ಸೈಟ್‌ನಲ್ಲಿ ಪ್ರತಿ ಬಾರಿ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಭರ್ತಿ ಮಾಡುವ ಅವಶ್ಯಕತೆ ಇರುವುದಿಲ್ಲ.
ಶೂನ್ಯಕ್ಕಿಳಿಯುವ ಭೀತಿ !
ಬಿಟ್‌ಕಾಯಿನ್ ಮತ್ತು ಕ್ರಿಪ್ಟೊ ಕರೆನ್ಸಿಯಂತಹ ಡಿಜಿಟಲ್ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಎಷ್ಟು ಸುಲಭವೋ, ಅಷ್ಟೇ ಕಠಿಣವೂ ಹೌದು. ಇವುಗಳ ಮೌಲ್ಯ ಯಾವುದೇ ಕ್ಷಣದಲ್ಲಿ ಶೂನ್ಯಕ್ಕೆ ಇಳಿಯುವ ಭೀತಿಯೂ ಇರುತ್ತದೆ. ಇವು ಅಲ್ಪಾವಧಿಗೆ ಹೂಡಿಕೆ ಮಾಡುವವರಿಗೆ ಮಾತ್ರ ಇವು ಸಹಕಾರಿ. ಅಲ್ಲದೆ, ಕಡಿಮೆ ಮೊತ್ತ ಹೂಡುವುದೂ ಉತ್ತಮ ಯೋಚನೆ.
ನ್ಯೂಯಾರ್ಕ್ ಟೈಮ್ಸ್
***
ಸುಸ್ಥಿರ ಭವಿಷ್ಯಕ್ಕೆ ಬೇಕು ಸಂಶೋಧನೆ
ವಿಶ್ವಸಂಸ್ಥೆಯ ಆಶಯದಂತೆ, ಸುಸ್ಥಿರ ಅಭಿವೃದ್ಧಿಗಾಗಿ ನೀತಿ ಆಯೋಗ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಪರಸ್ಪರ ಸಹಕರಿಸುವ ನಿರ್ಧಾರಕ್ಕೆ ಬಂದಿವೆ. ಸುಸ್ಥಿರ ಅಭಿವೃದ್ಧಿ ಸಾಧಿಸಲು ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಹಣ ತೊಡಗಿಸಬೇಕಾಗುತ್ತದೆ. ಈ ವಿಷಯದಲ್ಲಿ ಸದ್ಯಕ್ಕೆ ಭಾರತದ ಸಾಧನೆ ಕಳಪೆ ಮಟ್ಟದಲ್ಲಿ ಇದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದೆಯೂ ಬಿದ್ದಿದೆ.
ಇತ್ತೀಚಿನ ವರ್ಷಗಳಲ್ಲಿ ಈ ವಿಷಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದರೂ, ದೇಶಿ ಕೈಗಾರಿಕಾ ವಲಯವು ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ನಿಧಾನ ಧೋರಣೆ ಅನುಸರಿಸುತ್ತಿದೆ. ಇತ್ತೀಚಿನವರೆಗೆ ಕಾರ್ಪೊರೇಟ್ ಸಂಸ್ಥೆಗಳೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಅಮೆರಿಕದ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ 1985ರಲ್ಲಿಯೇ ಬೆಂಗಳೂರಿನಲ್ಲಿ ‘ಆರ್‌ಆ್ಯಂಡ್‌ಡಿ’ ಕೇಂದ್ರ ಆರಂಭಿಸಿತ್ತು. 2000 ಇಸ್ವಿವರೆಗೆ ಈ ಕ್ಷೇತ್ರದಲ್ಲಿ ಗಮನಾರ್ಹ ಎನ್ನಬಹುದಾದ ಯಾವುದೇ ಚಟುವಟಿಕೆಗಳೂ ಕಂಡು ಬಂದಿರಲಿಲ್ಲ. ‘ಜಿಇ’ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಸಂಶೋಧನಾ ಕೇಂದ್ರ ಆರಂಭಿಸಿದ ನಂತರವೇ ಉಳಿದವರೆಲ್ಲ ಎಚ್ಚೆತ್ತುಕೊಂಡರು.
ನಂತರದ ವರ್ಷಗಳಲ್ಲಿ ವಿಶ್ವದಾದ್ಯಂತ ‘ಆರ್‌ಆ್ಯಂಡ್‌ಟಿ’ ಕೇಂದ್ರಗಳು ನಾಯಿಕೊಡೆಗಳಂತೆ ಸ್ಥಾಪನೆಗೊಂಡವು. ಎಲ್ಲೆಡೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯ ಭರಾಟೆ ನಡೆದರೂ, ದೇಶಿ ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ತೋರಲಿಲ್ಲ. ‘ಆರ್‌ಆ್ಯಂಡ್‌ಡಿ’ ಬಗ್ಗೆ ತಮ್ಮ ಈ ಮೊದಲಿನ ಉದಾಸೀನ ಧೋರಣೆಯನ್ನೇ ಮುಂದುವರೆಸಿದವು.
ನಮ್ಮಲ್ಲಿ ಒಟ್ಟು ಆಂತರಿಕ ಉತ್ಪನ್ನದ ಶೇ 0.6 ರಿಂದ ಶೇ 0.7ರಷ್ಟು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಅಮೆರಿಕ (ಶೇ 2.8), ಚೀನಾ (ಶೇ 2.1), ಇಸ್ರೇಲ್ (ಶೇ 4.3) ಮತ್ತು ದಕ್ಷಿಣ ಕೊರಿಯಾಗಳಲ್ಲಿನ (ಶೇ 4.2) ವೆಚ್ಚಕ್ಕೆ ಹೋಲಿಸಿದರೆ ನಮ್ಮಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ವೆಚ್ಚ ಮಾಡಲಾಗುತ್ತಿದೆ.
ವಿಶ್ವದ ಬಹುತೇಕ ದೇಶಗಳಲ್ಲಿ ಖಾಸಗಿ ವಲಯವು ಗರಿಷ್ಠ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿದೆ. ಆದರೆ, ನಮ್ಮಲ್ಲಿ ಸರ್ಕಾರಿ ವೆಚ್ಚಕ್ಕೆ ಹೋಲಿಸಿದರೆ ಖಾಸಗಿ ಸಂಸ್ಥೆಗಳ ಹೂಡಿಕೆಯೂ ಕಡಿಮೆ ಮಟ್ಟದಲ್ಲಿ ಇದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರ ಮಾಡುವ ವೆಚ್ಚದಲ್ಲಿನ ಬಹುತೇಕ ಭಾಗವು (3/5) ಅಣು ಇಂಧನ, ಬಾಹ್ಯಾಕಾಶ, ವಿಜ್ಞಾನ – ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಮೀಸಲಾಗಿದೆ. ಖಾಸಗಿ ವಲಯದ ಸಂಸ್ಥೆಗಳು ಈ ವಿಷಯದಲ್ಲಿ ಮೈಕೊಡವಿಕೊಂಡು ಮುನ್ನಡೆಯಬೇಕಾದ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ.
ಡಾ. ಮುಕುಲ್ ಸಕ್ಸೇನಾ
(ಹ್ಯಾವೆಲ್ಸ್ ಇಂಡಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ)
No comments:
Post a Comment