ವಿ ದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಉದ್ಭವಿಸಿರುವ ರೂಪಾಯಿ ಮೌಲ್ಯ ಕುಸಿತದ ಬಿಕ್ಕಟ್ಟು ಮುಂದುವರೆಯುತ್ತಲೇ ಇದೆ. ಕರೆನ್ಸಿಗಳ ವಿನಿಮಯ ಮಾರುಕಟ್ಟೆಯಲ್ಲಿ ವಿಶ್ವದ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಏರುಗತಿಯಲ್ಲಿಯೇ ಇರುವುದರಿಂದ ರೂಪಾಯಿ ಬೆಲೆ ಕುಸಿಯುತ್ತಿದೆ. ಹಣದುಬ್ಬರ ಹೆಚ್ಚಳ ಮತ್ತು ಜಾಗತಿಕ ಅನಿಶ್ಚಿತತೆ ಕಾರಣಕ್ಕೂ ರೂಪಾಯಿ ಅಪಮೌಲ್ಯಗೊಳ್ಳುತ್ತಿದೆ. ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ತಜ್ಞರ ನಿರೀಕ್ಷೆಗಳನ್ನೆಲ್ಲ ಹುಸಿ ಮಾಡುತ್ತಿದೆ. ಈ ವರ್ಷದಲ್ಲಿ ಇದುವರೆಗೆ ಶೇ 14.4ರಷ್ಟು ಮೌಲ್ಯಕ್ಕೆ ಎರವಾಗಿದೆ.
ಈ ಬಿಕ್ಕಟ್ಟಿಗೆ ಹಲವಾರು ಕಾರಣಗಳಿವೆ.
ಇತರ ದೇಶಗಳ ಕರೆನ್ಸಿ ಎದುರು ಡಾಲರ್ ಮೌಲ್ಯ ಹೆಚ್ಚಳ ಗೊಂಡಿರುವುದರಿಂದಲೇ ರೂಪಾಯಿ ಬೆಲೆ ಕುಸಿತ ಕಾಣುತ್ತಿದೆ. ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಳಗೊಂಡಿವೆ. ಇದರಿಂದ ವಿಶ್ವದ ಎಲ್ಲೆಡೆ ಡಾಲರ್‌ಗೆ ಬೇಡಿಕೆ ಹೆಚ್ಚಿದೆ. ರಫ್ತಿಗಿಂತ ಆಮದು ಹೆಚ್ಚಿಗೆ ಇರುವುದರಿಂದ ಚಾಲ್ತಿ ಖಾತೆ ಕೊರತೆ ಹೆಚ್ಚಿರುವುದೂ ರೂಪಾಯಿ ಮೌಲ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಏಷ್ಯಾದಲ್ಲಿ ಉತ್ತಮ ಸಾಧನೆಯ ಕರೆನ್ಸಿ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ರೂಪಾಯಿ, ಈಗ ಕಳಪೆ ಸಾಧನೆಯ ಕುಖ್ಯಾತಿಗೆ ಪಾತ್ರವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆಯಾಗಿರುವುದು ಈ ಕರೆನ್ಸಿ ವಿನಿಮಯ ಬಿಕ್ಕಟ್ಟನ್ನು ತೀವ್ರಗೊಳಿಸಿದೆ.
2016–17ರಲ್ಲಿ ಸ್ಥಿರತೆ ಸಾಧಿಸಿದ್ದ ರೂಪಾಯಿ, ಈ ವರ್ಷಾರಂಭದಿಂದ ನಿರಂತರವಾಗಿ ಕುಸಿಯುತ್ತಲೇ ಇದೆ. ದಿನಕ್ಕೊಂದು ಹೊಸ ಕುಸಿತದ ಸಾರ್ವಕಾಲಿಕ ದಾಖಲೆ ಸೃಷ್ಟಿಸುತ್ತಿದೆ. ವಿದೇಶಿ ಹೂಡಿಕೆದಾರರು ನಷ್ಟಸಾಧ್ಯತೆಯ ಮಾರುಕಟ್ಟೆಗಳಿಂದ ತಮ್ಮ ಹೂಡಿಕೆ ಹಿಂತೆಗೆದುಕೊಂಡು ಡಾಲರ್ ಸಂಪತ್ತಿನಲ್ಲಿ ತೊಡಗಿಸುತ್ತಿದ್ದಾರೆ. ಡಾಲರ್ ಎದುರು ಮಾತ್ರವಲ್ಲದೆ, ಯೆನ್, ಯುರೊ, ಪೌಂಡ್ ಎದುರೂ ರೂಪಾಯಿಯದು ಇದೇ ವ್ಯಥೆ.
ರೂಪಾಯಿ ವಿನಿಮಯ ಮೌಲ್ಯವು ದೇಶದ ಆರ್ಥಿಕತೆಯ ಸಾಮರ್ಥ್ಯದ ದ್ಯೋತಕವಾಗಿದೆ. ಅದರ ಮೌಲ್ಯದಲ್ಲಿನ ಭಾರಿ ಏರಿಳಿತವು ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದೇ ಧ್ವನಿಸುತ್ತದೆ. ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವನ್ನು ನಿಯಂತ್ರಿಸಲು ವಿಫಲವಾದರೆ ಅದು ರೂಪಾಯಿ ವಿನಿಮಯ ದರದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇದು ಬರೀ ಭಾರತದ ಸಮಸ್ಯೆಯಲ್ಲ. ಪ್ರವರ್ಧಮಾನಕ್ಕೆ ಬರುತ್ತಿರುವ ವಿಶ್ವದ ಇತರ ದೇಶಗಳ ಕರೆನ್ಸಿಗಳೂ ಇದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿವೆ. ಮುಂಬರುವ ದಿನಗಳಲ್ಲಿ ಅಮೆರಿಕದಲ್ಲಿ ಬಡ್ಡಿ ದರಗಳು ಹೆಚ್ಚುವ ಸಾಧ್ಯತೆ ಇದೆ. ಇದರಿಂದಾಗಿ ಅಮೆರಿಕದ ಬಾಂಡ್ ಮಾರುಕಟ್ಟೆಯತ್ತ ವಿದೇಶಿ ಹೊರ ಹರಿವು ಇನ್ನಷ್ಟು ಹೆಚ್ಚಳಗೊಳ್ಳಲಿದೆ.
ಡಾಲರ್‌ಗೆ ಹೆಚ್ಚಿದ ಬೇಡಿಕೆ
ಅಮೆರಿಕದ ಆರ್ಥಿಕತೆ ಚೇತರಿಸಿಕೊಂಡಿರುವುದರಿಂದ ವಿಶ್ವದಾದ್ಯಂತ ಡಾಲರ್‌ಗೆ ಬೇಡಿಕೆ ಹೆಚ್ಚುತ್ತಿದೆ. ಅಮೆರಿಕದಲ್ಲಿ ಆರ್ಥಿಕ ವೃದ್ಧಿ ದರ ಹೆಚ್ಚಳಗೊಂಡು ನಿರುದ್ಯೋಗ ಕಡಿಮೆಯಾಗುತ್ತಿದ್ದಂತೆ ಡಾಲರ್ ಸಾಮರ್ಥ್ಯ ಇನ್ನಷ್ಟು ಬಲಗೊಳ್ಳುತ್ತಿದೆ. ದೇಶಿ ಆಮದುದಾರರು ಡಾಲರ್ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಇನ್ನಷ್ಟು ಕುಸಿತ: ಎಸ್‌ಬಿಐ ಅಂದಾಜು
ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿಯಲ್ಲಿ ಅಂದಾಜಿಸಲಾಗಿದೆ. ರೂಪಾಯಿಯ ಅಪಮೌಲ್ಯ ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ಸಾಂಪ್ರದಾಯಿಕ ವಿಧಾನವಾದ ತನ್ನ ಅಲ್ಪಾವಧಿ ಬಡ್ಡಿ ದರ ಹೆಚ್ಚಳ ನೀತಿಗೆ ಮೊರೆ ಹೋಗಬೇಕಾಗುತ್ತದೆ. ಬ್ಯಾಂಕ್‌ಗಳ ಬಳಿ ಇರುವ ಹೆಚ್ಚುವರಿ ನಗದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ತಕ್ಷಣ ಕಾರ್ಯಪ್ರವೃತ್ತವಾಗಬೇಕು. ನಾಲ್ಕನೆ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ಈ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿ ಮಾಡಿದೆ.
ಪರಿಹಾರ ಕ್ರಮ
ಆರ್‌ಬಿಐ, ಸರ್ಕಾರಿ ಸಾಲ ಪತ್ರಗಳನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಅಡಮಾನ ಇಡದೆ ಅವುಗಳ ಬಳಿ ಇರುವ ಹೆಚ್ಚುವರಿ ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ವ್ಯವಸ್ಥೆಗೆ (ಸ್ಟ್ಯಾಂಡಿಂಗ್ ಡಿಪಾಸಿಟ್ ಫೆಸಿಲಿಟಿ– ಎಸ್‌ಡಿಎಫ್) ಚಾಲನೆ ನೀಡಬೇಕಾಗಿದೆ. ಈ ಕ್ರಮವು ಹಣಕಾಸು ವ್ಯವಸ್ಥೆಯಲ್ಲಿನ ನಗದು ಹರಿವಿನ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸಲಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಬಹುತೇಕ ಸಮಸ್ಯೆಗಳನ್ನೂ ದೂರ ಮಾಡಲಿದೆ.
ರೂಪಾಯಿ ಬೆಲೆ ಕುಸಿತದ ಕೆಟ್ಟ ದಿನಗಳು ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ. ಡಿಸೆಂಬರ್ ವೇಳೆಗೆ ಡಾಲರ್ ಎದುರು 67 ರಿಂದ 68ರ ದರದಲ್ಲಿ ಸ್ಥಿರಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಕಠಿಣ ಆರ್ಥಿಕ ಶಿಸ್ತು ಅಗತ್ಯ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆ ತೀವ್ರವಾಗಿ ಕುಸಿಯುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ಟರ್ಕಿಯಲ್ಲಿ ಉದ್ಭವಿಸಿದ್ದ ಆರ್ಥಿಕ ಬಿಕ್ಕಟ್ಟು, ಅದರ ಕರೆನ್ಸಿ ‘ಲಿರಾ’ದ ದಾಖಲೆ ಕುಸಿತವು ವಿಶ್ವದಾದ್ಯಂತ ಕುಸಿತದ ಸೋಂಕು ಹಬ್ಬಿಸಿದ ಕಂಪನಗಳು ಇನ್ನೂ ನಿಂತಿಲ್ಲ.
ಅಮೆರಿಕ ಮತ್ತು ಚೀನಾದ ನಡುವೆ ಉಂಟಾಗಿರುವ ವಾಣಿಜ್ಯ ಸಮರದ ಜತೆಗೆ, ಟರ್ಕಿಯ ಹಣಕಾಸು ಬಿಕ್ಕಟ್ಟು ವಿಷಮಿಸಿರುವುದು ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತಿದೆ. ಇದು ಎಲ್ಲೆಡೆ ದಿಗಿಲು ಮೂಡಿಸಿದೆ. ಆರ್ಥಿಕ ಬಿಕ್ಕಟ್ಟಿನ ಸುತ್ತ ಆವರಿಸಿಕೊಂಡಿರುವ ಅನಿಶ್ಚಿತತೆ ಮತ್ತು ಡಾಲರ್ ಸೂಚ್ಯಂಕದ ಬಲವರ್ಧನೆಯ ಕಾರಣಕ್ಕೆ ಆಮದುದಾರರು ಡಾಲರ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಹಲವಾರು ಆರ್ಥಿಕತೆಗಳ ಕರೆನ್ಸಿಗಳ ಬಿಕ್ಕಟ್ಟಿಗೂ ಕಾರಣವಾಗಿದೆ.
ರೂಪಾಯಿಯ ಖರೀದಿ ಸಾಮರ್ಥ್ಯವು ಈ ವರ್ಷದಲ್ಲಿ ಶೇಕಡ 14.3ರಷ್ಟು ಕುಸಿತ ಕಂಡಿರುವುದರಲ್ಲಿ ಸ್ಥಳೀಯ ಬೆಳವಣಿಗೆಗಳ ಪಾತ್ರ ಇಲ್ಲ. ಬಾಹ್ಯ ವಿದ್ಯಮಾನಗಳು ಹೆಚ್ಚಿನ ಪ್ರಭಾವ ಬೀರಿವೆ. ರಷ್ಯಾ, ಅರ್ಜೆಂಟೀನಾಗಳ ಕರೆನ್ಸಿ ಕುಸಿತಕ್ಕೆ ಹೋಲಿಸಿದರೆ, ರೂಪಾಯಿ ಮೌಲ್ಯ ಕುಸಿತ ಕಡಿಮೆ ಪ್ರಮಾಣದಲ್ಲಿ ಇರುವುದು ಕೊಂಚ ಸಮಾಧಾನಕರ ಸಂಗತಿ.
ದೇಶಿ ಆರ್ಥಿಕತೆ ಮೇಲೆ ಮಿಶ್ರ ಪ್ರಭಾವ
ರೂಪಾಯಿಯಲ್ಲಿ ಅಂತರ್ಗತವಾಗಿರುವ ಕೆಲ ದೌರ್ಬಲ್ಯಗಳೂ ಈ ವಿದ್ಯಮಾನದ ಮೇಲೆ ಒತ್ತಡ ಹೇರುತ್ತಿವೆ. ಈ ಬೆಳವಣಿಗೆಯು ದೇಶಿ ಆರ್ಥಿಕತೆ ಮೇಲೆ ಹಲವಾರು ಬಗೆಯಲ್ಲಿ ವ್ಯತಿರಿಕ್ತ ಪರಿಣಾಮವನ್ನೂ ಬೀರಲಿದೆ. ಕಚ್ಚಾ ತೈಲ ಆಮದು ವೆಚ್ಚ ಮತ್ತು ಚಾಲ್ತಿ ಖಾತೆ ಕೊರತೆ ಹೆಚ್ಚಿಸಲಿದೆ. ಹಣದುಬ್ಬರ ಏರಿಕೆಗೆ ಪುಷ್ಟಿ ನೀಡಲಿದೆ. ಉದ್ದಿಮೆ ಸಂಸ್ಥೆಗಳ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಷೇರುಪೇಟೆಯಲ್ಲಿನ ವಿದೇಶಿ ಹೂಡಿಕೆ ತಗ್ಗಿಸಲಿದೆ. ಆಮದುದಾರರು ಮತ್ತು ತೈಲ ಮಾರಾಟ ಸಂಸ್ಥೆಗಳ ನಷ್ಟ ಹೆಚ್ಚಿಸಲಿದೆ.
ಈ ವಿದ್ಯಮಾನವನ್ನು ಸಕಾರಾತ್ಮಕವಾಗಿಯೂ ಬಳಸಿಕೊಳ್ಳಬಹುದು. ರಫ್ತು ಪ್ರಮಾಣ ಹೆಚ್ಚಿಸಬಹುದು. ಐ.ಟಿ. ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳೂ ಹೆಚ್ಚಬಹುದು.
ಪ್ರತಿಯೊಂದು ಡಾಲರ್‌ಗೆ ಹೆಚ್ಚು ರೂಪಾಯಿ ನೀಡಬೇಕಾಗಿ ಬಂದಿದೆ. ವಿದೇಶಗಳಲ್ಲಿ ಕಲಿಯುತ್ತಿರುವ ಮಕ್ಕಳ ವಿದ್ಯಾಭ್ಯಾಸ ವೆಚ್ಚಕ್ಕೆ ಹಣ ಕಳಿಸುವವರಿಗೆ, ವಿದೇಶಗಳಿಗೆ ಭೇಟಿ ನೀಡುವವರ ಮೇಲಿನ ಆರ್ಥಿಕ ಹೊರೆ ಹೆಚ್ಚಲಿದೆ. ವಿದೇಶಗಳಿಂದ ಡಾಲರ್ ಸ್ವೀಕರಿಸುವವರಿಗೆ ಮಾತ್ರ ರೂಪಾಯಿ ರೂಪದಲ್ಲಿ ಹೆಚ್ಚು ಹಣ ಕೈಸೇರಲಿದೆ. ಷೇರುಪೇಟೆಯಲ್ಲಿನ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವೂ ಹೆಚ್ಚಲಿದೆ. ರಫ್ತು ಸರಕುಗಳು ಅಗ್ಗವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅವುಗಳ ಸ್ಪರ್ಧಾತ್ಮಕತೆ ಹೆಚ್ಚುತ್ತದೆ. ಇದರಿಂದ ತಯಾರಿಕೆ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ಸಿಗಲಿದೆ.
ವ್ಯಾಪಾರ ಕೊರತೆ ಹೆಚ್ಚಳ
ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ವ್ಯಾಪಾರ ಕೊರತೆ ₹ 12.81 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 6.4ರಷ್ಟು ಇರಲಿದೆ. 2017–18ರಲ್ಲಿ ಇದು (ಜಿಡಿಪಿಯ ಶೇ 6) ₹ 11.30 ಲಕ್ಷ ಕೋಟಿಗಳಷ್ಟಿತ್ತು.
ರೂಪಾಯಿ ಮೌಲ್ಯ ಕುಸಿತಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿಗಾದರೂ ಆಕ್ರಮಣಕಾರಿ ಧೋರಣೆ ತಳೆಯಬೇಕಾಗಿದೆ. ಎದುರಾಗಬಹುದಾದ ಪ್ರತಿಕೂಲ ವಿದ್ಯಮಾನಗಳನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಈ ಆತಂಕದ ಛಾಯೆ ದೂರ ಮಾಡಲು ಹಣಕಾಸಿನ ಕ್ರಮಗಳನ್ನು ಆರ್‌ಬಿಐ ಮತ್ತು ವಿತ್ತೀಯ ಶಿಸ್ತಿನ ಕ್ರಮಗಳನ್ನು ಕೇಂದ್ರ ಸರ್ಕಾರ ತುರ್ತಾಗಿ ಕೈಗೊಳ್ಳಬೇಕಾಗಿದೆ.
‘2013ರಲ್ಲಿ ರೂಪಾಯಿ ವಿನಿಮಯ ದರ 68ಕ್ಕೆ ತಲುಪಿದಾಗ, ಆರ್‌ಬಿಐನ ಅಂದಿನ ಗವರ್ನರ್ ರಘುರಾಂ ರಾಜನ್ ಅವರು, ವಿದೇಶಿ ಕರೆನ್ಸಿ ಅನಿವಾಸಿ ಭಾರತೀಯರ ಬ್ಯಾಂಕ್ ಠೇವಣಿ (ಎಫ್‌ಸಿಎನ್‌ಆರ್–ಬಿ) ಯೋಜನೆ ಕಾರ್ಯಗತಗೊಳಿಸಿದ್ದರು. ಈ ಯೋಜನೆಯಡಿ ಮೂರು ವರ್ಷಗಳವರೆಗೆ ₹ 2.14 ಲಕ್ಷ ಕೋಟಿ ಹರಿದು ಬಂದಿತ್ತು. ಇದರ ಫಲವಾಗಿ ರೂಪಾಯಿ ದರ ಸ್ಥಿರಗೊಂಡಿತ್ತು. ಆನಂತರ ಆ ಹಣವನ್ನೆಲ್ಲ ಮರಳಿಸಲಾಗಿತ್ತು.
ವಿನಿಮಯ ದರ
ಅಮೆರಿಕದ ಡಾಲರ್ ಸ್ಥಿರವಾದ ಬೆಲೆ ಹೊಂದಿಲ್ಲ. ವಿಶ್ವದ ಇತರ ಕರೆನ್ಸಿಗಳಾದ ಯುರೊ, ಯೆನ್, ಪೌಂಡ್‌ಗಳ ಎದುರು ಅದರ ಬೆಲೆ ಸದಾ ಏರಿಳಿತವಾಗುತ್ತಲೇ ಇರುತ್ತದೆ. ಆರ್ಥಿಕ ಪರಿಸ್ಥಿತಿ, ಸರ್ಕಾರದ ನೀತಿ, ಆಮದು – ರಫ್ತು ಅಸಮತೋಲನ ಮುಂತಾದ ವಿದ್ಯಮಾನಗಳು ಅದರ ಬೆಲೆ ನಿಗದಿ ಮಾಡುತ್ತವೆ.
ಕರೆನ್ಸಿಗಳ ಪರಸ್ಪರ ವಿನಿಮಯ ದರವು ಅವುಗಳ ಖರೀದಿ ಸಾಮರ್ಥ್ಯ ಆಧರಿಸಿರುತ್ತದೆ. ಡಾಲರ್ ಮೌಲ್ಯವರ್ಧನೆಯಾಗುತ್ತಿದ್ದಂತೆ ಇತರ ಕರೆನ್ಸಿಗಳ ಎದುರು ಅದರ ಬೆಲೆ ಏರಿಕೆಯಾಗುತ್ತದೆ.
ಡಾಲರ್ ಎದುರು ರೂಪಾಯಿ ವಿನಿಮಯ ದರ ಕಡಿಮೆಯಾಗುತ್ತಿದ್ದಂತೆ ಆಮದು ಸರಕುಗಳು ದುಬಾರಿಯಾಗಿ ಪರಿಣಮಿಸುತ್ತವೆ. ಹೆಚ್ಚು ಹಣಕೊಟ್ಟು ಸರಕು ಖರೀದಿಸಬೇಕಾಗುತ್ತದೆ. ಹಣದ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಸ್ಥಳೀಯವಾಗಿ ಅನೇಕ ಸರಕುಗಳೂ ತುಟ್ಟಿಯಾಗುತ್ತವೆ.
No comments:
Post a Comment