ವಿಶ್ವನಾಥ ಎಸ್.
ಕಿ ರಾಣಿ ಅಂಗಡಿಗಳು ತಮ್ಮ ವಹಿವಾಟನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ತಂತ್ರಜ್ಞಾನದ ಬಳಕೆ ಆರಂಭಿಸಿವೆ. ಈ ಹೊತ್ತಿನಲ್ಲಿಯೇ ಜಿಎಸ್‌ಟಿ ಜಾರಿಗೆ ಬಂದಿರುವುದು ವಹಿವಾಟನ್ನು ಪಾರದರ್ಶಕವಾಗಿಸಿ, ಇನ್ನಷ್ಟು ಸರಳಗೊಳಿಸಿದೆ ಎಂದು ಕಿರಾಣಿ ಅಂಗಡಿಗಳಿಗೆ ತಂತ್ರಜ್ಞಾನ ನೆರವು ನೀಡುತ್ತಿರುವ ಸ್ನ್ಯಾಪ್‌ಬಿಜ್ ಕಂಪನಿ ಸ್ಥಾಪಕ ಪ್ರೇಮ್‌ಕುಮಾರ್ ಹೇಳುತ್ತಾರೆ.
ನಗರಗಳಲ್ಲಿ ಮಾಲ್ ಸಂಸ್ಕೃತಿಯ ಆಕರ್ಷಣೆ, ರಿಯಾಯ್ತಿ ಕೊಡುಗೆಗಳು ಜನರನ್ನು ಹೆಚ್ಚಾಗಿ ಸೆಳೆಯುತ್ತಿದ್ದರೂ, ದೇಶದಲ್ಲಿನ ಚಿಲ್ಲರೆ ವಹಿವಾಟಿನಲ್ಲಿ ಕಿರಾಣಿ ಅಂಗಡಿಗಳ ಪಾಲು ಶೇ 85 ರಷ್ಟಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸುವ ಮೂಲವೂ ಇದಾಗಿದೆ. ಇಂತಹ ವಲಯವನ್ನು ಸಂಘಟಿತ ರೂಪಕ್ಕೆ ತರುವಲ್ಲಿ ತಂತ್ರಜ್ಞಾನ ಮತ್ತು ಜಿಎಸ್‌ಟಿ ಪ್ರಮುಖ ಪಾತ್ರ ವಹಿಸುತ್ತಿವೆ.
ಕಿರಾಣಿ ಅಂಗಡಿ, ತಂತ್ರಜ್ಞಾನ ಮತ್ತು ಜಿಎಸ್‌ಟಿ ಒಂದಕ್ಕೊಂದು ಸರಪಳಿ ಇದ್ದಂತೆ. ಉತ್ತಮ ವಹಿವಾಟು ನಡೆಸಲು ತಂತ್ರಜ್ಞಾನ ಅಗತ್ಯ. ತಂತ್ರಜ್ಞಾನ ಅಳವಡಿಕೆಯಿಂದ ಮಾತ್ರವೇ ಜಿಎಸ್‌ಟಿ ವ್ಯವಸ್ಥೆ ಯಶಸ್ವಿ ಸಾಧ್ಯ ಎನ್ನುವುದು ಅವರ ಅಭಿಮತವಾಗಿದೆ.
ಗ್ರಾಹಕರ ಅಭಿರುಚಿ, ಸರಕು ತಯಾರಕರ ಮನೋಧರ್ಮ ಎಲ್ಲವೂ ಬದಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಅಂಗಡಿಗಳೂ ಬದಲಾವಣೆಗೆ ಹೊಂದಿಕೊಳ್ಳದೇ ಇದ್ದರೆ ತಕ್ಷಣಕ್ಕೆ ಅಲ್ಲದೇ ಇದ್ದರೂ ನಿಧಾನವಾಗಿಯಾದರೂ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹಳಷ್ಟು ಅಂಗಡಿ ಮಾಲೀಕರು ಈ ಸತ್ಯವನ್ನು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಕಾಗದ ಪತ್ರಗಳಲ್ಲಿ ಲೆಕ್ಕಪತ್ರಗಳನ್ನು ದಾಖಲಿಸಿ ಇಡುವ ಜಾಯಮಾನಕ್ಕೆ ವಿದಾಯ ಹೇಳಿ ಕಂಪ್ಯೂಟರ್ ಬಳಕೆ ಆರಂಭಿಸಿದ್ದಾರೆ.
ಕಿರಾಣಿ ಅಂಗಡಿ ನಡೆಸುವವರಲ್ಲಿ ಎರಡು ರೀತಿಯ ಮನೋಧರ್ಮ ಉಳ್ಳವರು ಇದ್ದಾರೆ. ತಂತ್ರಜ್ಞಾನ ಅಳವಡಿಕೆಯಿಂದ, ಲೆಕ್ಕಪತ್ರ ಬರೆದಿಡುವ ಗೋಳು ತಪ್ಪಿ, ವ್ಯಾಪಾರಕ್ಕೆ ಹೆಚ್ಚಿನ ಗಮನ ನೀಡಬಹುದು ಎನ್ನುವವರು ಒಂದೆಡೆಯಾದರೆ, ತಂತ್ರಜ್ಞಾನ ಬಳಕೆ ಗೊತ್ತಿಲ್ಲ, ಹೀಗಾಗಿ ಆ ರಗಳೆಯೇ ಬೇಡ ಎನ್ನುವವರೂ ಇದ್ದಾರೆ.
‘ಆರಂಭದಲ್ಲಿ ಗೊಂದಲ, ಆತಂಕ ಸಹಜವೇ. ಸಮಯ ಕಳೆದಂತೆ ಕಿರಾಣಿ ಅಂಗಡಿ ಮಾಲೀಕರು ಜಿಎಸ್‌ಟಿಯನ್ನು ಒಪ್ಪಿಕೊಳ್ಳಲಾರಂಭಿಸಿದ್ದಾರೆ. ಬಿಲ್ಲಿಂಗ್ ಮತ್ತು ತೆರಿಗೆ ಪಾವತಿಗೆ ಲೆಕ್ಕಪತ್ರ ಪರಿಶೋಧಕರ ನೆರವು ಪಡೆಯುತ್ತಿದ್ದಾರೆ. ಈ ಪ್ರವೃತ್ತಿ ತಪ್ಪಿಸಿ, ತಾವೇ ಸ್ವತಃ ಆ ಕೆಲಸಗಳನ್ನು ಮಾಡಿಕೊಳ್ಳುವ ಕೌಶಲ ಕರಗತ ಮಾಡಿಕೊಳ್ಳಲು ನೆರವಾಗುತ್ತಿದ್ದೇವೆ’ ಎನ್ನುತ್ತಾರೆ ಅವರು.
‘ಜಿಎಸ್‌ಟಿಯಿಂದಾಗಿ ಕಿರಾಣಿ ಅಂಗಡಿಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ವೇಗ ಹೆಚ್ಚಿದೆ. ನಾವು ನಮ್ಮ ತಂತ್ರಜ್ಞಾನದ ನೆರವಿನೊಂದಿಗೆ ಜಿಎಸ್‌ಟಿ ಅಳವಡಿಕೆಗೂ ಅಗತ್ಯ ಸಹಾಯ ಮಾಡುತ್ತಿದ್ದೇವೆ.
‘ಕಿರಾಣಿ ಅಂಗಡಿ ನಡೆಸುವವರು ಯಾವಾಗಲೂ ತಮ್ಮ ವ್ಯಾಪಾರದ ಕಡೆಗೆ ಹೆಚ್ಚು ಗಮನ ನೀಡುವಂತಾಗಬೇಕು. ತಂತ್ರಜ್ಞಾನ ಬಳಕೆ, ಜಿಎಸ್‌ಟಿ ಅವರಿಗೆ ಹೊರೆ ಎಂದೆನಿಸಬಾರದು. ಈ ನಿಟ್ಟಿನಲ್ಲಿ ನಾವು ಅವರಿಗೆ ತಂತ್ರಜ್ಞಾನ ಮತ್ತು ಜಿಎಸ್‌ಟಿಯನ್ನು ಸರಳವಾಗಿ ಬಳಕೆ ಮಾಡುವುದು ಹೇಗೆ? ಅದರಿಂದ ಆಗುವ ಪ್ರಯೋಜನಗಳೇನು ಎನ್ನುವುದನ್ನು ತರಬೇತಿ ನೀಡುವುದರ ಜತೆ ಜತೆಗೇ ಮನವರಿಕೆಯನ್ನೂ ಮಾಡಿಕೊಡುತ್ತಿದ್ದೇವೆ’ ಎಂದು ಪ್ರೇಮ್‌ಕುಮಾರ್ ಹೇಳುತ್ತಾರೆ.
ಬೆಂಗಳೂರಿನ ಕಂಪನಿ
ಸ್ನ್ಯಾಪ್‌ಬಿಜ್, ಬೆಂಗಳೂರಿನ ನವೋದ್ಯಮವಾಗಿದ್ದು, 2013ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಮಹಾನಗರಗಳಲ್ಲಿ ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್‌ಗಳಿಂದ ಸಾಂಪ್ರದಾಯಿಕ ಚಿಲ್ಲರೆ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ನಡೆಸಿ ಪರಿಹಾರ ನೀಡುವ ಉದ್ದೇಶದಿಂದ ಸ್ಥಾಪನೆಯಾಗಿದೆ.
ಸ್ನ್ಯಾಪ್‌ಬಿಜ್ ನೀಡಿರುವ ಸಾಧನದಲ್ಲಿ 65 ಸಾವಿರ ಉತ್ಪನ್ನಗಳ ಬಾರ್‌ಕೋಡ್ ಮಾಹಿತಿ ಇದೆ. ಇದರಿಂದ ಜಿಎಸ್‌ಟಿ ಅಪ್‌ಡೇಟ್ ಮಾಡಲು ಹಾಗೂ ರಿಟರ್ನ್ ಸಲ್ಲಿಸಲು ಅನುಕೂಲವಾಗಿದೆ. ವಿಶೇಷ ಕೊಡುಗೆಗಳು, ತೆರಿಗೆ ಇತ್ಯಾದಿಗಳ ಸ್ಪಷ್ಟ ಮಾಹಿತಿ ಸಿಗುವುದರಿಂದ ಗ್ರಾಹಕರೂ ಸಂತೃಪ್ತಿ ಹೊಂದಿದ್ದಾರೆ. ಪಿಒಎಸ್ ಮಷಿನ್‌ಗಳ ಬಳಗೆಗಿಂತಲೂ ಇದು ಹೆಚ್ಚು ಸುಲಭವಾಗಿದೆ. ವಿಶೇಷ ಕೊಡುಗೆಗಳ ಬಗ್ಗೆ ಗ್ರಾಹಕರ ಮೊಬೈಲ್‌ಗೆ ಸಂದೇಶ ಕಳುಹಿಸಬಹುದು. ಬಹಳ ಬೇಗ ಬಿಲ್ಲಿಂಗ್ ಸಾಧ್ಯವಾಗುತ್ತಿದೆ.
ಗಣೇಶ್, ಗಣೇಶ್ ಮೂರ್ತಿ ರೈಸ್ ಟ್ರೇಡರ್ಸ್, ಹೆಬ್ಬಾಳ
No comments:
Post a Comment