ಮುಂದಾಲೋಚನೆ ಇಲ್ಲದೆ ಮಾಡಿದ ಘನಕಾರ್ಯವೂ ಕೆಲವೊಮ್ಮೆ ಮಹತ್ವ ಕಳೆದುಕೊಳ್ಳುತ್ತದೆ. ನೌಕರರು ಕೊಟ್ಟ ರಕ್ತಕ್ಕೆ ಸೂಕ್ತ ಮನ್ನಣೆ ಸಿಗಲಿಲ್ಲ...
ಮಾಣಿಕ ಆರ್. ಭುರೆ
ಮಹಾತ್ಮ ಗಾಂಧಿ 150ನೇ ಜನ್ಮದಿನದ ಮರುದಿನ, ರಾಜ್ಯದ ಸರ್ಕಾರಿ ನೌಕರರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅನೇಕರು ರಕ್ತದಾನ ಮಾಡಿದರು. ಕೆಲವು ಪತ್ರಿಕೆ ಮತ್ತು ಚಾನೆಲ್‌ಗಳಲ್ಲಿ ‘ನೌಕರರ ಗಾಂಧಿಗಿರಿ’ ಎಂದೇ ಇದು ಬಿಂಬಿತವಾಯಿತು. ನೌಕರರ ಹಳೆಯ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಜಾರಿಯಲ್ಲಿರಿಸಬೇಕು ಎಂದು ಆಗ್ರಹಿಸಿ ವಿನೂತನ ಮಾದರಿಯ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷವಾಕ್ಯದ ಈ ಹೋರಾಟವು ಗಾಂಧೀಜಿಯ ಸತ್ಯಾಗ್ರಹದ ಮಾದರಿಯಲ್ಲಿದ್ದುದು ಸತ್ಯ.
ಇವರು ಇಲ್ಲಿ ಮೌನವಾಗಿ ರಕ್ತ ನೀಡುತ್ತಿದ್ದರೆ, ಅತ್ತ ದೆಹಲಿಯಲ್ಲಿ ರೈತರ ಹಾಗೂ ಪೊಲೀಸರ ಮಧ್ಯೆ ಕಾದಾಟ ನಡೆದು, ಕೆಲವರ ರಕ್ತ ಚಿಮ್ಮಿ ರಸ್ತೆಯೆಲ್ಲ ಕೆಂಪಾಯಿತು. ಉತ್ತರ ಪ್ರದೇಶದ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವ ಸಲುವಾಗಿ ದೆಹಲಿಗೆ ಬರುತ್ತಿದ್ದಾಗ, ಪೊಲೀಸರು ತಡೆದು ಲಾಠಿ ಬೀಸಿದ್ದರು. ಕೃಷಿಕರು ಅವರ ಏಟಿಗೆ ಅಂಜದೆ, ಪ್ರತಿರೋಧ ವ್ಯಕ್ತಪಡಿಸಿದರು. ಅಲ್ಲಿ ರಣರಂಗ ಸೃಷ್ಟಿಯಾಗಿತ್ತು.
ಈ ಎರಡು ಬಗೆಯ ಹೋರಾಟಗಳ ಪರಿಣಾಮ ಏನೇ ಆಗಿರಲಿ, ವಿಶಿಷ್ಟ ಕಾರಣಗಳಿಗಾಗಿ ಇವೆರಡೂ ನೆನಪಿನಲ್ಲಿ ಉಳಿಯುವಂಥ ವಿದ್ಯಮಾನಗಳು ಎಂಬುದನ್ನು ಅಲ್ಲಗಳೆಯುವಂತಿಲ್ಲ. ನೌಕರರ ಹಕ್ಕೊತ್ತಾಯವು ತೀರಾ ವಿಶಿಷ್ಟವಾಗಿತ್ತು. ಆದರೆ, ‘ರಕ್ತದಾನ ಮಾಡಿ ಜೀವ ಉಳಿಸಿ’ ಎಂಬ ಒಕ್ಕಣೆಯ ಪುಟಗಟ್ಟಲೆ ಜಾಹೀರಾತು ನೀಡುವ ಸರ್ಕಾರವು ನೌಕರರ ರಕ್ತದಾನದ ಬಗ್ಗೆ ನಿರ್ಲಕ್ಷ್ಯ ವಹಿಸಿತೇ? ಆಯೋಜಕರು ಕೂಡ ತಾವು ಮಾಡಿದ ಉತ್ತಮ ಕಾರ್ಯದ ಕುರಿತು ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದರೇ ಎಂಬ ಸಂದೇಹ ಕಾಡುತ್ತದೆ.
ಯಾವುದೋ ಒಂದು ರೂಪದಲ್ಲಿ ಹಕ್ಕೊತ್ತಾಯ ಮಾಡಿದ ತಕ್ಷಣ ಸಮಸ್ಯೆ ಪರಿಹಾರ ಆಗಲೇಬೇಕು ಎಂದೇನಿಲ್ಲ. ಹತ್ತಾರು ವರ್ಷಗಳವರೆಗೆ ಚಳವಳಿ ಕೈಗೊಂಡರೂ ಅನೇಕ ಸಮಸ್ಯೆಗಳು ಹಾಗೆಯೇ ಉಳಿದಿರುವುದು ಎಲ್ಲರಿಗೂ ಗೊತ್ತಿದೆ. ಅದರಂತೆ ನೌಕರರ ಈ ಹಕ್ಕೊತ್ತಾಯದ ಬಗ್ಗೆಯೂ ನಿರ್ಲಕ್ಷ್ಯ ತಾಳಿರಬಹುದು. ಆದರೆ, ಅವರು ನೀಡಿದ ರಕ್ತಕ್ಕಾದರೂ ಲೆಕ್ಕ ಇಡುವುದು ಬೇಡವೇ? ಅನೇಕರು ನೀಡಿದ ಅತ್ಯಮೂಲ್ಯವಾದ ರಕ್ತದಿಂದ ಯಾವ ರೀತಿ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದರ ಬಗ್ಗೆಯಾದರೂ ಸಂಬಂಧಿತರು ಯೋಚಿಸಬಹುದಿತ್ತಲ್ಲವೇ? ಆ ಬಗ್ಗೆ ಯೋಜನೆ ಸಿದ್ಧಪಡಿಸಬಹುದಿತ್ತಲ್ಲವೇ?
ಅಂದು ತಾವೂ ರಕ್ತದಾನ ಮಾಡಿ, ನೌಕರರನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದ ಮಾಗಡಿಯ ಬಿಇಒ ಸಿದ್ಧೇಶ್ವರ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದು ಸುದ್ದಿಯಾಯಿತು. ಕೊಟ್ಟೂರಿನಲ್ಲಿ ತಹಶೀಲ್ದಾರ್ ಮಂಜುನಾಥ ಕೂಡ ರಕ್ತದಾನ ಮಾಡಿ ನೌಕರರನ್ನು ಹುರಿದುಂಬಿಸಿದ ಬಗ್ಗೆ ಗೊತ್ತಾಯಿತು. ಎಲ್ಲಿ ಎಷ್ಟು ರಕ್ತದಾನ ಮಾಡಲಾಯಿತು ಎಂಬುದರ ಬಗ್ಗೆ ಎನ್‌ಪಿಎಸ್ (ನ್ಯೂ ಪೆನ್ಶನ್ ಸ್ಕೀಮ್) ಸಂಘದವರು ಮಾಹಿತಿ ಸಂಗ್ರಹಿಸಿರಬಹುದು ಎಂದು ಸಂಘದ ಬೀದರ್ ಜಿಲ್ಲೆಯಲ್ಲಿನ ಪ್ರತಿನಿಧಿಯೊಬ್ಬರನ್ನು ಸಂಪರ್ಕಿಸಿ ವಿಚಾರಿಸಿದರೆ, ಈ ಬಗ್ಗೆ ಯಾರ ಬಳಿಯೂ ಲೆಕ್ಕವಿಲ್ಲ ಎಂಬ ಉತ್ತರ ದೊರಕಿತು.
ಮರುದಿನದ ಇ-ಪೇಪರ್‌ಗಳನ್ನು ಜಾಲಾಡಿದೆ. ಜಿಲ್ಲಾ ಆವೃತ್ತಿಗಳಲ್ಲಿನ ಸುದ್ದಿಗಳನ್ನು ಹೆಕ್ಕಿ ಮಾಹಿತಿ ಕಲೆ ಹಾಕಿದೆ. ಎಲ್ಲೆಡೆ ಸಾಕಷ್ಟು ರಕ್ತ ನೀಡಿರುವುದು ಗಮನಕ್ಕೆ ಬಂತು.
ಬಸವಕಲ್ಯಾಣದಲ್ಲಿ 40 ಯೂನಿಟ್, ಬೀದರ್ 100, ಔರಾದ್ 35, ಕಲಬುರ್ಗಿ 200, ಚಿತ್ತಾಪುರ 100, ಚಿಂಚೋಳಿ 31, ಆಳಂದ 100, ದೇವದುರ್ಗ 50, ಮಾನ್ವಿ 88, ರಾಯಚೂರು 200, ಹುನಗುಂದ 100, ಕಂಪ್ಲಿ 120, ಮುರಗೋಡು 100, ಹೊಸಪೇಟೆ 120, ಬಳ್ಳಾರಿ 100, ಹಗರಿಬೊಮ್ಮನಹಳ್ಳಿ 105, ಕನಕಪುರ 150, ರಾಮನಗರ 100, ಚನ್ನಪಟ್ಟಣ 500, ಪಿರಿಯಾಪಟ್ಟಣ 80, ಎಚ್.ಡಿ.ಕೋಟೆ 79, ದಾವಣಗೆರೆ 177, ಚಿಂತಾಮಣಿ 90, ಚಿಕ್ಕಮಗಳೂರು 82, ಕುಶಾಲನಗರ 36, ಹೊಸದುರ್ಗ 120, ಕುಣಿಗಲ್ 57, ಪಾವಗಡ 40, ಸಕಲೇಶಪುರ 200, ಹಾಸನ 150, ಚನ್ನರಾಯಪಟ್ಟಣ 150, ಅರಕಲಗೂಡು 90, ಹೊಳೆನರಸೀಪುರ 50, ಬೇಲೂರು 130, ಭದ್ರಾವತಿ 50, ಹೊಸನಗರ 50, ಸಾಗರ 50, ಸೊರಬ 60 ಹಾಗೂ ವಿಜಯಪುರದಲ್ಲಿ 100 ಯೂನಿಟ್‌ನಷ್ಟು ರಕ್ತ ಸಂಗ್ರಹವಾಗಿರುವ ಮಾಹಿತಿ ಸಿಕ್ಕಿತು. ರಾಜ್ಯದಲ್ಲಿ ಕೆಲವು ತಾಲ್ಲೂಕುಗಳಲ್ಲಿ ಹೆಚ್ಚು, ಕೆಲಕಡೆ
ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ರಕ್ತ ಸಂಗ್ರಹ ಆಗಿರಬಹುದು. ಆದರೂ, ಒಂದು ತಾಲ್ಲೂಕಿನಲ್ಲಿ ಕನಿಷ್ಠ 50 ಯೂನಿಟ್ ರಕ್ತ ಸಂಗ್ರಹಿಸಿದ್ದರೂ ಅಂದಾಜು 11 ಸಾವಿರ ಯೂನಿಟ್ ರಕ್ತ ಸಂಗ್ರಹವಾದಂತಾಗಿದೆ. ಇದರ ಅರ್ಧದಷ್ಟು ಸಂಗ್ರಹವಾಗಿದ್ದರೂ ಅದೇನು ಕಡಿಮೆ ಆಯಿತೇ? ಏಕ ಕಾಲಕ್ಕೆ ಇಷ್ಟೊಂದು ರಕ್ತದಾನ ಮಾಡಿದ ದಾಖಲೆ ಇದೆಯೇ? ಇದು ಗಿನ್ನಿಸ್ ದಾಖಲೆ ಆಗಬಹುದಾದ ಸಾಧನೆ ಅಲ್ಲವೇ? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಕ್ತ ನೀಡಿದ ಸಂಘಟನೆಯವರಿಗೂ ಇದು ಅರಿವಿಗೆ ಬರಲಿಲ್ಲ ಎಂದೆನಿಸುತ್ತದೆ.
ನೌಕರರದ್ದು ದಾಖಲೆ ನಿರ್ಮಾಣದ ಉದ್ದೇಶ ಆಗಿರಲಿಲ್ಲ. ಆದರೂ, ತಾವು ನೀಡುತ್ತಿರುವ ಇಷ್ಟೊಂದು ಪ್ರಮಾಣದ ರಕ್ತ ಸುರಕ್ಷಿತವಾಗಿ ಇರುತ್ತದೆಯೇ? ಎಷ್ಟು ದಿನಗಳವರೆಗೆ ಇದನ್ನು ಸಂಗ್ರಹಿಸಿ ಇಡಬಹುದು? ಹಾಗೆ ಇಡುವ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಇದೆಯೇ? ಇಲ್ಲವೆಂದಾದರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸುವ ಅಗತ್ಯ ಇತ್ತಲ್ಲವೇ? ಕೆಲ ಜಿಲ್ಲಾ ಕೇಂದ್ರಗಳಲ್ಲಿ ರಕ್ತ ಸಂಗ್ರಹ ಘಟಕಗಳೇ ಇಲ್ಲದೆ, ಪಡೆದ ರಕ್ತವನ್ನು ಕದ್ದುಮುಚ್ಚಿ ಬೀದಿಗೆ ಎಸೆದ ಪ್ರಕರಣಗಳು ಹಿಂದೆ ಬೆಳಕಿಗೆ ಬಂದಿವೆ. ಈ ರಕ್ತವೂ ಹಾಗೆಯೇ ಚರಂಡಿ ಸೇರಬಾರದಲ್ಲವೇ?
ಸಂಗ್ರಹವಾದ ರಕ್ತವನ್ನು ರಕ್ತನಿಧಿಗಳಿಗೆ ವ್ಯವಸ್ಥಿತವಾಗಿ ತಲುಪಿಸುವಂತೆ ಸರ್ಕಾರವನ್ನು ಒತ್ತಾಯಿಸಬಹುದಿತ್ತಲ್ಲವೇ? ಇದರಿಂದ ಸಾವಿರಾರು ಜನರಿಗೆ ಪ್ರಯೋ
ಜನವಾದರೂ ಆಗುತ್ತಿತ್ತು. ಈ ಬಗ್ಗೆ ಯಾರೂ ಏಕೆ ಯೋಚಿಸಲಿಲ್ಲ? ಮುಂದಾಲೋಚನೆ ಇಲ್ಲದೆ ಮಾಡಿದ ಘನಕಾರ್ಯವೂ ಕೆಲವೊಮ್ಮೆ ಮಹತ್ವ ಕಳೆದುಕೊಳ್ಳುತ್ತದೆ. ಅದರಂತೆ ಈ ಪ್ರಕರಣದಲ್ಲಿ ನೌಕರರ ರಕ್ತದಾನಕ್ಕೆ ಸರಿಯಾದ ಮನ್ನಣೆ ಸಿಗಲಿಲ್ಲ ಎಂದೆನಿಸುತ್ತದೆ.
No comments:
Post a Comment