ಇಡೀ ಜಗತ್ತೇ ಸರ್ವಶ್ರೇಷ್ಠ ಸಾಹಿತಿ ಎಂದು ಪರಿಗಣಿಸಿರುವ ಕೆಲವೇ ಕೆಲವರಲ್ಲಿ ವಿಲಿಯಂ ಷೇಕ್ಸ್‌ಪಿಯರ್ ಒಬ್ಬ. 1564ರಲ್ಲಿ ಆ್ಯವನ್ ನದಿ ದಂಡೆಯಲ್ಲಿನ ಸ್ಟ್ರಾನ್‌ಫೋರ್ಡ್ ಎಂಬ ಊರಿನಲ್ಲಿ ಹುಟ್ಟಿದ. ಅವನೇನೂ ವಿಶ್ವವಿದ್ಯಾಲಯಗಳಿಗೆ ಹೋಗಿ ವ್ಯಾಸಂಗ ಮಾಡಿ ವಿದ್ವಾಂಸನಾದವನಲ್ಲ. ಬದುಕಿನ ಮೂಲಕ ಕಲಿತ ಸಂಗತಿಗಳನ್ನೇ ಸಾಹಿತ್ಯದಲ್ಲಿ ಪಡಿಮೂಡಿಸಿದನು.
1582ರಲ್ಲಿ ಆ್ಯನೇ ಹ್ಯಾಥವೇ ಎನ್ನುವವಳನ್ನು ಮದುವೆಯಾದ ಷೇಕ್ಸ್‌ಪಿಯರ್‌ನಿಗೆ ಮೂವರು ಮಕ್ಕಳು. 1585ರಲ್ಲಿ ಲಂಡನ್‌ಗೆ ಹೋಗಿ ಅಲ್ಲಿ ಒಂದು ನಾಟಕ ಕಂಪನಿಯಲ್ಲಿ ನಟನಾಗಿ ಕೆಲಸ ಆರಂಭಿಸಿದ. ನಂತರ ನಾಟಕಗಳನ್ನೂ ಬರೆಯತೊಡಗಿದ. ಇಂದು ಇಡೀ ಜಗತ್ತಿನಲ್ಲಿ ಸರ್ವಶ್ರೇಷ್ಠ ನಾಟಕಕಾರರಲ್ಲಿ ಒಬ್ಬ ಎಂದು ಷೇಕ್ಸ್‌ಪಿಯರ್‌ನನ್ನು ಪರಿಗಣಿಸಲಾಗುತ್ತದೆ. ಅವನು 38 ನಾಟಕಗಳನ್ನು ರಚಿಸಿದ್ದಾನೆ. ಮರ್ಚೆಂಟ್ ಆಫ್ ವೆನಿಸ್, ಆ್ಯಸ್ ಯೂ ಲೈಕ್ ಇಟ್ ಆ್ಯಂಡ್ ಟ್ವೆಲ್ತ್ ನೈಟ್, ಹೆನ್ರಿ IV, ಹ್ಯಾಮ್ಲೆಟ್, ಒಥೆಲೋ, ಕಿಂಗ್ ಲಿಯರ್, ಮ್ಯಾಕ್‌ಬೆತ್, ರೋಮಿಯೊ ಜ್ಯೂಲಿಯಟ್ ಇವನ ಪ್ರಸಿದ್ಧ ನಾಟಕಗಳು. ಇವುಗಳಲ್ಲಿ ಹಾಸ್ಯ, ಐತಿಹಾಸಿಕ ಮತ್ತು ದುರಂತ ನಾಟಕಗಳೂ ಸೇರಿವೆ. ಅವನು ಬರೆದಿರುವ ಹಲವು ದುರಂತ ನಾಟಕಗಳು ಇಂದಿಗೂ ಮತ್ತೆ ಮತ್ತೆ ರಂಗದ ಮೇಲೆ ಪ್ರದರ್ಶಿತಗೊಳ್ಳುತ್ತಲೇ ಇವೆ. ವಿಮರ್ಶಕರಿಂದ ಹೊಸ ಹೊಸ ವ್ಯಾಖ್ಯಾನಕ್ಕೆ ಒಳಗಾಗುತ್ತಲೇ ಇವೆ. 1952ರ ನಂತರ ಅವನು ಕವಿತೆಗಳನ್ನೂ ಬರೆಯಲು ಶುರುಮಾಡಿದ. ಶೇಕ್ಸ್‌ಪಿಯರ್‌ನ ಸಾನೆಟ್‌ಗಳು ಶ್ರೇಷ್ಠ ಸಾಹಿತ್ಯಕೃತಿಗಳ ಸಾಲಿಗೆ ಸೇರುತ್ತವೆ.
ಅವನ ನಾಟಕದ ಪಾತ್ರಗಳು ಬರಿಯ ಒಳ್ಳೆಯ ಅಥವಾ ಕೆಟ್ಟವರಾಗಿರುವುದಿಲ್ಲ. ಮಹಾ ಖಳನಲ್ಲಿಯೂ ಒಳ್ಳೆಯತನದ ಮಿಂಚೊಂದು ಇರುತ್ತದೆ. ಒಳ್ಳೆಯವನಲ್ಲಿಯೂ ಕೆಡುಕಿನ ಬಿಂಬ ಆಗೀಗ ಸುಳಿದುಹೋಗುತ್ತದೆ. ಈ ಎರಡರ ಮೇಲಾಟವೇ ಅವನ ಪಾತ್ರಗಳನ್ನು ಇಂದಿಗೂ ಜೀವಂತವಾಗಿಟ್ಟಿವೆ ಎನ್ನಬಹುದು. ಷೇಕ್ಸ್ ಪಿಯರ್ ತನ್ನ ಅಗಾಧವಾದ ಸಾಹಿತ್ಯ ರಚನೆಯಲ್ಲಿ ಮನುಷ್ಯನ ಎಲ್ಲ ಬಗೆಯ ಭಾವನೆಗಳನ್ನೂ ಬೇರೆ ಬೇರೆ ಕಡೆಗಳಲ್ಲಿ ಸಶಕ್ತವಾಗಿ ವ್ಯಕ್ತಪಡಿಸಿದ್ದಾನೆ. ಹಾಗಾಗಿಯೇ ಆ ಕೃತಿಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ.
ಷೇಕ್ಸ್‌ಪಿಯರ್ ತನ್ನ ಕೊನೆಯ ದಿನಗಳನ್ನೂ ಆ್ಯವನ್ ನದಿ ದಂಡೆಯಲ್ಲಿನ ಸ್ಟ್ರಾನ್‌ಫೋರ್ಡ್‌ನಲ್ಲಿಯೇ ಕಳೆದ. 1616 ಏಪ್ರಿಲ್ 23ರಲ್ಲಿ ಕೊನೆಯುಸಿರೆಳೆದ.
No comments:
Post a Comment