SAMPADAKIYA-15-10-18.jpg
ದುರುದ್ದೇಶಪೂರ್ವಕವಾಗಿ ಕಾನೂನೊಂದನ್ನು ಹೇಗೆ ತಪ್ಪಾಗಿ ಅನ್ವಯಿಸಲಾಗುತ್ತದೆ
ಎಂಬುದಕ್ಕೆ ಇತ್ತೀಚಿನ ಉದಾಹರಣೆ ತಮಿಳು ಪತ್ರಿಕೆ ‘ನಕ್ಕೀರನ್’ ಸಂಪಾದಕ ಮತ್ತು ಅದರ 35 ಮಂದಿ ಉದ್ಯೋಗಿಗಳ ಮೇಲೆ ದಾಖಲಾಗಿರುವ ಪ್ರಕರಣ. ರಾಷ್ಟ್ರಪತಿ ಅಥವಾ ರಾಜ್ಯಪಾಲರ ಸಂಚಾರ ಅಥವಾ ಅವರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರಷ್ಟೇ ಅನ್ವಯಿಸಬಹುದಾದ ಐಪಿಸಿಯ ಸೆಕ್ಷನ್ 124 ಅನ್ನು ಅನ್ವಯಿಸಿ ‘ನಕ್ಕೀರನ್’ ಪತ್ರಕರ್ತರ ಮೇಲೆ ಕೇಸು ದಾಖಲಿಸಲಾಗಿದೆ. ಸಂಪಾದಕ ಗೋಪಾಲ್ ಅವರನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಲಯ ಅವರ ಬಂಧನವನ್ನು ಮಾನ್ಯ ಮಾಡಲಿಲ್ಲ. ಅಷ್ಟೇ ಅಲ್ಲದೆ, ಅವರನ್ನು ಪೊಲೀಸರ ವಶಕ್ಕೆ ಕೊಡಲೂ ಒಪ್ಪಲಿಲ್ಲ. ‘ನಕ್ಕೀರನ್’ ಪತ್ರಕರ್ತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ‘ಐಪಿಸಿ ಸೆಕ್ಷನ್ 124 ಅನ್ನು ಯಾವುದಕ್ಕೆ ಅನ್ವಯಿಸಬಹುದು ಎಂದು ನಿಮಗೆ ತಿಳಿದಿದೆಯೇ’ ಎಂದು ಕಟುವಾಗಿ ಪ್ರಶ್ನಿಸಿದೆ. ಮಾಧ್ಯಮಗಳ ಬಾಯಿ ಮುಚ್ಚಿಸುವುದಕ್ಕೆ ನಿರಂತರವಾಗಿ ನಡೆಯುತ್ತಿರುವ ಪ್ರಯತ್ನಗಳ ಒಂದು ಉದಾಹರಣೆ ‘ನಕ್ಕೀರನ್’ ಪ್ರಕರಣ. ಪ್ರಕರಣದ ಒಟ್ಟು ನಾಟಕೀಯ ಸ್ವರೂಪ ಇದನ್ನು ಒಂದು ದೊಡ್ಡ ಸುದ್ದಿಯನ್ನಾಗಿ ಮಾಡಿತು. ಸಾಮಾನ್ಯವಾಗಿ ಎಲ್ಲಾ ಮಾಧ್ಯಮ ಸಂಸ್ಥೆಗಳೂ ಎದುರಿಸುವ ಸಮಸ್ಯೆಯೊಂದಿದೆ. ತಮ್ಮ ಬಗ್ಗೆ ಯಾವುದೇ ಸುದ್ದಿ ಅಥವಾ ವರದಿಯನ್ನು ಪ್ರಕಟಿಸುವುದಕ್ಕೆ ತಡೆ ನೀಡಬೇಕು ಎಂದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ವಿನಂತಿಸಿದರೆ ಅದಕ್ಕೆ ಪೂರಕವಾಗಿ ಅಧೀನ ನ್ಯಾಯಾಲಯಗಳು ಆದೇಶ ನೀಡುತ್ತವೆ. ಈ ಆದೇಶಗಳು ಹೆಚ್ಚು ಕಡಿಮೆ ದೇಶದಲ್ಲಿ ಇರುವ ಎಲ್ಲಾ ಮಾಧ್ಯಮಗಳಿಗೂ ಅನ್ವಯಿಸುವಂತೆ ಇರುತ್ತವೆ. ನಿತ್ಯ ಬರುವ ಇಂಥ ಹಲವು ಆದೇಶಗಳ ವಿರುದ್ಧ ಹೋರಾಡುವುದಕ್ಕೆ ಮಾಧ್ಯಮ ಸಂಸ್ಥೆಗಳು ದೊಡ್ಡದೊಂದು ವಕೀಲರ ಪಡೆಯನ್ನೇ ಇಟ್ಟುಕೊಳ್ಳಬೇಕಾಗುತ್ತದೆ. ಈ ಆದೇಶಗಳು ರಾಜ್ಯದ ಅಥವಾ ದೇಶದ ಯಾವುದೇ ಮೂಲೆಯಲ್ಲಿರುವ ನ್ಯಾಯಾಲಯದಿಂದಲೂ ಬರಬ
ಹುದು. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್
ಶಾ ಪಡೆದ ಇಂಥದ್ದೊಂದು ಆದೇಶ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ಹಲವಾರು ವರ್ಷಗಳಿಂದ ಮಾಧ್ಯಮ ಸಂಸ್ಥೆಗಳು ಪದೇ ಪದೇ ಸರ್ಕಾರದ ಗಮನ ಸೆಳೆದಿದ್ದರೂ ಕಾನೂನಿನಲ್ಲಿ ಆಗಬೇಕಿರುವ ಸುಧಾರಣೆಗೆ ಯಾವ ಸರ್ಕಾರವೂ ಮುಂದಾಗಿಲ್ಲ.
‘ನಕ್ಕೀರನ್’ ಪ್ರಕರಣದಲ್ಲಿಯೂ ಸಂಭವಿಸಿ
ರುವುದು ಇದುವೇ. ರಾಜಭವನದಿಂದ ಒಂದು ದೂರು ಬಂತು ಎಂದಾಕ್ಷಣ ಪೊಲೀಸರು ಒಂದು ಕೇಸು ದಾಖಲಿಸಿದರು. ಕೇಸು ದಾಖಲಿಸಲು ಪೊಲೀಸರು ಬಳಸಿದ ಐಪಿಸಿ ಸೆಕ್ಷನ್ ಅವರ ದುರುದ್ದೇಶವನ್ನೂ ಸ್ಪಷ್ಟವಾಗಿ ಹೇಳುತ್ತಿದೆ. ಶಾಸನಸಭೆಯ ಅಥವಾ ಶಾಸಕರ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಮಾಧ್ಯಮಗಳಿಗೆ ಕಾಟ ಕೊಡುವ ಪ್ರವೃತ್ತಿ ದೇಶದ ಎಲ್ಲೆಡೆ ಇದೆ. ಈಗ ಅದೇ ಪಟ್ಟಿಗೆ ರಾಜಭವನವೂ ಸೇರಿದೆ. ಮಾಧ್ಯಮಗಳು ಪ್ರಜಾ
ಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ಮಾತು ಆಡಳಿತಗಾರರ ಮಟ್ಟಿಗೆ ಭಾಷಣದ ಹೇಳಿಕೆ ಮಾತ್ರ. ಇದನ್ನು ಹೇಳುತ್ತಲೇ ಅವರು ಮಾಧ್ಯಮಗಳ ಮೇಲೆ ಒಂದು ಸುಪ್ತ ನಿಯಂತ್ರಣವಿಟ್ಟುಕೊಳ್ಳುವ ತಂತ್ರ ರೂಪಿಸಲು ಹೊಂಚು ಹಾಕುತ್ತಿರುತ್ತಾರೆ. ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮದೇ ಆದ ಕೆಲವು ದೌರ್ಬಲ್ಯಗಳಿಂದ ಪ್ರಭುತ್ವದ ತಾಳಕ್ಕೆ ಕುಣಿದ ಉದಾಹರಣೆಗಳೂ ಇವೆ. ಇವೆಲ್ಲವೂ ಒಟ್ಟಾರೆಯಾಗಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿ
ಸುತ್ತವೆ ಎಂಬುದು ವಾಸ್ತವ. ‘ನಕ್ಕೀರನ್’ ಪ್ರಕರಣದ ಮೂಲಕ ಕಾನೂನಿನ ಅಪಬಳಕೆಯ ಉದಾಹರಣೆಯೊಂದು ನಮ್ಮ ಮುಂದೆ ದೊಡ್ಡ ಪ್ರಮಾಣದಲ್ಲಿ ಅನಾವರಣಗೊಂಡಿದೆ.
ಇದು ಮಾಧ್ಯಮಗಳಿಗೆ ಒಂದು ಎಚ್ಚರಿಕೆಯ ಗಂಟೆಯೂ ಆಗಬೇಕಿದೆ. ಏಕೆಂದರೆ ಕಾನೂನು
ಗಳ ಅಪಬಳಕೆಯ ಮೂಲಕ ಜನಸಾಮಾನ್ಯರನ್ನು ಕಾಡುವ ಅನೇಕ ವಿಚಾರಗಳ ಬಗ್ಗೆ
ಮಾಧ್ಯಮ ಲೋಕವೂ ತನ್ನದೇ ಆದ ಮಿತಿಗಳಿಂದ ಗಮನಹರಿಸುವುದಿಲ್ಲ. ಈ ವಿಚಾರಗ
ಳನ್ನು ಮುಖ್ಯವಾಹಿನಿಯ ಚರ್ಚೆಗೆ ಸಮರ್ಥವಾಗಿ ತಂದಿದ್ದರೆ ಬಹುಶಃ ‘ನಕ್ಕೀರನ್’ ಪ್ರಕರಣ ಸಂಭವಿಸುತ್ತಿರಲಿಲ್ಲ. ಕಾನೂನನ್ನು ತಪ್ಪಾಗಿ ಅನ್ವಯಿಸುವುದು ಮತ್ತು ಅದರ ಅಪಬಳಕೆಯ ವಿಷಯದಲ್ಲಿ ಆಡಳಿತಾರೂಢರನ್ನು ಹಿಮ್ಮೆಟ್ಟಿಸುವುದಕ್ಕೆ ಇರುವುದು ಒಂದೇ ಮಾರ್ಗ. ಈ ಕುರಿತಂತೆ ಜನಜಾಗೃತಿ ಮೂಡಿಸುವುದು. ಕಾನೂನು ಹೋರಾಟವನ್ನು ತೀವ್ರಗೊಳಿಸುವುದು.
ಇದರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಬೇಕಾಗಿರುವುದು ಸ್ವತಂತ್ರ ಮಾಧ್ಯಮದ ಅಸ್ತಿತ್ವಕ್ಕೆ ಎಷ್ಟು ಅನಿವಾರ್ಯವೋ ಪ್ರಜಾಪ್ರಭುತ್ವದ ಆರೋಗ್ಯಕ್ಕೂ ಅಷ್ಟೇ ಅಗತ್ಯ.
No comments:
Post a Comment