ಬದುಕು ಎಸೆಯುವ ಸವಾಲುಗಳಿಗೆ ಸಿದ್ಧರಿರೋಣ.!
ಬದುಕಿನ ಕುರಿತಾಗಿ ಒಂದು ಪ್ರಸಿದ್ಧ ಹೇಳಿಕೆಯಿದೆ: ನಾವು ಏನೇನೋ ಮಾಡಬೇಕು ಎಂದು ತರಾತುರಿಯಲ್ಲಿ ಯೋಜಿಸುತ್ತಿರುವಾಗ ಬೇರೇನೋ ಘಟಿಸುವುದೇ ಜೀವನ. ‘ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ’ ಎಂಬುದಕ್ಕೆ ಸಂವಾದಿಯಾಗಿರುವ ಈ ಹೇಳಿಕೆ, ಬದುಕಿನ ಊಹಾತೀತ ಗುಣ, ಅದು ಒಡ್ಡುವ ಸವಾಲುಗಳಿಗೆ ನಮ್ಮ ತಯಾರಿ ಏನೇನೂ ಇಲ್ಲದೇ ಇರುವುದರ ಕುರಿತು ಮಾರ್ಮಿಕವಾಗಿ ಮುಟ್ಟಿದರೆ ಮುರಿಯುವಷ್ಟು ಜೀವನವನ್ನು ನಾಜೂಕುಗೊಳಿಸಿದೆ, ಈ ಗುಣಲಕ್ಷಣ. ಅಂತೆಯೇ, ಅದನ್ನು ಚೆಲುವಾಗಿಸಿದೆ ಕೂಡ.
ಸ್ನೇಹಿತರೇ, 20-25 ವರ್ಷಗಳ ಹಿಂದೆ ನಾನು, ಯಾರಾದರೂ ಆಸೆ ಪಡುವಂಥಾ ಜೀವನವನ್ನು ನಡೆಸುತ್ತಿದ್ದೆ. ಸುಪ್ರಸಿದ್ಧ ಅಭಿನೇತ್ರಿಯಾಗಬೇಕು, ನನ್ನ ಕಲೆಯ ಉತ್ತುಂಗ ತಲುಪಬೇಕು ಎಂದ ನನ್ನ ಬಯಕೆಗಳು ಈಡೇರಿದ್ದವು. ದೂರದ ನೇಪಾಳದಿಂದ ಬಂದಿದ್ದರೂ ಭಾರತೀಯ ಹಿಂದಿ ಚಿತ್ರರಂಗದಲ್ಲಿ ಒಬ್ಬ ಯಶಸ್ವಿ ಹಾಗೂ ಜನಪ್ರಿಯ ಕಲಾವಿದೆ ಎನಿಸಿಕೊಂಡಿದ್ದೆ. ಐದು ಭಾಷೆಗಳ ಸುಮಾರು 80 ಚಲನಚಿತ್ರಗಳಲ್ಲಿ ನಟಿಸಿದ್ದೆ. ಹಲವು ಅವಾರ್ಡ್‌ಗಳೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸ್ವಲ್ಪ ಗುಣಾತ್ಮಕ ಮತ್ತು ಬೇಕಾದಷ್ಟು ಪ್ರಮಾಣಾತ್ಮಕ ಸಿದ್ಧಿ ನನಗೆ ಸಿಕ್ಕಿತ್ತು. ನಾನು ಕನಸು ಕಂಡ, ಅಥವಾ ಅದಕ್ಕಿಂತಲೂ ಸ್ವಲ್ಪ ಹೆಚ್ಚಾಗಿಯೇ ನನ್ನೆಲ್ಲ ಆಕಾಂಕ್ಷೆಗಳು ಈಡೇರಿದ್ದವು. ಒಟ್ಟಾರೆ ನಾನು ಅಂದುಕೊಂಡ ಹಾಗೆ ನನ್ನ ಬದುಕು ಸಾಗಿತ್ತು.
ಆದರೆ ಈ ಉತ್ತುಂಗದಲ್ಲಿ ಸುಖದ ಸವಾರಿಯಲ್ಲಿದ್ದ ನನಗೆ ಗೊತ್ತಿರದಿದ್ದ ಸಂಗತಿಯೆಂದರೆ, ನನ್ನ ಬದುಕಿನಲ್ಲಿ ಬಿರುಗಾಳಿಯೊಂದು ಬೀಸಲಿತ್ತು. ಜೀವನ ಅದನ್ನು ಮರೆಯಲ್ಲಿ ಹೊಂಚಿತ್ತು. ಅದೆಲ್ಲಾ ಸಾಕಷ್ಟು ಸೂಕ್ಷ್ಮವಾಗಿಯೇ ಆರಂಭವಾಯಿತು. ಒಂದು ಕೆಟ್ಟ ಅಭಿನಯಿಸಿದೆ. ಅದಕ್ಕೆ ಕಟು ವಿಮರ್ಶೆಗಳು ಬಂದವು. ಆಮೇಲೆ ಇನ್ನಷ್ಟು ಕೆಟ್ಟ ಚಿತ್ರಗಳನ್ನು ಸೈನ್ ಮಾಡಿದೆ. ಮತ್ತಷ್ಟು ಟೀಕೆ ಎದುರಾಯಿತು. ಆದರೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಕೆಲ ಪ್ರತಿಭಾನ್ವಿತ ನಿರ್ದೇಶಕರು ಇನ್ನೂ ನನ್ನನ್ನು ತಮ್ಮ ಚಿತ್ರಗಳಲ್ಲಿ ಹಾಕಿಕೊಳ್ಳಲು ಬಯಸುತ್ತಾರೆ. ಅಂದರೆ ನನ್ನ ಒಳ್ಳೆಯ ದಿನಗಳಿಗೆ ನಾನು ಯಾವತ್ತಿದ್ದರೂ ಮರಳುವವಳೇ ಎಂದು ನಂಬಿದೆ. ಆದರೆ ಹಾಗಾಗಲಿಲ್ಲ.
ಈ ಮಧ್ಯೆ ಅನಾರೋಗ್ಯಕರ ಅಭ್ಯಾಸಗಳು ಶುರುವಾಗಿದ್ದವು. ಒಂದಾದ ಮೇಲೊಂದರಂತೆ ನನಗೆ ಹೊಂದಿಕೆಯಾಗದ ಸಂಬಂಧಗಳಲ್ಲಿ ಸಿಲುಕಿದೆ. ಒಟ್ಟಾರೆ ಅಯೋಮಯವಾಗಿತ್ತು. ಅಧ್ವಾನವಾಗಿತ್ತು. ಆದರೂ ಹಾಗೇನೂ ಆಗಿಲ್ಲ ಎಂದು ಮನದಲ್ಲಿಯೇ ನಿರಾಕರಿಸುತ್ತ ಒಂದು ಭ್ರಮೆಯಲ್ಲಿದ್ದೆ. ಆದರೆ ಯಾವಾಗ ನನ್ನ ಮದುವೆ ಮುರಿಯಿತೋ, ಇನ್ನು ತಡೆದುಕೊಳ್ಳಲಾರೆ ಎಂಬಂತೆ ನಾನು ಸಂಪೂರ್ಣ ಕುಸಿದೆ. ಹಿಂದೆಯೇ ಒಂದು ಅತಿ ಆಕ್ರಮಣಕಾರಿ ವಿಧದ ಕ್ಯಾನ್ಸರ್‌ಗೆ ನಾನು ಬಲಿಯಾಗಿದ್ದೇನೆ ಎಂಬುದೂ ವೈದ್ಯಕೀಯ ಪರೀಕ್ಷೆಗಳಿಂದ ಬಯಲಾಯಿತು.
ನನ್ನ ಕಾಯಿಲೆ ಎಷ್ಟೊಂದು ಉಗ್ರವಾಗಿತ್ತು ಎಂಬುದರ ಮನವರಿಕೆ ಮಾಡಿಸಲು ನಿಮಗೆ ಒಂದು ಮೇಲ್ಮೈ ನೋಟವಾದರೂ ನೀಡಬೇಕು. ಎಲ್ಲ ಕ್ಯಾನ್ಸರ್ ರೋಗಿಗಳು ಕೀಮೋಥೆರಪಿಗೆ ತಲೆಗೂದಲು, ಕಣ್ರೆಪ್ಪೆ ಕಳೆದುಕೊಳ್ಳುತ್ತಾರೆ; ಸಪ್ಪೆ ಮುಖ ದುಃಖ ಹೊರಹಾಕುತ್ತಿರುತ್ತದೆ…ಇದು ನೀವೆಲ್ಲ ಸಾಮಾನ್ಯವಾಗಿ ನೋಡಿರುವ ಒಂದು ನೋಟ. ತೆರೆಯ ಮೇಲೆ ಝಗಮಗಿಸುವ ‘ದೀವಾ’ ಆಗಿರುವ ನಾವು ತಾರೆಯರೂ ಇದೇ ಅವಸ್ಥೆ ತಲುಪುತ್ತೇವೆ. ಆದರೆ ‘ಕೀಮೋಥೆರಪಿಯಿಂದ ಹೃದಯಕ್ಕೆ ಶಾಶ್ವತ ತೊಂದರೆ ಉಂಟಾಗಬಹುದು, ಕಿವಿ ಕೇಳದೇ ಹೋಗಬಹುದು, ಚಿಕಿತ್ಸೆಯ ನಂತರ ನನ್ನ ಕೈಗಳು ಸದಾಕಾಲ ನಡುಗುತ್ತಿರುವ ಸಾಧ್ಯತೆ ಇದೆ’ ಎಂಬ ಷರತ್ತುಗಳನ್ನೆಲ್ಲಾ ಅಂಗೀಕರಿಸಿ ಸಹಿ ಹಾಕುವಾಗ ನಾನು ಭೀತಿಯಿಂದ ವಿಹ್ವಲಗೊಂಡೆ. ಇನ್ನು ಇಷ್ಟೇ ನನ್ನ ಕೊನೆಯ ದಿನಗಳು ಎದುರಾಗಿವೆ ಎಂದು ಬಲವಾಗಿ ಅನ್ನಿಸಿತು. ಯಾವುದೋ ತಳ ಕಾಣದ ಪ್ರಪಾತದಲ್ಲಿ ಬೀಳುತ್ತೇನೆ ಎಂಬ ಭಾವನೆ.
ಆಗ ನನಗೆ ಎದುರಾದದ್ದು ಈ ಪ್ರಶ್ನೆಗಳು, ‘ಆಯಿತು, ಇದು ನನ್ನ ಕೊನೆಯೇ ಎಂದಾದರೆ, ಈ ಹಿಂದಿನ ನನ್ನ ಜೀವನವನ್ನು ಸಾರ್ಥಕವಾಗಿ ಕಳೆದೆನೇ, ಆ ಕುರಿತು ನನಗೆ ಹೆಮ್ಮೆ ಇದೆಯೇ?’ ಇಲ್ಲ ಎನ್ನುವ ಉತ್ತರ ಸಿಕ್ಕಿದ್ದು ಅತ್ಯಂತ ಸಹಜವಾಗಿತ್ತು. ಏಕೆಂದರೆ ಆ ಎಲ್ಲ ವರ್ಷಗಳು ನಾನು ನನ್ನ ಆರೋಗ್ಯ ನೋಡಿಕೊಳ್ಳದೇ, ಗೌರವಿಸದೇ, ಪ್ರೀತಿಪಾತ್ರರಿಗೆ ಗಮನ ಕೊಡದೇ ಕಳೆದಿದ್ದೆ! ಮಿತ್ರರೇ, ಈಗ್ಗೆ ಸುಮಾರು ನಾಲ್ಕೂವರೆ ವರ್ಷಗಳಾದವು, ದೈವಕೃಪೆಯಿಂದ ಕ್ಯಾನ್ಸರ್‌ನಿಂದ ನನಗೆ ಮುಕ್ತಿ ಸಿಕ್ಕಿದೆ. ಆದರೆ ಆ ಪ್ರಕ್ಷುಬ್ಧ ಸಮಯದಲ್ಲಿ ನನಗೆ ನಾನೇ ಕೊಟ್ಟುಕೊಂಡ ವಾಗ್ದಾನಗಳನ್ನು ನೆನಪಿಸಿಕೊಳ್ಳದ ಒಂದೇ ಒಂದು ದಿನವೂ ಈಗಿಲ್ಲ.
ಆರೋಗ್ಯದ ಮಹತ್ವವನ್ನು ಅತಿ ದಾರುಣ ಬೆಲೆ ತೆತ್ತು ಕಂಡುಕೊಂಡೆನಾದ್ದರಿಂದ ಉತ್ತಮ ಆಹಾರ ಸೇವನೆ ಮತ್ತಿತರ ಅಂಶಗಳ ಕುರಿತು ಸದಾಕಾಲ ಜಾಗೃತಳಾಗಿರುತ್ತೇನೆ. ಹುಡುಕಿ ಅದರ ಬಗ್ಗೆ ಓದಿ ತಿಳಿದುಕೊಳ್ಳುತ್ತೇನೆ. ಚಾಚೂ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತೇನೆ. ಕುಟುಂಬದೊಂದಿಗೆ ನನ್ನ ಬಾಂಧವ್ಯ ಈಗ ಹೆಚ್ಚು ಪ್ರೀತಿ, ಗೌರವ, ನಂಬಿಕೆಗಳಿಂದ ಬಲಗೊಂಡಿದೆ. ಅನಾರೋಗ್ಯದಲ್ಲಿ ನನ್ನನ್ನು ಆರಂಭದಿಂದ ಕೊನೆಯವರೆಗೂ ನೋಡಿಕೊಂಡಿದ್ದೇ ಅವರು. ದೊಡ್ಡ ಸ್ನೇಹಿತರ ಬಳಗ ಕ್ಷೀಣಿಸಿದ್ದರೂ ಆಯ್ದ ಕೆಲವೇ ಗೆಳೆಯ-ಗೆಳತಿಯರೊಂದಿಗೆ ಹಿಂದೆಂದಿಗಿಂತ ಆಳವಾದ, ಅರ್ಥಪೂರ್ಣ ಸಂಬಂಧ ಇರಿಸಿಕೊಂಡಿದ್ದೇನೆ.
ನನ್ನೊಳಗಿರುವ ಅಭಿನಯ ಕಲೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಎಚ್ಚರಿಕೆಯಿಂದ ಸಿನಿಮಾಗಳನ್ನು ಆರಿಸಿಕೊಳ್ಳುತ್ತಿದ್ದೇನೆ; ಹಿಂದಿನಂತೆ ಯರ್ರಾಬಿರ್ರಿಯಾಗಿ ಅಲ್ಲ! ಎಲ್ಲಕಿಂತ ಹೆಚ್ಚಾಗಿ ಕಾಯಿಲೆ ವೇಳೆ ನನಗೆ, ರೋಗಿಗಳನ್ನು ನೋಡಿಕೊಳ್ಳುವವರು ಹಾಗೂ ಸೇವೆಯ ಮಹತ್ವ ಅರಿವಾಯಿತು. ಈ ಕುರಿತಂತೆ ನಿಮ್ಮೊಂದಿಗೆ ಒಂದು ದೃಷ್ಟಾಂತ ಹಂಚಿಕೊಳ್ಳಬೇಕು. ಆಸ್ಪತ್ರೆಯಲ್ಲಿದ್ದ ನನ್ನನ್ನು ಕಾಣಲು ಹೆಚ್ಚು ಜನರೇನೂ ಬರುತ್ತಿರಲಿಲ್ಲವಾದರೂ, ಒಬ್ಬ ಮಹಿಳೆ, ನಿಯಮಿತವಾಗಿ, ಭಾನುವಾರಗಳಂದು ಬಂದು, ಗಂಟೆಗಟ್ಟಲೆ ನನ್ನೊಡನೆ ಕಳೆಯುತ್ತಿದ್ದರು. ನ್ಯೂಯಾರ್ಕ್‌ನಲ್ಲಿರುವ ‘ಕಾರ್ನೆಲ್ ಹಾಸ್ಪಿಟಲ್’ನಲ್ಲಿ ಪೆಥಾಲಜಿಸ್‌ಟ್ ಆಗಿ ಕಾರ್ಯ ನಿರ್ವಹಿಸುವ ಅವರ ಹೆಸರು ಡಾ. ನವನೀತ್ ನರುಲ. ಹಾಗೆ ನನ್ನನ್ನು ಕಾಣಲು ಬಂದ ಅವರು ಆಸ್ಪತ್ರೆಯ ಅಷ್ಟೇನೂ ಆರಾಮದಾಯಕವಲ್ಲದ ಕುರ್ಚಿಯಲ್ಲಿ ದಿನವಿಡೀ ಮುದುರಿ ಕುಳಿತಿರುವುದು ನನ್ನನ್ನು ಸೋಜಿಗಗೊಳಿಸುತ್ತಿತ್ತು.
ಈ ಹಿಂದೆ ನನ್ನ ಗೆಳತಿಯಾಗಿದ್ದವರಲ್ಲ; ನನ್ನ ಅಭಿಮಾನಿ ಅಂತೂ ಖಂಡಿತಾ ಅಲ್ಲ ಎಂದು ನನಗೆ ಗೊತ್ತಿದೆ…ಹೀಗೆ ಮಾಡಲು ಇರುವ ಕಾರಣವಾದರೂ ಏನು?’ ಎಂದೊಮ್ಮೆ ಅವರನ್ನು ಕೇಳಿಯೇಬಿಟ್ಟೆ. ‘ಮನೀಷಾಜೀ, ಮುಂದೊಂದು ದಿನ ನೀವು ಇದೇ ಕೆಲಸವನ್ನು ಬೇರೆ ಯಾರಿಗೋ ಮಾಡಬಹುದು ಎಂಬ ಭರವಸೆ ಇಟ್ಟುಕೊಂಡು’ ಎಂದು ಆಕೆ ಉತ್ತರಿಸಿದರು. ಎಷ್ಟು ಸರಳ ಹಾಗೂ ಅದೇ ವೇಳೆ ಆಳವಾದ ಉತ್ತರ!
ಅಂದೇ ನಾನು ಮನದಲ್ಲಿಯೇ ಒಂದು ಸಂಕಲ್ಪ ಮಾಡಿಕೊಂಡೆ: ‘ಒಂದು ವೇಳೆ ಜೀವಿಸುವ ಎರಡನೇ ಅವಕಾಶ ಸಿಕ್ಕರೆ ಯಾವುದಾದರೂ ರೀತಿಯಲ್ಲಿ ಯಾರಿಗಾದರೂ ಸಹಾಯವಾಗುವ ಕೆಲಸ ಮಾಡಬೇಕು’. ನನ್ನ ನಾಡಾದ ನೇಪಾಳದಲ್ಲಿ ಭೂಕಂಪನ ಸಂಭವಿಸಿದಾಗ ಕೂಡಲೇ ನಾನಲ್ಲಿಗೆ ತೆರಳಿದೆ. ಯುಎನ್‌ಎಫ್‌ಪಿಎ ನೆರವಿನೊಂದಿಗೆ ನಾವು ಅಲ್ಲಿ ಒಂದು ಅಭಿಯಾನ ಮಾಡಿದೆವು. ಸಂತ್ರಸ್ತರಿಗೆ ಸಹಾಯಮಾಡುವ ಭರದಲ್ಲಿ ಅವರ ಘನತೆಗೆ ಕುಂದುಂಟಾಗುವುದು ಬೇಡ ಎಂದು, ‘ಡಿಗ್ನಿಟಿ ಫಸ್‌ಟ್’ ಎಂದು ಜನರಲ್ಲಿ ಮನವಿ ಮಾಡಿದೆವು. ಹಾಗೆಯೇ ದೂರಾತಿದೂರ ಪ್ರದೇಶಗಳಿಗೆ ಹೋಗಿ ಅಲ್ಲಿನ ಜನರಿಗೆ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮಹತ್ವ ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವೂ ನನಗಿದೆ.
ಒಬ್ಬ ‘ಕ್ಯಾನ್ಸರ್ ಸರ್ವೈವರ್’ ನಾನು ಮಾಡಬಹುದಾದ ಪರಿಣಾಮಕಾರಿ ಪ್ರಚಾರವೆಂದರೆ, ‘ಕ್ಯಾನ್ಸರ್ ಉಂಟಾದರೆ ಅದನ್ನು ಸಾವಿನ ಸಂಜ್ಞೆ ಎಂದು ಭಾವಿಸಬೇಕಿಲ್ಲ ಎಂದು ಧೈರ್ಯ ತುಂಬುವುದು. ಕ್ಯಾನ್ಸರ್ ಪೀಡಿತರಾಗಿ, ಚಿಕಿತ್ಸೆ ಪಡೆದುಕೊಂಡು ಬಂದಮೇಲೂ ಒಂದು ಬದುಕು ನಮ್ಮನ್ನು ಕಾಯುತ್ತಿರುತ್ತದೆ ಎಂಬುದಕ್ಕೆ ಉತ್ತಮ ನಿದರ್ಶನ ನಾನೇ ಎಂದು ಆ ವ್ಯಾಧಿಯಿಂದ ಭಯಗ್ರಸ್ತರಾದವರನ್ನು ನಂಬಿಸುವುದು. ನನ್ನ ಅನೇಕ ವೈದ್ಯ ಸ್ನೇಹಿತೆಯರ ಆಶಯದ ಮೇರೆಗೆ ನಾನು ಈ ಮಾಡಿದ್ದೇನೆ. ಒಟ್ಟಾರೆ ನನ್ನ ಬದುಕಿನ ವ್ಯಾಪ್ತಿಯಲ್ಲಿ ಹಣ, ಹೆಸರು, ಗ್ಲಾಮರ್, ಹತಾಶೆಯ ಪಾತಾಳಕ್ಕಿಳಿದದ್ದು, ತುಂಬ ನೋವು ಕೊಡುವ ಕ್ಯಾನ್ಸರ್ ಚಿಕಿತ್ಸೆಯಾದ ‘ಕೀಮೋಥೆರಪಿ’ ಎಲ್ಲ ಬಂದುಹೋಗಿವೆ.
ಸಾವಿಗೆ ಮುಖಾಮುಖಿಯಾಗುವುದೆಂದರೆ ಕೆಲ ಘಟನೆಗಳನ್ನು ನೆನಪಿಸಿಕೊಳ್ಳುವುದಲ್ಲ, ಅದರಾಚೆ ಹೋಗಿ ಏನಾದರೂ ತಥ್ಯವಿದೆಯೇ ಎಂದು ಕಂಡುಕೊಳ್ಳುವುದು ಎಂದು ನನಗೀಗ ಅರಿವಾಗಿದೆ. ಕೆಲ ಸರಳ ಮೂಲಭೂತ ಸೂತ್ರಗಳನ್ನು ಅನುಸರಿಸಿ ನಾನು, ಈ ಹಿಂದೆ ನನ್ನ ಜೀವನದಲ್ಲಿ ಘಟಿಸಿದ ಮತ್ತು ಈಗ ಜರುಗುತ್ತಿರುವ ಸಂಗತಿಗಳನ್ನುವಿಶ್ಲೇಷಿಸಿಕೊಳ್ಳುತ್ತೇನೆ. ಅವುಗಳಲ್ಲಿ ಮೊಟ್ಟ ‘ಬದುಕು ನಮಗೆ ನೀಡಲಾದ ಒಂದು ಉಡುಗೊರೆ’ ಎಂದು ಭಾವಿಸಿಕೊಳ್ಳುವುದು ಮತ್ತು ಅದರೊಂದಿಗೆ ನೀಡಲಾದ ಎಲ್ಲವನ್ನೂ ಜೋಪಾನ ಮಾಡುವುದು. ಅದು ನಮ್ಮ ಶರೀರವಾಗಿರಬಹುದು, ನಮ್ಮನ್ನು ಸಂಧಿಸಿದ ಇತರ ಮಾನವ ಜೀವಿಗಳಿರಬಹುದು. ಎರಡನೆಯ ಸೂತ್ರ ಆತ್ಮಾವಲೋಕನ ಮಾಡಿಕೊಳ್ಳುತ್ತ ನಮ್ಮ ಜೀವನದಲ್ಲಿ ಬರುವ ಸತ್ಯ-ಸುಳ್ಳುಗಳನ್ನು ವಿಂಗಡಿಸಿಕೊಳ್ಳುವುದು. ನಮ್ಮ ಬದುಕು ಕೇವಲ ನಮಗೆ ಮಾತ್ರ ಸೇರಿದ್ದಾದ್ದರಿಂದ ಇತರರ ಬದುಕಿನಂತೆ ಅದನ್ನು ಮಾರ್ಪಡಿಸಿಕೊಳ್ಳುವ ಪ್ರಯತ್ನ ಮಾಡದಿರುವುದು. ಮತ್ತು ಕಟ್ಟಕಡೆಯದಾಗಿ ಜೀವನ ನಮಗೆ ಯಾವಾಗ ಬೇಕಾದರೂ ಎಸೆಯುವ ಒಳಗೊಳಗೇ ಸನ್ನದ್ಧರಾಗಿರುವುದು.
ಸ್ನೇಹಿತರೆ, ಅದಕ್ಕೆ ಬೇಕಾದ ಧಾರಣಾ ಶಕ್ತಿ, ಧೈರ್ಯ ಮತ್ತು ನಂಬಿಕೆ ನಮ್ಮೆಲ್ಲರಲ್ಲಿಯೂ ಧಾರಾಳವಾಗಿ ಇದೆ ಎಂಬುದು ನನ್ನ ನಂಬಿಕೆ.
No comments:
Post a Comment