ಜಾಗತಿಕ ಹವಾಮಾನ ವೈಪರೀತ್ಯಕ್ಕೆ ತಡೆ ಹಾಕದಿದ್ದಲ್ಲಿ 2030ರ ವೇಳೆಗೆ ಭೂಮಿಯೇ ಸರ್ವನಾಶವಾಗಬಹುದೆಂಬ ವಿಶ್ವಸಂಸ್ಥೆಯ ಗಂಭೀರ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಸರ ರಕ್ಷಣೆಯತ್ತ ಚಿತ್ತ ಹರಿಸಿದೆ. ತಾಪಮಾನ ಸವಾಲು, ಅದರಿಂದ ಕೃಷಿ ವಲಯದ ಮೇಲಾಗುವ ಪರಿಣಾಮ ಎದುರಿಸುವುದಕ್ಕಾಗಿ ಸೂಕ್ತ ತೀರ್ಮಾನ ಕೈಗೊಳ್ಳಲು ಇದೇ ಮೊದಲ ಬಾರಿ ಕೃಷಿ ಕ್ಯಾಬಿನೆಟ್ ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದೆ.
ಹವಾಮಾನ ವೈಪರೀತ್ಯದಿಂದಾಗುವ ಪರಿಣಾಮಗಳ ಕುರಿತಂತೆ ತಜ್ಞರ ಸಮಿತಿ 2011ರಲ್ಲೇ ಸರ್ಕಾರಕ್ಕೆ ಕ್ರಿಯಾ ಯೋಜನೆಯ ವರದಿ ನೀಡಿದೆ. ಕೃಷಿ, ಅರಣ್ಯ, ಜಲ ಸಂಪನ್ಮೂಲ, ಇಂಧನ ಹೀಗೆ ವಿವಿಧ ಕ್ಷೇತ್ರಗಳ ಮೇಲೆ ಆಗುವ ಪರಿಣಾಮ ಹಾಗೂ ಕೈಗೊಳ್ಳಬೇಕಾದ ಕ್ರಮಗಳೇನೆಂಬ ಶಿಫಾರಸುಗಳನ್ನು ವರದಿ ಒಳಗೊಂಡಿದೆ.
ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಮಂದಗತಿಯಲ್ಲಿ ಸಾಗಿರುವ ಅನುಷ್ಠಾನ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಿ 2030ರ ವೇಳೆಗೆ ಎದುರಾಗಲಿರುವ ಅಪಾಯವನ್ನು ಸಾಧ್ಯವಾದಷ್ಟು ತಡೆಯುವ ಬಗ್ಗೆ ರ್ಚಚಿಸಲಾಗುತ್ತದೆ.
ಕ್ರಿಯಾ ಯೋಜನೆ ಅಂಶವೇನು?
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನೀಡಿರುವ ಕ್ರಿಯಾ ಯೋಜನೆ ಪ್ರಕಾರ 1950 ರಿಂದ 2000 ತನಕ ರಾಜ್ಯದಲ್ಲಿ 0.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗಿದೆ. 2001ರ ಪರಿಸ್ಥಿತಿ ಗಮನಿಸಿದಾಗ ಇದು ಮುಂದಿನ ಕೆಲವು ವರ್ಷಗಳಲ್ಲಿ 3 ರಿಂದ 4 ಡಿಗ್ರಿ ಸೆಲ್ಸಿಯಸ್ ತನಕ ಹೆಚ್ಚಳವಾಗಬಹುದು ಎಂಬ ಆತಂಕ ಮೂಡಿದೆ.
ಜಾಗತಿಕ ಒಪ್ಪಂದದ ಪ್ರಕಾರ ಮುಂದಿನ ನೂರು ವರ್ಷಗಳ ಅವಧಿಯಲ್ಲಿ 1.5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಳವಾಗಬಾರದು. ರಾಜ್ಯದ ವಿವಿಧ ಭಾಗಗಳಲ್ಲಿ ಪರಿಸರ ಕಾಪಾಡುವುದು, ಕೃಷಿಯಲ್ಲಿ ನೀರಿನ ಮಿತ ಬಳಕೆ, ಬೋರ್ವೆಲ್ಗಳಿಗೆ ನಿಯಂತ್ರಣ, ಹಸಿರು ಇಂಧನ ಬಳಕೆಯ ಹೆಚ್ಚಳದ ಮೂಲಕ ಕಾರ್ಬನ್ ಕಡಿಮೆ ಮಾಡುವ ಬಗ್ಗೆ ವಿವರಿಸಲಾಗಿದೆ.
ಏನಿದು ಕೃಷಿ ಕ್ಯಾಬಿನೆಟ್?
ಕೃಷಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಗಮನಿಸಿ, ಅದಕ್ಕೆ ಪೂರಕವಾಗಿ ಕೆಲವು ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಚಿವರನ್ನು ಒಳಗೊಂಡ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಇದೇ ಕೃಷಿ ಕ್ಯಾಬಿನೆಟ್. ಹವಾಮಾನ ವೈಪರೀತ್ಯ ತಡೆಯಬೇಕಾದರೆ ಇಲಾಖೆಗಳ ನಡುವೆ ಸಮನ್ವಯ ಮುಖ್ಯ. ಈಗ ಸಮನ್ವಯತೆ ಕೊರತೆ ಇದೆ. ಆದ್ದರಿಂದಲೇ ಕೃಷಿ ಕ್ಯಾಬಿನೆಟ್ ರಚಿಸಲಾಗುತ್ತಿದೆ. ಅದಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶೀಲನೆ ಮಾಡಲಾಗುತ್ತದೆ. ಕೃಷಿ ಕ್ಯಾಬಿನೆಟ್ ರಚನೆ ಮಾಡುವ ಕಡತ ಸಚಿವ ಸಂಪುಟದಲ್ಲಿ ಮಂಡನೆಯಾಗಿ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಆದೇಶ ಹೊರಬೀಳಲಿದೆ.
ದಂಡಕ್ಕೆ ಶಿಫಾರಸು
ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಗಂಭೀರವಾಗಿ ಪರಿಗಣಿಸಿರುವ ಪರಿಸರ ಇಲಾಖೆ ವಾಹನಗಳ ಮಾಲಿನ್ಯ ತಪಾಸಣೆಯನ್ನು ಕಡ್ಡಾಯ ಮಾಡುವುದರ ಜತೆಗೆ ದಂಡದ ಮೊತ್ತವನ್ನು ಶೇ. 100 ಹೆಚ್ಚಿಸುವುದು ಹಾಗೂ ವಾಹನಗಳ ಸಂಖ್ಯೆ ಕಡಿಮೆ ಮಾಡುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲು ಸಜ್ಜಾಗಿದೆ.
ಆಹಾರಕ್ಕೆ ಆತಂಕ
ಜಾಗತಿಕ ತಾಪಮಾನ ಹೆಚ್ಚಳ ಅನೇಕ ರೀತಿಯ ಪರಿಣಾಮ ಬೀರಲಿದೆ. ರಾಜ್ಯದಲ್ಲಿ 2030ರ ವೇಳೆಗೆ ಶೇ. 38 ಅರಣ್ಯ ಪ್ರದೇಶದ ಮೇಲೆ ಪರಿಣಾಮವಾದರೆ, ಆಹಾರ ಧಾನ್ಯದ ಉತ್ಪಾದನೆ ಶೇ. 45ರ ತನಕ ನಷ್ಟವಾಗಬಹುದೆಂಬ ಅಂದಾಜಿದೆ. ಪ್ರವಾಹ ಹಾಗೂ ಬರದ ಆತಂಕ ಇಮ್ಮಡಿಗೊಂಡಿದೆ.
ಶಿಫಾರಸುಗಳೇನು?
# ಮಣ್ಣು ಆರೋಗ್ಯ ಕಾಪಾಡುವುದು
# ನೀರಿನ ಮಿತ ಬಳಕೆ
# ಹೆಚ್ಚು ನೀರು ಬಳಸುವ ಕಬ್ಬು ಮತ್ತು ಭತ್ತ ನಿಯಂತ್ರಣ
# ಬೋರ್ವೆಲ್ ನೀರು ಬಳಸಿ ವಾಣಿಜ್ಯ ಬೆಳೆ ಬೆಳೆಯದಂತೆ ನಿರ್ಬಂಧ
# ಸಿರಿಧಾನ್ಯಗಳ ಬೆಳೆಯುವುದು ಹೆಚ್ಚಿಸುವುದು
# ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಬೇಕು
# ಕಬ್ಬು ಹಾಗೂ ಇತರೆ ಬೆಳೆಗಳಿಗೆ ಬೆಂಕಿ ಹಾಕುವುದನ್ನು ತಡೆಯುವುದು
# ಸಗಣಿಯಿಂದ ಮಿಥೇನ್ ಉತ್ಪಾದನೆ ಜಾಸ್ತಿಯಿದ್ದು ಅದರ ಸಂಸ್ಕರಣೆ
# ತೋಟಗಾರಿಕೆ ಬೆಳೆಗಳಿಗೂ ನೀರು ಬಳಕೆ ಹೆಚ್ಚಾಗದಂತೆ ನೋಡಿಕೊಳ್ಳುವುದು
# ವಾಹನಗಳ ಸಂಖ್ಯೆ ಕಡಿಮೆ ಮಾಡಬೇಕು,
# 10 ವರ್ಷ ಮೀರಿದ ಡೀಸೆಲ್ ವಾಹನನಿಯಂತ್ರಣ
# ಅರಣ್ಯೀಕರಣ ಹೆಚ್ಚಾಗಬೇಕು
# ಹಸಿರು ಇಂಧನ ಪ್ರೋತ್ಸಾಹಿಸಲು ಸೋಲಾರ್, ಪವನ ವಿದ್ಯುತ್ಗೆ ಹೆಚ್ಚಿನ ಒತ್ತು
No comments:
Post a Comment