ನಿರಂತರ ಗಗನಮುಖಿಯಾಗುತ್ತಿರುವ ತೈಲಬೆಲೆ ಜನಸಾಮಾನ್ಯರನ್ನು ಹೈರಾಣಾಗಿಸಿದ್ದರೆ, ಗಾಯದ ಮೇಲೆ ಬರೆ ಎಳೆಯುವಂತೆ ರಾಜ್ಯ ಸರ್ಕಾರ 1,400 ಕಿ.ಮೀ. ಉದ್ದದ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಮುಂದಾಗಿದೆ. ಕಾರ್, ಜೀಪ್, ವ್ಯಾನ್ ಸೇರಿ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿ.ಮೀ.ಗೆ 58 ಪೈಸೆ, ಭಾರಿ ವಾಹನಗಳಿಗೆ 86 ಪೈಸೆ, ಬಸ್ ಮತ್ತು ಟ್ರಕ್ಗೆ 1.73 ರೂ. ಟೋಲ್ ವಿಧಿಸಲು ಸರ್ಕಾರ ಮುಂದಾಗಿದೆ.
ಈವರೆಗೆ ರಾಷ್ಟ್ರೀಯ ಹೆದ್ದಾರಿಗಳಿಗಷ್ಟೇ ಟೋಲ್ ಸೀಮಿತವಾಗಿತ್ತು ಎಂಬುದು ಗಮನಾರ್ಹ.
ಚುನಾವಣೆ ಮುನ್ನ ಮತದಾರರಿಗೆ ರಂಗುರಂಗಿನ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಮೇಲೆ ಆ ಭರವಸೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ, ನೀರು, ರಸ್ತೆ, ಆರೋಗ್ಯಗಳಂಥ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯ ಮತ್ತು ಜವಾಬ್ದಾರಿ. ಇವುಗಳಿಂದ ನುಣುಚಿಕೊಳ್ಳುವುದೆಂದರೆ ಜನರಿಗೆ ಮಾಡುವ ದ್ರೋಹವೇ ಸರಿ. ಎಲ್ಲ ಸೌಲಭ್ಯಗಳಿಗೂ ಜನರೇ ಹಣ ಅಥವಾ ಹೆಚ್ಚಿನ ತೆರಿಗೆ ಪಾವತಿಸಬೇಕು ಎಂದಾದರೆ ಸರ್ಕಾರದ ಉತ್ತರದಾಯಿತ್ವವಾದರೂ ಏನು? ಜನರು ವಾಹನ ಖರೀದಿ ಸಂದರ್ಭದಲ್ಲಿ ರಸ್ತೆ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ರಸ್ತೆಗಳ ನಿರ್ವಹಣೆಗೆ ಈ ಮೊತ್ತವನ್ನು ಸಮರ್ಪಕವಾಗಿ ವಿನಿಯೋಗಿಸುವ ಬದ್ಧತೆಯನ್ನು ಸಂಬಂಧಪಟ್ಟವರು ಪ್ರದರ್ಶಿಸಬೇಕು.
ಸರ್ಕಾರ ತನ್ನ ಖಜಾನೆಯನ್ನು ಭದ್ರಪಡಿಸಿಕೊಳ್ಳಲು ಇಲ್ಲವೆ ತನಗಾಗುವ ನಷ್ಟವನ್ನು ತಪ್ಪಿಸಿಕೊಳ್ಳಲು ಆ ಹೊರೆಯನ್ನು ಜನಸಾಮಾನ್ಯರ ಮೇಲೆ ವರ್ಗಾಯಿಸುವುದು ಯಾವ ನ್ಯಾಯ? ಸರ್ಕಾರ ತನ್ನ ಖಜಾನೆ ಸ್ಥಿತಿಯನ್ನು ಪರಾಮಶಿಸುವ ಹಾಗೆ ಜನರ ಆರ್ಥಿಕ ಸ್ಥಿತಿಯನ್ನೂ ಅವಲೋಕಿಸಿ ನಿರ್ಧಾರಗಳನ್ನು ತಳೆಯಬೇಕು. ರಾಜ್ಯ ಹೆದ್ದಾರಿಗಳಿಗೂ ಟೋಲ್ ನೀಡಿ ಪ್ರಯಾಣ ಮಾಡುವಷ್ಟು ನಮ್ಮ ಜನರು ಆರ್ಥಿಕವಾಗಿ ಸಬಲರಲ್ಲ ಎಂಬ ಸರಳಸತ್ಯ ಆಳುವವರಿಗೆ ಗೊತ್ತಿಲ್ಲವೇ? ‘ಜನರ ಹಿತವನ್ನು ರಕ್ಷಿಸುತ್ತೇವೆ’ ಎಂದು ಮಾತು-ಮಾತಿಗೂ ಹೇಳುವ ಸರ್ಕಾರ ಇಂಥ ಮಹತ್ವದ ನಿರ್ಧಾರಕ್ಕೆ ಬರುವ ಮುನ್ನ ಜನರ ಅಭಿಪ್ರಾಯವನ್ನೂ ಪಡೆಯುವ ಕನಿಷ್ಠ ಕಾಳಜಿಯನ್ನು ಪ್ರದರ್ಶಿಸಬೇಕಾದುದು ಅಪೇಕ್ಷಣೀಯ. ಸರ್ಕಾರದ ಉದ್ದೇಶ ಏನೇ ಇದ್ದರೂ ಸಂಕಷ್ಟ ಅನುಭವಿಸುವವರು ಶ್ರೀಸಾಮಾನ್ಯರೇ.
ವಿಶ್ವಬ್ಯಾಂಕ್ ಮತ್ತು ಏಷಿಯನ್ ಅಭಿವೃದ್ಧಿ ಬ್ಯಾಂಕ್ನಿಂದ ಸಾಲದ ನೆರವು ಪಡೆದು, 3800 ಕಿ.ಮೀ. ರಸ್ತೆ ನಿರ್ವಿುಸಲಾಗಿದ್ದು, ಟೋಲ್ ಅನಿವಾರ್ಯ ಎಂಬ ಸಮರ್ಥನೆ ಕೇಳಿಬಂದಿದೆ. ಅಲ್ಲದೆ, ಈ ನಿರ್ಧಾರ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಆಗಿದ್ದು, ಈಗ ಜಾರಿಗೆ ಬರುತ್ತಿದೆ ಎಂದೂ ಸಮಜಾಯಿಶಿ ನೀಡಲಾಗಿದೆ. ಇವೆಲ್ಲ ಸರ್ಕಾರಕ್ಕೆ ಸಮರ್ಥನೆಗಳಾಗಬಹುದಷ್ಟೆ. ಜನಸಾಮಾನ್ಯರು ಈಗಾಗಲೇ ಹಲವು ಬಗೆಯ ತೆರಿಗೆ, ಶುಲ್ಕಗಳನ್ನು ಭರಿಸುತ್ತಿದ್ದಾರೆ. ಬೆಲೆ ಏರಿಕೆಯೂ ಬದುಕಿನ ಬಂಡಿಯನ್ನು ಮತ್ತಷ್ಟು ದುಸ್ತರವಾಗಿಸಿದೆ. ಹೀಗಿರುವಾಗ, ಜನರ ಹೊರೆ ಇಳಿಸುವ ಬದಲು ಸರ್ಕಾರವೇ ಹೊಸ ಹೊರೆಗಳನ್ನು ಹೇರಿದರೆ ಏನು ಮಾಡಬೇಕು? ಹೀಗಾಗಿಯೇ ಟೋಲ್ ವಿಧಿಸುವ ನಿರ್ಧಾರಕ್ಕೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಈ (ಟೋಲ್) ನಿರ್ಧಾರದಿಂದ ಹಿಂದೆ ಸರಿದು, ಜನರ ಹಿತಕಾಯಲು ಮುಂದಾಗಬೇಕು.
No comments:
Post a Comment