ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ದಯಾಮರಣ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, October 10, 2018

ದಯಾಮರಣ

  Pundalik       Wednesday, October 10, 2018

ಸಾವಿನ ಸಹಜತೆ, ದಯಾಮರಣ ಮತ್ತು ವ್ಯಕ್ತಿ ಘನತೆ

ಡಾ. ಸುಶಿ ಕಾಡನಕುಪ್ಪೆ
ನಮ್ಮ ಪ್ರತಿ ಉಸಿರಿನಲ್ಲೂ ಸಾವಿನ ಸಾಧ್ಯತೆ ಅಡಗಿರುತ್ತದೆ. ಪ್ರತಿ ಉಸಿರಿನಲ್ಲೂ ನಾವು ಒಮ್ಮೆ ಸತ್ತು ಬದುಕಿರುತ್ತೇವೆ. ಈ ‘ಅನಿಶ್ಚಿತತೆಯೇ ನಿಶ್ಚಿತ’ ಎನ್ನುವ ಸತ್ಯ ನಮ್ಮೆದುರಿಗಿದ್ದರೂ ಶಾಶ್ವತತೆಯ ಅಹಮ್ಮಿನಲ್ಲಿ ನಮ್ಮ ಜೀವನ ಸಾಗುತ್ತದೆ. ಸಾವು ಎಷ್ಟು ಸಹಜವೆಂದರೆ ಅದರ ಸಹಜತೆಯೇ ಮರೆಮಾಚುವಷ್ಟು. ಬಹುಶಃ ಸಾವಿನ ಈ ನಿಶ್ಚಿತತೆ ಅದರ ಇರುವಿಕೆಯನ್ನು ತೋರ್ಪಡಿಸದೆ ನಮಗೆ ಬದುಕಲು ಪ್ರೋತ್ಸಾಹಿಸುತ್ತದೆ. ಆದ್ದರಿಂದಲೇ ಸಾವು ಸುಳಿದಾಡುವ ಅರಿವು ನಮಗಾದಾಗ ಗಾಬರಿಯಾಗುತ್ತದೆ. ಸುಳಿದಾಡುವ ಪ್ರಕ್ರಿಯೆ ನಿತ್ಯ ಇದ್ದರೂ ಒಳಹರಿವಿನಂತಿರುವ ಅದರ ಇರುವು ನಮ್ಮ ಅರಿವಿಗೆ ಬರುವುದಿಲ್ಲವಾದ್ದರಿಂದ ಬದುಕು ಸಹಜವೆಂಬಂತೆ, ಸಾವು ಅಸಹಜವೆಂಬಂತೆ ಭ್ರಮಿಸುತ್ತೇವೆ.
ಪ್ರತಿ ವ್ಯಕ್ತಿಯ ಪ್ರಜ್ಞೆಗೆ ನಿಲುಕುವ ‘ವಾಸ್ತವ’ ಕೇವಲ ಆ ವ್ಯಕ್ತಿಯ ಪ್ರಜ್ಞೆಗೆ ಸತ್ಯವಾಗಿರುತ್ತದೆ. ಇನ್ನೊಬ್ಬ ವ್ಯಕ್ತಿಯ ಅಥವಾ ಅದೇ ವ್ಯಕ್ತಿಯ ಮತ್ತೊಂದು ಪರಿಸ್ಥಿತಿಯ ಪ್ರಜ್ಞಾವಸ್ಥೆಯಲ್ಲಿ ಈ ‘ವಾಸ್ತವ’ ಬದಲಾಗಬಹುದು ಅಥವಾ ಬೇರೆ ಅರ್ಥ ಪಡೆಯಬಹುದು. ಸಾವಿಗೆ ನಮ್ಮ ಈ ‘ವಾಸ್ತವ’ಗಳ ಸತ್ಯಾಸತ್ಯತೆಯ ಅಡಿಪಾಯವನ್ನು ಅಲುಗಾಡಿಸುವ ಸಾಮರ್ಥ್ಯವಿದೆ. ಈ ‘ವಾಸ್ತವ’ದ ಹಲವು ಬಗೆಗಳು ಸಾವು- ಬದುಕಿನ ಸಹಜತೆಯನ್ನು ನಮ್ಮ ಮುಂದಿರಿಸುತ್ತವೆ. ಸಾವಿಗೆ ಹಲವು ಕಾರಣಗಳಿರಬಹುದು. ಆಕಸ್ಮಿಕ, ಅಪಘಾತ, ರೋಗರುಜಿನ, ಆತ್ಮಹತ್ಯೆ ಅಥವಾ ಮುಪ್ಪಿನ ಕೊನೆಯಾಗಿ ಸಾವು ಬರಬಹುದು. ಈ ರೂಢಿಗತ ವಿವರಣೆಗಳು ‘ಸಹಜ ಸಾವು-ಅಸಹಜ ಸಾವು’ ಎಂಬ ಪರಿಕಲ್ಪನೆಯನ್ನು ಸಾವಿಗೆ ತಂದುಕೊಟ್ಟಿವೆ.
ಆತ್ಮಹತ್ಯೆಯು ಸಾವಿನ ವಿಂಗಡಣೆಯಲ್ಲಿ ಪ್ರತ್ಯೇಕವಾಗಿ ಕಾಣುತ್ತದೆ. ಬಹುಪಾಲು ಪ್ರಕರಣಗಳಲ್ಲಿ ಆತ್ಮಹತ್ಯೆ ಸಹಜ- ಆರೋಗ್ಯಕರ ದೈಹಿಕ ಕಾರ್ಯವನ್ನು ಅಂತ್ಯಗೊಳಿಸುವುದರಿಂದ ಈ ರೀತಿಯ ಆತ್ಮಹತ್ಯೆಯಿಂದಾದ ಸಾವನ್ನು ‘ಅಸಹಜ’ ಎಂದು ಪರಿಗಣಿಸಬಹುದು. ಆದರೆ ಒಬ್ಬ ವ್ಯಕ್ತಿ ತನ್ನ ಪ್ರಾಣವನ್ನು ಮತ್ತು ಅದರ ಮೂಲಕ ತನ್ನ ಬದುಕನ್ನು ಕೊನೆಗೊಳಿಸುವ ನಿರ್ಧಾರವನ್ನು ಅನಾರೋಗ್ಯದ ವಿಶಿಷ್ಟ ಸಂದರ್ಭಗಳಲ್ಲಿ ತೆಗೆದುಕೊಂಡರೆ ಆ ಸಾವಿನ ಪ್ರಕ್ರಿಯೆಯನ್ನು ‘ಅಸಹಜ’ ಎಂದು ಪರಿಗಣಿಸಲಾಗದು.
ಸಾವು- ಬದುಕಿಗಿರುವ ವಿಶಿಷ್ಟ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಟ್ಟರೆ ಸಾವು ಕೂಡ ಸಹಜತೆಯ ಇನ್ನೊಂದು ಚಲನೆ ಎಂದೇ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸಾವಿನ ಎಲ್ಲಾ ಸಂದರ್ಭಗಳಲ್ಲೂ ದೇಹದ ಅಂತ್ಯ, ಆ ಮೂಲಕ ಆ ವ್ಯಕ್ತಿಯ ವಿಶಿಷ್ಟ ಬದುಕಿನ ಛಾಪುಗಳೆಲ್ಲದರ ಅಂತ್ಯವೂ ಸಹಜವೇ ಆಗಿದೆ. ಸಾವು ಜೀವಕ್ಕೆ ಅಂತ್ಯ ನೀಡಿದರೂ ಸಾವಿನ ಪ್ರಕ್ರಿಯೆ ಜೀವಿಗಳಲ್ಲಿ ಚಲನೆಗೆ ಕಾರಣವಾಗಿರುತ್ತದೆ. ಪ್ರತ್ಯೇಕ ಜೀವಿಗೆ ಸಾವು ಸ್ಥಗಿತತೆ ತಂದುಕೊಟ್ಟರೂ ಆ ಜೀವಿಯ ಸಮುದಾಯದ ಚಲನೆಗೆ ಸಾವು ಪ್ರೇರೇಪಿಸುತ್ತದೆ. ಈ ಚಲನೆಯಲ್ಲಿ ಜೀವಸಂಕುಲ ಅಭಿವೃದ್ಧಿಗೊಳ್ಳುತ್ತದೆ.
ಈ ಚಲನೆಯಲ್ಲಿ ಗಮನಿಸಬಹುದಾದ ಅಂಶವೆಂದರೆ ಸಾವು ಮತ್ತು ಸಾವಿನ ಹಾದಿ. ಸಾವು ಎಂಬ ನಿರ್ಜೀವ ಸ್ಥಿತಿಯನ್ನು ಸಾಯುವ ವ್ಯಕ್ತಿ ಅನುಭವಿಸಲು ಸಾಧ್ಯವಾಗುವುದೇ ಇಲ್ಲ. ಸಾವನ್ನು ಕಂಡ ವ್ಯಕ್ತಿ ತನ್ನ ಎಲ್ಲಾ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಸಾಯುವ ಪ್ರಕ್ರಿಯೆಯನ್ನಷ್ಟೇ ಅನುಭವಿಸಬಲ್ಲಳು. ಸಾಯುವ ಪ್ರಕ್ರಿಯೆ ಅಥವಾ ಹಾದಿ ಒಬ್ಬರಿಂದ ಒಬ್ಬರಿಗೆ ವಿಶಿಷ್ಟವೂ ಪ್ರತ್ಯೇಕವೂ ಆಗಿರುತ್ತದೆ. ಕೆಲವರಿಗೆ ಸಾವು ನೋವಿಲ್ಲದೆ, ಯಾವುದೇ ಸಮಸ್ಯೆಗಳಿಲ್ಲದೇ ಬರಬಹುದು. ಮತ್ತಿತರರಿಗೆ ಸಾವು ಹಲವು ಸಮಸ್ಯೆ ಮತ್ತು ಅಪಾರ ನೋವು-ಸಂಕಷ್ಟಗಳನ್ನು ಒಗ್ಗೂಡಿಸಿಕೊಂಡು ಹಿಂಸೆಯ ಅನುಭವವನ್ನು ನೀಡಬಹುದು. ಈ ನೋವಿನ ಹಾದಿಯಲ್ಲಿ ಅಪಾರ ಹಿಂಸೆ ಅನುಭವಿಸುವವರು ಬಹುಪಾಲು ಅನಾರೋಗ್ಯದ ಸಮಸ್ಯೆಗಳಿಂದ ಜೀವನ್ಮರಣದ ಹೋರಾಟವನ್ನು ಮಾಡುವವರೇ ಆಗಿರುತ್ತಾರೆ.
ಗುಣವಾಗದ ಕಾಯಿಲೆಯ ಮಿತಿಯಿಲ್ಲದ ನೋವು ಮತ್ತು ಚಿಕಿತ್ಸೆಯ ಹಿಂಸೆ ಆ ವ್ಯಕ್ತಿಯನ್ನು ಮತ್ತೊಬ್ಬರ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಸ್ಥಿತಿಗೆ ಕರೆದೊಯ್ಯುತ್ತದೆ. ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ, ಸಂಗಾತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿರುವ ವೃದ್ಧರಲ್ಲಿ ಮುಪ್ಪಿನ ಹೀನಾಯ ಪರಿಸ್ಥಿತಿ ಘನತೆಯ ಬದುಕಿಗೆ ಅಡ್ಡಿಯುಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯು ತನ್ನ ಕೊನೆಯುಸಿರೆಳೆಯುವ ಹಕ್ಕನ್ನು ಬಯಸುವುದು ಸಹಜವೇ ಆಗಿದೆ. ಈ ನಿಟ್ಟಿನಲ್ಲಿ ಭಾರತದ ಸುಪ್ರೀಂ ಕೋರ್ಟ್‌ 2018ರ ಮಾರ್ಚ್ ತಿಂಗಳಿನಲ್ಲಿ ಇಚ್ಛಾಮರಣದ/ ದಯಾಮರಣದ ಕುರಿತು ಕೊಟ್ಟ ತೀರ್ಪು ಭಾರತದ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಗಮನಾರ್ಹ ಹೆಜ್ಜೆ. ‘ಜನರಿಗೆ ಗೌರವಪೂರ್ವಕವಾಗಿ ಸಾವನ್ನಪ್ಪುವ ಹಕ್ಕಿದೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ದಯಾಮರಣಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನೆದರ್ ಲ್ಯಾಂಡ್ಸ್ 2002ರಲ್ಲಿ ವಿಶ್ವದಲ್ಲೇ ಮೊದಲ ಬಾರಿ ವ್ಯಕ್ತಿಗೆ ವಿಶಿಷ್ಟ ಸಂದರ್ಭಗಳಲ್ಲಿ ಸ್ವಇಚ್ಛೆಯ ಸಾವಿನ ಅವಕಾಶವನ್ನು ನೀಡಿತು (ಆಕ್ಟಿವ್ ಯ್ಯೂತನೇಸಿಯಾ ಮತ್ತು ಅಸಿಸ್ಟೆಡ್ ಸ್ಯೂಯಿಸೈಡ್). ಅದೇ ವರ್ಷ ಬೆಲ್ಜಿಯಂ ದೇಶ ದಯಾಮರಣದ ಕಾನೂನನ್ನು ಮಾನ್ಯ ಮಾಡಿತು. (ಬೆಲ್ಜಿಯಂನಲ್ಲಿ ಈ ಕಾನೂನು ಮಕ್ಕಳ ಅನಾರೋಗ್ಯದ ಪರಿಸ್ಥಿತಿಗಳಿಗೂ ಅನ್ವಯಿಸುತ್ತದೆ). ಯುರೋಪಿನ ದೇಶಗಳಲ್ಲಿ ಈ ಅವಕಾಶಗಳು ಹೆಚ್ಚಿದ್ದರೂ ಅಮೆರಿಕದ ಐದು ರಾಜ್ಯಗಳಲ್ಲಿ ಮಾತ್ರ ದಯಾಮರಣಕ್ಕೆ ಅವಕಾಶವಿದೆ.
ಭಾರತದಲ್ಲಿ ದಯಾಮರಣದ ಅಹವಾಲನ್ನು ಮೊದಲ ಬಾರಿಗೆ ಅರುಣಾ ಶಾನ್‍ಭಾಗ್ ಪ್ರಕರಣದಲ್ಲಿ ಪರಿಗಣಿಸಲಾಯಿತು. ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ 1973ರಲ್ಲಿ ಅತ್ಯಾಚಾರಕ್ಕೆ ಈಡಾಗಿ ಶಾಶ್ವತ ಕೋಮಾ ಪರಿಸ್ಥಿತಿಗೆ ಜಾರಿದ ಅರುಣಾಳಿಗೆ ದಯಾಮರಣವನ್ನು ಕೋರಿ ಪಿಂಕಿ ವಿರಾನಿ ಎಂಬುವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆಕ್ಟಿವ್ ಯ್ಯೂತನೇಸಿಯಾ ಕಾನೂನು ನಮ್ಮಲ್ಲಿ ಇರದ ಕಾರಣ ಸುದೀರ್ಘ 42 ವರ್ಷಗಳ ಕಾಲ ಕೋಮಾ ಪರಿಸ್ಥಿತಿಯಲ್ಲಿದ್ದ ಅರುಣಾಳಿಗೆ ಘನತೆಯ ಸಾವಿನ ಅವಕಾಶ ಸಿಗಲೇ ಇಲ್ಲ. ಕಾನೂನಿನ ಅವಕಾಶಕ್ಕೆ ಕಾಯುತ್ತಲೇ ಆಕೆ 2015ರಲ್ಲಿ ಪ್ರಾಣ ಬಿಟ್ಟಳು.
ಅರುಣಾ ಶಾನ್‍ಭಾಗ್ ಪ್ರಕರಣದ ಕುರಿತು ಹೊರಬಂದ 2011ರ ಪ್ಯಾಸಿವ್ ಯ್ಯೂತನೇಸಿಯಾ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯ ಮೆದುಳು ಈಗಾಗಲೇ ನಿಷ್ಕ್ರಿಯವಾಗಿದ್ದರೆ ಉಸಿರಾಟದ ಆಸರೆ ನೀಡುವ ಯಂತ್ರದ ಸಹಾಯವನ್ನು ನಿಲ್ಲಿಸಬಹುದು; ವ್ಯಕ್ತಿಯ ದೇಹ ಸಂಪೂರ್ಣವಾಗಿ ನಿಷ್ಕ್ರಿಯ ಪರಿಸ್ಥಿತಿಯಲ್ಲಿದ್ದರೆ (ಪರ್ಮನೆಂಟ್ ವೆಜಿಟೇಟಿವ್ ಸ್ಟೇಟ್) ಆಹಾರ ನಳಿಗೆಯಿಂದ ಉಣ್ಣಿಸುವ ಆಹಾರವನ್ನು ಕ್ರಮೇಣವಾಗಿ ನಿಲ್ಲಿಸಬಹುದು ಮತ್ತು ಕೇವಲ ನೋವು ನಿವಾರಕ ಔಷಧಿಗಳನ್ನು ಕೊಡಬಹುದು. ಮತ್ತ್ಯಾವ ಸನ್ನಿವೇಶಗಳಲ್ಲೂ ಇದಕ್ಕೆ ಅವಕಾಶವಿರಲಿಲ್ಲ.
2018ರ ಭಾರತದ ದಯಾಮರಣದ ತೀರ್ಪು ‘ಪರೋಕ್ಷವಾಗಿ’ ಇಚ್ಛಾ ಮರಣಕ್ಕೆ ಅನುಮತಿ ನೀಡುತ್ತದೆ (ಪ್ಯಾಸಿವ್ ಯ್ಯೂತನೇಸಿಯಾ). ಅಂದರೆ ಯಾವುದೇ ವ್ಯಕ್ತಿ ತೀವ್ರತರ ಅನಾರೋಗ್ಯದ ಪರಿಸ್ಥಿತಿಯಲ್ಲಿ ಅಪಾರ ನೋವು-ಹಿಂಸೆಗಳಿಂದ ನರಳುತ್ತಿದ್ದರೂ, ಆ ವ್ಯಕ್ತಿಯ ಅನುಮತಿಯಿದ್ದರೂ ಜೀವವನ್ನು ವೈದ್ಯರು ನೇರವಾಗಿ ಕೊನೆಗೊಳಿಸುವಂತಿಲ್ಲ. ಆದರೆ ಸಾವಿನ ದವಡೆಯಲ್ಲಿರುವ ವ್ಯಕ್ತಿಯ ಆಯ್ಕೆಯನ್ನು ಗೌರವಿಸಲು ಆತನ ‘ಲಿವಿಂಗ್ ವಿಲ್’ಗೆ ಮನ್ನಣೆ ಕೊಟ್ಟು ‘ಸಾವಿಗೆ ಸಹಕರಿಸುವ’ ಅನುಮತಿ ಕೊಟ್ಟಿದೆ. ಹಾಗಾಗಿ ಆ ವ್ಯಕ್ತಿಯ ಆರೈಕೆ ಮಾಡುವ ವೈದ್ಯಕೀಯ ತಂಡ ಆಕೆಯ ರೋಗದ ಚಿಕಿತ್ಸೆಯನ್ನು ಮುಂದುವರಿಸದೆ ನಿಲ್ಲಿಸಬಹುದು ಮತ್ತು ಆದಷ್ಟು ನೋವು ರಹಿತ ಘನತೆಯ ಕೊನೆಯ ದಿನಗಳೊಂದಿಗೆ ಸಾವನ್ನು ಬರಮಾಡಿಕೊಳ್ಳಲು ಸಹಕರಿಸಬಹುದು. ಘನತೆಯಿಂದ ಕೊನೆಯುಸಿರೆಳೆವ ಅವಕಾಶವನ್ನು ಪರೋಕ್ಷವಾಗಿಯಾದರೂ ಈ ಕಾನೂನು ಅವಕಾಶ ಮಾಡಿಕೊಡುತ್ತದೆ.
ದಯಾಮರಣದ ಕಾನೂನಿಗೆ ಈಗಿರುವ ಆಕ್ಷೇಪಣೆಗಳು ಮುಖ್ಯವಾಗಿ ಕಾನೂನಿನ ದುರ್ಬಳಕೆ ಮತ್ತು ದಯಾಮರಣವನ್ನು ಅಸಹಜವೆಂದು ಪರಿಗಣಿಸುವ ಧಾರ್ಮಿಕ ಸಂಸ್ಥೆಗಳು. ಅರುಣಾಳ ರೀತಿ ಅಥವಾ ಆಕೆಗಿಂತ ಭೀಕರ ಪರಿಸ್ಥಿತಿಯಲ್ಲಿ ಅನಾರೋಗ್ಯದ ಅಪಾರ ನೋವು- ಹಿಂಸೆಯ ಜೀವನ ಸವೆಸುತ್ತಿರುವ ಹಲವು ವಿಶಿಷ್ಟ ಪ್ರಕರಣಗಳು ನಮ್ಮ ದೇಶದಲ್ಲಿ ಸಾಕಷ್ಟು ದಾಖಲಾಗಿವೆ. ಇಂಥ ಪ್ರಕರಣಗಳಲ್ಲಿ ನೇರವಾದ ದಯಾಮರಣದ ಅವಕಾಶ ನೀಡುವುದು ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಹೆಜ್ಜೆಯಾಗುತ್ತದೆ. ಅಲ್ಲದೆ ಸಾವಿನಲ್ಲೂ ಘನತೆಯನ್ನು ಕಾಪಾಡಿಕೊಳ್ಳುವ ಹಕ್ಕು ಸಾವಿನ ಸಹಜತೆಯ ಅರಿವನ್ನು ಮೂಡಿಸುತ್ತದೆ. ಇದು ನಮ್ಮ ಸಂವಿಧಾನದ 21ನೇ ವಿಧಿ ಎತ್ತಿಹಿಡಿಯುವ ‘ಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ’ ಹಕ್ಕನ್ನು ಅನುಮೋದಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ 2018ರ ಪ್ಯಾಸಿವ್ ಯ್ಯೂತನೇಸಿಯಾ ಕುರಿತ ತೀರ್ಪು ದಯಾಮರಣಕ್ಕೆ (ಆಕ್ಟಿವ್ ಯ್ಯೂತನೇಶಿಯಾ) ಸ್ವಾಗತಾರ್ಹ ಅಡಿಗಲ್ಲಾಗಬಹುದು.

logoblog

Thanks for reading ದಯಾಮರಣ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *