ಮಾಸ್ಕೋ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಬ್ಬರು ಗಗನ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ರಷ್ಯಾದ ಸೂಯೆಜ್ ರಾಕೆಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ತನ್ನ ನಿಗದಿತ ಪಥ ಬದಲಿಸಿದ ಕಾರಣ ಗಗನ ಯಾತ್ರಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಗುರುವಾರ ಕಜಕಿಸ್ತಾನದಲ್ಲಿರುವ ಉಡಾವಣಾ ಕೇಂದ್ರದಿಂದ ಸೂಯೆಜ್ ರಾಕೆಟ್ ನಭಕ್ಕೆ ಚಿಮ್ಮಿತ್ತು. ಸುಮಾರು 2 ನಿಮಿಷಗಳ ನಂತರ ರಾಕೆಟ್ ತನ್ನ ನಿಗದಿತ ಪಥ ಬಿಟ್ಟು ಬೇರೆ ಪಥದೆಡೆಗೆ ದಿಕ್ಕು ಬದಲಿಸಿತ್ತು. ತಕ್ಷಣ ಅಮೆರಿಕ ಮತ್ತು ರಷ್ಯಾದ ಗಗನಯಾತ್ರಿಗಳಿದ್ದ ಕ್ಯಾಪ್ಸೂಲ್ 31 ಮೈಲಿ ಎತ್ತರದಲ್ಲಿ ಎಜೆಕ್ಟ್ ಆಗಿದ್ದು, ಪ್ಯಾರಚ್ಯೂಟ್ ಸಹಾಯದಿಂದ ಕ್ಯಾಪ್ಯೂಲ್ ಸುರಕ್ಷಿತವಾಗಿ ಕೆಳಗೆ ಇಳಿದಿದೆ. ಅದರಲ್ಲಿದ್ದ ಅಮೆರಿಕದ ಗಗನಯಾತ್ರಿ ಟೈಲರ್ ನಿಕ್ ಹಾಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಿ ಓವಚಿನ್ ಅವರು ಸುರಕ್ಷಿತವಾಗಿದ್ದಾರೆ ಎಂದು ನಾಸಾ ತಿಳಿಸಿದೆ.
ನಾಸಾದ ಸ್ಪೇಸ್ ಶೆಟಲ್ಗೆ ನಿವೃತ್ತಿ ನೀಡಿದ ನಂತರ ಅಂತರಿಕ್ಷಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ರಷ್ಯಾದ ನೆರವು ಪಡೆಯಲಾಗುತ್ತಿದೆ. ಪ್ರಸ್ತುತ ಅಂತರಿಕ್ಷ ನಿಲ್ದಾಣದಲ್ಲಿ ಮೂವರು ಗಗನ ಯಾತ್ರಿಗಳಿದ್ದು, ಅವರು ಡಿಸೆಂಬರ್ನಲ್ಲಿ ಭೂಮಿಗೆ ಮರಳಿದ ನಂತರ ಅವರ ಸ್ಥಾನಕ್ಕೆ ಮೂವರು ಗಗನಯಾತ್ರಿಕರನ್ನು ಕಳುಹಿಸಲು ಯೋಜಿಸಲಾಗಿತ್ತು. ಆದರೆ ಸೂಯೆಜ್ ರಾಕೆಟ್ ತಾಂತ್ರಿಕ ತೊಂದರೆಯಿಂದ ಭವಿಷ್ಯದಲ್ಲಿ ಅಂತರಿಕ್ಷ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಪರ್ಯಾಯ ಮಾರ್ಗಗಳ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.
No comments:
Post a Comment