ಚಿನ್ನದ ಚಿಗುರು ಜೆರೆಮೈ
ಗಿರೀಶ ದೊಡ್ಡಮನಿ
ಇನ್ನು ಹನ್ನೆರಡು ದಿನ ಕಳೆದರೆ ಹದಿನಾರರ ಹರೆಯಕ್ಕೆ ಕಾಲಿಡಲಿದ್ದಾರೆ ಜೆರೆಮೈ ಲಾಲ್‌ರಿನುಂಗಾ. ಮುಖದ ಮೇಲೆ ಮೀಸೆ ಚಿಗುರುವ ಮುನ್ನವೇ ಒಲಿಂಪಿಕ್ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಸಾಧನೆ ಮಾಡಿರುವ ಹುಡುಗ.
ಎಸ್ಸೆಸ್ಸೆಲ್ಸಿ ಓದಿನ ಒತ್ತಡದಲ್ಲಿ ಮುಳುಗುವ ವಯಸ್ಸಿನಲ್ಲಿ ಜೆರೆಮೈ, ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕದ ಕಾಣಿಕೆ ನೀಡಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಮೂರನೇ ಯೂತ್ ಒಲಿಂಪಿಕ್ಸ್‌ನ ಬಾಲಕರ ವೇಟ್‌ಲಿಫ್ಟಿಂಗ್‌ನಲ್ಲಿ ಅವರು ಬಾಲಕರ 62 ಕೆ.ಜಿ. ವಿಭಾಗದಲ್ಲಿ ಒಟ್ಟು 274 ಕೆ.ಜಿ. (ಸ್ನ್ಯಾಚ್ 124 ಕೆ.ಜಿ+ಜರ್ಕ್ 150 ಕೆ.ಜಿ) ಭಾರ ಎತ್ತಿ, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 61 ಕೆ.ಜಿ. ದೇಹತೂಕ ಹೊಂದಿರುವ 5.7 ಅಡಿ ಎತ್ತರದ ಭಾರತದ ಕ್ರೀಡಾ ಕ್ಷೇತ್ರದ ಹೊಸ ಭರವಸೆಯಾಗಿ ಉದಯಿಸಿದ್ದಾರೆ.
ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್‌ನ ಜೆರೆಮೈಗೆ ಫುಟ್‌ಬಾಲ್ ಆಟಗಾರ ಅಥವಾ ಬಾಕ್ಸರ್ ಆಗುವ ಅವಕಾಶ ಇತ್ತು. ಆ ಎರಡೂ ಕ್ರೀಡೆಗಳಲ್ಲಿ ಉತ್ತಮವಾಗಿಯೇ ಅಭ್ಯಾಸ ಮಾಡಿಕೊಂಡಿದ್ದರು. ಅಪ್ಪ ಲಾಲ್‌ರಿನುಂಗಾ ಅವರು ನುರಿತ ಬಾಕ್ಸರ್. ಏಳು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದವರು. ಸರ್ಕಾರಿ ಇಲಾಖೆಯ ಉದ್ಯೋಗಿಯೂ ಹೌದು. ಆದರೆ ಕೆಲಸ ಸಿಕ್ಕ ಮೇಲೂ ಬಾಕ್ಸಿಂಗ್ ಕೈಗವಸುಗಳನ್ನು ಬಿಟ್ಟವರಲ್ಲ. ಒಂದು ದಿನವೂ ಅಭ್ಯಾಸ ತಪ್ಪಿಸಿದವರಲ್ಲ.
ತನ್ನ ಐದನೇ ವಯಸ್ಸಿನಿಂದಲೇ ಅಪ್ಪನೊಂದಿಗೆ ಬಾಕ್ಸಿಂಗ್ ರಿಂಗ್‌ಗೆ ತೆರಳುತ್ತಿದ್ದ ಜೆರೆಮೈ ವಿಪರೀತ ತುಂಟಾಟ ಮಾಡುತ್ತಿದ್ದ.
ಅದರಿಂದಾಗಿ ಜೆರೆಮೈನ ಪುಟ್ಟ ಕೈಗಳಿಗೆ ಗವಸುಗಳನ್ನು ತೊಡಿಸಿ ಬಾಕ್ಸಿಂಗ್ ಅಭ್ಯಾಸ ಮಾಡಲು ಹೇಳುತ್ತಿದ್ದರು ಲಾಲ್‌ರಿನುಂಗಾ. ಕ್ರಮೇಣ ಪಂಚ್‌ಗಳನ್ನು ನೀಡುವಲ್ಲಿ ಚುರು
ಕುತನ ಪ್ರದರ್ಶಿಸಿತೊಡಗಿದ ಜೆರೆಮೈಗೆ ಬಾಕ್ಸಿಂಗ್‌ನಲ್ಲಿ ಆಸಕ್ತಿ ಹೆಚ್ಚಾಯಿತು. ಜೊತೆಗೆ ಸ್ಥಳೀಯ ಕ್ರೀಡೆ ಫುಟ್‌ಬಾಲ್‌ನಲ್ಲಿಯೂ ಮಿಂಚಿನಂತೆ ಓಡಾಡುತ್ತಿದ್ದ ಈ ಹುಡುಗನಲ್ಲಿ ಉತ್ತಮ ಕ್ರೀಡಾಪಟುವಾಗುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸದ ನಡೆ ನುಡಿ ಗಮನ ಸೆಳೆದಿದ್ದವು.
ಆದರೆ ಹತ್ತನೇ ವಯಸ್ಸಿನಲ್ಲಿ ತನ್ನ ಕೆಲವು ಗೆಳೆಯರೊಂದಿಗೆ ವೇಟ್‌ಲಿಫ್ಟಿಂಗ್ ಮಾಡಲು ಆರಂಭಿಸಿದ್ದು ಸಾಧನೆಯ ಹಾದಿ
ಯನ್ನು ತೆರೆಯಿತು. ಸೇನೆಯ ಕೆಲವು ಕೋಚ್‌ಗಳು ಜೆರೆಮೈ ಆಸಕ್ತಿಯನ್ನು ಗುರುತಿಸಿದರು. ಪುಣೆಯ ಡಿಫೆನ್ಸ್ ಸ್ಪೋರ್ಟ್ಸ್ ಅಕಾಡೆಮಿಗೆ ಹೋಗುವ ಸಲಹೆ ನೀಡಿದರು. ತಂದೆಯೂ ಒಪ‍್ಪಿದ್ದ
ರಿಂದ ಹಾದಿ ಸುಗಮವಾಯಿತು. 2011ರಲ್ಲಿ ಪುಣೆಗೆ ಬಂದಿಳಿದ ಜೆರೆಮೈ ಜೀವನದ ದಿಕ್ಕು ಬದಲಾಯಿತು. 2016ರಲ್ಲಿ ಪೆನಾಂಗ್‌ನಲ್ಲಿ ನಡೆದಿದ್ದ ಐಡಬ್ಲ್ಯುಎಫ್ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಭುಜಬಲ ಪರಾಕ್ರಮ ತೋರಿಸಿದ ಜೆರೆಮೈ, ಅಲ್ಪ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡರು.
ಆದರೆ 2017ರಲ್ಲಿ ತಮ್ಮ ಬಾಹುಬಲವನ್ನು ಮತ್ತಷ್ಟು ಹುರಿಗೊಳಿಸಿಕೊಂಡು ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ
ನಡೆದ ಜೂನಿಯರ್ ಕಾಮನ್‌ವೆಲ್ತ್ ಮತ್ತು ಯೂತ್ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಚಿನ್ನದ ಬೇಟೆಯಾಡಿದರು. ಇದೇ ವರ್ಷ ಏಷ್ಯನ್ ಯೂತ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರಿಂದ ಯೂತ್ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಿತು. ಸಾಧನೆಯ ಹೊಳಪು ಮೂಡಿತು.
ಆತ್ಮವಿಶ್ವಾಸದ ಗಣಿ:
ವಯಸ್ಸು ಚಿಕ್ಕದಾದರೂ, ಅನುಭವ ಹೆಚ್ಚಿಲ್ಲದಿದ್ದರೂ ಜೆರೆಮೈಗೆ ಆತ್ಮವಿಶ್ವಾಸವೇ ಆಸ್ತಿ. ಫುಟ್‌ಬಾಲ್ ಆಡಿಕೊಂಡು ಬೆಳೆಯಲು ಹಲವರು ಸಲಹೆ ನೀಡಿದ್ದರು. ‘ಪುಟ್ಟ ವಯಸ್ಸಿನಲ್ಲಿ ಭಾರ ಎತ್ತುವುದು ಕಷ್ಟವಾಗುತ್ತದೆ, ಬೇಡ’ ಎಂದವರೂ ಇದ್ದರು. ಆದರೆ ಅವರೆಲ್ಲರ ಮಾತುಗಳಿಗೆ ತಮ್ಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ.
ಯೂತ್ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ನಡೆದಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಆವರನ್ನು ಬಹಳಷ್ಟು ಜನರು ಗಮನಿಸಿಯೇ ಇರಲಿಲ್ಲ. ಏಕೆಂದರೆ, ಯುವ ಶೂಟರ್‌ಗಳಾದ ಮನು ಭಾಕರ್, ಸೌರಭ್ ಚೌಧರಿ ಮತ್ತು ಮೆಹುಲಿ ಘೋಷ್ ಅವರ ಸುತ್ತಲೇ ಮಾಧ್ಯಮದವರ ಮತ್ತು ಜನರ ಕಣ್ಣುಗಳು ಗಿರಕಿ ಹೊಡೆದಿದ್ದವು. ಆದರೆ ತನಗೆ ಮಾತನಾಡಲು ಅವಕಾಶ ಸಿಕ್ಕಾಗ ಜೆರೆಮೈ ಎಲ್ಲರ ಗಮನವನ್ನೂ ತನ್ನತ್ತ ಸೆಳೆದಿದ್ದರು.
‘ಈ ಕೂಟದಲ್ಲಿ ನನ್ನ ಪ್ರತಿಸ್ಪರ್ಧಿಗಳು ಯಾರು ಎಂಬುದೇ ಗೊತ್ತಿಲ್ಲ. ಅವರೆಲ್ಲರ ಕುರಿತ ವಿಡಿಯೊಗಳನ್ನು ಯೂ ಟ್ಯೂಬ್‌ನಲ್ಲಿ ಇನ್ನಷ್ಟೇ ವೀಕ್ಷಿಸಬೇಕು. ಆದರೆ ನನಗೆ ನನ್ನ ಸಾಮರ್ಥ್ಯದ ಅರಿವು ಇದೆ. ನನ್ನ ಶ್ರೇಷ್ಠ ಸಾಮರ್ಥ್ಯದ (250 ಕೆ.ಜಿ. ಭಾರ) ಗುರಿ ಸಾಧಿಸಿದರೆ ಪದಕ ಒಲಿಯುವುದು ಖಚಿತ. ಬಹಳಷ್ಟು ಪರಿಶ್ರಮದಿಂದ ಸಿದ್ಧತೆ ಮಾಡಿಕೊಂಡಿದ್ದೇನೆ. ಈಗ ಸ್ಪರ್ಧಿಸುವುದೊಂದೇ ಬಾಕಿಯಿರುವುದು’ ಎಂದಿದ್ದ ಹುಡುಗನಿಗೆ ಚಪ್ಪಾಳೆಗಳ ಮೆಚ್ಚುಗೆಯ ಸುರಿಮಳೆಯಾಗಿತ್ತು.
ಟಿ.ವಿ. ವಾಹಿನಿಗಳ ಕ್ಯಾಮೆರಾಗಳೂ ಅವರತ್ತ ತಿರುಗಿದ್ದವು. ಅವರು ಎಲ್ಲರ ನಿರೀಕ್ಷೆಯನ್ನು ನಿಜ ಮಾಡಿದ್ದಾರೆ. ತಮ್ಮ ಸಾಮರ್ಥ್ಯವನ್ನೂ ಮೀರಿದ ಭಾರ ಎತ್ತಿದ್ದಾರೆ.
‘ಪ್ರಾಮಾಣಿಕವಾಗಿ ಹೇಳುವುದಾದರೆ, ಸ್ಪರ್ಧೆಗಾಗಿ ವೇದಿಕೆ ಹತ್ತಿದಾಗ ಬಹಳಷ್ಟು ನರ್ವಸ್ ಆಗಿದ್ದೆ. ಆಗ ನಾನು ಹಿಂದಿನ ಕೆಲವು ಕೂಟಗಳಲ್ಲಿ ಮಾಡಿದ್ದ ಸಾಧನೆಗಳನ್ನು ನೆನಪಿಸಿಕೊಂಡೆ. ಗೆದ್ದಾಗಿನ ಸಂಭ್ರಮ, ಜನರ ಪ್ರಶಂಸೆ, ಪ್ರೋತ್ಸಾಹದ ನುಡಿಗಳು ಸ್ಮರಣೆಯಲ್ಲಿ ತೇಲಿದವು. ಆತ್ಮವಿಶ್ವಾಸ ಮೂಡಿತು. ಸ್ವಯಂಪ್ರೇರಣೆಯೇ ಶ್ರೇಷ್ಠವಾದದ್ದು ಎಂಬುದು ನನಗೆ ಆಗ ಅರಿವಾಯಿತು’ ಎಂದು ಪದಕ ಗೆದ್ದ ನಂತರ ಜೆರೆಮೈ ಸುದ್ದಿಗಾರರಿಗೆ ಹೇಳಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಮೈಗೂಡುತ್ತಿರುವ ಪ್ರಬುದ್ಧತೆಗೆ ಈ ಮಾತುಗಳು ನಿದರ್ಶನ
ವಾಗುತ್ತವೆ.
‘2011ರಲ್ಲಿ ಪುಣೆ ಆಕಾಡೆಮಿಗೆ ಸೇರಿದ ಮೇಲೆ ಕೋಚ್ ಮಲಾಸ್ವಾಮಾ ಅವರ ತರಬೇತಿಯಲ್ಲಿ ಉತ್ತಮ ಕೌಶಲಗಳನ್ನು ಕಲಿತೆ. ಶಿಸ್ತಿನ ಜೀವನ ರೂಢಿಸಿಕೊಂಡಿದ್ದೇನೆ. ರಾಷ್ಟ್ರೀಯ ಶಿಬಿರದಲ್ಲಿ ವಿಜಯ್ ಶರ್ಮಾ ಅವರ ತರಬೇತಿಯಲ್ಲಿ ಉನ್ನತ ತಂತ್ರಗಳನ್ನು ಕಲಿತೆ. ಅಕ್ಟೋಬರ್ 21ಕ್ಕೆ ಭಾರತಕ್ಕೆ ಮರಳುತ್ತೇನೆ. ಸೀದಾ ಪಟಿಯಾಲಕ್ಕೆ ಹೋಗುತ್ತೇನೆ. 2020 ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸಿದ್ಧತೆ ಆರಂಭಿಸುತ್ತೇನೆ. 67 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವುದು ನನ್ನ ಗುರಿ’ ಎಂದಿದ್ದಾರೆ.
ಅದೆಲ್ಲವನ್ನೂ ಮೀರಿ ಜೆರೆಮೈ ಸಾಧನೆಯು ಭಾರತಕ್ಕೆ ಒಂದು ಹೊಸ ಭರವಸೆಯನ್ನು ಮೂಡಿಸಿದೆ. ಒಲಿಂಪಿಕ್ಸ್‌ಗೆ ಉತ್ಸಾಹಿ ಮತ್ತು ಸಮರ್ಥ ಪಡೆಯನ್ನು ಕಟ್ಟುವ ಕೆಲಸಕ್ಕೆ ಬಲ ಬಂದಿದೆ. ಈ ಬಾರಿ ಜೆರೆಮೈ ಜೊತೆಗೆ ಯೂತ್ ಒಲಿಂಪಿಕ್ಸ್‌ನಲ್ಲಿ
ಭಾಗವಹಿಸಿದ್ದ ಭಾರತದ ಸ್ಪರ್ಧಿಗಳಲ್ಲಿ ಬಹುತೇಕರು ಪದಕ ಸಾಧನೆ ಮಾಡುತ್ತಿದ್ದಾರೆ. ಆ ಮೂಲಕ ಈ ಕೂಟದ ಧ್ಯೇಯ ಮತ್ತು ಮಹತ್ವವನ್ನು ದೇಶಕ್ಕೆ ಪರಿಚಯಿಸುತ್ತಿದ್ದಾರೆ.
ವಿಶ್ವದ ಬಹಳಷ್ಟು ದೇಶಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರು ಬೊಜ್ಜು, ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ನವಪೀಳಿಗೆಯನ್ನು ಕ್ರೀಡೆಗಳತ್ತ ಆಕರ್ಷಿಸುವ ಉದ್ದೇಶದಿಂದ ಆಸ್ಟ್ರೇಲಿಯಾದ ಜೊಹಾನ್ ರಾಸೆನ್‌ಜೋಫ್ 19 ವರ್ಷದೊಳಗಿನವರಿಗಾಗಿ ಒಂದು ಒಲಿಂಪಿಕ್ಸ್ ನಡೆಯಬೇಕು. ವಿಶ್ವದ ಮಕ್ಕಳು ಆರೋಗ್ಯವಂತರಾಗಿ ಬೆಳೆಯಬೇಕು ಎಂದು ಸಲಹೆ ನೀಡಿದ್ದರು. ಅದು 2007ರಲ್ಲಿ ಅನುಮೋದನೆ ಪಡೆದು, 2010ರಲ್ಲಿ ಸಿಂಗಪುರದಲ್ಲಿ ಮೊಟ್ಟಮೊದಲ ಕೂಟ ಆಯೋಜನೆಗೊಂಡಿತು. ಈ ಸದುದ್ದೇಶಕ್ಕೆ ಭಾರತವೂ ಕೈಜೋಡಿಸಿದೆ. ಜೆರೆಮೈ ಅಂತಹ ಪ್ರತಿಭೆಗಳು ಇಲ್ಲಿ ಬೆಳಗುತ್ತಿವೆ.
No comments:
Post a Comment