ಭೂತಾನ್ ಸಂಸತ್ತಿನಲ್ಲಿ ಮೋದಿ ಭಾಷಣ -ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ ಅವರು ಭೂತಾನ್ ನ ಸಂಸತ್ತಿನಲ್ಲಿ ಸೋಮವಾರ ಭಾಷಣ ಮಾಡಿದರು. 'ಭಾರತ ಹಾಗೂ ಭೂತನ್ ನಡುವಿನ ಸಂಬಂಧ ಐತಿಹಾಸಿಕವಾಗಿದೆ, ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದಿರುವ ರಾಜ ಪರಿವಾರಕ್ಕೆ ನನ್ನ ಅಭಿನಂದನೆಗಳು' ಎಂದು ಮೋದಿ ಅವರುಹೇಳಿದರು. ಭೂತಾನ್ ಸಂಸತ್ತಿನಲ್ಲಿ ಹಿಂದಿಯಲ್ಲಿ ಮೋದಿ ಅವರು ಮಾಡಿದ ಭಾಷಣದ ಮುಖ್ಯಾಂಶಗಳು ಹೀಗಿದೆ : * ಭೂತಾನಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿರುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. * ಪ್ರಜಾಪ್ರಭುತ್ವದ ತತ್ತ್ವವನ್ನು ಭೂತಾನಿನಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಸಂಸ್ಕೃತಿ ಉಳಿಸಲು ನಡೆದಿರುವ ಪ್ರಯತ್ನ ಕಂಡು ಹೃದಯ ತುಂಬಿ ಬಂದಿದೆ. * ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆಯಿತು. ಮತದಾರರಿಗೆ ಉತ್ಸಾಹ ಮೂಡುವಂಥ ವಾತಾವರಣ ಸೃಷ್ಟಿಯಾಗಬೇಕಿದೆ. * ಸಶಕ್ತ ಭಾರತ ನಿರ್ಮಾಣವಾದರೆ ನೆರೆ ರಾಷ್ಟ್ರಗಳ ಕಷ್ಟ ಸುಖಗಳಿಗೆ ಹೆಚ್ಚಿನ ರೀತಿಯಲ್ಲಿ ನಾವು ಸ್ಪಂದಿಸಬಹುದು. * ಭಾರತ ಹಾಗೂ ಭೂತಾನ್ ಸಂಬಂಧ ಐತಿಹಾಸಿಕವಾಗಿದ್ದು, ಆಡಳಿತ ಬದಲಾದ ಮಾತ್ರಕ್ಕೆ ಸಂಬಂಧ ಹಳಸುವುದಿಲ್ಲ. ನಾವು ಮುಕ್ತವಾಗಿ ಭೂತನ್ ಜತೆ ಸಂಬಂಧ ಮುಂದುವರೆಸುತ್ತೇವೆ. * ಶಿಕ್ಷಣಕ್ಕೆ ಭೂತಾನ್ ನೀಡಿರುವ ಮಹತ್ವ ಪ್ರಶಂಸನೀಯ. ಭೂತಾನ್ ನಲ್ಲಿ ಇ ಗ್ರಂಥಾಲಯ ಸ್ಥಾಪನೆಗೆ ಭಾರತ ಅಗತ್ಯ ನೆರವು ನೀಡಲಿದೆ. * ಭಾರತದ ಉಪಗ್ರಹ ತಂತ್ರಜ್ಞಾನವನ್ನು ಭೂತಾನ್ ಬಳಸಿಕೊಂಡು ಅಭಿವೃದ್ಧಿ ಕಾಣಬಹುದು. ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ನಮ್ಮ ಬಾಂಧವ್ಯ ಇನ್ನಷ್ಟು ಹತ್ತಿರವಾಗಬಹುದು. * ಭಾರತ ಹಾಗೂ ಭೂತಾನ್ ಪರಂಪರೆಗೆ ಹಿಮಾಲಯವೇ ಸಾಕ್ಷಿ ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು. * Terrorism divides,tourism unites-PM Modi * ಹಿಮಾಲಯದ ರಾಜ್ಯಗಳು, ರಾಷ್ಟ್ರಗಳು ತಮ್ಮ ಸಂಸ್ಕೃತಿ, ಕ್ರೀಡೆ ಹಂಚಿಕೆಯಲ್ಲಿ ತೊಡಗಬೇಕು. ಇದರಿಂದ ಇತರೆ ಭಾಗದ ಜನರಿಗೆ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ. * ಥಿಂಪುವಿನ ವಿಮಾನ ನಿಲ್ದಾಣದಲ್ಲಿ ಸಿಕ್ಕ ಆದರದ ಸ್ವಾಗತದಿಂದ ನನ್ನ ಹೃದಯ ತುಂಬಿ ಬಂದಿದೆ ಎಂದರು
ಒಳ್ಳೆಯ ದಿನಗಳು ಸುಲಭವಾಗಿ ಬರುವುದಿಲ್ಲ, ಹಲವಾರು ತ್ಯಾಗ, ಕಠಿಣ ನಿರ್ಧಾರಗಳ ನಂತರವೇ ಬರುವುದು.. ನವದೆಹಲಿ(ಜೂ. 24): ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 30 ದಿನಗಳಾಗಿವೆ. ಕ್ಷಿಪ್ರಗತಿಯಲ್ಲಿ ಆಡಳಿತದಲ್ಲಿ ಸುಧಾರಣೆ ತರುವ ಹುಮ್ಮಸ್ಸಿನಲ್ಲಿದೆ ಸರ್ಕಾರ. ಕಹಿಗುಳಿಗೆ ನೀಡಿ ಆರ್ಥಿಕ ಚೇತರಿಕೆ ನೀಡುವ ಭರದಲ್ಲಿದೆ. ಈಗಾಗಲೇ ಕೆಲವಾರು ಕಹಿ ಗುಳಿಗೆ ನುಂಗಿಸಿಯಾಗಿದೆ. ಈ 30 ದಿನಗಳಲ್ಲಿ ನಡೆದಿರುವ ಕೆಲ ಪ್ರಮುಖ ಘಟನೆಗಳು ಇಲ್ಲಿವೆ... 1) ಸಾರ್ಕ್ ರಾಷ್ಟ್ರಗಳ ಮುಖಂಡರೊಂದಿಗೆ ಮೋದಿ.. ಪ್ರಧಾನಿಯಾಗಿ ಮೋದಿ ಇಟ್ಟ ಮೊತ್ತಮೊದಲ ಹೆಜ್ಜೆಯೇ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ದೇಶದ ಇತಿಹಾಸದಲ್ಲೇ ಯಾವೊಬ್ಬ ಪ್ರಧಾನಿ ಮಾಡದ್ದನ್ನ ಮೋದಿ ಮಾಡಿ ತೋರಿಸಿದರು. ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಎಲ್ಲಾ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರನ್ನ ಆಹ್ವಾನಿಸಿದರು. ಮೋದಿ ಬಹಳ ಬೇಗ ನಿರ್ಧಾರ ತೆಗೆದುಕೊಳ್ಳಬಲ್ಲರು ಎಂಬುದಕ್ಕೆ ಸಾಕ್ಷಿ ಸಿಕ್ಕಿತು. 2) ಷರೀಫ್ ಭೇಟಿ.. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಜೊತೆ ನರೇಂದ್ರ ಮೋದಿ ಮಹತ್ವದ ಮಾತುಕತೆಯನ್ನೂ ನಡೆಸಿದರು. ಭಯೋತ್ಪಾದನೆಗೆ ಮುಕ್ತಿ ಹಾಡುವಂತೆ ಸ್ವಲ್ಪ ಬಿಗಿಯಾಗಿಯೇ ಹೇಳಿದರು. ಎರಡೂ ದೇಶಗಳ ನಡುವಿನ ವ್ಯಾಪಾರ-ವ್ಯವಹಾರವನ್ನ ಹೆಚ್ಚಿಸಲು ಮತ್ತು ಪರಸ್ಪರ ಅಪನಂಬಿಕೆಯನ್ನ ದೂರವಾಗಿಸಲು ಸಲಹೆ ನೀಡಿದರು. 3) ಸಂಸತ್ತಿನಲ್ಲಿ ಮೊದಲ ದಿನ.. ಸಂಸತ್ತಿನಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ 30 ನಿಮಿಷಗಳ ಭಾಷಣ ಮಾಡಿದರು. ತುಂಬಾ ಭಾವನಾತ್ಮಕವಾಗಿದ್ದ ಆ ಭಾಷಣವು ಮೋದಿಯ ಮತ್ತೊಂದು ಮುಖವನ್ನ ಅನಾವರಣಗೊಳಿಸಿತು. 4) ಲೋಕಸಭೆಯಲ್ಲಿ ಮೊದಲ ಭಾಷಣ.. ಲೋಕಸಭೆಯನ್ನುದ್ದೇಶಿಸಿ ಮೋದಿ ಮಾಡಿದ ಮೊದಲ ಭಾಷಣ ಇಡೀ ದೇಶದ ಗಮನ ಸೆಳೆದಿತ್ತು. ರಾಜಕೀಯ ಶುದ್ಧೀಕರಣದಿಂದ ಹಿಡಿದು ಆರ್ಥಿಕ ಅಭಿವೃದ್ಧಿವರೆಗೆ ಹಲವು ವಿಚಾರಗಳನ್ನ ಮೋದಿ ಮಂಡಿಸಿದರು. 5) ಸಂಪುಟ ಸಭೆ... ಮಾತಿಗಿಂತ ಕೆಲಸ ಮುಖ್ಯ ಎಂಬುದು ಮೋದಿ ಮಂತ್ರ. ತಮ್ಮ ಸಂಪುಟ ಸದಸ್ಯರಿಗೆ ಬಹಳ ಸ್ಪಷ್ಟ ಮಾತಿನಲ್ಲಿ ಗುರಿ ಮತ್ತು ಸಂಕಲ್ಪಗಳನ್ನ ನೀಡಿದರು. 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದನ್ನ ಪಟ್ಟಿಮಾಡಬೇಕು ಮತ್ತು ಅವುಗಳನ್ನ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಿದರು. 6) ಭೂತಾನ್'ಗೆ ಭೇಟಿ... ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ ನಡೆದದ್ದು ಭೂತಾನ್'ಗೆ. ಆ ದೇಶದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮೋದಿ ಮಾಡಿದ ಭಾಷಣ ಪ್ರಖರವಾಗಿತ್ತು. ಮೋದಿಯ ಭಾಷಣ ಕೇಳಿ ಖುಷಿಯಾದ ಭೂತಾನ್ ಸಂಸದರು ತಮ್ಮ ಸಂಪ್ರದಾಯವನ್ನೂ ಮೀರಿ ಚಪ್ಪಾಳೆಯ ಸುರಿಮಳೆಗೈದರು. ಅಲ್ಲಿಯ ಸಂಸದರು ಚಪ್ಪಾಳೆ ಹೊಡೆದದ್ದು ಅದೇ ಮೊದಲಂತೆ. 7) ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ... ಹಳೇ ಕಾಲದ ಅಭ್ಯಾಸಗಳಿಗೆ ತಿಲಾಂಜಲಿ ಹಾಡಿ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳುವಂತೆ ಸರ್ಕಾರೀ ಅಧಿಕಾರಿಗಳಿಗೆ ಮೋದಿ ಬಿಸಿ ಮುಟ್ಟಿಸಿದರು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಎಲ್ಲಾ ಸರ್ಕಾರೀ ಸಿಬ್ಬಂದಿಗೆ ಮೋದಿ ತಾಕೀತು ಮಾಡಿದರು. 8) ದೇಶ, ತಾಯಿ ಮತ್ತು ಸೀರೆ.... ಭಾರತ ಮತ್ತು ಪಾಕಿಸ್ತಾನ ಪ್ರಧಾನಿಗಳ ಶಾಂತಿ ಮಾತುಕತೆಗೆ ಮೊದಲ ಟೋಕನ್ ಆಗಿದ್ದು ಸೀರೆ. ಷರೀಫ್ ಇಲ್ಲಿ ಬಂದಾಗ ಅವರ ತಾಯಿಗೆಂದು ಮೋದಿ ಸೀರೆ ಕೊಟ್ಟುಕಳುಹಿಸಿದ್ದರು. ನವಾಜ್ ಷರೀಫ್ ತಮ್ಮ ದೇಶಕ್ಕೆ ಮರಳಿದ ಬಳಿಕ ಅಲ್ಲಿಂದ ಸುಂದರವಾದ ಬಿಳಿ ಸೀರೆಯನ್ನ ಮೋದಿ ತಾಯಿಗೆ ಗಿಫ್ಟ್ ಆಗಿ ಕಳುಹಿಸಿದರು. ತಾಯಂದಿರಿಗೆ ಸಿಕ್ಕ ಈ ಸೀರೆಯ ಉಡುಗೊರೆ ಮುಂದೆ ಎರಡೂ ದೇಶಗಳ 'ತಾಯಿ'ಗಳಿಗೂ ಖುಷಿಯಾಗುವ ಕಾಲಕ್ಕೆ ಎಡೆಮಾಡಿಕೊಟ್ಟೀತೆ..? 9) ಮೋದಿ 2.0 ಮೋದಿ ಅಧಿಕಾರಕ್ಕೆ ಬಂದ ಬಳಿಕ ಇಟ್ಟ ಎಲ್ಲಾ ಹೆಜ್ಜೆಗಳು ದೃಢವಾಗಿದ್ದವು... ಅಭಿವೃದ್ಧಿಗೆ ಪೂರಕವಾಗಿದ್ದವು. ಅವರ ಹೆಜ್ಜೆಗಳು ಮೋದಿಯ ಕಡುವಿರೋಧಿಗಳನ್ನೂ ಅಚ್ಚರಿಗೊಳಿಸಿದ್ದವು. ಕಾಂಗ್ರೆಸ್ ಸಂಸದ ಹಾಗೂ ಮಾಜಿ ಸಚಿವ ಶಶಿ ತರೂರ್, ಮೋದಿ ತುಂಬಾ ಬದಲಾಗಿದ್ದಾರೆ ಎಂದು ತಮ್ಮದೇ ಶೈಲಿಯಲ್ಲಿ ಶ್ಲಾಘಿಸಿದರು. ಚುನಾವಣೆಗೆ ಮುನ್ನ ಇದ್ದ ಮೋದಿ 1.0 ಈಗ ಮೋದಿ 2.0 ಆಗಿ ಬದಲಾಗಿದ್ದಾರೆ ಎಂದು ತರೂರ್ ವ್ಯಾಖ್ಯಾನಿದರು. 10) ಐಎನ್ಎಸ್ ವಿಕ್ರಮಾದಿತ್ಯ ಮತ್ತು ಮೋದಿ... ಪ್ರಧಾನಿಯಾದ ಕೆಲವೇ ದಿನಗಳಲ್ಲಿ ನರೇಂದ್ರ ಮೋದಿಗೆ ಭಾರತದ ಯುದ್ಧನೌಕೆ ಐಎನ್'ಎಸ್ ವಿಕ್ರಮಾದಿತ್ಯವನ್ನ ಸೈನ್ಯಕ್ಕೆ ಜೋಡಿಸುವ ಸೌಭಾಗ್ಯ ಒದಗಿಬಂತು. ಭಾರತೀಯ ಸೇನೆ ಈ ಯುದ್ಧನೌಕೆಯ ಸೇರ್ಪಡೆಯಿಂದ ಇನ್ನಷ್ಟು ಬಲಿಷ್ಠವಾಗಿದೆ... ಪ್ರಪಂಚದ ಯಾವುದೇ ಶಕ್ತಿಯಿಂದಲೂ ಭಾರತಕ್ಕೆ ಅಪಾಯವಾಗುವುದಿಲ್ಲ ಎಂದು ಆತ್ಮವಿಶ್ವಾಸಭರಿತ ಮಾತುಗಳನ್ನ ಆಡಿದರು.
ಒಂದು ತಿಂಗಳ ಸಾಧನೆಯನ್ನು 67 ವರ್ಷಗಳಿಗೆ ಹೋಲಿಸಬೇಡಿ. ನಮ್ಮ ಸರ್ಕಾರದ ಪ್ರತಿ ತೀರ್ಮಾನದ ಆಶಯವೂ ರಾಷ್ಟ್ರೀಯ ಹಿತ. - ನರೇಂದ್ರ ಮೋದಿ ಮೋದಿ ಸರ್ಕಾರದ 30 ದಿನಗಳ ಹಿನ್ನೋಟ ದೇಶವನ್ನು ಅಭಿವೃದ್ಧಿ ಪಥಕ್ಕೆ ಅರ್ಥಾತ್ ಬದಲಾವಣೆಗೆ ತರಲು 60 ತಿಂಗಳ ಅವಕಾಶ ಕೊಡಿ ಎಂದು ಲೋಕಸಭಾ ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಹೇಳಿದ್ದರು. ಮೋದಿ ಸರ್ಕಾರದ ಬಗ್ಗೆ ಜನರಿಗೆ ಇನ್ನಿಲ್ಲದ ನಿರೀಕ್ಷೆ. ಮೇ 26ಕ್ಕೆ ನರೇಂದ್ರ ಮೋದಿ ಪ್ರಧಾನಿಗಾದಿಗೇರಿದ್ದು, ಇಂದಿಗೆ ತಿಂಗಳು ಪೂರ್ತಿಯಾಗಿ, ಮತ್ತೊಂದು ದಿನ ಆರಂಭವಾಗಿದೆ. ಈ ಸಂದರ್ಭದಲ್ಲಿ ಕಳೆದ ಮೂವತ್ತು ದಿನಗಳಲ್ಲಿ ಸರ್ಕಾರ ಪ್ರಮುಖ ಕಾರ್ಯಗಳ ದಿನವಹಿ ಅವಲೋಕನ ಇಲ್ಲಿದೆ. ಮೇ 26 - ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ - ಸಾರ್ಕ್ ರಾಷ್ಟ್ರಗಳ ನಾಯಕರು, ಮಾರಿಷಸ್ ಪ್ರತಿನಿಧಿ ಸೇರಿ 4000 ಅತಿಥಿಗಳು. ಕಾರ್ಯಕ್ರಮದ ಮೂಲಕ ಪ್ರಾದೇಶಿಕ ಬಾಂಧವ್ಯಕ್ಕೆ ಒತ್ತು ನೀಡುವ ಸಂದೇಶ ರವಾನೆ. ಮೇ 27 - ಮೋದಿ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ- ಕಾಳಧನ ವಾಪಸ್ ತರುವ ನಿಟ್ಟಿನಲ್ಲಿ ವಿಶೇಷ ತನಿಖಾ ದಳ ರಚನೆಯ ನಿರ್ಧಾರ. ಮೇ 28 - ಸಬಂಧಿಕರನ್ನು ಖಾಸಗಿ ಸಿಬ್ಬಂದಿಯಾಗಿ ನೇಮಕ ಮಾಡದಂತೆ ಪ್ರಧಾನಿ ಸಚಿವಾಲಯದಿಂದ ಸಚಿವರಿಗೆ ಸೂಚನೆ ಮೇ 29 - ಮೂಲಭೂತ ಸೌಕರ್ಯವೃದ್ಧಿ, ಹೂಡಿಕೆ, ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತವರ್ಗಕ್ಕೆ ಮುಕ್ತ ಅವಕಾಶ ಸೇರಿದಂತೆ 10 ಪ್ರಮುಖ ಆದ್ಯತೆಗಳನ್ನು ಗುರುತಿಸಿದ್ದು, 100 ದಿನಗಳ ಕಾರ್ಯ ಸೂಚಿಯನ್ನು ಸಿದ್ಧಪಡಿಸಲಾಯಿತು. ಮೇ 30 - ಪಠ್ಯದಲ್ಲಿ ನನ್ನ ಪಾಠ ಬೇಡ ಎಂದ ಪ್ರಧಾನಮಂತ್ರಿ ನರೇಂದ್ರ ಮೋದಿ- ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಶಾಲಾ ಪಠ್ಯದಲ್ಲಿ ನರೇಂದ್ರ ಮೋದಿ ಅವರ ಪ್ರೇರಣಾದಾಯಿ ಪಠ್ಯವನ್ನು ಅಳವಡಿಸಲು ಮುಂದಾಗಿದ್ದವು. ಮೇ 31 - ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಉನ್ನತಮಟ್ಟದ ಸಚಿವರ ಗುಂಪು (ಎಂಪವರ್ಡ್ ಗ್ರೂಪ್ ಆಫ್ ಮಿನಿಸ್ಟರ್ಸ್) ಮತ್ತು ಸಚಿವರ ಗುಂಪು(ಗ್ರೂಪ್ ಆಫ್ ಮಿನಿಸ್ಟರ್ಸ್)ಗಳನ್ನು ರದ್ದುಗೊಳಿಸಿದ ಪ್ರಧಾನಿ. ರೆಡ್ ಟೇಪಿಸಂ ಅರ್ಥಾತ್ ವಿಳಂಬ ನೀತಿಗೆ ವಿದಾಯ ಹೇಳಿದ ಮೋದಿ ಸರ್ಕಾರ್. ಪ್ರಮುಖ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸಚಿವಾಲಯಗಳಿಗೆ ಕಷ್ಟವಾದಲ್ಲಿ, ಪ್ರಧಾನಿ ಸಚಿವಾಲಯ ಮಧ್ಯಪ್ರವೇಶಿಸಲಿದೆ ಎಂಬ ಸಂದೇಶ ರವಾನಿಸಿತು. ಜೂನ್ 1- ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ದೇಶದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಮತ್ತು ಇತರೆ ಹಣಕಾಸು ವಿಚಾರ ಚರ್ಚೆಗೊಳಗಾಗಿತ್ತು. ಜೂನ್ 2- ಎಲ್ಲ ಸಚಿವರನ್ನು ಮೊದಲ ಬಾರಿ ಭೇಟಿ ಮಾಡಿದ ಪ್ರಧಾನಿ ಮೋದಿ - ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಸಂದೇಶ ರವಾನೆ. ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವಂತೆ ಸಲಹೆ. ಜೂನ್ 3 - ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗೋಪಿನಾಥ ಮುಂಡೆ ದೆಹಲಿಯಲ್ಲಿ ನಡೆದ ಕಾರು ಅಪಘಾತಕ್ಕೆ ಬಲಿ. ರಸ್ತೆ ಸುರಕ್ಷತೆ ಬಗ್ಗೆ ಇನ್ನಷ್ಟು ಕಾಳಜಿ ವ್ಯಕ್ತವಾಯಿತು. ಜೂನ್ 4 - ಅಮೆರಿಕಕ್ಕೆ ಬರಬೇಕೆಂಬ ಅಧ್ಯಕ್ಷ ಬರಾಕ್ ಒಬಾಮರ ಆಹ್ವಾನ ಸ್ವೀಕರಿಸಿದ ಮೋದಿ. ಸೆಪ್ಟೆಂಬರ್ ನಲ್ಲಿ ಮೋದಿ ಅಮೆರಿಕ ಪ್ರವಾಸ. ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಸೆ.30ರಂದು ಮೋದಿ ಮಾತನಾಡಲಿದ್ದಾರೆ. ಮೋದಿ ಅಮೆರಿಕ ಭೇಟಿಯ ದಿನವನ್ನು ಸೆ.26ಕ್ಕೆ ಹಿಂದೂಡುವಂತೆ ಭಾರತ ಕೇಳಿಕೊಂಡಿದೆ. ಜೂನ್ 5 - ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ನೆರೆ ರಾಷ್ಟ್ರ ಭೂತಾನ್ ಗೆ ಎಂಬ ನಿರ್ಣಯ ಪ್ರಕಟ. ಜೂನ್ 6- ಸರ್ಕಾರದ ಉನ್ನತ ಅಧಿಕಾರಿಗಳಿಗೆ 11 ಅಂಶಗಳ ಮಾಡಬೇಕಾದ ಆದ್ಯ ಕಾರ್ಯಗಳ ಪಟ್ಟಿ ರವಾನೆ. ಜೂನ್ 7 - ಅಮೆರಿಕ ಮಾಧ್ಯಮಗಳ ಲೇಟೆಸ್ಟ್ ಸ್ಟೈಲ್ ಐಕಾನ್ ನರೇಂದ್ರ ಮೋದಿ. ಜೂನ್ 8 - ಚೀನಾದ ಜತೆಗೆ ಸ್ಪರ್ಧಿಸುವುದಕ್ಕಾಗಿ ಕೌಶಲ್ಯ, ಕಾರ್ಯ ವರ್ಧನೆ, ಕ್ಷಿಪ್ರವಾಗಿ ಕೆಲಸ ಮುಗಿಸಬೇಕಾದ ಅಗತ್ಯ ಇದೆ ಎಂಬ ಸಂದೇಶ ರವಾನಿಸಿದ ಮೋದಿ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತ ಭೇಟಿ. ಜೂನ್ 9 - ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೋದಿ ಸರ್ಕಾರದ ಧ್ಯೇಯೋದ್ದೇಶಗಳನ್ನು ತಮ್ಮ ಭಾಷಣದಲ್ಲಿ ಬಿಂಬಿಸಿದರು. ಜೂನ್ 10 - ಆಧಾರ್ ಸೇರಿದಂತೆ ನಾಲ್ಕು ಕ್ಯಾಬಿನೆಟ್ ಸಮಿತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಸಚಿವಾಲಯ. ಚೀನಾ ಪ್ರಧಾನಿಯ ಆಹ್ವಾನ ಸ್ವೀಕರಿಸಿದ ಮೋದಿ. ಜೂನ್ 11- ಸಂಸತ್ತಿನಲ್ಲಿ ನರೇಂದ್ರ ಮೋದಿ ಮೊದಲ ಭಾಷಣ - ಅತ್ಯಾಚಾರ ಪ್ರಕರಣ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪ. ಜೂನ್ 12 - ಸರ್ಕಾರದ ಜತೆಗೆ ಕೆಲಸ ನಿರ್ವಹಿಸುವ ಹಾಗೂ ದೇಶದೊಳಗೆ ಕೆಲಸ ಮಾಡುತ್ತಿರುವ ಎನ್ ಜಿಒಗಳ ವಿವರ ಕೇಳಿದ ಪಿಎಂಒ. - ಎರಡು ದಿನ ಹಿಂದೆ ಗುಪ್ತಚರ ದಳದಿಂದ ಎನ್ ಜಿಒಗಳ ಬಗ್ಗೆ ವಿಶೇಷ ವರದಿ ಸಲ್ಲಿಕೆ. ಜೂನ್ 13 - ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಬೇಕಿದ್ದರೆ ಹಿಂಸಾಚಾರ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಭಾರತದ ಪ್ರಧಾನಿ ಮೋದಿ ತಾಕೀತು. ಗಡಿ ಭಾಗದಲ್ಲಿ ದಾಳಿ ಹಿನ್ನೆಲೆ. ಜೂನ್ 14 - ದೇಶದ ಆರ್ಥಿಕ ಸ್ಥಿತಿ ಸುಧಾರಿಸುವುದಕ್ಕಾಗಿ ಕಠಿಣ ಕ್ರಮಗಳನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತೆಗೆದುಕೊಳ್ಳಬೇಕಾದೀತು ಎಂಬ ಸಂದೇಶ ರವಾನಿಸಿದ ಪ್ರಧಾನಿ. ಜೂನ್ 15- ಎರಡು ದಿನಗಳ ಭೇಟಿಗಾಗಿ ಭೂತಾನ್ ಗೆ ತೆರಳಿದ ಮೋದಿ - ಭಾರತ್ ಟು ಭೂತಾನ್ (ಬಿ2ಬಿ) ಸಂಬಂಧ ಸುಧಾರಿಸಲು ಕ್ರಮ. ಜೂನ್ 16- ಬಜೆಟ್ ಅಧಿವೇಶನಕ್ಕೆ ಸಿದ್ಧತೆ ಆರಂಭ - ಭ್ರಷ್ಟಾಚಾರ ವಿರೋಧಿ ಮಸೂದೆ ವಿಳಂಬ ಸಾಧ್ಯತೆ ಎಂಬ ಸುಳಿವು. ಜೂನ್ 17 - ಉತ್ತರಪ್ರದೇಶ ರಾಜ್ಯಪಾಲ ಬಿ.ಎಲ್.ಜೋಶಿ ರಾಜೀನಾಮೆ. ಇತರೆ ಏಳು ರಾಜ್ಯಗಳ ರಾಜ್ಯಪಾಲರಿಗೂ ರಾಜೀನಾಮೆ ನೀಡುವಂತೆ ಸಂದೇಶ ರವಾನೆ. ಜೂನ್ 18 - ಭಾರತ - ರಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ - ಎಫ್ ಟಿಎ ಸಾಧ್ಯತೆ ಪರಿಶೀಲನೆ ಅಧ್ಯಯನ ತಂಡ ಜೂನ್ 19 - ಜಪಾನ್ ಭೇಟಿ ಮುಂದೂಡಿದ ಪ್ರಧಾನಿ ಮೋದಿ - ಬಜೆಟ್ ಅಧಿವೇಶನದ ಬಳಿಕ ಬರುವುದಾಗಿ ಜಪಾನ್ ಪ್ರಧಾನಿ ಶಿನ್ಝೋ ಅಬೆಗೆ ಪತ್ರ. - ವಿವಿಧ ಪ್ರಾಧಿಕಾರಿಗಳ ಅಧ್ಯಕ್ಷರಿಗೆ ಸ್ಥಾನ ತೆರವುಗೊಳಿಸುವಂತೆ ಸೂಚನೆ. ಜೂನ್ 20 - ರೈಲ್ವೆ ಪ್ರಯಾಣದರ ಶೇಕಡ 14.2ರಷ್ಟು ಏರಿಕೆ ಮಾಡುವ ಮುನ್ಸೂಚನೆ ನೀಡಿದ ಕೇಂದ್ರ ಸರ್ಕಾರ. ಪ್ರಯಾಣದರ 14.2%, ಸರಕು ಸಾಗಣೆ ದರ 6.5% ಏರಿಕೆ ಜೂ.25ರಿಂದ ಎಂಬ ಹೇಳಿಕೆ. - ಸಾಮಾಜಿಕ ತಾಣಗಳಲ್ಲಿ ಹಾಗೂ ಅಧಿಕೃತ ಭಾಷೆಯಾಗಿ ಹಿಂದಿ ಬಳಸಲು ಸರ್ಕಾರದ ಸೂಚನೆ - ವಿಪಕ್ಷಗಳ ಪ್ರತಿರೋಧ. ಜೂನ್ 21 - ಅಮೆರಿಕನ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವಂತೆ ಮೋದಿಗೆ ಆಹ್ವಾನ. ಜೂನ್ 22 - ಮೋದಿಯವರ Gujarat International Finance Tec-City (GIFT) 2022ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ. ಜೂನ್ 23 - ಸ್ವಿಸ್ ಖಾತೆಗಳ ವಿವರ ನೀಡಲು ಒಪ್ಪಿದ ಸ್ವಿಸ್ ಬ್ಯಾಂಕ್ ಅಧಿಕಾರಿಗಳು. ಜೂ.24 - ಸಕ್ಕರೆ ಮೇಲಿನ ಆಮದು ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ.- ಸೇನಾ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ನಿರ್ಣಯ ತೆಗೆದುಕೊಂಡ ಮೋದಿ ಸರ್ಕಾರ. ಜೂ.25 - ಪ್ರತಿ ತಿಂಗಳು ಹತ್ತು ರೂ.ಗಳಂತೆ ಎಲ್‌ಪಿಜಿ ದರ ಏರಿಕೆ ಹಾಗೂ ಇತರೆ ಇಂಧನಗಳ ಬೆಲೆ ಏರಿಕೆ ಮುನ್ಸೂಚನೆ ನೀಡಿದ ಸರ್ಕಾರ. - ದೇಶಾದ್ಯಂತ ತೀವ್ರ ವಿರೋಧ - ಮುಂಬೈ ಸೇರಿದಂತೆ ಕೆಲವು ಉಪನಗರಗಳ ರೈಲ್ವೆ ಸೇವೆಯ ಪ್ರಯಾಣದರ ಏರಿಕೆ ಕಡಿತಗೊಳಿಸಲು ಚಿಂತನೆ
No comments:
Post a Comment