ವಿಶ್ವಸಂಸ್ಥೆ (ಪಿಟಿಐ): ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದ್ದು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.
ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಭಾರತ ಅತ್ಯಧಿಕ ಮತಗಳನ್ನು ಪಡೆದಿದೆ. ಶುಕ್ರವಾರ ಮಂಡಳಿಗೆ ನಡೆದ ಮತದಾನದಲ್ಲಿ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದವು. ಭಾರತವು 188 ಮತಗಳನ್ನು ಪಡೆಯಿತು. ರೋಹಿಂಗ್ಯಾ ಮುಸ್ಲಿಮರ ವಲಸೆ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಬಾಂಗ್ಲಾದೇಶ 178 ಮತ ಗಳಿಸಿತು.
ಏಷ್ಯಾ–ಪೆಸಿಫಿಕ್ ಪ್ರದೇಶಕ್ಕೆ ತೆರವಾಗಿದ್ದ ಐದು ಸ್ಥಾನಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರತ, ಬಾಂಗ್ಲಾ ಹೊರತುಪಡಿಸಿ ಏಷ್ಯಾ–ಪೆಸಿಫಿಕ್ ಪ್ರದೇಶದಿಂದ ಚುನಾಯಿತವಾದ ಉಳಿದ ಮೂರು ದೇಶಗಳೆಂದರೆ ಬಹರೇನ್, ಫಿಜಿ ಮತ್ತು ಫಿಲಿಪೀನ್ಸ್.
ಮಂಡಳಿಗೆ ಭಾರತವು ಜನವರಿಯಲ್ಲಿ ಸೇರ್ಪಡೆಯಾಗಲಿದೆ. ಏಷ್ಯಾ–ಪೆಸಿಫಿಕ್ ಭಾಗದ ಚೀನಾ, ನೇಪಾಳ ಹಾಗೂ ಪಾಕಿಸ್ತಾನ ಜತೆ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸಲಿದೆ.
ಮಂಡಳಿಗೆ ನಾಮನಿರ್ದೇಶನಗೊಂಡ ಬಳಿಕ ಭಾರತವು, ವರ್ಣಭೇದ – ಜನಾಂಗೀಯ ತಾರತಮ್ಯ ಮತ್ತು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಪ್ರತಿಪಾದಿಸಿದೆ.
2006ರಲ್ಲಿ ಭಾರತವು ಮೊದಲ ಬಾರಿ ಚುನಾಯಿತವಾಗಿತ್ತು. ಬಳಿಕ 2007, 2011 ಮತ್ತು 2014ರಲ್ಲಿ ಆಯ್ಕೆಯಾಗಿತ್ತು. ಯಾವುದೇ ದೇಶವು ಮಂಡಳಿಗೆ ಸತತ ಎರಡು ಬಾರಿ ಮಾತ್ರವೇ ಆಯ್ಕೆಯಾಗಲು ಅವ
ಕಾಶವಿದೆ. 2017ರಲ್ಲಿ ಅವಧಿ ಮುಗಿದ ಬಳಿಕ ಭಾರತ, ಒಂದು ವರ್ಷ ಮಂಡಳಿಯ ಅಧಿಕಾರದಿಂದ ದೂರವಿತ್ತು.
No comments:
Post a Comment