ಸಿವಿಲ್ ನ್ಯಾಯಾಧೀಶರ ನೇಮಕಕ್ಕೆ ಒತ್ತಾಯ; ವಕೀಲರಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ಬಿ.ಎಸ್.ಷಣ್ಮುಖಪ್ಪ
ಬೆಂಗಳೂರು: ‘ಕಂದಾಯ ಇಲಾಖೆ ವ್ಯಾಜ್ಯಗಳ ಅರೆನ್ಯಾಯಿಕ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಮತ್ತು ಈ ನ್ಯಾಯಾಲಯಗಳಿಗೆ ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿ ವಕೀಲರು ಸಹಿ ಸಂಗ್ರಹ ಆರಂಭಿಸಿದ್ದಾರೆ.
ಕಳೆದ ತಿಂಗಳ 22ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ವಕೀಲರ ಸಂಘಗಳ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಸಮಾವೇಶದಲ್ಲಿ ಕೈಗೊಂಡ ನಿರ್ಣಯದ ಅನುಸಾರ, ಇದೇ 5ರಿಂದ ಈ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.
ಪುಸ್ತಕಗಳಲ್ಲಿ ಈ ಸಹಿ ಸಂಗ್ರಹಿಸಲಾಗುತ್ತಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಈತನಕ 1,500ಕ್ಕೂ ಹೆಚ್ಚು ವಕೀಲರು ಈ ಮನವಿಗೆ ಸಹಿ ಮಾಡಿದ್ದಾರೆ.
ಯಾಕೆ ಈ ಅಭಿಯಾನ?: ‘ಸದ್ಯ ಈ ಅರೆನ್ಯಾಯಿಕ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿ (ಎ.ಸಿ) ಹಾಗೂ ಜಿಲ್ಲಾಧಿಕಾರಿಗಳು (ಡಿ.ಸಿ) ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಕಾರ್ಯಾಂಗ ಚಟುವಟಿಕೆ ಒತ್ತಡದಿಂದ ವಿಚಾರಣೆಯ ಕ್ಷಮತೆ ಕ್ಷೀಣಿಸುತ್ತಿದೆ. ವಕೀಲರ ಭಾಗವಹಿಸುವಿಕೆ ಔಪಚಾರಿಕ ಎಂಬಂತಾಗಿದೆ’ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
‘ಕಕ್ಷಿದಾರರು, ಎ.ಸಿ ಹಾಗೂ ಡಿ.ಸಿಗಳನ್ನು ಮುಕ್ತವಾಗಿ ಭೇಟಿ ಮಾಡಬಹುದು. ಇದು ಭ್ರಷ್ಟಾಚಾರಕ್ಕೆ ಅವಕಾಶ ಒದಗಿಸಿಕೊಟ್ಟಿದೆ’ ಎಂಬುದು ಮನವಿದಾರರ ಗಂಭೀರ ಆರೋಪ.
15 ಸಾವಿರ ಸಹಿ: ಸಹಿ ಸಂಗ್ರಹಣೆಯ ಮುಂಚೂಣಿಯಲ್ಲಿರುವ ಹೈಕೋರ್ಟ್ ವಕೀಲ ಎಸ್.ಎ. ಅಹಮದ್ ಈ ಕುರಿತಂತೆ ಪ್ರತಿಕ್ರಿಯಿಸಿ, ‘ವೃತ್ತಿ
ನಿರತ 15 ಸಾವಿರ ವಕೀಲರ ಸಹಿ
ಯೊಂದಿಗೆ ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗು
ವುದು’ ಎಂದು ತಿಳಿಸಿದರು.
‘ಪ್ರಕರಣಗಳ ವಿಚಾರಣೆಗೆ ಎ.ಸಿ, ಡಿ.ಸಿಗಳ ವಾಹನ ಚಾಲಕರು, ಕಚೇರಿ ವ್ಯವಸ್ಥಾಪಕರು, ವಿಷಯ ನಿರ್ವಾಹಕರು, ಕೆಲವೊಮ್ಮೆ ಈ ಅಧಿಕಾರಿಗಳ ಸಂಬಂಧಿ
ಕರೇ ಮಧ್ಯವರ್ತಿಗಳಾಗಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಇದು ವ್ಯವಸ್ಥೆ ಎಷ್ಟು ಕುಸಿತಗೊಂಡಿದೆ ಎಂಬುದಕ್ಕೆ ಸಾಕ್ಷಿ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.
ಹಿರಿಯ ವಕೀಲ ವಿವೇಕ ರೆಡ್ಡಿ, ‘ಕಂದಾಯ ಕೋರ್ಟ್‌ಗಳು ಇವತ್ತು ತೀರ್ಪುಗಳನ್ನು ಖರೀದಿ ಮಾಡುವ ಕೋರ್ಟ್‌ಗಳಾಗಿವೆ. ಹಣ ಇದ್ದವರು ತಮಗೆ ಬೇಕಾದ ತೀರ್ಪು ಪಡೆಯಬಹುದು ಎಂಬ ಸಂದೇಶ ವ್ಯಾಪಕವಾಗಿದೆ’ ಎಂಬ ಆತಂಕ ವ್ಯಕ್ತಪಡಿಸುತ್ತಾರೆ.
ವಕೀಲ ಸೂರ್ಯ ಮುಕುಂದರಾಜ್, ‘ಎ.ಸಿ ಮತ್ತು ಡಿ.ಸಿಗಳು ಕಾಲೋಚಿತವಾದ ಉನ್ನತ ಕೋರ್ಟ್ ತೀರ್ಪುಗಳನ್ನು ಓದಿಕೊಳ್ಳಲು ಸಾಧ್ಯವಾಗದೆ ಇರುವುದು, ಕಕ್ಷಿದಾರರ ಪಾಲಿಗೆ ದೊಡ್ಡ ತೊಂದರೆಯಾಗಿದೆ’ ಎನ್ನುತ್ತಾರೆ.
ವಕೀಲ ಆರ್. ರಮೇಶ್, ‘ಪಾಲಿಕೆ ವ್ಯಾಪ್ತಿಯಲ್ಲಿ ಜಮೀನಿನ ಮೌಲ್ಯ ಎಕರೆಗೆ ಕೋಟಿಗಟ್ಟಲೆ ಇದೆ. ಇಂತಹ ಜಮೀನುಗಳ ವ್ಯಾಜ್ಯದಲ್ಲಿ, ಎ.ಸಿ, ಡಿ.ಸಿಗಳು ತಮಗೆ ಇಷ್ಟ ಬಂದಂತೆ ಆದೇಶಿಸುವ ಮೂಲಕ ಬಡ ಕಕ್ಷಿದಾರರಿಗೆ ಭಾರಿ ಅನ್ಯಾಯ ಎಸಗುತ್ತಿದ್ದಾರೆ’ ಎಂದು ಆಕ್ಷೇಪಿಸುತ್ತಾರೆ.
‘ಆದೇಶಗಳು ಲೋಕಾಯುಕ್ತ ತನಿಖೆಗೆ ಬರುವುದಿಲ್ಲ’
‘ಅರೆನ್ಯಾಯಿಕ ಕೋರ್ಟ್‌ನ ಆದೇಶಗಳು ಲೋಕಾಯುಕ್ತ ಕಾಯ್ದೆಯ ಕಲಂ–8ರ ಅಡಿಯಲ್ಲಿ ತನಿಖಾ ವ್ಯಾಪ್ತಿಗೆ ಒಳಪಡುವುದಿಲ್ಲ. ಇದರಿಂದ ಎ.ಸಿ ಹಾಗೂ ಡಿ.ಸಿ ಕೋರ್ಟ್‌ಗಳಲ್ಲಿ ಬೇಕಾಬಿಟ್ಟಿ ಆದೇಶ ಪಡೆಯಲು ರಹದಾರಿಯಾದಂತಾಗಿದೆ’ ಎಂದು ಮನವಿಯಲ್ಲಿ ದೂರಲಾಗಿದೆ.
‘ಈ ಆದೇಶಗಳನ್ನು ಪ್ರಶ್ನಿಸಲು ಸೂಕ್ತ ಮೇಲ್ಮನವಿ ಪ್ರಾಧಿಕಾರಗಳೂ ಇಲ್ಲ. ಇವುಗಳೆಲ್ಲಾ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 136 (2) ಮತ್ತು 136 (3)ರ ಪ್ರಕಾರ ಅಂತಿಮ ಆದೇಶಗಳಾಗಿರುತ್ತವೆ. ಒಂದು ವೇಳೆ ಪ್ರಶ್ನಿಸಬೇಕೆಂದರೆ ಸಂವಿಧಾನದ 226ನೇ ವಿಧಿಯ ಅನುಸಾರ ಹೈಕೋರ್ಟ್‌ಗೇ ಬರಬೇಕಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಲಾಗಿದೆ.
No comments:
Post a Comment