ರೂಪಾಯಿ ಕುಸಿತ ತಡೆಗೆ ಚಿಂತನೆ
ನವದೆಹಲಿ (ಪಿಟಿಐ): ರೂಪಾಯಿ ಬೆಲೆಯು ಅಸಮಂಜಸ ಮಟ್ಟಕ್ಕೆ ಕುಸಿಯದಂತೆ ತಡೆಯಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯಪ್ರವೃತ್ತವಾಗಲಿವೆ.
ಡಾಲರ್ ಎದುರು ರೂಪಾಯಿ ವಿನಿಮಯ ದರವು ನಿರಂತರವಾಗಿ ಕುಸಿಯುತ್ತಿರುವುದನ್ನು ತಡೆಯಲು ಸಾಧ್ಯವಿರುವ ಪ್ರಯತ್ನಗಳನ್ನೆಲ್ಲ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
‘ರೂಪಾಯಿ ಬೆಲೆ ಕುಸಿತದ ಹಾದಿಯಲ್ಲಿಯೇ ಮುಂದುವರೆದು ಅಸಮಂಜಸ ಮಟ್ಟಕ್ಕೆ ತಲುಪುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಬುಧವಾರ ರೂಪಾಯಿ ಬೆಲೆ ಸ್ಥಿರತೆ ಸಾಧಿಸಿರುವುದು ಇಂತಹ ಕ್ರಮಗಳ ಫಲವಾಗಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ಟ್ವೀಟ್ ಮಾಡಿದ್ದಾರೆ.
‘ಡಾಲರ್ ಎದುರು ರೂಪಾಯಿ ಈ ಮಟ್ಟದಲ್ಲಿ ಕುಸಿತ ಕಾಣುವುದಕ್ಕೆ ಯಾವುದೇ ಮೂಲ ಕಾರಣಗಳಿಲ್ಲ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ವಹಿವಾಟುದಾರರ ಅತಿಯಾದ ಪ್ರತಿಕ್ರಿಯೆಯಿಂದಾಗಿ ಈ ಬೆಳವಣಿಗೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಆರ್ಥಿಕ ಪರಾಮರ್ಶೆ ಸಭೆ: ರೂಪಾಯಿ ಅಪಮೌಲ್ಯಕ್ಕೆ ಕಡಿವಾಣ ವಿಧಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಸಭೆ ನಡೆಸಲಿದ್ದಾರೆ.
ಆರ್ಥಿಕತೆ ಪರಾಮರ್ಶೆ ಕುರಿತ ಈ ಸಭೆಯಲ್ಲಿ, ತೈಲೋತ್ಪನ್ನಗಳ ಬೆಲೆ ಏರಿಕೆ ತಡೆಗಟ್ಟುವ ಮಾರ್ಗೋಪಾಯಗಳ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ.
No comments:
Post a Comment