ಅದಿರು ರಫ್ತಿಗೆ ‘ಸುಪ್ರೀಂ’ ಒಪ್ಪಿಗೆ ಕೇಳಿದ ‘ಫಿಮಿ’
IRON ORE
ಪ್ರಜಾವಾಣಿ ವಾರ್ತೆ
ಬೆಂಗಳೂರು: ರಾಜ್ಯದಲ್ಲಿ ಬಳಕೆಯಾಗದೆ ಉಳಿದಿರುವ ಕಬ್ಬಿಣದ ಅದಿರನ್ನು ಉಂಡೆಗಳಾಗಿ (ಪೆಲೆಟ್ಸ್) ಮಾರ್ಪಡಿಸಿ, ರಫ್ತು ಮಾಡಲು ಅನುಮತಿ ನೀಡುವಂತೆ ಗಣಿ ಉದ್ಯಮಿಗಳು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಉಕ್ಕು ಕಾರ್ಖಾನೆಗಳಿಗೆ ಅದಿರು ಕೊರತೆಯಾಗಲಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ 2012ರಲ್ಲಿ ರಫ್ತಿನ ಮೇಲೆ ನಿಷೇಧ ಹೇರಿದೆ. ಉಕ್ಕು ಕಾರ್ಖಾನೆಗಳಿಗೇ ಅದಿರು ಮಾರಾಟ ಮಾಡುವಂತೆ ಷರತ್ತು ಹಾಕಿದೆ. ಆದರೆ, ಕಾರ್ಖಾನೆಗಳು ಅದಿರು ಖರೀದಿ ಮಾಡದೆ ಇರುವುದರಿಂದ 4.20 ಕೋಟಿ ಟನ್ ಗಣಿಗಳಲ್ಲೇ ಬಿದ್ದಿದೆ
ಎಂದು ‘ಫೆಡರೇಷನ್ ಆಫ್
ಇಂಡಿಯನ್ ಮೈನ್ ಇಂಡಸ್ಟ್ರಿಸ್’ (ಎಫ್‌ಐಎಂಐ) ಪ್ರಧಾನ ಕಾರ್ಯದರ್ಶಿ ಆರ್.ಕೆ. ಶರ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಅದಿರು ಉಂಡೆಗಳ ರಫ್ತಿಗೆ ರಾಜ್ಯ ಸರ್ಕಾರ ಒಪ್ಪಿದೆ. ಸುಪ್ರೀಂ ಕೋರ್ಟ್ ರಚಿಸಿರುವ ‘ಕೇಂದ್ರ ಉನ್ನತಾಧಿಕಾರ ಸಮಿತಿ’ (ಸಿಇಸಿ) ಈಗಾಗಲೇ ಶಿಫಾರಸು ಮಾಡಿದೆ. ಇದಕ್ಕೆ ಕೋರ್ಟ್ ಅನುಮತಿ ನೀಡಬೇಕಾಗಿದೆ ಅಷ್ಟೆ’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ವರ್ಷಕ್ಕೆ ನಾಲ್ಕು ಕೋಟಿ ಟನ್ ಅದಿರು ಉತ್ಪಾದನೆ ಮಾಡಲು ಒಪ್ಪಿಗೆ ಕೊಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಮೂರು ಕೋಟಿ ಟನ್ ಉತ್ಪಾದನೆಗೆ ಅನುಮತಿ ಸಿಕ್ಕಿತ್ತು. ಈಗ ಇನ್ನೂ 50 ಲಕ್ಷ ಟನ್ ಅಧಿಕ ಉತ್ಪಾದನೆಗೆ ಕೋರ್ಟ್ ಸಮ್ಮತಿ ನೀಡಿದೆ’ ಎಂದರು.
ಅದಿರು ರಫ್ತಿನ ಮೇಲೆ ಶೇಕಡಾ 30ರಷ್ಟು ಸುಂಕ ಹಾಕಲಾಗುತ್ತಿದೆ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಿರು ಬೆಲೆ ದುಬಾರಿಯಾಗುತ್ತಿದೆ. ಇದನ್ನು ಕಡಿಮೆ ಮಾಡುವಂತೆಯೂ ಅವರು ಆಗ್ರಹಿಸಿದರು.
ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಕಾರಣಕ್ಕೆ ಪರವಾನಗಿ ರದ್ದಾಗಿದ್ದ
51 ಗಣಿಗಳಲ್ಲಿ 11 ಗಣಿಗಳನ್ನು
ಹರಾಜು ಹಾಕಲಾಗಿದೆ. ಇದರಲ್ಲಿ ಎರಡು ಗಣಿಗಳು ಮಾತ್ರ
ಕಾರ್ಯಾರಂಭ ಮಾಡಿವೆ. ಉಳಿದವುಗಳಿಗೆ ಪರಿಸರ ಇಲಾಖೆ ನಿರಾಪೇಕ್ಷಣಾ ಪತ್ರ ಸಿಗಬೇಕು. ಈ ಪ್ರಕ್ರಿಯೆ ತ್ವರಿತಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
‘ಫಿಮಿ’ ಉಪಾಧ್ಯಕ್ಷ ಶಾಂತೇಶ್ ಗುರೆಡ್ಡಿ, ಹಿರಿಯ ಉಪಾಧ್ಯಕ್ಷ ಪಿ.ಕೆ. ಮೋಹಂತಿ, ಮಾಜಿ ಅಧ್ಯಕ್ಷರಾದ ನೂರ್ ಅಹಮದ್ ಹಾಗೂ ಎಸ್.ಕೆ. ಪಟ್ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಮೂರು ದಿನಗಳ ಪ್ರದರ್ಶನ
ಗಣಿಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ತಂತ್ರಜ್ಞಾನ ಆಕರ್ಷಣೆ ಉದ್ದೇಶದಿಂದ ಇಲ್ಲಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಫಿಮಿ ನಾಳೆಯಿಂದ ಮೂರು ದಿನಗಳ ‘ಮೈನಿಂಗ್, ಎಕ್ಸ್‌ಪ್ಲೋರೇಷನ್ ಕನ್‌ವೆನ್ಶನ್ ಟ್ರೇಡ್ ಷೋ’ ಏರ್ಪಡಿಸಿದೆ.
ಗಣಿ ಸಚಿವಾಲಯ ಪ್ರಾಯೋಜಿಸುತ್ತಿರುವ ಪ್ರದರ್ಶನಕ್ಕೆ, ಕೆನಡಾ, ದಕ್ಷಿಣ ಆಫ್ರಿಕಾ ಹಾಗೂ ಪೆರು ರಾಷ್ಟ್ರಗಳು ಸಹಕಾರ ನೀಡಲಿವೆ. ದೇಶ ಹಾಗೂ ವಿದೇಶಗಳ ಹಲವು ಕಂಪನಿಗಳು ಭಾಗವಹಿಸಲಿವೆ. ಸುಮಾರು 500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಖನಿಜ ಸಂಪತ್ತುಗಳ ಶೋಧ, ಅವುಗಳ ಪರಿಣಾಮಕಾರಿ ಬಳಕೆ, ಗಣಿಗಾರಿಕೆ ಕ್ಷೇತ್ರದಲ್ಲಿ ಇತ್ತೀಚೆಗೆ ಜಾರಿಗೊಳಿಸಲಾಗಿರುವ ಕಾನೂನುಗಳು, ನಿಯಮಗಳ ಜಾರಿಯಲ್ಲಿರುವ ಸವಾಲುಗಳು ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
No comments:
Post a Comment