ವಿಶೇಷ
ಅಮೆಜಾನ್ ಮತ್ತು ಲೇಖಕರ ಬಳಗದ ಮುಖಾಮುಖಿ
ಈ ವರ್ಷದ ಆರಂಭದಲ್ಲಿ ಅಮೆಜಾನ್ ಕಂಪೆನಿಯು ಹಚೆಟ್ ಪುಸ್ತಕ ಪ್ರಕಾಶಕರಿಂದ ಗ್ರಾಹಕರು ಪುಸ್ತಕ ಕೊಳ್ಳುವುದಕ್ಕೆ ಅಡ್ಡಿಪಡಿಸುವುದರಿಂದ ಮೊದಲಾದ ವಿವಾದ ಈಗ ತಾರಕಕ್ಕೇರಿದೆ. ಇದರ ವಿರುದ್ಧ ಲೇಖಕರು ಒಗ್ಗಟ್ಟಾಗಿ ಪ್ರತಿಭಟಿಸುತ್ತಿದ್ದಾರೆ. ಪ್ರಕಾಶಕರು ನಡೆಸುವ ಪುಸ್ತಕಗಳ ಸಗಟು ಖರೀದಿ ವ್ಯವಹಾರಗಳಲ್ಲಿ ತಾವು ದಾಳಗಳಾಗಿ ಬಳಕೆ ಆಗುತ್ತಿರುವುದರ ವಿರುದ್ಧ ಲೇಖಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ‘ಆಥರ್ಸ್ ಯುನೈಟೆಡ್’ ಹೆಸರಿನಲ್ಲಿ ಒಂದುಗೂಡಿ, ಅಮೆಜಾನ್ನ ನಡವಳಿಕೆಗೆ ವಿರೋಧ ತೋರಿಸಿದ್ದಾರೆ.
ಪುಸ್ತಕ ಮಾರುಕಟ್ಟೆಯ ಏಕಸ್ವಾಮ್ಯಕ್ಕೆ ಅಮೆಜಾನ್ ಪ್ರಯತ್ನಿಸುತ್ತಿರುವ ತಂತ್ರಗಳು ಅಕ್ರಮ ಎಂದು ವಾದಿಸುತ್ತಿರುವ ನೂರಾರು ಲೇಖಕರು, ಅಮೆರಿಕದ ನ್ಯಾಯಾಂಗ ಇಲಾಖೆಯು ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಬುಕರ್ ಪ್ರಶಸ್ತಿ ಪಡೆದಿ ರುವ ಫಿಲಿಪ್ ರೋಥ್, ಒರ್ಹಾನ್ ಪಮುಕ್, ಸಲ್ಮಾನ್ ರಶ್ದಿ, ವಿ.ಎಸ್.ನೈಪಾಲ್, ಮಿಲನ್ ಕುಂದೆರಾ ಮುಂತಾದ ಪ್ರಸಿದ್ಧ ಲೇಖಕರೂ ಇದ್ದಾರೆ.
ಅಮೆರಿಕದಲ್ಲಿ ಕಾಗದ ಪುಸ್ತಕೋದ್ಯಮದ ಅರ್ಧದಷ್ಟನ್ನು ನಿಯಂತ್ರಿಸುವ ಹಾಗೂ ಇ–ಪುಸ್ತಕದ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಅಮೆಜಾನ್ನಂಥ ಕಂಪೆನಿಯ ಪುಸ್ತಕ ಮಾರಾಟದ ಹಕ್ಕು ಮತ್ತು ಕರ್ತವ್ಯಗಳೇನು ಎಂಬುದರ ಕುರಿತು ಸಾಹಿತ್ಯದ ಬ್ಲಾಗ್ಗಳಲ್ಲಿ ನಿರಂತರ ಚರ್ಚೆಗಳು ಸಾಗಿವೆ. ಕೆಲವು ಲಿಟರರಿ ಏಜೆಂಟರು ಲೇಖಕರನ್ನು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಂಪರ್ಕಿಸುತ್ತಲೂ ಇದ್ದಾರೆ.
‘ಅಮೆಜಾನ್ ಇಂಥ ನಡೆಗಳನ್ನು ನಿಲ್ಲಿಸದಿದ್ದರೆ ಅಮೆರಿಕದಲ್ಲಿ ಸಾಹಿತ್ಯಕ ಸಂಸ್ಕೃತಿ ನಾಶವಾಗುತ್ತದೆ’ ಎಂದು ಒಬ್ಬ ಲಿಟರರಿ ಏಜೆಂಟ್ ಅಭಿಪ್ರಾಯ ಪಡುತ್ತಾನೆ. ‘ಪುಸ್ತಕಗಳು ನಮಗೆ ಅತಿ ಆಪ್ತ. ನಾವು ವಹಿವಾಟು ಆರಂಭಿಸಿದ್ದೇ ಪುಸ್ತಕಗಳಿಂದ. ಕಿಕ್ಕಿರಿದಿರುವ ಡಿಜಿಟಲ್ ಮಾಧ್ಯಮದಲ್ಲಿ ಪುಸ್ತಕಗಳ ಹಾಗೂ ಲೇಖಕರ ಸೇವೆ ಮಾಡುವುದು ನಮಗೂ ಬಹಳ ಮುಖ್ಯ ಎಂದು ಕಿಂಡಲ್ ಕಂಪೆನಿಯ ಉಪಾಧ್ಯಕ್ಷ ರೂಸ್ ಗ್ರಾಂಡಿನೆಟ್ಟಿ ಜುಲೈನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಈ ಬೆಳವಣಿಗೆ ಕುರಿತು ಅಮೆಜಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆಜಾನ್ನ ಕಡು ವಿಮರ್ಶಕರೂ ಗುಟ್ಟೆನ್ಬರ್ಗ್ ಬಳಿಕ ಅಮೆಜಾನ್, ಪುಸ್ತಕ ವಹಿವಾಟಿನ ಲೋಕದಲ್ಲಿ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿರುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಈ ಶಕ್ತಿಯನ್ನು ಯಾವ ರೀತಿ ಅದು ಬಳಸಿಕೊಳ್ಳತೊಡಗಿದೆ ಎಂಬುದು ಪ್ರಶ್ನೆ ಎಂದೂ ಅವರು ಸೇರಿಸುತ್ತಾರೆ. ಅಮೆಜಾನ್ ಮೊದಲು ಹೀಗಿರಲಿಲ್ಲ ಎಂಬುದು ಅವರ ಅಭಿಪ್ರಾಯ.
ಮೇ ತಿಂಗಳಲ್ಲಿ ಬಿಡುಗಡೆಯಾದ ಡೇನಿಯಲ್ ಶುಲ್ಮನ್ ಅವರ ‘ಸನ್ಸ್ ಆಫ್ ವಿಚಿತ್’ ಪುಸ್ತಕಕ್ಕೆ ಅಮೆಜಾನ್ ಆರಂಭದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಿತು. ಈಗದು ಆ ಪುಸ್ತಕದ ಮೇಲೆ ರಿಯಾಯಿತಿ ನೀಡುವುದನ್ನೇ ನಿಲ್ಲಿಸಿಬಿಟ್ಟಿದೆ. ಅಲ್ಲದೆ ಬೇಡಿಕೆ ಸಲ್ಲಿಸಿದ ಸುದೀರ್ಘ ಮೂರು ವಾರಗಳ ಬಳಿಕ ಪುಸ್ತಕಗಳು ಗ್ರಾಹಕರ ಕೈಸೇರುತ್ತವೆ.
ಇನ್ನೊಂದು ಉದಾಹರಣೆ ನೀಡುವುದಾದರೆ, ಅದೇ ಪ್ರಕಾಶನ ಸಂಸ್ಥೆಯ ರಾಜಕೀಯ ಆಯಾಮ ಇರುವ ‘ದಿ ವೇ ಫಾರ್ವರ್ಡ್’ ಎಂಬ ಮತ್ತೊಂದು ಪುಸ್ತಕವನ್ನೂ ಇದೇ ರೀತಿ ‘ನಡೆಸಿ’ಕೊಳ್ಳಲಾಗಿದೆ. ಮೊದಲು ‘ದಿ ವೇ..’ ಪುಸ್ತಕಕ್ಕೆ ಗ್ರಾಹಕರು ಬೇಡಿಕೆ ಸಲ್ಲಿಸಿದರೆ ಅದನ್ನು ಅಮೆಜಾನ್ ಸ್ವೀಕರಿಸುತ್ತಿರಲಿಲ್ಲ. ಪುಸ್ತಕ ಮಾರಾಟ ಆಗತೊಡಗಿದ ಕೂಡಲೇ, ಒಮ್ಮೆಲೇ ಅಮೆಜಾನ್ ‘ದಿ ವೇ..’ ಪುಸ್ತಕಕ್ಕೆ ಸತತವಾಗಿ ಶೇ 25ರಷ್ಟು ರಿಯಾಯಿತಿ ನೀಡತೊಡಗಿತು. ಅದೇ ಪುಸ್ತಕದ ಸಾಗಣೆಗೂ ವೇಗ ಬಂತು. ಅಮೆಜಾನ್ನ ಮಾರಾಟದ ಪಟ್ಟಿಯಲ್ಲಿ ಸಹಜವಾಗಿ ‘ಸನ್ಸ್..’ ಪುಸ್ತಕಕ್ಕಿಂತ ‘ದಿ ವೇ..’ ಎತ್ತರಕ್ಕೇರಿತು. ‘ದಿ ವೇ’ ಪುಸ್ತಕಕ್ಕೆ ಏಕೆ ವಿಶೇಷ ‘ಮರ್ಯಾದೆ’ ಕೊಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಅಮೆಜಾನ್ ವಕ್ತಾರರು ಸಿದ್ಧರಿಲ್ಲ.
ಅದೇ ರೀತಿ ಹಚೆಟ್ನ ವಕ್ತಾರೆ ಕೂಡ ಈ ಕುರಿತು ಗಪ್ಚಿಪ್ ಆಗಿದ್ದಾರೆ. ‘ಸರಿಯೋ, ತಪ್ಪೋ ಸರ್ಕಾರಗಳು ನೈತಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಪುಸ್ತಕಗಳನ್ನು ನಿಷೇಧಿಸುತ್ತವೆ. ಆದರೆ ಪ್ರಕಾಶಕರು ಯಾವುದನ್ನು ಪ್ರಕಟಿಸಬೇಕು, ಲೇಖಕರು ಏನು ಬರೆಯಬೇಕು, ಓದುಗರು ಯಾವ ಪುಸ್ತಕವನ್ನು ಕೊಳ್ಳಬೇಕು ಎಂಬುದನ್ನು ನಿರ್ದೇಶಿಸುವಂತೆ ಅಮೆಜಾನ್ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲಿಕ್ಕೆಂದು ‘ನಿಷೇಧ’ವನ್ನು ಬಳಕೆ ಮಾಡುತ್ತಿದೆ’ ಇದು ಪ್ರಶಸ್ತಿ ವಿಜೇತ ಕೃತಿಯಾದ
‘ದಿ ಲೆಫ್ಟ್ ಹ್ಯಾಂಡ್ ಆಫ್ ಡಾರ್ಕ್ನೆಸ್’ನ ಲೇಖಕ ಉರ್ಸುಲ ಕೆ ಲೆ ಗುನ್ ಅವರ ಅಭಿಪ್ರಾಯ.
‘ದಿ ಲೆಫ್ಟ್ ಹ್ಯಾಂಡ್ ಆಫ್ ಡಾರ್ಕ್ನೆಸ್’ನ ಲೇಖಕ ಉರ್ಸುಲ ಕೆ ಲೆ ಗುನ್ ಅವರ ಅಭಿಪ್ರಾಯ.
ಪತ್ತೇದಾರಿ ಪುಸ್ತಕಗಳ ಲೇಖಕ ಡಗ್ಲಸ್ ಪ್ರೆಸ್ಟನ್, ಮುಂಚೂಣಿಯಲ್ಲಿದ್ದು, ‘ಆಥರ್ಸ್ ಯುನೈಟೆಡ್’ ಪರವಾಗಿ ಲೇಖಕ ಲೇಖಕಿಯರನ್ನು ಸಂಘಟಿಸುತ್ತಿ ದ್ದಾರೆ. ಇನ್ನೂ ಹಲವು ಲೇಖಕರು ಪ್ರವಾಸದಲ್ಲಿರುವುದರಿಂದ ಹಾಗೂ ಇಮೇಲ್ಗಳನ್ನು ಗಮನಿಸದಿರುವುದರಿಂದ ಅವರೆಲ್ಲ ಈ ಪ್ರತಿಭಟನೆಯಲ್ಲಿ ಸದ್ಯಕ್ಕೆ ಪಾಲ್ಗೊಂಡಿರುವುದಿಲ್ಲ. ಅಮೆಜಾನ್ ಈ ತಪ್ಪನ್ನು ಸರಿಪಡಿಸಿಕೊಂಡು ಎಲ್ಲಾ ಪುಸ್ತಕಗಳ ಬಗ್ಗೆಯೂ ಸಹಜವಾಗಿ ನಡೆದುಕೊಳ್ಳಬೇಕು ಎಂಬ ಸಂಧಾನದ ಪ್ರಯತ್ನ ಒಂದು ಕಡೆಗೆ ನಡೆದಿದ್ದರೆ, ಇನ್ನೊಂದು ಕಡೆಗೆ ಅಮೆಜಾನ್ ಗೈದಿರುವ ನಂಬಿಕೆಯ ಉಲ್ಲಂಘನೆಯ ವಿಚಾರಣೆ ನಡೆಸುವಂತೆ ಮನವಿ ಮಾಡಿ ಅಮೆರಿಕದ ನ್ಯಾಯಾಂಗ ವ್ಯವಸ್ಥೆಗೆ ಪತ್ರ ಬರೆಯುವ ಪ್ರಕ್ರಿಯೆ ಸಹ ಮೊದಲ್ಗೊಂಡಿದೆ.
ಎಲ್ಲರಿಗೂ ತಲುಪಬೇಕು
ಈ ವಿದ್ಯಮಾನ, ಪ್ರತಿಭಟನೆಗಳಿಂದ ಅಮೆಜಾನ್ ಹೆಚ್ಚು ವಿಚಲಿತವಾದಂತಿಲ್ಲ. ಅದು ತಾನು ಇ–ಪುಸ್ತಕ ಗಳನ್ನು ಸುಲಭ ಬೆಲೆಗೆ ಒದಗಿಸುವ ಪ್ರಯತ್ನದಲ್ಲಿದ್ದು, ಅದರ ಮೂಲಕ ಪ್ರಕಾಶಕರು ಹಾಗೂ ಲೇಖಕರಿಗೆ ಮುಂದೆ ದೊಡ್ಡ ಪ್ರಮಾಣದ ಲಾಭವೇ ಆಗಲಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಹಚೆಟ್ ಹಾಗೂ ಅದರ ಲೇಖಕರ ಬಳಗದ ಜತೆಗಿನ ಈ ಸಂಘರ್ಷವು ಸಾರ್ವಜನಿಕ ಸಂಪರ್ಕದ ದೃಷ್ಟಿಯಿಂದ ತಕ್ಷಣಕ್ಕೆ ಅಮೆಜಾನ್ಗೆ ಕೊಂಚ ಹೊಡೆತ ಕೊಡಬಹುದು. ಅಲ್ಲದೇ ಷೇರು ಮಾರುಕಟ್ಟೆಯಲ್ಲಿ ಅಮೆಜಾನ್ನ ಷೇರುಗಳ ಸಾಧನೆಯೂ ಈ ವರ್ಷ ಅಷ್ಟೇನೂ ಉತ್ತಮವಾಗಿಲ್ಲ.
ಈ ವಿದ್ಯಮಾನ, ಪ್ರತಿಭಟನೆಗಳಿಂದ ಅಮೆಜಾನ್ ಹೆಚ್ಚು ವಿಚಲಿತವಾದಂತಿಲ್ಲ. ಅದು ತಾನು ಇ–ಪುಸ್ತಕ ಗಳನ್ನು ಸುಲಭ ಬೆಲೆಗೆ ಒದಗಿಸುವ ಪ್ರಯತ್ನದಲ್ಲಿದ್ದು, ಅದರ ಮೂಲಕ ಪ್ರಕಾಶಕರು ಹಾಗೂ ಲೇಖಕರಿಗೆ ಮುಂದೆ ದೊಡ್ಡ ಪ್ರಮಾಣದ ಲಾಭವೇ ಆಗಲಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಹಚೆಟ್ ಹಾಗೂ ಅದರ ಲೇಖಕರ ಬಳಗದ ಜತೆಗಿನ ಈ ಸಂಘರ್ಷವು ಸಾರ್ವಜನಿಕ ಸಂಪರ್ಕದ ದೃಷ್ಟಿಯಿಂದ ತಕ್ಷಣಕ್ಕೆ ಅಮೆಜಾನ್ಗೆ ಕೊಂಚ ಹೊಡೆತ ಕೊಡಬಹುದು. ಅಲ್ಲದೇ ಷೇರು ಮಾರುಕಟ್ಟೆಯಲ್ಲಿ ಅಮೆಜಾನ್ನ ಷೇರುಗಳ ಸಾಧನೆಯೂ ಈ ವರ್ಷ ಅಷ್ಟೇನೂ ಉತ್ತಮವಾಗಿಲ್ಲ.
ಹಿಂದೆ ಕೂಡ ಹಚೆಟ್ ಇ–ಪುಸ್ತಕಗಳ ಬೆಲೆ ಏರಿಕೆ ವಿರೋಧಿಸಿ ಐದಾರು ಪ್ರಮುಖ ಪ್ರಕಾಶನ ಸಂಸ್ಥೆಗಳನ್ನು ಎದುರಿಸಿ ಕಾನೂನು ಹೋರಾಟ ನಡೆಸಿತ್ತು. ಆದರೆ ಅದು ಫಲ ನೀಡಿರಲಿಲ್ಲ. ಹಿಂದಿನ ಸಲ ನಡೆದ ಒಂದು ಕಾನೂನು ಸಮರದಲ್ಲಿ ಅದೃಷ್ಟ ಅಮೆಜಾನ್ ಪರವಾಗಿತ್ತು. ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ ‘ಇಬ್ಬರು ಪ್ರಕಾಶಕರು ಅವರ ನಡುವೆ ವಕೀಲರನ್ನು ಕೂಡಿಸಿ ಕೊಳ್ಳದೇ ಒಟ್ಟಿಗೆ ಊಟ ಮಾಡುವ ಸ್ಥಿತಿಯಲ್ಲಿ ಇಲ್ಲ’ ಎನ್ನುತ್ತಾರೆ ಲಿಟರರಿ ಏಜೆಂಟ್ ವೈಲಿ.>> >>
ಬಾಳೆ ಚಾಕಲೇಟ್ ಕಂಪು
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ವರದರಾಜಪುರಂ ಗ್ರಾಮದ ಓಣಿಯೊಳಗೆ ಸಾಗುತ್ತಿದ್ದರೆ, ಬಾಳೆಹಣ್ಣು ಹಾಗೂ ಚಾಕಲೇಟ್ ಪರಿಮಳ ಒಟ್ಟಿಗೇ ತೇಲಿ ಬರುತ್ತವೆ. ಇನ್ನು ಸ್ವಲ್ಪ ಮುಂದಕ್ಕೆ ಹೋದರೆ, ಘಟಕವೊಂದರಲ್ಲಿ ಬಾಳೆಹಣ್ಣನ್ನು ಚಾಕಲೇಟ್ ಆಗಿ ಮಾರ್ಪಡಿಸುವ ಕೆಲಸದಲ್ಲಿ ಜನರು ನಿರತರಾಗಿರುವುದು ಕಾಣಿಸುತ್ತದೆ. ಒಣಗಿದ ಬಾಳೆಹಣ್ಣನ್ನು ಜೇನುತುಪ್ಪದ ಜತೆ ಬೆರೆಸುವುದು, ಸಿದ್ಧಗೊಂಡ ಚಾಕಲೇಟ್ಗಳನ್ನು ಪ್ಯಾಕ್ ಮಾಡುವ ಗಡಿಬಿಡಿ ನಡೆದಿರುತ್ತದೆ. ದೇಶದಲ್ಲಿ ಎಲ್ಲೂ ಇಲ್ಲದಂಥ ವಿಶಿಷ್ಟ ವಿಧಾನದ ಮೂಲಕ ಬಾಳೆಹಣ್ಣಿನ ಚಾಕಲೇಟ್ ಒಣಗಿಸುವುದು ಈ ಘಟಕದ ಹೆಗ್ಗಳಿಕೆ.
ಬಾಳೆಹಣ್ಣನ್ನು ಹಾಗೆಯೇ ಸೇವಿಸುವುದು ಗೊತ್ತು. ಆದರೆ ಅದನ್ನು ರೂಪಾಂತರಿಸಿ ಗ್ರಾಹಕರ ಕೈಗಿಡಲು ತಮಿಳುನಾಡಿನ ತೊಟ್ಟಿಯಂ ಪ್ರದೇಶದ ಬಾಳೆ ಬೆಳೆಗಾರರು ನಿರ್ಧರಿಸಿದ ಪರಿಣಾಮವೇ ಈ ಬಾಳೆಹಣ್ಣಿನ ಚಾಕಲೇಟ್. ನೋಡಲು ಬಲು ಸುಲಭ; ಆದರೆ ಇಡೀ ಪ್ರಕ್ರಿಯೆ ತುಂಬ ಕ್ಲಿಷ್ಟಕರ. ಚೆನ್ನಾಗಿ ಹಣ್ಣಾದ ಬಾಳೆಯನ್ನು ಸೌರಶಕ್ತಿ ಆಧರಿತ ಡ್ರೈಯರ್ನಲ್ಲಿ ಇಟ್ಟು, ಚಾಕಲೇಟ್ ಮಾಡಲಾಗುತ್ತದೆ.
ಇನ್ನೂರು ರೈತರನ್ನು ಒಳಗೊಂಡಿರುವ ‘ತೊಟ್ಟಾಯಂ ಬಾಳೆ ಬೆಳೆಗಾರರ ಸಂಘಟನೆ’ಯ ವ್ಯಾಪ್ತಿಗೆ ಸುಮಾರು 4,000 ಎಕರೆ ವಿಸ್ತೀರ್ಣದ ಬಾಳೆ ತೋಟಗಳು ಬರುತ್ತವೆ. ಸಣ್ಣ ಹಾಗೂ ಮಧ್ಯಮ ರೈತರು ಇದರಲ್ಲಿದ್ದಾರೆ.
ಕಾವೇರಿ ನದಿ ವಿತರಣಾ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಸಿಗುತ್ತದೆ. ಬಾಳೆ ಇಳುವರಿ ಕಟಾವು ಶುರುವಾಗುತ್ತಿರುವಂತೆ ಮಾರುಕಟ್ಟೆಯಲ್ಲಿ ಆಗುವ ಸಣ್ಣ ಏರಿಳಿತವೂ ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತದೆ.
ಆದರೆ ಇದೆಲ್ಲಕ್ಕಿಂತ ಅವರನ್ನು ಕಾಡುವುದು ಪ್ರಾಕೃತಿಕ ವಿಕೋಪ. ಕೆಲವೊಮ್ಮೆ ಬೀಸುವ ಬಿರುಗಾಳಿ, ತಾಪಮಾನ ಏರಿಕೆ, ವಾತಾವರಣದಲ್ಲಿ ಏರುಪೇರು ಇತ್ಯಾದಿಗಳಿಂದ ಬಾಳೆಯನ್ನು ಕಟಾವು ಮಾಡಿ ಹಣ್ಣು ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಇದು ಉತ್ತಮ ಗುಣಮಟ್ಟದ ಹಣ್ಣು ಆಗಿರದ ಕಾರಣದಿಂದಾಗಿ, ರೈತರಿಗೆ ಸಿಗುವ ಆದಾಯ ಕೂಡ ಕಡಿಮೆಯಾಗುತ್ತದೆ. ಸಂಗ್ರಹಿಸಿಟ್ಟು, ಒಳ್ಳೆಯ ದರ ಇದ್ದಾಗ ಮಾರಾಟ ಮಾಡಲು ಅವರಿಗೆ ಬೃಹತ್ ಪ್ರಮಾಣದ ಶೀತಲಗೃಹಗಳ ಸೌಲಭ್ಯ ಇಲ್ಲ. ಇವೆಲ್ಲ ತೊಂದರೆ ಇಲ್ಲದೇ ಒಳ್ಳೆಯ ಇಳುವರಿ ಸಿಕ್ಕಾಗ, ಅದು ಒಮ್ಮೆಲೇ ಮಾರುಕಟ್ಟೆಗೆ ಬಂದರೆ ಬೆಲೆ ದಿಢೀರೆಂದು ಕುಸಿದುಬಿಡುತ್ತದೆ.
ಇದನ್ನೆಲ್ಲ ಬಾಳೆ ಬೆಳೆಗಾರರ ಸಂಘ ಪರಿಶೀಲಿಸಿತು. ಯಾವುದೇ ಪರಿಸ್ಥಿತಿಯಲ್ಲೂ ಬಾಳೆಗೆ ಒಳ್ಳೆಯ ಬೆಲೆ ಬರಬೇಕೆಂದರೆ ಅದರ ಮೌಲ್ಯವರ್ಧನೆ ಅಗತ್ಯ. ಇದನ್ನೇ ಮುಂದಿಟ್ಟುಕೊಂಡು, ‘ಮೌಲ್ಯವರ್ಧನೆ ಹೇಗೆ’ ಎಂಬ ಪ್ರಶ್ನೆಗೆ ಬೆಳೆಗಾರರು ಹುಡುಕಾಟ ನಡೆಸಿದರು.
ಅವರ ಎದುರು ಎರಡು ಆಯ್ಕೆಗಳು ಬಂದವು. ಹಣ್ಣನ್ನು ಒಣಗಿಸುವುದು ಹಾಗೂ ಅದರಿಂದ ಚಾಕಲೇಟ್ ಮಾಡುವುದು. ಮಾರಾಟವಾಗದ ಹಣ್ಣನ್ನು ಸಹ ಇದೇ ರೀತಿಯಲ್ಲಿ ಮೌಲ್ಯವರ್ಧನೆ ಮಾಡುವುದು ಸಂಘದ ಆದ್ಯತೆಯಾಗಿತ್ತು. ಬಾಳೆಯನ್ನು ಒಣಗಿಸಲು ಹಾಗೂ ಚಾಕಲೇಟ್ ಮಾಡಲು ಡ್ರೈಯರ್ (ಒಣಗಿಸುವ ಸಾಧನ) ಬೇಕು. ಇದರ ದರ ಎಂಟು ಲಕ್ಷ ರೂಪಾಯಿ! ರೈತರ ಉತ್ಸಾಹ ನೋಡಿದ ಕಂಪೆನಿಯೊಂದು, ಈ ಡ್ರೈಯರ್ ದೇಣಿಗೆಯಾಗಿ ಕೊಟ್ಟಿತು.
‘ರೈತರಿಂದ ಬಾಳೆಹಣ್ಣು ಖರೀದಿಸಿ, ಅದನ್ನು ಮೌಲ್ಯವರ್ಧನೆ ಮಾಡುವುದು ನಮ್ಮ ಉದ್ದೇಶ. ಆದರೆ ಈ ಖರೀದಿ ಪ್ರಕ್ರಿಯೆಯಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ. ಸಂಘದ ಸದಸ್ಯರು ನೇರವಾಗಿ ರೈತರ ತೋಟಗಳಿಗೆ ಹೋಗಿ, ಅಲ್ಲೇ ಚರ್ಚೆ ಮಾಡಿ ಪರಸ್ಪರ ಒಪ್ಪಿಗೆಯಾದ ದರದಲ್ಲಿ ಬಾಳೆಗೊನೆ ಖರೀದಿಸಿ ತರುತ್ತಾರೆ’ ಎಂದು ತಮಿಳುನಾಡು ಬಾಳೆ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಅಜಿತನ್ ಹೇಳುತ್ತಾರೆ.
ಬಾಳೆಹಣ್ಣನ್ನು ಹೀಗೆ ಡ್ರೈಯರ್ನಲ್ಲಿ ಒಣಗಿಸಿ, ಮೌಲ್ಯವರ್ಧನೆ ಮಾಡುವ ವಿಧಾನ ದೇಶದಲ್ಲೇ ಮೊದಲನೆಯದು. ವಿದ್ಯುತ್ ಅನ್ನು ಅವಲಂಬಿಸದೇ, ಸೌರಶಕ್ತಿ ಆಧರಿತ ಡ್ರೈಯರ್ನಲ್ಲಿ ಹಣ್ಣು ಒಣಗಿಸುವುದು ಇದರ ವಿಶೇಷ.
ಪಾಲಿಕಾರ್ಬೊನೇಟ್ ಹಾಳೆಗಳಿಂದ ನಿರ್ಮಿಸಿದ ಹಸಿರುಮನೆಯೊಂದಲ್ಲಿ ಬಾಳೆಹಣ್ಣನ್ನು ಮೊದಲು ಒಣಗಿಸಲಾಗುತ್ತದೆ. ಮೂರು ದಿನಗಳ ಬಳಿಕ ಇದರ ಒಟ್ಟು ತೂಕ ನಾಲ್ಕನೇ ಒಂದು ಭಾಗಕ್ಕೆ ಇಳಿಯುತ್ತದೆ. ಈಗ ಇದನ್ನು ಸೋಲಾರ್ ಡ್ರೈಯರ್ನೊಳಗೆ ಜೋಡಿಸಿಡಲಾಗುತ್ತದೆ.
ಬಾಳೆಹಣ್ಣನ್ನು ತೆರೆದ ವಾತಾವರಣದಲ್ಲಿ ಇಟ್ಟಾಗ, ಅದರಲ್ಲಿರುವ ನೀರಿನ ಅಂಶ ಬೇಗನೇ ಕೊಳೆಯುವಂತೆ ಮಾಡಿಬಿಡುತ್ತದೆ. ಆದರೆ ಡ್ರೈಯರ್ನಲ್ಲಿ ಸಮಾನ ಉಷ್ಣತೆಯನ್ನು ನಿಗದಿಪಡಿಸುವುದರಿಂದ, ಅನಗತ್ಯವಾದ ನೀರಿನ ಅಂಶ ಒಣಗಿಹೋಗುತ್ತದೆ. ಅಂತಿಮವಾಗಿ ಸಿಗುವ ಉತ್ಪನ್ನ, ತುಸು ಹಸಿಯಾಗಿದ್ದರೂ ಹೆಚ್ಚು ದಿನ ಬಾಳಿಕೆ ಬರುತ್ತದೆ. ಇದನ್ನು ಹೀಗೆಯೇ ಸೇವಿಸಬಹುದು; ಅಥವಾ ಇದಕ್ಕೆ ಜೇನುತುಪ್ಪ ಲೇಪಿಸಿ, ಇನ್ನೊಂದಷ್ಟು ಒಣಗಿಸಿದರೆ ಬಾಳೆಹಣ್ಣಿನ ಚಾಕಲೇಟ್ ಸಿದ್ಧ.
ತೊಟ್ಟಾಯಂ ಪ್ರದೇಶವು ವಿವಿಧ ಬಾಳೆ ತಳಿಗಳಿಗೆ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಬಗೆಬಗೆ ಸವಿಯ ಚಾಕಲೇಟ್ ಉತ್ಪಾದಿಸಲು ಸಾಧ್ಯವಾಗಿದೆ. ಸಾಂಪ್ರದಾಯಿಕ ತಳಿಗಳಾದ ಪೂವನ್, ಕರ್ಪೂರವಲ್ಲಿ, ಏಲಕ್ಕಿ ಇತರ ತಳಿಗಳನ್ನು ಚಾಕಲೇಟ್ಗೆ ಒಗ್ಗಿಸಲಾಗಿದೆ. ‘ಮೂರು ದಿನಕ್ಕೆ 350 ಕಿಲೋ ಬಾಳೆಹಣ್ಣು ಒಣಗಿಸಲಾಗುತ್ತಿದೆ. ನಮ್ಮಲ್ಲಿ ಈಗ ಬಗೆಬಗೆಯ ಬಾಳೆ ಚಾಕಲೇಟ್ ಸಿದ್ಧಗೊಳ್ಳುತ್ತಿವೆ. ಇಷ್ಟಕ್ಕೇ ನಾವು ಸುಮ್ಮನೇ ಕುಳಿತಿಲ್ಲ. ಈ ಉದ್ಯಮಕ್ಕೆ ನಾವೀನ್ಯದ ಸ್ಪರ್ಶ ನೀಡಬೇಕಿದೆ. ಪ್ಯಾಕೇಜಿಂಗ್, ಪರಿಮಳ ಸೇರ್ಪಡೆ, ಬೇರೆ ಬಗೆಯ ರುಚಿಯ ಲೇಪನ... ಹೀಗೆ.
ಮಾರುಕಟ್ಟೆಯಲ್ಲಿ ನಿಧಾನಕ್ಕೆ ಬೇಡಿಕೆ ಕುದುರಿಸಿಕೊಳ್ಳುತ್ತಿರುವ ಬಾಳೆ ಚಾಕಲೇಟ್ಗೆ ಹೊಸ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಬೇಕಿದೆ’ ಎನ್ನುತ್ತಾರೆ, ಮಾರುಕಟ್ಟೆ ವಿಭಾಗದ ನಿರ್ವಾಹಕ ಮಣಿ ಕುಟ್ಟಿ. ಪ್ರಸ್ತುತ ಈ ಒಣಹಣ್ಣು ಹಾಗೂ ಚಾಕಲೇಟ್ಗಳನ್ನು ಮುಂಬೈ, ಚೆನ್ನೈ, ದೆಹಲಿ ಹಾಗೂ ಇತರ ಬೃಹತ್ ನಗರಗಳ ಮಾರುಕಟ್ಟೆಗಳಿಗೆ ಕಳಿಸಲಾಗುತ್ತಿದೆ. ಬೇಡಿಕೆಯೂ ಹೆಚ್ಚುತ್ತಿರುವುದು ರೈತರಲ್ಲಿ ಹೊಸ ಭರವಸೆ ಮೂಡಿದೆ.
ಹನಿ ನೀರಾವರಿ, ಅಂಗಾಂಶ ಕೃಷಿಯಂಥ ತಂತ್ರಜ್ಞಾನದಿಂದಾಗಿ ಬಾಳೆ ಬೆಳೆಯುವವರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ವರ್ಷಪೂರ್ತಿ ಬೆಳೆಯಬಹುದಾದ ಈ ಹಣ್ಣಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಬೆಲೆ ಕುಸಿದಾಗ ಪರಿಹಾರಕ್ಕೆ ಹುಡುಕಾಡುವ ಬದಲಿಗೆ ಸದಾ ಕಾಲ ರೈತರಿಗೆ ಆದಾಯ ಭದ್ರತೆ ನೀಡುವ ಇಂಥ ಯೋಜನೆಗಳು ಇನ್ನಷ್ಟು ಬರಬೇಕಿದೆ.
ಬಹುಭಾಷಾ ವಿಶಾರದೆ ಮುಸ್ಲಿಂ ಮಹಿಳೆ ಸಂಸ್ಕೃತ ವಿಭಾಗದ ಮುಖ್ಯಸ್ಥೆ
ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಹಿಂದೆ ‘ಪೂರ್ವದ ಆಕ್ಸ್ಫರ್ಡ್’ ಎಂದೇ ಖ್ಯಾತಿಗಳಿಸಿದ ಅಲಹಾಬಾದ್ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಅಧ್ಯಕ್ಷರ ಕಚೇರಿ ಮುಂದೆ ಹಾದುಹೋಗುವವರು ಎರಡೆರಡು ಸಾರಿ ನಾಮಫಲಕದ ಮೇಲೆ ಕಣ್ಣಾಡಿಸಿಯೇ ಮುಂದಡಿ ಇರಿಸುತ್ತಾರೆ.
ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಬರೆದಿರುವ ‘ಕಿಶ್ವರ್ ಜಬೀನ್ ನಸ್ರೀನ್’ ಎಂಬ ಹೆಸರನ್ನು ಮತ್ತೆ ಮತ್ತೆ ಓದಿ ಖಾತರಿ ಪಡಿಸಿಕೊಂಡು ಅಚ್ಚರಿಗೊಳ್ಳುತ್ತಾರೆ.
ಆರನೇ ತರಗತಿಯಿಂದಲೇ ಸಂಸ್ಕೃತ ಅಭ್ಯಾಸ ಮಾಡಿರುವ ನಸ್ರೀನ್, ಬಹುಭಾಷಾ ವಿಶಾರದೆ. ಅವರು ಅನುಸರಿಸುವ ಧರ್ಮ ಅವರ ಭಾಷಾ ಕಲಿಕೆಗೆ ಮತ್ತು ಕಲಿಸುವಿಕೆಗೆ ಯಾವತ್ತೂ ತೊಡಕಾಗಿಲ್ಲ.
‘ಸಂಸ್ಕೃತ ನನಗೆ ನೆಚ್ಚಿನ ವಿಷಯ, ಇದು ಯಾವತ್ತೂ ಕಠಿಣ ಎನಿಸಲಿಲ್ಲ’ ಎನ್ನುವ ನಸ್ರೀನ್, ಈ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲ ಮುಸ್ಲಿಂ ಮಹಿಳೆ. ಅಲಹಾಬಾದ್ ಸಂಸ್ಕೃತ ವಿಭಾಗಕ್ಕೆ ಬೋಧಕಿಯಾಗಿ ಸೇರುವುದಕ್ಕೂ ಕೆಲವು ಕಾಲ ಮೊದಲೇ ಅವರು ಸಂಸ್ಕೃತದಲ್ಲಿ ಪಿಎಚ್.ಡಿ ಪದವಿ ಗಳಿಸಿದವರು.
‘ಅನೇಕರಿಗೆ ಮುಸ್ಲಿಂ ಹುಡುಗಿಯೊಬ್ಬಳು ಸಂಸ್ಕೃತ ಕಲಿಯುತ್ತಿದ್ದದ್ದು ಕೌತಕವಾಗಿತ್ತು. ಮೊದಮೊದಲು ತರಗತಿಯಲ್ಲಿ ನನ್ನನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು’ ಎನ್ನುತ್ತಾರೆ ನಸ್ರೀನ್.
‘ಸಂಸ್ಕೃತ ಕಲಿಕೆಗೆ ನನ್ನ ಕುಟುಂಬದಿಂದ ಯಾವುದೇ ಅಡ್ಡಿ ಎದುರಾಗಲಿಲ್ಲ. ನನ್ನ ಪೋಷಕರು ಸಂಸ್ಕೃತವನ್ನು ಧರ್ಮದ ದೃಷ್ಟಿಯಿಂದ ನೋಡಲೇ ಇಲ್ಲ. ಬದಲಿಗೆ, ಇದು ಅವರಿಗೆ ಹೆಮ್ಮೆಯ ವಿಚಾರವಾಗಿತ್ತು’ ಎನ್ನುತ್ತಾರೆ ನಸ್ರೀನ್.
‘ನಾನು ಸಂಸ್ಕೃತ ಶಿಕ್ಷಕಿಯಾಗಿರುವುದು ಸಮುದಾಯದವರಿಗೆ ಇರಿಸುಮುರಿಸು ಉಂಟು ಮಾಡಿದ್ದರೂ, ಸಂಸ್ಕೃತ ಕಲಿಕೆಗಾಗಲಿ, ಉದ್ಯೋಗಕ್ಕಾಗಲಿ ತಣ್ಣೀರು ಎರಚಲಿಲ್ಲ. ಹೀಯಾಳಿಸಲಿಲ್ಲ. ವಿದ್ಯಾರ್ಥಿಗಳಿಂದಲೂ ನನಗೆ ಯಾವುದೇ ತೊಂದರೆ ಎದುರಾಗಿಲ್ಲ’ ಎಂದು ಹೇಳುತ್ತಾರೆ ಅವರು.
ರಷ್ಯನ್, ಪರ್ಷಿಯನ್ ಹಾಗೂ ಜರ್ಮನ್ ಭಾಷೆಗಳಲ್ಲೂ ಪಾಂಡಿತ್ಯ ಹೊಂದಿರುವ ನಸ್ರೀನ್ ಅವರದ್ದು, ‘ಭಾಷೆ ಜ್ಞಾನದ ಮೂಲ. ನಾವು (ಭಾರತೀಯರು) ವಸುಧೈವ ಕುಟುಂಬಕಂ ತತ್ವವನ್ನು ಪಾಲಿಸುವವರು, ಎಲ್ಲಾ ಭಾಷೆಗಳನ್ನು ಗೌರವದಿಂದ ಕಾಣುವವರು. ಯಾವುದೇ ಭಾಷೆಗೆ ಧರ್ಮದ ಸಂಕೋಲೆ ಇರಬಾರದು’ ಎಂಬ ಸ್ಪಷ್ಟ ನುಡಿ.
‘ಸಂಸ್ಕೃತವನ್ನು ಶ್ರೇಷ್ಠ ಭಾಷೆ ಎನ್ನುತ್ತೇವೆ. ಆದರೆ, ಇದು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ. ಸಂಸ್ಕೃತ ಕಬ್ಬಿಣದ ಕಡಲೆ ಎಂದು ಇದನ್ನು ಶ್ರೀಸಾಮಾನ್ಯರು ದೂರವೇ ಇರಿಸಿದ್ದಾರೆ’ ಎಂದು ಅವರು ಕೊರಗುತ್ತಾರೆ.
ಶಾಲಾ– ಕಾಲೇಜುಗಳಲ್ಲಿ ಸಂಸ್ಕೃತದ ಪಠ್ಯಕ್ರಮದಲ್ಲಿ ಬದಲಾವಣೆ ತರುವ ಅಗತ್ಯ ಇದೆ ಎಂದು ಒತ್ತಾಯಿಸುವ ನಸ್ರೀನ್, ‘ಈ ಭಾಷೆಯನ್ನು ಆಸಕ್ತಿದಾಯಕವನ್ನಾಗಿ ಮಾಡಲು ಪಠ್ಯಕ್ರಮ ರಚನಾ ಮಂಡಳಿ ಚಿಂತಿಸಬೇಕು. ಪುರಾತನ ಭಾಷೆಯಾದ ಸಂಸ್ಕೃತ, ಮೃತ ಭಾಷೆಗಳ ಪಟ್ಟಿಗೆ ಸೇರಲು ಬಿಡಬಾರದು. ಹಾಗೆ ನೋಡಿದರೆ, ಕಂಪ್ಯೂಟರ್ಗೆ ಸೂಕ್ತವಾಗಿ ಹೊಂದಿಕೊಳ್ಳುವ ಭಾಷೆ ಸಂಸ್ಕೃತ’ ಎನ್ನುತ್ತಾರೆ ಅವರು.
‘ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಆಸಕ್ತಿ ಹುಟ್ಟಿಸುವವರು ಬೋಧಕರು. ಆದ್ದರಿಂದ ಯಾವುದೇ ಭಾಷೆ ಉಳಿಯಬೇಕಿದ್ದರೆ ಉತ್ತಮ ಬೋಧಕರೂ ಇರಬೇಕು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸದ್ಯ ಅಂದಾಜು 200 ವಿದ್ಯಾರ್ಥಿಗಳು ಸಂಸ್ಕೃತದ ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಸಂಸ್ಕೃತದ ಬಗ್ಗೆ ಅತೀವ ಒಲವು ಮೂಡುವಂತೆ ಮಾಡುವುದು ನನ್ನ ಗುರಿ’ ಎನ್ನುವಾಗ ಅವರ ಕಣ್ಣುಗಳು ಮಿಂಚುತ್ತವೆ.
‘ಈಗಿನ ಬಹುತೇಕ ಮಕ್ಕಳಿಗೆ ಸಂಸ್ಕೃತ ಕಲಿಕೆಯಲ್ಲಿ ಆಸಕ್ತಿ ಇಲ್ಲ. ಈ ಭಾಷೆ ಉದ್ಯೋಗ ದೊರಕಿಸಿಕೊಡದು ಎಂಬುದು ಅವರ ಅನಿಸಿಕೆ. ಇದು ಬಹಳಷ್ಟು ಮಟ್ಟಿಗೆ ಸತ್ಯ ಕೂಡ. ಸಂಸ್ಕೃತ ಕಲಿತವರಿಗೂ ವಿಪುಲ ಉದ್ಯೋಗಾವಕಾಶ ಸಿಗುವಂತೆ ಏನಾದರೂ ಮಾಡಬೇಕು’ ಎಂಬ ಕಳಕಳಿ ನಸ್ರೀನ್ ಅವರಿಗಿದೆ.
‘ದೇಶದ ವಿವಿಧೆಡೆ ಮುಸ್ಲಿಂ ಸಮುದಾಯದ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಸಂಸ್ಕೃತ ಕಲಿಯುತ್ತಿರುವುದು ಸಂತಸಕರ ಬೆಳವಣಿಗೆ’ ಎಂಬ ಸಮಾಧಾನವೂ ಅವರಿಗಿದೆ.
‘ಬೋಧನೆಯ ಜೊತೆಗೆ ವ್ಯಕ್ತಿತ್ವ ನಿರ್ಮಾಣ ಮಾಡುವುದೂ ಶಿಕ್ಷಣದ ಗುರಿಗಳಲ್ಲಿ ಒಂದು. ವಿದ್ಯಾರ್ಥಿಗಳು ವಿದ್ಯಾವಂತರಾದರಷ್ಟೇ ಸಾಲದು, ಉತ್ತಮ ಚಾರಿತ್ರ್ಯವಂತರೂ ಆಗಬೇಕು. ಅಂತಹ ಶಿಕ್ಷಣವನ್ನು ನಾವು ನೀಡಬೇಕು’ ಎನ್ನುವ ನಸ್ರೀನ್, ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯೂ ಹೌದು.
‘ನಾವು ಅವರನ್ನು ಎಂದೂ ಮುಸ್ಲಿಂ ಮಹಿಳೆಯೆಂದು ನೋಡಿಯೇ ಇಲ್ಲ. ಅವರು ಅತ್ಯುತ್ತಮ ಬೋಧಕಿ’ ಎಂಬ ಅವರ ಸಹೋದ್ಯೋಗಿಗಳ ಈ ಮಾತುಗಳೇ ನಸ್ರೀನ್ ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದನ್ನು ಸಾರುತ್ತದೆ.
ನಸ್ರೀನ್ ಪತಿ ಕಂಪ್ಯೂಟರ್ ಎಂಜಿನಿಯರ್, ಸದ್ಯ ಅಮೆರಿಕೆಯಲ್ಲಿದ್ದಾರೆ. ಐಎಎಸ್ ಅಧಿಕಾರಿಯಾಗಬೇಕು ಎಂಬುದು ಅವರ ಮಗನ ಹಂಬಲಿಕೆ. ಇದಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಸಂಸ್ಕೃತದಲ್ಲಿ ಹಲವು ಪುಸ್ತಕಗಳನ್ನು ಬರೆದಿರುವ ನಸ್ರೀನ್ ಅವರಿಗೆ ‘ಸಾಹಿತ್ಯ ಶ್ರೀ’, ‘ಮಹಾದೇವಿ ಕಿರಣ್ ಸನ್ಮಾನ್’ ‘ಪ್ರಯಾಗ್ ಗೌರವ್’ ‘ರಾಷ್ಟ್ರೀಯ ಗೌರವ್’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ, ಗೌರವಗಳು ಸಂದಿವೆ.
ಇತ್ತೀಚೆಗೆ ‘ಜ್ಞಾನೇಶ್ವರ್ ಮಿಶ್ರಾ ಸಂಸ್ಕೃತ ವಿದುಷಿ ಸನ್ಮಾನ’ವನ್ನು ಉತ್ತರ ಪ್ರದೇಶ ಸರ್ಕಾರ ಇವರಿಗೆ ನೀಡಿದೆ.
ಇತ್ತೀಚೆಗೆ ‘ಜ್ಞಾನೇಶ್ವರ್ ಮಿಶ್ರಾ ಸಂಸ್ಕೃತ ವಿದುಷಿ ಸನ್ಮಾನ’ವನ್ನು ಉತ್ತರ ಪ್ರದೇಶ ಸರ್ಕಾರ ಇವರಿಗೆ ನೀಡಿದೆ.
ಜಾಗತಿಕ ಕಂಪೆನಿಗಳೂ, ಚೀನಾ ಆಹಾರ ಮಾರುಕಟ್ಟೆ ತಲ್ಲಣಗಳೂ
ಚೀನಾ ಮಾತ್ರವಲ್ಲ, ಇಡೀ ಜಾಗತಿಕ ಸಮುದಾಯದಲ್ಲಿ ಕೋಲಾಹಲ ಉಂಟುಮಾಡಿದ್ದ ಕಳಪೆ ಶಿಶು ಆಹಾರ ದುರ್ಘಟನೆ ಕುಖ್ಯಾತಿಯ ನ್ಯೂಜಿಲೆಂಡ್ನ ಡೈರಿ ಉತ್ಪನ್ನ ಕಂಪೆನಿ ಫಾಂಟೆರಾ ಸುರಕ್ಷಿತ ಆಹಾರದ ಘೋಷಣೆಯೊಂದಿಗೆ ಮತ್ತೆ ಚೀನಾ ಮಾರುಕಟ್ಟೆ ಪ್ರವೇಶಿಸಲು ಹಾತೊರೆಯುತ್ತಿದೆ. ಅದಕ್ಕೆ ಬಾಗಿಲುಗಳೂ ತೆರೆದುಕೊಳ್ಳುತ್ತಿವೆ!
ಆರು ವರ್ಷಗಳ ಹಿಂದೆ ನಡೆದ ಘಟನೆ ಈಗಲೂ ಚೀನೀಯರ ಮನದಿಂದ ಅಳಿಸಿಲ್ಲ. ಮೆಲಮೀನ್ ಎಂಬ ವಿಷಕಾರಿ ರಾಸಾಯನಿಕ ಬೆರೆಸಿದ ಹಾಲುಪುಡಿ ಸೇವಿಸಿ ಆರು ಮಕ್ಕಳು ಸಾವಿಗೀಡಾಗಿದ್ದರೆ, ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆ ಸುಮಾರು 3 ಲಕ್ಷ. ಚೀನಾ ಆಹಾರೋದ್ಯಮ ಈ ದುರ್ಘಟನೆಯಿಂದ ಅಕ್ಷರಶಃ ತಲ್ಲಣಗೊಂಡಿತ್ತು. ಜಾಗತಿಕ ಮಟ್ಟದಲ್ಲಿಯೂ ಮಕ್ಕಳ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಏಕೆಂದರೆ ಈ ಘಟನೆಯ ಮುಖ್ಯ ಹೊಣೆಗಾರ ಜಾಗತಿಕ ಶಿಶು ಆಹಾರ ವಲಯದಲ್ಲಿ ಅತಿ ದೊಡ್ಡ ಹೂಡಿಕೆದಾರ ಕಂಪೆನಿಗಳಲ್ಲಿ ಒಂದಾದ ನ್ಯೂಜಿಲೆಂಡ್ನ ಫಾಂಟೆರಾ ಸಹಕಾರ ಸಮೂಹ.
ಚೀನಾದ ಸನ್ಲು ಎಂಬ ಶಿಶು ಆಹಾರ ಉತ್ಪಾದಕ ಕಂಪೆನಿಯೊಂದಿಗೆ ಕೈ ಜೋಡಿಸಿದ್ದ ಫಾಂಟೆರಾ ಕೋಟ್ಯಂತರ ಡಾಲರ್ ಹಣವನ್ನು ಅದರಲ್ಲಿ ಹೂಡಿಕೆ ಮಾಡಿತ್ತು. ಈ ಹಾಲಿನ ಪುಡಿಯೊಂದಿಗೆ ಈ ಕೈಗಾರಿಕಾ ರಾಸಾಯನಿಕವನ್ನು ಬೆರೆಸಿಕೊಟ್ಟರೆ ಮಕ್ಕಳು ಚೆನ್ನಾಗಿ ಬೆಳವಣಿಗೆ ಹೊಂದುತ್ತಾರೆ ಎಂದು ನಂಬಿಸಿ ಲಾಭ ಮಾಡಿಕೊಳ್ಳುವ ಕಂಪೆನಿಗಳ ಸಾಲಿನಲ್ಲಿ ಸನ್ಲು ಕೂಡ ಒಂದು. ಹಾಲಿನಲ್ಲಿ ಕೃತಕವಾಗಿ ಪ್ರೊಟೀನ್ ಅಂಶವನ್ನು ಹೆಚ್ಚಿಸಲು ಈ ಕಂಪೆನಿಗಳು ಬಳಸುವುದು ಮೆಲಮೀನ್ ಎಂಬ ನಿಷೇಧಿತ ಕೈಗಾರಿಕಾ ರಾಸಾಯನಿಕವನ್ನು. ಈ ರಾಸಾಯನಿಕ ಎಷ್ಟು ಪರಿಣಾಮಕಾರಿ ಎಂದರೆ, ಆರೇಳು ತಿಂಗಳ ಮಕ್ಕಳಲ್ಲಿ ಮೂತ್ರಕೋಶದಲ್ಲಿ ಕಲ್ಲು ಬೆಳೆದು, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ದುರ್ಘಟನೆ ನಡೆಯುವ ನಾಲ್ಕು ವರ್ಷದ ಹಿಂದೆಯೇ ಡೇರಿ ಉತ್ಪನ್ನಗಳಲ್ಲಿ ಮೆಲಮೀನ್ ಕಂಡು ಬಂದು ಮಕ್ಕಳು ಅಸ್ವಸ್ಥರಾಗಿದ್ದರಿಂದ ಚೀನಾ ಸರ್ಕಾರ ಈ ರಾಸಾಯನಿಕದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಆದರೆ ಕಾನೂನು ಬಾಹಿರವಾಗಿ ಇದರ ಬಳಕೆ ನಡೆದೇ ಇತ್ತು. ಹಾಲಿನಪುಡಿ ಸೇವಿಸಿದ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾದ ಘಟನೆ ಚೀನಾವನ್ನು ಬೆಚ್ಚಿಬೀಳಿಸಿತು.ಸರ್ಕಾರ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಂಡಿತು. ಸನ್ಲು ಕಂಪೆನಿಯನ್ನು ದಿವಾಳಿ ಎಂದು ಘೋಷಿಸಲಾಯಿತು. ಅದರ ನಾಲ್ವರು ಕಾರ್ಯನಿರ್ವಾಹಕರನ್ನು ಜೈಲಿಗೆ ಕಳುಹಿಸಲಾಯಿತು.
ಈಗ ಅದೇ ಫಾಂಟೆರಾ ಸುರಕ್ಷಿತ ಆಹಾರ ಒದಗಿಸುವ ಘೋಷಣೆಯೊಂದಿಗೆ ಮತ್ತೆ ಚೀನಾ ಡೇರಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಶಿಶು ಆಹಾರ ತಯಾರಿಕಾ ಕಂಪೆನಿ ಬಿಂಗ್ಮೇಟ್ ಬೇಬಿ ಅಂಡ್ ಚೈಲ್ಡ್ ಫುಡ್ ಕಂಪೆನಿಯೊಂದಿಗೆ 500 ಕೋಟಿ ಡಾಲರ್ಗೂ ಅಧಿಕ ಮೊತ್ತದ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಅದು ಹೇಳಿದೆ. ಅದಕ್ಕೆ ಒಂದು ದಿನ ಮೊದಲು ಅಮೆರಿಕದ ಖಾಸಗಿ ಷೇರು ಕ್ಷೇತ್ರದ ಬೃಹತ್ ಕಂಪೆನಿ ಕೊಹ್ಲ್ಬರ್ಗ್ ಕ್ರಾವಿಸ್ ರಾಬರ್ಟ್ಸ್ ಚೀನಾದ ಅತಿ ದೊಡ್ಡ ಕೋಳಿ ಮಾಂಸ ಉತ್ಪಾದಕ ಫುಜಿಯನ್ ಸುನ್ನರ್ ಡೆವಲಪ್ಮೆಂಟ್ ಜತೆ 400 ಕೋಟಿ ಡಾಲರ್ ಹೂಡಿಕೆ ಒಪ್ಪಂದ ಘೋಷಿಸಿದೆ. ಇದು ಚೀನಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಕುರಿತು ಮಾಡಿಕೊಂಡ ಒಪ್ಪಂದ. ಸನ್ಲು ಕಂಪೆನಿಯ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಸುದ್ದಿಗಾರರಿಗೆ ಫಾಂಟೆರಾದ ಮುಖ್ಯ ಕಾರ್ಯನಿರ್ವಾಹಕ ಥಿಯೊ ಸ್ಪೀರಿಂಗ್ಸ್, ‘ಚೀನಾದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಲ್ಲದೆ, ಬಿಂಗ್ಮೇಟ್ ಕೂಡ ವಿಭಿನ್ನ ಪಾಲುದಾರ. ಭೂತದ ತಪ್ಪುಗಳಿಂದ ಕಲಿತು ಭವಿಷ್ಯದಲ್ಲಿ ಮುಂದುವರಿಯು ವುದರತ್ತ ಗಮನ ಹರಿಸಿದ್ದೇವೆ’ ಎಂದು ಹೇಳಿದ್ದಾರೆ.
ಆಹಾರ ಸುರಕ್ಷತೆಯ ಹಗರಣಗಳು ಚೀನಾವನ್ನು ಮತ್ತೆ ಮತ್ತೆ ಅಲುಗಾಡಿಸುತ್ತಲೇ ಇವೆ. ಕೋಳಿ ಮಾಂಸ ಚೀನಾದಲ್ಲಿ ಅತಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಆಹಾರ. ಸರ್ಕಾರದ ಮಾಧ್ಯಮಗಳ ವರದಿಯ ಪ್ರಕಾರ ಅಧಿಕಾರಿಗಳು ಕಳೆದ ಒಂದೇ ವಾರದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ್ದ 30 ಸಾವಿರ ಟನ್ ಕೋಳಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧದಲ್ಲಿ ಝೆಜಿಯಾಂಗ್ ಪ್ರಾಂತ್ಯದಲ್ಲಿ 38 ಟನ್ ನಾಯಿ ಮಾಂಸವನ್ನು ದೇಶದಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ, 17 ಜನರನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಸೈನೈಡ್ ಅಥವಾ ಅನಸ್ತೇಷಿಯಾ ಅತಿಯಾಗಿ ನೀಡುವುದರ ಮೂಲಕ ನಾಯಿಗಳನ್ನು ಕೊಲ್ಲಲಾಗುತ್ತಿತ್ತು. ಇದೇ ವಿಷ ಮಾನವರ ದೇಹಕ್ಕೂ ಸೇರುತ್ತಿತ್ತು. ಕಳಪೆ ಆಹಾರ ಉತ್ಪನ್ನಗಳನ್ನು ತಡೆಗಟ್ಟುವುದು ಚೀನಾ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದು ಮಟ್ಟಿಗಿನ ನಿರ್ಲಕ್ಷ್ಯವೂ ಈ ಅವಘಡಗಳಿಗೆ ಕಾರಣ ಎನ್ನುತ್ತಾರೆ ಪರಿಣತರು.
‘ಕೆಲವೊಂದು ವಿಷಯಗಳನ್ನು ರಹಸ್ಯವಾಗಿ ಇರಿಸಲಾಗಿದೆ ಎಂದು ಹೇಳಲಾಗದು. ಅದಕ್ಕಿಂತಲೂ ಮಿಗಿಲಾಗಿ ಜನರಿಗೆ ಈ ಪಾಶ್ಚಿಮಾತ್ಯ ಕಂಪೆನಿಗಳು ನಿರೀಕ್ಷಿಸುತ್ತಿರುವ ಗುಣಮಟ್ಟದ ತಿಳಿವಳಿಕೆಯೇ ಇಲ್ಲ’ ಎನ್ನುತ್ತಾರೆ ಏಷ್ಯಾ ತಪಾಸಣೆಯ ಮುಖ್ಯ ಕಾರ್ಯನಿರ್ವಾಹಕ ಸೆಬಾಸ್ಟಿಯನ್ ಬ್ರೆಟು. ಈ ಸಂಸ್ಥೆ ಆಹಾರ ಉತ್ಪನ್ನಗಳೂ ಸೇರಿದಂತೆ ಎಲ್ಲಾ ಬಗೆಯ ಕಂಪೆನಿಗಳು ಪೂರೈಸುವ ಉತ್ಪನ್ನಗಳ ಪರಿಶೀಲಿಸು ತ್ತದೆ. ಇದರ ಪ್ರಕಾರ ಈ ವರ್ಷ ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಉತ್ಪನ್ನಗಳ ಪ್ರಮಾಣ ಶೇ 50ಕ್ಕೂ ಅಧಿಕ.
ಚೀನಾದಲ್ಲಿರುವ ಆಹಾರ ಉತ್ಪಾದನಾ ಕಂಪೆನಿಗಳು ವಿದೇಶಿ ಕಂಪೆನಿಗಳ ಬೆಂಬಲದೊಂದಿಗೆ ಆರ್ಥಿಕವಾಗಿ ಪ್ರಬಲವಾಗಿದ್ದು, ಅತ್ಯಧಿಕ ಗುಣಮಟ್ಟ ಮತ್ತು ಸುರಕ್ಷತಾ ಮಟ್ಟವನ್ನು ಹೊಂದಿರುವುದಾಗಿ ಪ್ರತಿಪಾದಿಸುತ್ತವೆ. ದೊಡ್ಡ ಪ್ರಮಾಣದ ಪ್ರಮಾದಗಳಾದರೂ ಇಂಥ ಕಂಪೆನಿಗಳು ಚೀನಾದಲ್ಲಿ ಯಾವುದೇ ಅಡೆತಡೆ ಇಲ್ಲದೆಯೇ ಮುಂದುವರೆಯಬಲ್ಲವು. ಕಳೆದ ತಿಂಗಳು ಜಗತ್ತಿನ ಅತಿದೊಡ್ಡ ಫಾಸ್ಟ್ಫುಡ್ ಕಂಪೆನಿಗಳು ಸುದ್ದಿಯಲ್ಲಿದ್ದವು. ಈ ವಿದ್ಯಮಾನ ಕೂಡ ನಡೆದದ್ದು ಚೀನಾದಲ್ಲೆ. ಶಾಂಘೈನಲ್ಲಿ ಮೆಕ್ಡೊನಾಲ್ಡ್, ಕೆಎಫ್ಸಿ ಮತ್ತಿತರ ಫಾಸ್ಟ್ಫುಡ್ ಆಹಾರ ಕಂಪೆನಿಗಳಿಗೆ ಮಾಂಸ ಪೂರೈಕೆ ಮಾಡುವ ಅಮೆರಿಕ ಮೂಲದ ಒಎಸ್ಐ ಸಮೂಹವನ್ನು ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅವಧಿ ಮೀರಿದ ಕೋಳಿ ಮತ್ತು ದನದ ಮಾಂಸದ ಉತ್ಪನ್ನಗಳಿಗೆ ಹೊಸ ಅವಧಿಯ ಲೇಬಲ್ ಹಚ್ಚುವುದನ್ನು, ಉಳಿದ ಮಾಂಸವನ್ನು ತಂದು ಪರಿಷ್ಕರಣೆಗೆ ರವಾನಿಸುವುದನ್ನು ಸ್ಥಳೀಯ ಟೀವಿ ವಾಹಿನಿ ಬಿತ್ತರಿಸಿದ್ದು ದೊಡ್ಡ ಕೋಲಾಹಲವನ್ನು ಉಂಟುಮಾಡಿತ್ತು.
ಮಾಂಸ ಪೂರೈಕೆಯಲ್ಲಿ ಮುಂಚೂಣಿ ಕಂಪೆನಿಯಾಗಿರುವ ಒಎಸ್ಐ ಗುಣಮಟ್ಟ ನಿಯಂತ್ರಣದಲ್ಲಿಯೂ ಹೆಸರುವಾಸಿ. ಆದರೆ ಈ ಸುದ್ದಿ ಎಲ್ಲರಿಗೂ ತೀವ್ರ ಆಘಾತ ಉಂಟುಮಾಡಿತು. ಕೋಳಿ ಮಾಂಸ ಪೂರೈಕೆ ಸರಪಣಿಯಲ್ಲಿ ಫೀಡ್ ಮಿಲ್, ಸಂಗ್ರಹಣೆ ಮತ್ತು ಕತ್ತರಿಸುವ ಕಾರ್ಯ ವಿಧಾನಗಳಿಗಾಗಿಯೇ ಚೀನಾದಲ್ಲಿ ನೂರಾರು ಲಕ್ಷ ಡಾಲರ್ ಹಣವನ್ನು ಈ ಕಂಪೆನಿ ವಿನಿಯೋಗಿಸಿದೆ. ಈ ಕಂಪೆನಿ ಬೇರೆ ಪೂರೈಕೆದಾರರಿಂದ ಕೊಂಡ ಮಾಂಸವನ್ನು ಸಂಸ್ಕರಿಸುವ ಕೆಲಸವನ್ನು ಮಾತ್ರ ಅಮೆರಿಕದಲ್ಲಿ ಮಾಡುತ್ತದೆ.
ಬಿಂಗ್ಮೇಟ್ನ ಶೇ 20ರಷ್ಟು ಷೇರನ್ನು ಫಾಂಟೆರಾ ಪಡೆದುಕೊಂಡಿದೆ. ಈ ಒಪ್ಪಂದದ ಪ್ರಕಾರ ಈ ಎರಡು ಕಂಪೆನಿಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಯುರೋಪ್ಗಳಲ್ಲಿನ ಫಾಂಟೆರಾ ಡೇರಿ ಹಾಗೂ ಉತ್ಪಾದನಾ ಘಟಕಗಳಿಂದ ಶಿಶು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಚೀನಾದಲ್ಲಿ ಮಾರುತ್ತವೆ. ಅಂದರೆ, ಇಲ್ಲಿ ಚೀನಾದಲ್ಲಿಯೇ ಉತ್ಪಾದನೆಯಾಗುವ ಪದಾರ್ಥಗಳ ಬಳಕೆ ಆಗುವುದಿಲ್ಲ. ‘ಆಡಳಿತ ನಿರ್ವಹಣೆಯ ವ್ಯವಸ್ಥೆಯನ್ನು ಸ್ಪಷ್ಟವಾಗಿ ಮಾಡಿಕೊಳ್ಳಲಾಗಿದೆ’ ಎಂದು ಫಾಂಟೆರಾ ಹೇಳಿದೆ. ಚೀನಾದ ಆಹಾರ ಮಾರುಕಟ್ಟೆಯಲ್ಲಿ ಅಧಿಕ ಸ್ಪರ್ಧೆ ಹಾಗೂ ಕಡಿಮೆ ಲಾಭದ ಸ್ಥಿತಿ ಏರ್ಪಡಬೇಕಿದೆ. ವ್ಯವಹಾರವು ಹಣ ಉಳಿತಾಯಕ್ಕೆ ಕೆಲವು ಪ್ರಕ್ರಿಯೆಗಳನ್ನು ತಪ್ಪಿಸಲು ಪ್ರಚೋದನೆ ನೀಡುತ್ತದೆ. ಕೆಲವು ಪ್ರಕರಣಗಳಲ್ಲಿ ಗ್ರಾಹಕರಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿದಾಗಲೂ ಕಣ್ಣು ಕುರುಡಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಚೀನಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಪರೀಕ್ಷಕರು ಇಲ್ಲದಿರುವುದೂ ಒಂದು ಮುಖ್ಯ ಕಾರಣ ಎಂದು ಅಭಿಪ್ರಾಯ ಪಡುತ್ತಾರೆ ಚೀನಾ ಮಾಂಸ ಸಂಸ್ಥೆಯ ಗವೊ ಗುವಾನ್. ‘ನಿಯಂತ್ರಣ ಮತ್ತು ಕಾನೂನುಗಳ ಕಟ್ಟುನಿಟ್ಟಾದ ಅಳವಡಿಕೆ ಇಲ್ಲಿ ತುಂಬಾ ಕೆಳಮಟ್ಟದಲ್ಲಿದೆ. ನೀವು ಒಂದೇ ಸಂಸ್ಕರಣಾ ಕಂಪೆನಿಯನ್ನು ನೆಚ್ಚಿಕೊಂಡಿದ್ದರೆ ಅವರ ಮೇಲೆ ಸುರಕ್ಷತಾ ಗುಣ ಮಟ್ಟದ ಒತ್ತಡ ಹೇರಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ವೇಗ ವಾಗಿ ಹಣ ಗಳಿಸುವುದಕ್ಕಾಗಿಯೇ ಪ್ರಯತ್ನಿಸುತ್ತಿರುತ್ತಾರೆ’ ಎನ್ನುವ ಗುವಾನ್, ಮಾಂಸ ಸಂಸ್ಕರಣೆಯಲ್ಲಿನ ನಿರಂತರ ಸಮಸ್ಯೆಗಳು ಅವರ ಲಾಭದ ಗುರಿಹೊಂದಿರುವ ಅವರನ್ನು ದಾರಿ ತಪ್ಪಿಸುತ್ತವೆ ಎಂದು ಹೇಳುತ್ತಾರೆ. ಸನ್ಲು ದುರ್ಘಟನೆ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಲಕ್ಷಾಂತರ ಮಕ್ಕಳ ಪಾಲಿಗೆ ಅಪಾಯಕಾರಿ ಯಾಗಿರುವ ಫಾಂಟೆರಾದಂಥ ಕಂಪೆನಿ ಮತ್ತೆ ಚೀನಾದ ಶಿಶು ಆಹಾರ ಮಾರುಕಟ್ಟೆ ಪ್ರವೇಶಿಸುತ್ತಿರುವುದು ವಿಪರ್ಯಾಸ.
ಪಾಕ್ ಒ.ಕೆ ಎನ್ನುವುದು ಥಾಯ್ಲೆಂಡ್ನ ಪುಟ್ಟ ಗ್ರಾಮವೊಂದರ ಹೆಸರು. ಬ್ಯಾಂಕಾಕ್ನಿಂದ 50 ಕಿ.ಮೀ ದೂರದಲ್ಲಿದೆ. ಆ ದೇಶದ ಭೂಪಟ ಹಾಸಿ ಹುಡುಕಿದರೆ ಸಾಸಿವೆ ಕಾಳಿನ ಗಾತ್ರದ ಈ ಗ್ರಾಮ ‘ಬಾಡಿಗೆ ತಾಯಿ’ ಉದ್ಯಮದಿಂದ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.
ಎರಡು ವರ್ಷಗಳ ಹಿಂದೆ ಈ ಗ್ರಾಮದ ಮೊದಲ ಬಾಡಿಗೆ ತಾಯಿಗೆ ಅವಳಿ ಮಕ್ಕಳು ಜನಿಸಿದಾಗ ಇಡೀ ಹಳ್ಳಿಯೇ ನಿಬ್ಬೆರಗಾಗಿತ್ತು. ಹಣಕ್ಕಾಗಿ ಮಗುವನ್ನು ಹೆತ್ತು ಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಭಾರಿ ಚರ್ಚೆಗಳೂ ನಡೆದಿದ್ದವು. ಆದರೆ, ಮಕ್ಕಳನ್ನು ಹೆತ್ತು ಕೊಟ್ಟದ್ದಕ್ಕೆ ಪ್ರತಿಯಾಗಿ ಜೈವಿಕ ತಂದೆ–ತಾಯಿ ಬಾಡಿಗೆ ತಾಯಿಗೆ ನೀಡಿದ ಭಾರಿ ಉಡುಗೊರೆ ನೋಡಿ ಹಳ್ಳಿಗರ ಮಾತುಗಳು ಕ್ಷೀಣವಾಗಿದ್ದವು.
ಮನೆ ಅಂಗಳದಲ್ಲಿ ನಿಂತ ಹೊಸ ಕಾರು, ಗುಡಿಸಲು ಇದ್ದ ಸ್ಥಳದಲ್ಲಿ ತಲೆ ಎತ್ತುತ್ತಿರುವ ಹೊಸ ಕಟ್ಟಡ, ಹೊಸ ಪೀಠೋಪಕರಣಗಳು ಬಾಡಿಗೆ ತಾಯ್ತನ ಲಾಭದಾಯಕ ಎನ್ನುವ ಕನಸನ್ನು ಹಳ್ಳಿಯ ಹೆಣ್ಣುಮಕ್ಕಳಲ್ಲಿ ಬಿತ್ತಿದ್ದವು. ಕೆಲವರು ಇದನ್ನು ಅಸೂಯೆಯಿಂದ ನೋಡಿದರು. ಆಗ ಇಡೀ ಹಳ್ಳಿ ಒಂದು ರೀತಿ ಭಾವೋದ್ವೇಗ ಸ್ಥಿತಿಯಲ್ಲಿತ್ತು ಎಂದು ಸ್ಮರಿಸುತ್ತಾರೆ ಈಗ ಪಾಕ್ ಒ.ಕೆಯಲ್ಲಿ ಪುಟ್ಟ ದಿನಸಿ ಅಂಗಡಿ ನಡೆಸುತ್ತಿರುವ 50 ವರ್ಷದ ಗೃಹಿಣಿ ತೊಂಗ್ಚಾನ್ ಇನ್ಚಾನ್.
‘ಎರಡು ವರ್ಷಗಳ ಹಿಂದೆ ಹಣಕ್ಕಾಗಿ ಮಗುವನ್ನು ಹೆರಬೇಕು ಎಂದು ನೀವು ಹೇಳಿದ್ದರೆ ಅದು ನನಗೆ ಅವಮಾನ ಅನ್ನಿಸುತ್ತಿತ್ತು. ತಪ್ಪಿತಸ್ಥ ಭಾವನೆ ಕಾಡುತ್ತಿತ್ತು. ಆದರೆ, ಈಗ ಖಂಡಿತ ಹಾಗೆ ಅನಿಸುತ್ತಿಲ್ಲ. ಬಾಡಿಗೆ ಗರ್ಭದ ಮೂಲಕವೇ ಮಕ್ಕಳಿಲ್ಲದ ಎಷ್ಟೋ ದಂಪತಿಗಳಿಗೆ ಮಗು ಲಭಿಸಿದೆ. ಎಷ್ಟೋ ಬಡ ಕುಟುಂಬಗಳಿಗೆ ಆರ್ಥಿಕವಾಗಿಯೂ ಇದು ಆಸರೆ ಆಗಿದೆ’ ಎನ್ನುವ ಇನ್ಚಾನ್ ತನಗೂ 50 ವರ್ಷ ಆಗಿರದಿದ್ದಲ್ಲಿ ತಾನೂ ಬಾಡಿಗೆ ಗರ್ಭ ಧರಿಸಲು ಸಿದ್ಧಳಿರುತ್ತಿದ್ದೆ’ ಎಂದು ಯಾವುದೇ ಸಂಕೋಚವಿಲ್ಲದೆ ಹೇಳುತ್ತಾಳೆ.
ಏಷ್ಯಾದ ಶ್ರೀಮಂತ ದೇಶಗಳ ಮಕ್ಕಳಿಲ್ಲದ ದಂಪತಿಗಳಿಗಾಗಿ ಕಳೆದ ಎರಡು ವರ್ಷಗಳಲ್ಲಿ ಪಾಕ್ ಒ.ಕೆ ಗ್ರಾಮದ 24 ಮಹಿಳೆಯರು ಬಾಡಿಗೆ ತಾಯಿಯಾಗಿದ್ದಾರೆ. ಕೃಷಿಯೇ ಪ್ರಧಾನವಾಗಿರುವ ಈ ಪುಟ್ಟ ಹಳ್ಳಿಯ ಜನಸಂಖ್ಯೆ 13 ಸಾವಿರ. ಬಡತನ ಮತ್ತು ಅನಕ್ಷರತೆ ಇರುವ ಈ ಗ್ರಾಮದಲ್ಲಿ ಬಾಡಿಗೆ ತಾಯ್ತನ ಅತ್ಯಂತ ಲಾಭದಾಯಕ ಉದ್ಯಮದ ಸ್ವರೂಪ ಪಡೆದುಕೊಂಡಿದೆ.
‘ಇದೊಂದು ಬಡ ಹಳ್ಳಿ. ದಿನವಿಡೀ ದುಡಿದರೂ ಕೈಗೆ ಸಿಗುವುದು ಪುಡಿಗಾಸು. ಸಂಜೆಯಾಗುತ್ತಿದ್ದಂತೆ ಅದೂ ಕರಗಿ ಹೋಗುತ್ತದೆ. ಈ ವಯಸ್ಸಿನಲ್ಲಿ ನನ್ನಿಂದ ಗರ್ಭ ಧರಿಸಲು ಸಾಧ್ಯವಾಗಿದ್ದರೆ ನಾನೂ ಇದಕ್ಕೆ ಮನಸ್ಸು ಮಾಡುತ್ತಿದ್ದೆ’ ಎನ್ನುವ ಇನ್ಚಾನ್ ಮಾತು ಇಡೀ ಹಳ್ಳಿಯ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಥಾಯ್ಲೆಂಡ್ನಲ್ಲಿ ಬಾಡಿಗೆ ತಾಯಿ ಉದ್ಯಮಕ್ಕೆ ಕಾನೂನಿನ ನಿರ್ಬಂಧಗಳಿಲ್ಲ. ಭಾರತ ಹೊರುತುಪಡಿಸಿದರೆ ಈ ದೇಶದಲ್ಲಿ ಮಾತ್ರ ಇದಕ್ಕೆ ಅವಕಾಶವಿದೆ. ಹೀಗಾಗಿಯೇ ‘ಗರ್ಭಕೋಶ ಬಾಡಿಗೆಗೆ ನೀಡುವ ವ್ಯವಹಾರ’ಕ್ಕೆ ನಿರ್ಬಂಧ ವಿಧಿಸಿರುವ ಅನೇಕ ದೇಶಗಳ ಗ್ರಾಹಕರ ಪಾಲಿಗೆ ಥಾಯ್ಲೆಂಡ್ ನೆಚ್ಚಿನ ತಾಣ. ಬಾಡಿಗೆ ತಾಯಿಗೆ ದುಬಾರಿ ಬೆಲೆ ತೆರಬೇಕಾದ ಅಮೆರಿಕದಂತಹ ದೇಶಗಳ ಗ್ರಾಹಕರಿಗೆ ಥಾಯ್ಲೆಂಡ್ ಅತ್ಯಂತ ಅಗ್ಗದ ಪರ್ಯಾಯ ಆಯ್ಕೆಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿದೆ.
ಕಳೆದ ಒಂದು ದಶಕದಿಂದ ಇಲ್ಲಿ ಬಾಡಿಗೆ ತಾಯಿ ಉದ್ಯಮ ಚಾಲ್ತಿಯಲ್ಲಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ವಾಣಿಜ್ಯ ಸ್ವರೂಪ ಪಡೆದುಕೊಂಡಿದೆ. ಈಗಂತೂ ಯಾವುದೇ ನಿಯಂತ್ರಣವಿಲ್ಲದೆ ಬೆಳೆಯುತ್ತಿದೆ. ಸ್ಥಳೀಯ ಅಧಿಕಾರಿಗಳ ಅಂದಾಜಿನಂತೆ ಇಲ್ಲಿ ಪ್ರತಿ ವರ್ಷ ಬಾಡಿಗೆ ಗರ್ಭದ ಮೂಲಕ ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸುತ್ತವೆ. ಗಮನಾರ್ಹ ಸಂಗತಿಯೆಂದರೆ ಚೀನಾದಿಂದ ಸಹ ಹಲವು ಹೆಣ್ಣು ಮಕ್ಕಳು ಬಾಡಿಗೆ ತಾಯಿಯಾಗಲು ಥಾಯ್ಲೆಂಡ್ಗೆ ಬರುತ್ತಿದ್ದಾರೆ. ಗರ್ಭಧರಿಸಿ ವಿದೇಶಿ ದಂಪತಿಗಳಿಗೆ ಮಕ್ಕಳನ್ನು ಹೆತ್ತು ಕೊಟ್ಟು ಮತ್ತೆ ಚೀನಾಗೆ ಮರಳುತ್ತಾರೆ. ಕೈತುಂಬಾ ಹಣ ಗಳಿಸುತ್ತಾರೆ. ಚೀನಾದಿಂದ ಯುವತಿಯರನ್ನು ಕರೆತಂದು ಬಾಡಿಗೆ ಗರ್ಭವನ್ನು ಒದಗಿಸುವ ದಲ್ಲಾಳಿಗಳ ದೊಡ್ಡ ತಂಡವೇ ಬ್ಯಾಂಕಾಕ್ನಲ್ಲಿದೆ.
ವೈದ್ಯಕೀಯ ಪ್ರವಾಸೋದ್ಯಮದ ಹೆಸರಿನಲ್ಲಿ ಬಾಡಿಗೆ ತಾಯಿ ಉದ್ಯಮ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ಅಲ್ಲಿನ ಮಿಲಿಟರಿ ಸರ್ಕಾರ ಮುಂದಾಗಿದೆ. ಆಡಳಿತ ವರ್ಗ ಇದನ್ನು ‘ಗರ್ಭಕೋಶ ಬಾಡಿಗೆಗೆ ನೀಡುವ ವ್ಯವಹಾರ’ ಎಂದೇ ಕರೆಯುತ್ತಿದೆ. ಬಹಿರಂಗವಾಗಿ ಸರ್ಕಾರ ಇದಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಪ್ರಕಟಿಸದಿದ್ದರೂ ಕೆಲವು ನಿಯಂತ್ರಣಗಳನ್ನು ಹೇರಲು ಸಿದ್ಧತೆ ಮಾಡಿಕೊಂಡಿದೆ.
ಹಗರಣಗಳು
ಬಾಡಿಗೆ ತಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಥಾಯ್ಲೆಂಡ್ನಲ್ಲಿ ನಡೆದ ಎರಡು ಪ್ರಕರಣಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಹೀಗಾಗಿ ಸ್ಪಷ್ಟ ಕಾನೂನು ರಚಿಸಬೇಕಾದ ತುರ್ತು ಅಗತ್ಯ ಸರ್ಕಾರದ ಮುಂದಿದೆ. ಮೊದಲ ಪ್ರಕರಣ ಆಸ್ಟ್ರೇಲಿಯಾದ ದಂಪತಿಗೆ ಸಂಬಂಧಿಸಿದ್ದು. ಕಳೆದ ಜುಲೈನಲ್ಲಿ ಈ ದಂಪತಿ ಬ್ಯಾಂಕಾಕ್ ಮೂಲದ ಮಹಿಳೆಯೊಬ್ಬರ ಬಳಿ ಬಾಡಿಗೆ ಗರ್ಭದ ಮೂಲಕ ಮಗುವನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದ್ದರು. ಈ ಬಾಡಿಗೆ ತಾಯಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, ಇದರಲ್ಲಿ ಒಂದು ಮಗು ದೈಹಿಕ ಮತ್ತು ಮಾನಸಿಕ ನ್ಯೂನತೆಯಿಂದ ಕೂಡಿತ್ತು. ಹೀಗಾಗಿ ದಂಪತಿ ಒಂದು ಮಗುವನ್ನು ಮಾತ್ರ ತೆಗೆದುಕೊಂಡು, ಇನ್ನೊಂದನ್ನು ಬಾಡಿಗೆ ತಾಯಿಯ ಮಡಿಲಲ್ಲೇ ಬಿಟ್ಟು ಹೋದರು.
ಬಾಡಿಗೆ ತಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಥಾಯ್ಲೆಂಡ್ನಲ್ಲಿ ನಡೆದ ಎರಡು ಪ್ರಕರಣಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಹೀಗಾಗಿ ಸ್ಪಷ್ಟ ಕಾನೂನು ರಚಿಸಬೇಕಾದ ತುರ್ತು ಅಗತ್ಯ ಸರ್ಕಾರದ ಮುಂದಿದೆ. ಮೊದಲ ಪ್ರಕರಣ ಆಸ್ಟ್ರೇಲಿಯಾದ ದಂಪತಿಗೆ ಸಂಬಂಧಿಸಿದ್ದು. ಕಳೆದ ಜುಲೈನಲ್ಲಿ ಈ ದಂಪತಿ ಬ್ಯಾಂಕಾಕ್ ಮೂಲದ ಮಹಿಳೆಯೊಬ್ಬರ ಬಳಿ ಬಾಡಿಗೆ ಗರ್ಭದ ಮೂಲಕ ಮಗುವನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದ್ದರು. ಈ ಬಾಡಿಗೆ ತಾಯಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, ಇದರಲ್ಲಿ ಒಂದು ಮಗು ದೈಹಿಕ ಮತ್ತು ಮಾನಸಿಕ ನ್ಯೂನತೆಯಿಂದ ಕೂಡಿತ್ತು. ಹೀಗಾಗಿ ದಂಪತಿ ಒಂದು ಮಗುವನ್ನು ಮಾತ್ರ ತೆಗೆದುಕೊಂಡು, ಇನ್ನೊಂದನ್ನು ಬಾಡಿಗೆ ತಾಯಿಯ ಮಡಿಲಲ್ಲೇ ಬಿಟ್ಟು ಹೋದರು.
ದೈಹಿಕ ಮತ್ತು ಮಾನಸಿಕ ನ್ಯೂನತೆ ಇರುವ ಈ ಮಗುವನ್ನು ಏನು ಮಾಡಬೇಕೆಂದು ಗೊತ್ತಾಗದೆ ಬಾಡಿಗೆ ತಾಯಿ ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮಗುವನ್ನು ದಯವಿಟ್ಟು ತೆಗೆದುಕೊಂಡು ಹೋಗಿ ಎಂದು ಆಕೆ ಮಗುವಿನ ಜೈವಿಕ ತಂದೆ–ತಾಯಿಯನ್ನು ಅಂಗಲಾಚುತ್ತಿದ್ದಾಳೆ. ಆದರೆ, ಆ ಮಗುವಿನ ಎಲ್ಲ ಖರ್ಚು– ವೆಚ್ಚಗಳನ್ನು ಬೇಕಾದರೆ ನಾವು ಭರಿಸುತ್ತೇವೆ. ಆದರೆ, ಮಗುವನ್ನು ಸಾಕಲು ಮಾತ್ರ ತಮ್ಮಿಂದ ಸಾಧ್ಯವಿಲ್ಲ. ತಾವು ಒಪ್ಪಂದ ಮಾಡಿಕೊಂಡದ್ದು ಆರೋಗ್ಯವಂತ ಮಗುವಿಗೆ ಮಾತ್ರ. ಅಂಗವೈಕಲ್ಯ ಇರುವ ಮಗು ನಮಗೆ ಬೇಡ ಎನ್ನುತ್ತಿದ್ದಾರೆ ಮಗುವಿನ ಜೈವಿಕ ತಂದೆ ಡೇವಿಡ್ ಜಾನ್ ಪಾರ್ನೆಲ್.
‘ಬಾಡಿಗೆ ಗರ್ಭದಲ್ಲಿರುವ ಮಗುವಿಗೆ ನ್ಯೂನತೆ ಇರುವುದು ಗೊತ್ತಾದ ಕೂಡಲೇ ನಾವು ಬ್ಯಾಂಕಾಕ್ನಲ್ಲಿರುವ ಏಜೆನ್ಸಿಯನ್ನು ಸಂಪರ್ಕಿಸಿ ನಮಗೆ ಮಗು ಬೇಡ, ಆ ಭ್ರೂಣವನ್ನು ತೆಗೆದು ಹಾಕುವಂತೆ ವಿನಂತಿ ಮಾಡಿದ್ದೆವು. ಆದರೆ, ಅವರು ಹಾಗೆ ಮಾಡಲಿಲ್ಲ. ಈಗ ಅಂಗವಿಕಲ ಮಗುವನ್ನು ನಮ್ಮ ತಲೆಗೆ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ’ ಎನ್ನುತ್ತಾರೆ ಅವರು. ಆದರೆ, ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾದ ವಾಹಿನಿಯೊಂದು ಡೇವಿಡ್ ಜಾನ್ ಪಾರ್ನೆಲ್ ಅವರ ಇನ್ನೊಂದು ಮುಖವನ್ನು ಬಯಲಿಗೆಳೆದಿದೆ. ಚಿಕ್ಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕಾಗಿ ಈತ 1990ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ. ಇಂತಹ ವ್ಯಕ್ತಿ ಅಪ್ಪನಾಗಲು ಎಷ್ಟರ ಮಟ್ಟಿಗೆ ಯೋಗ್ಯ ಎನ್ನುವ ಪ್ರಶ್ನೆಯನ್ನೂ ಎತ್ತಿದೆ.
ಇನ್ನೊಂದು ಪ್ರಕರಣದಲ್ಲಿ ಇತ್ತೀಚೆಗೆ ಬ್ಯಾಂಕಾಕ್ನಲ್ಲಿ ಪೊಲೀಸರು ಕೃತಕ ಗರ್ಭಧಾರಣೆಯ ಕೇಂದ್ರವೊಂದರ ಮೇಲೆ ದಾಳಿ ನಡೆಸಿ ಜಪಾನ್ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈತ 10ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದ. ಬಾಡಿಗೆ ಗರ್ಭದಿಂದ ಮಗುವನ್ನು ಪಡೆದು ಈತ ಮಕ್ಕಳಿಲ್ಲದ ವಿದೇಶಿ ದಂಪತಿಗಳಿಗೆ ದುಬಾರಿ ಹಣಕ್ಕೆ ಮಾರುವುದನ್ನೇ ಕಸುಬಾಗಿಸಿಕೊಂಡಿದ್ದ. ಇಂಟರ್ಪೋಲ್ ತಂಡ ಈಗ ಜಪಾನಿ ವ್ಯಕ್ತಿಯ ಹಿನ್ನೆಲೆ ಕುರಿತು ಸಮಗ್ರ ತನಿಖೆ ನಡೆಸುತ್ತಿದೆ.
‘ಏಷ್ಯಾದ ಗರ್ಭಕೋಶ’
ಪ್ರವಾಸೋದ್ಯಮದ ಹೆಸರಿನಲ್ಲಿ ವೇಶ್ಯಾವೃತ್ತಿ ಸಹ ಥಾಯ್ಲೆಂಡ್ನಲ್ಲಿ ಕುಖ್ಯಾತಿ ಪಡೆದಿದೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ನಿರೂಪಕರು ಥಾಯ್ಲೆಂಡ್ ಅನ್ನು ‘ಏಷ್ಯಾದ ಗರ್ಭಕೋಶ’ ಎಂದು ವರ್ಣಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ದಂಪತಿಗಳು ಥಾಯ್ಲೆಂಡ್ನ ಬಡವರನ್ನು ಬಾಡಿಗೆ ಗರ್ಭದ ಮೂಲಕ ನಿರಂತರ ಶೋಷಣೆ ಮಾಡುತ್ತಿದ್ದಾರೆ. ಇದು ನೈತಿಕ ಅಧಃಪತನದ ಸಂಕೇತ. ಹಣಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎನ್ನುತ್ತಾರೆ ಪಾಕ್ ಒ.ಕೆನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಕೈಸರ್ನ್ ವೊಂಗ್ಮಾನಿ.
ಪ್ರವಾಸೋದ್ಯಮದ ಹೆಸರಿನಲ್ಲಿ ವೇಶ್ಯಾವೃತ್ತಿ ಸಹ ಥಾಯ್ಲೆಂಡ್ನಲ್ಲಿ ಕುಖ್ಯಾತಿ ಪಡೆದಿದೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ನಿರೂಪಕರು ಥಾಯ್ಲೆಂಡ್ ಅನ್ನು ‘ಏಷ್ಯಾದ ಗರ್ಭಕೋಶ’ ಎಂದು ವರ್ಣಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ದಂಪತಿಗಳು ಥಾಯ್ಲೆಂಡ್ನ ಬಡವರನ್ನು ಬಾಡಿಗೆ ಗರ್ಭದ ಮೂಲಕ ನಿರಂತರ ಶೋಷಣೆ ಮಾಡುತ್ತಿದ್ದಾರೆ. ಇದು ನೈತಿಕ ಅಧಃಪತನದ ಸಂಕೇತ. ಹಣಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎನ್ನುತ್ತಾರೆ ಪಾಕ್ ಒ.ಕೆನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಕೈಸರ್ನ್ ವೊಂಗ್ಮಾನಿ.
ಥಾಯ್ಲೆಂಡ್ನ ಅಧಿಕಾರಿಗಳು ಹೇಳುವಂತೆ ಒಬ್ಬ ಬಾಡಿಗೆ ತಾಯಿ ಯಶಸ್ವಿಯಾಗಿ ಮಕ್ಕಳನ್ನು ಹೆತ್ತರೆ ಆಕೆಗೆ 10 ಸಾವಿರ ಡಾಲರ್ (ಅಂದಾಜು 6 ಲಕ್ಷ) ಸಂಭಾವನೆ ಲಭಿಸುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ವೈದ್ಯಕೀಯ ಖರ್ಚಿಗೆ 450 ಡಾಲರ್ ಬಾಡಿಗೆ ನೀಡಲಾಗುತ್ತದೆ. ಇಂತಹ ಬಾಡಿಗೆ ತಾಯಿಯರಿಗೆ ಉಳಿದುಕೊಳ್ಳಲೆಂದೇ ಬ್ಯಾಂಕಾಕ್ನಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಆಹಾರವೂ ಲಭಿಸುತ್ತದೆ. ಇವೆಲ್ಲವೂ ಪಾಕ್ ಒ.ಕೆ ನಂತಹ ಹಳ್ಳಿಗಳ ಹೆಣ್ಣುಮಕ್ಕಳಿಗೆ ಬಾಡಿಗೆ ತಾಯ್ತನವನ್ನು ಆಕರ್ಷಣೀಯಗೊಳಿಸಿವೆ.
‘ಇದರಲ್ಲಿ ಯಾವುದೇ ತಪ್ಪಿಲ್ಲ. ಮಕ್ಕಳು ಇಲ್ಲದವರಿಗೆ ಮಾತ್ರ ಅದರ ನೋವು ಗೊತ್ತು. ನಿಜವಾಗಿಯೂ ಯಾರು ಮಕ್ಕಳಿಗಾಗಿ ಹಂಬಲಿಸುತ್ತಿರುತ್ತಾರೋ ಅಂಥವರಿಗೆ ನಾವು ಈ ಮೂಲಕ ಸಹಾಯ ಮಾಡುತ್ತೇವೆ. ಇದೊಂದು ದೈವೀ ಕಾರ್ಯ ಎಂದೇ ನಾವು ಭಾವಿಸಿದ್ದೇವೆ’ ಎನ್ನುತ್ತಾರೆ ಕೃತಕ ಗರ್ಭಧಾರಣೆ ಕೇಂದ್ರವೊಂದಕ್ಕೆ 2 ಬಾರಿ ತಲಾ 1 ಸಾವಿರ ಡಾಲರ್ಗಳಿಗೆ ಅಂಡವನ್ನು ಮಾರಿಕೊಂಡಿರುವ ಯುವತಿಯೊಬ್ಬಳ ತಾಯಿ ಪಾಕ್ಸನ್ ತೊಂಗಡಾ.
ಸಲಿಂಗಿ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಭಾರತದಲ್ಲಿ ಅವಕಾಶವಿಲ್ಲ. ಆದರೆ, ಥಾಯ್ಲೆಂಡ್ನಲ್ಲಿ ಈ ನಿರ್ಬಂಧ ಇಲ್ಲ. ಆದರೆ, ಥಾಯ್ಲೆಂಡ್ ಕಾನೂನಿನ ಪ್ರಕಾರ ಯಾರು ಮಗುವಿಗೆ ಜನ್ಮ ನೀಡುತ್ತಾರೋ ಅವರೇ ಮಗುವಿನ ತಾಯಿ. ಜೈವಿಕ ತಾಯಿಗಿಂತಲೂ ಹೆತ್ತತಾಯಿಗೆ ಇಲ್ಲಿ ಹಕ್ಕು ಅಧಿಕ. ಹೀಗಾಗಿ ಮಗುವನ್ನು ಜೈವಿಕ ತಂದೆ–ತಾಯಿಗೆ ಒಪ್ಪಿಸಬೇಕಾದರೆ ಬಾಡಿಗೆ ತಾಯಿ ತನ್ನ ಹಕ್ಕನ್ನು ಕಾನೂನು ಪ್ರಕಾರ ತ್ಯಜಿಸಬೇಕು.
ಇದಕ್ಕೆ ಪೊಲೀಸ್ ಪರಿಶೀಲನೆ ಅಗತ್ಯ. ಈ ಎಲ್ಲ ತೊಡಕುಗಳಿಂದ ಅನೇಕ ವಿದೇಶಿ ದಂಪತಿಗಳು ಮಗುವನ್ನು ಕಳ್ಳಮಾರ್ಗದ (ಅಪಹರಣ) ಮೂಲಕ ದೇಶದಿಂದ ಹೊರಗೆ ಸಾಗಿಸುತ್ತಿರುವುದು ಅಲ್ಲಲ್ಲಿ ವರದಿಯಾಗಿದೆ. ಈ ಎಲ್ಲ ಕಾನೂನಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಶೀಘ್ರದಲ್ಲೇ ಥಾಯ್ಲೆಂಡ್ನ ಸರ್ಕಾರ ಹೊಸ ನೀತಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ಸರ್ಕಾರ ಇದನ್ನು ಇದುವರೆಗೆ ಬಹಿರಂಗವಾಗಿ ಹೇಳಿಲ್ಲ. ಆದರೆ, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಈ ಉದ್ಯಮಕ್ಕೆ ನಿಯಂತ್ರಣ ಬೇಕೇ ಬೇಕು ಎಂದು ಹೇಳಿದ್ದಾರೆ. ‘ಮಾನವ ಶಿಶುವಿಗೆ ಜನ್ಮ ನೀಡುವುದು ಪ್ರಾಣಿಗಳು ಮರಿ ಹಾಕಿದಂತೆ ಅಲ್ಲ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ನಳಂದದ ಪುನರುತ್ಥಾನ...
ಬಿಹಾರಕ್ಕೆ ಬರುವ ವಿದೇಶಿ ಮತ್ತು ನಮ್ಮ ದೇಶದ ಪ್ರವಾಸಿಗರು ಒಂದು ಸ್ಥಳಕ್ಕಂತೂ ಖಂಡಿತ ಭೇಟಿ ನೀಡುತ್ತಾರೆ. ಅದು ನಳಂದ. ಪುರಾತನ ನಳಂದ ವಿಶ್ವವಿದ್ಯಾಲಯದ ಅವಶೇಷಗಳಿರುವ ಜಾಗಕ್ಕೆ ಅವರು ಭೇಟಿ ನೀಡುತ್ತಾರೆ, ಈ ವಿ.ವಿ. ಬಗೆಗಿನ ಎಲ್ಲ ವಿವರಗಳನ್ನು ತಮ್ಮ ಮಾರ್ಗದರ್ಶಿಯಿಂದ ತಿಳಿದುಕೊಳ್ಳುತ್ತಾರೆ, ಅಲ್ಲಿನ ಕೆಲವು ಫೋಟೊ ಕ್ಲಿಕ್ಕಿಸಿಕೊಂಡು ನೆನಪುಗಳೊಂದಿಗೆ ತಮ್ಮ ಊರುಗಳಿಗೆ ಮರಳುತ್ತಾರೆ.
ಮುಂದಿನ ಬಾರಿ ಅವರು ಇಲ್ಲಿಗೆ ಬಂದಾಗ, ಭೇಟಿ ನೀಡಬೇಕಾದ ಇನ್ನೊಂದು ಸ್ಥಳ ಇದೆ. ಅದು, ಹೊಸ ನಳಂದ ವಿಶ್ವವಿದ್ಯಾಲಯ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಯತ್ನಗಳಿಂದಾಗಿ ಸೆಪ್ಟೆಂಬರ್ 1ರಿಂದ ವಿ.ವಿ ಆರಂಭಗೊಂಡಿದೆ. ಆಧುನಿಕ ನಳಂದ ವಿ.ವಿ.ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಆಗ್ನೇಯ ಏಷಿಯಾ ರಾಷ್ಟ್ರಗಳ ಕೆಲವು ಸಂಘಟನೆಗಳು ಹಣಕಾಸಿನ ನೆರವು ನೀಡಿವೆ.
ಈ ವಿ.ವಿ ಪುನರುತ್ಥಾನದ ಕತೆ ಆರಂಭವಾಗಿದ್ದು 2006ರ ಮಾರ್ಚ್ನಲ್ಲಿ. ಅಂದು ನಮ್ಮ ರಾಷ್ಟ್ರಪತಿ ಆಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಿಹಾರದ ಶಾಸಕರನ್ನು ಉದ್ದೇಶಿಸಿ ಮಾತನಾಡುವಾಗ, ‘ಐದನೆಯ ಶತಮಾನಕ್ಕೆ ಸೇರಿದ, ಈ ವಿ.ವಿ.ಯ ಪುನರುತ್ಥಾನದ ಕೆಲಸ ಆಗಬೇಕು’ ಎಂದು ಹೇಳಿದ್ದರು. ಕಲಾಂ ಆಡಿದ ಮಾತು ಹೊಸ ಕೆಲಸಕ್ಕೆ ನಾಂದಿ ಹಾಡಿತು. ಬಿಹಾರದ ನಿತೀಶ್ ಕುಮಾರ್ ಸರ್ಕಾರ 2009ರಲ್ಲಿ ವಿಶೇಷ ಸಂಪುಟ ಸಭೆ ನಡೆಸಿ, ನಳಂದ ಮಸೂದೆಗೆ ಅಸ್ತು ಎಂದಿತು. ಯುಪಿಎ ಸರ್ಕಾರ 2010ರ ನವೆಂಬರ್ನಲ್ಲಿ ನಳಂದ ವಿಶ್ವವಿದ್ಯಾಲಯ ಕಾಯ್ದೆಗೆ ಅನುಮೋದನೆ ಪಡೆದುಕೊಂಡಿತು. ಆಗ್ನೇಯ ಏಷಿಯಾ ರಾಷ್ಟ್ರಗಳನ್ನು ಬೆಸೆಯುವ ಮಾದರಿಯಲ್ಲಿ ಈ ವಿಶ್ವವಿದ್ಯಾಲಯವನ್ನು ಕಟ್ಟುವ ಪ್ರಸ್ತಾವವನ್ನು ಸಿಂಗಪುರ ಸರ್ಕಾರ ಇದೇ ಸಮಯದಲ್ಲಿ ಮುಂದಿಟ್ಟಿತು. ಮೊನ್ನೆ, ಅಂದರೆ ಇದೇ 1ರಂದು ವಿಶ್ವವಿದ್ಯಾಲಯ ಆರಂಭಗೊಂಡಿದೆ, 11 ವಿದ್ಯಾರ್ಥಿಗಳು ಮತ್ತು ಏಳು ಅಧ್ಯಾಪಕರೊಂದಿಗೆ ತಾತ್ಕಾಲಿಕ ಕಟ್ಟಡವೊಂದರಲ್ಲಿ ತರಗತಿಗಳು ಆರಂಭವಾಗಿವೆ. 12ನೇ ಶತಮಾನದಲ್ಲಿ ಮಹಮ್ಮದ್ ಬಿನ್ ಬಕ್ತಿಯಾರ್ ಖಿಲ್ಜಿಯಿಂದ ನಾಶಗೊಂಡ ನಳಂದ ವಿ.ವಿಯ ಅವಶೇಷಗಳು ಇರುವ ಜಾಗದಿಂದ 12 ಕಿ.ಮೀ ದೂರದಲ್ಲಿ ಈಗಿರುವ ತಾತ್ಕಾಲಿಕ ಕಟ್ಟಡ ಇದೆ.
ಆರಂಭಿಕ ಹಂತವಾಗಿ ಪರಿಸರ ವಿಜ್ಞಾನ ಮತ್ತು ಇತಿಹಾಸ ಅಧ್ಯಯನ ಕೋರ್ಸ್ಗಳನ್ನು ತೆರೆಯಲಾಗಿದೆ. ‘ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು, ಅಧ್ಯಾಪಕರು ಬರಲಿದ್ದಾರೆ’ ಎಂದು ವಿ.ವಿ. ಕುಲಪತಿ ಗೋಪ ಸಭರ್ವಾಲ್ ಹೇಳುತ್ತಾರೆ.
‘ಭೌತಿಕ ಮತ್ತು ಬೌದ್ಧಿಕ ಸೀಮೆಗಳನ್ನು ಮೀರಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ವಿದ್ಯೆಯ ದಾನ ಮಾಡಬೇಕು. ಹಿಂದಿನ ನಳಂದ ವಿ.ವಿ ಯಾವ ಮೌಲ್ಯಗಳನ್ನು ಪ್ರತಿಪಾದಿಸಿತ್ತೋ, ಅದೇ ಮೌಲ್ಯಗಳನ್ನು ಇಂದಿನ ನಳಂದ ವಿ.ವಿ ಕೂಡ ಅನುಸರಿಸುತ್ತದೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ವಿಶ್ವವಿದ್ಯಾಲಯಕ್ಕೆ ಎಂದು ಕೇಂದ್ರ ಸರ್ಕಾರ ಈಗಾಗಲೇ ₨ 2,700 ಕೋಟಿ ಬಿಡುಗಡೆ ಮಾಡಿದೆ. 2020ರ ವೇಳೆಗೆ ನಳಂದ ವಿ.ವಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳಿಂದ ಕೂಡಿರುತ್ತದೆ. ಆ ವೇಳೆಗೆ ಅಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಏಳು ಕೋರ್ಸ್ಗಳು ಇರಲಿವೆ. ವಿ.ವಿ ಕ್ಯಾಂಪಸ್ ವಿಸ್ತೀರ್ಣ 443 ಎಕರೆ ಆಗಿರಲಿದೆ. ತನ್ನದೇ ಆದ ಕ್ಯಾಂಪಸ್ ನಿರ್ಮಾಣ ಆಗುವವರೆಗೆ ವಿದ್ಯಾರ್ಥಿಗಳಿಗೆ ಸರ್ಕಾರಿ ಹೋಟೆಲ್ ಒಂದರ ಕೊಠಡಿಗಳಲ್ಲಿ ತರಗತಿಗಳು ನಡೆಯಲಿವೆ.
‘ಹೋಟೆಲ್ನ ಒಂದು ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ, ಇನ್ನೊಂದರಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಅದೇ ಕಟ್ಟಡದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದು ಕುಲಪತಿ ತಿಳಿಸಿದರು.
ಸ್ನಾತಕೋತ್ತರ ಕೋರ್ಸ್ನ ಒಂದು ವರ್ಷದ ಶುಲ್ಕ ₨ 3 ಲಕ್ಷ. ಆಡಳಿತಾತ್ಮಕ ವೆಚ್ಚ ಎಂದು ₨ 75 ಸಾವಿರ ಪ್ರತ್ಯೇಕ. ಇದಲ್ಲದೆ, ವಸತಿಗೆ ವಿದ್ಯಾರ್ಥಿಗಳು ಹೆಚ್ಚುವರಿ ಮೊತ್ತ ಪಾವತಿಸಬೇಕು. ವಾರ್ಷಿಕ ₨ 3.75 ಲಕ್ಷ ಶುಲ್ಕ ಎಲ್ಲರಿಗೂ ಎಟಕುವಂತೆ ಇಲ್ಲ ಎಂದು ಕೆಲವು ಹಿರಿಯ ಶಿಕ್ಷಣ ತಜ್ಞರು ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ.
‘ಐಐಟಿ ಅಥವಾ ಐಐಎಂನಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಇಷ್ಟೇ ಮೊತ್ತ ಪಾವತಿಸಬೇಕು. ಆದರೆ ಮಾನವಿಕ ವಿಷಯಗಳಿಗೆ ಇಷ್ಟು ಪಾವತಿಸಲು ಅವರು ಮನಸ್ಸು ಮಾಡುವುದಿಲ್ಲ’ ಎಂದು ಪಟ್ನಾ ವಿಶ್ವವಿದ್ಯಾಲಯ ಅಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು. ಶುಲ್ಕ ಮಾತ್ರವಲ್ಲ, ಇತರ ಕೆಲವು ವಿಷಯಗಳಲ್ಲೂ ವಿ.ವಿ ಟೀಕೆಗೆ ಒಳಗಾಗಿದೆ.
‘ನಳಂದ ವಿ.ವಿ ಪುನರುತ್ಥಾನ ಅತ್ಯಂತ ಮಹತ್ವದ್ದು. ಆದರೆ ಇದರ ಆಡಳಿತ ಮಂಡಳಿಯ ಹೆಚ್ಚಿನ ಸದಸ್ಯರು ಹೊರದೇಶಗಳಲ್ಲಿ ಇದ್ದಾರೆ. ಅವರಿಗೆ ಯೋಜನೆಯ ಸೂಕ್ಷ್ಮ ವಿಚಾರಗಳು ತಿಳಿದಿರುವ ಸಾಧ್ಯತೆ ಕಡಿಮೆ’ ಎಂದು ಸಮಾಜ ವಿಜ್ಞಾನಿ ಅಜಯ್ ಕುಮಾರ್ ಹೇಳುತ್ತಾರೆ.
ವಿ.ವಿ. ಆಡಳಿತ ಮಂಡಳಿಯಲ್ಲಿ ಲಾರ್ಡ್ ಮೇಘನಾಥ ದೇಸಾಯಿ, ಪ್ರೊ. ಸುಗತ ಬೋಸ್ ಇವರೊಂದಿಗೆ ಸಿಂಗಪುರ, ಚೀನಾ ಮತ್ತು ಜಪಾನ್ ದೇಶಗಳ ಶಿಕ್ಷಣ ತಜ್ಞರು ಇದ್ದಾರೆ. ಅಮರ್ತ್ಯ ಸೇನ್ ಅವರು ವಿ.ವಿ.ಯ ಕುಲಾಧಿಪತಿ.
ವಿ.ವಿ. ಆಡಳಿತ ಮಂಡಳಿಯಲ್ಲಿ ಲಾರ್ಡ್ ಮೇಘನಾಥ ದೇಸಾಯಿ, ಪ್ರೊ. ಸುಗತ ಬೋಸ್ ಇವರೊಂದಿಗೆ ಸಿಂಗಪುರ, ಚೀನಾ ಮತ್ತು ಜಪಾನ್ ದೇಶಗಳ ಶಿಕ್ಷಣ ತಜ್ಞರು ಇದ್ದಾರೆ. ಅಮರ್ತ್ಯ ಸೇನ್ ಅವರು ವಿ.ವಿ.ಯ ಕುಲಾಧಿಪತಿ.
ದಾಖಲಿತ ಇತಿಹಾಸದ ಪ್ರಕಾರ ನಳಂದ ವಿ.ವಿಯನ್ನು 5ರಿಂದ 12ನೇ ಶತಮಾನದವರೆಗಿನ ಅತ್ಯುನ್ನತ ವಿದ್ಯಾಕೇಂದ್ರಗಳಲ್ಲಿ ಒಂದು. ಒಂದನೇ ಕುಮಾರಗುಪ್ತನ ಅವಧಿಯಲ್ಲಿ ಹುಟ್ಟಿದ ಈ ವಿ.ವಿ.ಯು ಬೌದ್ಧ ತತ್ವಜ್ಞಾನ ಅಧ್ಯಯನದ ಅತ್ಯುನ್ನತ ಕೇಂದ್ರವಾಗಿತ್ತು. ಎರಡು ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದ ಇದರಲ್ಲಿ, 1,500 ಅಧ್ಯಾಪಕರು ಹಾಗೂ 10 ಸಾವಿರ ವಿದ್ಯಾರ್ಥಿಗಳು ಇದ್ದರು. ಒಂದು ದಂತಕತೆ ಪ್ರಕಾರ ಪಾಣಿನಿ ಕೂಡ ಇಲ್ಲೇ ಅಧ್ಯಯನ ನಡೆಸಿದ್ದ.
ಈ ವಿ.ವಿ.ಯ ವಿದ್ಯಾರ್ಥಿ ಮತ್ತು ಅಧ್ಯಾಪಕ ಆಗಿದ್ದ ಚೀನಾದ ವಿದ್ವಾಂಸ ಹ್ಯೂಯೆನ್ ತ್ಸಾಂಗ್ ಪ್ರಕಾರ, ಇಲ್ಲಿ ಆರು ಮಹಡಿಗಳ ಕಟ್ಟಡ ಇತ್ತು. ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಇತ್ತು. ವಿದ್ಯಾರ್ಜನೆಗೂ ಯಾವುದೇ ಶುಲ್ಕ ಇರಲಿಲ್ಲ. ಆದರೆ ವಿದ್ಯಾರ್ಥಿಗಳು ಕಠಿಣ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿತ್ತು.
ತತ್ವಶಾಸ್ತ್ರ, ಖಗೋಳಶಾಸ್ತ್ರ, ಸಾಹಿತ್ಯ, ತರ್ಕ, ಬೌದ್ಧ ಮತ್ತು ಹಿಂದೂ ತತ್ವಜ್ಞಾನಗಳ ಬಗ್ಗೆ ಇಲ್ಲಿ ಅಧ್ಯಯನ ಮಾಡಬಹುದಿತ್ತು. ದಕ್ಷಿಣ ಏಷಿಯಾದ ರಾಷ್ಟ್ರಗಳಾದ ಜಪಾನ್, ಟಿಬೆಟ್ ಮತ್ತು ಚೀನಾಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಈ ವಿ.ವಿ ಮಾಡಿತ್ತು. ವಿ.ವಿ.ಯ ಅವಶೇಷಗಳನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ.
ಸರ್ಕಾರ ಮಣಿಸಿದ ಮಹಾಲೇಖಪಾಲ ವಿನೋದ್ ರಾಯ್
ಬಹುಶಃ ಮಹಾಲೇಖಪಾಲರ ಆಯ್ಕೆ ವಿಧಾನದ ಬಗ್ಗೆ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಬೇಡಿಕೆಗೆ ಮಣಿಯದೇ ಇದ್ದುದು, ಅಧಿಕಾರಾವಧಿಯಲ್ಲಿ ತಾವು ಮಾಡಿದ ಅತಿ ದೊಡ್ಡ ತಪ್ಪು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈಗ ಪರಿತಪಿಸುತ್ತಿರಬಹುದು. ಪ್ರಧಾನಿ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಅವರಿಂದ ಆಯ್ಕೆಯಾಗುವ ಈ ಸಾಂವಿಧಾನಿಕ ಹುದ್ದೆಯನ್ನು ‘ಬಹುಸದಸ್ಯರ ಸಂಸ್ಥೆಯನ್ನಾಗಿ ಮಾಡಿ’ ಎಂಬ ಅಡ್ವಾಣಿ ಅವರ ಇನ್ನಿಲ್ಲದ ಬೇಡಿಕೆಗೆ ಸಿಂಗ್ ಹ್ಞೂಂಗುಟ್ಟಿದ್ದೇ ಆಗಿದ್ದರೆ, ದೇಶ ಕಂಡ 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ, ಕಾಮನ್ವೆಲ್್ತ ಕ್ರೀಡಾಕೂಟದಂತಹ ಮಹಾನ್ ಹಗರಣಗಳು ಬೆಳಕಿಗೆ ಬರುತ್ತಿರಲೇ ಇಲ್ಲವೇನೊ.
ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಯುಪಿಎ ನೇತೃತ್ವದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಈ ಎಲ್ಲ ಹಗರಣಗಳನ್ನೂ ತಮ್ಮ ಆಘಾತಕಾರಿ ವರದಿಗಳ ಮೂಲಕ ಬಯಲು ಮಾಡಿದ್ದ ಮಾಜಿ ಮಹಾಲೇಖಪಾಲ ವಿನೋದ್ ರಾಯ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ‘ನಾಟ್ ಜಸ್್ಟ ಆ್ಯನ್ ಅಕೌಂಟೆಂಟ್’ ಎಂಬ ಅವರ ಪುಸ್ತಕ ಹಿಂದಿನ ಸರ್ಕಾರದ ರಾಜಕಾರಣಿಗಳ ಒಳಸುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
‘ಹಗರಣಗಳ ಪ್ರತಿಯೊಂದು ಆಗುಹೋಗೂ ಪ್ರಧಾನಿಗೆ ತಿಳಿದಿತ್ತು; ಅಲ್ಲದೆ ವರದಿಯಲ್ಲಿ ಪ್ರಮುಖರ ಹೆಸರುಗಳನ್ನು ಕೈಬಿಡುವಂತೆ ನನ್ನ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ತಮ್ಮ ಪ್ರತಿ ನಿರ್ಧಾರದ ಬಗ್ಗೆಯೂ ಪ್ರಧಾನಿಗೆ ಪತ್ರ ಬರೆಯುತ್ತಿದ್ದರು. ಆದರೂ 2ಜಿ ಅಂತಹ ದೇಶದ ಅತ್ಯಮೂಲ್ಯ ಸಂಪನ್ಮೂಲ ಪೋಲಾಗದಂತೆ ತಡೆಯದೆ ಮೌನ ಪ್ರೇಕ್ಷಕರಾಗಿಯೇ ಉಳಿದ ಪ್ರಧಾನಿ ‘ಮೈತ್ರಿ ರಾಜಕಾರಣ’ದ ಬಲಿಪೀಠಕ್ಕೆ ಆಡಳಿತದ ತಲೆಯನ್ನೇ ಒಪ್ಪಿಸಿದರು. ಇದನ್ನೆಲ್ಲ ನಾನು ನನ್ನ ಪುಸ್ತಕದಲ್ಲಿ ಚರ್ಚಿಸಿ ದ್ದೇನೆ’ ಎನ್ನುತ್ತಾರೆ ರಾಯ್. ಅವರ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ಕಾವೇರುವಂತೆ ಮಾಡಿವೆ. ಅದಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಎದುರು ರಾಜಕಾರಣಿಗಳ ಅಮಾನವೀಯ ಮುಖವನ್ನು ಬಯಲು ಮಾಡಿವೆ.
ರಾಯ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಈ ಆರೋಪಗಳು ಕೇವಲ ಪ್ರಚಾರ ಗಿಟ್ಟಿಸುವ ತಂತ್ರವಾಗಿ ಕಾಣುತ್ತಿಲ್ಲ. ಆಗ, 2ಜಿ ಸ್ಪೆಕ್ಟ್ರಂನ ಅಸಮರ್ಪಕ ಹಂಚಿಕೆಯಿಂದ ಸರ್ಕಾರಕ್ಕೆ ರೂ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಅಂಕಿ ಸಂಖ್ಯೆಯನ್ನು ರಾಯ್ ತಮ್ಮ ಮುಂದಿಟ್ಟಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅದನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ‘ನೀವು ಸರಿಯಾಗಿ ಲೆಕ್ಕ ಹಾಕಿಲ್ಲ ಎನಿಸುತ್ತದೆ ಇನ್ನೊಮ್ಮೆ ನೋಡಿ’ ಎಂದು ತಣ್ಣಗೆ ಹೇಳಿದ್ದರು. ಆದರೆ ‘ಆರ್ಥಿಕ ತಜ್ಞರಾಗಿ ನೀವು ನಮಗೆ ಹೇಳಿಕೊಟ್ಟ ಪಾಠವನ್ನೇ ಆಧಾರವಾಗಿಟ್ಟು ಲೆಕ್ಕ ಹಾಕಿದ್ದೇನೆ.
ಹಾಗಾಗಿ ಆ ಲೆಕ್ಕ ತಪ್ಪಲು ಸಾಧ್ಯವೇ ಇಲ್ಲ’ ಎಂದು ಅವರಿಗೆ ರಾಯ್ ಎದುರೇಟು ಕೊಟ್ಟಿದ್ದರು. ಈಗ, ‘ಸಿಎಜಿ ವರದಿ ಆಧರಿಸಿ 2ಜಿ ಸ್ಪೆಕ್ಟ್ರಂ ಹಂಚಿಕೆಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿರುವುದರಿಂದ ನಿಮ್ಮ ಆರೋಪಗಳಿಗೆ ಸಮರ್ಥನೆ ಸಿಕ್ಕಂತಾಗಿದೆಯೇ’ ಎಂಬ ಮಾಧ್ಯಮಗಳ ಪ್ರಶ್ನೆಗೆ, ‘ಅಂತಹ ಯಾವ ಸಮರ್ಥನೆಯನ್ನೂ ನಾನು ಎದುರು ನೋಡುತ್ತಿರಲಿಲ್ಲ. ಏಕೆಂದರೆ ವರದಿಯಲ್ಲಿ ನಾವು ಬರೆದಿರುವ ಪ್ರತಿ ಪದವೂ ದಾಖಲೆಯನ್ನು ಆಧರಿಸಿದ್ದು’ ಎಂದಿರುವ ರಾಯ್, ನಾನಾ ಆರೋಪಗಳ ಮೂಲಕ ತಮ್ಮ ವೃತ್ತಿಪರತೆಗೇ ಸವಾಲು ಹಾಕಲು ಹೊರಟಿರುವ ರಾಜಕಾರಣಿಗಳಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.
ನೇರ ಹಾಗೂ ಪ್ರಾಮಾಣಿಕ ನಿಲುವಿಗೆ ಹೆಸರಾದ ರಾಯ್ ಅವರಿಗೆ ರಾಜಕಾರಣಿಗಳ ಒಡನಾಟ ಹೊಸದೇನಲ್ಲ. ವಿನೋದ್ ರಾಯ್ ಅವರು ಭಾರತದ 11ನೇ ಮಹಾಲೇಖಪಾಲರಾಗಿದ್ದವರು. ರಾಯ್, ದೆಹಲಿ ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದವರು. ಇವರು ಹಾರ್ವರ್ಡ್ ವಿ.ವಿ.ಯಿಂದ ಸಾರ್ವಜನಿಕ ಆಡಳಿತದಲ್ಲಿ ಪದವೀಧರ. ಉತ್ತರ ಪ್ರದೇಶ ಮೂಲದವರಾದ ಅವರು (ಜನನ : 1948) ಕೇರಳ ಕೇಡರ್ನ 1972ನೇ ತಂಡದ ಐಎಸ್ಎಸ್ ಅಧಿಕಾರಿ.
ತ್ರಿಶೂರ್ ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ಆರಂಭಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2008ರ ಜನವರಿಯಲ್ಲಿ ಮಹಾಲೇಖಪಾಲರಾಗಿ ಅಧಿಕಾರ ಸ್ವೀಕರಿಸಿ 2013ರ ಮೇ 22ರಂದು ಆ ಹುದ್ದೆಯಿಂದ ರಾಯ್ ನಿವೃತ್ತರಾದಾಗ 65 ವರ್ಷದ ಅವರ ಹುಟ್ಟುಹಬ್ಬಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿತ್ತು. 1990ರಲ್ಲಿ ಅಸ್ತಮಾದಿಂದ ಪತ್ನಿ ನಿಧನರಾದಾಗ ತಮ್ಮ ಸಹೋದ್ಯೋಗಿಯ ವಿಧವಾ ಪತ್ನಿಯನ್ನು ರಾಯ್ ಮದುವೆಯಾಗಿದ್ದರು. ಆದರೆ ಅಕಾಲಿಕವಾಗಿ ಅವರನ್ನೂ ಕಳೆದುಕೊಂಡ ರಾಯ್ ಅವರಿಗೆ ಮೂವರು ಮಕ್ಕಳಿದ್ದಾರೆ.
‘ನಮ್ಮಂತಹ ಅಧಿಕಾರಿಗಳು ಸರ್ಕಾರಕ್ಕೆ ಬಾಧ್ಯಸ್ಥರಲ್ಲ, ನಾವೇನಿದ್ದರೂ ಜನಸೇವಕರು. ಸರ್ಕಾರದ ಕಾರ್ಯವೈಖರಿ ಯನ್ನು ಜನರ ಮುಂದೆ ನೇರವಾಗಿ ವರದಿ ಮಾಡಲು ಸಿಕ್ಕ ಅವಕಾಶವನ್ನು ನಾನು ಬಳಸಿಕೊಂಡಿದ್ದೇನೆ’ ಎಂದಿರುವ ಅವರ ಮಾತುಗಳು ಮಹಾಲೇಖಪಾಲರ ಹುದ್ದೆಗಿರುವ ಮಹತ್ವವನ್ನು ಸಾರಿ ಹೇಳಿವೆ. ಅವರ ವರದಿಗಳ ಪ್ರಭಾವ ನಮ್ಮ ದೇಶಕ್ಕಷ್ಟೇ ಸೀಮಿತಗೊಂಡಿಲ್ಲ. ಇದರಿಂದ ಪ್ರೇರಣೆ ಗೊಳಗಾಗಿರುವ ಆಫ್ರಿಕಾದ ತೈಲ ಸಂಪದ್ಭರಿತ ರಾಷ್ಟ್ರಗಳು ಸಹ, ಹತ್ತಾರು ವರ್ಷಗಳಿಂದ ಬಾಕಿ ಇರುವ ಲೆಕ್ಕ ಕೊಡುವಂತೆ ತಮ್ಮ ತೈಲ ಕಂಪೆನಿಗಳಿಗೆ ತಾಕೀತು ಮಾಡಿವೆ. ಆದರೂ ಸಿಎಜಿ ಹುದ್ದೆಗಿರುವ ಅಧಿಕಾರದ ಮಿತಿಯ ಅರಿವು ಸಹ ರಾಯ್ ಅವರಿಗಿದೆ.
ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸರ್ಕಾರದಿಂದ ಹಣಕಾಸು ನೆರವು ಪಡೆಯುವ ಸೊಸೈಟಿಗಳನ್ನೂ ಸಿಎಜಿ ವ್ಯಾಪ್ತಿಗೆ ಒಳಪಡಿಸುವಂತೆ 1971ರ ಲೆಕ್ಕಪತ್ರ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಅವರ ಬೇಡಿಕೆಯನ್ನು ಸರ್ಕಾರ ಮನ್ನಿಸಿಲ್ಲ. ವಿಮಾನ ನಿಲ್ದಾಣ, ಹೆದ್ದಾರಿ, ಬಂದರುಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುವ ಬೃಹತ್ ಯೋಜನೆಗಳು ಮಹಾಲೇಖಪಾಲರ ಪರಿಧಿಗೆ ಒಳಪಡದೇ ಇರುವುದರಿಂದ, ಸರ್ಕಾರದಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಕೊರಗು. ಜೊತೆಗೆ ವಿವಿಧ ಇಲಾಖೆಗಳಿಗೆ ಸಿಎಜಿ ಕೇಳುವ ಮಾಹಿತಿಯನ್ನು ಒದಗಿಸುವುದಕ್ಕೆ ಸಹ ಯಾವ ಸಮಯದ ನಿರ್ಬಂಧವೂ ಇಲ್ಲ.
ಮಾಹಿತಿ ಹಕ್ಕು ಕಾಯ್ದೆಯಡಿ ಒಬ್ಬ ಸಾಮಾನ್ಯ ಅರ್ಜಿದಾರ ಕೇಳುವ ಪ್ರಶ್ನೆಗೂ 30 ದಿನಗಳೊಳಗೆ ಉತ್ತರ ಕೊಡಬೇಕೆಂಬ ನಿಯಮವಿದೆ; ಆದರೆ ಒಬ್ಬ ಮಹಾಲೇಖಪಾಲರಿಗೆ ಮಾಹಿತಿ ಒದಗಿಸುವುದಕ್ಕೆ ಸಮಯದ ಮಿತಿಯೇ ಇಲ್ಲ ಎಂದು ಅವರು ವಿಷಾದಿಸುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಶಾಹಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ರಾಯ್ ಅವರು ಕೊಡುವ ಉತ್ತರ ವ್ಯವಸ್ಥೆಯ ವಸ್ತುಸ್ಥಿತಿಯನ್ನು ತೆರೆದಿಡುತ್ತದೆ.‘35 ವರ್ಷಗಳ ಅವಿಶ್ರಾಂತ ದುಡಿಮೆಯ ನಂತರ ಕೇಂದ್ರ ಸರ್ಕಾರದ ಕಾರ್ಯದರ್ಶಿಯಾಗಿ ನಾನು ಆಯ್ಕೆಯಾದೆ. ನನ್ನ ತಂಡದ ಕೇವಲ ಶೇ 20ರಷ್ಟು ಮಂದಿಗೆ ಮಾತ್ರ ಅಂತಹ ಅವಕಾಶ ಸಿಕ್ಕಿತು. ಹೀಗಾಗಿ ಕಾರ್ಯತತ್ಪರತೆ ಮತ್ತು ಪ್ರಾಮಾಣಿಕತೆಯಲ್ಲಿ ನಾನು ಸಹ ಮೇಲಿದ್ದೆ ಎಂತಲೇ ಅರ್ಥ. ಇಷ್ಟಾದರೂ 6 ಮಂದಿಯನ್ನು ಒಳಗೊಂಡ ಸಚಿವರ ತಂಡವೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿತ್ತು.
ಅಧಿಕಾರಶಾಹಿಯನ್ನು ಬದಿಗೊತ್ತಿ ಸಚಿವರ ಸಮಿತಿಯೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವಂತಾದರೆ ಸರ್ಕಾರದ ನೀತಿಗಳಿಗೆ ಲಕ್ವ ಹೊಡೆದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹುದರಲ್ಲಿ ಯುಪಿಎ ಸರ್ಕಾರದಲ್ಲಿ 82 ಸಚಿವರ ಸಮಿತಿಗಳಿದ್ದವು. ಅಲ್ಲಿಗೆ ಸರ್ಕಾರದ ಕಾರ್ಯವೈಖರಿ ಹೇಗಿದ್ದಿರಬಹುದು ಲೆಕ್ಕಹಾಕಿ’- ಎನ್ನುತ್ತಾರೆ ಅವರು.ಭ್ರಷ್ಟಾಚಾರವನ್ನು ಎದುರಿಸುವುದು ಅವರ ಜೀವನದ ಒಂದು ಭಾಗವೇ ಆಗಿದೆ. ಸರ್ಕಾರದ ಉನ್ನತ ಹಂತದ ಹುದ್ದೆ ಮತ್ತು ವ್ಯವಹಾರಗಳಲ್ಲಿ ಪಾರದರ್ಶಕತೆ ತರಬೇಕು ಎಂಬುದೇ ಅವರ ಎಲ್ಲ ಪ್ರಮುಖ ನಡೆಗಳ ಹಿಂದಿನ ತತ್ವ.
ಹೊಸ ನಿರೀಕ್ಷೆ ಮೂಡಿಸಿರುವ ಪ್ರಧಾನಿ ಅಮೆರಿಕ ಪ್ರವಾಸ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಕೆಲವು ದಿನಗಳಲ್ಲೇ ಒಂದಷ್ಟು ಕುತೂಹಲಕರ ಘಟನೆಗಳು ವರದಿಯಾದವು. ಸರ್ಕಾರಿ ಅಧಿಕಾರಿಗಳಿಗೆ ವಿಧಿಸಿದ ಶಿಸ್ತುಪಾಲನೆ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ರೀತಿ, ಬಹಿರಂಗ ಸಭೆಗಳಲ್ಲಿನ ಹಾವಭಾವ ಅಥವಾ ದೊಡ್ಡ ದೊಡ್ಡ ಉದ್ಯಮಿಗಳೊಂದಿಗೆ ನಡೆಸುತ್ತಿದ್ದ ಸಭೆಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದ್ದವು.
ಅವೆಲ್ಲದರಲ್ಲಿ ಇದ್ದ ಸಂದೇಶ ಸ್ಪಷ್ಟವಾಗಿತ್ತು: ಅದೆಂದರೆ ಪ್ರತಿಯೊಂದರಲ್ಲೂ ತಮ್ಮ ಶೈಲಿಯನ್ನು ಪ್ರತಿಬಿಂಬಿಸುತ್ತಿರುವ ಮೋದಿ, ಶಿಸ್ತನ್ನು ಬಯಸುತ್ತಾರೆ ಎಂಬುದು. ಈ ವಾರ ಮೋದಿ ಅವರ ಶೈಲಿಯನ್ನು ಅಮೆರಿಕ ನೋಡಲಿದೆ. ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ನಲ್ಲಿ ಬಿಡುವಿಲ್ಲದ ಐದು ದಿನಗಳ ಪ್ರವಾಸದ ಅವಧಿಯುದ್ದಕ್ಕೂ ಮೋದಿ ನವರಾತ್ರಿಯ ಉಪವಾಸ ವ್ರತ ಪಾಲಿಸುತ್ತಿದ್ದಾರೆ.
ಅಂದ ಹಾಗೆ ಅವರು ಈ ಅವಧಿಯಲ್ಲಿ ಸೇವಿಸುವುದು ಬರೀ ಚಹಾ ಹಾಗೂ ನಿಂಬೆಹಣ್ಣಿನ ರಸ ಮಿಶ್ರಿತ ಜೇನನ್ನು. ಮಹತ್ವಾಕಾಂಕ್ಷೆ ಹಾಗೂ ಆತ್ಮವಿಶ್ವಾಸದೊಂದಿಗೆ ಭಾರತವನ್ನು ಕಟ್ಟಬೇಕೆಂದು ಹೊರಟಿರುವ ಮೋದಿ ಅವರ ಈ ಭೇಟಿ ಮಹತ್ವಪೂರ್ಣದ್ದಂತೂ ಹೌದು.
ನರೇಂದ್ರ ಮೋದಿಯವರ ಮಾದರಿಯಲ್ಲಿ ಜಗತ್ತಿನ ಇತರ ನಾಯಕರು ಅಮೆರಿಕಕ್ಕೆ ಬಂದಿದ್ದು ತೀರಾ ವಿರಳ. ಮೋದಿ ಅವರು ಅಧಿಕಾರ ನಡೆಸುತ್ತಿದ್ದ ರಾಜ್ಯದಲ್ಲಿ ಕೋಮುಗಲಭೆ ಸಂಭವಿಸಿದ ಹಿನ್ನೆಲೆ ಯಲ್ಲಿ ಅಮೆರಿಕ ಅವರಿಗೆ ವೀಸಾ ನಿರಾಕರಿಸಿತ್ತು.
ನರೇಂದ್ರ ಮೋದಿಯವರ ಮಾದರಿಯಲ್ಲಿ ಜಗತ್ತಿನ ಇತರ ನಾಯಕರು ಅಮೆರಿಕಕ್ಕೆ ಬಂದಿದ್ದು ತೀರಾ ವಿರಳ. ಮೋದಿ ಅವರು ಅಧಿಕಾರ ನಡೆಸುತ್ತಿದ್ದ ರಾಜ್ಯದಲ್ಲಿ ಕೋಮುಗಲಭೆ ಸಂಭವಿಸಿದ ಹಿನ್ನೆಲೆ ಯಲ್ಲಿ ಅಮೆರಿಕ ಅವರಿಗೆ ವೀಸಾ ನಿರಾಕರಿಸಿತ್ತು.
ಅದಾದ ಬಳಿಕ, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾಗಿ ದೇಶದ ಆಡಳಿತದ ಚುಕ್ಕಾಣಿ ಹಿಡಿದು, ಪ್ರವರ್ಧಮಾನಕ್ಕೆ ಬರುತ್ತಿರುವ ಚೀನಾದೊಂದಿಗೆ ಸಮತೋಲನ ಸಾಧಿಸಬಲ್ಲ ಒಬ್ಬ ಸಮರ್ಥ ನಾಯಕನಾಗಿ ಅವರು ನ್ಯೂಯಾರ್ಕ್ಗೆ ಬಂದಿಳಿದಿದ್ದಾರೆ. ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗಿದೆ.
ಪ್ರಬಲ ಆರ್ಥಿಕ ನೀತಿಗಳನ್ನು ಅನುಸರಿಸುವ ಮೂಲಕ ಭಾರತದ ಮಾರ್ಗರೇಟ್ ಥ್ಯಾಚರ್ ಆಗಲಿದ್ದಾರೆ ಎಂಬ ಹಲವರ ನಿರೀಕ್ಷೆಗಳಿಗೆ ಮೋದಿ ನಿರಾಶೆ ಉಂಟು ಮಾಡಿದ್ದಾರೆ. ಅದಕ್ಕೆ ಬದಲಾಗಿ ಅವರು ಆಡಳಿತ ಶೈಲಿಯನ್ನು ಬದಲಿಸುವತ್ತ ಗಮನಹರಿಸಿದ್ದಾರೆ. ಸಚಿವರ ಅಧಿಕಾರವನ್ನು ಮೊಟಕುಗೊಳಿಸಿ, ತಮ್ಮ ತಮ್ಮ ಕಾರ್ಯಾಲಯದತ್ತ ಹೆಚ್ಚು ಗಮನವಿಡುವಂತೆ ಸೂಚಿಸಿದ್ದಾರೆ. ಬಹುದಿನಗಳಿಂದ ತಾವು ರಚಿಸಲು ಉದ್ದೇಶಿಸಿದ್ದ ಆಡಳಿತ ಯಂತ್ರದತ್ತ ಅವರ ಚಿತ್ತ ಹರಿದಿದೆ.
ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭಾವೋದ್ವೇಗದಿಂದ ಮಾತನಾಡುತ್ತಾ, ಗ್ರಾಮೀಣ ಪ್ರದೇಶ, ರೈತರು, ದಲಿತರು ಹಾಗೂ ದೀನ ದುರ್ಬಲರ ಏಳಿಗೆಗೆ ಶ್ರಮಿಸುವುದಾಗಿ ಹೇಳಿದ್ದರು. ಏಕೆಂದರೆ, ಅಂಥವರೇ ತಮ್ಮನ್ನು ಈ ಉನ್ನತ ಸ್ಥಾನಕ್ಕೆ ಚುನಾಯಿಸಿ ಕಳುಹಿಸಿದವರು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ಮೋದಿಯವರು ತಮ್ಮ ಮೃದು ಸ್ವಭಾವವನ್ನು ಪ್ರದರ್ಶಿಸಿದ್ದು ಕುತೂಹಲಕಾರಿಯಾಗಿತ್ತು.
ಟಿಪ್ಪಣಿ ಗಳಿಲ್ಲದೇ ಮಾಡುತ್ತಿದ್ದ ಅವರ ಭಾಷಣದಲ್ಲಿ ಶೌಚಾಲಯ, ಸ್ವಚ್ಛತೆಯಂಥ ವಿಷಯಗಳು ಪ್ರಸ್ತಾಪವಾಗು ತ್ತಿದ್ದವು. ‘ಮುನ್ನೋಟ, ಬೃಹತ್ ಮುನ್ನೋಟಗಳ ಬಗ್ಗೆ ನಮ್ಮಲ್ಲಿ ಚರ್ಚೆಯಾಗುತ್ತಿದೆ. ಆದರೆ ನಾನೊಬ್ಬ ಸಣ್ಣ ವ್ಯಕ್ತಿ. ಸಮಾಜದಲ್ಲಿನ ಸಾಮಾನ್ಯ ಅಥವಾ ಸಣ್ಣ ವ್ಯಕ್ತಿಗಳ ಬಗ್ಗೆ ಚಿಂತಿಸುತ್ತೇನೆ. ಅಂಥವರ ಬಗ್ಗೆ ಯೋಚಿಸುತ್ತಲೇ ಅವರು ದೊಡ್ಡ ವ್ಯಕ್ತಿಗಳಾಗಿ ಬೆಳೆಯುವಂತೆ ಮಾಡುತ್ತೇನೆ. ಈ ಮೊದಲು ಯಾರೂ ಇಂಥ ಸಣ್ಣ ಜನರ ಬಗ್ಗೆ ಚಿಂತಿಸುತ್ತಲೇ ಇರಲಿಲ್ಲ’ ಎನ್ನುತ್ತಾರೆ ಮೋದಿ.
ವಿದೇಶಾಂಗ ವ್ಯವಹಾರಗಳ ಮಾತುಕತೆ ಸಮಯದಲ್ಲಿ ಮೋದಿಯವರ ಕಾರ್ಯಶೈಲಿ ಗಮನ ಸೆಳೆಯುವಂತಿದೆ. ಚೀನಾ ಅಧ್ಯಕ್ಷರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಮೋದಿ ಜನ್ಮದಿನವನ್ನೂ ಆಯೋಜಿಸಲಾಗಿತ್ತು. ಇಬ್ಬರು ನಾಯಕರ ಮಧ್ಯೆ ನಡೆದ ಮಾತುಕತೆ ಬಳಿಕ 10,000 ಕೊೋಟಿ ಡಾಲರ್ ಮೊತ್ತದ ಬಂಡವಾಳ ಹೂಡಿಕೆಗೆ ಆ ದೇಶ ನಿರ್ಧರಿಸಿತ್ತು. ಇಬ್ಬರೂ ನಾಯಕರು ಭೋಜನಕ್ಕೆ ಕುಳಿತ ಸಮಯದಲ್ಲೇ ಅತ್ತ ಲಡಾಖ್, ಕಾಶ್ಮೀರ ಸೇರಿದಂತೆ ಉಭಯ ದೇಶಗಳಿಗೆ ಸೇರಿದ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಸ್ವಲ್ಪ ಸಮಯದಲ್ಲೇ ಚೀನಾ ಅಧ್ಯಕ್ಷ ರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅದನ್ನು ಮೋದಿ ಹಿಂಜರಿಕೆಯಿಲ್ಲದೆ ಪ್ರಸ್ತಾಪಿಸಿಯೇ ಬಿಟ್ಟರು.
ಖುದ್ದು ನಿರ್ಧಾರ
ಈ ಹಿಂದಿನ ಪ್ರಧಾನಿಗಳಂತೆ ಮೋದಿಯವರ ಕಾರ್ಯವೈಖರಿ ಇಲ್ಲ. ಹಲವು ಅಧಿಕಾರಿಗಳು ಹೇಳುವಂತೆ, ಎಷ್ಟೋ ನಿರ್ಧಾರಗಳನ್ನು ಖುದ್ದಾಗಿ ಅವರೇ ತೆಗೆದುಕೊಂಡುಬಿಟ್ಟಿರುತ್ತಾರೆ. ಸಂಪುಟ ಸಭೆ ನಡೆಯುವುದಕ್ಕೂ ಕೇವಲ ಒಂದೆರಡು ತಾಸುಗಳ ಮೊದಲಿಗೆ ಸಭೆಯ ಅಜೆಂಡಾವನ್ನು ಸಂಬಂಧಿಸಿದವರಿಗೆ ರವಾನಿಸಲಾಗುತ್ತದೆ. ಇದರಿಂದಾಗಿ, ಯಾವುದೇ ನೀತಿ– ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಅವರು ಸಂಪೂರ್ಣವಾಗಿ ಪಾಲ್ಗೊಳ್ಳಲು ಆಗುವುದೇ ಇಲ್ಲ.
ಈ ಹಿಂದಿನ ಪ್ರಧಾನಿಗಳಂತೆ ಮೋದಿಯವರ ಕಾರ್ಯವೈಖರಿ ಇಲ್ಲ. ಹಲವು ಅಧಿಕಾರಿಗಳು ಹೇಳುವಂತೆ, ಎಷ್ಟೋ ನಿರ್ಧಾರಗಳನ್ನು ಖುದ್ದಾಗಿ ಅವರೇ ತೆಗೆದುಕೊಂಡುಬಿಟ್ಟಿರುತ್ತಾರೆ. ಸಂಪುಟ ಸಭೆ ನಡೆಯುವುದಕ್ಕೂ ಕೇವಲ ಒಂದೆರಡು ತಾಸುಗಳ ಮೊದಲಿಗೆ ಸಭೆಯ ಅಜೆಂಡಾವನ್ನು ಸಂಬಂಧಿಸಿದವರಿಗೆ ರವಾನಿಸಲಾಗುತ್ತದೆ. ಇದರಿಂದಾಗಿ, ಯಾವುದೇ ನೀತಿ– ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಅವರು ಸಂಪೂರ್ಣವಾಗಿ ಪಾಲ್ಗೊಳ್ಳಲು ಆಗುವುದೇ ಇಲ್ಲ.
‘ಇಂದಿರಾ ಗಾಂಧಿಯಂಥ ಪ್ರಭಾವಿ ನಾಯಕಿಯು ಪ್ರಧಾನಿಯಾಗಿದ್ದ ಅವಧಿಯಲ್ಲೂ ಅವರ ಸಲಹೆಗಾರರು ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ, ಅಂಥವರ ಸಲಹೆಗಳನ್ನು ಚಕಾರವೆತ್ತದೇ ಮಾನ್ಯ ಮಾಡಲಾಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ’ ಎಂದು ವ್ಯಾಖ್ಯಾನಿಸುತ್ತಾರೆ ಹಿರಿಯ ಪತ್ರಕರ್ತ ಸಿದ್ಧಾರ್ಥ ವರದರಾಜನ್. ಪತ್ರಕರ್ತರಿಗಂತೂ ಮಾಹಿತಿ ಪಡೆಯಲು ಉನ್ನತ ಅಧಿಕಾರಿಗಳು ಈಗ ಸಿಗುತ್ತಲೇ ಇಲ್ಲ. ಅಧಿಕಾರಶಾಹಿ ಮೌನವಾಗಿದೆ.
ಮಾಧ್ಯಮದ ಜತೆ ಸಂವಹನ ನಡೆಸುವ ಅಧಿಕಾರಿಯನ್ನು ಪ್ರಧಾನಿ ಕಚೇರಿ ಇನ್ನೂ ನೇಮಕ ಮಾಡಿಕೊಂಡಿಲ್ಲ. ಈ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಈಗಾಗಲೇ ಅಸಹನೆ ವ್ಯಕ್ತಪಡಿಸಿದೆ. ಸಚಿವಾಲಯದಿಂದ ಅನುಮತಿ ಪಡೆಯಬೇಕಾದ ಉದ್ದಿಮೆಗಳೂ ಇದೇ ತೆರನಾದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ದೊಡ್ಡ ದೊಡ್ಡ ಉದ್ಯಮಿಗಳೇ ಪರದಾಡುತ್ತಿರುವಾಗ ಉಳಿದವರ ಪಾಡೇನು? ಈಗ ಅವರಿಗೆಲ್ಲ ಸಮಾನ ಶಿಷ್ಟಾಚಾರ ರೂಪುಗೊಂಡಿದೆ: ನಿರ್ಣಾಯಕ ಸಂಗತಿಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಜತೆ ಔಪಚಾರಿಕ ಸಭೆ– ಚರ್ಚೆ ನಡೆಸಬೇಕು. ಅಂತಿಮವಾಗಿ ಪ್ರಧಾನಿ ಕಾರ್ಯಾಲಯವು ಅನುಮತಿ ನೀಡಬೇಕು.
‘ಇದು ಒಂದೆಡೆ ಅವ್ಯವಹಾರವನ್ನು ತಡೆಗಟ್ಟುತ್ತದೆ. ಅದೇ ಸಮಯಕ್ಕೆ, ತಮ್ಮನ್ನು ನಿಯಂತ್ರಿಸಬಲ್ಲ ಶಕ್ತಿಯೊಂದು ಸದಾ ಗಮನಿಸುತ್ತಿದೆ ಎಂಬುದನ್ನು ಕಂಪೆನಿಗಳು ಅರಿತುಕೊಳ್ಳುವಂತೆ ಮಾಡುತ್ತದೆ’ ಎಂದು ಕಂಪೆನಿಯೊಂದರ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಅಧಿಕಾರದ ಕೇಂದ್ರೀಕರಣವು ಫಲಿತಾಂಶ ಕೊಡುತ್ತಿದೆ; ಇದರ ಫಲವಾಗಿ ವಿಳಂಬವಿಲ್ಲದೇ ಯೋಜನೆಗಳು ಮುನ್ನಡೆಯುತ್ತಿವೆ ಎಂದು ಮೋದಿ ಬೆಂಬಲಿಗರು ಪ್ರತಿಪಾದಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಶೇಕಡಾ 5ರ ಆಸುಪಾಸು ಇದ್ದ ಆರ್ಥಿಕ ಬೆಳವಣಿಗೆ ದರ ಈಗ ಶೇ 5.7 ತಲುಪಿರುವುದು ಇದಕ್ಕೆ ಕಾರಣ ಎಂದೂ ಹೇಳುತ್ತಾರೆ.
ಅಧಿಕಾರದ ಕೇಂದ್ರೀಕರಣವು ಫಲಿತಾಂಶ ಕೊಡುತ್ತಿದೆ; ಇದರ ಫಲವಾಗಿ ವಿಳಂಬವಿಲ್ಲದೇ ಯೋಜನೆಗಳು ಮುನ್ನಡೆಯುತ್ತಿವೆ ಎಂದು ಮೋದಿ ಬೆಂಬಲಿಗರು ಪ್ರತಿಪಾದಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಶೇಕಡಾ 5ರ ಆಸುಪಾಸು ಇದ್ದ ಆರ್ಥಿಕ ಬೆಳವಣಿಗೆ ದರ ಈಗ ಶೇ 5.7 ತಲುಪಿರುವುದು ಇದಕ್ಕೆ ಕಾರಣ ಎಂದೂ ಹೇಳುತ್ತಾರೆ.
ಮೋದಿ ಇನ್ನೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಅಚ್ಚರಿ ಮೂಡಿಸಿದೆ. ಅದೂ ಮಹತ್ವದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ವಿಷಯದಲ್ಲಿ. ಉದಾಹರಣೆಗೆ, ದೇಶದ ಭದ್ರತೆ ನಿರ್ವಹಿಸುವ ರಕ್ಷಣಾ ಸಚಿವರ ಸ್ಥಾನ. ಮೋದಿ ಅವರ ಆಪ್ತ ಅರುಣ್ ಜೇಟ್ಲಿ ಅವರೇ ಹಣಕಾಸು ಜತೆಗೆ ರಕ್ಷಣಾ ಸಚಿವರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಮೋದಿ ಅವರ ಸಲಹಾ ತಂಡದವರು ಹೊರಗಿನ ಹಲವು ತಜ್ಞರ ನೆರವನ್ನು ಆಗಾಗ್ಗೆ ಪಡೆಯುತ್ತಾರೆ. ‘ಆದರೆ ಅಂಥವರನ್ನು ಮೋದಿ ನಂಬುವುದೇ ಕಡಿಮೆ’ ಎಂದು ಬಿಜೆಪಿ ಪ್ರಚಾರ ಸಮಿತಿಗಾಗಿ ಕೆಲಸ ಮಾಡಿದ ಸಲಹೆಗಾರರೊಬ್ಬರು ಹೇಳುತ್ತಾರೆ. ‘ತಮಗೆ ತಾವೇ ಮಾಸ್ಟರ್ ಎಂದು ಭಾವಿಸಿರುವ ವ್ಯಕ್ತಿ ಮೋದಿ. ಯಾರ ಕಡೆಯಿಂದಲಾದರೂ ಬರುವ ಎಂಥದ್ದೇ ಸಲಹೆಯನ್ನು ಅವರು ಕೇಳಿಸಿಕೊಳ್ಳುತ್ತಾರೆ. ಆದರೆ ಯಾರನ್ನೇ ಆಗಲಿ ಶೇಕಡಾ ನೂರರಷ್ಟು ಪೂರ್ಣವಾಗಿ ಅವರು ನಂಬುವುದಿಲ್ಲ’ ಎಂದು ಪಿಸುಗುಡುತ್ತಾರೆ.
No comments:
Post a Comment