ಹಿರಿಯ ಅಧಿಕಾರಿಗಳ ಸರಣಿ ರಾಜೀನಾಮೆ ಮತ್ತು ನಿರಾಶಾದಾಯಕ ತ್ರೈಮಾಸಿಕ ಫಲಿತಾಂಶಗಳಿಂದ ಕಂಗೆಟ್ಟಿ­ರುವ ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆ ಇನ್ಫೊಸಿಸ್‌ ತನ್ನ ನೂತನ ಸಾರಥಿಯನ್ನಾಗಿ ವಿಶಾಲ್‌ ಸಿಕ್ಕಾ (47) ಅವರನ್ನು ಆಯ್ಕೆ ಮಾಡಿ­ದೆ.
ಜರ್ಮನಿ ಮೂಲದ ಬಹುರಾಷ್ಟ್ರೀಯ ಸಾಫ್ಟ್‌ವೇರ್‌ ಕಂಪೆನಿ ‘ಸ್ಯಾಪ್‌’ನಲ್ಲಿ (ಎಸ್‌ಎಪಿ) ಕಳೆದ ಹನ್ನೆರಡು ವರ್ಷ­ಗಳಿಂದ ಮುಖ್ಯ ತಾಂತ್ರಿಕ ಅಧಿಕಾರಿ­ಯಾಗಿದ್ದ (ಸಿಟಿಒ) ವಿಶಾಲ್‌ ಸಿಕ್ಕಾ ಅವರು ಇನ್ಫೊಸಿನ್‌ನ ಮೊತ್ತಮೊದಲ ಸಂಸ್ಥಾಪ­ಕೇತರ ‘ಸಿಇಒ’ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್ನುವುದು ಮತ್ತೊಂದು ವಿಶೇಷ. ಆಗಸ್ಟ್‌ 1 ­ರಂದು ಅವರು ಅಧಿಕಾರ ಸ್ವೀಕರಿಸ­ಲಿದ್ದಾರೆ. ಇನ್ಫೊಸಿಸ್‌ ಸದ್ಯಕ್ಕೆ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿ­ಯಲ್ಲಿ ಸಿಕ್ಕಾ ಅವರ ನೇಮಕಕ್ಕೆ ವಿಶೇಷ ಮಹತ್ವ ಇದೆ.
ಸದಾ ಓದುವ ಮತ್ತು ಬರೆಯುವ ಹವ್ಯಾಸ ಹೊಂದಿರುವ ಸಿಕ್ಕಾ ಅವರು ಸದ್ಯ ಜಾಗತಿಕ ಸಾಫ್ಟ್‌ವೇರ್‌ ಕ್ಷೇತ್ರ­ದಲ್ಲಿನ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಒಬ್ಬರು ಎನ್ನುತ್ತಾರೆ ಐ.ಟಿ ಮಾರುಕಟ್ಟೆ ತಜ್ಞರು. ‘ಸಾಫ್ಟ್‌ವೇರ್‌ ಸೇವೆಗಳ ಮಾರು­­­ಕಟ್ಟೆ ವಿಸ್ತರಣೆಗೆ ಸಂಬಂ­ಧಿಸಿ­ದಂತೆ ಅವರ ತಾಂತ್ರಿಕ ಜ್ಞಾನ ಅಗಾಧ­ವಾದದು, ಕ್ಲೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನ ಆಧರಿಸಿದ ಅವರ ಯೋಜನೆ­ಗಳು ಉದ್ಯಮದ ಚಿತ್ರಣ­ವನ್ನೇ ಬದಲಿ­ಸಬಲ್ಲದು’ ಎನ್ನುತ್ತಾರೆ ಇನ್ಫೊಸಿಸ್‌ನ ಪ್ರತಿಸ್ಪರ್ಧಿ ಕಂಪೆನಿ ವಿಪ್ರೊದ ಸಿಇಒ ಟಿ.ಕೆ ಕುರಿಯನ್‌. 
ವಿಶಾಲ್‌ ಸಿಕ್ಕಾ ಜನಿಸಿದ್ದು 1967ರ ಜೂನ್ ಒಂದರಂದು ಮಧ್ಯಪ್ರದೇಶದ ಶಾಜಾ­ಪುರ­ದಲ್ಲಿ. ಅವರ ತಂದೆ ಭಾರತೀಯ ರೈಲ್ವೆಯಲ್ಲಿ  ಎಂಜಿನಿಯರ್‌ ಆಗಿದ್ದರು. ತಾಯಿ ಶಿಕ್ಷಕಿ. ಇಬ್ಬರೂ ಪಂಜಾಬ್‌ ಮೂಲ­ದವರು. ವಿಶಾಲ್‌ಗೆ ಆರು ವರ್ಷವಿರುವಾಗ ಅವರ ಕು­ಟುಂಬ ಗುಜರಾತ್‌ನ ಬರೋ­ಡಾಗೆ ಬಂದು ನೆಲೆಸುತ್ತದೆ. ಅಲ್ಲಿನ ರೋಸರಿ ಹೈಸ್ಕೂಲ್‌­ನಲ್ಲಿ ಪ್ರಾಥಮಿಕ ಶಿಕ್ಷಣ. ಬರೋಡಾದ ಮಹಾರಾಜ ಸಯ್ಯಾ­­ಜಿರಾವ್‌ ವಿಶ್ವವಿದ್ಯಾಲ­ಯದಲ್ಲಿ ಕಂಪ್ಯೂಟರ್‌ ಎಂಜಿನಿ­ಯರಿಂ­ಗ್‌ನಲ್ಲಿ ಪದವಿಗೆ ಪ್ರವೇಶ ಪಡೆದರೂ ಅದನ್ನು ಅರ್ಧಕ್ಕೆ ನಿಲ್ಲಿಸಿ, ನಂತರ ನ್ಯೂ­ಯಾರ್ಕ್‌ನ ಸೈರಾಕಸ್‌ ವಿಶ್ವವಿದ್ಯಾ­ಲಯದಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಕಂಪ್ಯೂಟರ್‌ ಸೈನ್ಸ್‌ಗೆ ಸಂಬಂಧಿಸಿದ ಅತ್ಯಂತ ಕಠಿಣವಾದ ‘ಕೃತಕ ಬುದ್ಧಿಮತ್ತೆ’ ಎಂಬ ವಿಷ­ಯದಲ್ಲಿ ಸ್ಟ್ಯಾನ್‌ಫೋರ್ಡ್‌ ವಿಶ್ವವಿ­ದ್ಯಾ­ಲ­ಯದಿಂದ ಪಿಎಚ್.ಡಿ ಪಡೆಯುತ್ತಾರೆ.
ಸಿಕ್ಕಾ ಅವರು ‘ಸ್ಯಾಪ್‌’ ಸೇರಿದ್ದು 2002ರಲ್ಲಿ. ಅದಕ್ಕೂ ಮೊದಲು ‘ಐಬ್ರೇನ್‌’ ಮತ್ತು ‘ಬೋಧಾ ಡಾಟ್‌ ಕಾಂ’ ಎಂಬ ಎರಡು ಸ್ಟಾರ್ಟ್‌­ಅಪ್‌ ಕಂಪೆನಿ­ಗಳನ್ನು ಪ್ರಾರಂಭಿಸಿ ಕೆಲ­ಕಾಲ ನಡೆಸು­ತ್ತಾರೆ. ‘ಐಬ್ರೇನ್‌’ನನ್ನು ನಂತರ ‘ಪ್ಯಾಟರ್ನ್‌ ಆರ್‌ಎಕ್ಸ್‌’ ಎನ್ನುವ ಕಂಪೆನಿ ಸ್ವಾಧೀನಪಡಿ­ಸಿಕೊ­ಳ್ಳುತ್ತದೆ. ಪೆರಿಗ್ರೀನ್‌ ಸಿಸ್ಟಮ್ಸ್‌ ಎನ್ನುವ ಕಂಪೆನಿ ಬೋಧಾ ಡಾಟ್‌ಕಾಂ ಅನ್ನು ಸ್ವಾಧೀನಪಡಿಸಿಕೊಳ್ಳುತ್ತದೆ.
‘ಸ್ಯಾಪ್‌’ ಕಂಪೆನಿ ‘ಒರಾಕಲ್‌’ ಕಂಪೆನಿ­ಯಿಂದ ತೀವ್ರ ಸ್ಪರ್ಧೆ ಎದುರಿ­ಸುತ್ತಿದ್ದ ದಿನಗಳವು. ಸಾಫ್ಟ್‌ವೇರ್‌ ಸೇವೆಗಳ ನಿರ್ವ­ಹಣೆಗೆ ಸಂಬಂಧಿಸಿದಂತೆ ಸುಧಾ­ರಿತ ತಂತ್ರಜ್ಞಾನ ಅಭಿವೃದ್ಧಿಪಡಿ­ಸದಿದ್ದರೆ  ಕಂಪೆನಿ ಮಾರುಕಟ್ಟೆಯಲ್ಲಿ ನೆಲೆನಿಲ್ಲಲೂ ಆಗದಂತಹ ಪರಿಸ್ಥಿತಿ ಇತ್ತು. ಇಂತಹ ಸವಾಲಿನ ಸಂದರ್ಭದಲ್ಲಿ ತಾಂತ್ರಿಕ ತಂಡದ ಮುಖ್ಯಸ್ಥರಾಗಿದ್ದ ಸಿಕ್ಕಾ ಅವರು ಅತ್ಯಂತ ಕಡಿಮೆ ವೆಚ್ಚದಲ್ಲಿ ಬೃಹತ್‌ ಪ್ರಮಾಣದ ದತ್ತಾಂಶ ನಿರ್ವಹಣೆ ಮಾಡಬಹು­ದಾದ ಇನ್‌ ಮೆಮರಿ ಡಾಟಾಬೇಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ  ಅಭಿವೃದ್ಧಿಪಡಿಸಿದರು.
ಈ ತಂತ್ರಜ್ಞಾನ ‘ಸ್ಯಾಪ್’ನ ಸಾಫ್ಟ್‌ವೇರ್‌ ಉದ್ಯಮದ ಚಿತ್ರಣವನ್ನೇ ಬದಲಿಸಿತು. ‘ಸ್ಯಾಪ್‌’ ಸಿಕ್ಕಾ ಅವರನ್ನು ತನ್ನ ಮೊತ್ತ ಮೊದಲ ಮುಖ್ಯ ತಾಂತ್ರಿಕ ಅಧಿಕಾರಿ­ಯಾಗಿ (ಸಿಟಿಒ) ನೇಮಿಸಿತು. ‘ಸಿಟಿಒ’ ನೇರ­ವಾಗಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿಗೆ (ಸಿಇಒ) ವರದಿ ಮಾಡಿ­ಕೊಂಡರೆ ಸಾಕು. ನಂತರ ಸುಮಾರು 5 ವರ್ಷಗಳ ಕಾಲ ಅವರು ಇಡೀ ತಾಂತ್ರಿಕ ವಿಭಾಗದ ಮುಖ್ಯ­ಸ್ಥರಾಗಿ ಸ್ವತಂತ್ರರಾಗಿ ಕಾರ್ಯನಿ­ರ್ವಹಿಸಿದರು. ವೈಯಕ್ತಿಕ ಕಾರಣಗಳಿ­ಗಾಗಿ ಕಳೆದ ತಿಂಗಳು ಅವರು ಕಂಪೆನಿಯಿಂದ  ಹೊರಬಂದಿದ್ದರು. 
‘ನಾನೊಬ್ಬ ಶಿಕ್ಷಕನ ಮಗ. ವಿದ್ವಾಂಸರಿಗೆ ತುಂಬ ಗೌರವ ಕೊಡುವ ಮನೆತನ ನಮ್ಮದು. ಕೋಟ್ಯಧಿಪತಿ ಮತ್ತು ವಿದ್ವಾಂಸ ಇಬ್ಬರೂ ಇದ್ದು, ಒಂದೇ ಕುರ್ಚಿ ಇದ್ದರೆ  ಆ ಕುರ್ಚಿಯನ್ನು ವಿದ್ವಾಂಸರಿಗೆ ಬಿಟ್ಟು­ಕೊಡುತ್ತೇವೆ. ಈ ಹಿನ್ನೆಲೆಯಲ್ಲಿ ವಿಶಾಲ್‌ ನನಗೆ ವಿಶೇಷ ಎನಿಸುತ್ತಾರೆ’ ಎಂದು ಎನ್‌. ಆರ್‌. ನಾರಾ­ಯಣ ಮೂರ್ತಿ ಅವರು ಸಿಕ್ಕಾ ನೇಮಕ­ವನ್ನು ಪ್ರಕಟಿ­ಸುವಾಗ ಸುದ್ದಿ­ಗೋಷ್ಠಿ­ಯಲ್ಲಿ ಹೇಳಿ­ದ್ದರು.
ನಾರಾ­ಯಣ ಮೂರ್ತಿ ಅವರು, 2013ರ ಜೂನ್‌ನಲ್ಲಿ ಸಂಸ್ಥೆಯ ಅಧ್ಯಕ್ಷ­ರಾಗಿ ಮರು ನೇಮಕಗೊಂಡ ನಂತರ, ಒಟ್ಟು 11 ಮಂದಿ ಉನ್ನತ ಮಟ್ಟದ ಅಧಿಕಾರಿಗಳು ಇನ್ಫೊಸಿಸ್‌ ತೊರೆದಿದ್ದಾರೆ. ಇವರ ಪೈಕಿ ಅಶೋಕ್ ವೆಮೂರಿ, ವಿ. ಬಾಲಕೃಷ್ಣನ್ ಮತ್ತು ಬಿ. ಜಿ. ಶ್ರೀನಿವಾಸ್‌ ಅವರು ಸಂಸ್ಥೆಯ ‘ಸಿಇಒ’ ಹುದ್ದೆಗೆ ಏರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಟಿಸಿಎಸ್‌, ಎಚ್‌ಸಿಎಲ್‌ ಮತ್ತಿತರ ಸಂಸ್ಥೆಗಳು ಇನ್ಫೊಸಿಸ್‌ಗಿಂತ ಉತ್ತಮ ಲಾಭ ಬಾಚಿಕೊಳ್ಳುತ್ತಿದ್ದಾಗ, ವಹಿವಾಟಿನಲ್ಲಿ ಹಿಂದೆ ಬಿದ್ದಿದ್ದ ಸಂಸ್ಥೆಯ ಪುನಶ್ಚೇತನಕ್ಕೆ ನಾರಾಯಣ ಮೂರ್ತಿ ಅವರನ್ನು ಮರಳಿ ಕರೆತರಲಾಗಿತ್ತು.
ಆದರೆ,  ಮೂರ್ತಿ ಅವರು ಮಾಡಿದ ಆಂತರಿಕ ಬದಲಾವಣೆಗಳು ನಿರೀಕ್ಷಿ­ಸಿದಷ್ಟು ಯಶಸ್ವಿಯಾಗಲಿಲ್ಲ, ಕಂಪೆನಿಯಲ್ಲಿ ಎರಡನೇ ಶ್ರೇಣಿಯ ನಾಯ­ಕತ್ವ ರೂಪುಗೊಂಡಿಲ್ಲ ಎಂಬ ಟೀಕೆಗಳೂ ಕೇಳಿಬಂದಿತ್ತು. ಹೀಗಾಗಿ ಸ್ವತಂತ್ರ ‘ಸಿಇಒ’ ಒಬ್ಬರನ್ನು ನೇಮಿ­ಸಬೇಕು ಎಂಬ ಒತ್ತಡ ಷೇರುದಾರರಿಂದ ಹೆಚ್ಚಿತ್ತು.
ಸಿಕ್ಕಾ ಆಗಮನದ ನಂತರ ಹೊಸತೊಂದು ಯುಗ ಆರಂಭಗೊಂಡಿದೆ. ಸಿಕ್ಕಾ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಂಪೆನಿಯಲ್ಲಿ ಕೆಲವು ಮಾರ್ಪಾಡುಗಳನ್ನು ತರ ಲಾಗಿದೆ. ಇದರ ಜತೆಗೆ ಒಟ್ಟು 12 ಜನರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹುದ್ದೆಗೆ ಬಡ್ತಿ ನೀಡಲಾಗಿದೆ. ಕಂಪೆ­ನಿಯ ಪ್ರಗತಿಯ ದೃಷ್ಟಿಯಿಂದ ಇದು ಮಹತ್ವದ ನಿರ್ಧಾರ ಎಂಬುದು ತಜ್ಞರ ಅಭಿಮತ.
‘ಎರಡು ದಶಕಗಳ ಕಾಲ ವಿದೇಶದಲ್ಲಿ ಇದ್ದುದ್ದರಿಂದ ನನ್ನ ಹೆಂಡತಿ ಯಾವಾ­ಗಲೂ ನನ್ನನ್ನು ನಕಲಿ ಪಂಜಾಬಿ ಎಂದು ಗೇಲಿ ಮಾಡುತ್ತಿರುತ್ತಾಳೆ. ಆದರೆ, ಭಾರತೀ­ಯನಾದ ನನಗೆ ಈಗ ಪ್ರತಿಷ್ಠಿತ ಭಾರತೀಯ ಐ.ಟಿ ಕಂಪೆನಿಯೊಂದನ್ನು ಮುನ್ನ­ಡೆಸುವ ಗೌರವ ಲಭಿಸಿದೆ. ನನ್ನ ಮುಂದಿರುವ ಹಾದಿ ಅಚ್ಚರಿಗಳಿಂದ ಕೂಡಿದೆ. ಕಂಪ್ಯೂ­ಟರ್ ತಂತ್ರಜ್ಞಾನ  ನಮ್ಮ ಜೀವನದ ಪ್ರತಿ ಹೆಜ್ಜೆಯನ್ನೂ ನಿರ್ಧರಿಸುತ್ತಿರುವ ಕಾಲ ಇದು. ಕ್ಷಣ ಕ್ಷಣಕ್ಕೆ ಎದುರಾಗುವ ಹೊಸ ಹೊಸ ಸವಾಲುಗಳನ್ನು ಎದುರಿ­ಸುತ್ತಾ ಇನ್ಫೊಸಿಸ್‌ ಅನ್ನು ಹೊಸ ವಿಸ್ಮಯದ ಉತ್ತುಂ­ಗಕ್ಕೆ ತಲುಪಿಸೋಣ’ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ವ್ಯಕ್ತಿ

ಪ್ರಾಚೀನ ಕವಿಮಾರ್ಗದ ಜಿ. ವೆಂಕಟಸುಬ್ಬಯ್ಯ



೧೯೦೦ರ ಆದಿಭಾಗಕ್ಕೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎಂ. ಶ್ರೀಕಂಠಯ್ಯನವರ ನೇರ ಶಿಷ್ಯರಾಗಿದ್ದ ಪ್ರೊ ಜಿ. ವೆಂಕಟಸುಬ್ಬಯ್ಯ ಅವರು ಬೆಂಗಳೂರಿಗೆ ಬಂದು ನೆಲೆಸಿ ನಿಡುಗಾಲ ಬಸವನಗುಡಿಯ ವಿಜಯ ಕಾಲೇಜಿನಲ್ಲಿ ಕನ್ನಡ ಭಾಷೆ-ಸಾಹಿತ್ಯವನ್ನು ಬೋಧಿಸಿದವರು. ನಾವು ಹತ್ತು-–ಹದಿನೈದು ಜನ ಕನ್ನಡ ಐಚ್ಛಿಕ ವಿದ್ಯಾರ್ಥಿಗಳಿಗೆ ಅವರ ಪುಟ್ಟ ಕೋಣೆಯಲ್ಲಿಯೇ ಪಾಠ. ೧೯೬೯ರ ಸುಮಾರಿನಲ್ಲಿ ನಮಗೆ ಪಂಪ, ರನ್ನ, ಕುಮಾರವ್ಯಾಸರ ಹಳಗನ್ನಡ ಪಠ್ಯಗಳನ್ನು ಜೀವಿ ಅವರು ಅಷ್ಟು ಸರಳ, ಸುಲಭ, ಸುಲಲಿತವಾಗಿ ಬೋಧಿಸುತ್ತಿದ್ದರ ಹಿನ್ನೆಲೆಯಾದರೂ ಏನು ಎಂದು ನಾನೊಮ್ಮೆ ಕೇಳಲಾಗಿ ಅವರು ಎಂಟು ದಶಕದ ಹಿಂದಿನ ಸಂಗತಿಯನ್ನು ನೆನಪಿಸಿಕೊಂಡರು.
   ತಂದೆ ತಿಮ್ಮಣ್ಣಯ್ಯ ಮಧುಗಿರಿಯಲ್ಲಿ ಅಧ್ಯಾಪಕರಾಗಿದ್ದು, ಸಂಸ್ಕೃತ ಕನ್ನಡವನ್ನು ಬಲ್ಲವರಾಗಿದ್ದರು. ವೇದಭಾಗದ ರುದ್ರಮಂತ್ರಗಳನ್ನು ಮಗನಿಗೆ ಬಾಲ್ಯದಲ್ಲೇ ಹೇಳಿಕೊಟ್ಟಿದ್ದರಂತೆ. ಒಮ್ಮೆ ಒಣ ಬಯಲು ಪ್ರದೇಶವಾದ ಮಧುಗಿರಿಯ ಸುತ್ತ ಮಳೆಯಾಗಲಿಲ್ಲ. ಊರಜನ ಮಲ್ಲೇಶ್ವರ ದೇವರಿಗೆ ರುದ್ರಾಭಿಷೇಕ ಮಾಡಬೇಕೆಂದುಕೊಂಡರು. ರುದ್ರಮಂತ್ರ ಹೇಳಲು ಊರೊಳಗೆ ಹತ್ತು ಜನರ ಮೇಲೆ ಸಿಗಲಿಲ್ಲ. ಆಗ ತಿಮ್ಮಣ್ಣಯ್ಯನವರು ಗುಡಿಯ ಅರ್ಚಕರಿಗೆ ರುದ್ರಮಂತ್ರ ಹೇಳಲು ಬೇಕಾದರೆ ತಮ್ಮ ಮಗನನ್ನೂ ಸೇರಿಸಿಕೊಳ್ಳಬಹುದೆಂದರಂತೆ. ‘ಮಂತ್ರಕ್ಕೆ ಮಳೆ ಬರುವುದೇ’ ಎಂದದ್ದಕ್ಕೆ ಜೀವಿ, ‘ಇದು ಎಲ್ಲರಂತೆ ನನಗೂ ಬಾಲ್ಯ ಕಾಲಕ್ಕೆ ಇದ್ದ ನಂಬಿಕೆಯಷ್ಟೆ. ಕಾಲೇಜಿ ನಲ್ಲಿ ತರ್ಕಶಾಸ್ತ್ರ ಓದಿದ ಮೇಲೆ ಅನೇಕಾನೇಕ ಮೂಢ ನಂಬಿಕೆಗಳು ದೂರವಾದವು’ ಎಂದರು. ಇದೇನೇ ಇರಲಿ ಬಾಲ್ಯ ಕಾಲದಲ್ಲೇ ಅಭ್ಯಾಸಗೊಂಡ ಮಂತ್ರೋಚ್ಛಾರಣೆಯ ಬಲವೇ ಜೀವಿಯವರ ಅಧ್ಯಾಪನದ ಉದ್ದಕ್ಕೂ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮಾರ್ಗವಾಯಿತು. ಅವರ ಪಾಂಡಿತ್ಯದ ಮೂಲವೂ ಆಯಿತು.
ನನ್ನ ಬಾಲ್ಯಕಾಲದಲ್ಲಿ ಊರಗುಡಿಯಲ್ಲಿ ರೈತಾಪಿ ಗಮಕಿ ದುಂಡುಮಾದಯ್ಯನವರಿಂದ, ಪ್ರಾಥಮಿಕ ಶಾಲಾ ಉಪಾಧ್ಯಾಯ ಬಿಳಿಗಿರಿರಂಗಶೆಟ್ಟರಿಂದ ಕುಮಾರವ್ಯಾಸನನ್ನು ಕೇಳಿದ್ದುದು ನಿಜ. ಆಮೇಲೆ ಎಸ್ಸೆಸ್ಸೆಲ್ಸಿ ಪಾಸು ಮಾಡಿಕೊಂಡು ಬೆಂಗಳೂರು ವಿಜಯ ಕಾಲೇಜಿಗೆ ಬಂದರೆ ಅಲ್ಲಿ ಸೂಟುಧಾರಿಯಾಗಿ, ನಿತ್ಯವೂ ಪುಟ್ಟ ಕಾರೊಂದರಲ್ಲಿ ಕಾಲೇಜಿಗೆ ಟ್ರಿಮ್ಮಾಗಿ ಬರುತ್ತಿದ್ದ ಜೀವಿ ಅವರ ಧ್ವನಿಯಲ್ಲೂ ಅದೇ ಕುಮಾರವ್ಯಾಸನ ಕಥಾಭಾಗದ ವಿಶ್ಲೇಷಣೆ. ಒಂದು ವರ್ಷದ ಪಿಯುಸಿ ತರಗತಿಯಲ್ಲಿ ಜೀವಿಯವರು ಭಾರತ ಕಥಾ ಮಂಜರಿಯಿಂದ ಆಯ್ದ ಕರ್ಣ-ಕರ್ಣಾಮೃತ ಪಾಠ ಮಾಡುತ್ತಿದ್ದರು. ಅದು ಇಡೀ ತರಗತಿಯ ವಿದ್ಯಾರ್ಥಿಗಳಿಗೆಲ್ಲ ಕರ್ಣಾಮೃತವೇ ಆಗಿದ್ದಿತು. ಎಲ್ಲ ಆದ ಮೇಲೆ ವರ್ಷದ ಕೊನೆಯಲ್ಲಿ ಕನ್ನಡ ಐಚ್ಛಿಕ ಆನರ್‍್ಸ್ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ ಕ್ರಮವೇ ಕುತೂಹಲಕರವಾಗಿತ್ತು.
ಒಂದು ದಿನ ಜೀವಿ ತರಗತಿಗೆ ಬಂದವರೇ ‘ಎಲ್ಲಿ, ನೀವೆಲ್ಲರೂ ನಿಮಗೆ ಅನಿಸಿದ ಮೂರ್ನಾಲ್ಕು ಸಾಲು ಪದ್ಯ ಇಲ್ಲವೇ ಯಾವುದಾದರೂ ಘಟನೆಯ ಒಂದು ಪ್ಯಾರಾ ಬರೆಯಿರಿ’ ಎಂದರು. ತರಗತಿಯ ಎಲ್ಲರ ಬರಹವನ್ನೂ ಪರೀಕ್ಷಿಸಿ ಹತ್ತು ಹದಿನೈದು ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಆಹ್ವಾನಿಸಿ ‘ನೀವೇಕೆ ಕನ್ನಡ ಓದಬಾರದು, ಆ ಸಬ್ಜೆಕ್ಟ್ ಚೆನ್ನಾಗಿರುತ್ತದೆ’ ಎಂದರು. ಕನ್ನಡ ಐಚ್ಛಿಕಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪಂಪ, ರನ್ನ, ಕೇಶಿರಾಜಾದಿಗಳನ್ನು ಮನನ ಮಾಡಿಸಿದ್ದಷ್ಟೇ ಅಲ್ಲ, ಕಪ್ಪು ಹಲಗೆಯ ಮೇಲೆ ಶಾಸನದ ಪದ್ಯಗಳನ್ನು ಸಾಲು ಸಾಲಾಗಿ ಬರೆದು, ‘ಈ ಶಾಸನ ವಾಕ್ಯ ಯಾವ ಛಂದಸ್ಸಿನಲ್ಲಿದೆ ಹುಡುಕಿ’ ಎಂದು ವಿದ್ಯಾರ್ಥಿಗಳನ್ನು ಕೇಳುತ್ತಿದ್ದರು. ಆ ಕಾಲದ ಎಲ್ಲರಂತೆ ಜೀವಿಯವರೂ ಮೈಸೂರು ಭಾಗದ ಶ್ರೀರಂಗಪಟ್ಟಣದ ಕಡೆಯ ಗಂಜಾಂನಿಂದ ಬಂದವರು. ಅವರ ತಾತ ಆದಾಯವಿಲ್ಲದ ಆಂಜನೇಯನ ಗುಡಿಯ ಅರ್ಚಕರು. ಆದರೆ ತಂದೆ ತಿಮ್ಮಣ್ಣಯ್ಯನವರು ಓದಿ ಶಾಲಾ ಅಧ್ಯಾಪಕರಾದರು. ತಿಮ್ಮಣ್ಣಯ್ಯನವರು ಹದಿನೆಂಟು ಪುರಾಣಗಳ ಕಥಾ ಸಾರವನ್ನು ಬರೆದು ಪ್ರಕಟಿಸಿ ಜನ ಓದಲೆಂದು ಹಂಚಿದರು. ಅದರಿಂದೇನೂ ದ್ರವ್ಯ ಲಾಭವಾಗಲಿಲ್ಲವಂತೆ.
ಒಮ್ಮೆ ನಾವೆಲ್ಲ ವಿಜಯ ಕಾಲೇಜಿನಲ್ಲಿದ್ದಾಗ ಒಂದು ಅನಿರೀಕ್ಷಿತ ಸಭೆಯಲ್ಲಿ ಜೀವಿಯವರು ಅರ್ಧ ಗಂಟೆ ನಿರರ್ಗಳವಾಗಿ ಇಂಗ್ಲಿಷಿನಲ್ಲಿ ಮಾತನಾಡಿದರು. ನಮಗೆಲ್ಲ ಆಶ್ಚರ್ಯ ಮತ್ತು ಹೆಮ್ಮೆ. ಆ ಕಾಲದ ಕನ್ನಡ ವಿದ್ವಾಂಸರೆಂದರೆ ಅವರಿಗೆ ಕನ್ನಡದಷ್ಟೇ ಸರಾಗವಾಗಿ ಇಂಗ್ಲಿಷ್, ಸಂಸ್ಕೃತ ಬರಬೇಕಿತ್ತಲ್ಲ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ತೀನಂಶ್ರೀಯವರ ಪಾಂಡಿತ್ಯವಿದ್ದುದು ಹಾಗೇ ತಾನೆ. ಅದಾಗ ಜೀವಿಯವರು ಮಳವಳ್ಳಿ ಕಡೆಯ ಬನ್ನೂರಿನಲ್ಲಿ ಲೋಯರ್ ಸೆಕೆಂಡರಿ ಕನ್ನಡ ತರಗತಿ ಮುಗಿಸಿದರಂತೆ.
ತಂದೆಯವರಿಗೆ ಮಧುಗಿರಿಗೆ ವರ್ಗವಾಗಿ ಅಲ್ಲಿ ಹೈಯರ್ ಸೆಕೆಂಡರಿಗೆ ಸೇರಬೇಕಾದಲ್ಲಿ ಇಂಗ್ಲಿಷ್ ಬರಬೇಕಾಗಿದ್ದಿತು. ಜೀವಿಯವರಿಗೆ ಇಂಗ್ಲಿಷ್ ಬರದೇ ಹೋದ ಕಾರಣ ಶಾಲೆಗೆ ಸೇರದೆ ಒಂದು ವರ್ಷ ಮನೆಯಲ್ಲೇ ಇರಬೇಕಾಯಿತು. ಆ ಒಂದು ವರ್ಷ ಜೀವಿ ಸತತವಾಗಿ ಇಂಗ್ಲಿಷ್ ವ್ಯಾಕರಣ, ಭಾಷೆ ಕಲಿತರಂತೆ. ಮುಂದೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ತಮ್ಮ ಇಂಗ್ಲಿಷ್ ಪರಿಣತಿ ಪ್ರಬುದ್ಧಗೊಂಡದ್ದನ್ನು ಜೀವಿ ನೆನೆಯುವುದುಂಟು.
ವಿಜಯ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಜೀವಿ ಅನೇಕ ಬಾರಿ ಸಹಜವಾಗಿಯೇ ಇಂಗ್ಲಿಷ್ ಭಾಷೆಯನ್ನು ಕನ್ನಡದಂತೆಯೇ ಪ್ರಯೋಗಿಸುತ್ತಿದ್ದರು. ಅವರ ಇಂಗ್ಲಿಷ್, ಕನ್ನಡ ಪಾಂಡಿತ್ಯ, ವಸ್ತ್ರವಿನ್ಯಾಸ ಮತ್ತು ಪುಟ್ಟ ಕಾರು ಇದನ್ನೆಲ್ಲ ಕುರಿತು ಅವರು ಹೇಳುತ್ತಿದ್ದುದೆಂದರೆ ಕನ್ನಡ ಎಂಬುದು ಘನತೆಯ ವಿಷಯವಾಗಬೇಕು. ಅದು ಎಲ್ಲವನ್ನು ಜೀರ್ಣಿಸಿಕೊಳ್ಳಬೇಕು. ಯಾವುದೇ ಬಗೆಯ ಕೀಳರಿಮೆ ಸಲ್ಲದು ಎನ್ನುತ್ತಿದ್ದರು.
ಪ್ರಾಚೀನ ಕನ್ನಡ ಪರಂಪರೆಯ ನಿಘಂಟು ಆಗಿರುವ ಜೀವಿಯವರು ತರಗತಿಗಳಲ್ಲಿ ಪದ್ಯ ಓದುವುದೆಂದರೆ, ವ್ಯಾಖ್ಯಾನ, ವಿಶ್ಲೇಷಣೆ ಎಂದರೆ ಆಪ್ಯಾಯಮಾನ ಅನುಭವ. ಅದೇ ಪಾಂಡಿತ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಬಳಕೆಯಾಯಿತು. ಸಾವಿರಾರು ವಿದ್ಯಾರ್ಥಿಗಳು ಅವರಿಂದ ಹಳಗನ್ನಡದ ಸ್ವಾರಸ್ಯವನ್ನು ಕೇಳಿಸಿಕೊಂಡರು. ಇದೀಗ ಅವರಿಗೆ ಮಹಾಕವಿ ಪಂಪನ ಹೆಸರಿನ ಪ್ರಶಸ್ತಿ ಸಂದಾಯವಾಗಿದೆ. ತನ್ನ ಕಾಲದ ಕನ್ನಡವನ್ನು ಅಸಂಖ್ಯಾತ ವಿದ್ಯಾರ್ಥಿಗಳಿಗೆ ತಲುಪಿಸಿದ ಸಂಗತಿಯಿಂದ ತನ್ನ ಹೆಸರಿನ ಪ್ರಶಸ್ತಿ ಸಂದದ್ದರಿಂದ ಪಂಪನಿಗೂ ಸಂತೋಷವಾಗಿದ್ದಿರಬೇಕು!ವ್ಯಕ್ತಿ ಸ್ಮರಣೆ

ಕನ್ನಡಿಗರ ಪರ ದನಿಯಾಗಿದ್ದ ಸರೋಜಿನಿ ಮಹಿಷಿ



ರಾಜಕೀಯ, ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮ, ಮಹಿಳಾಪರ ಚಿಂತನೆ, ಚಿತ್ರ ಕಲೆ.. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಾ.ಸರೋಜಿನಿ ಮಹಿಷಿ ಅವರು ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡಬೇಕೆಂಬ ತಮ್ಮ ವರದಿಯಿಂದಲೇ ಖ್ಯಾತರಾದವರು.
ಅವಿಭಜಿತ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನವರಾದ ಸರೋಜಿನಿ ಮಹಿಷಿ (1927– 2015) ಪ್ರಗತಿಪರ ಚಿಂತನೆಯ ಆಧುನಿಕ ಮಹಿಳೆ. ಇವರ ತಂದೆ ಸಂಸ್ಕೃತ ಪಂಡಿತ ಮತ್ತು ವಕೀಲರಾದ ಬಿಂದುರಾವ್ ಮಹಿಷಿ. ತಾಯಿ ಕಮಲಾಬಾಯಿ. ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಸರೋಜಿನಿ ಮಹಿಷಿ ಎರಡನೆಯವರು.
೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕನ್ನಡಿಗರಿಗೆ  ಪರ ಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ರಾಜ್ಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಸರ್ಕಾರ ಸರೋಜಿನಿ ಮಹಿಷಿಯವರನ್ನು ಕೇಳಿಕೊಂಡಿತ್ತು.
ಮಹಿಷಿಯವರು ನೀಡಿದ ವರದಿಯು ‘ಸರೋಜಿನಿ ಮಹಿಷಿ ವರದಿ’ ಎಂದು ಖ್ಯಾತವಾಯಿತು. ರಾಜ್ಯದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದನ್ನು ಪ್ರತಿಪಾದಿಸುವ ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಬುನಾದಿಯಾಗಿದೆ.
ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೂ  ಕೈಗೆಟುಕದ ಕಾಲದಲ್ಲಿ ಇವರು ಪಟ್ಟು ಬಿಡದೆ   ಪಡೆದ ಶೈಕ್ಷಣಿಕ ಪದವಿಗಳ ಪಟ್ಟಿ ಉದ್ದವಿದೆ.
ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲಿಯೇ ಪೂರ್ಣಗೊಳಿಸಿ, ಸಾಂಗ್ಲಿಯ ಮಿಲಿಂಗಟನ್‌ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿ.ಎ ಹಾಗೂ ಎಂ.ಎ. ಪದವಿ ಪಡೆದಿದ್ದರು. ಎಲ್‌ಎಲ್‌ಬಿ ಪದವಿ ಪಡೆದಿದ್ದ ಇವರು, ಧಾರವಾಡದಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ  ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಹಿಂದಿ ಎಂ.ಎ.ಗೆ ಸರಿಸಮನಾದ ಸಾಹಿತ್ಯ ರತ್ನ, ಹೊಲಿಗೆ ಮತ್ತು ಕಸೂತಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರು. ಸಿತಾರ್‌ ಕಲಿತಿದ್ದರು. ಚೆನ್ನಾಗಿ ಹಾಡುತ್ತಿದ್ದರು. ಉತ್ತಮವಾಗಿ ಪೇಂಟಿಂಗ್‌ ಮಾಡುತ್ತಿದ್ದರು. ಕರ್ನಾಟಕ, ವಿಜಯಪುರ, ಹಂಪಿ  ಹಾಗೂ ಉಜ್ಜಯಿನಿ ವಿಶ್ವವಿದ್ಯಾಲಯಗಳು ಸರೋಜಿನಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿವೆ.
ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸರೋಜಿನಿ ಮಹಿಷಿ 4 ಸಲ ಲೋಕ­ಸಭೆ, 2 ಅವಧಿಗೆ ರಾಜ್ಯಸಭಾ ಸದಸ್ಯರಾಗಿ­ದ್ದರು. 1962ರಲ್ಲಿ ಧಾರವಾಡದ ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದಾಗ ಇವರು ಖರ್ಚು ಮಾಡಿದ ಹಣ ಕೇವಲ ₨10 ಸಾವಿರ. ನಂತರ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ವಿಮಾನಯಾನ, ಪರಿಸರ ಹಾಗೂ ಕಾನೂನು ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಇಂದಿರಾ­ಗಾಂಧಿ ‘ಬಲಗೈ’ ಎಂದೇ ಬಿಂಬಿತರಾಗಿದ್ದ ಇವರು, ಇಂದಿರಾ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದರು. ಇಂದಿರಾ ಗಾಂಧಿ ಅವರ ಸಖ್ಯದಿಂದ ದೂರವಾದ ನಂತರ ಮಹಿಷಿಯವರ ರಾಜಕೀಯ ಜೀವನವೂ ಮಸುಕಾಯಿತು.­ಕಸೂತಿ ಕೆಲಸದಿಂದ ಜಾನಪದ ಸಾಹಿತ್ಯದವರೆಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸರೋಜಿನಿ ಮಹಿಷಿಯವರು ಸಮಯ ವ್ಯರ್ಥ ಮಾಡದೆ ಒಂದಿಲ್ಲೊಂದು ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
‘ರೂಪಾ’ (ಕಥಾ ಸಂಕಲನ), ‘ಸಾಹಿತ್ಯ ಮಂಥನ’, ‘ಕಸೂತಿ ಕಲೆ’, ‘ಶಕುಂತಲಾ’ (ಕಾದಂಬರಿ ಅನುವಾದ), ‘ಸ್ವಾತಂತ್ರ್ಯ ಕಹಳೆ’, ‘ಹಿಮಾಲಯದಿಂದ ರಾಮೇಶ್ವರ’ (ಕವನ ಸಂಕಲನ), ‘ಕಾಳಿದಾಸ’, ‘ಶ್ರೀಹರ್ಷ’, ‘ಭವಭೂತಿ’ ಸೇರಿದಂತೆ ಮೂವತ್ತೈದು ಕೃತಿಗಳನ್ನು ರಚಿಸಿದ್ದಾರೆ.
ಡಿ.ವಿ.ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ ಹಾಗೂ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗಳನ್ನು ಅವರು ಹಿಂದಿಗೆ ಭಾಷಾಂತರಿಸಿದ್ದಾರೆ. ಸಂಸ್ಕೃತದ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಇವರು, ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ ಆರಂಭಿಸಲು ಕಾರಣವಾದವರಲ್ಲಿ ಪ್ರಮುಖರು. ವೇದಕಾಲದಿಂದ ಇಪ್ಪತ್ತನೇ ಶತಮಾನದವರೆಗಿನ ಕರ್ನಾಟಕದ ಕವಯತ್ರಿಯರನ್ನು ಕುರಿತು ಸಂಶೋಧನೆ ಮಾಡಿ ಸಲ್ಲಿಸಿದ್ದ ‘ಕರ್ನಾಟಕ ಕವಯತ್ರಿಯರು’ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ ಲಭಿಸಿದೆ.
ಕಳೆದ ಕೆಲವು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದ ಸರೋಜಿನಿ ಮಹಿಷಿ ಅವರು ದೆಹಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ದೆಹಲಿಯ ಹಿಂದಿ ಭವನ ನೀಡುವ ಪ್ರತಿಷ್ಠಿತ ‘ಹಿಂದಿ ರತ್ನ ಸಮ್ಮಾನ್‌’ ಪ್ರಶಸ್ತಿ ಕೂಡ ಇವರಿಗೆ ಸಂದಿದೆ. ಅತ್ಯಂತ ಕ್ರಿಯಾಶೀಲ  ಮಹಿಳೆಯಾಗಿದ್ದ ಮಹಿಷಿ ಅವರು ಉತ್ತಮ ವಾಗ್ಮಿಯೂ ಹೌದು. ಶಿಕ್ಷಣ, ರಾಮಾಯಣ, ರಾಜಕೀಯ ಯಾವುದೇ ವಿಷಯವಿರಲಿ ಗಂಟೆಗಟ್ಟಲೆ ಸಲೀಸಾಗಿ ಮಾತನಾಡುವ ಕಲೆ ಸಿದ್ಧಿಸಿಕೊಂಡಿದ್ದರು.  ದೇವಸ್ಥಾನಗಳಲ್ಲಿ ರಾಮಾಯಣ, ಮಹಾಭಾರತವನ್ನು ಕುರಿತು ಪ್ರವಚನಗಳನ್ನು ನೀಡಿದ್ದೂ ಇದೆ.
ಧಾರವಾಡದ ವನಿತಾ ಸೇವಾ ಸಮಾಜ,1950ರ ಸುಮಾರಿಗೆ ಹೊರತರುತ್ತಿದ್ದ ‘ವೀರಮಾತೆ’ ಮಾಸ ಪತ್ರಿಕೆಗೆ ಇವರು ಸಂಪಾದಕಿಯಾಗಿದ್ದರು. ಸರೋಜಿನಿ ಮಹಿಷಿಯವರು ಅನೇಕ ಮಹಿಳಾ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಮಹಿಳೆಯರ ಏಳಿಗೆಗಾಗಿ ವನಿತಾ ಸೇವಾ ಸಮಾಜವನ್ನು ಸ್ಥಾಪಿಸಿದ್ದಾರೆ. ತಮ್ಮ ಸಹೋದರ, ಸಹೋದರಿಯರೊಡಗೂಡಿ ಶಿಕ್ಷಣ ಸಂಸ್ಥೆಗಳು ಹಾಗೂ ಚಾರಿಟಬಲ್‌ ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.
ಜ್ಯೋತಿಷ್ಯವನ್ನು ಅಪಾರವಾಗಿ ನಂಬುತ್ತಿದ್ದುದು ಅವರ ವ್ಯಕ್ತಿತ್ವದ ಇನ್ನೊಂದು ಆಯಾಮ. ದೆಹಲಿಯಲ್ಲೇ ಉಳಿದರೆ ರಾಜಕೀಯ ಪುನರ್ವಸತಿ ದೊರೆಯುವ ಸಾಧ್ಯತೆಯಿದೆ ಎಂದು ಜ್ಯೋತಿಷಿಗಳು ಹೇಳಿದ್ದರಿಂದ ಅವರು ಅಲ್ಲೇ ಉಳಿಯಲು ನಿರ್ಧರಿಸಿದರು. ಬಳಿಕ ಸಮೀಪದ ಗಾಜಿಯಾಬಾದಿಗೆ ಹೋಗಿದ್ದರು. ಇದೊಂದು ವಿಪರ್ಯಾಸ. ಕಡೆಗೂ ಅವರಿಗೆ ರಾಜಕೀಯ ಮರುಜೀವ ದೊರೆಯಲಿಲ್ಲ. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ವಾದ ಮಂಡಿಸಿರುವ ಮಹಿಷಿ ವರದಿಗೆ ಹೊಸ ಕಾಲದಲ್ಲಿ ಮರಳಿ ಜೀವ ತುಂಬುವುದೇ ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ.

ವ್ಯಕ್ತಿ

ಸಾಧನೆಯ ‘ಕಿರಣ’



‘ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಅತ್ಯವಶ್ಯಕ. ಆದರೆ, ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಾಜದ ಒಳಿತಿಗೆ, ಜನಸಾಮಾನ್ಯರ ನಿತ್ಯ ಜೀವನಕ್ಕೆ  ಉಪಯೋಗವಾಗುವಂತೆ ಬಳಸಿಕೊಳ್ಳುವುದು ನಮ್ಮ ಗುರಿಯಾಗಬೇಕು’
  ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ)ಯ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿರುವ ಕನ್ನಡಿಗ ವಿಜ್ಞಾನಿ ಆಲೂರು ಸೀಳಿನ್‌ ಕಿರಣ್‌ಕುಮಾರ್‌ (62) ಅವರ ಸ್ಪಷ್ಟ ನುಡಿ ಇದು.
ಅಹಮದಾಬಾದಿನ ಬಾಹ್ಯಾಕಾಶ ಆನ್ವಯಿಕ ಕೇಂದ್ರದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಈಗ ಇಸ್ರೊ ಅಧ್ಯಕ್ಷರಾಗಿರುವ ಕಿರಣ್‌ಕುಮಾರ್‌ ಹೀಗೆ ಹೇಳಿದ್ದರಲ್ಲಿ ಅಚ್ಚರಿಯೇನಿಲ್ಲ.
ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿರುವ  ಅನ್ವೇಷಣೆ, ಅದಕ್ಕಾಗಿ ಪಡೆದ ಪ್ರಶಸ್ತಿ, ಪುರಸ್ಕಾರಗಳ ಪಟ್ಟಿ ಉದ್ದವಿದ್ದರೂ ಅವರದ್ದು ಮೌನ ಸಾಧನೆ. ತಮ್ಮ ವೃತ್ತಿ ಜೀವನದ ಉದ್ದಕ್ಕೂ ಪ್ರಚಾರದಿಂದ ದೂರ ಉಳಿದು ಪ್ರಯೋಗಾಲಯಕ್ಕೆ ಅಂಟಿಕೊಂಡಿದ್ದವರು   ಕಿರಣ್‌ಕುಮಾರ್‌. 
ಜನಸಾಮಾನ್ಯರ ಬದುಕಿನ ಹೊರೆ ತಗ್ಗಿಸಲು ಬಾಹ್ಯಾಕಾಶವನ್ನು ಬಳಸಿಕೊಳ್ಳಬೇಕು. ಸಂವಹನ , ಶಿಕ್ಷಣ, ಕೃಷಿ ಉದ್ದೇಶಗಳಿಗಾಗಿ ಬಾಹ್ಯಾಕಾಶ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂಬ ಕನಸು ಹೊತ್ತವರು.  
ಚಿಕ್ಕವರಿದ್ದಾಗಲೇ ವಿಜ್ಞಾನದ ಕುರಿತು ಒಲವು ಬೆಳೆಸಿಕೊಂಡಿದ್ದ ಕಿರಣ್‌ಕುಮಾರ್‌ ಅವರ ಆಸಕ್ತಿಗೆ ನೀರು ಎರೆದಿದ್ದು ಮನೆಯಲ್ಲಿದ್ದ ಶೈಕ್ಷಣಿಕ ವಾತಾವರಣ.
ಕಿರಣ್‌ಕುಮಾರ್‌ ಅವರ ತಂದೆ ಎ.ಎಸ್‌.ಮಲ್ಲಪ್ಪ ಹಾಸನದಲ್ಲಿ ವಕೀಲರಾಗಿದ್ದರು. ಮೂಲತಃ ಹಾಸನ ಜಿಲ್ಲೆಯ ಆಲೂರಿನವರಾದರೂ 50ರ ದಶಕದಲ್ಲೇ ಹಾಸನಕ್ಕೆ ಬಂದು ನೆಲೆಸಿದ್ದರು.
ಮಲ್ಲಪ್ಪ ಅವರ ಎಂಟು ಮಕ್ಕಳಲ್ಲಿ ಏಳನೇಯವರು ಕಿರಣ್‌ಕುಮಾರ್‌. ಅವರ ಮೂವರು ಹಿರಿಯ ಸಹೋದರರು ಎಂಜಿನಿಯರಿಂಗ್‌ ಓದಿದವರು (ಇಬ್ಬರು ಈಗಿಲ್ಲ). ನಾಲ್ಕು ಜನ ಸಹೋದರಿಯರ ಪೈಕಿ ಇಬ್ಬರು ವೈದ್ಯರು.
ಶಿಕ್ಷಣಪ್ರೇಮಿಯಾಗಿದ್ದ ತಮ್ಮ ತಂದೆ ಮಲ್ಲಪ್ಪ,  ಹಾಸನದಲ್ಲಿದ್ದ ತಮ್ಮ ಮನೆಗೆ ‘ಶಾರದಾ ವಿಲಾಸ’ ಎಂದೇ ಹೆಸರಿಟ್ಟಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಕಿರಣ್‌ಕುಮಾರ್‌ ಅವರ ಹಿರಿಯ ಸಹೋದರ ಉದ್ಯಮಿ ಎ.ಎಸ್‌.ನಂದೀಶ್‌. 
ಹಾಸನದ ಮುನ್ಸಿಪಲ್‌ ಹೈಸ್ಕೂಲ್‌ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಪಿಯುಸಿ) ಶಿಕ್ಷಣ ಪಡೆದ ನಂತರ ಬೆಂಗಳೂರಿಗೆ ಬಂದ ಕಿರಣ್‌ಕುಮಾರ್‌ ಪದವಿ ಓದಲು ಆಯ್ದುಕೊಂಡಿದ್ದು ಪ್ರತಿಭೆಗಳ ಸಂಗಮದಂತಿದ್ದ ಬಸವನಗುಡಿಯ ನ್ಯಾಷನಲ್‌ ಕಾಲೇಜನ್ನು.
ಭೌತಶಾಸ್ತ್ರದ ಆನರ್ಸ್‌ಗೆ ಸೇರಿದ ಅವರಿಗೆ, ‘ಸದಾ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ’ ಎನ್ನುತ್ತಿದ್ದ
ಎಚ್‌. ನರಸಿಂಹಯ್ಯ ಅವರ ಶಿಷ್ಯರಾಗುವ ಅವಕಾಶ  ಒದಗಿಬಂತು.
‘ಅಲ್ಲಿನ ವಿದ್ಯಾರ್ಥಿನಿಲಯದಲ್ಲಿ ಎಚ್ಚೆನ್‌ ಅವರ ಕೊಠಡಿಯಿಂದ ಮೂರನೇ ಕೊಠಡಿ ನನ್ನದಾಗಿತ್ತು. ಅಲ್ಲಿನ ಪರಿಸರ ವಿಜ್ಞಾನ, ತಂತ್ರಜ್ಞಾನದತ್ತ ತುಡಿತ ಮತ್ತಷ್ಟು ಹೆಚ್ಚುವಂತೆ ಮಾಡಿತು’ ಎನ್ನುತ್ತಾರೆ ಕಿರಣ್‌ಕುಮಾರ್‌.
‘ಕಿರಣ್‌ ಬರೀ ಪರೀಕ್ಷೆಗಳಲ್ಲಿ ಅಂಕ ಗಳಿಸುತ್ತಿರಲಿಲ್ಲ. ಪ್ರಯೋಗಾಲಯದಲ್ಲೂ ಮುಂದಿರುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು’ ಎಂದು ನ್ಯಾಷನಲ್‌ ಕಾಲೇಜಿನಲ್ಲಿ ಅವರಿಗೆ ಭೌತಶಾಸ್ತ್ರದ ಪಾಠ ಹೇಳಿರುವ ಬೆಂಗಳೂರು ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ.ಎ.ಎಚ್‌.ರಾಮರಾವ್ ಹೇಳುತ್ತಾರೆ.
1971ರಲ್ಲಿ ಭೌತಶಾಸ್ತ್ರದ ಆನರ್ಸ್‌ನಲ್ಲಿ ಪದವಿ ಪಡೆದ ಅವರು 1973ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಎಸ್ಸಿ. ಪಡೆದರು. 1975ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಫಿಸಿಕಲ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌. ಪಡೆದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಗಳಾದ ಪ್ರೊ. ರಾಜಗೋಪಾಲ್‌, ದೀಕ್ಷಿತಲು ಅವರ ಮಾರ್ಗದರ್ಶನ ಲಭಿಸಿತ್ತು. ಗುಜರಿಗೆ ಹಾಕಿದ್ದ ವಸ್ತುಗಳನ್ನು ಕಲೆಹಾಕಿ ವೈಜ್ಞಾನಿಕ ಉಪಕರಣಗಳನ್ನು ಸಿದ್ಧಪಡಿಸಲು ಸ್ನೇಹಿತರೆಲ್ಲ ಯತ್ನಿಸುತ್ತಿದ್ದೆವು ಎಂದು ಮೆಲುಕುಹಾಕುತ್ತಾರೆ ಕಿರಣ್‌ಕುಮಾರ್‌.
ಐಐಎಸ್‌ಸಿಯಿಂದ ಹೊರಬಿದ್ದ ತಕ್ಷಣ 1975ರಲ್ಲಿ ಅಹಮದಾಬಾದ್‌ನ ಬಾಹ್ಯಾಕಾಶ ಆನ್ವಯಿಕ ಕೇಂದ್ರದಲ್ಲಿ ಉದ್ಯೋಗಕ್ಕೆ ಸೇರಿದ ಅವರು ಬಾಹ್ಯಾಕಾಶದಿಂದ ಚಿತ್ರಗಳನ್ನು ಸೆರೆಹಿಡಿಯುವ ಉಪಕರಣಗಳ ತಯಾರಿಕೆಯಲ್ಲಿ ತೊಡಗಿಕೊಂಡರು. ನಾಲ್ಕು ದಶಕಗಳ ಕಾಲ ಆ ಕೇಂದ್ರದ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ, ಕೇಂದ್ರದ ನಿರ್ದೇಶಕರೂ ಆದರು.
ಇಸ್ರೊದ ಭೂ ವೀಕ್ಷಣಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಕಿರಣ್‌ಕುಮಾರ್‌ ಸಂವಹನ, ಶೈಕ್ಷಣಿಕ, ಹಾಗೂ  ಹವಾಮಾನ ಮುನ್ಸೂಚಕ ಪಥದರ್ಶಕ (navigation) ಉಪಗ್ರಹಗಳಲ್ಲಿ ಮಹತ್ವದ ಉಪಕರಣಗಳನ್ನು ಸಿದ್ಧಪಡಿಸುವ ಹೊಣೆಯನ್ನು ಹೊತ್ತಿದ್ದರು.
ಇತ್ತೀಚಿನ ‘ಚಂದ್ರಯಾನ–1’ ಹಾಗೂ ‘ಮಂಗಳಯಾನ’ ನೌಕೆಗಳಲ್ಲೂ ಇವರ ನೇತೃತ್ವದ ತಂಡ ಸಿದ್ಧಪಡಿಸಿದ ಉಪಕರಣಗಳನ್ನು ಕಳುಹಿಸಲಾಗಿದೆ.
ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ರೊವನ್ನು ಪ್ರತಿನಿಧಿಸಿ ಉಪನ್ಯಾಸ ನೀಡಿರುವ ಅವರು, ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಹತ್ತಾರು ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹಿರಿಯ ವಿಜ್ಞಾನಿಗಳ ಸಾಲಿಗೆ ಸೇರುವ ಕಿರಣ್‌ಕುಮಾರ್‌ ಅವರನ್ನು ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರ ಸಾಧನೆಗಳಿಗೆಲ್ಲ ವಿಜ್ಞಾನ ಪದವೀಧರೆಯಾಗಿರುವ ಬಾಳಸಂಗಾತಿ ಜ್ಯೋತಿಯ ಅಚಲ ಬೆಂಬಲ. ಒಬ್ಬಳೇ ಮಗಳು ಸುಹಾಸಿನಿ ಮುಂಬೈನಲ್ಲಿ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದು, ಪ್ರಸ್ತುತ ಆಸ್ಟ್ರೇಲಿಯಾದ ಸಮೂಹ ಮಾಧ್ಯಮ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
‘ಚಂದ್ರಯಾನ–1’, ‘ಮಂಗಳಯಾನ’ ಯೋಜನೆಗಳ ಯಶಸ್ಸಿನಿಂದ ಬೀಗುತ್ತಿರುವ ಇಸ್ರೊ ‘ಚಂದ್ರಯಾನ–2’, ‘ಮಂಗಳಯಾನ–2’ರಂತಹ ಮಹತ್ವದ ಯೋಜನೆಗಳಿಗೆ ಸಿದ್ಧವಾಗುತ್ತಿರುವಾಗ, ಭಾರಿ ತೂಕದ ಉಪಗ್ರಹಗಳ ಉಡಾವಣೆ ಮಾಡಬಲ್ಲ ‘ಕ್ರಯೋಜೆನಿಕ್‌ ಎಂಜಿನ್‌’ ತಯಾರಿಕೆ ಕೊನೆಯ ಹಂತದಲ್ಲಿ ಇರುವಾಗ ಕಿರಣ್‌ಕುಮಾರ್‌ ಇಸ್ರೊದ ಚುಕ್ಕಾಣಿ ವಹಿಸಿದ್ದಾರೆ.
ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸಾಮಾನ್ಯರ ಬದುಕು ಬೆಳಗಿಸುವ ಹಂಬಲವನ್ನು ಈಡೇರಿಸಿಕೊಳ್ಳಲು ಇದು ಅವರಿಗೆ ಸಕಾಲ.