ಪೆಶಾವರ ಹತ್ಯಾಕಾಂಡ ಹೇಯವಾದುದು. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ತಾಲಿಬಾನ್‌ ಕನಿಷ್ಠ ಸಾವಿರ ಶಾಲೆಗಳ ಮೇಲೆ ದಾಳಿ ನಡೆಸಿದೆ. ಚರ್ಚು ಮತ್ತು ಮಸೀದಿಗಳ ಮೇಲೆ ಆತ್ಮಹತ್ಯಾ ದಾಳಿಗಳ ಮೂಲಕ ನೂರಾರು ಜನರನ್ನು ಅವರು ಕೊಂದಿದ್ದಾರೆ. ಪಾಕಿಸ್ತಾನದ ಹೊರಗೂ ಇಸ್ಲಾಮಿಕ್‌ ಸ್ಟೇಟ್‌, ಬೊಕೊ ಹರಮ್‌ ಮತ್ತು ಶಬಬ್‌ನಂತಹ ಗುಂಪುಗಳ ಕ್ರೌರ್ಯ ಇದೆ.
ಇವರೆಲ್ಲರನ್ನೂ ಒಂದುಗೂಡಿಸುವ ಅಂಶವೆಂದರೆ, ಇವರೆಲ್ಲರೂ ಇಸ್ಲಾಂನ ಹೆಸರಲ್ಲಿ ಇದನ್ನು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂದಿನ ಹಲವು ದುಷ್ಟ ಸಂಘರ್ಷಗಳಲ್ಲಿ ಇಸ್ಲಾಂ ಮೂಲಭೂತವಾದಿಗಳು ಒಳಗೊಂಡಿರುವಂತೆ ಕಾಣಿಸುತ್ತಿರುವುದು ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮೂಲಭೂತವಾದಿ ಇಸ್ಲಾಂ ಗುಂಪುಗಳು ಏಕೆ ಇಷ್ಟೊಂದು ದುಷ್ಟ, ಹಿಂಸಾಸಕ್ತ ಮತ್ತು ಕೆಡುಕಿನದ್ದಾಗಿವೆ?.
ಧರ್ಮದ ಹೆಸರಿನಲ್ಲಿ ಕ್ರೌರ್ಯದಲ್ಲಿ ತೊಡಗಿರುವವರು ಮುಸ್ಲಿಂ ಮೂಲಭೂತವಾದಿಗಳು ಮಾತ್ರವಲ್ಲ; ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಕ್ರೈಸ್ತ ಮೂಲಭೂತವಾದಿಗಳು ತಮ್ಮ ಶತ್ರುಗಳನ್ನು ಕೊಂದು ತಿನ್ನುತ್ತಾರೆ ಎಂಬ ವರದಿಗಳಿವೆ. ಮ್ಯಾನ್ಮಾರ್‌ನಲ್ಲಿ ಬೌದ್ಧ ಭಿಕ್ಕುಗಳು ಮುಸ್ಲಿಂ ವಿರೋಧಿ ಹತ್ಯಾಕಾಂಡಗಳನ್ನು ನಡೆಸುತ್ತಾರೆ. ಹೀಗೆ ಜಗತ್ತಿನಲ್ಲಿ ಕ್ರೌರ್ಯಕ್ಕೆ ಕೊರತೆಯೇ ಇಲ್ಲ. ಹಾಗೆಯೇ ಇಂತಹ ವಿಕಟ ಕೃತ್ಯಗಳನ್ನು ಎಸಗುವವರು ಧಾರ್ಮಿಕ ಮೂಲಭೂತವಾದಿಗಳು ಮಾತ್ರ ಅಲ್ಲ. ಆದರೆ, ಇಸ್ಲಾಂ ಮೂಲಭೂತವಾದಿಗಳಿಗೆ ಹಿಂಸೆ, ಭಯೋತ್ಪಾದನೆ ಮತ್ತು ಕಿರುಕುಳ ನೀಡಿಕೆಯಲ್ಲಿ ನಿರ್ದಿಷ್ಟ ಸಾಮರ್ಥ್ಯವೇ ಇದೆ ಎಂದು ವಿಶ್ಲೇಷಕರು ವಾದಿಸುತ್ತಾರೆ.
ಇವು ಸ್ಫೋಟಕ ವಿಚಾರಗಳಾಗಿದ್ದು, ಅತ್ಯಂತ ನಾಜೂಕಿನಿಂದ ಇವನ್ನು ನಿರ್ವಹಿಸಬೇಕಿದೆ. ಸಮಸ್ಯೆ ಏನೆಂದರೆ ಈ ಇಡೀ ಸಂವಾದವೇ ಧರ್ಮಾಂಧತೆ ಮತ್ತು ಭೀತಿಯ ನಡುವೆ ಸಿಲುಕಿಕೊಂಡಿದೆ. ಇಸ್ಲಾಮಿಕ್‌ ಸ್ಟೇಟ್‌ ಅಥವಾ ತಾಲಿಬಾನ್‌ನಂತಹ ಗುಂಪುಗಳ ಕೃತ್ಯಗಳು ಹಲವರಿಗೆ ಮುಸ್ಲಿಂ ವಿರೋಧಿ ಚಿಂತನೆಯನ್ನು ಹರಡಲು ನೆರವಾಗುತ್ತವೆ.
ಇಸ್ಲಾಮಿಕ್‌ ಸ್ಟೇಟ್‌ ಅಥವಾ ತಾಲಿಬಾನ್‌ ‘ನೈಜ ಇಸ್ಲಾಮ್‌’ ಅನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಮೂಲಕ ಹಲವು ಉದಾರವಾದಿಗಳು ಸಂವಾದದಿಂದ ಹೊರಗುಳಿಯಲು ಬಯಸುತ್ತಾರೆ. ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಇತ್ತೀಚೆಗೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಉಗ್ರಗಾಮಿ ಗುಂಪುಗಳ ಕೃತ್ಯಗಳಿಗೆ ಕಾರಣ ರಾಜಕಾರಣವೇ ಹೊರತು ಧರ್ಮ ಅಲ್ಲ ಎಂದು ವಾದಿಸುವ ಹಲವರಿದ್ದಾರೆ.
ಇವುಗಳಲ್ಲಿ ಯಾವ ವಾದವೂ ವಿಶ್ವಾಸಾರ್ಹವಲ್ಲ. ಧರ್ಮವೊಂದು ವ್ಯಾಖ್ಯಾನಗೊಳ್ಳುವುದು ಅದರ ಧರ್ಮಗ್ರಂಥದಿಂದ ಮಾತ್ರವಲ್ಲ; ಧರ್ಮದ ಅನುಯಾಯಿಗಳು ಈ ಗ್ರಂಥವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ, ಅಂದರೆ ಅವರ ನಡವಳಿಕೆಗಳು ಹೇಗಿರುತ್ತವೆ ಮತ್ತು ಅವರು ಹೇಗೆ ಜೀವಿಸುತ್ತಾರೆ ಎಂಬ ಮೂಲಕವೇ ಧರ್ಮ ವ್ಯಾಖ್ಯಾನಗೊಳ್ಳುತ್ತದೆ. ಮುಸ್ಲಿಂ ಉಗ್ರರು ಉದಾರವಾದಿಗಳಿಗೆ ನಡುಕ ಹುಟ್ಟುವ ರೀತಿಯಲ್ಲಿ ಧರ್ಮವನ್ನು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ಅವರು ಅನುಸರಿಸುವ ಧರ್ಮ ಕಡಿಮೆ ವಾಸ್ತವಿಕ ಎಂದು ಹೇಳಲು ಸಾಧ್ಯವಿಲ್ಲ.
ತಾಲಿಬಾನ್‌ ಅಥವಾ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಕೇವಲ ರಾಜಕೀಯಕ್ಕಾಗಿ ಅಥವಾ ಬರೇ ಧರ್ಮದ ಕಾರಣಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಮೂಲಭೂತವಾದಿ ಇಸ್ಲಾಂ ಎಂಬ ಧಾರ್ಮಿಕ ರೂಪ ಅನಾಗರಿಕ ರಾಜಕೀಯ ವೈಷಮ್ಯವಾಗಿ ಅಭಿವ್ಯಕ್ತಿಗೊಳ್ಳುತ್ತಿದೆ.
ಪಶ್ಚಿಮ ದೇಶಗಳ ವಿರುದ್ಧದ ರಾಜಕೀಯ ವೈಷಮ್ಯ ಇಂತಹ ಕ್ರೌರ್ಯದ ರೂಪವನ್ನು ಏಕೆ ಪಡೆದುಕೊಳ್ಳುತ್ತಿದೆ? ಮೂಲಭೂತವಾದಿ ಇಸ್ಲಾಂ ಮೂಲಕವೇ ಇದು ಏಕೆ ವ್ಯಕ್ತವಾಗುತ್ತಿದೆ?
ಇತ್ತೀಚಿನ ದಶಕಗಳಲ್ಲಿ ಪಶ್ಚಿಮ ದೇಶಗಳ ವಿರುದ್ಧದ ಭಾವನೆಯ ಸ್ವರೂಪವೇ ಬದಲಾಗಿದೆ. 1790ರ ಹೈಟಿ ಕ್ರಾಂತಿಯಿಂದ ತೊಡಗಿ, 1960– -70ರ ಆಫ್ರಿಕಾ, ಏಷ್ಯಾ ಖಂಡಗಳಲ್ಲಿನ ಸ್ವಾತಂತ್ರ್ಯ ಚಳವಳಿಗಳವರೆಗೆ ಸಾಮ್ರಾಜ್ಯಶಾಹಿ ವಿರೋಧಿ ಆಂದೋಲನಗಳಿಗೆ ದೀರ್ಘ ಇತಿಹಾಸವೇ ಇದೆ. ಈ ಆಂದೋಲನಗಳು ಪಶ್ಚಿಮದ ಅಧಿಕಾರವನ್ನು ಪ್ರಶ್ನಿಸಿವೆ ಮತ್ತು ಅದನ್ನು ವಿರೋಧಿಸಲು ಹಿಂಸಾತ್ಮಕ ದಾರಿಯನ್ನೂ ಹಿಡಿದಿವೆ. ಆದರೆ ನಿರ್ದಿಷ್ಟವಾಗಿ ನೋಡಿದರೆ ಇವು ಯಾವುವೂ ‘ಪಶ್ಚಿಮ ವಿರೋಧಿ’ ಆಗಿರಲಿಲ್ಲ. ಇಂತಹ ಆಂದೋಲನಗಳ ಮುಖಂಡರು ಪಶ್ಚಿಮದಿಂದಲೇ ಬಂದ ಕ್ರಾಂತಿಕಾರಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಜೊತೆಗೆ, ಐರೋಪ್ಯ ಜ್ಞಾನೋದಯ ಪರಂಪರೆಗೆ ಸೇರಿದವರು ತಾವು ಎಂದು ಅವರು ಪ್ರಜ್ಞಾಪೂರ್ವಕವಾಗಿಯೇ ಹೇಳಿಕೊಳ್ಳುತ್ತಿದ್ದರು.
ರಾಜಕೀಯ ಮತ್ತು ಆರ್ಥಿಕವಾಗಿ ಪಶ್ಚಿಮೇತರ ದೇಶಗಳನ್ನು ಆಧುನಿಕಗೊಳಿಸುವುದು ತಮ್ಮ ವಿಸ್ತೃತ ರಾಜಕೀಯ ಯೋಜನೆಯ ಭಾಗ ಎಂದು ಹಿಂದಿನ ಸಾಮ್ರಾಜ್ಯಶಾಹಿ ವಿರೋಧಿಗಳು ನಂಬಿದ್ದರು. ಆದರೆ ಇಂದು ವಿಸ್ತೃತ ರಾಜಕೀಯ ಯೋಜನೆ ಎಂಬುದನ್ನೇ ಒಂದು ಸಮಸ್ಯೆಯಾಗಿ ನೋಡಲಾಗುತ್ತಿದೆ. ಆಧುನಿಕತೆಯ ಹಲವು ಅಂಶಗಳ ಬಗ್ಗೆ ಇದ್ದ ಭ್ರಮೆ ಈಗ ಕಳಚಿ ಹೋಗಿದೆ. ಮುರಿದುಹೋದ ಸಾಂಪ್ರದಾಯಿಕ ಸಂಸ್ಕೃತಿಗಳು, ಛಿದ್ರಗೊಂಡ ಸಮಾಜಗಳು, ಮಬ್ಬಾದ ನೈತಿಕ ಗಡಿ ಗೆರೆಗಳು ಮುಂತಾದ ಅಂಶಗಳು ಸಮಕಾಲೀನ ಜಗತ್ತಿನ ಆತ್ಮರಹಿತ ಸ್ಥಿತಿಗೆ ಕಾರಣವೆಂಬಂತೆ ಗೋಚರಿಸುತ್ತಿವೆ. 
ಆಧುನಿಕತೆಯು ಪಶ್ಚಿಮದ ಆಸ್ತಿ ಎಂದು ಹಿಂದೆಲ್ಲ ಜನಾಂಗೀಯವಾದಿಗಳು ನೋಡುತ್ತಿದ್ದರು. ಪಶ್ಚಿಮೇತರರಿಗೆ ಆಧುನಿಕಗೊಳ್ಳುವ ಸಾಮರ್ಥ್ಯ ಇಲ್ಲ ಎಂದು ನಂಬಿದ್ದರು. ಇಂದು ಮೂಲಭೂತವಾದಿಗಳು ಆಧುನಿಕತೆಯನ್ನು ಪಶ್ಚಿಮದ ಸ್ವತ್ತು ಎಂದು ಪರಿಗಣಿಸುತ್ತಾರೆ ಹಾಗೂ ಆಧುನಿಕತೆ ಮತ್ತು ಪಶ್ಚಿಮಗಳೆರಡನ್ನೂ ಕಳಂಕಿತ ವಸ್ತುಗಳು ಎಂದು ತಿರಸ್ಕರಿಸುತ್ತಾರೆ.
ಇದರ ಪರಿಣಾಮವಾಗಿ, ರಾಜಕೀಯ ಸವಾಲು ಎಂಬಂತಿದ್ದ ಪಶ್ಚಿಮ ವಿರೋಧಿ ಭಾವನೆ ನಂತರ ಸಾಮ್ರಾಜ್ಯಶಾಹಿ ವಿರೋಧಿ ನೀತಿಯಾಗಿ ಈಗ ಆಧುನಿಕತೆ ವಿರುದ್ಧ ಆಕ್ರೋಶವಾಗಿ ಹೊರಹೊಮ್ಮಿದೆ. ಎಡ ಮತ್ತು ಬಲ ಪಂಥೀಯ ಸಮಕಾಲೀನ ಚಿಂತನೆಯ ಹಲವು ಎಳೆಗಳು ಕೂಡ ಈ ಅತೃಪ್ತಿಯನ್ನು ಹೊಂದಿವೆ. ಆದರೆ ಇಸ್ಲಾಂ ಮೂಲಭೂತವಾದಿಗಳು ಮಾತ್ರ ಈ ಆಕ್ರೋಶವನ್ನು ಪ್ರದರ್ಶನ ಮಾಡುತ್ತಿದ್ದಾರೆ.
ತಾಲಿಬಾನ್‌ನಿಂದ ಹಮಾಸ್‌ವರೆಗೆ ಮತ್ತು ಮುಸ್ಲಿಂ ಬ್ರದರ್‌ಹುಡ್‌ನಿಂದ ಬೊಕೊ ಹರಮ್‌ವರೆಗೆ ಇಸ್ಲಾಂ ಮೂಲಭೂತವಾದದ ಹಲವು ರೂಪಗಳಿವೆ. ಇವರೆಲ್ಲರಲ್ಲಿ ಇರುವ ಸಮಾನ ಅಂಶವೆಂದರೆ, ಪಶ್ಚಿಮದ ವಿರುದ್ಧ ದ್ವೇಷ ಮೂಡಿಸುವುದಕ್ಕೆ ಇರುವ ಸಾಮರ್ಥ್ಯ ಮತ್ತು ಆಧುನಿಕತೆಯ ದ್ವೇಷ. ಈ ಎರಡಕ್ಕೂ ಪರ್ಯಾಯ ಒದಗಿಸುವಲ್ಲಿಯೂ ಅವರು ಸಮರ್ಥರಾದಂತೆ ಕಾಣಿಸುತ್ತಿದೆ.
ಜಾಗತೀಕರಣಕ್ಕೆ ತೀವ್ರ ವಿರೋಧದ ಜೊತೆಗೆ ಜಾಗತಿಕ ಮುಸ್ಲಿಂ ಸಮುದಾಯ ಸೃಷ್ಟಿಯ ಉದ್ದೇಶವನ್ನು ಅವರು ಹೊಂದಿದ್ದಾರೆ. ಈ ಮೂಲಕ ಅವರು ತಮ್ಮ ಆಧುನಿಕತೆಯ ಬಗೆಗಿನ ಆಕ್ರೋಶದ ವಿರೋಧಾಭಾಸವನ್ನು ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತಾರೆ.
ಜಿಹಾದಿವಾದವು ಮೂಲಭೂತವಾದಿ ಸಿದ್ಧಾಂತಕ್ಕೆ ಸೇನಾ ಸ್ವರೂಪವನ್ನು ಒದಗಿಸುತ್ತದೆ ಮತ್ತು ಆ ಮೂಲಕ ಅದನ್ನೊಂದು ಜಾಗತಿಕ ಸಾಮಾಜಿಕ ಚಳವಳಿಯಾಗಿ ಪರಿವರ್ತಿಸುತ್ತದೆ. ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಗೆ ಮಾರ್ಗದರ್ಶಕವಾಗಿದ್ದ ನೈತಿಕ ಮತ್ತು ತಾತ್ವಿಕ ಚೌಕಟ್ಟು ಜಿಹಾದಿವಾದದ ದೊಡ್ಡ ಕೊರತೆಯಾಗಿದೆ. ಹೀಗಾಗಿ ಜಗತ್ತಿನ ವಿರುದ್ಧ ಆಕ್ರೋಶವನ್ನಷ್ಟೇ ವ್ಯಕ್ತಪಡಿಸುವ ಜಿಹಾದಿಗಳು ಭಯೋತ್ಪಾದನೆಯನ್ನೇ ತಮ್ಮ ಧ್ಯೇಯವಾಗಿ ಮಾಡಿಕೊಂಡಿದ್ದಾರೆ.
ಪೆಶಾವರದ ಹತ್ಯಾಕಾಂಡ ಮತ್ತು ಇಸ್ಲಾಮಿಕ್‌ ಸ್ಟೇಟ್‌ ನಡೆಸುವ ಸಾಮೂಹಿಕ ಶಿರಚ್ಛೇದಗಳು ಸಮಕಾಲೀನ ಇಸ್ಲಾಂ ಮತ್ತು ಇಸ್ಲಾಂವಾದದ ಸ್ವರೂಪದ ಬಗ್ಗೆ ಒಂದಷ್ಟನ್ನು ನಮಗೆ ತಿಳಿಸಿಕೊಡುತ್ತವೆ. ಹಾಗೆಯೇ ಸಮಕಾಲೀನ ರಾಜಕೀಯ ಮತ್ತು ವಿಶೇಷವಾಗಿ ಮೂಲಭೂತವಾದಿ ರಾಜಕಾರಣದ ಬಗ್ಗೆ ಇನ್ನೂ ಹೆಚ್ಚಿನದನ್ನು ಹೇಳುತ್ತವೆ.