ಸತತವಾಗಿ ಕುಸಿಯುತ್ತಿರುವ ರುಪಾಯಿ ಮೌಲ್ಯ ಹಾಗೂ ಅಮೆರಿಕ-ಚೀನಾ ನಡುವಿನ ತೆರಿಗೆ ಗುದ್ದಾಟದ ಹಿನ್ನೆಲೆಯಲ್ಲಿ ಮುಂಬೈ ಷೇರು ಸೂಚ್ಯಂಕ ಈ ಶುಕ್ರವಾರ ಮಾರುಕಟ್ಟೆ ಅಂತ್ಯವಾಗುವ ವೇಳೆಗೆ 792.17 ಅಂಕಗಳ ಭಾರಿ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 34,376.99 ಅಂಕಗಳ ಮಟ್ಟದಲ್ಲಿ ಅತ್ಯಂತ ನಿರಾಶದಾಯಕವಾಗಿ ಕೊನೆಗೊಳಿಸಿತು.ಡಾಲರ್ ಎದುರು ರುಪಾಯಿ ಹೊಸ ಸಾರ್ವಕಾಲಿಕ ತಳಮಟ್ಟವನ್ನು ಕಂಡಿರುವುದು, ಕಚ್ಚಾತೈಲ ಬೆಲೆ ನಿರಂತರ ಏರಿಕೆ ಕಾಣುತ್ತಿರುವುದು ಇತ್ಯಾದಿಗಳಿಂದಾದ ಜಾಗತಿಕ ಅಸ್ಥಿರತೆಯ ಛಾಯೆಯು ಮಾರುಕಟ್ಟೆಯನ್ನು ಕಂಗೆಡಿಸುವಂತೆ ಮಾಡಿದೆ. ಇದು ಈಗಾಗಲೇ ಆರ್ಥಿಕವಾಗಿ ಬಸವಳಿದ ಮಧ್ಯಮವರ್ಗದ ಜನತೆಯನ್ನು ಇನ್ನಷ್ಟು ದುಸ್ಥಿತಿಗೆ ತಳ್ಳುವ, ಜನಸಾಮಾನ್ಯರನ್ನು ಬಾಣಲೆಯಿಂದ ಬೆಂಕಿಗೆ ನೂಕುವ ಸಂಜ್ಞೆಯೇ ಎಂದು ಚಿಂತಿಸುವಂತಾಗಿದೆ.ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಬೆಲೆಯು ಅಸಾಮಾನ್ಯ ಬಗೆಯಲ್ಲಿ ದುರ್ಬಲಗೊಂಡು ಪ್ರತಿ ಡಾಲರ್ ಗೆ 74 ರುಪಾಯಿಗಳಷ್ಟು ಅಪಾಯಕಾರಿ ಮಟ್ಟದಲ್ಲಿ ಅಪಮೌಲ್ಯಗೊಂಡಿರುವುದು ಕಳವಳಕಾರಿಯಾದ ವಿಷಯ. ದುರ್ಬಲ ಕರೆನ್ಸಿಯು ದೇಶದ ಆರ್ಥಿಕ ಪರಿಸ್ಥಿತಿಯು ಸಂಕಷ್ಟದಲ್ಲಿ ಇರುವುದರ ಸಂಕೇತ ಹಾಗೂ ಇದರ ಬಹಳ ವ್ಯಾಪಕವಾಗಿವೆ.ಅಮೆರಿಕದ ಕರೆನ್ಸಿಯಾಗಿರುವ ಡಾಲರ್ ನ ವಿನಿಮಯ ದರವು ಇತರ ಕರೆನ್ಸಿಗಳ ಎದುರು ಹೆಚ್ಚಳಗೊಂಡಿರುವುದು ಪೂರೈಕೆ ಮತ್ತು ಬೇಡಿಕೆಯ ಒಂದು ಸರಳ ವಿದ್ಯಮಾನ. ಒಂದು ದೇಶದ ಆರ್ಥಿಕ ಪ್ರಾಬಲ್ಯ ಹೆಚ್ಚಿದಂತೆ, ಆ ದೇಶದ ಕರೆನ್ಸಿ ಕೂಡಾ ಪ್ರಾಬಲ್ಯ ಪಡೆಯುತ್ತದೆ. ಭಾರತದ ಅರ್ಥ ವ್ಯವಸ್ಥೆಯು ತನ್ನ ಅಗತ್ಯಕ್ಕಿಂತ ಹೆಚ್ಚಿನ ಡಾಲರ್ ಗಳನ್ನು ಗಳಿಸಿದಾಗ ರುಪಾಯಿ ಮೌಲ್ಯ ವೃದ್ಧಿಸುತ್ತದೆ. ಅಗತ್ಯ ಇರುವಷ್ಟು ಡಾಲರನ್ನು ಗಳಿಸಲು ಸಾಧ್ಯವಾಗದೇ ಹೋದಾಗ ಡಾಲರ್ ಎದುರು ಮೌಲ್ಯ ಕುಸಿಯುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶದ ವಿದೇಶಿ ವಿನಿಮಯದ ಒಳ ಹರಿವು ಕಡಿಮೆಯಾಗಿ, ಡಾಲರ್ ಲಭ್ಯತೆ ಕಡಿಮೆಯಾಗಿದೆ. ಇದರಿಂದಾಗಿ ಡಾಲರ್ ಮೌಲ್ಯ ಹೆಚ್ಚಳಗೊಂಡು ರುಪಾಯಿ ಮೌಲ್ಯ ಕುಸಿದಿದೆ.ಆದರೆ ಡಾಲರಿನ ಎದುರು 71 ವರ್ಷಗಳಲ್ಲಿ, ರುಪಾಯಿ 74 ಪಟ್ಟು ಕುಸಿಯಿತೇಕೆ ಎನ್ನುವುದು ಅಷ್ಟು ಸರಳವಲ್ಲ. 1947 ರಲ್ಲಿ ಒಂದು ಅಮೆರಿಕನ್ ಡಾಲರ್, ಭಾರತೀಯ ಒಂದು ರುಪಾಯಿಗೆ ಸಮ ಆಗಿತ್ತು. ಕಳೆದ 71 ವರ್ಷಗಳಲ್ಲಿ ರುಪಾಯಿಯ ಎದುರು ಡಾಲರ್ ಮೌಲ್ಯ 74 ಪಟ್ಟು ಹೆಚ್ಚಾಗಿ ರುಪಾಯಿ ಸಾರ್ವಕಾಲಿಕ ಕುಸಿತವನ್ನು ಈ ಶುಕ್ರವಾರ ಮಾರುಕಟ್ಟೆ ಅಂತ್ಯವಾಗುವ ವೇಳೆಗೆ 74.05 ಕ್ಕೆ ತಲುಪಿತು. ಇದೊಂದು ಸಾರ್ವಕಾಲಿಕ ದಾಖಲೆಯ ಕುಸಿತ. ನಮ್ಮ ರುಪಾಯಿ ಡಾಲರ್ ಎದುರು ನಿರಂತರವಾಗಿ ಮುಗ್ಗರಿಸುತ್ತಿರುವುದನ್ನು ಮತ್ತು ರುಪಾಯಿ ಅಪಮೌಲ್ಯವು ಸಾರ್ವಕಾಲಿಕ ದಾಖಲೆ ಆಗುತ್ತಿರುವುದನ್ನು ಮಾರುಕಟ್ಟೆ ವಿಶ್ಲೇಷಕರು, ಉದ್ಯಮಿಗಳು ಮತ್ತು ಜನಸಾಮಾನ್ಯರು ಭಯಮಿಶ್ರಿತ ಆಶ್ಚರ್ಯದಿಂದ ಅಸಹಾಯಕರಾಗಿ ನೋಡುತ್ತಿದ್ದಾರೆ. ಇದರ ಹಿಂದಿರುವ ಅಂಶಗಳನ್ನು ಒಂದೊಂದಾಗಿ ಅವಲೋಕಿಸೋಣ.ಯಾವುದೇ ದೇಶದ ಕರೆನ್ಸಿಯೊಂದರ ವಿನಿಮಯ ದರದ ಮೇಲೆ ಹಲವಾರು ಸಂಗತಿಗಳು ಪ್ರಭಾವ ಬೀರುತ್ತದೆ ಎಂದರೂ, ಈ ಹಿಂದೆ ಪ್ರಸ್ತಾಪಿಸಿದಂತೆ, ಎಲ್ಲಕ್ಕಿಂತ ಮುಖ್ಯವಾಗಿ ಪೂರೈಕೆ ಮತ್ತು ಬೇಡಿಕೆಯೇ ಪ್ರಮುಖ ಕಾರಣ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ಬದಲಾವಣೆಗಳಿಗೆ ದೇಶಗಳ ನಡುವೆ ಬೆಲೆಗಳ ಮಟ್ಟದಲ್ಲಿ ವ್ಯತ್ಯಾಸ, ಬಡ್ದಿಯ ದರದಲ್ಲಿ ಬದಲಾವಣೆ, ರಫ್ತು ಮತ್ತು ಆಮದಿನಲ್ಲಿ ಬದಲಾವಣೆ, ಬಂಡವಾಳದ ಅಂತಾರಾಷ್ಟ್ರೀಯ ಚಲನೆ, ಸಟ್ಟಾ ವ್ಯಾಪಾರ, ರಾಜಕೀಯ, ಆರ್ಥಿಕ ನೀತಿ ಮೊದಲಾದ ಅಂಶಗಳು ಕಾರಣವಾಗಿವೆ.ಭಾರತದಲ್ಲಿ ಡಾಲರಿನ ಬೇಡಿಕೆಯು ಪೂರೈಕೆಗಿಂತ ಹೆಚ್ಚಾದಾಗ ಡಾಲರಿನ ಮೌಲ್ಯ ರುಪಾಯಿಯ ಎದುರು ಹೆಚ್ಚಳವಾಗಿ, ರುಪಾಯಿಯ ಮೌಲ್ಯ ಕಡಿಮೆಯಾಗುತ್ತದೆ. ಭಾರತೀಯ ಆಮದುದಾರರಿಗೆ ವಿದೇಶಿ ವಸ್ತುಗಳನ್ನು ಖರೀದಿಸಿದಾಗ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರು ತಮ್ಮ ಬಂಡವಾಳವನ್ನು ಹಿಂತೆಗೆದುಕೊಂಡಾಗ ಡಾಲರಿನ ಬೇಡಿಕೆ ಹೆಚ್ಚಾಗುತ್ತದೆ. ಭಾರತದ ರಫ್ತಿನ ಪ್ರಮಾಣ ಹೆಚ್ಚಾದಾಗ ಮತ್ತು ವಿದೇಶಿ ಬಂಡವಾಳದ ಒಳಹರಿವು ಉಂಟಾದಾಗ ಡಾಲರಿನ ಪೂರೈಕೆ ಜಾಸ್ತಿ ಆಗುತ್ತದೆ. ಭಾರತ ದೇಶವು ತನ್ನಲ್ಲಿ ಗಳಿಕೆಯಾಗುವ ಡಾಲರ್‌ಗಳಿಗಿಂತ ಹೆಚ್ಚು ಡಾಲರ್‌ಗಳನ್ನು ಬಳಸುತ್ತಿರುವುದೇ ಇಂದಿನ ಸಮಸ್ಯೆಗೆ ಮೂಲ. ಭಾರತವು ಹಲವು ಬಗೆಯ ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಬಳಸುತ್ತಿದೆ. ಆಮದು ಮಾಡುವ ಸರಕುಗಳ ಪೈಕಿ ತೈಲೋತ್ಪನ್ನಗಳ ನಂತರ ಬರುವವು ಕಲ್ಲಿದ್ದಲು ಮತ್ತು ಚಿನ್ನ.ರುಪಾಯಿಯ ಅಪಮೌಲ್ಯ ಯಾಕೆ ಆತಂಕಕಾರಿ ಎಂದು ತಿಳಿಯುವುದೂ ಅಗತ್ಯ. ನಿರಂತರವಾಗಿ ಇಳಿಯುತ್ತಿರುವ ರುಪಾಯಿಯ ಮೌಲ್ಯ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ರುಪಾಯಿಯ ಮೌಲ್ಯ ಕುಸಿತದಿಂದಾಗಿ ಲಾಭವಾಗುವುದೇನಿದ್ದರೂ ಡಾಲರಿಗೆ, ಡಾಲರುದಾರರಿಗೆ. ರುಪಾಯಿ ಕುಸಿತದಿಂದ ಆಮದು ಮಾಡುವ ಎಲ್ಲಾ ಸರಕುಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಮತ್ತು ರಫ್ತು ಮಾಡುವ ಎಲ್ಲಾ ವಸ್ತುಗಳಿಗೂ ಹೆಚ್ಚಿನ ಬೆಲೆ ಸಿಗುತ್ತದೆ. ಆದರೆ, ಭಾರತ ಒಂದು ನಿವ್ವಳ ಆಮದುದಾರ ದೇಶವಾದ ಕಾರಣ ನಮಗೆ ರುಪಾಯಿ ಅಪಮೌಲ್ಯದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹೇಗೆಂದರೆ, ಪ್ರಮುಖ ಆಮದುಗಳಾದ ತೈಲೋತ್ಪನ್ನಗಳು, ಲೋಹಗಳು, ಗೊಬ್ಬರ, ಔಷಧ, ಕಂಪ್ಯೂಟರ್ ಮತ್ತಿತರ ವಸ್ತುಗಳ ಬೆಲೆ ಗಗನಮುಖಿಯಾಗುತ್ತವೆ. ತೈಲ ಬೆಲೆ ಏರಿಕೆಯಿಂದಾಗಿ ವಾಹನಗಳ ಸಾಗಣೆ ವೆಚ್ಚ ಅಧಿಕಗೊಂಡು ದಿನಸಿ, ಹೋಟೆಲ್, ಬಸ್ಸು, ಹೀಗೆ ಎಲ್ಲಾ ಕಡೆ ಬೆಲೆ ಏರಿಕೆ ಕಂಡು ಬರುತ್ತದೆ. ಪರಿಣಾಮವಾಗಿ ದೇಶ ಹಣದುಬ್ಬರದ ಪರಿಸ್ಥಿತಿಯನ್ನು ಇಡೀ ಆರ್ಥಿಕತೆಗೆ ಬೆಲೆಯೇರಿಕೆಯ ಬಿಸಿ ತಟ್ಟುತ್ತದೆ. ಅಲ್ಲದೆ, ನಮ್ಮದು ಆಮದು ಆಧರಿತ ಅರ್ಥ ವ್ಯವಸ್ಥೆ ಯಾಗಿರುವುದರಿಂದ ದಿನೇ ದಿನೇ ‘ಚಾಲ್ತಿ ಖಾತೆಯ ಕೊರತೆ’ ಏರುಗತಿಯಲ್ಲಿರುವುದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ರುಪಾಯಿ ಮೌಲ್ಯದ ಅನಿಶ್ಚಿತತೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ವಿಫಲವಾಗುತ್ತದೆ.ಭಾರತದ ರುಪಾಯಿಯ ಅಪಮೌಲ್ಯೀಕರಣವಷ್ಟೇ ಅಲ್ಲ, ಏರುಗತಿಯಲ್ಲಿರುವ ಡಾಲರ್ ಮೌಲ್ಯ ವಿಶ್ವಾದ್ಯಂತ ಹಣಕಾಸು ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಕರೆನ್ಸಿ ವಿನಿಮಯ ಮತ್ತು ಷೇರು ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಉದಾಹರಣೆಗೆ, ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ, ತೈಲ ಬೆಲೆ ಹೆಚ್ಚಳ, ತೈಲ ಆಮದಿಗಾಗಿ ಹೆಚ್ಚುತ್ತಿರುವ ಡಾಲರಿನ ಬೇಡಿಕೆ ಮತ್ತು ಬಂಡವಾಳದ ಹೊರಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರುಪಾಯಿ ಅಪಮೌಲ್ಯ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಆಮದಿನ ಪ್ರಮಾಣವು ನಿಯಂತ್ರಣ ಮೀರಿ ಹೆಚ್ಚುತ್ತಿರುವುದರಿಂದ ವಿದೇಶಿ ವಿನಿಮಯ ಕೊರತೆ ಹೆಚ್ಚಳಗೊಂಡು ರುಪಾಯಿ ಮೇಲೆ ಒತ್ತಡ ಹೆಚ್ಚುತ್ತಲೇ ಸಾಗಿದೆ. ಅಮೆರಿಕ ಮತ್ತು ಚೀನಾ ನಡುವೆ ಉಂಟಾಗಿರುವ ವಾಣಿಜ್ಯ ಸಮರದ ಜತೆಗೆ ಹಣಕಾಸು ಬಿಕ್ಕಟ್ಟು ಸಹ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿದೆ.ವ್ಯಾಪಾರ ಸಮತೋಲನದ ಸಮಸ್ಯೆಯೂ ತನ್ನದೇ ಆದ ರೀತಿಯಲ್ಲಿ ಇದಕ್ಕೆ ಕಾಣಿಕೆ ಸಲ್ಲಿಸುತ್ತಿದೆ. ಸದ್ಯಕ್ಕೆ ನಮ್ಮ ದೇಶದ ಚಾಲ್ತಿ ಖಾತೆ ಕೊರತೆ ಸುಮಾರು 170 ಶತಕೋಟಿ ಡಾಲರ್. ಇದು ತೀರಾ ಜಾಸ್ತಿ. ಚಾಲ್ತಿ ಖಾತೆಯಲ್ಲಿ ಕೊರತೆ ಭಾರತವನ್ನು ಆರಂಭದಿಂದಲೂ ಕಾಡಿಕೊಂಡು ಬಂದಂತಹ ಒಂದು ಪ್ರಮುಖ ಸಮಸ್ಯೆ. ದೇಶದ ರಫ್ತು ಪ್ರಮಾಣವು ಕಡಿಮೆಯಾಗಿ ವ್ಯಾಪಾರ ಸಮತೋಲನವು ಪ್ರತಿ ವರ್ಷ ಕಡಿಮೆಯಾಗುತ್ತಿರುವುದು ಆತಂಕಕಾರಿ ಮತ್ತು ನಿರಾಶಾದಾಯಕವಾಗಿದೆ. ಇದರೊಂದಿಗೆ ಬಂಡವಾಳದ ಹೊರಹರಿವೇ ಹೆಚ್ಚಿದೆ. ಸಟ್ಟಾ ಹೂಡಿಕೆಯಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಭಾರತದ ಬಾಂಡು ಮಾರುಕಟ್ಟೆಯ ಉದಾರೀಕರಣದೊಂದಿಗೆ ಹೆಚ್ಚಿಸಿದ ಹೂಡಿಕೆಯ ಮಿತಿ, ಡಾಲರ್ ಒಳ ಹರಿವಿಗೆ ಕಾರಣವಾಯಿತು. ಆದರೆ ಸುಲಭವಾಗಿ ಒಳಬಂದ ಡಾಲರ್ ಸುಲಭವಾಗಿ ಹೊರಹೋಗಲು ಸಾಧ್ಯ ಎಂಬುದು ಸಮಸ್ಯೆಯನ್ನು ಮತ್ತೆ ಅದೇ ಜಾಗಕ್ಕೆ ತಂದು ಕೂರಿಸಿತು.ಅಮೆರಿಕ, ತನ್ನ ಡಾಲರ್ ಹರಿವನ್ನು ನಿಯಂತ್ರಿಸುವ ಸೂಚನೆ ಸಿಕ್ಕುತ್ತಲೇ ಡಾಲರ್ ಬೆಲೆ ಸಹಜವಾಗಿ ಹೆಚ್ಚಿತು ಮತ್ತು ಮೇಲಿನ ಬಡ್ಡಿಯ ದರವೂ ಹೆಚ್ಚಿತು.ಇದೀಗ ವಿದೇಶಿ ಹೂಡಿಕೆದಾರರು ಭಾರತೀಯ ಬಾಂಡುಗಳನ್ನು ಮಾರಿ, ಅಮೆರಿಕದ ಬಾಂಡುಗಳನ್ನು ಕೊಳ್ಳತೊಡಗಿದರು. ಇದರೊಂದಿಗೆ ಹಲವಾರು ಜಾಗತಿಕ ವಿದ್ಯಮಾನಗಳು ಭಾರತದ ರಫ್ತು ಹೆಚ್ಚಿಸಲು ಪ್ರತಿಕೂಲವಾಗಿ ಪರಿಣಮಿಸಿದವು. ಅನೇಕ ಅಭಿವೃದ್ಧಿಶೀಲ ದೇಶಗಳು ತಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವುದು ಪ್ರಸ್ತುತ ದೇಶೀ ರ್ತು ಹೆಚ್ಚಳಕ್ಕೆ ಮಾರಕವಾಗಿದೆ.ಮುಂದೇನು ಎಂಬ ಪ್ರಶ್ನೆ ಕೇಳಿಕೊಂಡರೆ, ಈ ಸಮಸ್ಯೆಗೆ ಏಕೈಕ ಪರಿಹಾರ ಎಂಬುದಿಲ್ಲ! ಯಾಕೆಂದರೆ ಸಮಸ್ಯೆಗೆ ಕಾರಣಗಳೂ ಹಲವಾರು. ನಮಗೀಗ ಬೇಕಾಗಿರುವುದು ಕೆಲವು ಕಠಿಣ ಮತ್ತು ಎದ್ದುತೋರುವ ಕ್ರಮಗಳು, ಉಳಿತಾಯ ಪ್ರಚೋದಕಗಳು ಹಾಗೂ ಹೂಡಿಕೆದಾರರಿಗೆ ಅಭಯಹಸ್ತ. ಇದರೊಂದಿಗೆ ಹೆಚ್ಚುತ್ತಿರುವ ತೈಲ ಮತ್ತು ಬಂಗಾರದ ಆಮದು ತಗ್ಗಿಸಲು ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಜತೆಗೆ, ಆರ್ಥಿಕ ಬೆಳವಣಿಗೆಗೆ ಹಣಕಾಸು ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ಒಟ್ಟೊಟ್ಟಿಗೆ ಕೈಗೊಳ್ಳುವ ಅಗತ್ಯ ಇದೆ.ಕರೆನ್ಸಿ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಈ ಆತಂಕದ ಛಾಯೆ ದೂರ ಮಾಡಲು ಹಣಕಾಸಿನ ಕ್ರಮಗಳನ್ನು ಆರ್‌ಬಿಐ ಮತ್ತು ವಿತ್ತೀಯ ಶಿಸ್ತಿನ ಕ್ರಮಗಳನ್ನು ಸರಕಾರ ತುರ್ತಾಗಿ ಕೈಗೊಳ್ಳಬೇಕಾಗಿದೆ. ‘ವಿದೇಶಿ ಕರೆನ್ಸಿಯ ಮಿತವ್ಯಯದಲ್ಲಿ ಉಳಿತಾಯ ಮಾಡುವ ಪ್ರತಿಯೊಂದು ರುಪಾಯಿ, ಅದನ್ನು ಸಂಪಾದಿಸಿದಂತೆ’ ಎಂಬ ಹಿರಿಯರ ಮಾತು ನಮಗೆ ಮಾರ್ಗದರ್ಶಿಯಾಗಬೇಕು.ಡಾ.ಎ. ಜಯಕುಮಾರ ಶೆಟ್ಟಿ, ಪ್ರಾಧ್ಯಾಪಕ ವಿಶ್ವವಾಣಿ
No comments:
Post a Comment