ವೇದ, ಪುರಾಣಗಳ ಕಾಲಘಟ್ಟದಿಂದ ಶಿಲಾಯುಗದ ವರೆಗೂ ಕೃಷಿ ಭಾರತದ ಜೀವನಾಡಿಯೇ ಈ ಶತಮಾನದಲ್ಲಿಯೂ 69% ಜನ ಕೃಷಿಯನ್ನೇ ಅವಲಂಬಿಸಿ ಬದುಕನ್ನ ರೂಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಭಾರತ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಎರಡನೆಯ ಸ್ಥಾನದಲ್ಲಿದೆ. 2014-15ರ ಅವಧಿಯಲ್ಲಿ ಒಟ್ಟು ದೇಶೀ ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.13.7 ರಷ್ಟು ದೇಶದ ಒಟ್ಟು ಉದ್ಯೋಗಿ ವರ್ಗದಲ್ಲಿ ಶೇ.50 ರಷ್ಟು ಜನರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಬಹಳ ವಿಶೇಷವಾಗಿ ಇದೇ ಅವಧಿಯಲ್ಲಿ ಭಾರತವು ಸುಮಾರು 120 ಕ್ಕೂ ಹೆಚ್ಚು ಇತರ ರಾಷ್ಟ್ರಗಳಿಗೆ 38 ಡಾಲರ್‌ನಷ್ಟು ವಿವಿಧ ಕೃಷಿ ಉತ್ಪನ್ನಗಳ ರಫ್ತು ಮಾಡುವ ಮೂಲಕ ವಿಶ್ವದ ಏಳನೇ ಅತಿದೊಡ್ಡ ಕೃಷಿ ಉತ್ಪನ್ನಗಳ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ಇಷ್ಟೆಲ್ಲ ಸಾಧನೆಗಳಿದ್ದರೂ ಜಗತ್ತಿಗೆ ಅನ್ನ ನೀಡುವ ಭಾರತದ ರೈತನ ಪರಿಸ್ಥಿತಿ ಮಾತ್ರ ಬಹಳ ಚಿಂತಾಜನಕ, ಅತ್ಯಂತ ಶೋಚನೀಯವಾಗಿದೆ. ಅಂದಿನಿಂದ ಇಂದಿಗೂ ರೈತ ಎಂದರೆ ನಮ್ಮ ಕಣ್ಮುಂದೆ ಬರುವ ಚಿತ್ರಣ ಸಣಕಲು ದೇಹ, ಬರಡು ಭೂಮಿಯ ನಡುವೆ ಕುಳಿತು ಯಾವುದೋ ನಿರೀಕ್ಷೆಯೊಂದಿಗೆ ತದೇಕಚಿತ್ತದಿಂದ ನೆಟ್ಟಿರುವ ದೃಷ್ಟಿ . ಆ ನಿರೀಕ್ಷೆಗಳು ಹುಸಿಯಾದರೆ ದೃಷ್ಟಿ ಹರಿಯುವುದೇ ಆತ್ಮಹತ್ಯೆಯ ಕಡೆಗೆ, ಇದು ನಮ್ಮ ರೈತರನ್ನು ಸುಧಾರಿಸಲಾಗದ ಅತ್ಯಂತ ಗಂಭೀರವಾದಂತಹ ಸ್ಥಿತಿ.
ಬ್ಯಾಂಕ್‌ಸಾಲ ಮರು ಪಾವತಿಸಲಾಗದೆ ಶಿಕ್ಷೆಗೆ ಒಳಗಾಗಿ ಕಾರಾಗೃಹದಲ್ಲಿ ಕೊನೆಯುಸಿರೆಳೆದ ಹತಭಾಗ್ಯ ರೈತನೊಬ್ಬನ ಪ್ರಕರಣ ಇಂದು ಸುದ್ದಿಯಲ್ಲಿದೆ. ಸರಿಯಾದ ಸವಲತ್ತುಗಳು, ಪ್ರೋತ್ಸಾಹ, ಬೆಂಬಲ ಬೆಲೆಗಳು ಸಿಗದೆ ಹೋದಾಗ ದೇಶದ ರೈತರ ಆತ್ಮಹತ್ಯೆಗಳು ಮೇರೆ ಮೀರಿವೆ. ‘ನ್ಯಾಷನಲ್ ಕ್ರೈಮ್ ರೆಕಾರ್ಡ್‌ಸ್ ಬ್ಯೂರೋ’ ವರದಿಯ ಪ್ರಕಾರ 2015-16 ರಲ್ಲಿ ದೇಶಾದ್ಯಂತ 8009 ರೈತರು ಆತ್ಮಹತ್ಯೆ ಇದರಲ್ಲಿ ಮಹಾರಾಷ್ಟ್ರ ಒಂದರಲ್ಲೇ 3033 ರೈತರ ಬಲಿದಾನವಾಗಿದ್ದರೆ, ಕರ್ನಾಟಕದಲ್ಲಿ ಇದೇ ಅವಧಿಯಲ್ಲಿ 1483 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ ತಮಿಳನಾಡು, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ, ಛತ್ತಿಸಗಢ, ಜಾರ್ಖಂಡ್ ಹಾಗೂ ಒಡಿಶಾ ರಾಜ್ಯಗಳಿವೆ.
ರೈತರ ಆತ್ಮಹತ್ಯೆಯ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ ಅಮೆರಿಕ, ಕೆನಡಾ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿಯೂ ತಲೆದೋರಿದೆ. ಆಸ್ಟ್ರೇಲಿಯಾದ ಕೃಷಿ ವಿಶ್ವವಿದ್ಯಾಲಯವೊಂದು ನಡೆಸಿರುವ ಸಂಶೋಧನಾ ಸಮೀಕ್ಷೆಯಲ್ಲಿ ಕಂಡುಕೊಂಡ ದುರಂತಕಾರಿ ಅಂಶವೆಂದರೆ, ನಾನಾ ಕ್ಷೇತ್ರಗಳ, ಎಲ್ಲ ರೀತಿಯ ಉದ್ಯೋಗಗಳಿಗೆ ಹೋಲಿಸಿದರೆ ಅತಿ ಹೆಚ್ಚು ಒತ್ತಡ ಹೊಂದಿರುವ ವೃತ್ತಿ ಎಂದರೆ ಅದು ಕೃಷಿ ಕ್ಷೇತ್ರ! ಜೊತೆಗೆ ಆಸ್ಟ್ರೇಲಿಯಾದ ಪ್ರತಿ 10 ಆತ್ಮಹತ್ಯೆ ಪ್ರಕರಣಗಳಲ್ಲಿ 6-7 ಪ್ರಕರಣಗಳು ರೈತರ ಆತ್ಮಹತ್ಯೆಗಳಾಗಿರುತ್ತವೆ ಎಂಬ ವಿಚಾರ ಹೊರಬಿದ್ದಿದೆ. ಅಂತರಾಷ್ಟ್ರೀಯ ಮಟ್ಟದ ಸುಮಾರು 52 ವಿವಿಧ ಸಂಶೋಧನೆ ತಂಡಗಳು ಇಂಗ್ಲೆಂಡ್, ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಹಾಗೂ ಕೆನಡಾ ರಾಷ್ಟ್ರಗಳಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಬೇರೆ ಬೇರೆ ಕ್ಷೇತ್ರಗಳಿಗಿಂತ ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ರೈತರು ಅತಿ ಹೆಚ್ಚು ಮಾನಸಿಕ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವುದಕ್ಕೆ ಪ್ರಮುಖ ಕಾರಣವೇ ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆ ಹಾಗೂ ಹವಾಮಾನ ವೈಪರಿತ್ಯದ ಪರಿಣಾಮ ಎಂಬ ಅಂಶ ಬೆಳಕಿಗೆ ಬಂದಿತು. ಆದರೆ ಭಾರತಕ್ಕೆ ಹೋಲಿಸಿದರೆ ಈ ರಾಷ್ಟ್ರಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ತೀರಾ ಕಡಿಮೆ ಮತ್ತು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ರೈತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಅವರ ಮನೋಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ರಾಷ್ಟ್ರಗಳು ಕಾರ್ಯಕ್ರಮಗಳನ್ನು ಕೈಗೊಂಡಿವೆ.
ಭಾರತದಲ್ಲಿ 1995 ರಿಂದ 2002ರ ವರೆಗಿನ ಅವಧಿಯಲ್ಲಿ ರೈತರ ಆತ್ಮಹತ್ಯೆಗಳ.
- ಕರ್ನಾಟಕದಲ್ಲಿ 2259,
- ಆಂಧ್ರಪ್ರದೇಶದಲ್ಲಿ 1590,
- ಆಸ್ಸಾಂ 155,
- ಕೇರಳದಲ್ಲಿ 1292,
- ಮಧ್ಯಪ್ರದೇಶದಲ್ಲಿ 2304,
- ಮಹಾರಾಷ್ಟ್ರ-2508,
- ತಮಿಳುನಾಡು-992,
- ಉತ್ತರಪ್ರದೇಶ-640,
- ಪಶ್ಚಿಮ ಬಂಗಾಲದಲ್ಲಿ 1426 ರೈತರ ಆತ್ಮಹತ್ಯೆಗಳಾಗಿವೆ.
ಇನ್ನು 2003 ರಿಂದ 2015ರ ಅವಧಿಯಲ್ಲಿ ಒಟ್ಟು 14,804 ರೈತರ ಆತ್ಮಹತ್ಯೆಗಳಾಗಿವೆ. ಅತಿ ಹೆಚ್ಚು ಮಹಾರಾಷ್ಟ್ರ, ನಂತರ ಮಧ್ಯಪ್ರದೇಶದಲ್ಲಿ. ಕರ್ನಾಟಕದಲ್ಲಿ ನೋಡುವುದಾದರೆ 2003 ರಿಂದ 2017ರ ವರೆಗಿನ ಅಂಕಿಅಂಶಗಳ ಪ್ರಕಾರ 1,697 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿದೇಶಗಳ ಸಮೀಕ್ಷೆಯಿಂದ ತಿಳಿದುಬಂದ ಕಾರಣಗಳಿಗೆ ಸಂವಾದಿಯಾಗಿ, ಭಾರತದಲ್ಲಿ ಸಹ ನಾನಾ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸಿದ ಸಂಶೋಧನೆಯಲ್ಲಿ ರೈತರ ಆತ್ಮಹತ್ಯೆಗೆ ಸಾಕಷ್ಟು ಕಾರಣಗಳು ಕಂಡಬಂದಿವೆ.
ರೈತರ ಆತ್ಮಹತ್ಯೆಗೆ ಸಾಕಷ್ಟು ಕಾರಣಗಳು ಕಂಡಬಂದಿವೆ.
- ಪ್ರಮುಖವಾಗಿ ನೆರೆ,
- ಬರಗಾಲ,
- ಸಾಲ,
- ಸ್ಥಳೀಯವಾಗಿ ಅಭಿವೃದ್ಧಿಪಡಿಸದ ಕಳಪೆ ಬಿತ್ತನೆ ಬೀಜದ ಬಳಕೆ,
- ರೈತನ ದೀರ್ಘಕಾಲದ ಆರೋಗ್ಯ ಸಮಸ್ಯೆ,
- ಕಳಪೆ ಗುಣಮಟ್ಟದ ಗೊಬ್ಬರ ಬಳಕೆ,
- ಕಡಿಮೆ ಬಂಡವಾಳದಿಂದ ಕಡಿಮೆ ಇಳುವರಿ ಕಾರಣಗಳು ರೈತರನ್ನು ಜೀವ ತೆಗೆದುಕೊಳ್ಳುವಂತೆ ಮಾಡಿವೆ.
ಇಲ್ಲಿ ಆತ್ಮಹತ್ಯೆಗೆ ಶರಣಾದ ರೈತರು ಸರಾಸರಿ 3 ಅಥವಾ ಅದಕ್ಕಿಂತ ಹೆಚ್ಚು ಸಮಸ್ಯೆಗಳಿಗೆ ಒಳಗಾದವರು. ಇಷ್ಟೇ ಅಲ್ಲದೆ ಕೃಷಿ ಸಂಬಂಧಿತ ಸಮಸ್ಯೆಗಳಿಗಿಂತ ಸಾಲ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಎಡುವುತ್ತಿರುವುದೇ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ.
2014ರ ಮತ್ತೊಂದು ವರದಿಯು ಹೇಳುವಂತೆ ರೈತರ ಆತ್ಮಹತ್ಯೆಗೆ ಶರಣಾಗುವ ರೈತರಲ್ಲಿ ಪ್ರಮುಖವಾಗಿ 3 ವಿಧಗಳಿವೆ.
- ಒಂದು ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರು,
- ಎರಡನೆಯದಾಗಿ ಕನಿಷ್ಠ 1 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವವರು,
- ಮೂರನೆಯದು 30 ಸಾವಿರ ರು. ಹಾಗೂ ಅದಕ್ಕಿಂತ ಹೆಚ್ಚು ಸಾಲ ಹೊಂದಿರುವವರು.
ದೇಶದ ಒಟ್ಟಾರೆ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಇಂಥವರ ಪಾಲು ಶೇ.75 ರಷ್ಟು, 2004 ರಲ್ಲಿ ಭಾರತದಲ್ಲಿ ಅತೀ ಹೆಚ್ಚು 18,241 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರವು ಆತ್ಮಹತ್ಯೆಗೆ ಒಳಗಾದ ರೈತರ ಸಂಬಂಧಿಕರು ಹಾಗೂ ಸ್ನೇಹಿತರ ಹೇಳಿಕೆಗಳನ್ನು ಆಧರಿಸಿ ಅತ್ಮಹತ್ಯೆ ಕಾರಣಗಳ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ. ಕೆಲವೊಂದು ರಾಜ್ಯಗಳಲ್ಲಿ ರೈತರ ಸಾವು ಅವರ ಮಕ್ಕಳ ಮನಸ್ಸಿನ ಮೇಲೆ ತೀವ್ರತರ ಬೀರಿದೆ.
ಮಹಾರಾಷ್ಟ್ರದ ಬಿಡ್
ಮಹಾರಾಷ್ಟ್ರದ ಬಿಡ್ ಎಂಬ ಒಂದೇ ಜಿಲ್ಲೆಯಲ್ಲಿ ಹಲವಾರು ರೈತರ ಮಕ್ಕಳು ತಂದೆ-ತಾಯಿ ಇಲ್ಲದೆ ಅನಾಥರಾಗಿದ್ದಾರೆ. ನೂರಾರು ಕನಸುಗಳೊಂದಿಗೆ ಬೆಳೆದು ಬದುಕನ್ನು ಸಂತೋಷದಿಂದ ಅನುಭವಿಸಬೇಕಾದ 5 ರಿಂದ 15 ವರ್ಷದ ಪುಟಾಣಿ ಮಕ್ಕಳು ತಮ್ಮ ಕಣ್ಣೆದುರಲ್ಲೇ ನೇಣಿನ ಕುಣಿಕೆಯಲ್ಲಿ ನೇತಾಡುವ ಅಪ್ಪ-ಅಮ್ಮನ ಶವವನ್ನು ಕಂಡು ಮಾನಸಿಕವಾಗಿ ಆಘಾತಗೊಂಡು ಬದುಕಿನ ಅರ್ಥವನ್ನೇ ಕಳೆದುಕೊಂಡಿದ್ದಾರೆ. ಇದೇ ಬಿಡ್ ಜಿಲ್ಲೆಯ ಶಾಂತಿವನ ಗ್ರಾಮದಲ್ಲಿ ಇಂತಹ 120 ಕ್ಕೂ ಹೆಚ್ಚು ಅನಾಥ ರೈತರ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರೆ ಅಲ್ಲಿನ ಆತ್ಮಹತ್ಯೆಯ ಭೀಕರ ಪರಿಣಾಮ ಊಹಿಸಲು ಅಸಾಧ್ಯ.
ಕೃಷಿಕರ ಆತ್ಮಹತ್ಯೆಯಲ್ಲಿ ಮಧ್ಯವರ್ತಿಗಳ ಪಾತ್ರವೂ ಇದೆ. 2011 ರಲ್ಲಿ ವಿಶ್ವಬ್ಯಾಂಕ್ ಭಾರತದ ಕೃಷಿ ಕ್ಷೇತ್ರ ಹಾಗೂ ಇಲ್ಲಿನ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಒಂದು ವರದಿ ನೀಡಿತು. ಅದರ ಪ್ರಕಾರ ಭಾರತದಲ್ಲಿ ಸರಿಯಾದ ದಾಸ್ತಾನು ವ್ಯವಸ್ಥೆ ಇಲ್ಲದೆಯೇ ಶೇ.30 ರಷ್ಟು ಬೆಳೆಗಳು ನಾಶ ಹೊಂದುತ್ತಿವೆ. ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸುವ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಬೆಳೆದ ರೈತನಿಗೆ ಕೇವಲ ಶೇ. 10 ರಿಂದ ಶೇ. 23ರ ವರೆಗೆ ಮಾತ್ರ. ಉಳಿದ ಹಣ ಸಂಪೂರ್ಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಅದೇ ಯುರೋಪ್ ಹಾಗೂ ಅಮೆರಿಕದ ರೈತರು ಶೇ. 64 ರಿಂದ ಶೇ. 81 ಹಣವನ್ನು ಪಡೆಯುತ್ತಾರೆ. ಈ ಕಾರಣದಿಂದಲೇ ಭಾರತೀಯ ರೈತರು ಇಂದಿಗೂ ಸಹ ನಷ್ಟದಲ್ಲೇ ಕೃಷಿಯನ್ನು ನಡೆಸುವ ಪರಿಸ್ಥಿತಿ ಇದೆ. ಶಿಕ್ಷಣ ಮತ್ತು ವ್ಯಾವಹಾರಿಕ ನೈಪುಣ್ಯ ಇರುವ ಗ್ರಾಮೀಣ ಯುವಕರು ಕೃಷಿ ಬಿಟ್ಟು ನಗರಕ್ಕೆ ಹೋಗಿ ಹೆಚ್ಚು ಲಾಭದ ತೊಡಗುತ್ತಿದ್ದಾರೆ.
ರೈತನಿಗೆ ಸಾಲ ಕೊಡುವ ಸಂಸ್ಥೆಗಳು ಸಾಲದ ಹಣವನ್ನು ರೈತನು ಬೆಳೆಗಳಿಗೆ ಯಾವ ರೀತಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಲಾಭ ಹೊಂದಬಹುದು ಎಂಬ ಸಲಹೆ ನೀಡಿದರೆ ಯಾವೊಬ್ಬ ರೈತನು ಕೂಡಾ ಸಾಲದ ಸುಳಿಯಲ್ಲಿ ಸಿಲುಕುವದಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಲಕ್ಷ ಲಕ್ಷ ರು. ಪರಿಹಾರ ಕೊಡುವ ಮೊದಲು ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡಿದ್ದರೆ ಪರಿಹಾರ ನೀಡುವ ಸಂದರ್ಭವೇ ಉಂಟಾಗುತ್ತಿರಲಿಲ್ಲ. ರಸಗೊಬ್ಬರಗಳಿಗೆ ಸಬ್ಸಿಡಿ ಕೊಡುವದಕ್ಕಿಂತ ಹೆಚ್ಚು ಆಧುನಿಕ ಉತ್ಕೃಷ್ಟ ದರ್ಜೆಯ ಬಿತ್ತನೆ ಬೀಜ, ಸಾವಯವ ಕೃಷಿಯನ್ನು ಪ್ರೊತ್ಸಾಹಿಸಿದರೆ ತಿನ್ನುವ ಅನ್ನ ವಿಷವಾಗುವದಿಲ್ಲ. ಭೂಮಿ ತಾಯಿಗೆ ವಿಷವುಣಿಸುವುದರಿಂದಲೂ ಹತ್ಯೆಗಳು ಸಂಭವಿಸುತ್ತವೆ. ಗೊಡ್ಡು ಆಶ್ವಾಸನೆಗಳು, ಸಾಲಮನ್ನಾದಂತಹ ಭರವಸೆಗಳು, ಉಚಿತ ಯೋಜನೆಗಳನ್ನು ಕೈಬಿಟ್ಟು ಮೊದಲು ಮೂಲ ಸೌಕರ್ಯ ಹಾಗೂ ಶಿಕ್ಷಣದ ಮೂಲಕ ರೈತನ ಮನೋಬಲವನ್ನು ಹೆಚ್ಚಿಸಿದರೆ ಎಂತಹ ಸಮಸ್ಯೆಯನ್ನಾದರೂ ಆತ ಸಮರ್ಥವಾಗಿ ಎದುರಿಸುತ್ತಾನೆ. ಎಲ್ಲರ ಗಮನ ಇಲ್ಲಿ ಕೇಂದ್ರೀಕೃತವಾಗಬೇಕು.
No comments:
Post a Comment