ನೋಯ್ಡಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ವಿದ್ಯಾರ್ಥಿನಿ ಇಷಾ ಬಾಹಲ್ ಅವರು ಇಂದು (ಅ.8) ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈಕಮಿಷನರ್ ಆಗಿ ಕಾರ್ಯಭಾರ ನಡೆಸಿದರು. ಹೈಕಮಿಷನರ್ ಕಚೇರಿಗೆ ಸಂಬಂಧಿಸಿದ ಹಲವು ವಿಭಾಗಗಳ ಮುಖ್ಯಸ್ಥರೊಂದಿಗೆ ಅವರು ದಿನವಿಡೀ ಸಭೆಗಳನ್ನು ನಡೆಸಿದರು.
ಅ.11ರ ವಿಶ್ವ ಹೆಣ್ಣುಮಗು ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಕಚೇರಿಯು ಈ ನಡೆ ಅನುಸರಿಸಿ ಪ್ರಶಂಸೆಗೆ ಪಾತ್ರವಾಗಿದೆ.
ಒಂದು ದಿನದ ಮಟ್ಟಿಗೆ ಈ ಹುದ್ದೆಯನ್ನು ಅಲಂಕರಿಸುವವರಿಗಾಗಿ ಬ್ರಿಟಿಷ್ ಹೈಕಮಿಷನ್ ಕಚೇರಿ 18 ರಿಂದ 23ರ ಒಳಗಿನ ವಿದ್ಯಾರ್ಥಿನಿಯರಿಗಾಗಿ ಸ್ಪರ್ಧೆಯನ್ನು ಆಯೋಜಿಸಿತ್ತು. “ನಿಮ್ಮ ಪ್ರಕಾರ ಲಿಂಗ ಸಮಾನತೆ ಎಂದರೆ ಏನು,? ಎಂಬ ವಿಷಯದ ಮೇಲೆ ತಮಗೆ ಅನಿಸಿದ್ದನ್ನು ಹೇಳಿ ವಿಡಿಯೋ ಮಾಡಿ ಕಳುಹಿಸಲು ಹೈಕಮಿಷನ್ ಕಚೇರಿ ತಿಳಿಸಿತ್ತು. ಅದರಂತೆ 58 ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯದ ವಿಡಿಯೋ ಮಾಡಿ ಕಳುಹಿಸಿದ್ದರು. ಅಂತಿಮವಾಗಿ ಇಷಾ ಬಾಹಲ್ ಅವರು ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದರು.
ತಮಗೆ ಸಿಕ್ಕಿ ಈ ಅವಕಾಶದ ಬಗ್ಗೆ ಮಾತನಾಡಿರುವ ಬಾಹಲ್, ” ಬ್ರಿಟಿಷ್ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದು ಅದ್ಭುತ ಮತ್ತು ವಿಶಿಷ್ಟ ಅನುಭವ ನೀಡಿತು. ಭಾರತ ಮತ್ತು ಬ್ರಿಟನ್ ನಡುವಿನ ರಾಜತಾಂತ್ರಿಕತೆಯ ಆಳ ಅಗಲ ತಿಳಿಯಲು ಇದರಿಂದ ಸಾಧ್ಯವಾಯಿತು. ಲಿಂಗ ಸಮಾನತೆ ಮತ್ತು ಐಕ್ಯತೆ ಕುರಿತು ತಿಳಿಸಲು ಇದು ವೇದಿಕೆಯಾಯಿತು,” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಭಾರತದ ವಿದ್ಯಾರ್ಥಿನಿಯೊಬ್ಬರನ್ನು ದಿನದ ಮಟ್ಟಿಗೆ ಹೈಕಮಿಷನರ್ ಆಗಿ ನೇಮಿಸುವ ಕುರಿತು ನಿರ್ಧಾರ ಕೈಗೊಂಡ ಭಾರತ ಹೈಕಮಿಷನರ್ ಡೋಮಿನಿಕ್ ಅಸ್ಕ್ವಿತ್ ಮಾತನಾಡಿ,” ಈ ಸ್ಪರ್ಧೆ ಆಯೋಜಿಸಿದ್ದು, ಭಾರತೀಯ ಯುವತಿಯೊಬ್ಬರಿಗೆ ಹೈ ಕಮಿಷನರ್ ಆಗುವ ಅವಕಾಶ ಕಲ್ಪಿಸಿಕೊಟ್ಟಿದ್ದು ಮತ್ತು ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದು ನನಗೆ ಸಂತೋಷ ಉಂಟುಮಾಡಿದೆ,” ಎಂದು ಹೇಳಿದ್ದಾರೆ.
No comments:
Post a Comment