ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳದಿದ್ದರೆ ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 30 ವರ್ಷಗಳಲ್ಲಿ (2030 ರಿಂದ 2052ರವರೆಗೆ) ಭೂಮಿಯ ತಾಪಮಾನ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಕಳೆದ ವಾರ ದಕ್ಷಿಣ ಕೊರಿಯಾದ ಇಂಚಿಯೋನ್ನಲ್ಲಿ ನಡೆದ ಹವಾಮಾನ ವೈಪರೀತ್ಯದ ಕುರಿತ ಅಂತರ ಸರ್ಕಾರಿ ಸಮಿತಿಯ (IPCC) ಸಭೆಯಲ್ಲಿ ವರದಿಯನ್ನು ಅಂತಿಮಗೊಳಿಸಲಾಗಿದೆ. 2015ರಲ್ಲಿ ಜಾಗತಿಕ ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ತಾಪಮಾನ ಹೆಚ್ಚಳದ ಕುರಿತು ವರದಿ ನೀಡುವಂತೆ ಮನವಿ ಮಾಡಿದ್ದವು. ಅದರಂತೆ ಐಪಿಸಿಸಿ ಸಮಿತಿಯು ತಾಪಮಾನ ಏರಿಕೆ ಕುರಿತು ತನ್ನ ವರದಿಯನ್ನು ವಿಶ್ವಸಂಸ್ಥೆಗೆ ನೀಡಿದೆ.
1800ರ ಮಧ್ಯಭಾಗದಿಂದ ಕಾರ್ಖಾನೆಗಳು ಮತ್ತು ವಾಹನಗಳಿಂದ ಹೊರಹೊಮ್ಮಿದ ಕಾರ್ಬನ್ ಡೈಆಕ್ಸೈಡ್ನಿಂದಾಗಿ ಭೂಮಿಯ ಮೇಲೆ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಪ್ರಸ್ತುತ ತಾಪಮಾನ ಹೆಚ್ಚುತ್ತಿರುವ ಪ್ರಮಾಣವನ್ನು ಗಮನಿಸಿದರೆ, 2030 ರಿಂದ 2052ರ ಒಳಗೆ ತಾಪಮಾನ 1.5 ಡಿಗ್ರಿ ಸೆಲ್ಸಿಯನ್ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
********************************
ಜಾಗತಿಕ ತಾಪಮಾನದಲ್ಲಿನ ವೈಪರೀತ್ಯವು ಭಾರತದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರ ಲಿದ್ದು, ಬಡತನ ಮತ್ತು ಅಸಮಾನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ದಕ್ಷಿಣ ಏಷ್ಯಾ ಹಾಟ್ಸ್ಪಾಟ್ಸ್: ಹವಾಮಾನದ ಮೇಲೆ ಪರಿಣಾಮ ಮತ್ತು ಬದುಕಿನ ಗುಣಮಟ್ಟದಲ್ಲಾಗುವ ಬದಲಾವಣೆ’ ಶೀರ್ಷಿಕೆಯಲ್ಲಿ ಈ ವರದಿ ಪ್ರಕಟವಾಗಿದೆ. ತಾಪಮಾನದಲ್ಲಿ ಆಗುತ್ತಿರುವ ಏರಿಕೆ ಮತ್ತು ಮುಂಗಾರು ಮಾರುತದಲ್ಲಿನ ಬದಲಾವಣೆಯಿಂದಾಗಿ ಮಧ್ಯ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ 2050ರ ವೇಳೆಗೆ ಭಾರತದ ಜಿಡಿಪಿಯಲ್ಲಿ (ಒಟ್ಟು ದೇಶೀಯ ಉತ್ಪನ್ನ) ಶೇ. 2.8 ಕುಸಿತವಾಗುವ ಸಾಧ್ಯತೆ ಇದೆ. ದೇಶದ ಅರ್ಧದಷ್ಟು ಜನರ ಬದುಕಿನ ಗುಣ ಮಟ್ಟದಲ್ಲಿ ಇಳಿಮುಖ ಕಾಣಲಿದೆ ಎಂದು ವರದಿ ತಿಳಿಸಿದೆ.
ಕೃಷಿ ಉತ್ಪಾದನೆ ಕುಂಠಿತ ಮತ್ತು ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಜಾಗತಿಕ ತಾಪಮಾನ ಏರಿಕೆ ತಡೆಗೆ ಪ್ಯಾರಿಸ್ ಒಪ್ಪಂದದಲ್ಲಿ ಉಲ್ಲೇಖಿತವಾಗಿರುವ ಕ್ರಮಗಳನ್ನು ಭಾರತ ಅನುಸರಿಸಿದರೂ, 2050 ಹೊತ್ತಿಗೆ ಸರಾಸರಿ ತಾಪಮಾನದಲ್ಲಿ 1ರಿಂದ 2 ಡಿಗ್ರಿ ಸೆಲ್ಶಿಯಸ್ ಏರಿಕೆ ಆಗುತ್ತದೆ ಎಂದು ವರದಿ ಹೇಳಿದೆ.
ಮಧ್ಯ ಭಾರತದಲ್ಲಿ ತೀವ್ರತೆ ಹೆಚ್ಚು
ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮಧ್ಯ ಭಾರತದಲ್ಲಿ ಹೆಚ್ಚು ತೀವ್ರವಾಗಲಿದೆ. ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಜನರ ಜೀವನ ಗುಣಮಟ್ಟ ಶೇ. 9 ಕುಸಿಯಲಿದೆ. ಮಧ್ಯ ಭಾರತದ ವ್ಯಾಪ್ತಿಗೆ ಬರುವ ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲೂ ಇದರ ಪರಿಣಾಮ ಕಾಣಿಸಲಿದೆ. ಅಂದಾಜು 60 ಕೋಟಿ ಜನರ ಬದುಕು ಇದರಿಂದ ಪ್ರಭಾವಿತವಾಗಲಿದೆ ಎಂದು ವರದಿ ಹೇಳಿದೆ.
No comments:
Post a Comment