ಇ.ಎಸ್. ಸುಧೀಂದ್ರ ಪ್ರಸಾದ್
ಧಾರವಾಡ: ಸಾಮೆ ಅಕ್ಕಿ ಹಾಕಿ ಸಿದ್ಧಪಡಿಸಿರುವ ಅಧಿಕ ಸಸಾರಜನಕ ಹಾಗೂ ಶಕ್ತಿವರ್ಧಕ ಸಿರಿಧಾನ್ಯದ ಪುಡಿಯನ್ನು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡಲು ತಾಂತ್ರಿಕ ಅಧ್ಯಯನ ಆರಂಭವಾಗಿದೆ.
ಕ್ರೀಡಾಪಟುಗಳಿಗಾಗಿ ಸಿರಿಧಾನ್ಯ ಬಳಸಿ ಅಗ್ಗದ ಬೆಲೆಯಲ್ಲಿ ಶಕ್ತಿವರ್ಧಕವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿಪಡಿಸಿದ್ದರು. ಅಧ್ಯಯನದಲ್ಲಿ ಫಲಿತಾಂಶ ಉತ್ತಮವಾಗಿದ್ದ ಕಾರಣ ಇದನ್ನೇ ಮಾತೃಪೂರ್ಣ ಯೋಜನೆ ಮೂಲಕ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೂ ನೀಡಬಹುದು ಎಂದು ಸಂಶೋಧಕರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅದರಂತೆ, ಮಾತೃಪೂರ್ಣ ಯೋಜನೆಯ ತಜ್ಞರು ಇದರ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಶಕ್ತಿವರ್ಧಕ ಪೇಯ ಕುರಿತು ಮಾಹಿತಿ ಹಂಚಿಕೊಂಡ ವಿಭಾಗದ ಪ್ರಾಧ್ಯಾಪಕಿ ಡಾ. ಬಿ.ಕಸ್ತೂರಬಾ, ‘ಸಂಶೋಧನಾ ವಿದ್ಯಾರ್ಥಿನಿ ಯು.ರೂಪಾ ಅವರು ಕ್ರೀಡಾಪಟುಗಳಿಗಾಗಿ ಸಿರಿಧಾನ್ಯ ಬಳಸಿ ಶಕ್ತಿವರ್ಧಕ ಪುಡಿಯನ್ನು ಸಿದ್ಧಪಡಿಸಿದ್ದರು. ಸಾಮೆ ಅಕ್ಕಿ ಜತೆಗೆ ಸೋಯಾಬೀನ್, ಹಾಲಿನ ಪುಡಿ ಮತ್ತು ಸಕ್ಕರೆ ಬಳಸಿ ಪುಡಿ ಸಿದ್ಧಪಡಿಸಿದ್ದಾರೆ’ ಎಂದು ವಿವರಿಸಿದರು.
‘ಈ ಪೇಯಕ್ಕಾಗಿ ಒಬ್ಬರಿಗೆ ತಿಂಗಳಿಗೆ ಕೇವಲ ₹ 100 ವೆಚ್ಚ ಮಾಡಿದರೆ ಸಾಕು. ಆದರೆ ಮಾರುಕಟ್ಟೆಯಲ್ಲಿ ಶಕ್ತಿ ಪೇಯಗಳಿಗಾಗಿ ₹ 1 ಸಾವಿರದವರೆಗೂ ಖರ್ಚು ಮಾಡಬೇಕಾಗುತ್ತದೆ. ಈ ಪುಡಿ ಅವುಗಳಿಗಿಂತಲೂ ಹೆಚ್ಚು ಪರಿಣಾಮಕಾರಿ ಮತ್ತು ಆರೋಗ್ಯಕರ. ಕೃಷಿ ವಿ.ವಿಯ ಹೊಲಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೂ ಕೊಟ್ಟು ಪರೀಕ್ಷಿಸಲಾಯಿತು. ಮೂರು ತಿಂಗಳ ಪರೀಕ್ಷೆಯಲ್ಲಿ ಅವರಲ್ಲಿ ರಕ್ತಹೀನತೆ ಪ್ರಮಾಣ ತಗ್ಗಿತು. ಅವರಲ್ಲಿ ಉತ್ಸಾಹ ಇಮ್ಮಡಿಯಾಗಿತ್ತು. ಸುಸ್ತು ಪ್ರಮಾಣ ಕಡಿಮೆಯಾಗಿದ್ದನ್ನು ದಾಖಲಿಸಲಾಗಿದೆ’ ಎಂದರು.
‘ದಿನ ಒಂದಕ್ಕೆ 150 ಗ್ರಾಂನಷ್ಟು ಎರಡು ಬಾರಿ ಸೇವಿಸಿದಲ್ಲಿ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಗತ್ಯವಿರುವ ಪೌಷ್ಟಿಕಾಂಶದ ಮೂರನೇ ಒಂದು ಭಾಗವನ್ನು ಇದು ಪೂರೈಸಲಿದೆ’ ಎಂದು ವಿವರಿಸಿದರು.
Friends, If you like this post,kindly comment below the post and do share your Response, (Thanks for Reading....)
No comments:
Post a Comment