ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಪ್ರಕೃತಿಯ ಮಡಿಲನ್ನು ಭೇದಿಸುತ್ತಿರುವ ಮಾನವ ಚಟುವಟಿಕೆಗಳ ದುಷ್ಪರಿಣಾಮವೇ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪಕ್ಕೆ ಕಾರಣ’ ಎಂದು ಅಧ್ಯಯನ ವರದಿಗಳು ತಿಳಿಸಿವೆ.
‘ಕಳೆದ ಆಗಸ್ಟ್‌ನಲ್ಲಿ ಉಂಟಾದ ಭಾರಿ ಮಳೆಯಿಂದ ಕೊಡಗಿನ ವಿವಿಧೆಡೆ 105 ಭೂಕುಸಿತಗಳು ಸಂಭವಿಸಿವೆ’ ಎಂದು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಜಿಎಸ್‌ಐ) ಲೆಕ್ಕ ಹಾಕಿದ್ದರೆ, ‘ಜಿಲ್ಲೆಯ 1,060 ಹೆಕ್ಟೇರ್ ಜಮೀನಿನಲ್ಲಿ (10.6 ಚದರ ಕಿ.ಮೀ ವ್ಯಾಪ್ತಿ) ಕನಿಷ್ಠ 254 ಭೂಕುಸಿತ ಸಂಭವಿಸಿವೆ‘ ಎಂಬುದು ‘ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಇಂಡಿಯಾ’ದ ಅಂದಾಜು. ಉಪಗ್ರಹದ ನೆರವಿನಿಂದ ಈ ಅಂಶಗಳನ್ನು ಕಲೆ ಹಾಕಲಾಗಿದೆ.
‘ಜನವಸತಿ ಮಾತ್ರವಲ್ಲದೇ ಅರಣ್ಯ ಪ್ರದೇಶಗಳಲ್ಲೂ ಭೂಕುಸಿತ ಸಂಭವಿಸಿವೆ. ಆದರೆ, ಇವು ಜನವಸತಿ ಪ್ರದೇಶಗಳ ಕುಸಿತಕ್ಕಿಂತ ಕಡಿಮೆ ಪ್ರಮಾಣದಲ್ಲಿವೆ’ ಎಂಬುದು ವರದಿಯ ಪ್ರಮುಖ ಅಂಶ. ಹಾರಂಗಿ ಜಲಾಶಯದ ಹಿನ್ನೀರಿನ ಗುಡ್ಡ ಪ್ರದೇಶಗಳೇ ಹೆಚ್ಚು ಈ ವಿಕೋಪಕ್ಕೆ ತುತ್ತಾಗಿರುವ ಜಾಗಗಳು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಪ್ರಕೃತಿಯ ಒಡಲನ್ನು ಭೇದಿಸಿ ಮನುಷ್ಯರ ಚಟುವಟಿಕೆ ಅತಿಯಾಗುತ್ತಿರುವ ಕಾರಣಗಳಿಂದಲೇ ಇಂತಹ ಅವಘಡ ಉಂಟಾಗಿದೆ’ ಎನ್ನುತ್ತಾರೆ ಡಬ್ಲ್ಯುಆರ್‌ಐ ಇಂಡಿಯಾದ ಹಿರಿಯ ಯೋಜನಾ ನಿರ್ದೇಶಕ ರಾಜಭಗತ್ ಪಳನಿಸ್ವಾಮಿ.
ಸರ್ಕಾರದ ಅಧಿಕಾರಿಗಳ ಪ್ರಾಥಮಿಕ ಅಂದಾಜಿನ ಅನುಸಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ನಾಲ್ಕು ಸಾವಿರ ಎಕರೆ ಕಾಫಿ ತೋಟ ಕೊಚ್ಚಿಹೋಗಿದೆ. ಈ ದಿಸೆಯಲ್ಲಿನ ತೋಟಗಾರಿಕೆ, ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿಯ ಜಂಟಿ ಸರ್ವೇ ಕಾರ್ಯ ಇನ್ನೂ ನಡೆಯುತ್ತಿದೆ.
ಹಾರಂಗಿ ಹಿನ್ನೀರಿನ ಒತ್ತಡ: ಪಿಐಎಲ್‌ನಲ್ಲೂ ಕಾಣಿಸಿದ್ದ ಅಂಶ
‘ಕೊಡಗು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
‘ಮಳೆಯಿಂದಾದ ಹಾನಿಯಲ್ಲಿ 32 ಗ್ರಾಮಗಳು ನಾಶವಾಗಿವೆ. ಇದಕ್ಕೆ ಮುಖ್ಯ ಕಾರಣ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸುದೀರ್ಘ ಅವಧಿಯವರೆಗೆ ಸಂಗ್ರಹಿಸಲಾಗಿತ್ತು. ಇದರ ಒತ್ತಡದಿಂದಾಗಿ ಗುಡ್ಡ ಕುಸಿತಗಳು ಸಂಭವಿಸಿವೆ’ ಎಂದು ಅರ್ಜಿದಾರರು ಆರೋಪಿಸಿದ್ದರು.
’1,618 ಆಸ್ತಿಗೆ ನಷ್ಟ ಉಂಟಾಗಿದೆ. 123 ಕಿ.ಮೀ.ನಷ್ಟು ರಸ್ತೆ ಹಾಳಾಗಿದೆ. 58 ಸೇತುವೆಗಳು ಕುಸಿದಿವೆ ಮತ್ತು 258 ಸರ್ಕಾರಿ ಕಚೇರಿಗಳಿಗೆ ಹಾನಿ ಉಂಟಾಗಿದೆ’ ಎಂದು ವಿವರಿಸಲಾಗಿತ್ತು.
ಆದಾಗ್ಯೂ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಅರ್ಜಿ ವಜಾ ಮಾಡಲಾಗಿತ್ತು.
Friends, If you like this post,kindly comment below the post and do share your Response, (Thanks for Reading....)
No comments:
Post a Comment