ರೈತರು ತಾವು ಬೆಳೆದ ಶೇಕಡ 70ರಷ್ಟು ಧಾನ್ಯಗಳನ್ನು ಕುಟುಂಬದ ಆಧಾರಕ್ಕಾಗಿ ಮಾರಾಟ ಹಾಗೂ ಮುಂದಿನ ದಿನಗಳ ಬಿತ್ತನೆಗಾಗಿ ಸಂಗ್ರಹಿಸಿಡುತ್ತಾರೆ. ಆದರೆ, ಸಂಗ್ರಹ ಸುಲಭವಲ್ಲ, ಇದು ಕಷ್ಟದ ಕೆಲಸವೇ ಸರಿ. ಹೀಗಾಗಿಯೇ ಬೀಜಸಂಗ್ರಹ ಮಾಡುವ ಅಭ್ಯಾಸದಿಂದ ಎಷ್ಟೋ ರೈತರು ವಿಮುಖರಾಗಿದ್ದಾರೆ. ಸರಳ ಪದ್ಧತಿ ಹಾಗೂ ಸಾಧನಗಳ ಸಹಾಯದಿಂದ ರೈತರು ಕೆಲವೆಡೆ ಈ ಕಾಯಕ ಮುಂದುವರಿಸಿರುವುದು ಕಂಡುಬರುತ್ತದೆ.
ಹೇಗೆ ಸಂಗ್ರಹ?
ಧಾನ್ಯಗಳ ಸಂಗ್ರಹದ ಮೊದಲು ಧಾನ್ಯಗಳನ್ನು ಸ್ವಚ್ಛಗೊಳಿಸಿ, ಒಣಗಿಸುವುದು ಮುಖ್ಯ. ಧಾನ್ಯಗಳ ಒಣಗಿಸುವಿಕೆ ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳನ್ನು ಒಣಗಿಸುವ ನೆಲವನ್ನು ಶುಚಿಗೊಳಿಸಬೇಕು, ಪದೇ ಪದೆ ತಿರುವಿ ಹಾಕುತ್ತಿರಬೇಕು, ಧೂಳಿನ ಕಣಗಳಿಂದ ರಕ್ಷಿಸಲು ತೆಳುವಾದ ಬಟ್ಟೆಯಿಂದ ಮುಚ್ಚಬೇಕು.
ಸ್ವಚ್ಛಗೊಳಿಸಿದ ಇಡಿಯಾದ ಧಾನ್ಯಗಳನ್ನು ಮಾತ್ರ ಸಂಗ್ರಹ ಮಾಡಬೇಕು. ಧಾನ್ಯಗಳನ್ನು ಇರಿಸಿದ ಕೋಣೆಯಲ್ಲಿ ಸರಿಯಾಗಿ ಗಾಳಿಯಾಡುವಂತೆ ಕಿಟಕಿ ಬಾಗಿಲು ತೆರೆದು ಇಡಬೇಕು. ಗಟ್ಟಿಯಾದ ಚೀಲಗಳಲ್ಲಿ ಅಥವಾ ತೆಳುವಾದ ಬಟ್ಟೆಗಳಲ್ಲಿ ಮಾತ್ರ ಸಂಗ್ರಹಿಸಿಡಬೇಕು. ಅಲ್ಲದೆ, ತೇವಾಂಶದಿಂದ ಕೂಡಿದ ಜಾಗಗಳಲ್ಲಿ ಸಂಗ್ರಹಿಸಬಾರದು. ಸಂಗ್ರಹಿಸಿದ ಚೀಲಗಳನ್ನು ನೆಲಕ್ಕಿಂತ ಸ್ವಲ್ಪ ಮೇಲೆ ಅಂತರದಲ್ಲಿ ಇರಿಸಬೇಕು. ಭೂಮಿಯ ಮತ್ತು ಗೋಡೆಗಳ ತಂಪು ಸಂಗ್ರಹಿಸಿದ ಚೀಲಗಳಿಗೆ ಸೋಕದ ಹಾಗೆ ಇಡಬೇಕು. ಹಳೆಯ ಮತ್ತು ಹೊಸ ಧಾನ್ಯಗಳನ್ನು ಜತೆಗೆ ಸಂಗ್ರಹಿಸಬಾರದು. ಬೇವಿನ ಎಲೆಗಳ ಜತೆಗೂ ಸಂಗ್ರಹಿಸಬಹುದು.
ಜೋಪಾನ ಅಗತ್ಯ: ಸಂಗ್ರಹಿಸಿದ ಧಾನ್ಯಗಳನ್ನು ಮೇಲಿಂದ ಮೇಲೆ ಪರೀಕ್ಷಿಸುತ್ತಿರಬೇಕು. ಆರೋಗ್ಯಕ್ಕೆ ಹಾನಿಕರವಲ್ಲದ ರಾಸಾಯನಿಕ ಉಪಯೋಗಿಸಬಹುದು. ಉದಾಹರಣೆಗೆ ಬೋರಿಕ್ ಪೌಡರ್. ಸರಿಯಾದ ಗಾಳಿ ಬೆಳಕು ಇರುವ ಜಾಗಗಳಲ್ಲಿ ಸಂಗ್ರಹಿಸಬೇಕು.
ಬಿತ್ತನೆಗೆ ಬೀಜಗಳು: ಆಹಾರಧಾನ್ಯಗಳ ಜತೆಗೆ ಮುಂದಿನ ಬಿತ್ತನೆಗಾಗಿ ಬೀಜಗಳ ಸಂಗ್ರಹಣೆ ಕೂಡ ಅತ್ಯವಶ್ಯಕವಾಗಿರುತ್ತದೆ. ಧಾನ್ಯಗಳಿಂದ ಒಕ್ಕಿದ ನಂತರ ಅವುಗಳನ್ನು ಬೀಜಗಳನ್ನಾಗಿ ಬಿತ್ತಲು 7ರಿಂದ 10 ತಿಂಗಳ ಅಂತರವಿರಬೇಕು. ಈ 7ರಿಂದ 10 ತಿಂಗಳವರೆಗೆ ಧಾನ್ಯಗಳನ್ನು ಸರಿಯಾಗಿ ಹಾನಿಯಾಗದಂತೆ ಸಂಗ್ರಹಿಸಿಡಬೇಕು. ಉತ್ತಮ ಬೀಜಗಳೆಂದರೆ, ಒಳ್ಳೆಯ ಮೊಳಕೆ ಒಡೆಯಬೇಕು, ಶುಚಿಯಾಗಿರಬೇಕು, ಆರೋಗ್ಯವಾಗಿರಬೇಕು. ಬೀಜಗಳು ಉಳಿದ ಧಾನ್ಯಗಳಿಂದ ಹೆಚ್ಚು ಸ್ವಚ್ಛವಾಗಿರಬೇಕು ಮತ್ತು ಒಣಗಿರಬೇಕು. ಸಂಗ್ರಹ ಮಾಡುವ ಮೊದಲು ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಉಪಯೋಗಿಸಬಹುದು, ಇದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ಬೀಜಗಳನ್ನು ಸಂಗ್ರಹಿಸಿದ ಚೀಲಗಳಲ್ಲಿ ಗಾಳಿಯಾಡದಂತೆ ಇರಬೇಕು.
ಸಾಂಪ್ರದಾಯಿಕ ಸಾಧನಗಳು: ಧಾನ್ಯಗಳನ್ನು ಸಂಗ್ರಹಿಸಿಡಲು ಪಾರಂಪರಿಕವಾಗಿ ಅನೇಕ ಸಾಧನಗಳನ್ನು ಉಪಯೋಗಿಸಲಾಗುತ್ತದೆ. ಕಣಜ, ಹಗೆ ಹಾಗೂ ಕಬ್ಬಿಣದ ದೊಡ್ಡ ಡಬ್ಬಿಗಳು ಇತ್ಯಾದಿ. ಕಣಜಗಳನ್ನು ಬಿದಿರು ಉಪಯೋಗಿಸಿ ತಯಾರಿಸುತ್ತಾರೆ. ಸಂಜಕ ತಯಾರಿಸಲು ಸಾಮಾನ್ಯವಾಗಿ ಕಟ್ಟಿಗೆ ಹಾಗೂ ಕೆಲವು ಬಾರಿ ಕಬ್ಬಿಣವನ್ನು ಬಳಸುತ್ತಾರೆ. ಹಗೆ ಎಂದರೆ ಭೂಮಿಯಲ್ಲಿ ಆಳವಾದ ತೆಗ್ಗನ್ನು ತೆಗೆದು ಅಲ್ಲಿ ಸಂಗ್ರಹಿಸುವುದು.
ಸುಧಾರಿತ ಸಾಧನಗಳು: ದಿನಕಳೆದಂತೆ ಧಾನ್ಯ ಹಾಗೂ ಬೀಜಗಳನ್ನು ಸಂಗ್ರಹಿಸಲು ಕೃಷಿ ಮಹಿಳೆಯರು ಹಳೆಯ ಪದ್ಧತಿಗಳ ಜತೆ ಕೆಲವು ಸುಧಾರಿತ ಕ್ರಮಗಳನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ. ಬೀಜಗಳ ಬಿತ್ತನೆಗಾಗಿ ಉಪಯೋಗಿಸುವ ಕಾಳುಗಳನ್ನು ಇತ್ತೀಚಿನ ದಿನಗಳಲ್ಲಿ ಗೋಣಿಚೀಲದಲ್ಲಿ ತುಂಬಿಸಿ ಉಗ್ರಾಣ ಮತ್ತು ಕೋಲ್ಡ್ ಸ್ಟೋರೇಜ್ಗಳಲ್ಲಿ ಸಂಗ್ರಹಿಸಿಡುತ್ತಾರೆ. ಇವುಗಳಲ್ಲಿ ಕಾಳುಗಳು ಹಾಳಾಗದಂತೆ ತಾಪಮಾನವನ್ನು ನಿಯಂತ್ರಿಸಲಾಗುತ್ತದೆ.
ಆಧುನಿಕ ಡಬ್ಬಗಳು
ಹೊಸ ಡಬ್ಬಿ : ಇದನ್ನು ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದೆ. ಇದನ್ನು ಇಟ್ಟಿಗೆ ಅಥವಾ ಕಲ್ಲುಗಳಿಂದ ಆಯತಾಕಾರದಲ್ಲಿ ನಿರ್ವಿುಸುತ್ತಾರೆ. ಇದರಲ್ಲಿ 1-3 ಟನ್ಗಳಷ್ಟು ಸಂಗ್ರಹಿಸಬಹುದು.
ರ್ಬೂನೂ: ಇದನ್ನು ಗೋಪುರಾಕಾರದಲ್ಲಿ ಕಲ್ಲುಗಳಿಂದ ನಿರ್ವಿುಸುತ್ತಾರೆ.
ಸಿಮೆಂಟ್ ಡಬ್ಬಿ : ಇವುಗಳನ್ನು ಬಹಳಷ್ಟು ದಿನಗಳವರೆಗೆ ಧಾನ್ಯ ಸಂಗ್ರಹಿಸಲು ಉಪಯೋಗಿಸಬಹುದು. ಒಟ್ಟಾರೆ, ಧಾನ್ಯ ಮತ್ತು ಬೀಜಗಳನ್ನು ಸಂಗ್ರಹಿಸುವಲ್ಲಿ ರೈತರು ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ಹೀಗೆ ಸಂಗ್ರಹಿಸಿ ಇಡುವುದರಿಂದ ಅವುಗಳನ್ನು ಬೇಕಾದ ಸಮಯದಲ್ಲಿ ಕುಟುಂಬದ ನಿರ್ವಹಣೆಗೂ ಉಪಯೋಗಿಸಬಹುದಾಗಿದೆ. ಹಲವು ಸಮಯದಲ್ಲಿ ಈ ಸಂಗ್ರಹವೇ ರೈತನಿಗೆ ಆರ್ಥಿಕ ಸದೃಢತೆ ನೀಡುತ್ತದೆ. ಧಾನ್ಯಗಳನ್ನೇ ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಬಿತ್ತನೆಗೆ ಬೀಜಗಳನ್ನಾಗಿಯೂ ಉಪಯೋಗಿಸಬಹುದು. ಇದರಿಂದ ರೈತರು ಬೀಜಗಳನ್ನು ಕೊಂಡುಕೊಳ್ಳುವ ಅವಶ್ಯಕತೆ ಉಂಟಾಗದೆ ಖರ್ಚನ್ನು ನಿಯಂತ್ರಿಸಬಹುದು.
ಬೀಜರಕ್ಷಣೆಯಲ್ಲಿ ಮಹಿಳೆಯರು
ಕೃಷಿಯಲ್ಲಿ ಗ್ರಾಮೀಣ ಮಹಿಳೆಯ ಕೊಡುಗೆ ಅತ್ಯಮೂಲ್ಯ. ಮನೆಗೆಲಸ, ಮಕ್ಕಳು-ಹಿರಿಯರ ಆರೈಕೆಯ ಜತೆಗೆ ಕೃಷಿಕನ ಕೆಲಸಕ್ಕೆ ಮನೆಯೊಡತಿಯೂ ಬೆಂಬಲವಾಗಿ ನಿಲ್ಲುತ್ತಾಳೆ. ಅಷ್ಟೇ ಅಲ್ಲ, ಅನೇಕ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತಾಳೆ. ಬೀಜಗಳ ಸಂರಕ್ಷಣೆಯಲ್ಲಿಯೂ ಮಹಿಳೆಯ ಪಾತ್ರವೇ ದೊಡ್ಡದು. ನಮ್ಮಲ್ಲಿ ಇಂದಿಗೂ ಶೇ.45ರಷ್ಟು ಮಹಿಳೆಯರು ಯಾವುದೇ ಸಂಬಳ ಪಡೆಯದೆ ಬೇಸಾಯದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದಾರೆ. ಈ ದುಡಿಮೆಯ ಫಲವಾಗಿ ಸಿಗುವ ಲಾಭಾಂಶದ ಎಲ್ಲ ಭಾಗವನ್ನು ಕುಟುಂಬದ ನಿರ್ವಹಣೆಗಾಗಿ ಉಪಯೋಗಿಸುತ್ತಾಳೆ. ಕೃಷಿಯಲ್ಲಿ ಪುರುಷರು ಮಾಡುವ ಚಟುವಟಿಕೆಗಳಲ್ಲಿ ಹಲವಾರು ಸುಧಾರಿತ ಸಾಧನಗಳು ಪ್ರಚಲಿತದಲ್ಲಿವೆ. ಮಹಿಳೆಯರು ಮಾತ್ರ ಇದುವರೆಗೂ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಹಲವಾರು ಹಳೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುವುದು ಕಂಡುಬರುತ್ತದೆ. ಇದಕ್ಕೊಂದು ಪುಟ್ಟ ಉದಾಹರಣೆ ಎಂದರೆ, ಕಾಳುಗಳಲ್ಲಿ ಬೇವಿನ ಎಲೆಗಳನ್ನು ಸೇರಿಸಿ ಸಂಗ್ರಹಿಸುವುದು. ಉತ್ತರ ಕರ್ನಾಟಕ ಭಾಗದಲ್ಲಿ ಎಷ್ಟೋ ಮಹಿಳೆಯರು ಧಾನ್ಯಗಳನ್ನು ಸಂಗ್ರಹಿಸಿಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment