ಹೆಸರುಕಾಳು ಖರೀದಿಗೆ 128 ಕೇಂದ್ರ

ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿಸಲು 128 ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ’ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹ 6,975 ಬೆಂಬಲ ಬೆಲೆ ನಿಗದಿ ಮಾಡಿದ್ದು, ಮಂಗಳವಾರದಿಂದ ಖರೀದಿ ನಡೆಯಲಿದೆ’ ಎಂದರು.
‘ಇದೇ 15ರವರೆಗೆ ನೋಂದಣಿ ಮುಂದುವರಿಯಲಿದೆ. ಈಗಾಗಲೇ 24 ಸಾವಿರ ರೈತರು ನೋಂದಣಿ ಮಾಡಿದ್ದಾರೆ. ಪ್ರತಿ ರೈತರಿಂದ 10 ಕ್ವಿಂಟಲ್ ಖರೀದಿ ನಿಗದಿಪಡಿಸಲಾಗಿದ್ದು, ಮೊದಲ ಹಂತದಲ್ಲಿ 23,250 ಟನ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಖರೀದಿ ಪ್ರಮಾಣ ಹೆಚ್ಚಿಸಲು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಹೆಚ್ಚುವರಿ 25 ಸಾವಿರ ಟನ್ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ವಿವರಿಸಿದರು.
‘ಪ್ರಸಕ್ತ ಸಾಲಿನಲ್ಲಿ ಗದಗ, ಬೀದರ್, ಧಾರವಾಡ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ 3.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. 1.24 ಲಕ್ಷ ಟನ್ ಇಳುವರಿ ನಿರೀಕ್ಷೆ ಇದೆ.
‘ಸೋಯಾ ಮತ್ತು ಉದ್ದು ಖರೀದಿಗೂ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
‘2016–17ರಲ್ಲಿ ₹ 8.18 ಕೋಟಿ ಮೌಲ್ಯದ ಮೌಲ್ಯದ ತೊಗರಿ ಮಾರಾಟವಾಗದೇ ಉಳಿದಿದೆ. ಸುಮಾರು 1,621 ಟನ್ ದಾಸ್ತಾನಿದೆ. ಈ ರೀತಿ ಉಳಿಯಲು ಕಾರಣವೇನೆಂದು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.
Friends, If you like this post,kindly comment below the post and do share your Response, (Thanks for Reading....)
No comments:
Post a Comment