ನಟಸಾರ್ವಭೌಮ ಡಾ.ರಾಜ್ಕುಮಾರ್ ಅಪಹರಣ ಪ್ರಕರಣದ ಎಲ್ಲ 9 ಆರೋಪಿಗಳನ್ನು ದೋಷಮುಕ್ತರನ್ನಾಗಿಸಿ ತಮಿಳು ನಾಡು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ತಮಿಳುನಾಡು ಸಿಐಡಿ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅಪಹರಣವಾದ 18 ವರ್ಷಗಳ ಬಳಿಕ ಆರೋಪಿಗಳನ್ನು ದೋಷಮುಕ್ತರೆಂದು ಘೋಷಿಸಲಾಗಿದೆ. ತನಿಖಾ ವೇಗ ಹಾಗೂ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶ ಕೆ.ಮಣಿ, ಸಾಕ್ಷ್ಯಗಳಿಲ್ಲದೆ ಆರೋಪಿಗಳ ವಿರುದ್ಧ ಹೇಗೆ ಕ್ರಮ ಕೈಗೊಳ್ಳುವುದು ಎಂದು ಪ್ರಶ್ನಿಸಿದ್ದಾರೆ.
ರಾಜ್ಕುಮಾರ್ ಅಪಹರಣವಾಗಿ ಬರೋಬ್ಬರಿ 11 ವರ್ಷಗಳ ಬಳಿಕ ದೋಷಾ ರೋಪ ಪಟ್ಟಿಯನ್ನು ತಮಿಳುನಾಡು ಸಿಐಡಿ ಸಲ್ಲಿಸಿತ್ತು. ಸುಮಾರು 8 ವರ್ಷಗಳ ವಿಚಾರಣೆ ತರುವಾಯ ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಈ ಆದೇಶ ನೀಡಿದೆ.
ಆದೇಶಕ್ಕೇನು ಕಾರಣ?: ಅಪಹರಣ ಕ್ಕೊಳಗಾದ ರಾಜ್ಕುಮಾರ್ ಅಥವಾ ಇತರ ಸದಸ್ಯರು ಪೊಲೀಸರಿಗೆ ದೂರು ನೀಡಿಲ್ಲ. ರಾಜ್ಕುಮಾರ್ ಅಥವಾ ಪಾರ್ವತಮ್ಮ ಹೇಳಿಕೆ ಪಡೆಯಲಾಗಿಲ್ಲ. ಆರೋಪಿಗಳ ಮನೆಯಲ್ಲೂ ಶೋಧ ನಡೆಸಲಾಗಿಲ್ಲ ಎಂಬ ಪ್ರಮುಖ ಅಂಶಗಳ ಆಧಾರದ ಮೇಲೆ ಈ ಆದೇಶ ನೀಡಲಾಗಿದೆ.
ತಮಿಳುನಾಡಿನ ನಿರ್ಲಕ್ಷ್ಯ: ತಮಿಳುನಾಡು ಪೊಲೀಸರ ನಿರ್ಲಕ್ಷ್ಯದಿಂದ ಈ ಆದೇಶ ಬಂದಿದೆ ಎನ್ನಲಾಗುತ್ತಿದೆ. ಈ ಮೂಲಕ ಕಾಡುಗಳ್ಳ ವೀರಪ್ಪನ್ ಸಹಚರರು ಆರೋಪಮುಕ್ತರಾಗಿದ್ದಾರೆ.
ಪ್ರಕರಣವೇನು?: ದೊಡ್ಡ ಗಾಜನೂರಿನ ತೋಟದ ಮನೆಗೆ ರಾಜಕುಮಾರ್ ಭೇಟಿ ನೀಡಿದ್ದಾಗ ವೀರಪ್ಪನ್ ಸಹಚರರು ಅಪಹರಿಸಿದ್ದರು. ರಾಜ್ಕುಮಾರ್ ಜತೆ ಎಸ್.ಎ.ಗೋವಿಂದರಾಜು, ನಾಗಪ್ಪ ಹಾಗೂ ನಾಗೇಶ್ ಎನ್ನುವರೂ ತೆರಳಿದ್ದರು. ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಿ 108ನೇ ದಿನ ವೀರಪ್ಪನ್ ಕಪಿಮುಷ್ಟಿಯಿಂದ ರಾಜ್ಕುಮಾರ್ ಹೊರಬಂದರು. ವೀರಪ್ಪನ್ಗೆ -ಠಿ;20 ಕೋಟಿ ನೀಡಲಾಗಿದೆ ಎಂದು ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದರು.
ಐವರಲ್ಲಿ ಇಬ್ಬರ ಎನ್ಕೌಂಟರ್
ತಮಿಳುನಾಡು ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ವೀರಪ್ಪನ್, ಸೇತು ಕುಳಿ ಗೋವಿಂದನ್ ಸತ್ತಿದ್ದಾರೆ. ಚಂದ್ರೇ ಗೌಡ, ಮಲ್ಲು ಹಾಗೂ ರಮೇಶ್ ಕಣ್ಮರೆಯಾಗಿದ್ದಾರೆ.
ಡಾ.ರಾಜ್ಕುಮಾರ್ ಅಪಹರಣ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿರುವ ತಮಿಳುನಾಡಿನ ನ್ಯಾಯಾಲಯದ ಆದೇಶ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ. ನಂತರ ಕಾನೂನು ತಜ್ಞರ ಜತೆ ರ್ಚಚಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.| ಕುಮಾರಸ್ವಾಮಿ, ಮುಖ್ಯಮಂತ್ರಿ
ಕೋರ್ಟ್ ಹೇಳಿದ್ದೇನು?
- ಅಪಹರಣಕ್ಕೊಳಗಾದ ಯಾವುದೇ ವ್ಯಕ್ತಿಗಳು ವೈಯಕ್ತಿಕ ದೂರು ನೀಡಿಲ್ಲ.
- ತನಿಖೆ ವೇಳೆ ರಾಜ್ಕುಮಾರ್ ಅಥವಾ ಕುಟುಂಬ ಸದಸ್ಯರ ಹೇಳಿಕೆ ಪಡೆದಿಲ್ಲ.
- ರಾಜ್ಕುಮಾರ್ ಅಥವಾ ಅಪಹರಣಕ್ಕೆ ಒಳಗಾದ ಇತರ ಮೂವರ ಎದುರು ಆರೋಪಿಗಳ ಪರೇಡ್ ಮಾಡಿಸಿ ಗುರುತು ಪತ್ತೆ ಕಾರ್ಯ ಮಾಡಲಾಗಿಲ್ಲ.
- ಆರೋಪಿಗಳ ಮನೆಯಲ್ಲಿ ಶೋಧಕಾರ್ಯ ನಡೆಸದ ತ.ನಾಡು ಪೊಲೀಸರು.
- ಹಣ ಬೇಡಿಕೆಯ ಆಡಿಯೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ.
- ಅಪಹರಣಕ್ಕೆ ಬಳಸಿದ ಶಸ್ತ್ರಾಸ್ತ್ರಗಳನ್ನು ಸೀಲ್ ಮಾಡದೇ ಜಪ್ತಿ ಮಾಡಲಾಗಿದೆ.
- ಈ ಆರೋಪಿಗಳು ವೀರಪ್ಪನ್ ಜತೆ ಸಂಪರ್ಕ ಹೊಂದಿದ್ದರು ಎನ್ನುವುದನ್ನೂ ಸಾಬೀತುಪಡಿಸಲು ಆಗಲಿಲ್ಲ.
- ರಾಜ್ಕುಮಾರ್ ಬಿಡುಗಡೆಗೆ ಮಧ್ಯಸ್ಥಿಕೆ ವಹಿಸಿದ್ದ ನೆಡುಮಾರನ್, ಗೋಪಾಲ್ ಸೇರಿ ಇತರರನ್ನು ಪ್ರಶ್ನಿಸಲಾಗಿಲ್ಲ.
- ರಾಜ್ಕುಮಾರ್ ಜತೆ ಉಳಿದ ಮೂವರು ತಾವಾಗಿಯೇ ಹೋಗಲು ನಿರ್ಧರಿಸಿರುವುದಾಗಿ ಅಪಹೃತವಾಗಿದ್ದ ನಾಗಪ್ಪ ಹೇಳಿದ್ದಾರೆ. ಇದನ್ನು ಹೇಗೆ ಪರಿಗಣಿಸುವುದು?
- ರಾಜ್ಕುಮಾರ್ಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ, ಆದರೆ ಕಾಡಿನಲ್ಲಿ ಸಂತೋಷವಾಗಿರುವುದಾಗಿ ಸ್ವತಃ ರಾಜ್ಕುಮಾರ್ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
- ತನಿಖಾ ಸಂಸ್ಥೆಯು ನೀಡಿರುವ 47 ಸಾಕ್ಷಿಗಳು, 51 ದಾಖಲೆ ಹಾಗೂ 32 ವಸ್ತು ರೂಪದ ದಾಖಲೆಗಳು ಅಪಹರಣಕ್ಕೆ ಪೂರಕವಾಗಿಲ್ಲ.
ಮೈಸೂರು ದಸರೆಗೂ ಬಿಸಿತಟ್ಟಿತ್ತು
ನರಹಂತಕ ವೀರಪ್ಪನ್, ಡಾ.ರಾಜ್ ಅವರನ್ನು ಅಪಹರಿಸಿದ್ದರ ಕರಿನೆರಳು ನಾಡಹಬ್ಬ ದಸರಾ ಮೇಲೂ ಪರಿಣಾಮ ಬೀರಿತ್ತು. ರಾಜ್ಕá-ಮಾರ್ ಅಪಹರಣವಾದ ದಿನದಿಂದ 108 ದಿನಗಳ ಕಾಲ ಮೈಸೂರಲ್ಲಿ ನಿರಂತರ ಹೋರಾಟ ನಡೆದಿದ್ದಲ್ಲದೆ, ದಸರಾ ಬೇಡ ಎಂದು ಕೆಲವರು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಪ್ರತಿಭಟನಾಕಾರರ ಮನವೊಸಿದ್ದ ಸರ್ಕಾರ, ಸರಳವಾಗಿ ದಸರಾ ಆಚರಿಸá-ವಂತಾಗಿತ್ತು.
ತೋಟ ನೋಡಲು ಬಂದಿದ್ದರು
ಹುಟ್ಟೂರಿನ ಮೇಲೆ ಅಪಾರ ತುಡಿತ ಹೊಂದಿದ್ದ ಡಾ.ರಾಜ್, ಕೊನೆಯ ದಿನಗಳನ್ನು ಗಾಜನೂರಿನಲ್ಲಿ ಕಳೆಯಲು ಮನಸ್ಸು ಮಾಡಿದ್ದರು. ಹೀಗಾಗಿ ಗಾಜನೂರಿನ ತೋಟದಲ್ಲಿ ಹಳೆಯ ಮನೆಯ ಮುಂದೆ ಒಂದಂತಸ್ತಿನ ಮನೆ ನಿರ್ವಿುಸಿದ್ದರು. ಗೃಹಪ್ರವೇಶ ಪೂಜೆ ಮುಗಿದಿದ್ದಲ್ಲದೆ, ತೋಟಕ್ಕೆ ಹಾಕಿಸಿದ್ದ ಬೋರ್ವೆಲ್ನಲ್ಲಿ ನೀರು ಬಂದಿತ್ತು. ಅದನ್ನು ನೋಡಲು 2000ದ ಜುಲೈ 27ರಂದು ಊರಿಗೆ ಆಗಮಿಸಿದ್ದ ರಾಜ್, ನಾಲ್ಕು ದಿನ ಅಲ್ಲೇ ಕಾಲ ಕಳೆಯಲು ನಿರ್ಧರಿಸಿದ್ದರು. ಆದರೆ, ಇವರು ಬರುವ ವಿಷಯವನ್ನು ಮೊದಲೇ ತನ್ನ ಸಹಚರರ ಮೂಲಕ ಕಲೆ ಹಾಕಿದ್ದ ವೀರಪ್ಪನ್ ಭೀಮನ ಅಮಾವಾಸ್ಯೆ ರಾತ್ರಿ ಅಪಹರಿಸಿದ್ದ.
108 ದಿನ ಬಳಿಕ ಬಿಡುಗಡೆ
ಅಂತಿಮವಾಗಿ ಕರ್ನಾಟಕ-ತಮಿಳುನಾಡು ಸರ್ಕಾರ ನಡೆಸಿದ ಸತತ ಮಾತುಕತೆಗೆ ಮಣಿದ ವೀರಪ್ಪನ್, ತನ್ನ ಒತ್ತೆಯಲ್ಲಿಟ್ಟು ಕೊಂಡಿದ್ದ ಡಾ.ರಾಜ್ಕುಮಾರ್, ಗೋವಿಂದರಾಜ್, ನಾಗೇಶ್, ನಾಗರಾಜು ಅವರನ್ನು 2000ದ ನವೆಂಬರ್ 15ರಂದು ಬಿಡುಗಡೆ ಮಾಡಿದ್ದ. ಇದರೊಂದಿಗೆ ಡಾ.ರಾಜ್ ಅವರ 108 ದಿನಗಳ ಅರಣ್ಯ ವಾಸ ಕೊನೆಗೊಂಡಿತ್ತು. ಪೊಲೀಸರೂ ಸೇರಿ 130 ಜನರನ್ನು ಆಹುತಿ ತೆಗೆದುಕೊಂಡಿದ್ದ ಶ್ರೀಗಂಧ ಕಳ್ಳ, ದಂತಚೋರ ವೀರಪ್ಪನ್ ಮತ್ತು ಸಹಚರ ಸೇತುಕುಳಿ ಗೋವಿಂದನ್ ಸೇರಿ ಇತರರನ್ನು ತಮಿಳುನಾಡು, ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 2004ರಲ್ಲಿ ಗುಂಡಿಟ್ಟು ಕೊಂದರು. ವೀರಪ್ಪನ್ ಅಪಹರಣ ದಿಂದ ಬಿಡುಗಡೆಯಾಗಿ ಬಂದ ಡಾ.ರಾಜ್ 2006 ಏ.12ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.
ಅಂದು ಭೀಮನ ಅಮಾವಾಸ್ಯೆ
ಚಾಮರಾಜನಗರ ಗಡಿಯಲ್ಲಿರುವ ಈರೋಡ್ ಜಿಲ್ಲೆ, ತಾಳವಾಡಿ ಪಿರ್ಕಾಗೆ ಸೇರಿದ ಹುಟ್ಟೂರು ದೊಡ್ಡಗಾಜನೂರಿನಲ್ಲಿ 4-5 ದಿನ ವಾಸ್ತವ್ಯಕ್ಕೆಂದು ಪತ್ನಿ ಪಾರ್ವತಮ್ಮ ಮತ್ತಿತರರೊಂದಿಗೆ ಡಾ.ರಾಜ್ಕುಮಾರ್ ತೆರಳಿದ್ದರು. 2000 ಜುಲೈ 30ರಂದು ರಾತ್ರಿ ತೋಟದ ಮನೆಯಲ್ಲಿ ಬಾಡೂಟ ಮಾಡಿ ರಾಜ್ ದಂಪತಿ ಟಿವಿ ನೋಡುತ್ತ ಕುಳಿತಿದ್ದರು. ಪಾರ್ವತಮ್ಮ ಸಹೋದರ ಹಾಗೂ ಅಳಿಯ ಎಸ್.ಎ.ಗೋವಿಂದರಾಜು, ನಾಗೇಶ್, ಸಹಾಯಕ ನಿರ್ದೇಶಕ ನಾಗಪ್ಪ ಮರಡಿ ಇನ್ನಿತರರು ಪಕ್ಕದ ತೋಟದ ಹಳೇ ಮನೆಯಲ್ಲಿದ್ದರು.
ಭೀಮನ ಅಮಾವಾಸ್ಯೆ ರಾತ್ರಿ 9.30ರ ಸುಮಾರಿಗೆ ಬಂದೂಕುಧಾರಿ 12 ಜನರ ತಂಡ ಮನೆಗೆ ನುಗ್ಗಿತ್ತು. ಅತ್ತ ಹಳೇ ಮನೆಯಲ್ಲಿದ್ದ ಗೋವಿಂದರಾಜ್, ಸಂಬಂಧಿ ನಾಗೇಶ್, ನಾಗರಾಜು, ನಾಗಪ್ಪ ಮರಡಿ ಅವರನ್ನು ವೀರಪ್ಪನ್ ಸಹಚರರು ಅಪಹರಿಸಿ ತೋಟದಲ್ಲಿಯೇ ಒತ್ತೆಯಾಗಿಟ್ಟುಕೊಂಡಿದ್ದರು.
ವೀರಪ್ಪನ್ ಎಂಟ್ರಿ: ಏಕಾಏಕಿ ನುಗ್ಗಿದ ತಂಡದ ಜತೆ ವೀರಪ್ಪನ್, ‘ರಾಜ್ಕುಮಾರ್ ಎಲ್ಲಿ’ ಎನ್ನುತ್ತಲೇ ಪಾರ್ವತಮ್ಮ ಅವರತ್ತ ಬಂದೂಕು ಹಿಡಿದು ‘ನಾ ಯಾರು ಗೊತ್ತಾಯಿತಾ’ ಎಂದು ತಮಿಳಿನಲ್ಲಿಯೇ ಪ್ರಶ್ನಿಸುತ್ತಿದ್ದರೆ, ಟಿವಿ ನೋಡುತ್ತಿದ್ದ ರಾಜ್ ಎದ್ದು ವೀರಪ್ಪನ್ ಬಳಿ ಹೋಗಿದ್ದರು.
ಕ್ಯಾಸೆಟ್ವೊಂದನ್ನು ಪಾರ್ವತಮ್ಮ ಅವರ ಕೈಗಿತ್ತ ವೀರಪ್ಪನ್, ‘ಇದನ್ನು ನಿಮ್ಮ ಮುಖ್ಯಮಂತ್ರಿಗೆ ಕೊಡಬೇಕು. ಪೊಲೀಸರಿಗೆ ಹೇಳಿದ್ರೆ ಯಾರೂ ಉಳಿಯುವುದಿಲ್ಲ’ ಎಂದು ಹೇಳಿ ಅಲ್ಲಿಂದ ತೆರಳಿದ್ದ. ರಾಜ್ ಅವರ ಕಾರು ಚಾಲಕ ರವಿ ತಾನೂ ಬರುವುದಾಗಿ ಹೇಳಿ ಹೊರಡಲು ಅನುವಾದಾಗ ಆತನನ್ನು ‘ನೀನು ಬೇಡ, ಕ್ಯಾಸೆಟ್ ತೆಗೆದು ಕೊಂಡು ಸಿಎಂಗೆ ತಲುಪಿಸು’ ಎಂದು ಹೇಳಿ ನಾಲ್ವರನ್ನು ತನ್ನೊಂದಿಗೆ ಕರೆದುಕೊಂಡು ಕಾಡಿನತ್ತ ಹೋಗಿದ್ದ.
ಚಪ್ಪಲಿ ತೆಗೆಸಿದ್ದ ವೀರಪ್ಪನ್: ಮಳೆಯಾಗುತ್ತಿದ್ದರಿಂದ ಚಪ್ಪಲಿಯ ಗುರುತು ನೆಲದಲ್ಲಿ ಮೂಡುತ್ತದೆ ಎಂದು ಎಲ್ಲರೂ ಹಾಕಿದ್ದ ಚಪ್ಪಲಿ ತೆಗೆಸಿ, ಬರಿಗಾಲಿನಲ್ಲಿಯೇ ಕಾಡಿನತ್ತ ಕರೆದುಕೊಂಡು ಹೋಗಿದ್ದ ಎಂದು ಬಿಡುಗಡೆ ಬಳಿಕ ಡಾ.ರಾಜ್, ಗೋವಿಂದರಾಜ್ ಇತರರು ವಿವರಿಸಿದ್ದರು.
ಎಸ್ಎಂಕೆಗೆ ಕ್ಯಾಸೆಟ್: ಅಪಹರಣ ಬಳಿಕ ಪಾರ್ವತಮ್ಮಆ ರಾತ್ರಿಯೇ ಅಂದಿನ ಸಿಎಂ ಎಸ್.ಎಂ.ಕೃಷ್ಣರಿಗೆ ದೂರವಾಣಿಯಲ್ಲಿಯೇ ವಿವರಿಸಿ ಕ್ಯಾಸೆಟ್ನೊಂದಿಗೆ ಕಾರಿನಲ್ಲಿ ಹೊರಟು ರಾತ್ರಿ 2 ಗಂಟೆ ವೇಳೆಗೆ ಬೆಂಗಳೂರು ತಲುಪಿಸಿದ್ದರು. ಆ ತಡರಾತ್ರಿಯೇ ಎಸ್.ಎಂ.ಕೃಷ್ಣ ಅವರು ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರ್ಚಚಿಸಿದ್ದರು.
ತಪ್ಪಿಸಿಕೊಂಡಿದ್ದ ನಾಗಪ್ಪ ಮರಡಿ
ವರನಟನ ಅಪಹರಣ ಸೂಕ್ಷ್ಮ ವಿಷಯವಾಗಿದ್ದರಿಂದ ಕರ್ನಾಟಕ, ತಮಿಳುನಾಡು ಸರ್ಕಾರಗಳು ರಾಜ್ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವ ಪ್ರಯತ್ನದಲ್ಲಿದ್ದವು. ನಕ್ಕೀರನ್ ಗೋಪಾಲ್ ಇನ್ನಿತರ ಸಂಧಾನಕಾರರನ್ನು ಕಾಡಿಗೆ ಕಳುಹಿಸಿ ವೀರಪ್ಪನ್ ಜತೆ ಮಾತುಕತೆ ನಡೆಸಿದ್ದರು. ಈ ಮಧ್ಯೆಯೇ 2000ದ ಸೆಪ್ಟೆಂಬರ್ 28ರಂದು ಡಾ.ರಾಜ್ಕುಮಾರ್ ಜತೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಸಹಾಯಕ ನಿರ್ದೇಶಕ ನಾಗಪ್ಪ ಮರಡಿ ತಪ್ಪಿಸಿಕೊಂಡು ದಟ್ಟ ಕಾಡಿನಲ್ಲಿ ರಾತ್ರಿಯೆಲ್ಲ ಓಡಿ, ಸಿಕ್ಕ ಲಾರಿಯೊಂದನ್ನು ಏರಿ ಮುಂಜಾನೆ ಬೆಂಗಳೂರು ತಲುಪಿದ್ದರು. ಈ ವಿಷಯ ಕಾಡ್ಗಿಚ್ಚಿನಂತೆ ಹರಡಿ ರಾಜ್ಕುಮಾರ್ ಸುರಕ್ಷಿತವಾಗಿ ಬರುವುದಿಲ್ಲ ಎನ್ನುವ ಕೂಗು ಎದ್ದಿತ್ತು.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment