ಕರ್ನಾಟಕ ಬ್ಯಾಂಕ್ಗೆ ₹ 1 ಕೋಟಿ ಲಾಭ
60ನೇ ವರ್ಷದ ಸಂಭ್ರಮದಲ್ಲಿರುವ ಮುದ್ದೇಬಿಹಾಳದ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್
ಪ್ರಜಾವಾಣಿ ವಾರ್ತೆ
ಮುದ್ದೇಬಿಹಾಳ: ಪಟ್ಟಣದ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ 2017–2018ನೇ ಸಾಲಿನಲ್ಲಿ ₹ 1.02 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಸತೀಶಕುಮಾರ ನೇ.ಓಸ್ವಾಲ ಪ್ರಕಟಿಸಿದರು.
ಈ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ₹ 553.98 ಕೋಟಿ ವಹಿವಾಟು ನಡೆಸಿದ್ದು, ₹ 13.06 ಕೋಟಿ ಆದಾಯ ಗಳಿಸಿದೆ. ತೆರಿಗೆ ಪೂರ್ವ ₹ 3.15 ಕೋಟಿ ಲಾಭದಲ್ಲಿ, ₹ 1.60 ಕೋಟಿ ಕರಡು ಸಾಲ ನಿಧಿಗೆ ವರ್ಗಾಯಿಸಿ, ₹ 52.41 ಲಕ್ಷ ಆದಾಯ ತೆರಿಗೆ ಪಾವತಿಸಿದ ನಂತರ, ₹ 1.02 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅವರು ಹೇಳಿದರು.
ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲ್ಲೂಕಿನ ಆಯ್ದ 20 ಗ್ರಾಮಗಳ ಸದಸ್ಯರು ಹಾಗೂ ಗ್ರಾಹಕರಿಗೆ ಆರ್ಥಿಕ ಸೌಲಭ್ಯಗಳನ್ನು ಬ್ಯಾಂಕ್ ನೀಡಿದೆ. 8272 ಸದಸ್ಯರಿದ್ದು, ₹ 4.42 ಕೋಟಿ ಷೇರು ಬಂಡವಾಳ, ಕಾಯ್ದಿರಿಸಿದ ಹಾಗೂ ಇತರ ನಿಧಿಗಳು ₹ 14.69 ಕೋಟಿ, ₹ 102.58 ಕೋಟಿ ಒಟ್ಟು ಠೇವಣಿ, ₹ 47.60 ಕೋಟಿ ಹೂಡಿಕೆಯಾಗಿದೆ.
ಈ ಹಿಂದಿನ ಸಾಲಿನಲ್ಲಿ ₹ 74.05 ಕೋಟಿ ಸಾಲ ವಿತರಿಸಿದ್ದು, ಒಟ್ಟು 2764 ಸದಸ್ಯರಿಂದ ಬರಬೇಕಾದ ಸಾಲದ ಮೊತ್ತ ₹ 63.71 ಕೋಟಿಯಿದೆ. ಎನ್.ಪಿ.ಎ ಸಾಲದ ಮೊತ್ತ ₹ 5.66 ಕೋಟಿಯಿದ್ದು, ನಿವ್ವಳ ಎನ್.ಪಿ.ಎ ಶೂನ್ಯವಿದೆ ಎಂದು ಮಾಹಿತಿ ನೀಡಿದರು.
ದುಡಿಯುವ ಬಂಡವಾಳ ₹ 124.10 ಕೋಟಿಯಿದ್ದು, ಪ್ರಸಕ್ತ ಸಾಲಿಗೆ ಶೇ 12ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಸೆ 15ರ ಶನಿವಾರ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಬ್ಯಾಂಕ್ ಸಿ.ಬಿ.ಎಸ್ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಎನ್ಇಎಫ್ಟಿ/ಆರ್ಟಿಜಿಎಸ್, ಎಟಿಪಿಎಆರ್ ಚೆಕ್, ಸೇಫ್ ಡಿಪಾಜಿಟ್ ಲಾಕರ್ಗಳ ಸೌಲಭ್ಯ ಒದಗಿಸುತ್ತಿದೆ. ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ದರಗಳನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಠೇವಣಿ ಮೇಲೆ ಶೇ 0.5ರಷ್ಟು ಹೆಚ್ಚಿಗೆ ಬಡ್ಡಿ ನೀಡಲಾಗುತ್ತಿದೆ ಎಂದು ವ್ಯವಸ್ಥಾಪಕ ರೇವಪ್ಪ ಜಿ.ಮೋಟಗಿ ತಿಳಿಸಿದರು.
ಹೂವಿನಹಿಪ್ಪರಗಿ ಶಾಖೆಯು 2017-18ನೇ ಸಾಲಿನ ಕೊನೆಯಲ್ಲಿ ₹ 1.06 ಕೋಟಿ ಠೇವಣಿ, ₹ 5.28 ಕೋಟಿ ಸಾಲ ಮತ್ತು ಮುಂಗಡಗಳು ಬಾಕಿಯಿದ್ದು, ಒಟ್ಟು ₹ 22.83 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಶಾಖಾ ವ್ಯವಸ್ಥಾಪಕ ನೇತಾಜಿ ನಲವಡೆ ಇದೇ ಸಂದರ್ಭ ಮಾಹಿತಿ ನೀಡಿದರು.
ಸಹಾಯಕ ವ್ಯವಸ್ಥಾಪಕ ಉಮೇಶ ನಾಗಠಾಣ, ಬ್ಯಾಂಕ್ ಉಪಾಧ್ಯಕ್ಷ ನಿಂಗಣ್ಣ ಚಟ್ಟೇರ, ನಿರ್ದೇಶಕರಾದ ಮುತ್ತಣ್ಣ ಕಡಿ, ಮುತ್ತಣ್ಣ ಪ್ಯಾಟಿಗೌಡರ, ಸುರೇಶ ಕಮತ, ರಾಜು ಕರಡ್ಡಿ, ಶಿವಕುಮಾರ ಬಿರಾದಾರ, ವೆಂಕನಗೌಡ ಪಾಟೀಲ, ಚನ್ನಪ್ಪ ಕಂಠಿ, ಚನ್ನಪ್ಪಗೌಡ ಬಿರಾದಾರ, ಶಶಿಕಾಂತ ಮಾಲಗತ್ತಿ, ಎಂ.ಎಸ್.ಬಿದರಕೋಟಿ, ಗಿರಿಜಮ್ಮ ಜಿ.ಪಾಟೀಲ, ಅನಸೂಯಾ ಸಾಲಿಮಠ ಹಾಗೂ ಬ್ಯಾಂಕಿನ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.
No comments:
Post a Comment