ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಹಿರಿಯ ವಕೀಲ ಎಚ್.ಕಾಂತರಾಜ ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕೆಲಸ ಮಾಡಿದ ಅನುಭವವನ್ನೂ ಬೆನ್ನಿಗೆ ಕಟ್ಟಿಕೊಂಡು ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರೊಂದಿಗಿನ ‘ಪ್ರಜಾವಾಣಿ’ ಮಾತುಕತೆ ಇಲ್ಲಿದೆ:
*ಆಯೋಗದ ಪರಿಧಿಯನ್ನು ಅರ್ಥಮಾಡಿಕೊಳ್ಳಲು ಇನ್ನೆಷ್ಟು ಕಾಲಾವಕಾಶ ಬೇಕು?
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಯಾಗಿದ್ದು ೧೯೯೭ರಲ್ಲಿ. ಪ್ರೊ. ರವಿವರ್ಮಕುಮಾರ್ ಅದರ ಮೊದಲ ಅಧ್ಯಕ್ಷರು. ಆಗ ನಾನು ಸದಸ್ಯನಾಗಿದ್ದೆ. ಆಗಿನ ಅನುಭವದಿಂದ ಆಯೋಗದ ಹೊಣೆ, ಕರ್ತವ್ಯ, ಮಿತಿ ಎಲ್ಲವೂ ಚೆನ್ನಾಗಿ ಗೊತ್ತಿದೆ. ಅದರ ನಾಡಿಮಿಡಿತ ಅರಿತುಕೊಂಡೇ ಅಧಿಕಾರ ಸ್ವೀಕರಿಸಿದ್ದೇನೆ.
*ಆಯೋಗ ಜಾತಿ ಜನಗಣತಿ ಮಾಡಲಿದೆಯೇ? ಹೌದಾದರೆ ಅದರ ಅಗತ್ಯವೇನು?
ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಜನಗಣತಿ ಮಾಡಿಸಲು ರಾಜ್ಯ ಸರ್ಕಾರ ೨೦೧೪ರ ಜನವರಿ ೨೩ರಂದು ಆದೇಶ ಹೊರಡಿಸಿದೆ. ಅದಕ್ಕಾಗಿ ₨ ೧೧೭ ಕೋಟಿ ಹಣವನ್ನೂ ಮೀಸಲಿಟ್ಟಿದೆ. ಈ ಗಣತಿ ಕಾರ್ಯಕ್ಕಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ಆಯೋಗ ಮಾಡಿಕೊಳ್ಳುತ್ತಿದೆ. ನವೆಂಬರ್ 1ರಿಂದ ಗಣತಿ ಕಾರ್ಯ ಆರಂಭವಾಗಲಿದೆ.
ನಮ್ಮ ದೇಶದಲ್ಲಿ ೧೯೩೧ರವರೆಗೆ ಜಾತಿ ಆಧಾರದ ಮೇಲೆಯೇ ಜನಗಣತಿ ನಡೆಯುತ್ತಿತ್ತು. ಆ ಬಳಿಕ ನಿಂತಿದೆ. ಇಂದಿರಾ ಸಹಾನಿ ವಿರುದ್ಧ ಕೇಂದ್ರ ಸರ್ಕಾರ ಪ್ರಕರಣದಲ್ಲಿ ೧೯೯೨ರ ನವೆಂಬರ್ ೧೬ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಹಿಂದುಳಿದ ವರ್ಗಗಳ ಸ್ಥಿತಿಗತಿ ಅರಿಯಲು ಉಳಿದ ಅಂಶಗಳ ಜತೆಗೆ ಜಾತಿಯನ್ನೂ ಸೇರಿಸಿ ಸಮೀಕ್ಷೆ ನಡೆಸಬೇಕು ಎಂಬ ನಿರ್ದೇಶನ ನೀಡಿದೆ.
ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಗೂ ಆಗಲೇ ಕೋರ್ಟ್ ಆದೇಶ ನೀಡಿತ್ತು. ಕಾಕಾ ಕಾಲೇಲ್ಕರ್ ಮತ್ತು ಬಿ.ಪಿ.ಮಂಡಲ್ ಆಯೋಗದ ವರದಿಗಳೂ (ಕ್ರಮವಾಗಿ 1955 ಹಾಗೂ 1980) ಜಾತಿ ಜನಗಣತಿ ಅಗತ್ಯವನ್ನು ಪ್ರತಿಪಾದಿಸಿದ್ದವು. ಆದರೆ, ಈ ಕೆಲಸ ಇಲ್ಲಿಯವರೆಗೆ ಆಗಿಲ್ಲ. ಪ್ರತಿ ಜಾತಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಜಾತಿ ಜನಗಣತಿ ತುಂಬಾ ಅಗತ್ಯ.
*ಇದು ಕೇವಲ ಹಿಂದುಳಿದ ವರ್ಗಗಳಿಗೆ ಸೇರಿದ ಜಾತಿಗಳ ಜನಗಣತಿಯೇ?
ಇಲ್ಲ. ರಾಜ್ಯದ ೬.೧೧ ಕೋಟಿ ಜನರನ್ನೂ ಒಳಗೊಂಡ ಜಾತಿಗಳ ಜನಗಣತಿ ಇದಾಗಿದೆ. ಆಯೋಗ ಸಂಗ್ರಹಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ೧,೦೬೫ ಜಾತಿಗಳಿವೆ. ಗಣತಿಯಿಂದ ಪ್ರತಿಯೊಂದು ಜಾತಿ, ಸಮಾಜ ಯಾವ ಸ್ತರದಲ್ಲಿದೆ ಎಂಬುದು ನಿಖರವಾಗಿ ಗೊತ್ತಾಗಲಿದೆ. ಇದರಿಂದ ಹಿಂದುಳಿದ ವರ್ಗಗಳ ಪಟ್ಟಿ ಪರಿಷ್ಕರಣೆಗೂ ಸಹಾಯ ಆಗಲಿದೆ. ಸರ್ಕಾರಕ್ಕೂ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳಲು ಅನುಕೂಲವಾಗಲಿದೆ.
*ಜಾತಿ ಜನಗಣತಿಯಿಂದ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತೆ ಆಗುವುದಿಲ್ಲವೆ?
ಸಾಮಾಜಿಕ ನ್ಯಾಯವೇ ಸಂವಿಧಾನದ ಧ್ವನಿ. ಸಮಾನತೆ ಸಾಧಿಸದೆ ಸಾಮಾಜಿಕ ನ್ಯಾಯದ ಗುರಿ ಸಾಧನೆ ಅಸಾಧ್ಯ. ಸಮಾನತೆ ಸಾಧಿಸಲು ಯಾವ ಜಾತಿ ಎಂತಹ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಗಿ ತಿಳಿಯಬೇಕು. ಆದ್ದರಿಂದಲೇ ಈ ಗಣತಿ ತುಂಬಾ ಅಗತ್ಯವಾಗಿದೆ. ಜಾತಿಗಳ ವಿನಾಶಕ್ಕೆ ಈ ಗಣತಿ ಮಾಡಲಾಗುತ್ತಿದೆಯೇ ಹೊರತು ಆ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲಲ್ಲ. ಜಾತಿಯ ಅಸ್ತ್ರದಿಂದಲೇ ಜಾತಿಗಳನ್ನು ಹೋಗಲಾಡಿಸಿ ಸಮಾನತೆ ಸಾಧಿಸುವುದು ಅಂತಿಮ ಗುರಿಯಾಗಿದೆ.
*ಜಾತಿ ಜನಗಣತಿಯನ್ನು ಯಾವ ರೀತಿ ಮಾಡುತ್ತೀರಿ? ಅದರ ನಿಖರತೆಗೆ ಏನು ಮಾನದಂಡ?
ಮನೆ–ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುತ್ತೇವೆ. ಮನೆ ಇಲ್ಲದವರನ್ನೂ ಹುಡುಕಿಕೊಂಡು ಹೋಗುತ್ತೇವೆ. ಮಾಹಿತಿ ಸಂಗ್ರಹಿಸಲು ‘ನಮೂನೆ–3’ ಅನುಸೂಚಿಯನ್ನು ಸಿದ್ಧಪಡಿಸಲಾಗಿದೆ. ಕುಟುಂಬದ ಪ್ರತಿ ಸದಸ್ಯರಿಂದ 48 ಅಂಶಗಳ ಮಾಹಿತಿ ಪಡೆಯಲಾಗುತ್ತದೆ. ಧರ್ಮ, ಜಾತಿ, ಉಪಜಾತಿ, ಅದಕ್ಕೆ ಕರೆಯುವ ಬೇರೆ, ಬೇರೆ ಹೆಸರುಗಳು, ಶಿಕ್ಷಣ, ಮಾತೃಭಾಷೆ, ವೈವಾಹಿಕ ಸ್ಥಾನಮಾನ, ಕುಲಕಸುಬು, ಉದ್ಯೋಗ, ಆದಾಯ, ಸಾಲ, ವಾಸ್ತವ್ಯದ ಪರಿಸರ, ವಾಸವಿರುವ ಮನೆ ಸ್ಥಿತಿ, ಶೌಚಾಲಯ ವ್ಯವಸ್ಥೆ, ದೀಪ ಹಾಗೂ ಅಡುಗೆ ಇಂಧನದ ಮೂಲ, ವೃತ್ತಿ ಸಂಬಂಧಿತ ಕಾಯಿಲೆ, ಸರ್ಕಾರದಿಂದ ಪಡೆದ ಸವಲತ್ತು ಮೊದಲಾದ ವಿವರ ಸಂಗ್ರಹಿಸಲಾಗುತ್ತದೆ.
ರಾಜ್ಯದಲ್ಲಿ 1.26 ಕೋಟಿ ಕುಟುಂಬಗಳಿದ್ದು, ಹತ್ತು ಕುಟುಂಬಗಳಿಗೆ ಒಬ್ಬರಂತೆ 1.26 ಲಕ್ಷ ಸಮೀಕ್ಷಾ ಸಿಬ್ಬಂದಿ ನಮಗೆ ಬೇಕಿದೆ. ಶಿಕ್ಷಣ ಹಕ್ಕು ಕಾಯ್ದೆ ಬಂದ ಮೇಲೆ ಸಮೀಕ್ಷೆಗೆ ಶಿಕ್ಷಕರನ್ನು ನೇಮಿಸುವಂತಿಲ್ಲ. ಬೇರೆ ಇಲಾಖೆಗಳ ಸಿಬ್ಬಂದಿ, ನಿರುದ್ಯೋಗಿ ಪದವೀಧರರು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯೆಯರನ್ನು ಈ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅವರಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಮೊಬೈಲ್ ಹಾಗೂ ಜಿಪಿಎಸ್ ಎರಡರ ಪ್ರಯೋಜನ ಪಡೆದು ಸಮೀಕ್ಷೆ ಕಾರ್ಯದ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸುವ ಯತ್ನಗಳು ನಡೆದಿವೆ.
*ಈ ಗಣತಿ ಸಮಾನತೆ ಸಾಧಿಸಲು ಹೇಗೆ ವೇಗವರ್ಧಕವಾಗಿ ಕೆಲಸ ಮಾಡಲಿದೆ?
ರಾಜಕೀಯ ಪ್ರಾತಿನಿಧ್ಯವೂ ಸೇರಿದಂತೆ ಸೌಲಭ್ಯಗಳ ವಿಷಯದಲ್ಲಿ ಯಾವ, ಯಾವ ಸಮುದಾಯಗಳು ಹೇಗೆ ವಂಚಿತವಾಗಿವೆ ಎನ್ನುವುದು ಅಂಕಿ–ಅಂಶದ ಸಮೇತ ಗೊತ್ತಾಗಲಿದೆ. ಯಾವ ಯಾವ ಜಾತಿಗಳಿಗೆ ಸಮಾಜ ಏನೆಲ್ಲಾ ಕಳಂಕ (ಸ್ಟಿಗ್ಮಾ) ಅಂಟಿಸಿ ದೂರ ಇಟ್ಟಿದೆ ಎಂಬುದು ತಿಳಿಯಲಿದೆ. ಕುಟುಂಬ ಹೊಂದಿರುವ ಕೃಷಿಭೂಮಿ, ಅದರ ಸ್ವರೂಪ (ಖುಷ್ಕಿ/ನೀರಾವರಿ), ಶೈಕ್ಷಣಿಕ ಮಟ್ಟ, ಅನಕ್ಷರಸ್ಥರಾಗಿದ್ದರೆ ಅದಕ್ಕೆ ಕಾರಣ ಎಲ್ಲವೂ ಸಮೀಕ್ಷೆಯಿಂದ ತಿಳಿಯಲಿದೆ. ಕಾರಣ ತಿಳಿದಾಗ ಸಮಸ್ಯೆಗೆ ಪರಿಹಾರ ರೂಪಿಸುವುದು ಸುಲಭ.
*ಸರ್ಕಾರಕ್ಕೆ ಯಾವಾಗ ವರದಿ ಸಲ್ಲಿಸುತ್ತೀರಿ?
ಜಾತಿ ಜನಗಣತಿ ಕಾರ್ಯ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಸಿಕ್ಕ ಮಾಹಿತಿ ವಿಂಗಡಣೆಗೆ ನಮ್ಮ ಸಿಬ್ಬಂದಿಗೆ ಕನಿಷ್ಠ ಮೂರು ತಿಂಗಳು ಬೇಕು. ಬಳಿಕ ವರದಿ ಸಿದ್ಧಪಡಿಸಲು ಮತ್ತೆ ಮೂರು ತಿಂಗಳು ಬೇಕು. ಬರುವ ಜೂನ್ ಅಂತ್ಯದೊಳಗೆ ಮೊದಲ ವರದಿ ನೀಡಲಿದ್ದೇವೆ. ಸಿಕ್ಕ ಮಾಹಿತಿಯನ್ನು ವಿಶ್ಲೇಷಣೆ ಮಾಡಿ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಸಿದ್ಧಪಡಿಸುತ್ತಲೇ ಹೋಗುತ್ತೇವೆ.
*ಹಾಗಾದರೆ ನಿಮ್ಮ ಅವಧಿಯಲ್ಲಿ ಆಯೋಗಕ್ಕೆ ಇದೊಂದೇ ಕೆಲಸವೇ?
ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳು ಮತ್ತು ಈ ಸಮುದಾಯದ ವಿದ್ಯಾರ್ಥಿಗಳ ಶಿಷ್ಯವೇತನ ವಿತರಣೆ ಕುರಿತು ಹಲವು ದೂರುಗಳು ಕೇಳಿಬಂದಿವೆ. ಈ ಸಂಬಂಧ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದೇವೆ. ಗ್ರಾಮೀಣ ಭಾಗದ ಮಕ್ಕಳು ವಿಶೇಷವಾಗಿ ಬಾಲಕಿಯರು ಈಗಲೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆಲ್ಲ ಒಳ್ಳೆಯದನ್ನು ಮಾಡುವ ಆಸೆಯಿದೆ.
ಭಯೋತ್ಪಾದನೆಗೆ ಕಡಿವಾಣ
ಟರ್ಕಿಯಿಂದ ಪಾಠ ಕಲಿಯಬೇಕಿದೆ ಇಸ್ರೇಲ್!
ಇಸ್ರೇಲ್ ಹಾಗೂ ಗಾಜಾ ಪಟ್ಟಿಯಲ್ಲಿ ನಡೆದಿರುವ ಸಂಘರ್ಷ ಎರಡೂ ಕಡೆಯಲ್ಲೂ ಅಪಾರ ಸಾವು, ನೋವಿಗೆ ಕಾರಣ ವಾಗಿದೆ. ಇದು ಈ ಎರಡೂ ರಾಷ್ಟ್ರಗಳಿಗೆ ಹೊಸದೇನೂ ಅಲ್ಲ! ಕಾದಾಟದಲ್ಲಿ ಇಸ್ರೇಲ್ ಈಗಾಗಲೇ ತನ್ನ 30 ಯೋಧರು ಮತ್ತು ಇಬ್ಬರು ನಾಗರಿಕರನ್ನು ಕಳೆದುಕೊಂಡಿದೆ. ಇಸ್ರೇಲ್ ವೈಮಾನಿಕ ದಾಳಿಗೆ ಗಾಜಾ ಪಟ್ಟಿಯ ನೂರಕ್ಕೂ ಹೆಚ್ಚು ಮುಗ್ಧ ಮಕ್ಕಳು ಸೇರಿದಂತೆ 600ಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದಾರೆ. ಸಂಘರ್ಷ ಇನ್ನೂ ಕೊನೆಯಾಗಿಲ್ಲ. ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚುತ್ತಲಿದೆ.
ಪ್ರತಿ ಬಾರಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಮಧ್ಯೆ ಸಂಘರ್ಷ ನಡೆದಾಗ ‘ಇಸ್ರೇಲ್‌ಗೆ ತನ್ನನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಇದೆ’ ಎಂದು ಪಾಶ್ಚಾತ್ಯ ರಾಷ್ಟ್ರಗಳು, ರಾಜಕಾರಣಿಗಳು ಸಮರ್ಥಿಸಿ ಕೊಳ್ಳುವುದು ಪರಿಪಾಠವಾಗಿದೆ. ಹಾಗಾದರೆ, ಪ್ಯಾಲೆಸ್ಟೀನ್ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಲ್ಲವೇ? ಎಂಬ ಪ್ರಶ್ನೆಗೆ ‘ಇಸ್ರೇಲ್ ಒಂದು ರಾಷ್ಟ್ರ’ ಎಂಬ ಮಾರುತ್ತರ ಸಿದ್ಧವಿರುತ್ತದೆ. ಹಾಗಾದರೆ ಪ್ಯಾಲೆಸ್ಟೀನ್ ರಾಷ್ಟ್ರ ಅಲ್ಲವೇ? ಅದು ರಾಷ್ಟ್ರವಾಗಲು ಅಡ್ಡಿಯಾದವರು ಯಾರು? ಎಂಬ ಪ್ರಶ್ನೆ ಎದುರಾಗುತ್ತದೆ.
ಕಟ್ಟಾ ಸಂಪ್ರದಾಯವಾದಿಗಳು, ಸುಧಾರಣೆಯ ಪರವಿದ್ದ ಪ್ರಗತಿಪರರು, ಶಾಂತಿಪ್ರಿಯರು... ಹೀಗೆ ನಾನಾ ಸೈದ್ಧಾಂತಿಕ ಹಿನ್ನೆಲೆ ಇರುವ ಇಸ್ರೇಲ್ ಜನರು ದ್ವಿರಾಷ್ಟ್ರ ಸಿದ್ಧಾಂತವೊಂದೇ ಶಾಶ್ವತ ಪರಿಹಾರ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ, ಸಂಪ್ರದಾಯವಾದಿಗಳು ‘ಶಾಂತಿ ಮರು ಸ್ಥಾಪನೆ ಯತ್ನ ಆರಂಭಿಸುವ ಮುನ್ನ ಭಯೋತ್ಪಾದನೆ ಕೈಬಿಡುವಂತೆ ಪ್ಯಾಲೆಸ್ಟೀನ್ ತಾಕೀತು ಮಾಡಬೇಕು’ ಎಂಬ ಷರತ್ತು ಒಡ್ಡಿದ್ದಾರೆ.
ರಕ್ತದ ಮಡುವಲ್ಲಿ ಅರಳಿದ ಶಾಂತಿ ಹೂ...
90ರ ದಶಕದಲ್ಲಿ ಇದೇ ಪರಿಸ್ಥಿತಿ ಪುಟ್ಟ ರಾಷ್ಟ್ರ ಟರ್ಕಿಯಲ್ಲೂ ಇತ್ತು. ಕುರ್ದ್ ಪ್ರತ್ಯೇಕತಾವಾದಿಗಳ ಗೆರಿಲ್ಲಾ ಯುದ್ಧದಿಂದ ಟರ್ಕಿ ನಲುಗಿ ಹೋಗಿತ್ತು. ದಶಕಗಳ ಕಾಲ ನಿರಂತರವಾಗಿ ನಡೆದ ಸಂಘರ್ಷದಲ್ಲಿ 40 ಸಾವಿರ ಜನರು ಜೀವ ತೆತ್ತಿದ್ದರು. ಆದರೆ, ಈಗ ಎರಡು ವರ್ಷಗಳಿಂದ ಅಲ್ಲಿ ಗುಂಡಿನ ಸದ್ದು ಸಂಪೂರ್ಣ ಸ್ತಬ್ಧವಾಗಿದೆ. ರಕ್ತದಿಂದ ತೊಯ್ದ ನೆಲದಲ್ಲಿ ಶಾಂತಿ ಅರಳಿದೆ. ಯುದ್ಧಪೀಡಿತ ಟರ್ಕಿಯಲ್ಲಿ ಶಾಂತಿ ಸ್ಥಾಪನೆ ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.
ಕುರ್ದ್ ಪ್ರತ್ಯೇಕತಾವಾದಿಗಳ ಭಯೋತ್ಪಾದನೆಗೆ ಪರಿಹಾರ ಕಂಡುಕೊಳ್ಳಲು ಟರ್ಕಿ ಮುಂದೆ ಎರಡು ಆಯ್ಕೆ ಇದ್ದವು. ಒಂದು ರಾಜಕೀಯ ಪರಿಹಾರ, ಮತ್ತೊಂದು ಮಿಲಿಟರಿ ಬಲದ ಪ್ರಯೋಗ. ಸಂಪ್ರದಾಯವಾದಿ ಗಳು ಸೇನಾ ಕಾರ್ಯಾಚರಣೆಯ ಪ್ರಸ್ತಾಪ ಮುಂದಿಟ್ಟಿದ್ದರು. ಪ್ರಗತಿಪರರು ರಾಜಕೀಯ ಪರಿಹಾರಕ್ಕೆ ಪಟ್ಟು ಹಿಡಿದಿದ್ದರು. ಇವೆಲ್ಲಕ್ಕೂ ಮೊದಲು ಟರ್ಕಿ ತನ್ನ ರಾಷ್ಟ್ರವಾದಿ ಸಿದ್ಧಾಂತವನ್ನು ಕೈ ಬಿಡಬೇಕಿತ್ತು.
ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂಬ ಪ್ರಗತಿಪರರ ಸಲಹೆಯನ್ನು ತಳ್ಳಿ ಹಾಕಿದ್ದ ಸರ್ಕಾರ ಸೇನಾ ಕಾರ್ಯಾಚರಣೆ ಒಂದೇ ದಾರಿ ಎಂಬ ಮನಸ್ಥಿತಿಯಲ್ಲಿತ್ತು. ಅದಕ್ಕೆ ಪೂರಕವಾಗಿ ‘ಒಬ್ಬೊಬ್ಬರನ್ನಾಗಿ ಎಲ್ಲ ಭಯೋತ್ಪಾದಕರನ್ನು ಕೊಂದು ಹಾಕಿ ಬಿಡೋಣ’ ಎಂದು ಸೇನೆಯ ಜನರಲ್ ಸಲಹೆ ನೀಡಿದ್ದರು. 90ರ ದಶಕದಲ್ಲಿ ಟರ್ಕಿಯ ಬಹುತೇಕ ಉನ್ನತ ರಾಜಕೀಯ ನಾಯಕರು ಹಾಗೂ ಸೇನಾ ಮುಖ್ಯಸ್ಥರ ವಾದವೂ ಇದೇ ಆಗಿತ್ತು. ಇಂದು ಇದೇ ಪರಿಸ್ಥಿತಿ ಇಸ್ರೇಲ್‌ನಲ್ಲೂ ಇದೆ.
ಪ್ರತ್ಯೇಕತಾವಾದಿಗಳ ಕುರ್ದಿಸ್ತಾನ್ ವರ್ಕರ್‍ಸ್ ಪಾರ್ಟಿ (ಪಿ.ಕೆ.ಕೆ) ಹಾಗೂ ಟರ್ಕಿಯ ಮಿಲಿಟರಿ ನಡುವೆ 1984ರಲ್ಲಿ ಆರಂಭವಾದ ಯುದ್ಧ ಹತ್ತಾರು ವರ್ಷ ನಿರಂತರವಾಗಿ ನಡೆಯಿತು. ಅಪಾರ ಸಾವು, ನೋವುಗಳಾದವು. ಅನೇಕ ಮುಗ್ಧ ಜೀವಗಳನ್ನು ಈ ಯುದ್ಧ ಬಲಿ ಪಡೆಯಿತು.
ಮುಗ್ಧರನ್ನು ಕೊಂದ ಸೇನೆ
ಟರ್ಕಿಯ ಸೇನೆ ಕುರ್ದ್ ಜನಾಂಗದ ಮೇಲೆ ಇನ್ನಿಲ್ಲದ ಹಿಂಸೆ ನಡೆಸಿತು. ಏಕಾಏಕಿ ಮೂರು ಸಾವಿರಕ್ಕೂ ಹೆಚ್ಚು ಕುರ್ದ್ ಜನರ ಗ್ರಾಮಗಳನ್ನು ಹೇಳ ಹೆಸರಿಲ್ಲದಂತೆ ಸಂಪೂರ್ಣವಾಗಿ ನೆಲಸಮಗೊಳಿಸಿತು. ಅನ್ಯಾಯವಾಗಿ ಸಾವಿರಾರು ಕುರ್ದ್ ಜನರನ್ನು ಕೊಂದು ಹಾಕಿತು. ‘ಸ್ವಭಾವತಃ ಜಗಳಗಂಟರು, ಒರಟರೂ ಹಾಗೂ ಸದಾ ಹಿಂಸೆಯನ್ನು ಸಂಭ್ರಮಿಸುವ ಹಟಮಾರಿ ಕುರ್ದ್ ಜನರಿಗೆ ಬಂದೂಕಿನ ಹೊರತಾಗಿ ಬೇರೆ ಭಾಷೆ ಅರ್ಥವಾಗದು.
ಈ ಜನಾಂಗದ ಮಹಿಳೆಯರು ತಮ್ಮ ಮಕ್ಕಳು ಓದಿ ಡಾಕ್ಟರ್, ಎಂಜಿನಿಯರ್ ಅಥವಾ ವಕೀಲರಾಗಲಿ ಎಂದು ಬಯಸುವುದಿಲ್ಲ. ಬದಲಾಗಿ ಭಯೋತ್ಪಾದಕರಾಗಲಿ ಎಂದು ಹಾರೈಸುತ್ತಾರೆ. ಇಂತಹವರಿಗೆ ಬಂದೂಕಿನ ಗುಂಡುಗಳಲ್ಲದೆ ಬೇರೆ ಭಾಷೆ ಅರ್ಥವಾಗದು’ ಎಂದು ಸಂಪ್ರದಾಯವಾದಿಗಳು ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ‘ಹಮಾಸ್’ ಪ್ರತ್ಯೇಕತಾವಾದಿಗಳ ಬಗ್ಗೆ ಇಸ್ರೇಲ್‌ನಲ್ಲೂ ಇದೇ ರೀತಿಯ ಮಾತುಗಳು ಕೇಳಿ ಬರುತ್ತಿವೆ.
ದಬ್ಬಾಳಿಕೆಗೆ ಕೋವಿಯ ಉತ್ತರ
ಟರ್ಕಿ ಸೇನೆ ತಮ್ಮ ಜನಾಂಗದ ಮೇಲೆ ನಿರಂತರವಾಗಿ ನಡೆಸಿದ ದೌರ್ಜನ್ಯ ಮತ್ತು ಕ್ರೌರ್ಯ ಕುರ್ದ್ ಜನಾಂಗದ ಯುವಕರು ಕೋವಿಯನ್ನು ಕೈಗೆತ್ತಿಕೊಳ್ಳಲು ಮುಖ್ಯ ಕಾರಣ. ತಮ್ಮ ಸಂಸ್ಕೃತಿ, ಭಾಷೆ ಹಾಗೂ ಹಕ್ಕುಗಳ ಮೇಲೆ ದಬ್ಬಾಳಿಕೆಯನ್ನು ಕಂಡು ಅವರು ರೋಸಿ ಹೋಗಿದ್ದರು. ತಮ್ಮ ಆತ್ಮಗೌರವದ ಮೇಲೆ ಪದೇ ಪದೇ ನಡೆಯುತ್ತಿದ್ದ ದೌರ್ಜನ್ಯ ಅವರನ್ನು ಕಂಗೆಡಿಸಿತ್ತು. ಅದನ್ನು ವಿರೋಧಿಸುವ ಮಾರ್ಗವನ್ನು ಅವರು ಬಂದೂಕಿನಲ್ಲಿ ಕಂಡುಕೊಂಡರು.
ತಮ್ಮಿಂದ ಆದ ತಪ್ಪನ್ನು ಟರ್ಕಿಯ ಸರ್ಕಾರ ಮತ್ತು ಜನರು ಒಪ್ಪಿಕೊಂಡ ನಂತರವಷ್ಟೇ ಶಾಂತಿ ಮರುಸ್ಥಾಪನೆ ಪ್ರಕ್ರಿಯೆ ಸಾಧ್ಯವಾಯಿತು. ಈ ಕೀರ್ತಿ ಟರ್ಕಿಯ ಪ್ರಧಾನಿ ರೆಸೆಪ್ ತಯ್ಯಿಪ್ ಎರ್ಡೊಗಾನ್ ಹಾಗೂ ಜೈಲಿನಲ್ಲಿದ್ದ ಕುರ್ದ್ ಜನಾಂಗದ ನಾಯಕ, ಪಿ.ಕೆ.ಕೆ. ಪ್ರತ್ಯೇಕವಾದಿಗಳ ಗುಂಪಿನ ಮುಖ್ಯಸ್ಥ ಅಬ್ದುಲ್ಲ ಒಕಲಾನ್ ಅವರಿಗೆ ಸಲ್ಲಬೇಕು.
ಅದೇ ರೀತಿ ಇಸ್ರೇಲ್ ಕೂಡಾ ನಿಜವಾಗಿಯೂ ಶಾಂತಿ ಬಯಸುವುದಾದರೆ, ರಕ್ತಪಾತ ಕೊನೆಗಾಣಿಸುವುದಾದರೆ ಮೊದಲು ತನ್ನಿಂದಾದ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಟರ್ಕಿಗೆ ಕುರ್ದಿಸ್ತಾನ್ ವರ್ಕರ್‍್ಸ ಪಾರ್ಟಿ (ಪಿ.ಕೆ.ಕೆ) ಸಮಸ್ಯೆಯಾದಂತೆ ಇಸ್ರೇಲ್‌ಗೆ ಉಗ್ರ ಸಂಘಟನೆ ‘ಹಮಾಸ್‘ ದೊಡ್ಡ ತಲೆ ನೋವಾಗಿದೆ. ಕುರ್ದ್ ಜನಾಂಗದಂತೆ ‘ಹಮಾಸ್’ ಕೂಡಾ ಗೆರಿಲ್ಲಾ ಯುದ್ಧದಲ್ಲಿ ಎತ್ತಿದ ಕೈ.
ಇಸ್ರೇಲ್ ಇಡಬೇಕಿದೆ ಜಾಣ್ಮೆಹೆಜ್ಜೆ
ಅರಬ್ ರಾಷ್ಟ್ರಗಳ ಬೆಂಬಲದಿಂದ ‘ಹಮಾಸ್’ ಯೆಹೂದಿಗಳ ರಾಷ್ಟ್ರ ಇಸ್ರೇಲ್ ನಿರ್ನಾಮಕ್ಕಾಗಿ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುತ್ತಲೇ ಇದೆ. ವಿಧ್ವಂಸಕ ಕೃತ್ಯವನ್ನು ಹಮಾಸ್ ನಿಲ್ಲಿಸಬೇಕು. ಆದರೆ, ಇದು ಸಾಧ್ಯವೇ? ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ನಿಜವಾಗಿಯೂ ತಮ್ಮ ದೇಶಕ್ಕೆ ಏನಾದರೂ ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ಟರ್ಕಿಯಿಂದ ಪಾಠ ಕಲಿಯುವುದು ಬಹಳಷ್ಟಿದೆ. ದಶಕಗಳ ಕಾಲ ಭಯೋತ್ಪಾದನೆಯಿಂದ ನಲುಗಿದ್ದ ಟರ್ಕಿಯಲ್ಲಿ ಈಗ ಶಾಂತಿ ನೆಲೆಸಿದೆ.
ಈ ದಿಸೆಯಲ್ಲಿ ಆ ರಾಷ್ಟ್ರದ ಪ್ರಧಾನಿ ಎರ್ಡೊಗಾನ್ ಪ್ರಯತ್ನ ಹಾಗೂ ಇಟ್ಟ ದಿಟ್ಟ ಹೆಜ್ಜೆ ನೆತನ್ಯಾಹು ಅವರಿಗೆ ಮಾದರಿಯಾಗಬೇಕು. ನೆತನ್ಯಾಹು ಪ್ಯಾಲೆಸ್ಟೀನ್ ಜತೆ ಶಾಂತಿ ಮಾತುಕತೆಗೆ ಮುಂದಾಗಬೇಕು. ಅಂದಾಗ ಮಾತ್ರ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ದಶಕಗಳಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಸಾಧ್ಯ.
ಟರ್ಕಿಯಲ್ಲಿ ಸಂಘರ್ಷ ಕೊನೆಗಾಣಿಸಲು ಉದಾರವಾದಿಗಳು ನಡೆಸಿದ ನಿರಂತರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಟರ್ಕಿಯ ಜನರು ತಮ್ಮ ಸರ್ಕಾರದ ತಪ್ಪನ್ನು ಮತ್ತು ಕುರ್ದ್ ಜನಾಂಗದವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಯಾರೂ ಹುಟ್ಟುತ್ತಲೇ ಭಯೋತ್ಪಾದಕರಾಗಿರುವುದಿಲ್ಲ. ಸರ್ಕಾರದ ನಿರಂಕುಶ ಆಡಳಿತದಲ್ಲಿ ನಲುಗಿದ ಜನಾಂಗದ ಮನಸ್ಥಿತಿ ಹಾಗೂ ಅನುಭವಿಸಿದ ಯಾತನೆ ಅವರನ್ನು ಉಗ್ರರನ್ನಾಗಿ ಮಾಡುತ್ತದೆ ಎಂಬ ಸತ್ಯ ಟರ್ಕಿಗಳಿಗೆ ಅರಿವಾಗಿದೆ.
ಭಾವನಾತ್ಮಕವಾಗಿ ಗೆದ್ದ ಪ್ರಧಾನಿ
ಟರ್ಕಿಯ ಅಧ್ಯಕ್ಷ ಎರ್ಡೋಗಾನ್ ಎಂದೂ ಕುರ್ದ್ ಜನಾಂಗದವರಿಗೆ ‘ಭಯೋತ್ಪಾದಕರು’ ಅಥವಾ ‘ಉಗ್ರರು’ ಎಂಬ ಶಬ್ದಗಳನ್ನು ಪ್ರಯೋಗಿಸಲಿಲ್ಲ. ಬದಲಾಗಿ ‘ಯಾವ ತಾಯಿಯೂ ಇನ್ನು ಮುಂದೆ ಕಣ್ಣೀರಿಡುವುದು ಬೇಡ’ ಎಂದು ಮನವಿ ಮಾಡಿಕೊಂಡರು. ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿತೆಂದರೆ ಪ್ರಧಾನಿಯ ಈ ಭಾವನಾತ್ಮಕ ಮನವಿ ಎಲ್ಲರ ಮನ ತಟ್ಟಿತು. ಕುರ್ದ್ ನಾಯಕರೊಂದಿಗೆ ಪ್ರಧಾನಿ ನಡೆಸಿದ ಶಾಂತಿ ಮಾತುಕತೆ ಫಲ ನೀಡಿದವು.
ಪಿ.ಕೆ.ಕೆ., ಸರ್ಕಾರ ಹಾಗೂ ಸೇನೆಯ ಕಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾದರೂ ಅವರು ತಮ್ಮ ಪ್ರಯತ್ನ ಕೈಬಿಡಲಿಲ್ಲ. ಈ ದಿಸೆಯಲ್ಲಿ ತಾವು ಕ್ರಮಿಸುವ ಹಾದಿ ಕಠಿಣ ಎಂಬ ಸ್ಪಷ್ಟ ಅರಿವು ಎರ್ಡೋಗಾನ್ ಅವರಿಗಿತ್ತು. ಇವರ ಪ್ರಯತ್ನದ ನಡುವೆಯೂ ಟರ್ಕಿ ಮತ್ತು ಕುರ್ದ್ ಕಾದಾಟ ಮುಂದುವರೆದಿತ್ತು. ಕೊನೆಗೆ ದೀರ್ಘ ಸಂಘರ್ಷದ ಹಾದಿ ಸಾಕೆನಿಸಿ ರಾಜಿ ಹಾದಿಯತ್ತ ತಿರುಗಿತ್ತು.
ಗಟ್ಟಿ ನಿರ್ಧಾರ ಬೇಕು
ಟರ್ಕಿಯ ರೀತಿ ಇಸ್ರೇಲ್ ಕೂಡಾ, ಪರಿಸ್ಥಿತಿಯ ಗತಿಯನ್ನೇ ಬದಲಿಸುವಂತಹ ನಿರ್ಣಾಯಕ ನಿರ್ಧಾರಕ್ಕೆ ಬಾರದ ಹೊರತು ಪರಿಸ್ಥಿತಿ ಬದಲಾಗದು. ಇಸ್ರೇಲ್ ನಾಯಕರು, ರಾಜಕೀಯ ಮುಖಂಡರು, ನೀತಿ ನಿರೂಪಕರು ‘ಎಲ್ಲ ಭಯೋತ್ಪಾದಕರನ್ನೂ ಕೊಲ್ಲಿ’ ಎಂಬ ಹಳೆಯ ಸಿದ್ಧಾಂತಕ್ಕೆ ಜೋತು ಬಿದ್ದರೆ 90ರ ದಶಕದಲ್ಲಿ ಟರ್ಕಿ ಅನುಭವಿಸಿದ್ದ ಶೋಚನೀಯ ಸ್ಥಿತಿಯಲ್ಲಿಯೇ ತೊಳಲಾಡಬೇಕಾಗುತ್ತದೆ. ಪ್ರತಿನಿತ್ಯ ರಕ್ತದಲ್ಲಿ ಕೈತೊಳೆಯಬೇಕಾಗುತ್ತದೆ.
ಒಬ್ಬ ಭಯೋತ್ಪಾದಕ ಸತ್ತರೆ ಆತನ ಅಣ್ಣ ಅಥವಾ ತಮ್ಮ, ಅಕ್ಕ ಅಥವಾ ತಂಗಿಯ ಮಗ ಸೇಡಿಗಾಗಿ ಬಂದೂಕು ಹಿಡಿಯುತ್ತಾರೆ. ಹಿಂಸೆಯ ಚಕ್ರ ಮತ್ತೆ ಮುಂದುವರಿಯುತ್ತದೆ. ಆಗ ಇಸ್ರೇಲಿಗಳಾಗಲಿ, ಪ್ಯಾಲೆಸ್ಟೀನ್‌ಗಳಾಗಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಘನತೆ, ಗೌರವದಿಂದ ಜೀವಿಸಲೂ ಸಾಧ್ಯವಿಲ್ಲ.
ಜನಾಂಗೀಯ ಘರ್ಷಣೆಯ ಆಂತರ್ಯದಲ್ಲಿ...
ಗಾಜಾಪಟ್ಟಿಯಲ್ಲಿರುವ ಪ್ಯಾಲೆಸ್ಟೀನಿಯರೆಲ್ಲಾ ಉಗ್ರರಲ್ಲ. ಇದು ಇಸ್ರೇಲಿನಲ್ಲಿರುವ ನನ್ನ ಮಿತ್ರರ ಅಭಿಪ್ರಾಯಕ್ಕೆ ಭಿನ್ನವಾಗಿರಬಹುದು. ಆದರೆ, ನನ್ನ ಪ್ರಾಣ ಉಳಿಸಿದ ಪುಣ್ಯಾತ್ಮ ಒಬ್ಬ ಪ್ಯಾಲೆಸ್ಟೀನಿ.
ಆಗಾಗ ಅವನ ಬಗ್ಗೆ ಚಿಂತಿಸುತ್ತಿರುತ್ತೇನೆ. ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಮಧ್ಯೆ ಕದನ ತೀವ್ರವಾದಾಗಲೆಲ್ಲಾ ಅವನ ಕುರಿತ ಯೋಚನೆ ಹೆಚ್ಚಾಗುತ್ತದೆ. ಗಾಜಾಪಟ್ಟಿಯಲ್ಲಿರುವ ಆತನ ಮನೆ ಏನಾಗಿರಬಹುದೆಂದು ವ್ಯಾಕುಲಗೊಳ್ಳುತ್ತೇನೆ. ಘರ್ಷಣೆ ಹೊತ್ತಿನಲ್ಲಿ ಆತ ಏನು ಮಾಡುತ್ತಿರಬಹುದೆಂಬ ಚಿಂತೆ ಬಹಳವಾಗಿ ಕಾಡುತ್ತದೆ. ಬಹುಶಃ ಆತ ಕೂಡ ನನ್ನ ಬಗ್ಗೆ ಚಿಂತಿಸುತ್ತಿರಬಹುದೇ ಎಂಬ ಆಲೋಚನೆಯೂ ಮೂಡುತ್ತದೆ. ಆ ಪುಣ್ಯಾತ್ಮ ನನ್ನನ್ನು ಬದುಕಿಸದಿದ್ದರೂ ನನಗೆ ಒಳಿತನ್ನೇ ಹಾರೈಸುತ್ತಿದ್ದ...
ಈ ದುರಂತ ನಡೆದದ್ದು1996ರ ಸಮಯದಲ್ಲಿ. ನಾನಾಗ 13 ವರ್ಷದ ಬಾಲಕ. ಆಗತಾನೆ ನನಗೆ ಮಿಟ್ಸ್‌ವಾ (ಯೆಹೂದಿಯರ ಧಾರ್ಮಿಕ ಉಪದೇಶ) ನಡೆದಿತ್ತು. ನನ್ನ ಪೋಷಕರು ರಮತ್ ಗಾನ್‌ನಲ್ಲಿದ್ದ ಮನೆ ನವೀಕರಣ ಕಾರ್ಯ ಕೈಗೊಂಡಿದ್ದರು. ಈ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರ ಗಾಜಾದಿಂದ ಪ್ಯಾಲೆಸ್ಟೀನಿ ಕೆಲಸಗಾರರನ್ನು ಕರೆತಂದಿದ್ದ.
ಬಚ್ಚಲು ಮನೆಯಲ್ಲಿ ಹೊಸದಾಗಿ ಅಳವಡಿಸಿದ್ದ ಕಿಟಕಿ ತೆರೆಯಲು ಪ್ರಯತ್ನಿಸುತ್ತಿದ್ದೆ, ಆಗಲಿಲ್ಲ. ಸ್ವಲ್ಪ ಜೋರಾಗಿ ತಳ್ಳಿದೆ. ಗಾಜನ್ನು ಸೀಳಿಕೊಂಡು ಕೈ ಆಚೆ ಹೋಯಿತು. ಬಲಗೈ ತೋಳನ್ನು ಗಾಜು ಸೀಳಿತು.
ರಕ್ತದ ಮಡುವಿನಲ್ಲಿದ್ದ ನನ್ನತ್ತ ಮನೆ ನವೀಕರಣ ಮಾಡುತ್ತಿದ್ದ ಕೆಲಸಗಾರ ಫೌಜಿ (ನನ್ನ ಪ್ರಾಣ ಉಳಿಸಿದ ಪ್ಯಾಲೆಸ್ಟೀನಿ ಪುಣ್ಯಾತ್ಮ) ಓಡೋಡಿ ಬಂದ. ರಕ್ತ ಸೋರುತ್ತಿದ್ದ ನಾಳವನ್ನು ಬಿಗಿಯಾಗಿ ಅದುಮಿ ಹಿಡಿದ. ‘ಹುಡುಗ ಗಾಯ ಮಾಡಿಕೊಂಡಿದ್ದಾನೆ ಬೇಗ ಬನ್ನಿ ಎಂದು ಚೀರಿದ’.
ಆದರೆ, ಮನೆಯ ಇನ್ನೊಂದು ಬದಿಗೆ ಇದ್ದ ನನ್ನ ಮಲತಂದೆ ಸಿಲ್ವನ್ ಶಲೊಮ್ (ಇಸ್ರೇಲ್ ಸಂಪುಟದ ಕಾಯಂ ಸದಸ್ಯ) ಇತ್ತ ಕಣ್ಣು ಹಾಯಿಸದೆ, ‘ಸ್ವಲ್ಪ ಇರು ಡ್ರೆಸ್ ಮಾಡಿಕೊಂಡು ಬರುತ್ತೇನೆ’ ಎಂದು ಅಲ್ಲಿಂದಲೇ ಹೇಳಿದರು. ಇದನ್ನು ಕೇಳಿದ ಫೌಜಿ ಮಲತಂದೆಯತ್ತ ಅಬ್ಬರಿಸಿ, ‘ಕೂಡಲೇ ಬನ್ನಿ’ ಎಂದು ಕೂಗಿ ಕೂಗಿ ಕರೆಯುತ್ತಿದ್ದ. ಆದರೂ ಇತ್ತ ಲಕ್ಷ್ಯ ನೀಡಿದ ಇಸ್ರೇಲಿ ಸರ್ಕಾರದ ಹಿರಿಯ ಸಚಿವ ಅಲಂಕಾರ ಮಾಡಿಕೊಳ್ಳುತ್ತಿದ್ದರು. ರಕ್ತನಾಳದ ಮೇಲಿನ ಬಿಗಿಹಿಡಿತವನ್ನು ಸ್ವಲ್ಪವೂ ಕಡಿಮೆ ಮಾಡದೆ, ನನ್ನನ್ನು ಅನಾಮತ್ ಎತ್ತಿಕೊಂಡು ಆಸ್ಪತ್ರೆಯತ್ತ ಓಡಿದ ಫೌಜಿ. ಈ ಚಿತ್ರಣ ಇನ್ನೂ ಕಣ್ಣಮುಂದೆಯೇ ಇದೆ.
ವೈದ್ಯರು ಸತತ ಏಳು ತಾಸು ಶಸ್ತ್ರ ಚಿಕಿತ್ಸೆ ನಡೆಸಿದರು. ‘ಫೌಜಿ ಇಲ್ಲದಿದ್ದರೆ ನೀನು ಬದುಕುಳಿಯುತ್ತಿರಲಿಲ್ಲ’ ಎಂದು ವೈದ್ಯರು ಹೇಳಿದ್ದು ಈಗಲೂ ನನ್ನ ಕಿವಿಯಲ್ಲಿ ಮೊರೆಯುತ್ತಿದೆ.
ಒಂದು ತಿಂಗಳು ಆಸ್ಪತ್ರೆಯಲ್ಲೇ ಇದ್ದೆ. ಫಿಸಿಯೋಥೆರಪಿ, ವಿದ್ಯುತ್ ಶಾಕ್, ಲೇಸರ್ ಚಿಕಿತ್ಸೆ ಪಡೆದ ಮೇಲೂ ನನ್ನ ಬಲಗೈ ಅಷ್ಟೇನು ಸ್ವಾಧೀನದಲ್ಲಿಲ್ಲ. ನನ್ನ ಜೀವ ಉಳಿಸಿದ ಫೌಜಿಗೆ ನನ್ನ ಪೋಷಕರು ಹೃದಯಪೂರ್ವಕ ಧನ್ಯವಾದ ಹೇಳಿದರಂತೆ. ಅವನಿಗೆ ಬೇಕಾದ ಸಹಾಯ ನೀಡುವುದಾಗಿಯೂ ತಿಳಿಸಿದರಂತೆ. ಆದರೆ, ಆ ಪುಣ್ಯಾತ್ಮ ಇದ್ಯಾವುದನ್ನು ಅಪೇಕ್ಷಿಸದೆ ಬಂದಹಾಗೇ ಹೊರಟು ಹೋದ ಎಂದು ನಂತರ ತಿಳಿಯಿತು.
ಇದು ಘಟಿಸಿ ಹತ್ತಿರ ಹತ್ತಿರ ಎರಡು ದಶಕಗಳಾಗುತ್ತಿವೆ. ರಾಜಕೀಯ ಚಿತ್ರಣ ಬದಲಾಗಿರುವುದು ಮಾತ್ರವಲ್ಲ, ಕುಲಗೆಟ್ಟು ಹೋಗಿದೆ. ಗಾಜಾ ಈಗ ಸ್ವಾಯತ್ತ ನಾಡು, ಅಲ್ಲಿ ಹಮಾಸ್‌ಗಳ ಆಡಳಿತ ಇದೆ. ಇತ್ತೀಚೆಗೆ ಮೂವರು ಇಸ್ರೇಲಿ ಹುಡುಗರನ್ನು ಅಪಹರಿಸಿ, ಹತ್ಯೆ ಮಾಡಲಾಯಿತು. ಇದಕ್ಕೆ ಸಂತೋಷ ಪಟ್ಟ ಬಹುಶಃ ವಿಶ್ವದ ಏಕೈಕ ಆಡಳಿತ ಹಮಾಸ್‌ಗಳದ್ದು!
ಫೌಜಿಗೆ ಈಗ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅನುಮತಿ ಮಾತ್ರವಲ್ಲ, ಇಸ್ರೇಲ್ ಪ್ರವೇಶಕ್ಕೂ ಅನುಮತಿ ಇರುವಂತೆ ಕಾಣೆ. ಬಹುಶಃ ಈಗ ಅವನು ಹಮಾಸ್‌ಗಳ ಪರವಾಗಿ ಕೆಲಸ ಮಾಡುತ್ತಿರಬೇಕು. ಟೆಲ್ ಅವೀವ್, ಜೆರುಸಲೇಂ, ಹೈಫಾಗಳತ್ತ ರಾಕೆಟ್‌ಗಳನ್ನು ಹಾರಿಸುತ್ತಿರಬಹುದು. ಹಿಂದೊಮ್ಮೆ ಈತ ಯಹೂದಿ ಬಾಲಕನೊಬ್ಬನ ಜೀವ ಉಳಿಸಿದ ಎಂದು ಆತನ ಸ್ನೇಹಿತರಿಗೆ ತಿಳಿದರೆ, ಆ ರಾಕೆಟ್‌ಗಳನ್ನು ಫೌಜಿಯತ್ತಲೇ ತಿರುಗಿಸಬಹುದೆನೋ?
ಜನಾಂಗೀಯ ಘರ್ಷಣೆಯಲ್ಲಿ ತೊಡಗಿರುವ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ಗಳ ಸಾಮಾನ್ಯ ಜನರ ಮಧ್ಯೆ ಸಂವಹನದ ಎಲ್ಲಾ ಮಾರ್ಗಗಳು ಈಗ ಬಂದ್ ಆಗಿವೆ. ಪ್ಯಾಲೆಸ್ಟೀನ್ ವ್ಯಕ್ತಿಯೊಬ್ಬ ನನ್ನ ಜೀವ ಉಳಿಸಿದ ಎಂದು ನನ್ನ ಕಿರಿಯ ಸೋದರ – ಸೋದರಿಯರಿಗೆ ಹೇಳಿದರೆ ಅವರು ನನ್ನನ್ನು ಗುಮಾನಿಯಿಂದಲೇ ನೋಡುತ್ತಾರೆ.
ಹಿಂದೆ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯರು ಒಂದೇ ಕಡೆ ಶಾಂತಿಯುತವಾಗಿ ಬದುಕಿದ್ದರು ಎಂಬುದನ್ನು ಅವರು ಕಲ್ಪಿಸಿಕೊಳ್ಳಲು ಈಗ ಸಾಧ್ಯವಿಲ್ಲ.
ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯರು ಈಗ ತಮ್ಮ ತಮ್ಮ ಮುಖಂಡರ ಕಾರ್ಯಸೂಚಿಯ ದಾಳಗಳಾಗಿದ್ದಾರೆ. ಈ ಜನಾಂಗೀಯ ಘರ್ಷಣೆ ನೋಡಿದರೆ ಮನುಷ್ಯತ್ವ ಕಳೆದುಕೊಂಡು ಹಗೆತನ ಸಾಧಿಸುವ ಹಟಕ್ಕೆ ಬಿದ್ದಿರುವಂತೆ ಕಾಣುತ್ತದೆ. ಕೆಲವು ವರ್ಷಗಳ ಹಿಂದೆ ಒಟ್ಟಿಗೆ ವಾಸಿಸುತ್ತಿದ್ದೆವು ಎಂಬುದನ್ನು ನೆನಪು ಮಾಡಿಕೊಳ್ಳುವುದಕ್ಕಿಂತ ಪರಸ್ಪರ ಕೊಲ್ಲುವುದೇ ಸುಲಭ ಎಂಬಂತಹ ಸನ್ನಿವೇಶ ಇದೆ.
ಬಲ ರಟ್ಟೆಯ ಸ್ವಾಧೀನ ಕಳೆದುಕೊಂಡ ಮೇಲೆ ನಾನು ಅಕ್ಷರಶಃ ಎಡಚನಾದೆ. ಈ ಕಾರಣದಿಂದ ಸೇನೆಗೆ ಸೇರಲು ಶತಪ್ರಯತ್ನ ಮಾಡಬೇಕಾಯಿತು. ಸೇನೆ ಸೇರಿದ ಮೇಲೂ ನಾನು ನನ್ನ ರಾಷ್ಟ್ರವನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿದೆ. ಸೇನೆಯಲ್ಲಿ ನನ್ನ ಕೆಲಸ ಪ್ಯಾಲೆಸ್ಟೀನಿಯರ ಶಾಲಾ ಪಠ್ಯಕ್ರಮದಲ್ಲಿರುವ ಯಹೂದಿ ವಿರೋಧಿ ಅಂಶಗಳನ್ನು ಬಯಲಿಗೆ ತರುವುದಾಗಿತ್ತು. ಈ ಯಹೂದಿ ವಿರೋಧಿ ಧೋರಣೆಗೆ ನಾನು ಕೊಲೆಗಡುಕತನ ಮತ್ತು ನರಮೇಧದ ಹಣೆಪಟ್ಟಿ ಹಚ್ಚಬೇಕಿತ್ತು.
ಸೇನಾ ನೌಕರಿ ತೊರೆದ ನಂತರ ಗಾಜಾ ಗಡಿಗೆ ಇರುವ ಇಸ್ರೇಲಿ ಪಟ್ಟಣಗಳಲ್ಲಿ ಓಡಾಡುತ್ತಿದ್ದೆ. ಸೈರನ್ (ಎಚ್ಚರಿಕೆ ಗಂಟೆ) ಮೊಳಗಿದರೆ ಸುರಕ್ಷಿತ ಆಶ್ರಯಕ್ಕಾಗಿ ಓಡಬೇಕಿತ್ತು. ಹೀಗೆ ಓಡಿ ಆಶ್ರಯ ಪಡೆದಿದ್ದರಿಂದಲೇ ಈಗ ಇಸ್ರೇಲ್ ಹೃದಯಭಾಗಕ್ಕೆ ಬರಲು ಸಾಧ್ಯವಾಯಿತು. ಈಗಲೂ ಸೈರನ್‌ಗಳು ಮೊಳಗುತ್ತಿವೆ. ಆಲಾಪ ಇದೆ. ಆದರೆ, ವಾಸ್ತವ ಎದುರಿಸಲಾಗದೆ ಎಲ್ಲಿಗೆ ತಾನೆ ಓಡಿ ಹೋಗಲು ಸಾಧ್ಯ? ಇರುವೆಡೆಯಲ್ಲೇ ಅಡಗಿಕೊಳ್ಳಬೇಕು. ಇದು ನನ್ನಂಥವನಿಗೂ ಮತ್ತು ಪ್ಯಾಲೆಸ್ಟೀನಿಯರಿಗೂ ಇರುವ ಸಂದರ್ಭದ ಒತ್ತಡ.
ಗಾಜಾದಲ್ಲಿರುವ ಬಹುತೇಕ ಪ್ಯಾಲೆಸ್ಟೀನಿಯರು ರಷ್ಯಾದ ವೈಮಾನಿಕ ನೆರವಿನ ಮೇಲೆ ಬದುಕು ದೂಡುತ್ತಿದ್ದಾರೆ ಎಂಬುದನ್ನು ನಂಬುವುದು ಕಷ್ಟವಾದರೂ ಅದೇ ವಾಸ್ತವ. ಬಹುತೇಕ ಪ್ರಜಾತಂತ್ರ ಮಾರ್ಗದಲ್ಲೇ ಆಯ್ಕೆ ಆಗಿರುವ ಹಮಾಸ್‌ಗಳ ಗುರಿ ಇಸ್ರೇಲ್‌ನ ನಾಮಾವಶೇಷ.
ಇತ್ತ ಇಸ್ರೇಲ್ ಎಡಪಂಥೀಯರು ಗಾಜಾ ಮೇಲೆ ದಾಳಿ ನಡೆಸುವುದನ್ನು ಖಂಡಿಸುತ್ತಾರೆ. ಆದರೆ, ಇಂತಹದೊಂದು ಸಣ್ಣ ದನಿ ಕೂಡ ಗಾಜಾ ಕಡೆಯಿಂದ ವ್ಯಕ್ತವಾಗುತ್ತಿಲ್ಲ. ಕದನವಿರಾಮ ಉಲ್ಲಂಘನೆ, ನಾಗರಿಕರ ಮೇಲೆ ರಾಕೆಟ್ ದಾಳಿ ಮುಂದುವರೆದೇ ಇದೆ. ಹೀಗಿರುವಾಗ ಗಾಜಾ ಮೇಲಿನ ದಾಳಿಯನ್ನು ಯಾವ ರೀತಿ ವಿರೋಧಿಸುವುದು?
ಕುಳಿತಲ್ಲೇ ಸನ್ನಿವೇಶವನ್ನು ವಿಶ್ಲೇಷಿಸುವುದು ಸುಲಭ. ಆದರೆ, ಅನೇಕ ವರ್ಷಗಳಿಂದ ಯಾವ ದೇಶದವನೆಂದು ಹೇಳಿಕೊಳ್ಳಲಾಗದ ನಿರ್ಗತಿಕ ಸ್ಥಿತಿ ಅನುಭವಿಸಿದವರ ನೋವನ್ನು ಚಿತ್ರಿಸಲು ಸಾಧ್ಯವೇ? ಬಹುಶಃ ಇಂತಹ ಸ್ಥಿತಿಯಲ್ಲಿ ನಾನಿದ್ದಿದ್ದರೆ ಹತಾಶನಾಗಿ ಎಂದೋ ಕಳೆದುಹೋಗುತ್ತಿದ್ದೆ. ಆದರೂ, ಸ್ವಾತಂತ್ರ್ಯದ ನ್ಯಾಯೋಚಿತ ಹೋರಾಟದ ಮಾರ್ಗ ಹಿಂಸಾಚಾರ ಅಲ್ಲ, ಮುಗ್ಧರನ್ನು ಕೊಲ್ಲುವುದಲ್ಲ.
ಇಸ್ರೇಲಿಗಳಿಗೆ ತಮ್ಮನ್ನು ಮತ್ತು ತಮ್ಮ ದೇಶವನ್ನು ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕು ಇದ್ದೇ ಇದೆ. ಹಾಗಂತ ‘ಅರಬರನ್ನು ಸಿಕ್ಕಲ್ಲಿ ಕೊಚ್ಚಿ ಹಾಕಿ’ ಎಂದು ಢಾಣಾಡಂಗುರ ಸಾರುವುದು ಸಾಧುವೇ?
ಈಗಲು ಎರಡೂ ಕಡೆ ಮನುಷ್ಯತ್ವ ಇರುವವರು ಇದ್ದಾರೆ. ಅವರ ಸಂಖ್ಯೆ ಕಡಿಮೆ ಎಂಬುದು ಮುಖ್ಯವಲ್ಲ. ಅಂಥವರ ಇದ್ದಾರೆಂಬುದೇ ಸಮಾಧಾನದ ಸಂಗತಿ. ಒಮ್ಮೆ ಅಬ್ರಹಾಂ ದೇವರಲ್ಲಿ ಕೇಳಿದ: ‘ಸೋಡಮ್ ಮತ್ತು ಗೊಮೊರಾಗಳಲ್ಲಿ (ದುಷ್ಟರು ಇರುವ ಪಟ್ಟಣ) ಕನಿಷ್ಠ ಹತ್ತು ಮಂದಿ ನ್ಯಾಯೋಚಿತವಾಗಿರುವವರನ್ನು ಬದುಕಲು ಬಿಡು’.
ದ್ವೇಷಾಸೂಯೆಗಳಿಲ್ಲದೆ ಬದುಕಲು ಸಾಧ್ಯವಿದೆ. ಜನರು ಎಷ್ಟು ಪ್ರಬಲರಾಗಿರುತ್ತಾರೋ ಸರ್ಕಾರ ಕೂಡ ಅಷ್ಟೇ ಪ್ರಬಲವಾಗಿರುತ್ತದೆ. ಆದ್ದರಿಂದ ಮನುಷ್ಯತ್ವದ ಬಗ್ಗೆ ಮಿಡಿಯುವವರಿಗೆ ಬೆಂಬಲ ಹೆಚ್ಚಾಗಬೇಕು. ಆಗ ಮಾತ್ರ ಸಂಘರ್ಷ ಕೊನೆಗಾಣಲು ಸಾಧ್ಯ. ಸಂಘರ್ಷ ನಿಂತರೆ ಜನರ ಸಂಪರ್ಕ, ಹೃದಯಗಳ ಸಂಪರ್ಕ ಹೆಚ್ಚುತ್ತದೆ. ಮಾತುಕತೆಗೆ ಅವಕಾಶ ಆಗುತ್ತದೆ. ನಾಯಕರಿಗಿಂತ ಜನರೇ ಇಂತಹ ಮಾತನ್ನು ಹೃದಯಪೂರ್ವಕವಾಗಿ ಆಡುತ್ತಾರೆ.
ಎಲ್ಲಾ ಪ್ಯಾಲೆಸ್ಟೀನಿಯರು ಉಗ್ರರಲ್ಲ ಎನ್ನುವುದನ್ನು ಇಸ್ರೇಲಿಗಳು ಅರ್ಥ ಮಾಡಿಕೊಳ್ಳಬೇಕು. ಇಸ್ರೇಲ್‌ನ ಹೋರಾಟ ಉಗ್ರರ ವಿರುದ್ಧವೇ ಹೊರತು, ಪ್ಯಾಲೆಸ್ಟೀನಿಯರ ವಿರುದ್ಧ ಅಲ್ಲ. ರಾಕೆಟ್ ಮೂಲಕ ಸಿಡಿಸುತ್ತಿರುವ ಜನಾಂಗೀವಿಶೇಷ
ಮಳೆಯೊಂದಿಗೆ ಮಾರಣಾಂತಿಕ ಮಲೇರಿಯಾ ಕೂಡ ಕಾಲಿಡಲು ಸಜ್ಜಾಗಿದೆ. ಹೊಸ ಔಷಧವೂ ಮಾರುಕಟ್ಟೆ ಪ್ರವೇಶಿಸುವ ತಯಾರಿ ನಡೆಸಿದ ಸುದ್ದಿಯಿದೆ. ರೋಗಿಗಳು ಸೇವಿಸುವ ಔಷಧ, ಮಾತ್ರೆಗಳು ಕಾಲಕ್ರಮೇಣ ಸೊಳ್ಳೆಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿವೆ. ಸೊಳ್ಳೆಗಳಲ್ಲಿರುವ ಪ್ಲಾಸ್ಮೋಡಿಯಂ ಪರಾವಲಂಬಿ ಸೂಕ್ಷ್ಮಾಣು ಜೀವಿ ಬಹುತೇಕ ರಾಸಾಯನಿಕಗಳಿಗೆ ಒಗ್ಗಿಕೊಳ್ಳುತ್ತ ವೈದ್ಯಕೀಯ ವಿಜ್ಞಾನಿಗಳಿಗೆ ಸವಾಲು ಒಡ್ಡುತ್ತಿದೆ. ಮಲೇರಿಯಾಕ್ಕೆ ಮೊದಲು ವೈದ್ಯರು ನೀಡುತ್ತಿದ್ದ ಮೇಫ್ಲೊಕ್ವಿನ್ ರಾಸಾಯನಿಕವನ್ನು ಒಳಗೊಂಡ ‘ಲಾರಿಯಂ’ ಮಾತ್ರೆ ಬರುಬರುತ್ತ ಯಾವ ಪರಿಣಾಮವನ್ನೂ ಬೀರಲಿಲ್ಲ. ಮತ್ತೆ ಮಲೇರಿಯಾ ಸಾವಿರಾರು ಜನರನ್ನು ಬಲಿ ಪಡೆಯಲು ಆರಂಭಿಸಿತು. ನಂತರ ‘ಆರ್ಟೆಸುನೇಟ್’ ಎಂಬ ಮದ್ದನ್ನು ಕಂಡು ಹಿಡಿಯಲಾಯಿತು.
ಚೀನಾದ ಈ ಸಸ್ಯಜನ್ಯ ಮದ್ದು ಕಳೆದ ಶತಮಾನದ 90ರ ದಶಕದಲ್ಲಿ ರೋಗಿಗಳು ಮತ್ತು ವೈದ್ಯರ ಆಶಾಕಿರಣವಾಯಿತು. ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಲೇ ಸೊಳ್ಳೆಗಳಲ್ಲಿ ಈಗಾಗಲೇ ರೋಗನಿರೋಧಕ ಶಕ್ತಿ ಬೆಳೆದು ಬಿಟ್ಟಿತ್ತು. ಆರ್ಟೆಸುನೇಟ್ ಔಷಧಕ್ಕೆ ಮಲೇರಿಯಾ ಬಗ್ಗಲಿಲ್ಲ. ದೀರ್ಘ ಸಂಶೋಧನೆಯ ನಂತರ ವಿಜ್ಞಾನಿಗಳು ‘ಆರ್ಟೆಮಿಸಿನಿನ್’ ಎಂಬ ಮತ್ತೊಂದು ಸಂಯೋಜಿತ ಚಿಕಿತ್ಸೆ (ಆ್ಯಕ್ಟ್) ಕಂಡುಹಿಡಿದರು. ಸಾವಿನ ಬಾಗಿಲು ಬಡಿಯುತ್ತಿದ್ದ ಸಾವಿರಾರು ರೋಗಿಗಳಲ್ಲಿ ಇದು ಹೊಸ ಚೇತನ ತುಂಬಿತು.
ಆಗ ಮ್ಯಾನ್ಮಾರ್, ಥಾಯ್ಲೆಂಡ್, ಆಫ್ರಿಕಾ ರಾಷ್ಟ್ರಗಳಲ್ಲಿ ಮಲೇರಿಯಾ ಸಾವಿರಾರು ಜೀವಗಳನ್ನು ಬಲಿ ಪಡೆದಿತ್ತು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಈ ರಾಷ್ಟ್ರಗಳಿಗೆ ಸಂಯೋಜಿತ ಔಷಧಿಯನ್ನು ಶಿಫಾರಸು ಮಾಡಲು ಹಿಂದೇಟು ಹಾಕಿತು. ಚಳಿ, ಜ್ವರಕ್ಕೆ ಕಾರಣವಾಗುವ ಸೂಕ್ಷ್ಮಾಣು ಜೀವಿಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಕಳೆದುಕೊಂಡ ಸಾಂಪ್ರದಾಯಿಕ ಔಷಧಗಳಿಂದಾಗಿ 2000–01ರಲ್ಲಿ ಆಫ್ರಿಕಾ ಖಂಡದ ಬುರುಂಡಿಯಲ್ಲಿ ಸಾವಿರಾರು ಜನರು ಮಲೇರಿಯಾಕ್ಕೆ ಬಲಿಯಾದರು.
ಈ ಘಟನೆ ನಂತರ ವಿಶ್ವದ ಮೂಲೆ ಮೂಲೆಗಳಿಂದ ವ್ಯಾಪಕ ಟೀಕೆಗಳನ್ನು ಎದುರಿಸಿದ ವಿಶ್ವ ಆರೋಗ್ಯ ಸಂಸ್ಥೆ ಎಚ್ಚೆತ್ತುಕೊಂಡು ಮಲೇರಿಯಾಕ್ಕೆ ಅಧಿಕೃತವಾಗಿ ‘ಆ್ಯಕ್ಟ್’ ಔಷಧಿಯನ್ನು ಬಳಸುವಂತೆ ಶಿಫಾರಸು ಮಾಡಿತು. ಇತಿಹಾಸ ಮತ್ತೆ ಮರುಕಳಿಸಿತು. ಸೊಳ್ಳೆಗಳು ಮತ್ತೆ ಈ ಶಕ್ತಿಶಾಲಿ ಔಷಧದ ಮೇಲೆ ಪುನಃ ಮೇಲುಗೈ ಸಾಧಿಸಿದವು. ಆ್ಯಕ್ಟ್ ಔಷಧಿಯಲ್ಲಿರುವ ಆರ್ಟೆಮಿಸಿನಿನ್ ಎಂಬ ರಾಸಾಯನಿಕ ಪ್ಲಾಸ್ಮೋಡಿಯಂ ರೋಗಾಣುವನ್ನು ನಿಯಂತ್ರಿಸಲು ವಿಫಲವಾದವು.
ಕಾಂಬೋಡಿಯಾ, ವಿಯೆಟ್ನಾಂ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ರಾಷ್ಟ್ರಗಳಲ್ಲಿ ರೋಗಿಗಳಿಗೆ ಈ ಔಷಧಿ ನೀಡಿದ ನಂತರವೂ ಅವರ ರಕ್ತದಲ್ಲಿ ಹೇರಳವಾಗಿದ್ದ ರೋಗಾಣುಗಳು ಕ್ರಿಯಾಶೀಲವಾಗಿದ್ದವು. ಮಲೇರಿಯಾಕ್ಕೆ ಶಾಶ್ವತ ಹಾಗೂ ಪರಿಣಾಮಕಾರಿಯಾದ ಹೊಸ ಔಷಧ ಕಂಡು ಹಿಡಿಯುವ ಪ್ರಯತ್ನ ಇನ್ನೂ ಮುಂದುವರಿದಿದೆ. ವಿಜ್ಞಾನಿಗಳು ಹಗಲು, ರಾತ್ರಿ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚಾಗುತ್ತಿದೆ.
ಹೊಸ ಔಷಧ ಮಾರುಕಟ್ಟೆಗೆ ಕಾಲಿಡುವ ಮೊದಲು ಸೊಳ್ಳೆ ಪರದೆಗಳ ಬಳಕೆಯೇ ಹೆಚ್ಚು ಸುರಕ್ಷಿತ ಎಂದು ಜನರಿಗೆ ಮನವರಿಕೆ ಮಾಡಬೇಕಿದೆ. ಸೊಳ್ಳೆ ಪರದೆಗಳಿಗಾಗಿ ಸ್ವಲ್ಪ ಹಣ ವಿನಿಯೋಗಿಸಬೇಕಿದೆ. ಇತ್ತೀಚೆಗೆ ಆಗ್ನೇಯ ಏಷ್ಯಾದಲ್ಲಿ ಸೊಳ್ಳೆಗಳು ಸಂಜೆ ಹೊತ್ತು ಬಯಲು ಪ್ರದೇಶದಲ್ಲಿಯೇ ಮನುಷ್ಯರನ್ನು ಕಚ್ಚುತ್ತಿವೆ. ಆಗ ಸೊಳ್ಳೆ ಪರದೆ ಉಪಯೋಗಕ್ಕೆ ಬರುವುದಿಲ್ಲ. ಅಂಥ ಸಮಯದಲ್ಲಿ ಪರಿಣಾಮಕಾರಿ ಔಷಧಿ ಮಾತ್ರ ರೋಗಿಗಳನ್ನು ಬದುಕಿಸಬಲ್ಲದು. ಚಳಿಜ್ವರಕ್ಕೆ ಕಾರಣವಾಗುವ ಪ್ಲಾಸ್ಮೋಡಿಯಂ ಸೂಕ್ಷ್ಮಾಣು ಜೀವಿಯ ಕಾರ್ಯವೈಖರಿ ಅರ್ಥ ಮಾಡಿಕೊಳ್ಳಲು ಏಷ್ಯಾದ ರಾಷ್ಟ್ರಗಳು ವಿಫಲವಾಗಿವೆ. ಉತ್ತರ ಅಮೆರಿಕ, ಯುರೋಪ್, ರಷ್ಯಾ ಅಳವಡಿಸಿಕೊಂಡ ಮಾದರಿಯನ್ನು ಏಷ್ಯಾ ಖಂಡದ ರಾಷ್ಟ್ರಗಳು ಅನುಸರಿಸಬೇಕಿದೆ.
ಕಾಂಬೋಡಿಯಾ, ವಿಯೆಟ್ನಾಂ ಹಾಗೂ ಥೈಯ್ಲೆಂಡ್–ಮ್ಯಾನ್ಮಾರ್ ಗಡಿಯಲ್ಲಿ ಮಲೇರಿಯಾ ನಿರ್ಮೂಲನೆಗೆ ಅಧ್ಯಯನ ನಡೆದಿದೆ. ಈ ಭಾಗದ ಕೆಲವು ಜನಾಂಗದ ಜನರ ರಕ್ತವನ್ನು ತಪಾಸಣೆಗೆ ಒಳಪಡಿಸಿದಾಗ ರೋಗಾಣುಗಳು ಕಂಡುಬಂದವು. ಆದರೆ, ಅವರ್ಯಾರಿಗೂ ರೋಗ ಲಕ್ಷಣಗಳು ಇರಲಿಲ್ಲ. ಚಿಕಿತ್ಸೆ ಪಡೆಯದಿದ್ದರೂ ಆರೋಗ್ಯವಾಗಿಯೇ ಇದ್ದರು.
ಮಲೇರಿಯಾ ನಿರ್ಮೂಲನೆಗೆ ಸಾಮೂಹಿಕ ಚಿಕಿತ್ಸೆ ಅಗತ್ಯ. ಜನರ ಸಹಭಾಗಿತ್ವ ಮತ್ತು ಸಹಕಾರ ಮುಖ್ಯ. ಈ ಕೆಲಸಕ್ಕೆ ಹಲವಾರು ಅಂತರರಾಷ್ಟ್ರೀಯ ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಮಹತ್ವದ ಕಾರ್ಯದ ನೇತೃತ್ವ ವಹಿಸಬೇಕಿದೆ.
ಉಷ್ಣವಲಯದ ಬಡ ರಾಷ್ಟ್ರಗಳಲ್ಲಿ ಮಲೇರಿಯಾ ಹಾವಳಿಗೆ ಕಡಿವಾಣ ಹಾಕಲು ನಡೆಯುತ್ತಿರುವ ಯೋಜನೆಗೆ ಹರಿದು ಬರುತ್ತಿರುವ ಹಣ ಹಲವು ಸಮಸ್ಯೆಗೆ ಕಾರಣವಾಗಿದೆ. ಇದರಿಂದಾಗಿ ರಾಜಕೀಯ ಮತ್ತು ಅಧಿಕಾರಿಶಾಹಿಗಳ ಜತೆ ಕೆಲವು ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಇದು ಸೃಷ್ಟಿಸಿದೆ. ಹಣ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚುತ್ತಿವೆ. ಮಲೇರಿಯಾವನ್ನು ಸೋಲಿಸಲು ವಿಜ್ಞಾನ ಎಂಬ ಪ್ರಬಲ ಅಸ್ತ್ರ ನಮ್ಮೊಂದಿಗಿದೆ. ಈ ರೋಗ ಮಾನವ ಜನಾಂಗವನ್ನು ಸೋಲಿಸುವ ಮೊದಲು ನಾವು ನಮ್ಮ ಬಳಿ ಇರುವ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆಯಷ್ಟೇ!
Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com
No comments:
Post a Comment