2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು ನ.12ರಿಂದ ಡಿ.7ರವರೆಗೆ ನಡೆಯಲಿದ್ದು, ಡಿ.11ರಂದು ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವಿನ ನಿರ್ಣಾಯಕ ಮಹಾಸಮರ ಎಂದೇ ಬಿಂಬಿತವಾಗಿರುವ ಈ ಐದು ರಾಜ್ಯಗಳ ಫಲಿತಾಂಶ 2019ರ ಲೋಕಸಭೆ ಚುನಾವಣೆಯ ಹಣೆಬರಹ ತೀರ್ಮಾನವಾಗಲಿದೆ.
- ರಾಜಸ್ಥಾನ,
- ಮಧ್ಯಪ್ರದೇಶ,
- ತೆಲಂಗಾಣ,
- ಛತ್ತೀಸ್‍ಗಢ ಮತ್ತು
- ಮಿಜಾರೋಂ
ಶನಿವಾರ ನವದೆಹಲಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ದಿಢೀರನೆ ರಾಜ್ಯಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ, ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ದಿನಾಂಕವನ್ನು ಘೋಷಣೆ ಮಾಡಿದರು. ತಕ್ಷಣವೇ ಐದು ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಯಾಗಿದ್ದು, ಯಾವುದೇ ರೀತಿಯ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ. ಇನ್ನು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ತಮ್ಮ ಕ್ರಿಮಿನಲ್ ಹಿನ್ನೆಲೆಯ ವಿವರಗಳನ್ನು ಕಡ್ಡಾಯವಾಗಿ ಘೋಷಣೆ ಮಾಡಲೇಬೇಕು. ಐದು ರಾಜ್ಯಗಳಲ್ಲಿ ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದ್ದು, ಮತದಾನದ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುವುದು. ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚವಾಗಿ 28 ಲಕ್ಷವನ್ನು ಆಯೋಗ ನಿಗದಿಪಡಿಸಿದೆ ಎಂದು ತಿಳಿಸಿದರು.
ನಕ್ಸಲ್ ಪೀಡಿತ ಛತ್ತೀಸ್‍ಘಡದ 90 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ. ನವೆಂಬರ್ 12ರಂದು ಮೊದಲ ಹಂತದಲ್ಲಿ 18 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ನ.20ರಂದು 2ನೇ ಹಂತದಲ್ಲಿ 72 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಲಿದೆ. ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7ರಂದು ಒಂದೇ ಹಂತದಲ್ಲಿ ಮತದಾನ ನಡೆದರೆ , 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನ.28ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಿಜರೋಂನ 40 ವಿಧಾನಸಭಾ ಕ್ಷೇತ್ರಗಳಿಗೆ ನ.28 ರಂದು ಮತದಾನ ನಡೆದರೆ ಇತ್ತೀಚೆಗಷ್ಟೇ ಅವಧಿಗೂ ಪೂರ್ವ ವಿಸರ್ಜನೆಗೊಂಡಿದ್ದ ತೆಲಂಗಾಣದ 119 ಕ್ಷೇತ್ರಗಳಿಗೆ ಡಿ.7ರಂದು ಮತದಾನ ನಡೆದು ಡಿ.11ರಂದು ಫಲಿತಾಂಶ ಹೊರಬೀಳಲಿದೆ.
# ಎಲ್ಲರಿಗೂ ನಿರ್ಣಾಯಕ :
ಕೇಂದ್ರದಲ್ಲಿ 2ನೇ ಬಾರಿಗೆ ಅಧಿಕಾರ ಹಿಡಿಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧಿಕಾರ ಕಳೆದುಕೊಂಡು ಸಾಲು ಸಾಲು ಚುನಾವಣೆಯಿಂದ ಕೆಂಗೆಟ್ಟಿರುವ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಈ ಚುನಾವಣೆ ನಿರ್ಣಾಯಕವಾಗಲಿದೆ. ಮುಂದಿನ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಅಧಿಕಾರ ಗದ್ದುಗೆ ಹಿಡಿಯ ಬೇಕಾದರೆ ಪಂಚರಾಜ್ಯಗಳ ವಿಧಾನಸಭೆಯನ್ನು ಗೆದ್ದವರಿಗೆ ಮಾತ್ರ ಕೆಂಪುಕೋಟೆ ಒಲಿಯಬಹುದು. ದೇಶದ ಜನತೆಯ ನಾಡಿಮಿಡಿತವನ್ನು ತಿಳಿಯಲು ಈ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದ್ದರೆ ಕಾಂಗ್ರೆಸ್ ಕೂಡ ಕಮಲವನ್ನು ಧೂಳೀಪಟ ಮಾಡಲು ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನೋಟಾ, ವಿಕಲಚೇತನರಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಒದಗಿಸಲಾಗಿದೆ.
No comments:
Post a Comment