ಡಾಲರ್ ಎದುರು ರೂಪಾಯಿ ಸತತವಾಗಿ ಕುಸಿಯುತ್ತಲೇ ಇದೆ ಎನ್ನುವ ಸುದ್ದಿಯನ್ನು ಕೇಳುತ್ತಲೇ ಇದ್ದೇವೆ. ಈ ಏರಿಕೆಯಿಂದಾಗಿ, ಒಂದು ಡಾಲರ್ಗೆ 72ಕ್ಕೂ ಹೆಚ್ಚು ರೂಪಾಯಿಗಳನ್ನು ತೆರಬೇಕಾಗಿದೆ. ಆದರೆ, ಅಮೆರಿಕನ್ ಡಾಲರ್ ಹೇಗೆ ಅಷ್ಟೆಲ್ಲ ಸದೃಢ, ಸಶಕ್ತ ಕರೆನ್ಸಿ ಆಯಿತು ಎನ್ನುವುದು ಗೊತ್ತೇ? ಇದಕ್ಕೆ ಸಂಬಂಧಿಸಿದ ಕೆಲವು ಕುತೂಹಲಕರ ಅಂಶಗಳು ಇಲ್ಲಿವೆ.
| ಶಾ. ರಂಗನಾಥ್
ಅಮೆರಿಕನ್ ಕರೆನ್ಸಿ ಹೆಚ್ಚು ಶಕ್ತಿಯುತ ಹೇಗೆ?
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ರೂಪಾಯಿ ಹಾಗೂ ಡಾಲರ್ ಸರಿಸಮವಾಗಿತ್ತು ಎನ್ನುವುದನ್ನು ಕೇಳಿದ್ದೇವೆ. ಆದರೆ, ಕ್ರಮೇಣ ಡಾಲರ್ ಮೌಲ್ಯ ಏರಿಕೆಯಾಗಿ, ರೂಪಾಯಿ ಅದರ ಎದುರು ದುರ್ಬಲವಾಗಿ, ಈಗ ಇನ್ನೂ ಇಳಿಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇಷ್ಟು ವರ್ಷಗಳಲ್ಲಿ ಡಾಲರ್ ಅದು ಹೇಗೆ ಅಷ್ಟೊಂದು ಸದೃಢ ಕರೆನ್ಸಿಯಾಗಿ ಬೆಳೆಯಿತು ಎನ್ನುವ ಕುತೂಹಲ ಒಮ್ಮೆಯಾದರೂ ಎಲ್ಲರಲ್ಲೂ ಮೂಡಿರುತ್ತದೆ. ಪ್ರಪಂಚದ ಎಲ್ಲ ರಾಷ್ಟ್ರಗಳು ಅಮೆರಿಕದ ಡಾಲರ್ ಮೇಲಿಟ್ಟಿರುವ ಅಚಲ ನಂಬಿಕೆಯೇ ಅದರ ಮೌಲ್ಯ ಹೆಚ್ಚಳಕ್ಕೆ ಕಾರಣ ಎಂದರೆ ಅಚ್ಚರಿಯಾಗಬಹುದು.
ಯಾವುದೇ ದೇಶದ ನಗದಿನ ಬೆಲೆ ನಿರ್ಧಾರವಾಗುವುದು ಆ ದೇಶದ ಬಡ್ಡಿದರ ಮತ್ತು ಹಣದುಬ್ಬರದ ದರದ ಮೇಲೆ. ಯಾವುದೇ ದೇಶದ ಪರಸ್ಪರ ವಿನಿಮಯ ದರ ಮೇಲೆ ತಿಳಿಸಿದ ಆಧಾರದ ಮೇಲೆ ನಿಶ್ಚಯಿತವಾಗುತ್ತದೆ. ಆದರೆ, ಅಮೆರಿಕನ್ ಡಾಲರ್ ಈ ನಿಯಮಕ್ಕೆ ಒಂದು ಅಪವಾದ. ಕಾರಣ, ಪ್ರಪಂಚದ ಹೆಚ್ಚಿನ ಆಮದು, ರಫ್ತು ವ್ಯವಹಾರ ನಡೆಯುವುದೇ ಈ ಯುಎಸ್ ಡಾಲರ್ನಲ್ಲಿ. ಎಲ್ಲ ರಾಷ್ಟ್ರಗಳು (ಸುಮಾರು ಶೇ.80ಕ್ಕಿಂತ ಹೆಚ್ಚು) ತಮ್ಮ ಆಮದು, ರಫ್ತು ವ್ಯತ್ಯಾಸದ ಉಳಿತಾಯವನ್ನು ಅಮೆರಿಕನ್ ಡಾಲರ್ನಲ್ಲೇ ಮಾಡುತ್ತವೆ. ಏಕೆಂದರೆ, ಅಮೆರಿಕನ್ ಟ್ರೆಷರಿ ಬಿಲ್ನಲ್ಲಿ ಉಳಿತಾಯವಾದ ಹಣಕ್ಕೆ ಸರ್ಕಾರದ ಗ್ಯಾರಂಟಿ ಇರುತ್ತದೆ.
ಜಪಾನ್ ದೇಶದ ರಫ್ತು, ಆಮದಿಗಿಂತ ಶೇ.80ಕ್ಕಿಂತ ಹೆಚ್ಚು. ಹಣದುಬ್ಬರ ಇಲ್ಲವೇ ಇಲ್ಲ ಎನ್ನುವಷ್ಟು. ಆದರೂ ಜಪಾನ್ ದೇಶದ ಕರೆನ್ಸಿ ಯೆನ್ ಮೌಲ್ಯ ಯುಎಸ್ ಡಾಲರ್ಗಿಂತ ಬಹಳ ದುರ್ಬಲವಾಗಿರುತ್ತದೆ. ಇದರಿಂದ ನಮಗೆ ತಿಳಿದುಬರುವುದೇನೆಂದರೆ, ಯಾವುದೇ ದೇಶದ ಹಣದ ಮೌಲ್ಯ ನಿರ್ಧರಿಸುವ ಅಂಶಗಳು ಬೇರೆ ಬೇರೆ ಇರುತ್ತವೆ.
ಸಾಲವೇ ಡಾಲರ್ ಮೂಲ!
ವರ್ಷದಿಂದ ವರ್ಷಕ್ಕೆ ಅಮೆರಿಕದ ಡಾಲರ್ನ ಮೌಲ್ಯ ಹೆಚ್ಚಾಗುತ್ತಿರುವುದಕ್ಕೆ ಭಾರತದ ಆರ್ಥಿಕ ತಜ್ಞರೊಬ್ಬರ ಅಭಿಪ್ರಾಯ ಹೀಗಿದೆ. ಇದರ ವೈಪರೀತ್ಯ ಗಮನಾರ್ಹವಾದದ್ದು.
ಜಪಾನ್ ದೇಶವು ಬಹಳ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯವನ್ನು ಮಾಡುತ್ತದೆ, ಹೆಚ್ಚು ಖರ್ಚನ್ನು ಕೂಡ ಮಾಡುವುದಿಲ್ಲ. ಈ ದೇಶದ ರಫ್ತು ವಹಿವಾಟುಗಳು ಆಮದು ಮಾಡಿಕೊಳ್ಳುವುದಕ್ಕಿಂತಲೂ ಬಹಳ ಪಟ್ಟು ಹೆಚ್ಚಾಗಿರುತ್ತದೆ. ಪ್ರತಿ ವರ್ಷ ಜಪಾನ್ ದೇಶದ ರಫ್ತು ಉಳಿತಾಯ 100 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಾಗಿರುತ್ತದೆ. ಆದರೆ, ಆ ದೇಶದ ಆರ್ಥಿಕತೆಯು ದುರ್ಬಲವಾದುದು ಹಾಗೂ ಕುಸಿಯುತ್ತಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತಿದೆ. ಆದರೆ ಅದೇ, ಅಮೆರಿಕ ದೇಶವು ಬಹಳ ಹೆಚ್ಚಿನ ಪ್ರಮಾಣದಲ್ಲಿ ಖರ್ಚುಗಳನ್ನು ಮಾಡುತ್ತದೆ. ಈ ದೇಶದ ಆಮದು ಪ್ರಮಾಣವು ರಫ್ತಿನ ವಹಿವಾಟಿಗಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ. ಪ್ರತಿ ವರ್ಷವೂ 400 ಬಿಲಿಯನ್ ಡಾಲರ್ಗಳಿಗಿಂತಲೂ ಹೆಚ್ಚು ಆಮದು ಬಾಕಿ ಇರುತ್ತದೆ. ಆದರೆ, ಅಮೆರಿಕ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಹಾಗೂ ಬಹಳ ಉತ್ತಮವಾಗುತ್ತಲೇ ಇದೆ ಎಂದು ಎಲ್ಲ ದೇಶಗಳು ಭಾವಿಸುತ್ತಿವೆ.
ಹಾಗಾದರೆ, ಅಮೆರಿಕ ದೇಶವು ಇಷ್ಟೊಂದು ಪ್ರಮಾಣದಲ್ಲಿ ಖರ್ಚು ಮಾಡಲು ಸಂಪತ್ತಿನ ಮೂಲವಾದರೂ ಎಲ್ಲಿದೆ ಎಂದು ಯೋಚಿಸಿದರೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ಈ ದೇಶವು ಪ್ರಪಂಚದ ಅನೇಕ ರಾಷ್ಟ್ರಗಳು – ಜಪಾನ್, ಚೀನಾ ಮತ್ತು ಭಾರತ ದೇಶದಿಂದಲೂ – ಸಾಲವನ್ನು ಪಡೆಯುತ್ತದೆ! ಅಂದರೆ, ಈ ದೇಶಗಳು ಅಮೆರಿಕದಲ್ಲಿ ಡಾಲರ್ನಲ್ಲಿ ಹೂಡಿಕೆಯನ್ನು ಮತ್ತು ಉಳಿತಾಯವನ್ನು ಮಾಡುತ್ತವೆ. ಹೆಚ್ಚಿನ ದೇಶಗಳ ಉಳಿತಾಯಗಳೆಲ್ಲ ಈ ಡಾಲರ್ನಲ್ಲೇ ಆಗುತ್ತಿದೆ.
ಭಾರತ ದೇಶವು ಸುಮಾರು 60 ಬಿಲಿಯನ್ ಡಾಲರ್, ಚೀನಾ ಸುಮಾರು 170 ಬಿಲಿಯನ್ ಡಾಲರ್, ಜಪಾನ್ 100 ಬಿಲಿಯನ್ ಡಾಲರ್ಗಳಿಗಿಂತ ಹೆಚ್ಚು ಪ್ರಮಾಣದ ಹಣವನ್ನು ಅಮೆರಿಕ ದೇಶದ ಸರ್ಕಾರಿ ಸೆಕ್ಯುರಿಟಿಯಲ್ಲಿ ಉಳಿತಾಯ ಮಾಡಿದೆ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ ಅಮೆರಿಕವು ಪ್ರಪಂಚದ ಹಲವಾರು ದೇಶಗಳಿಂದ ಸುಮಾರು ಐದು ಟ್ರಿಲಿಯನ್ ಡಾಲರ್ಗಳಷ್ಟನ್ನು ಸಂಗ್ರಹ ಮಾಡಿದಂತಾಗಿದೆ. ಇದು ಆ ದೇಶದ ಸಾಲವೆಂದೇ ಪರಿಗಣಿತವಾಗುತ್ತದೆ.
ಅಮೆರಿಕ ದೇಶದ ಪ್ರಜೆಗಳು ತಮ್ಮ ಮುಂದಿನ ಮೂರು ವರ್ಷಗಳ ಸಂಪಾದನೆಯನ್ನು ಈಗಲೇ ಖರ್ಚು ಮಾಡುತ್ತಾರೆ ಎಂದು ನಂಬಲಾಗಿದೆ. (ಅಂದರೆ, ಸಾಲ ಮಾಡಿಯೇ ಖರ್ಚುಗಳನ್ನು ಮಾಡುತ್ತಾರೆ.) ಹಾಗಾಗಿ, ಪ್ರಪಂಚದವರೆಲ್ಲ ಉಳಿತಾಯ ಮಾಡುತ್ತಾರೆ, ಅಮೆರಿಕ ದೇಶವು ಖರ್ಚು ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು. ಈ ಸರಣಿ ಇದೇ ರೀತಿ ಮುಂದುವರಿಯಬೇಕಾದರೆ, ಇತರ ದೇಶಗಳು ಅಮೆರಿಕ ದೇಶದಲ್ಲಿ ಪ್ರತಿವರ್ಷ ಸುಮಾರು 750 ಬಿಲಿಯನ್ ಡಾಲರ್ಗಳನ್ನು ಉಳಿತಾಯ ಮಾಡಬೇಕಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಎಲ್ಲಿಯವರೆಗೆ ಪ್ರಪಂಚದ ಎಲ್ಲ ದೇಶಗಳು ಕೂಡ ಅಮೆರಿಕನ್ ಡಾಲರ್ ಮೇಲೆ ಅಚಲವಾದ ನಂಬಿಕೆಯನ್ನು ಇಟ್ಟುಕೊಂಡಿರುತ್ತವೆಯೋ, ಅಲ್ಲಿಯವರೆಗೆ ಅಮೆರಿಕನ್ ಆರ್ಥಿಕತೆಗೆ ಯಾವುದೇ ಬಗೆಯ ತೊಂದರೆಗಳೂ ಎದುರಾಗುವುದಿಲ್ಲ. ಸದ್ಯಕ್ಕಂತೂ ಈ ಪರಿಸ್ಥಿತಿಯಲ್ಲಿ ಬದಲಾವಣೆ ಆಗುವಂತಹ ಯಾವುದೇ ಸಾಧ್ಯತೆಗಳೂ ಇಲ್ಲ ಎನ್ನುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಆರ್ಥಿಕ ತಜ್ಞರು.
ಡಾಲರ್ ಮೇಲೆ ನಂಬಿಕೆ
ಪ್ರಪಂಚದ ಹೆಚ್ಚು ರಾಷ್ಟ್ರಗಳು ಡಾಲರ್ (ಅಮೆರಿಕನ್ ಕರೆನ್ಸಿ) ಹೆಚ್ಚು ಶಕ್ತಿಯುತವಾದದ್ದು ಮತ್ತು ನಂಬಿಕೆಯುಳ್ಳದ್ದೆಂದು ಸಂಪೂರ್ಣವಾಗಿ ನಂಬಿವೆ. ಇದಕ್ಕೆ ಅಮೆರಿಕ ದೇಶದ ಆರ್ಥಿಕ ನೀತಿಗಳು ಸಹ ಕಾರಣವಾಗಿವೆ. ಹೆಚ್ಚಿನ ಬೆಲೆಬಾಳುವ ವಸ್ತುಗಳಾದ ಚಿನ್ನ, ಬೆಳ್ಳಿ ಮುಂತಾದ ವಸ್ತುಗಳ ಬೆಲೆಗಳು ಅಮೆರಿಕನ್ ಡಾಲರ್ನಲ್ಲಿಯೇ ನಿರ್ಧಾರವಾಗುತ್ತವೆ. ಹಾಗಾಗಿ, ಇವುಗಳ ಪಾವತಿ ಸಹ ಡಾಲರ್ನಲ್ಲಿಯೇ ಆಗುತ್ತದೆ. ಇದು ಪರೋಕ್ಷವಾಗಿ ಯುಎಸ್ ಡಾಲರ್ನ ಬೇಡಿಕೆಯನ್ನು ಹೆಚ್ಚು ಉಂಟುಮಾಡುತ್ತದೆ. ಇನ್ನು, ಬಹುತೇಕ ರಾಷ್ಟ್ರಗಳು ಆಮದು, ರಫ್ತಿನ ಶೇ.80ರಷ್ಟು ವ್ಯವಹಾರಗಳನ್ನು ಯುಎಸ್ ಡಾಲರ್ನಲ್ಲಿಯೇ ಮಾಡುತ್ತವೆ ಇದಕ್ಕೆ ಆ ರಾಷ್ಟ್ರಗಳು ಡಾಲರ್ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ.
ಬಹುತೇಕ ಎಲ್ಲ ರಾಷ್ಟ್ರಗಳು ಅಮೆರಿಕ ದೇಶದ ಟ್ರೆಷರಿ ಬಿಲ್ನಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡುತ್ತವೆ. ಚೀನಾ ದೇಶದಂಥ ಬೃಹತ್ ರಾಷ್ಟ್ರವೂ ಸಹ ತನ್ನ ಹೂಡಿಕೆಯನ್ನು ಇದೇ ರೀತಿ ಮಾಡುತ್ತದೆ. ಇದರಿಂದ ಆಯಾ ರಾಷ್ಟ್ರಗಳು ತಮ್ಮ ಅವಶ್ಯಕತೆಗೆ ಬೇಕಾದಾಗ ಮರುಪಾವತಿ ಪಡೆಯಲು ಸುಲಭವಾಗುತ್ತದೆ. ಇದೂ ಸಹ, ಅಮೆರಿಕನ್ ಡಾಲರ್ ಮೇಲೆ ಪ್ರಪಂಚದ ಎಲ್ಲ ರಾಷ್ಟ್ರಗಳು ಇಟ್ಟಿರುವ ದೃಢವಾದ ನಂಬಿಕೆಗೆ ಒಂದು ನಿದರ್ಶನ ಆಗಿದೆ. ಯಾವುದೇ ದೇಶ ಹಣದುಬ್ಬರ ಅಥವಾ ಇನ್ಯಾವುದೇ ಕಾರಣದಿಂದ ತಮ್ಮ ಹಣದ ಮೌಲ್ಯ ಕಳೆದುಕೊಳ್ಳುವ ಸಂದರ್ಭದಲ್ಲಿ ಯುಎಸ್ ಡಾಲರ್ನಲ್ಲಿ ವ್ಯವಹರಿಸಿ ತನ್ನ ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಮೆರಿಕನ್ ಡಾಲರ್ಗೆ ಪರ್ಯಾಯ ನಗದು ವ್ಯವಸ್ಥೆ ಮಾಡಲು ಬೇರೆ ಬೇರೆ ರಾಷ್ಟ್ರಗಳು ಪ್ರಯತ್ನ ಪಡುತ್ತಿವೆಯಾದರೂ (ಯೂರೋ) ಅಮೆರಿಕ ದೇಶವು ತನ್ನದೇ ಆದ ರೀತಿಯಲ್ಲಿ ಈ ಪ್ರಯತ್ನವನ್ನು ತಡೆಹಿಡಿಯಲು ಯಶಸ್ವಿಯಾಗಿದೆ. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕದ ಡಾಲರ್ಗೆ ಪರ್ಯಾಯ ವ್ಯವಸ್ಥೆ ಕಂಡುಬರುತ್ತಿಲ್ಲ.
Friends, If you like this post,kindly comment below the post and do share your Response, (Thanks for Reading....)
No comments:
Post a Comment