ಕೊಡಗು ಪ್ರವಾಹದಲ್ಲಿ ತೋಟ ಕಳೆದುಕೊಂಡ ಬೆಳೆಗಾರರಿಗೆ ‘ಸಿ ಅಂಡ್ ಡಿ’ ಜಮೀನು
ಮೂರು ಮಾದರಿ ಮನೆ ನಿರ್ಮಾಣ?
ಕೊಡಗು ಜಿಲ್ಲೆಯಲ್ಲಿ ಭೂಕುಸಿತದಿಂದ ಸಂತ್ರಸ್ತರಾದವರಿಗೆ ನಿರ್ಮಿಸಲು ಉದ್ದೇಶಿಸಿರುವ ಮನೆಯ ಮಾದರಿ
ಪ್ರಜಾವಾಣಿ ವಾರ್ತೆ
ಮಡಿಕೇರಿ: ಕೊಡಗಿನಲ್ಲಿ ಸಂತ್ರಸ್ತರ ಪುನರ್ವಸತಿಗೆ ಗುರುತಿಸಿರುವ ಜಾಗದಲ್ಲಿ ಮೂರು ಮಾದರಿ ಮನೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.
ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್, ಕಾಂಪೋಸಿಟ್ ಟೆಕ್ನಾಲಜಿಸ್ ಸಂಸ್ಥೆ ಮನೆ ನಿರ್ಮಾಣದ ಹೊಣೆ ಹೊತ್ತಿದ್ದು, ಕೆ.ನಿಡುಗಣಿ ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಅಡಿಪಾಯದ ಕೆಲಸ ಪ್ರಗತಿಯಲ್ಲಿದೆ. ಹೆಚ್ಚಿನ ಸಂತ್ರಸ್ತರು ಒಲವು ತೋರಿದ ಒಂದು ಮಾದರಿಯನ್ನೇ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.
‘ಸಿಂಗಲ್ ಬೆಡ್ ರೂಂ ಪ್ರತಿ ಮನೆಗೆ ₹6.50 ಲಕ್ಷ ವೆಚ್ಚವಾಗಲಿದೆ. ಮಲೇಷ್ಯಾ ಮಾದರಿಯ ಮನೆಯಾಗಿದ್ದು, 45 ದಿನಗಳಲ್ಲಿ ನಿರ್ಮಿಸಿಕೊಡುತ್ತೇವೆ’ ಎಂದು ಹೌಸಿಂಗ್ ಕಾರ್ಪೊರೇಷನ್ ಪ್ರಾಜೆಕ್ಟ್ ಎಂಜಿನಿಯರ್ ಹರ್ಷ ತಿಳಿಸಿದರು.
ಸಂತ್ರಸ್ತರ ಬೇಡಿಕೆಗಳ ಕುರಿತು ಜಿಲ್ಲಾಡಳಿತ ನಡೆಸುತ್ತಿರುವ ಸಮೀಕ್ಷೆ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಜಿಲ್ಲಾಡಳಿತವೇ ಮನೆ ನಿರ್ಮಿಸಿಕೊಡಬೇಕೇ, ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡಿದರೆ ಸಾಕೇ, ಯಾವ ಮಾದರಿಯ ಮನೆ ಬೇಕು ಎಂಬ ಪ್ರಶ್ನಾವಳಿ ಆಧರಿಸಿ ಜಿಲ್ಲಾಡಳಿತ ಸಮೀಕ್ಷೆ ನಡೆಸಿತ್ತು.
ನಿರಾಶ್ರಿತರ ಅಭಿಪ್ರಾಯ ಕ್ರೋಡೀಕರಿಸಿಯೇ ಪುನರ್ವಸತಿ ಕಲ್ಪಿಸಲಾಗುವುದು. ಹೆಚ್ಚಿನವರು ಮನೆ ನಿರ್ಮಿಸಿಕೊಡುವಂತೆ ಕೋರಿಕೆ ಸಲ್ಲಿಸಿದ್ದಾರೆ ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಭೂಕುಸಿತದಿಂದ 4 ಸಾವಿರ ಎಕರೆ ಕಾಫಿ ತೋಟ ನಾಶವಾಗಿದ್ದು, ಕೃಷಿಗೆ ಪರ್ಯಾಯ ಜಮೀನು ಕೊಡಿ, ಇಲ್ಲವೇ ಪರಿಹಾರ ನೀಡಿ ಎಂಬುದು ಬೆಳೆಗಾರರ ಬೇಡಿಕೆಯಾಗಿದೆ.
‘ತೋಟ ಕಳೆದುಕೊಂಡ ಬೆಳೆಗಾರರಿಗೆ ‘ಸಿ ಅಂಡ್ ಡಿ’ ಜಮೀನು (ಕಂದಾಯ ಇಲಾಖೆಗೆ ಸೇರಿರುವ ಅರಣ್ಯ ಭೂಮಿ) ನೀಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
‘1.25 ಲಕ್ಷ ಹೆಕ್ಟೇರ್ ಸಿ ಅಂಡ್ ಡಿ ಜಮೀನಿದ್ದು, ಅದನ್ನು ವಾಪಸ್ ಪಡೆದು ರೈತರಿಗೆ ಹಂಚಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಅವರು ತಿಳಿಸಿದರು.
No comments:
Post a Comment