ನಮ್ಮನ್ನು ಪ್ರತಿನಿಧಿಸಲು ಅಪೇಕ್ಷಿಸುತ್ತಿರುವ ಎರಡೂ ಪ್ರಧಾನ ರಾಜಕೀಯ ಪಕ್ಷಗಳ ನೇತೃತ್ವದ ಮೈತ್ರಿಕೂಟಗಳ ಬಳಿಯೂ ಇರುವುದು ಒಂದೇ ಅಭಿವೃದ್ಧಿ ಮಾದರಿ
ಎಚ್.ಕೆ.ಶರತ್
ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಗೆ ಕಡಿವಾಣ ಹೇರಲು ಮುಂದಾಗದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಮಡುಗಟ್ಟಲಾರಂಭಿಸಿದೆ. ಇದು ಹೀಗೇ ಮುಂದುವರಿದರೆ ಅಗತ್ಯ ವಸ್ತುಗಳ ಬೆಲೆ ಎಲ್ಲಿಗೆ ಮುಟ್ಟಬಹುದೆಂಬ ಆತಂಕವೂ ಸುಳಿದಾಡತೊಡಗಿದೆ.
ಈ ಹಿಂದೆ ಬೆಲೆ ಏರಿಕೆಯನ್ನು ಎದುರಾಳಿಗಳನ್ನು ಹಣಿಯಲು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡವರು, ಈಗ ತಾವು ಕೊಟ್ಟ ಬಡಿಗೆಯಿಂದಲೇ ಬಡಿಸಿಕೊಳ್ಳಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬೆಲೆ ಏರಿಕೆಯ ವಿರುದ್ಧ ಅಬ್ಬರಿಸುವಾಗ ತಾವೆಂದೂ ಗಣನೆಗೆ ತೆಗೆದುಕೊಳ್ಳದೆ ಹೋಗಿದ್ದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ಥಿತಿ
ಗತಿಗಳನ್ನು ಇಂದು ಮುನ್ನೆಲೆಗೆ ತಂದು ತಮ್ಮ ಅಸಹಾ
ಯಕತೆ ವ್ಯಕ್ತಪಡಿಸುತ್ತಿದ್ದಾರೆ. ಅಂದು ಬೆಲೆ ಏರಿಕೆ ಎಂಬ ಬ್ರಹ್ಮಾಸ್ತ್ರದ ಅಡಿಯಲ್ಲಿ ಸಿಲುಕಿ ಮುದುಡಿದ್ದವರು, ಇಂದು
ಅದೇ ಅಸ್ತ್ರ ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಈ ಸಂದರ್ಭದಲ್ಲಿ ಮಲೆನಾಡಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿರುವ ಹಿರಿಯರೊಬ್ಬರು ಒಂದೆರಡು ವರ್ಷಗಳ ಹಿಂದೆ ಆಡಿದ್ದ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿವೆ. ಮಲೆನಾಡಿನ ಪರಿಸರದಲ್ಲಾಗುತ್ತಿರುವ ಪಲ್ಲಟಗಳ ಕುರಿತು ಆತಂಕ ವ್ಯಕ್ತಪಡಿಸಿದ್ದ ಅವರು, ‘ನಮ್ಮ ಜನರಲ್ಲಿ ನೀರಿಲ್ಲ ಅಂದ್ರೂ ಚಿಂತೆ ಇಲ್ಲ, ಡೀಸೆಲ್ ಒಂದು ಸಿಕ್ಕಿದ್ರೆ ಸಾಕು ನೆಮ್ದಿಯಾಗಿ ಬದುಕ್ಬೋದು ಅನ್ನೋ ಮನಸ್ಥಿತಿ ಬೇರೂರಿದೆ. ಮಳೆ ಬರ್ದಿದ್ರೆ ಏನಂತೆ, ಡೀಸೆಲ್ ಇದ್ರೆ ಬೆಟ್ಟ ಅಗೆದಾದ್ರೂ ನೀರು ತಗೋಬಹ್ದು ಅಂದ್ಕಂಡವ್ರೆ. ಹಿಂದೆ ಬಿಟ್ಟೂ ಬಿಡದ ಹಾಗೆ ಸುರೀತಿದ್ದ ಮಳೆ ಈಗ ಅಪರೂಪವಾಗಿದೆ. ಹೊಳೆಯಲ್ಲೂ ಮೊದಲಿನಷ್ಟು ನೀರಿನ ಹರಿವಿಲ್ಲ. ಸರಾ
ಸರಿ ಮಳೆ ಪ್ರಮಾಣವೂ ಇಳಿಮುಖವಾಗಿದೆ. ನಮ್ ಜನಕ್ಕೆ ಇದ್ಯಾವುದರ ಚಿಂತೆನೂ ಇಲ್ಲ. ಡೀಸೆಲ್ ಸಿಕ್ರೆ ಸಾಕು, ಮೋಟ್ರು- ಟ್ರ್ಯಾಕ್ಟ್ರು ನೆಚ್ಕಂಡು ಬದುಕ್ಬಿಡ್ತೀವಿ ಅನ್ನೋ ಲೆಕ್ಕದಲ್ಲೇ ಅವ್ರೆ...’ ಅಂದಿದ್ರು.
ಪ್ರಕೃತಿಯೊಂದಿಗೆ ಸಮರ ಸಾರದೆ ಸಹಬಾಳ್ವೆ ನಡೆ
ಸುವುದನ್ನು ಅರಿತಿದ್ದ ಜನ, ಅಭಿವೃದ್ಧಿ ಹೊಂದುವ ಉಮೇದಿನಲ್ಲಿ ಎಲ್ಲವನ್ನೂ ಹಾಳುಗೆಡವುತ್ತಿದ್ದಾರೆ
ಎಂಬುದನ್ನು ಡೀಸೆಲ್‌ನಡೆಗಿನ ಅವಲಂಬನೆಯ ಉದಾಹರಣೆಯ ಮೂಲಕ ವಿವರಿಸಿದ್ದರು.
ನಾವು ಇದುವರೆಗೂ ಅಪ್ಪಿಕೊಂಡು ಬಂದಿರುವ
ಅಭಿವೃದ್ಧಿ ಮಾದರಿ ಮತ್ತು ಅದರ ಸುತ್ತಲಿನ ಗೋಜಲು
ಗಳಿಗೆ ಇಂಧನಗಳ ಬೆಲೆ ಏರಿಕೆ ಮತ್ತು ಡಾಲರ್ ಎದುರು ಕುಸಿಯುತ್ತಲೇ ಇರುವ ರೂಪಾಯಿಯ ಮೌಲ್ಯ ಕನ್ನಡಿ ಹಿಡಿಯುತ್ತಿವೆ. ನಮ್ಮನ್ನು ಪ್ರತಿನಿಧಿಸಲು ಮತ್ತು ಆಳಲು ಅಪೇಕ್ಷಿಸುತ್ತಿರುವ ಎರಡೂ ಪ್ರಧಾನ ರಾಜಕೀಯ ಪಕ್ಷಗಳ
ಮೈತ್ರಿಕೂಟಗಳ ಬಳಿಯೂ ಇರುವುದು ಒಂದೇ ಅಭಿವೃದ್ಧಿ
ಮಾದರಿ ಎಂಬುದು ಸ್ಪಷ್ಟವಾಗುತ್ತಿದೆ. ಸ್ವದೇಶಿ ಮಂತ್ರ ಜಪಿಸುವವರ ಬಳಿಯೂ ಅಂತರರಾಷ್ಟ್ರೀಯ ಮಾರುಕಟ್ಟೆಯತ್ತ ಬೊಟ್ಟು ಮಾಡುವುದಲ್ಲದೇ ಬೇರೆ ಪರ್ಯಾಯಗಳಿರದಿರುವುದು, ಇದುವರೆಗೂ ಕಟ್ಟಿಕೊಂಡಿದ್ದ ಅಭಿವೃದ್ಧಿಯ ಸೌಧದ ತಳಪಾಯದ ಸುಸ್ಥಿತಿಯ ಕುರಿತೇ ಅನುಮಾನ ಹೊಂದಲು ಇಂಬು ನೀಡುತ್ತಿದೆ.
ಸುಸ್ಥಿರವಲ್ಲದ ಅಭಿವೃದ್ಧಿ ಮಾದರಿಗೆ ಪರ್ಯಾಯ ರೂಪಿಸದೆ ಸ್ಮಾರ್ಟ್ ಸಿಟಿಗಳನ್ನು ಕಟ್ಟುವ, ಬುಲೆಟ್ ರೈಲು
ಓಡಿಸುವ ಕನಸು ಬಿತ್ತುತ್ತ ಹೋದವರು, ಇಂದು ನಮ್ಮೆದುರು ತಾವು ಇಷ್ಟು ದಿನ ಜಪಿಸಿದ ಅಚ್ಛೇ ದಿನಗಳು ಕೂಡಾ ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಅಡಿಯಾಳಾಗಿವೆ ಎಂಬುದನ್ನು ಜನರೇ ಗ್ರಹಿಸಿಕೊಳ್ಳಲಿ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅಭಿವೃದ್ಧಿ ಮಾದ
ರಿಗೂ ತಾವು ಮುಂದಿಡುತ್ತಿರುವ ಅಭಿವೃದ್ಧಿ ಮಾದ
ರಿಗೂ ಇರುವ ವ್ಯತ್ಯಾಸವೇನು ಎಂಬುದನ್ನು ಸ್ಪಷ್ಟಪಡಿಸುವ ಹೊಣೆಗಾರಿಕೆಯಿಂದ ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನುಣುಚಿಕೊಳ್ಳಲಾಗದು. ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆ ಎಂಬ ಹೊಸ ಶತ್ರುವಿನತ್ತ ಜನರ ಆಕ್ರೋಶ ತಿರುಗಿಸುವುದಷ್ಟೇ
ತಮ್ಮೆದುರು ಇರುವ ಪರಿಹಾರ ಎಂದು ಸರ್ಕಾರ ಭಾವಿಸಿರುವಂತಿದೆ.
ದೇಶದ ಮಾರುಕಟ್ಟೆಯನ್ನು ಬಂಡವಾಳ ಹೂಡಿಕೆಗೆ ಮುಕ್ತಗೊಳಿಸುವ ಮೂಲಕ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡು ಎರಡೂವರೆ ದಶಕಗಳೇ ಸಂದಿವೆ. ಎಲ್ಲದಕ್ಕೂ ಹಿಂದಿನ ಸರ್ಕಾರಗಳನ್ನೇ ಹೊಣೆಯಾಗಿಸುವ ಪ್ರವೃತ್ತಿ ಮೈಗೂಡಿಸಿಕೊಂಡಿರುವ ಇಂದಿನ ಕೇಂದ್ರ ಸರ್ಕಾರ, ತಾನು ಅನುಸರಿಸುತ್ತಿರುವ ಆರ್ಥಿಕ ನೀತಿಯಾದರೂ ಎಂತಹದ್ದು? ಹಿಂದಿನ ಸರ್ಕಾರಗಳು ತೆಗೆದುಕೊಂಡ ತಪ್ಪು ನಿರ್ಧಾರಗಳು ಯಾವುವು? ಆ ತಪ್ಪುಗಳು ಪುನರಾವರ್ತನೆಯಾಗದ
ಹಾಗೆ ನೋಡಿಕೊಳ್ಳಲು ತಾನು ಕೈಗೊಳ್ಳುತ್ತಿರುವ ಎಚ್ಚರದ ಕ್ರಮಗಳಾದರೂ ಯಾವುವು ಎಂಬುದನ್ನು ಎಂದಾದರೂ ಹೇಳಿದೆಯೇ?
ತಮ್ಮೆಡೆಗೆ ತೂರಿ ಬರುವ ಟೀಕಾಸ್ತ್ರಗಳನ್ನು ಭ್ರಷ್ಟಾ
ಚಾರ ತಡೆಗಟ್ಟಿದ್ದೇವೆ, ತೆರಿಗೆ ಸಂಗ್ರಹ ಹೆಚ್ಚಿಸಿದ್ದೇವೆ ಎನ್ನುತ್ತಲೇ ಎದುರಿಸಿಕೊಂಡು ಬಂದವರು, ಇದೀಗ ಜನ
ಸಾಮಾನ್ಯರ ಪಾಲಿಗೆ ಹೊರಲಾರದಷ್ಟು ಭಾರವಾಗತೊಡಗಿರುವ ಇಂಧನಗಳ ಮೇಲಿನ ತೆರಿಗೆ ಇಳಿಸಲು ತಮ್ಮ
ಭ್ರಷ್ಟಾಚಾರರಹಿತ ಪಾರದರ್ಶಕ(?) ಆಡಳಿತದಿಂದ ಸಂಗ್ರ
ಹವಾಗಿರುವ ಹೆಚ್ಚುವರಿ ಹಣವನ್ನು ಬಳಸಬಾರದೇ? ಹಾಗಾದರೆ ದೇಶದ ಆರ್ಥಿಕ ಪರಿಸ್ಥಿತಿ ಸರ್ಕಾರ ಬಿಂಬಿಸುತ್ತಿರುವಷ್ಟು ಬಲಿಷ್ಠವಾಗಿಲ್ಲವೇ?
ದೊಡ್ಡಣ್ಣನ ಸ್ಥಾನ ಅಲಂಕರಿಸುವುದಕ್ಕಿಂತ ತನ್ನ ಹಿತ
ಕಾಯ್ದುಕೊಳ್ಳುವುದು ತನಗೆ ಮುಖ್ಯವೆಂಬ ನಿಲುವಿಗೆ ಅಮೆ
ರಿಕವೇ ಜೋತು ಬೀಳುತ್ತಿರುವ ಹೊತ್ತಲ್ಲಿ, ಮಾತಲ್ಲೇ ವಿಶ್ವಗುರು ಆಗಲು ಹೊರಟವರು, ಮಾತನಾಡಬೇಕಿರುವ ಸಂದರ್ಭದಲ್ಲೇ ಮೌನದ ಮೊರೆ ಹೋಗುವುದು ತಪ್ಪಿದರೆ ವಿಷಯಾಂತರ ಮಾಡುವುದು ಜನರಿಗೆ ಯಾವ ಸಂದೇಶ ರವಾನಿಸಲಿದೆ?
ಪೆಟ್ರೋಲ್- ಡೀಸೆಲ್ ಬಳಕೆ ತಗ್ಗಿಸಲು ಅನುಸರಿಸಬೇ
ಕಾದ ಪರ್ಯಾಯ ಕ್ರಮಗಳ ಕುರಿತ ಸ್ಪಷ್ಟತೆಯಾದರೂ
ಆಳುವವರಲ್ಲಿದೆಯೇ? ಅದೆಷ್ಟು ದಿನ ಅಂತರರಾಷ್ಟ್ರೀಯ
ಮಾರುಕಟ್ಟೆಯತ್ತ ಬೆರಳು ತೋರಿಸುತ್ತ ದಿನ ದೂಡಲು ಸಾಧ್ಯ? ಸಮಸ್ಯೆಗೆ ಅದರ ಮೂಲ ಗುರುತಿಸುವುದಷ್ಟೇ
ಪರಿಹಾರವಾಗಲಾರದಲ್ಲವೇ? ತೆರಿಗೆ ಇಳಿಸಿ ಜನರ
ಮೇಲಿನ ಹೊರೆ ತಗ್ಗಿಸಿ, ಪೆಟ್ರೋಲ್-ಡೀಸೆಲ್ ಮೇಲಿನ
ಅವಲಂಬನೆ ಕಡಿಮೆ ಮಾಡಲು ಅನುಸರಿಸಲೇಬೇಕಿ
ರುವ ಸುಸ್ಥಿರ ಅಭಿವೃದ್ಧಿ ಮಾದರಿಯೊಂದನ್ನು ಜನರೆ
ದುರು ಇಡುವ ಪ್ರಯತ್ನವನ್ನು ಈಗಲಾದರೂ ಮಾಡಬಾ
ರದೇ? ಮುಂಬರುವ ಲೋಕಸಭಾ ಚುನಾವಣೆ ಜನ
ರನ್ನು ಒಡೆದು ಆಳುವ ವೇದಿಕೆಯಾಗದೆ, ಸುಸ್ಥಿರ ಅಭಿ
ವೃದ್ಧಿ ಮಾದರಿಗಳ ಪ್ರಸ್ತುತಿಗೆ ಅಖಾಡವಾಗಲಿ ಎಂದು ನಿರೀಕ್ಷಿಸುವುದು ತಿರುಕನ ಕನಸಾಗಿ ಉಳಿಯುವುದೇ?
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment