ವಿಜಯವಾಣಿ’
ಮೇಘಸ್ಫೋಟದಂತೆ ಸುರಿದ ಮಳೆ ನಿಂತು ತಿಂಗಳಾಗುವ ಮೊದಲೇ ಜೀವನದಿ ನೇತ್ರಾವತಿ ಸಹಿತ ಉಭಯ ಜಿಲ್ಲೆಗಳ ನದಿಗಳು ಸಣಕಲಾಗುತ್ತಿದೆ. ಬಾವಿಗಳ ಜಲಮಟ್ಟ ಅಡಿಗಡಿಗೆ ಹೋಗುತ್ತಿದೆ. ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮೇಲಕ್ಕೇರಿದೆ. ಒಟ್ಟಾರೆ ಸನ್ನಿವೇಶ ಡಿಸೆಂಬರ್-ಜನವರಿಯನ್ನು ನೆನಪಿಸುವಂತಿದೆ. ಈ ವಿದ್ಯಮಾನವನ್ನು ಸಹಜವೆನ್ನಲು ಸಾಧ್ಯವಿಲ್ಲ. ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ ಎನ್ನುವುದು ತಜ್ಞರ ಅಭಿಮತ. ನಾಗರಿಕರ ಜತೆ ಸರ್ಕಾರಗಳೂ ಜಾಗೃತಗೊಂಡು ಪರಿಸರವನ್ನು ಅದರ ಪಾಡಿಗೆ ಇರಲು ಬಿಡಬೇಕೆನ್ನುವುದು ‘ವಿಜಯವಾಣಿ’ ಆಶಯ.
ಭೂಮಿ ಮೇಲ್ಭಾಗದಲ್ಲಿ ನೀರು ನಿಲ್ಲುತ್ತಿಲ್ಲ: ಎಂಐಟಿ ಪ್ರೊಫೆಸರ್, ಭೂವಿಜ್ಞಾನಿ ಡಾ.ಉದಯ ಶಂಕರ್ ಅಭಿಪ್ರಾಯ
ನದಿ, ಬಾವಿಗಳು ಬತ್ತಲು ಆರಂಭಿಸಿವೆ, ಈ ವೈಪರೀತ್ಯಕ್ಕೆ ಕಾರಣವೇನು?
ಭೂಮಿ ಮೇಲೆ ಎಷ್ಟೇ ಬಿಸಿಲು- ಶಾಖವಿದ್ದರೂ ನೀರು ಇಷ್ಟೊಂದು ಪ್ರಮಾಣದಲ್ಲಿ ಆವಿಯಾಗುವುದಿಲ್ಲ. ಅಂತರ್ಜಲ ಮಿತಿಮೀರಿ ಬಳಸಿರುವುದು ಜಲಮೂಲ ಬತ್ತಲು ಪ್ರಮುಖ ಕಾರಣ. ಮಣ್ಣಿನಲ್ಲಿ ನೀರಿನ ಒರತೆ ಪ್ರಮಾಣ ಸಂಪೂರ್ಣ ಕುಗ್ಗಿದೆ. ಮಣ್ಣು ಧಾರಣಾ ಶಕ್ತಿ ಕಳೆದುಕೊಂಡಿದೆ. ಪಶ್ಚಿಮಘಟ್ಟದಲ್ಲಿ ಭೂ ಸ್ತರ ಭಂಗ ಸಂಭವಿಸಿದ್ದರೆ ಹೀಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದರ ವೈಜ್ಞಾನಿಕ ವಿಶ್ಲೇಷಣೆ ಹೇಗೆ?
ಇತ್ತೀಚಿನ ಭಾರಿ ಮಳೆಗೆ ಅಲ್ಲಲ್ಲಿ ವಿಪರೀತ ಭೂಕುಸಿತ ಉಂಟಾಯಿತು. ಇದೊಂದು ಸುಳಿವು. ಈ ಹಿನ್ನೆಲೆಯಲ್ಲಿ ನೋಡಿದಾಗ 65 ಮಿಲಿಯನ್ ವರ್ಷಗಳ ಹಿಂದೆ ಭೂಖಂಡ ಬೇರ್ಪಟ್ಟು, ಭೂ ಸ್ತರ ಭಂಗವಾಗಿ (ಫಾಲ್ಟಿಂಗ್ ಪ್ರೊಸೆಸ್) ರತ್ನಗಿರಿಯಿಂದ ಕೇರಳವರೆಗೆ ಪಶ್ಚಿಮಘಟ್ಟ ಸೃಷ್ಟಿಯಾಗಿದೆ. ಇಲ್ಲಿ ನಾನಾ ರೀತಿಯ ಫಾಲ್ಟಿಂಗ್ ಏರ್ಪಟ್ಟಿದೆ. ಆ ಪ್ರಕ್ರಿಯೆ ಮತ್ತೆ ಸಕ್ರಿಯವಾದಂತೆ ಕಾಣಿಸುತ್ತದೆ. ಫಾಲ್ಟಿಂಗ್ ಎಂದರೆ ಭೂಮಿಯ ಆಳದಲ್ಲಿ ಶಿಲಾಪದರಗಳು ಅಸ್ಥಿರಗೊಳ್ಳುವುದು. ಇದು ಒಮ್ಮೆ ಅಸ್ಥಿರಗೊಂಡರೆ ನೀರನ್ನು ತನ್ನೊಳಗೆ ಆಳಕ್ಕೆ ತೆಗೆದುಕೊಳ್ಳುತ್ತದೆ. ಶಿಲಾಪದರಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದರಿಂದ ಟೊಳ್ಳು ಸೃಷ್ಟಿಯಾಗಿ ಆ ಜಾಗಕ್ಕೆ ನೀರು ತುಂಬುತ್ತದೆ. ಆಗ ಭೂಮಿಯ ಮೇಲ್ಭಾಗದಲ್ಲಿ ನೀರು ನಿಲ್ಲುವುದಿಲ್ಲ. ಈ ಕಾರಣವನ್ನು ನಾವು ಮುಖ್ಯವಾಗಿ ದೃಢೀಕರಿಸಬಹುದು. ಹಾಗೆ ಭೂಮಿಯ ಆಳದ ಶಿಲಾಪದರ ಸೇರಿದ ನೀರು ವ್ಯರ್ಥವಲ್ಲ. ಬೇಕಾದ ಸಮಯಕ್ಕೆ ಸಿಗುವುದಿಲ್ಲ, ಅಷ್ಟೇ.
ಅಂತರ್ಜಲ ಪ್ರಕ್ರಿಯೆ ಹೇಗೆ?
– ಸಾಮಾನ್ಯವಾಗಿ ಮಳೆಯಾದಾಗ ನದಿ, ಕೆರೆ, ಬಾವಿಗಳಲ್ಲಿ ನೀರು ಇಂಗಿ, ಬಳಿಕ ಜಿನುಗುತ್ತದೆ. ಇದೊಂದು ‘ರೀಸೈಕಲಿಂಗ್ ಸಿಸ್ಟಂ’. ಈ ಜಿನುಗುವ ಪ್ರಕ್ರಿಯೆಯಿಂದ ನದಿ, ಬಾವಿ, ಕೆರೆಗಳಲ್ಲಿ ನೀರು ಹೆಚ್ಚುತ್ತದೆ. ಈ ವರ್ಷ ದೊಡ್ಡ ಮಳೆಯಾಗಿದೆ. 30-40 ವರ್ಷ ಹಿಂದೆ ಇಂಥ ದೊಡ್ಡ ಮಳೆಯಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾದಂತೆ ಭೂಮಿ ಒಳಪದರದ ಮಣ್ಣು ಒಣಗುತ್ತದೆ. ಭೂಮಿಯಲ್ಲಿ ಅಂತರ್ಜಲ ಮಟ್ಟ ಕ್ರಮೇಣ ಕುಗ್ಗುವುದರಿಂದ ಭೂತಳದಲ್ಲಿ ದೊಡ್ಡ ಅಂತರ ಸೃಷ್ಟಿಯಾಗುತ್ತದೆ. ಈ ಅಂತರ ಏರ್ಪಟ್ಟಾಗ ಎಷ್ಟೇ ಮಳೆ ಬಂದರೂ ನೀರನ್ನು ಶೇಖರಿಸಿಕೊಳ್ಳಲು ಭೂಮಿಗೆ ಸಾಧ್ಯವಾಗುವುದಿಲ್ಲ.
ಈ ಸಮಸ್ಯೆಗೆ ಪರಿಹಾರವಿದೆಯೇ?
ಪ್ರಕೃತಿಯ ನಡೆಗೆ ತಡೆ ಸಾಧ್ಯವಿಲ್ಲ. ವಿಜ್ಞಾನ ಸೇರಿದಂತೆ ಯಾವ ಶಕ್ತಿಯಿಂದಲೂ ಆಗದು. ಭೂಮಿಯಲ್ಲಿ ಭೂಕಂಪ, ಭೂ ಕುಸಿತ, ಜ್ವಾಲಾಮುಖಿ ಏನೇನೋ ಸಂಭವಿಸುತ್ತದೆ. ಇದನ್ನು ತಡೆಯಲು ಹೇಗೆ ಸಾಧ್ಯ? ಸದ್ಯಕ್ಕೆ ವೆಂಟೆಡ್ ಡ್ಯಾಂಗಳ ಗೇಟ್ ಬಂದ್ ಮಾಡಿ ನೀರನ್ನು ಶೇಖರಿಸುವ ಕೆಲಸವಾಗಬೇಕು.
ಇಷ್ಟು ಮಳೆಯಾದರೂ ನೀರಿಗೆ ಕೊರತೆ ಹೇಗೆ?
– ಈ ಬಾರಿ ಕಂಡುಕೇಳರಿಯದ ರೀತಿಯಲ್ಲಿ ಮಳೆಯಾಗಿದ್ದು, ಭೂಕುಸಿತ ಸಂಭವಿಸಿದೆ. ಇಂಥ ಸಂದರ್ಭಗಳಲ್ಲಿ ವಿಪರೀತ ಮಳೆಯಾದ 10 ದಿನಗಳಲ್ಲಿ ನೀರು ವೇಗವಾಗಿ ಭೂತಳ ಸೇರುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರ ಆಗುವುದಿಲ್ಲ. ಈ ಮಳೆ ಪರಿಣಾಮ ಈ ಬಾರಿ ನೀರಿಗೆ ಸಮಸ್ಯೆ ಇಲ್ಲ ಎಂಬ ಆಲೋಚನೆ ಇದ್ದರೆ ಅದು ಭ್ರಮೆ. ಈಗಾಗಲೇ ನದಿ, ಬಾವಿಗಳು ಬರಿದಾಗುತ್ತಿವೆ. ಡಿಸೆಂಬರ್-ಜನವರಿಯ ಪರಿಸ್ಥಿತಿ ಕಾಣುತ್ತಿದೆ. ಇದು ಜೀವಿಗಳಿಗೆ ಅಪಾಯದ ಮುನ್ಸೂಚನೆ ಖಂಡಿತ ಹೌದು.
ಎತ್ತಿನಹೊಳೆ ಯೋಜನೆ ಪಾತ್ರವೇನು?
– ಪಶ್ಚಿಮಘಟ್ಟದಲ್ಲಿ ರಸ್ತೆ, ಕಾಡು ಕಡಿಯುವುದು, ಎತ್ತಿನಹೊಳೆ ಯೋಜನೆಗೆ ಕಾಲುವೆ ನಿರ್ಮಿಸುವುದು ಇವೆಲ್ಲ ಮಾನವ ಪರಿಸರದ ಮೇಲೆ ನಡೆಸುತ್ತಿರುವ ದಾಳಿ. ನಾವು ಪರಿಸರದ ಮೇಲೆ ಹಾನಿ ಮಾಡದಿದ್ದರೆ ಪರಿಸರವೂ ಪ್ರತಿಕ್ರಿಯಿಸುವುದಿಲ್ಲ. ನಾವು ಕೆಣಕಿದಾಗ ಪರಿಸರ ಪ್ರತಿಕ್ರಿಯಿಸುತ್ತದೆ. ನನ್ನ ಪ್ರಕಾರ ಎತ್ತಿನಹೊಳೆ ಯೋಜನೆಯಿಂದಾಗಿಯೇ ಶಿರಾಡಿ, ಬಿಸಿಲೆ ಘಾಟಿ ಕುಸಿದಿದೆ.
ಅಧಿಕ ಮಳೆ ನೀರು ಭೂಮಿ ಸೇರಿಲ್ಲ: ಸುರತ್ಕಲ್ ಎನ್‌ಐಟಿಕೆ ಲಕ್ಷ್ಮಣ ನಂದಗಿರಿ ಅಭಿಪ್ರಾಯ
ನದಿಗಳು ದಿಢೀರನೇ ಬತ್ತಲು ಕಾರಣ?
ಮೇ ಅಂತ್ಯದಲ್ಲಿ ಒಂದೇ ದಿನ ಎಂಟು ಗಂಟೆ ಅವಧಿಯಲ್ಲಿ 414 ಮಿ.ಮೀ. ಮಳೆ ಸುರಿದಿರುವುದನ್ನು ಸುರತ್ಕಲ್‌ಎನ್‌ಐಟಿಕೆ ಹವಾಮಾನ ಪರೀಕ್ಷಾ ವ್ಯವಸ್ಥೆ ದಾಖಲಿಸಿದೆ. ಅಂದರೆ ಕರಾವಳಿಯಲ್ಲಿ ಸಾಮಾನ್ಯವಾಗಿ ಒಂದು ತಿಂಗಳು ಸುರಿಯುವ ಮಳೆ ಈ ಬಾರಿ ಒಂದೇ ದಿನ ಸುರಿದಿದೆ. ಅಧಿಕ ಸಾಂಧ್ರತೆ ಮಳೆ ಸಂದರ್ಭ ಶೇ.90 ನೀರು ಹರಿದು ಸಮುದ್ರ ಸೇರುತ್ತದೆ. ಶೇ.10 ಮಾತ್ರ ಭೂಮಿಯಲ್ಲಿ ಇಂಗುತ್ತದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಸುರಿಯುವ ಮಳೆಯಿಂದ ಮಾತ್ರ ನೀರು ಅಧಿಕ ಪ್ರಮಾಣದಲ್ಲಿ ಭೂಮಿಗೆ ಇಂಗುತ್ತದೆ.
ಇಂಥ ಪರಿಸ್ಥಿತಿಯ ಹಿಂದೆ ಮಾನವನ ಪಾತ್ರವೇನು?
ಅಧಿಕ ಪ್ರಮಾಣದಲ್ಲಿ ನಡೆಯುತ್ತಿರುವ ಕಾಡು ನಾಶ, ಕಾಂಕ್ರೀಟೀಕರಣ, ಜಲಮಾರ್ಗಗಳು ಮುಚ್ಚಿರುವುದು ಹೆಚ್ಚಿನ ನಷ್ಟ ತಂದೊಡ್ಡಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ದಾಖಲೆ ಪ್ರಮಾಣದಲ್ಲಿ ಮಳೆಯಾದರೂ ಅಲ್ಪಾವಧಿಯಲ್ಲೇ ನದಿ, ಹಳ್ಳ, ಕೊಳಗಳ ನೀರು ಬಸಿದುಹೋಗುತ್ತಿದೆ. ಪ್ರಕೃತಿಯ ಸಹಜ ರಚನೆಗಳಿಗೆ ಮನುಷ್ಯ ನಿರಂತರ ಅಡ್ಡಿಪಡಿಸುತ್ತಿರುವುದೇ ಈ ಪರಿಸ್ಥಿತಿಗೆ ಮುಖ್ಯ ಕಾರಣ. ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲ ಬಳಕೆ ನಡೆಯುತ್ತಿದೆ. ಕೈಗಾರಿಕೆ, ಕೃಷಿ ಸಹಿತ ವಿವಿಧ ಕಾರಣಗಳಿಗೆ ನಿರಂತರ ಪಂಪಿಂಗ್ ನಡೆಯುತ್ತಿದೆ. ಪರಿಸ್ಥಿತಿ ನಿಬಾಯಿಸಲು ನಾವು ಈಗಲೇ ಒಂದು ಗಂಭೀರ ಪ್ರಯತ್ನ ನಡೆಸುವುದು ಆವಶ್ಯ. ಕಳೆದ 30 ವರ್ಷದ ಪರಿಸ್ಥಿತಿ ಅವಲೋಕಿಸಿದರೆ ಉಪ್ಪಿನಂಗಡಿಯಲ್ಲಿ ನದಿಯಲ್ಲಿ ಇರುವ ನೀರಿನ ವೇಗ ಬಂಟ್ವಾಳ ತಲುಪುವಾಗ ಇರುವುದಿಲ್ಲ.
ಪರಿಹಾರದ ಭಾಗವಾಗಿ ಏನು ಮಾಡಬಹುದು?
ದಕ್ಷಿಣ ಕನ್ನಡದ ಭೂಭಾಗ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಪರಿಹಾರವಾಗಿ ಅಗತ್ಯಕ್ಕೆ ತಕ್ಕಂತೆ ವೆಂಟೆಡ್ ಡ್ಯಾಂಗಳನ್ನು ನಿರ್ವಹಿಸಬಹುದು. ಇತರ ಸ್ಥಳಗಳಲ್ಲಿ ಇರುವಂತೆ ಇಲ್ಲಿ ಡ್ಯಾಂಗಳಲ್ಲಿ ಅಧಿಕ ನೀರು ಸಂಗ್ರಹಿಸಲು ಅವಕಾಶವಿಲ್ಲ. ಸ್ಥಳಾವಕಾಶದ ಕೊರತೆ ಇರುವುದು ಹಾಗೂ ಅಧಿಕ ನೀರು ಸಂಗ್ರಹಿಸಿದರೆ ಜನವಸತಿ ಪ್ರದೇಶ ಮುಳುಗಡೆ ಸಾಧ್ಯತೆ ಇಲ್ಲಿದೆ. ಪರಿಸರದ ಮೇಲೆ ಮಾನವನ ದೌರ್ಜನ್ಯ ನಿಲ್ಲಬೇಕು.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment