ಕೊಲೊಂಬೊ: ಶ್ರೀಲಂಕಾದ ದೆಹಿವಾಲ ಮೃಗಾಲಯದಲ್ಲಿ ಸುಮಾರು 67 ವರ್ಷಗಳಿಂದ ಸರಪಳಿಗಳ ಸಂಕೋಲೆಯಲ್ಲೇ ಜೀವನ ದೂಡುತ್ತಿರುವ 69 ವರ್ಷ ವಯಸ್ಸಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಭಾರತ ಸರ್ಕಾರದ ಮಂತ್ರಿ ಮೇನಕಾ ಗಾಂಧಿ ಅವರು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
1949ರಲ್ಲಿ ಜನಿಸಿರುವ ಬಂಡುಲ ಎಂಬ ಆನೆಯನ್ನು ಶ್ರೀಲಂಕಾದ ದೆಹಿವಾಲ ಮೃಗಾಲಯದಲ್ಲಿ 1951ರಿಂದಲೂ ಸರಪಳಿಗಳಿಂದ ಬಂಧಿಸಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಮೇನಕಾ ಗಾಂಧಿ ಅವರು ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದ್ದಾರೆ.
ಬಂಡುಲ ಆನೆಯೂ ಸೇರಿದಂತೆ ಏಳು ಆನೆಗಳನ್ನೂ ಬಂಧಮುಕ್ತಗೊಳಿಸಿ ಅಭಯಾರಣ್ಯದಲ್ಲಿ ಮುಕ್ತವಾಗಿ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಪತ್ರದಲ್ಲಿ ಭಾರತದ ಉದಾಹರಣೆಯನ್ನೂ ಅವರು ಉಲ್ಲೇಖಿಸಿದ್ದಾರೆ.
“ದೆಹಿವಾಲದಲ್ಲಿರುವ ಆನೆಗಳನ್ನು ಬಿಡುಗಡೆ ಮಾಡಿ ರಿದಿಯಗಾಮಾ ಸಫಾರಿಯಲ್ಲಿ ಮುಕ್ತವಾಗಿ ಜೀವಿಸಲು ಅವಕಾಶ ಮಾಡಿಕೊಡಬೇಕೆಂದು ನಾನು ತಮ್ಮಲ್ಲಿ ಕೋರುತ್ತೇನೆ. ಆನೆಗಳನ್ನು ಮೃಗಾಲಯಗಳಲ್ಲಿ ಬಂಧಿಸಿಡುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಬಂಧನದಲ್ಲಿಡುವುದರಿಂದ ಅವುಗಳು ಹೆಚ್ಚು ಒತ್ತಡಕ್ಕೀಡಾಗುತ್ತವೆ. ಅಲ್ಲದೆ, ಹಲವು ಆನೆಗಳಿಗೆ ಮತಿ ಭ್ರಮಣೆಯೂ ಆಗುತ್ತದೆ. ಇತ್ತೀಚೆಗೆ ಭಾರತದಲ್ಲಿ ಆರು ಆನೆಗಳನ್ನು ಬಂಧಮುಕ್ತಗೊಳಿಸಿ ಸಫಾರಿಗೆ ರವಾನಿಸಿದ್ದೇವೆ. ಹೀಗೆ ಬಿಡುಗಡೆಯಾದ ಆನೆಗಳಿಗೆ ಅದಾಗಲೇ ವಯಸ್ಸಾಗಿತ್ತಾದರೂ, ನಂತರದಲ್ಲಿ ಅವು ನವ ಚೈತನ್ಯದಿಂದ ಕಂಗೊಳಿಸುತ್ತಿವೆ. ಆದ್ದರಿಂದ ದಯವಿಟ್ಟು ತಾವು ಇದೇ ನಡೆಯನ್ನು ಅನುಸರಿಸಿ ದೆಹಿವಾಲ ಮೃಗಾಲಯದ ಏಳೂ ಆನೆಗಳನ್ನೂ ಬಂಧಮುಕ್ತಗೊಳಿಸಬೇಕು ಎಂದು ಕೋರುತ್ತೇನೆ,” ಎಂದು ಅವರು ಮನವಿ ಮಾಡಿದ್ದಾರೆ.
ಶ್ರೀಲಂಕಾದಲ್ಲಿ 200 ರಿಂದ 250 ಆನೆಗಳು ಬಂಡುಲ ಮಾದರಿಯಲ್ಲೇ ಮೃಗಾಲಯಗಳಲ್ಲಿ ಬಂಧಿಯಾಗಿವೆ ಎನ್ನಲಾಗಿದೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment