ಧರ್ಮಸಮದೃಷ್ಟಿ ಗದ್ಯಪಾಠ-4 10ನೇ ತರಗತಿ ಕನ್ನಡ (Dharmasamadrushti-4 10th kannada lesson)
ಬಸದಿಯೊಂದು ಹೂತುಹೋಗಿದ್ದರೆ ಆಶ್ಚರ್ಯವಿಲ್ಲ. ಕಲ್ಯ ಮತ್ತು ಸುತ್ತಮುತ್ತ ಜೈನ ಮಂದಿರಗಳ ದೊಡ್ಡ ಪ್ರಮಾಣದ ವಿನಾಶ ನಡೆಯಿತೆಂಬುದಕ್ಕೆ ಇವು ಪ್ರಬಲ ಸಾಕ್ಷ್ಯಾಧಾರಗಳು.
ಕಲ್ಯದಲ್ಲಿ ಚಕ್ರತ್ತಾಳ್ವಾರರ ವಿಗ್ರಹವೊಂದಿದ್ದು ಅದು ಈಗ ಮಾಯವಾಗಿದೆ. ಮಾಗಡಿಯಲ್ಲಿ ಶ್ರೀವೈಷ್ಣವರಿಂದ ಆರಾಧನೆಗೊಳ್ಳುತ್ತಿರುವ ರಂಗನಾಥಸ್ವಾಮಿಯ ವಿಗ್ರಹವು ಮೂಲತಃ ಕಲ್ಯದ್ದೆಂದು ಜನ ಹೇಳುತ್ತಾರೆ. ಈಗಲೂ ಮಾಗಡಿಯ ಆ ದೇವರ ರಥೋತ್ಸವದಲ್ಲಿ ದೇವರ ಮೊದಲ ಪ್ರಸಾದವು ಕಲ್ಯದ ಜನರಿಗೆ ಮೀಸಲು. ಇದೆಲ್ಲವೂ ಕಲ್ಯದಲ್ಲಿ ನಡೆದ ಶ್ರೀ ವೈಷ್ಣವ ದೇವಾಲಯದ ನಾಶಕ್ಕೆ ಸಾಕ್ಷ್ಯಾಧಾರ. ಹಳೆಯ ಬೆಳ್ಗೊಳ ಮತ್ತು ಕಲ್ಯ ಎರಡು ಊರುಗಳಲ್ಲಿಯೂ 'ಉಷ್ಟಮರು' ಎಂದು ಕರೆಯುವ ಶ್ರೀ ವೈಷ್ಣವ ಮತದ ಶೂದ್ರ ಅನುಯಾಯಿಗಳಿದ್ದಾರೆ. ಆ ಎರಡು ಊರುಗಳಲ್ಲಿ ಈಗ ಜೈನರು ಇಲ್ಲದಿದ್ದರೂ ಅಲ್ಲಿ ಮೊದಲು ಜೈನರಿದ್ದರೆಂದೂ, 'ಭಕ್ತರ' ಉಪಟಳವನ್ನು ತಾಳಲಾರದೆ ಅವರು ಬೇರೆಡೆಗಳಿಗೆ ವಲಸೆ ಹೋದರೆಂದೂ ಹೇಳಲು ಪ್ರಬಲ ಸೂಚನೆಗಳಿವೆ. ಹಳೆಯ ಬೆಳ್ಗೊಳದ ಜೈನರು ಸಮೀಪದ ಶ್ರವಣಬೆಳ್ಗೊಳಕ್ಕೂ ಕಲ್ಯದ ಜನರು ಸಮೀಪದ ಸಂಕಿಘಟ್ಟಕ್ಕೂ ಹೋಗಿ ನೆಲಸಿರಬೇಕು. ಶ್ರವಣಬೆಳ್ಗೊಳವಂತೂ ಸರಿಯೇ, ಸಂಕಿಘಟ್ಟದಲ್ಲಿ ಈಗಲೂ ಸಾಕಷ್ಟು ಸಂಖ್ಯೆಯ ಜೈನರಿದ್ದು ಅವರು ಅಲ್ಲಿನ ವರ್ಧಮಾನಸ್ವಾಮಿಯನ್ನು ಆರಾಧಿಸುತ್ತಿದ್ದಾರೆ.
ಜೈನ ವೈಷ್ಣವ ಘರ್ಷಣೆಗಳು ಕಲ್ಯ ಶ್ರವಣಬೆಳ್ಗೊಳಗಳಿಗೆ ಸೀಮಿತವಾಗಿರಲಿಲ್ಲ. ಬುಕ್ಕನ ತೀರ್ಪು ಬರುವ ಮುನ್ನ, ಬಹುಶಃ ಬಂದ ಮೇಲೂ-ಬಹು ವ್ಯಾಪಕವಾಗಿ ಘರ್ಷಣೆಗಳು ನಡೆದಿರುವಂತೆ ತೋರುತ್ತದೆ. ನಾಗಮಂಗಲ ತಾಲೂಕಿನ ಹಟ್ಣದಲ್ಲಿರುವ ವೀರಭದ್ರ ದೇವಾಲಯವು ಮೂಲತಃ ಪಾಶ್ರ್ವನಾಥ ಬಸದಿಯಾಗಿತ್ತು. ಜೈನ ವಿಗ್ರಹವಿದ್ದ ಪೀಠದ ಮೇಲೆ ಈಗ ವೀರಭದ್ರನ ವಿಗ್ರಹವಿದೆ. ಪಿರಿಯಾಪಟ್ಟಣ ತಾಲೂಕಿನ ಹೊನ್ನೂರಿನಲ್ಲಿ ರಂಗಸ್ವಾಮಿ ಗುಡಿಯೆಂದು ಕರೆಯುವ ದೇವಾಲಯದಲ್ಲಿರುವುದು ವಾಸ್ತವವಾಗಿ ಜಿನ ವಿಗ್ರಹ; ಅದಕ್ಕೆ ನಾಮವನ್ನು ಹಚ್ಚಿ ವಿಷ್ಣು ವಿಗ್ರಹವಾಗಿ ಮಾಡಲಾಗಿದೆ. ಮಾಗಡಿ ತಾಲೂಕಿನ ನಿಸಕೂರಿನಲ್ಲಿ ಎಪ್ಪತ್ತೈದು ಬಸದಿಗಳಿದ್ದವೆಂದು ಜನ ಹೇಳುತ್ತಾರೆ; ಈಗ ಅಲ್ಲಿ ಬಸದಿಗಳ ಬದಲು ಕೇವಲ ಬೂದಿ ಗುಂಡಿಗಳಿವೆ. ತಿಪಟೂರಿನ ಸಮೀಪದ ಹಳ್ಳಿಯೊಂದರಲ್ಲಿ ಜಿನ ಬಸದಿಯು ಶಿವದೇವಾಲಯವಾಗಿ ಪರಿವರ್ತಿತವಾಗಿ, ಜಿನ ಬಿಂಬಕ್ಕೆ ಭಸ್ಮ, ಕರಡಿಗೆಗಳನ್ನು ಅಳವಡಿಸಲಾಗಿದೆ. ಈ ಮತ್ತು ಇಂತಹ ಎಲ್ಲಾ ಉದಾಹರಣೆಗಳೂ ಹದಿನಾಲ್ಕನೇ ಶತಮಾನದ ಘರ್ಷಣೆಗಳ ಫಲವೇ ಎಂದು ಖಚಿತವಾಗಿ ಹೇಳಲಾಗದಿದ್ದರೂ ಅವುಗಳಲ್ಲಿ ಕೆಲವಾದರೂ ಆ ಘರ್ಷಣೆಗಳ ಫಲವಿರಬಹುದು ಎಂದು ಅನುಮಾನಿಸಲು ಸಾಧ್ಯ.
ಹದಿನಾಲ್ಕನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳ್ಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ, ಭೀತಿಯ ನೆರಳಲ್ಲಿ ಅವರು ಬದುಕಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥ ಮಾಡಿಕೊಂಡ ಬುಕ್ಕ ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ, ಆದರೆ ಎರಡೂ ಪಂಗಡಗಳ ಮಧ್ಯದ ವಿರಸ ಹೆಚ್ಚಾಗದ ರೀತಿಯಲ್ಲಿ, ಆದರೆ ಪ್ರೀತಿಯಿಂದ ತನ್ನ ಹೃದಯಸ್ಪರ್ಶಿ ತೀರ್ಪನ್ನು ಕೊಟ್ಟನು. ಬುಕ್ಕನ ತೀರ್ಪು ಘರ್ಷಣೆಗಳ ಮೊನಚನ್ನು ಮೊಂಡು ಮಾಡಿರಬಹುದು, ಅನಾಹುತಗಳ ಪ್ರಮಾಣವನ್ನು ತಗ್ಗಿಸಿರಬಹುದು; ಆದರೆ ಘರ್ಷಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದ. ಒಂದು ವ್ಯಾಪಾರ ಕೇಂದ್ರವೂ ಆಗಿದ್ದ ಕಲ್ಯದಲ್ಲಿ ಅವನು ತನ್ನ ಪ್ರತಿನಿಧಿಯಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿದಂತೆ ಕಾಣುತ್ತದೆ. ಆ ಅಧಿಕಾರಿ ಇತರ ಕರ್ತವ್ಯಗಳ ಜೊತೆ ಘರ್ಷಣೆಗಳಾಗದಂತೆ, ಜೈನ ದೇವಾಲಯಗಳಿಗೆ ಹೆಚ್ಚಿನ ಹಾನಿ ಆಗದಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ನೆರವೇರಿಸಿರಬಹುದು. ಕ್ರಿ.ಶ.1386 ರ ಶಾಸನವೊಂದು ವಿಜಯನಗರದ ಅಧಿಕಾರಿ ಕಲ್ಯದಲ್ಲಿದ್ದು ಕೆಲಸ ಮಾಡುತ್ತಿದ್ದುದನ್ನು ಸೂಚಿಸುತ್ತದೆ.
ಸಮಸ್ಯಾತ್ಮಕ ಪದಗಳು:
ಶಾಸನದಲ್ಲಿ ಬಳಕೆಯಾಗಿರುವ ಕೆಲವು ಪದಗಳ ಅರ್ಥ ಇನ್ನೂ ಪರಿಹಾರವಾಗಿಲ್ಲ. 'ಮೋಷ್ಟಿಕ' ಎಂದರೇನು ತಿಳಿಯದು. 'ತಿರುವಡಿ'ಯೆಂಬುದು ಭಗವಂತನ ಪಾದಗಳನ್ನು ಪೂಜಿಸುವ ಜನರನ್ನು (ಶ್ರೀಪಾದಂ ತಾಂಗಿಗಳ್) ಸೂಚಿಸಬಹುದು. 'ತಣ್ಣೀರವರ್' ಎಂಬುದು ದೇವರ ತೀರ್ಥವನ್ನು ಮೊದಲು ಸ್ವೀಕರಿಸುವ ತೀರ್ಥಗಾರರ್ ಅಥವಾ ಮುದಲ್ ತೀರ್ಥಗಾರರ್ ಇರಬಹುದು ಅಥವಾ ದೇವರ ಅಭಿಷೇಕಕ್ಕೆ ನೀರು ತರುವ ಸೇವಾಕಾರ್ಯವನ್ನು (ತೀರ್ಥಕೈಂಕರ್ಯಮ್) ಕೈಕೊಂಡವರು ಇರಬಹುದು. 'ತಿರುಪಣಿ'ಯವರು ದೇವಾಲಯದ ಸೇವಕವರ್ಗದವರಿರಬಹುದು. 'ತಿರುಕುಲ' 'ಜಾಂಬವಕುಲ'ದವರು ಹರಿಜನರಲ್ಲಿರುವ ಬಲಗೈ ಎಡಗೈ ಪಂಗಡದವರು. ಒಂದು ನಂಬಿಕೆಯ ಪ್ರಕಾರ ಶ್ರೀರಾಮಪ್ರಿಯ ವಿಗ್ರಹವನ್ನು ತರಲು ದೆಹಲಿಗೆ ಹೋದ ಶ್ರೀರಾಮಾನುಜರಿಗೆ ಸಹಾಯಕರಾಗಿ ಜೊತೆಯಲ್ಲಿದ್ದ ಹರಿಜನರನ್ನು ಅವರು ಪ್ರೀತಿಯಿಂದ 'ತಿರುಕುಲ'ದವರೆಂದು ಕರೆದರು. 'ತಿರುಕುಲ' ಪದದ ಅತ್ಯಂತ ಪ್ರಾಚೀನ ಪ್ರಯೋಗವು ಶ್ರವಣಬೆಳ್ಗೊಳ ಶಾಸನದಲ್ಲಿ ದೊರಕುವುದು ಗಮನಾರ್ಹ (ತಮಿಳು ಕೃತಿಗಳ ಪ್ರಯೋಗಗಳೆಲ್ಲಾ ಈಚಿನವು). 'ಹದಿನೆಂಟು ನಾಡು ಎಂಬುದು ಹಿಂದೂಗಳ ಸಾಂಪ್ರದಾಯಿಕ ಹದಿನೆಂಟು ಜಾತಿಗಳನ್ನು ಹೇಳುತ್ತದೆ. ಶ್ರೀ ವೈಷ್ಣವರನ್ನು 'ಭಕ್ತ'ರೆಂದು ಕರೆದಿರುವುದು ಗಮನಾರ್ಹ. 'ಆಚಾರ್ಯ', 'ಸಮಯಿ', 'ಸಾತ್ವಿಕ' ಪದಗಳಿಗಿರುವ ನಿರ್ದಿಷ್ಟಾರ್ಥಗಳನ್ನು, ವ್ಯತ್ಯಾಸಗಳನ್ನು ಗುರುತಿಸುವುದು ಇನ್ನೂ ಕಷ್ಟವಾಗಿದೆ. 'ನಾಲ್ವತ್ತೆಂಟು ಜನ' ಉಕ್ತಿಯ ಅರ್ಥವೂ ಅಷ್ಟೇ; ಬಹುಶಃ ಅದೊಂದು ಜಾತಿಯ ಅಥವಾ ವೃತ್ತಿಯ ಯಾವುದೋ ಶ್ರೇಣಿಯನ್ನು (guild) ಸೂಚಿಸುವಂತೆ ಕಾಣುತ್ತದೆ.
No comments:
Post a Comment