ಇದೇ ವಾರ ಆರಕ್ಕೂ ಅಧಿಕ ಐತಿಹಾಸಿಕ ತೀರ್ಪು ಸಾಧ್ಯತೆ >>
ನವದೆಹಲಿ: ದೇಶದ ರಾಜಕೀಯ, ಸಾಮಾಜಿಕ, ಧಾರ್ವಿುಕ ವಲಯದ ಮೇಲೆ ತೀವ್ರ ಪ್ರಭಾವ ಬೀರಬಹುದಾದ ಆರಕ್ಕೂ ಹೆಚ್ಚು ಆದೇಶಗಳು ಸುಪ್ರೀಂ ಕೋರ್ಟ್ನಲ್ಲಿ ಈ ವಾರ ಪ್ರಕಟವಾಗಲಿವೆ. ಆಧಾರ್ ಸಾಂವಿಧಾನಿಕ ಮಾನ್ಯತೆ, ಪರಿಶಿಷ್ಟರ ಬಡ್ತಿ ಮೀಸಲು, ಇಸ್ಲಾಂನಲ್ಲಿ ಮಸೀದಿ ಸ್ಥಾನಮಾನ ಸೇರಿ ಹಲವು ಐತಿಹಾಸಿಕ ತೀರ್ಪಗಳು ಇದರಲ್ಲಿ ಸೇರಿವೆ. ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯಾವಧಿ ಅ. 2ಕ್ಕೆ ಅಂತ್ಯಗೊಳ್ಳುತ್ತಿದೆ. ಅವರ ನೇತೃತ್ವದ ನ್ಯಾಯಪೀಠ ವಿಚಾರಣೆ ಪೂರ್ಣಗೊಳಿಸಿರುವ ಪ್ರಕರಣಗಳ ತೀರ್ಪು ಕೆಲ ದಿನಗಳಲ್ಲೇ ಪ್ರಕಟವಾಗಲಿದೆ. ಈಗಾಗಲೇ ಸಲಿಂಗಾಕಾಮ, ಖಾಸಗಿತನದ ಹಕ್ಕು, ಲಿಂಚಿಂಗ್ ನಿಯಂತ್ರಣ ಸೇರಿ ಕೆಲ ಐತಿಹಾಸಿಕ ತೀರ್ಪಗಳನ್ನು ಅವರು ನೀಡಿದ್ದಾರೆ.
ಪರಿಶಿಷ್ಟರ ಮೀಸಲು ಬಡ್ತಿ
ಪರಿಶಿಷ್ಟ ಜಾತಿ ಹಾಗೂ ಪಂಗಡದ ಸರ್ಕಾರಿ ನೌಕರರಿಗೆ ಮೀಸಲು ಬಡ್ತಿ ನೀಡುವ ಕುರಿತು ಬುಧವಾರ ಅಂತಿಮ ಆದೇಶ ಬರಲಿದೆ. ಎಂ. ನಾಗರಾಜ್ ಪ್ರಕರಣದಲ್ಲಿನ ಆದೇಶ ಮರುಪರಿಶೀಲನೆ ಮಾಡಲಾಗುತ್ತಿದ್ದು, ಸರ್ಕಾರಿ ನೌಕರಿಯಲ್ಲಿ ಪರಿಶಿಷ್ಟರಿಗೆ ಮೀಸಲು ನೀಡುವ ಕುರಿತು ನಿರ್ಣಾಯಕವಾಗಲಿದೆ.
ಕೋರ್ಟ್ ಕಲಾಪಗಳ ನೇರ ಪ್ರಸಾರ
ಮುಂದುವರಿದ ದೇಶಗಳಲ್ಲಿರುವಂತೆ ಭಾರತದ ಕೋರ್ಟ್ಗಳ ಕಲಾಪ ನೇರ ಪ್ರಸಾರಕ್ಕೆ ಕಳೆದ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ. ನೇರ ಪ್ರಸಾರಕ್ಕೆ ಈಗಾಗಲೇ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದು, ದೇಶವ್ಯಾಪಿ ಅನುಷ್ಠಾನ ಕುರಿತಂತೆ ಮಾರ್ಗಸೂಚಿ ಆದೇಶ ಬುಧವಾರ ಪ್ರಕಟವಾಗುವ ಸಾಧ್ಯತೆಯಿದೆ.
ವಿವಾಹೇತರ ಸಂಬಂಧ
ವಿವಾಹೇತರ ಸಂಬಂಧವನ್ನು ಸಕ್ರಮಗೊಳಿಸುವುದು ಅಥವಾ ಲಿಂಗ ತಾರತಮ್ಯ ಹೋಗಲಾಡಿಸುವ ಬಗ್ಗೆ ಕಳೆದೊಂದು ವರ್ಷದಿಂದ ವಿಚಾರಣೆ ನಡೆಯುತ್ತಿದೆ. ಭಾರತೀಯ ಸಮಾಜದ ಮೇಲೆ ಪರಿಣಾಮ ಬೀರಬಹುದಾದ ಆದೇಶ ಇದಾಗಿದೆ.
ಆಧಾರ್ ಸಂವಿಧಾನ ಮಾನ್ಯತೆ
ವ್ಯಕ್ತಿಯ ಖಾಸಗಿತನ ಕೂಡ ಮೂಲಹಕ್ಕು ಎಂಬ ತೀರ್ಪಿನ ಹಿನ್ನೆಲೆಯಲ್ಲಿ ಆಧಾರ್ ಗುರುತಿನ ಚೀಟಿಯ ಸಾಂವಿಧಾನಿಕ ಮಾನ್ಯತೆ ಕುರಿತು ಬುಧವಾರ ತೀರ್ಪು ಪ್ರಕಟವಾಗಲಿದೆ. ಆಧಾರ್ ಕಾಯ್ದೆಯು ಸಂವಿಧಾನಕ್ಕೆ ಪೂರಕವಾಗಿದೆಯೆ ಎನ್ನುವುದನ್ನು ಸಂವಿಧಾನಿಕ ಪೀಠ ನಿರ್ಧರಿಸಲಿದೆ. ಈಗಾಗಲೇ ಶೇ.99 ಭಾರತೀಯರು ಆಧಾರ್ ನೋಂದಣಿ ಮಾಡಿಸಿಕೊಂಡಿದ್ದು, ನ್ಯಾಯಪೀಠದ ಈ ಆದೇಶವು ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಲಿದೆ.
ರಾಮ ಮಂದಿರ, ಮಸೀದಿ ವಿವಾದ
ಮಸೀದಿ ಇಸ್ಲಾಂ ಧರ್ಮದ ಭಾಗವಲ್ಲ ಎಂದು 1993ರಲ್ಲಿ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನು ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿ, ಸಂವಿಧಾನ ಪೀಠ ರಚನೆಗೆ ಆಗ್ರಹಿಸಿವೆ. ಸಂವಿಧಾನ ಪೀಠ ರಚನೆ ಅಥವಾ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಕುರಿತು ನ್ಯಾ.ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಲಿದೆ.
ನಕ್ಸಲ್ ಹಿತೈಷಿಗಳ ಬಂಧನ
ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ಹಾಗೂ ನಕ್ಸಲರಿಗೆ ಬೆಂಬಲ ನೀಡಿದ ಆರೋಪಕ್ಕೆ ಸಂಬಂಧಿಸಿ ಐವರು ನಕ್ಸಲ್ ಹಿತೈಷಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಕೆಲ ಮಾನವ ಹಕ್ಕು ಹೋರಾಟಗಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ಅಂತ್ಯಗೊಂಡಿದ್ದು, ವಾರಾಂತ್ಯದೊಳಗೆ ಅಂತಿಮ ಆದೇಶ ಬರಲಿದೆ.
ಶಬರಿಮಲೆಗೆ ಪ್ರವೇಶ
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10-51 ವರ್ಷದವರೆಗಿನ ಮಹಿಳೆಯರ ಪ್ರವೇಶ ನಿಷೇಧ ವಿಚಾರ ಕಳೆದೊಂದು ದಶಕದಿಂದ ಭಾರತದಲ್ಲಿ ಚರ್ಚೆಯಲ್ಲಿರುವ ವಿಚಾರ. ಈ ಕುರಿತು ಸಿಜೆಐ ನೇತೃತ್ವದ ಸಂವಿಧಾನ ಪೀಠ ಮಹತ್ವದ ಆದೇಶ ಪ್ರಕಟಿಸಲಿದೆ. ಧಾರ್ವಿುಕ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳ ಕುರಿತು ತೀವ್ರ ವಾದ-ಪ್ರತಿವಾದ ನಡೆದ ಪ್ರಕರಣ ಇದು.
ನ್ಯಾ.ಗೊಗೊಯ್ ನೇಮಕ ಪ್ರಶ್ನಿಸಿ ಅರ್ಜಿ
ನ್ಯಾ.ರಂಜನ್ ಗೊಗೊಯ್ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ. ಹಾಲಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಬುಧವಾರ ಈ ಅರ್ಜಿ ವಿಚಾರಣೆ ನಡೆಸಲಿದೆ. ಹಾಲಿ ಸಿಜೆಐ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಪರಂಪರೆ ಹಾಗೂ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಆಂತರಿಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇಂತಹ ವ್ಯಕ್ತಿಗೆ ಸಿಜೆಐ ಹುದ್ದೆ ನೀಡಬಾರದು ಎಂದು ವಕೀಲ ಆರ್.ಪಿ.ಲೂಥ್ರಾ ಅರ್ಜಿ ಸಲ್ಲಿಸಿದ್ದಾರೆ.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment