ನಾನು ಕಳೆದ ಹತ್ತು ದಿನಗಳಿಂದ ಅಮೆರಿಕದ ವಿಭಿನ್ನ, ವಿಚಿತ್ರ ಊರುಗಳಲ್ಲಿ, ಪರಿಸರದಲ್ಲಿ ತಿರುಗಾಡುತ್ತಿದ್ದೇನೆ. ಜಗತ್ತಿನ ಅತಿ ಜನ ನಿಬಿಡ, ಇಪ್ಪತ್ನಾಲ್ಕು ಗಂಟೆಯೂ ಗಿಜಿಗುಡುವ ನ್ಯೂಯಾರ್ಕಿನ ಮ್ಯಾನ್ಹಟನ್ ಪ್ರದೇಶದ ಹೃದಯಭಾಗದಲ್ಲಿರುವ ‘ಟೈಮ್ಸ್ ನಾಲ್ಕು ದಿನ ಇದ್ದವನು, ಅಲೆಮಾರಿಯಂತೆ ಕೊಲರಾಡೋ ಸ್ಟೇಟ್‌ನ ಡೆನ್ವರ್, ಜಿಲೆಟ್, ಕೀಸ್ಟೋನ್, ರ‍್ಯಾಪಿಡ್‌ಸಿಟಿ, ಚುಗ್‌ವಾಟರ್, ಬ್ಲ್ಯಾಕ್ ಹಿಲ್ ನ್ಯಾಷನಲ್ ಫಾರೆಸ್ಟ್, ರೆಡ್‌ರಾಕ್ಸ್, ವಯೋಮಿಂಗ್ ಸ್ಟೇಟ್‌ನ ಮೊಕ್ರೊಫ್ಟ್, ಡೆವಿಲ್ಸ್ ಟವರ್, ಕೋಡಿ, ಯಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್, ಟೆಟೋನ್ ಪಾರ್ಕ್, ಜಾಕ್ಸನ್ ಮುಂತಾದ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದೇನೆ. ನಾನು ಬಂದ ಉದ್ದೇಶ, ಆಶಯ ಒಂದೇ ಆಗಿದ್ದಿದ್ದರೆ ವಿವರಿಸಬಹುದಿತ್ತು. ಅದು ಇಲ್ಲಿ ಅಪ್ರಸ್ತುತ ಬಿಡಿ.
ಅಮೆರಿಕದ ನಗರಗಳ ಜತೆ ಹಳ್ಳಿ, ತೀರಾ ಗ್ರಾಮೀಣ ಪರಿಸರ, ಸಂರಕ್ಷಿತ ಅರಣ್ಯ ಪ್ರದೇಶ, ವನ್ಯಜೀವಿಗಳ ಉದ್ಯಾನವನಗಳಲ್ಲಿ ಅಲೆದಾಡಿದ್ದು ವಿಶೇಷ. ವಯೋಮಿಂಗ್ ಸ್ಟೇಟ್ ಕೌಬಾಯ್‌ಗಳಿಗೆ ಪ್ರಸಿದ್ಧ. ಅದರಲ್ಲೂ ಕೌಬಾಯ್‌ಗಳ ತವರುಮನೆಯಂತಿರುವ ಕೋಡಿ ಎಂಬ ಪುಟ್ಟ ಊರು, ನಮ್ಮ ಹಳ್ಳಿ ಹಾಗೂ ಪಟ್ಟಣಗಳೆರಡನ್ನೂ ನೆನಪಿಸುವ ಬಹಳ ಸುಂದರವಾದ ಪ್ರದೇಶ. ರೈತಾಪಿ ಜನಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಎರಡು-ಮೂರು ತಾಸು ಕಾರಿನಲ್ಲಿ ಅಲೆದಾಡಿದರೂ ಹೊಲಗಳು ಮುಗಿಯುವುದಿಲ್ಲ. ಅಷ್ಟೊಂದು ವಿಶಾಲ ಪ್ರದೇಶದಲ್ಲಿ ನವತಂತ್ರಜ್ಞಾನ ಬಳಸಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವ ಒಬ್ಬೊಬ್ಬ ರೈತನೂ ಪುಟ್ಟ ಮಾಂಡಲಿಕನೇ.
ಮೈಲಿ ಕ್ರಮಿಸಿದರೂ ಒಬ್ಬೇ ಒಬ್ಬ ನರ ಮನುಷ್ಯನಾಗಲಿ, ಪಿಳ್ಳೆಗಳಾಗಲಿ ಕಣ್ಣಿಗೆ ಬೀಳುವುದಿಲ್ಲ. ಇಂಥ ಸಮೃದ್ಧ ನಾಡಿನಲ್ಲಿ ಜನವಸತಿಯೇ ಇಲ್ಲ. ಎಲ್ಲಿ ನೋಡಿದರೂ ಹಸು, ಕುರಿ, ಕಾಡೆಮ್ಮೆ, ಜಿಂಕೆ, ಕುದುರೆ, ಕರಡಿಗಳು.. ಹಸುರು ಹುಲ್ಲುಗಾವಲಿನಲ್ಲಿ ಸಾವಿರಾರು ಜಾನುವಾರುಗಳು ಮೇಯುವ ದೃಶ್ಯ ಎಲ್ಲೆಡೆ ಕಂಡರೆ, ಮನುಷ್ಯರು ಮಾತ್ರ ಕಾಣುವುದಿಲ್ಲ. ಹಾಗಂತ ಇವೆಲ್ಲ ಸಾಗುವಳಿ ಮಾಡುತ್ತಿರುವ, ಫಲವತ್ತಾದ, ನೀರಾವರಿ ಜಮೀನುಗಳೇ. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ತೊರೆ, ನದಿ, ಜಲಾಶಯ, ಕೆರೆ, ಕಟ್ಟೆಗಳು. ಹಸುರು ಹೊದ್ದು ಹೊಲಗಳು ರೈತರ ಶ್ರೀಮಂತಿಕೆ, ಸಮಾಧಾನ, ನೆಮ್ಮದಿಗೆ ಷರಾ ಬರೆದಂತಿದೆ. ಯುರೋಪಿನಂತೆ ಅಮೆರಿಕದ ಗ್ರಾಮೀಣ ಪ್ರದೇಶವೂ ಕೃಷಿ ಚಟುವಟಿಕೆಗಳಿಂದ ಸದಾ ಕ್ರಿಯಾಶೀಲ. ಅಮೆರಿಕದ ನಗರಗಳು ಅಷ್ಟೊಂದು ಝಗಮಗಿಸಲು, ಬೃಹತ್ ಆಗಿ ಬೆಳೆಯಲು ಇಲ್ಲಿನ ಹಳ್ಳಿಗಳೂ ಕಾರಣ.
ಇಲ್ಲಿನ ರೈತರಿಗೂ ಸಮಸ್ಯೆಗಳಿವೆ. ಆದರೆ ಅವು ನಮಗೆ ಅರ್ಥವಾಗುವುದಿಲ್ಲ. ಅವರದು ಸಮೃದ್ಧಿಯ ಸಮಸ್ಯೆ. ಒಬ್ಬ ರೈತನಿಗೆ ಐದು ಸಾವಿರ ಎಕರೆ ಕೃಷಿಭೂಮಿಯಿದೆ. ಅದಕ್ಕೆ ತಕ್ಕಂತೆ ನೀರು, ಫಲವತ್ತತೆ ಇದೆ. ಕೆಲಸಗಾರರು ಸಿಗುವುದೇ ಇಲ್ಲ. ಯಂತ್ರಚಾಲಿತ, ನಿರ್ದೇಶಿತ. ರೈತನ ನಿರೀಕ್ಷೆಗಿಂತ ಹೆಚ್ಚಾಗಿ ಬೆಳೆ ಬಂದರೆ, ಫಸಲು ಬಂದರೆ ಅವನಿಗೆ ತಾಪತ್ರಯ. ಹಾಗಂತ ಅದು ಬೇಡವೆಂದಲ್ಲ, ಬೇಕು. ಆದರೆ ನಿರೀಕ್ಷೆ ಮೀರಿ ಬರುವ ಫಸಲಿನ ಕೊಯಿಲು, ದಾಸ್ತಾನು, ಸಂಗ್ರಹ, ಮಾರಾಟ, ಸಾಗಾಟ ಸ್ವಲ್ಪ ಕಷ್ಟ. ಉಳಿದ ಸಮಸ್ಯೆಗಳಿಗೆ ಗೊಣಗಾಟದಲ್ಲೇ ಉತ್ತರ ಕಂಡುಕೊಳ್ಳುವಷ್ಟು ಅಲ್ಲಿನ ರೈತ ಬುದ್ಧಿವಂತ. ಪ್ರತಿ ನೂರಾರು ಮೈಲಿ ಅಂತರದಲ್ಲಿ ರೈತರು ಬಳಸುವ ವಾಹನಗಳು, ಉಪಕರಣಗಳು ನೂರಿನ್ನೂರು ಎಕರೆ ಪ್ರದೇಶಗಳಲ್ಲಿ ಮಾರಾಟ ಪ್ರದರ್ಶನಕ್ಕೆ ಜೋಡಿಸಿರುವುದು ಅಲ್ಲಿನ ರೈತರ ಕೃಷಿ ವಿಧಾನ, ಪದ್ಧತಿ, ಆಚರಣೆಗಳನ್ನು ತಿಳಿಸಿಕೊಡುತ್ತದೆ.
ಈ ದಿನಗಳಲ್ಲಿ ನಾಲ್ಕೈದು ಸಾವಿರ ಕಿ.ಮೀ. ದೂರವನ್ನು ರಸ್ತೆ ಮಾರ್ಗವಾಗಿ ಕ್ರಮಿಸಿದಾಗ, ಹತ್ತಾರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಸಂರಕ್ಷಿತ ಕಾಡು, ರಾಷ್ಟ್ರೀಯ ಉದ್ಯಾನಗಳಲ್ಲಿ ಓಡಾಡಿದಾಗ ಹೆಜ್ಜೆ ಹೆಜ್ಜೆಗೂ ನೆನಪಾಗುತ್ತಿದ್ದದ್ದು ನಮ್ಮ ಜನ, ನಮ್ಮ ಊರು, ನಮ್ಮ ಮಣ್ಣು ಹಾಗೂ ನಮ್ಮ ಇಂದಿನ ಪರಿಸ್ಥಿತಿ. ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಸರಕಾರ ಅಸ್ಥಿರಗೊಳಿಸುವ ದರಿದ್ರ ರಾಜಕೀಯ ಬಿಟ್ಟರೆ ಬೇರೆ ಇಲ್ಲ. ಈ ರೀತಿಯ ಅರಾಜಕ ಸ್ಥಿತಿ ನಮ್ಮಲ್ಲಿ ಮಾತ್ರ ನೆಲೆಸಲು ಸಾಧ್ಯ.
ಈ ದಿನಗಳಲ್ಲಿ ನಾಲ್ಕೈದು ಸಾವಿರ ಕಿ.ಮೀ. ದೂರವನ್ನು ರಸ್ತೆ ಮಾರ್ಗವಾಗಿ ಕ್ರಮಿಸಿದಾಗ, ಹತ್ತಾರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಸಂರಕ್ಷಿತ ಕಾಡು, ರಾಷ್ಟ್ರೀಯ ಉದ್ಯಾನಗಳಲ್ಲಿ ಓಡಾಡಿದಾಗ ಹೆಜ್ಜೆ ಹೆಜ್ಜೆಗೂ ನೆನಪಾಗುತ್ತಿದ್ದದ್ದು ನಮ್ಮ ಜನ, ನಮ್ಮ ಊರು, ನಮ್ಮ ಮಣ್ಣು ಹಾಗೂ ನಮ್ಮ ಇಂದಿನ ಪರಿಸ್ಥಿತಿ. ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಸರಕಾರ ಅಸ್ಥಿರಗೊಳಿಸುವ ದರಿದ್ರ ರಾಜಕೀಯ ಬಿಟ್ಟರೆ ಬೇರೆ ಇಲ್ಲ. ಈ ರೀತಿಯ ಅರಾಜಕ ಸ್ಥಿತಿ ನಮ್ಮಲ್ಲಿ ಮಾತ್ರ ನೆಲೆಸಲು ಸಾಧ್ಯ.
ಅಮೆರಿಕದಲ್ಲಿ ಕುಳಿತು ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ, ತೀರಾತೀರ ವ್ಯಥೆಯಾಗುತ್ತದೆ. ಪಶ್ಚಾತ್ತಾಪವಾಗುತ್ತದೆ, ನೋವಾಗುತ್ತದೆ. ನಮ್ಮ ಜನಕ್ಕೆ ಯಾವಾಗ ಬುದ್ಧಿ ಬರುವುದೋ, ನಾವು ಯಾವಾಗ ಉದ್ಧಾರವಾಗುವುದೋ, ಇಂಥ ನೀಚ, ಕ್ಷುಲ್ಲಕ ರಾಜಕೀಯ ದೊಂಬರಾಟಳಿಂದ ನಾವು ಯಾವಾಗ ಮುಕ್ತರಾಗುವುದೋ, ನಾವು ಅಮೆರಿಕದಂತೆ ಆಗುವುದು ಯಾವಾಗಲೋ ಎಂಬ ಪ್ರಶ್ನೆ ಸದಾ ಕಿತ್ತು ತಿನ್ನುತ್ತದೆ. ನಾವು ಎಲ್ಲ ಇದ್ದೂ, ಅತ್ಯುತ್ತಮವಾದವುಗಳಿಂದ ದರಿದ್ರರಂತೆ ಗೋಚರಿಸುತ್ತೇವೆ. ಈ ಸರಕಾರ ಅಸ್ತ್ವಿಕ್ಕೆ ಬಂದಾಗಿನಿಂದ ಹಗ್ಗ ಜಗ್ಗಾಟವೇ ಎಲ್ಲಾ ರಾಜಕೀಯ ಪಕ್ಷಗಳ ಮುಖ್ಯ ಕಸುಬಾಗಿಬಿಟ್ಟಿದೆ. ಈ ಸರಕಾರ ಯಾರಿಗಾಗಿ ಇದೆ ಎಂಬುದು ಇಡೀ ರಾಜ್ಯದ ಜನತೆ ಮುಂದಿರುವ ಪ್ರಶ್ನೆ. ಅದಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಅಧಿಕಾರ ಲಾಲಸೆಗಾಗಿ ತೀರಾ ಅಸಹ್ಯ, ವಾಕರಿಕೆ ತರಿಸುವಂಥ ನಡೆ ಪ್ರದರ್ಶಿಸುತ್ತಿದ್ದಾರೆ. ನಾಚಿಕೆ, ಮಾನ, ಮರ್ಯಾದೆಯ ಲವಲೇಶವೂ ಇಲ್ಲದವರಂತೆ ರಾಜಕೀಯ ನಾಯಕರು ವರ್ತಿಸುತ್ತಿದ್ದಾರೆ. ಹತ್ತು ಜನ ಶಾಸಕರು ಒಂದೆಡೆ ಸೇರಿದರೆ ಸಾಕು, ಸರಕಾರ ಬಿದ್ದೇ ಹೋಯಿತು ಎಂಬಂತೆ ಟಿವಿ ಚಾನೆಲ್‌ಗಳು ಅರಚಿ, ಉರಿಯುವ ರಾಜಕೀಯ ಅರಾಜಕತೆಗೆ ತುಪ್ಪ ಸುರಿಯುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳ ಹೊರತಾಗಿ ಈ ಸರಕಾರ ಉಳಿಯುವುದು ಯಾರಿಗೂ ಬೇಕಾಗಿಲ್ಲ. ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಯ ಸೆರಗಿನ ಚುಂಗು ಹಿಡಿದು ನಾಗಾಲೋಟದಲ್ಲಿ ಓಡುತ್ತಿದ್ದರೆ, ನಾವು ಮಾತ್ರ ಇನ್ನೂ ಶಿಲಾಯುಗದ ಮಾನವರಂತೆ ಕಚ್ಚಾಡುತ್ತಿರುವುದು, ಅಧಿಕಾರ ಉಳಿಸಿಕೊಳ್ಳಲು ಹಾಗೂ ಗಿಟ್ಟಿಸಲು ಮಾಡಬಾರದ ಕಸರತ್ತುಗಳನ್ನು ಮಾಡುತ್ತಿರುವುದು ಅಸಹ್ಯದ ಅತಿರೇಕ.
ನಾವು ಈಗ ಕನಸು ಅಮೆರಿಕ ನನಸು ಮಾಡಿ ಆಗಲೇ ಕಾಲು ಶತಮಾನಕ್ಕಿಂತ ಹೆಚ್ಚು ವರ್ಷಗಳಾಗಿವೆ. ಮತ್ತೇನೂ ಬೇಡ, ನಮಗೆ ಇನ್ನೂ ನೆಟ್ಟಗೆ ಸರಿಯಾಗಿ ರಸ್ತೆಯನ್ನೇ ಮಾಡಲು ಸಾಧ್ಯವಾಗಿಲ್ಲ. ಉಳಿದವುಗಳನ್ನು ಮಾಡುವುದು ದೂರವೇ ಉಳಿಯಿತು. ನಮ್ಮಲ್ಲಿ ಹೆಜ್ಜೆ ಹೆಜ್ಜೆಗೆ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ದೃಗ್ಗೋಚರವಾಗುತ್ತದೆ. ಅಮೆರಿಕದ ಯಾವ ವ್ಯಸ್ಥೆಯಲ್ಲೂ ದೋಷಗಳೇ ಕಾಣುವುದಿಲ್ಲ. ಎಲ್ಲವೂ ಇಸ್ತ್ರಿ ಹೊಡೆದಷ್ಟು ಶಿಸ್ತು, ಖಡಕ್. ಗಳಿಗೆ ಮುರಿಯದಷ್ಟು ಕರಾರುವಾಕ್ಕು. ಇಡೀ ವ್ಯವಸ್ಥೆ ಅದರ ಪಾಡಿಗೆ ಅದು ನಿರಂತರವಾಗಿ, ಯಾರ ಕಟ್ಟಪಾಡುಳಿಲ್ಲದೇ ನಡೆದುಕೊಂಡು ಕಾಣುತ್ತದೆ.
ನಾನು ವಯೋಮಿಂಗ್ ಸ್ಟೇಟ್‌ನಲ್ಲಿರುವ ಪ್ರಖ್ಯಾತ ಪ್ರೇಕ್ಷಣೀಯ ತಾಣ ‘ಡೆವಿಲ್ಸ್ ಟವರ್’ಗೆ ಹೋಗಿದ್ದೆ. ಸುಮಾರು 365 ಅಡಿ ಎತ್ತರದಲ್ಲಿ ಕಲ್ಲಿನ ಗೋಪುರ ಅವೆಷ್ಟೋ ಲಕ್ಷ ವರ್ಷಗಳ ಹಿಂದೆ ಇಲ್ಲಿ ತನ್ನಷ್ಟಕ್ಕೇ ಪ್ರತಿಷ್ಠಾಪನೆಗೊಂಡಿದೆ. ದೂರದಿಂದ ನೋಡಿದರೆ ಶಿವಲಿಂಗದಂತೆ ಗೋಚರಿಸುವ ಈ ಟವರ್, ನೂರಾರು ಕಿಮಿ ದೂರದಿಂದ ಕಾಣುತ್ತದೆ. ಭೂಮಿಯಿಂದ ಉಕ್ಕಿದ ಲಾವಾರಸ ಘನೀಕೃತಗೊಂಡು ಈ ಆಕಾರ, ಗಾತ್ರದಲ್ಲಿ ನಿಂತಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಕಲ್ಲಿನ ಗೋಪುರ ಇಲ್ಲಿ ಮೂಡಿರುವ ಬಗ್ಗೆ ಥಿಯರಿಗಳಿವೆ. ವಿಷಯ ಅದಲ್ಲ. ಇದೊಂದು ಪ್ರವಾಸಿ ತಾಣವನ್ನು ಅಮೆರಿಕದ ಮಂದಿ ಮಾರ್ಕೆಟ್ ಮಾಡಿರುವ ರೀತಿ ಆಶ್ಚರ್ಯವೆನಿಸುತ್ತದೆ. ಈ ಜಾಗದಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್‌ನ ‘ಎಕ್ಸಟ್ರಾ ಟೆರಸ್ಟ್ರಿಯಲ್’(ಈಟಿ) ಸಿನಿಮಾ ಶೂಟಿಂಗ್ ಆದ ನಂತರ ಇದರ ಖ್ಯಾತಿ ನೂರು ಪಟ್ಟು ಜಾಸ್ತಿಯಾಯಿತು. ಪ್ರತಿದಿನ ಇಲ್ಲಿಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ. ಡೆವಿಲ್‌ಸ್ ಟವರ್‌ನ ಸುತ್ತಮುತ್ತ ಮೂಲಸೌಲಭ್ಯ, ಸೌಕರ್ಯಗಳನ್ನು ಎಷ್ಟು ಚೆನ್ನಾಗಿ ಕಲ್ಪಿಸಲಾಗಿದೆಯೆಂದರೆ, ಅಲ್ಲಿ ಇಂಥದ್ದೊಂದು ಇರಬೇಕಿತ್ತು ಎಂದು ಅನಿಸುವುದೇ ಇಲ್ಲ. ಅಷ್ಟು ಚೊಕ್ಕಟವಾಗಿ ಇಟ್ಟಿದ್ದಾರೆ. ಈ ಪ್ರದೇಶದ ಬಗ್ಗೆ ಮಾಹಿತಿ ನೀಡುವ ಪುಸ್ತಕ, ಸಿಡಿ ಅಂಗಡಿಗಳಲ್ಲಿ ಎರಡು ದಿನ ಕಳೆಯುವಷ್ಟು ಉತ್ತಮ ಸಂಗ್ರಹವಿದೆ.
ಡೆವಿಲ್ಸ್ ಟವರ್‌ನಷ್ಟೇ ಉತ್ತಮವಾದ ಜಾಗ ನಮ್ಮ ರಾಜ್ಯದಲ್ಲಿ ಇಲ್ಲವೆ? ಖಂಡಿತವಾಗಿಯೂ ಇದೆ. ಉದಾಹರಣೆಗೆ ಉತ್ತರ ಕನ್ನಡದ ಯಾಣ. ‘ನಮ್ಮೂರ ಮಂದಾರೆ ಹೂವೇ’ ಚಿತ್ರ ಯಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿತು. ಸಿನಿಮಾ ಸಹ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದರಿಂದ ಯಾಣಕ್ಕೆ ಜನಪ್ರಿಯತೆ ತಂದುಕೊಟ್ಟಿತು. ಅದಾದ ಬಳಿಕ ಯಾಣಕ್ಕೊಂದು ಡಾಂಬರು ರಸ್ತೆ ದೊರೆಯಿತು. ಇಂದಿಗೂ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿ ಹೇರಳ ಪ್ರಮಾಣದ ಪ್ರವಾಸೋದ್ಯಮಕ್ಕೆ ಅವಕಾಶವಿರುವ ಯಾಣ ನಿರೀಕ್ಷಿತ ಮಟ್ಟದಲ್ಲಿ ಬೆಳೆದೇ ಇಲ್ಲ. ಇಂದಿಗೂ ಸಹ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಜಾಗವಿಲ್ಲ. ಒಳ್ಳೆಯ ಹೋಟೆಲ್ ಸೌಲಭ್ಯವಿಲ್ಲ. ಇವೆಲ್ಲ ಹೋಗಲಿ, ಆ ಜಾಗದ ಬಗ್ಗೆ ಮಾಹಿತಿ ಒದಗಿಸುವ ಕೈಪಿಡಿಗಳಾಗಲಿ, ಪುಸ್ತಿಕೆಗಳಾಗಲಿ ಇಲ್ಲ. ಯಾಣದ ಬಗ್ಗೆ ಹೊರಗಿನಿಂದ ಬಂದ ಪ್ರವಾಸಿಗರಿಗೆ, ವಿದೇಶಿಯರಿಗೆ ಮಾಹಿತಿ ನೀಡುವ ಗೈಡ್‌ಗಳೂ ಇಲ್ಲ. ಕಾಕಪೋಕ ಪ್ರವಾಸಿಗರಿಗೆ ಬಿಯರ್ ಕುಡಿಯಲು, ಪಾರ್ಟಿ ಯಾಣ ಲಾಯಕ್ಕಾದ ಜಾಗವಾಗಿ ಪರಿಣಮಿಸಿದೆ. ಪುರಾಣ ಐತಿಹ್ಯಗಳಿಗಿಂತ, ನೈಸರ್ಗಿಕವಾಗಿ ಎಂಥವರನ್ನೂ ಆಕರ್ಷಿಸುವ ತಾಣವಾಗಿರುವ ಯಾಣದಂತೆ ನಮ್ಮ ರಾಜ್ಯದಲ್ಲಿ ಕನಿಷ್ಠ ನೂರು ಸ್ಥಳಗಳಿವೆ. ಅವೆಲ್ಲವೂ ಪ್ರವಾಸೋದ್ಯಮ ಇಲಾಖೆ ಅನಾಸ್ಥೆಯಿಂದ ಸೊರಗುತ್ತಿವೆ. ಪ್ರವಾಸೋದ್ಯಮದ ಬಗ್ಗೆ ಯಾರಿಗೂ ಆಸಕ್ತಿಯೇ ಇಲ್ಲ. ಅಲ್ಲದೇ ಅದಕ್ಕೆ ಒಂದು ರೂಪು, ಹೊಸ ದಿಕ್ಕು, ಆಶಯ ತೋರಿಸುವ ಯಾವುದೇ ಕರ್ತೃತ್ವ ಶಕ್ತಿಯಾಗಲಿ, ಸೃಜನಶೀಲತೆಯಾಗಲಿ ನಮ್ಮಲ್ಲಿ ಇಲ್ಲ. ನಮ್ಮ ಬಹುತೇಕ ಸೌಲಭ್ಯಗಳೆಲ್ಲ ಎಂದೋ ರೂಪಿಸಿದಂಥವು. ತಂತ್ರ, ತಂತ್ರಜ್ಞಾನಗಳ ಮೂಲಕ ಪ್ರವಾಸಿಗರನ್ನು ಚಾಕಚಕ್ಯತೆಯೂ ನಮ್ಮಲ್ಲಿ ಇಲ್ಲ.
ಮೊನ್ನೆ ನಾನು ಅಮೆರಿಕದಲ್ಲಿ ಮೌಂಟ್ ರಶ್‌ಮೋರ್ ಪಾರ್ಕ್‌ಗೆ ಹೋಗಿದ್ದೆ. ಅಲ್ಲಿ ಒಬ್ಬ ಶಿಲ್ಪಿ ಸ್ವಯಂಪ್ರೇರಿತನಾಗಿ, ಜನರಿಂದ ಹಣ ಸಂಗ್ರಹಿಸಿ ಎತ್ತರದ ಕಲ್ಲಿನ ಗುಡ್ಡದಲ್ಲಿ ದೂರದಿಂದಲೂ ಎಲ್ಲರಿಗೂ ಕಾಣುವ ಹಾಗೆ ನಾಲ್ವರು ಮಹನೀಯರ ಮುಖವನ್ನಷ್ಟೇ ಕಲ್ಲಿನಲ್ಲಿ ಕೆತ್ತಿದ್ದಾನೆ. ಆತ ಮಾಡಿದ್ದಿಷ್ಟೆ, ಗುಡ್ಡದಲ್ಲಿ ಕಲ್ಲಿತ್ತಲ್ಲ, ಅಲ್ಲಿ ಅವರ ಮುಖವನ್ನಷ್ಟೇ ಕೆತ್ತಿದ್ದು. ಅವರು ಅಮೆರಿಕದ ನಾಲ್ವರು ಅತಿ ಪ್ರಸಿದ್ಧ ಅಧ್ಯಕ್ಷರುಗಳು. ಅವು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿ ನೆಲೆಯೂರಲು ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿದು ಅದು ದೇಶದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಲು ಕಾರಣರಾದ ಜಾರ್ಜ್ ವಾಷಿಂಗಟನ್, ಥಾಮಸ್ ಜೆಫರ್‌ಸನ್, ಥಿಯೋಡೋರ್ ರೂಸ್‌ವೆಲ್‌ಟ್ ಹಾಗೂ ಅಬ್ರಹಾಂ ಲಿಂಕನ್ ಅವರ ಮುಖಗಳು.
ನಮ್ಮ ಬೇಲೂರು, ಹಳೇಬೀಡು, ಪಟ್ಟದಕಲ್ಲು, ಐಹೊಳೆಯಲ್ಲಿರುವ ಕಲ್ಲಿನ ಕೆತ್ತನೆ ಕೆಲಸಕ್ಕೆ ಹೋಲಿಸಿದರೆ ಏನೇನೂ ಅಲ್ಲ. ಆದರೆ ಈ ಪ್ರದೇಶವನ್ನು ಹೇಗೆ ಅಭಿವೃದ್ಧಿಪಡಿಸಿದ್ದಾರೆಂದರೆ ಅಲ್ಲಿಗೆ ಭೇಟಿ ನೀಡಿದ್ದು ಶಾಶ್ವತವಾಗಿ ನೆನಪಿರುವಂಥ ಅನುಭವವಾಗಿ ನಮ್ಮಲ್ಲಿ ಉಳಿಯುವಂತೆ ರೂಪಿಸಿದ್ದಾರೆ. ಆ ಗುಡ್ಡದ ಕೆಳಗೆ ಆ ಮುಖಗಳನ್ನು ನೋಡಿದರೆ ಮುಗಿಯುವುದಿಲ್ಲ. ಆ ಕಲ್ಲಿನಲ್ಲಿ ಆ ಮುಖಗಳನ್ನು ಕೆತ್ತಿದ್ದು ಹೇಗೆ ಎಂಬುದನ್ನು ವರ್ಣಿಸುವ ಕಥಾನಕವನ್ನೇ ಅದ್ಭುತವಾಗಿ ಹೇಳುವ ಒಂದು ಪಡಸಾಲೆಯನ್ನೇ ನಿರ್ಮಿಸಿದ್ದಾರೆ. ಅಮೆರಿಕದ ಪ್ರಜಾಪ್ರಭುತ್ವಕ್ಕೆ ಆ ನಾಲ್ವರು ಮಹನೀಯರು ನೀಡಿದ ಕೊಡುಗೆಯನ್ನು ಚಿತ್ರಗಳ ಮೂಲಕ ಬಣ್ಣಿಸಲು ಮತ್ತೊಂದು ಹಜಾರ. ಈ ನಾಲ್ವರನ್ನೇ ಏಕೆ ಆಯ್ದುಕೊಳ್ಳಲಾಯಿತು ಎಂಬುದಕ್ಕೆ ವಿವರ, ಆ ಶಿಲ್ಪಿಯ ಜೀವನ, ಬದುಕನ್ನು ವಿವರಿಸಲು ಮತ್ತೊಂದು ವಿಶಾಲ ಖೋಲಿ. ನಾಲ್ವರು ಅಧ್ಯಕ್ಷರುಗಳ ಬದುಕನ್ನು ತೋರಿಸಲು ಸಣ್ಣ ಆ ಕಲ್ಲಿನಲ್ಲಿ ಕೆತ್ತಿದ ಮುಖಗಳ ಕೆಳಗೆ ಸುಮಾರು ಮೂರು ಸಾವಿರ ಜನ ಕುಳಿತುಕೊಳ್ಳುವ ಬೃಹತ್ ಬಯಲು ವೇದಿಕೆ. ಇನ್ನು ಪುಸ್ತಕದಂಗಡಿ, ಕ್ಯಾಪ್, ಟೀಶರ್ಟ್, ಕೀಚೈನ್, ಗೊಂಬೆ, ತರಹೇವಾರಿ ವಸ್ತುಗಳನ್ನು ಮಾರಾಟ ಮಾಡುವ ದೊಡ್ಡ ಅಂಗಡಿ, ಅದೇ ಪ್ರದೇಶದಲ್ಲಿ ಎಲ್ಲ ರೀತಿಯ ಆಹಾರ, ತಿಂಡಿ, ಪಾನೀಯ ಸಿಗುವಂಥ ಕೆಫೆಟಿರಿಯಾ. ಸುತ್ತಲೂ ಎಲ್ಲಿ ಬೇಕಾದರೂ ಕುಳಿತುಕೊಳ್ಳಲು, ದಣಿವು ನೀಗಿಸಿಕೊಳ್ಳಲು, ವಿಹರಿಸಲು ಅಚ್ಚುಕಟ್ಟಾದ ಸವಲತ್ತು.
ಒಂದು ಇಡೀ ದಿನವನ್ನು ಖುಷಿಯಿಂದ ಕಳೆಯಲು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ಅರಿಯಲು ಇದೊಂದು ಪ್ರಶಸ್ತ ಸ್ಥಳ. ಅಮೆರಿಕದ ಈ ಭಾಗಕ್ಕೆ ಆಗಮಿಸಿದ ಪ್ರವಾಸಿಗರ್ಯಾರೂ ಈ ಪ್ರದೇಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿವರ್ಷ ಮೌಂಟ್ ರಶ್‌ಮೋರ್‌ಗೆ ಸುಮಾರು ಮೂವತ್ತೈದು ಲಕ್ಷ ಮಂದಿ ಭೇಟಿ ಕೊಡುತ್ತಾರಂತೆ. 1940ರಿಂದ ಈ ಪ್ರದೇಶ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ನಮ್ಮ ದೇಶದ ರಾಜಕಾರಣಿಗಳು, ಅಧಿಕಾರಿಗಳು ಇಲ್ಲಿಗೆ ಆಗಮಿಸಿದ್ದಾರೆ. ಶಾಸಕರ ವಿಶೇಷ ತಂಡ ಅಧ್ಯಯನ ಪ್ರವಾಸದ ನೆಪದಲ್ಲಿ ಈ ತಾಣಕ್ಕೂ ಭೇಟಿ ನೀಡಿ ಹೋಗಿದೆ. ಆದರೆ ಇಂಥದೇ ಒಂದು ಜಾಗವನ್ನು ನಮ್ಮಲ್ಲೂ ಮಾಡಬಹುದಲ್ಲ ಎಂದು ಅನಿಸಿಲ್ಲ. ನಮ್ಮ ಲ್ಲಿ ಕಲ್ಲು, ಗುಡ್ಡಗಳಿಲ್ಲವಾ, ಅವುಗಳಿಗಂತೂ ಬರವಿಲ್ಲ. ಬೆಂಗಳೂರಿನಿಂದ ಆರವತ್ತು ಕಿ.ಮೀ. ದೂರದಲ್ಲಿರುವ ರಾಮನಗರದಲ್ಲಿ ಎಲ್ಲಿ ನೋಡಿದರೂ ಕಲ್ಲಿನ ಗುಡ್ಡಗಳು. ಆಧುನಿಕ ಕರ್ನಾಟಕವನ್ನು ರೂಪಿಸಿದ ನಾಲ್ವರು ಮಹನೀಯರ ಮುಖಗಳನ್ನು ಕಲ್ಲಿನಲ್ಲಿ ಕೆತ್ತಿ, ಅಲ್ಲೊಂದು ಪ್ರೇಕ್ಷಣೀಯ ಸ್ಥಳವನ್ನು ರೂಪಿಸಬಹುದಲ್ಲ? ನಾನೂರು-ಐನೂರು ಜನರಿಗೆ ಉದ್ಯೋಗವನ್ನೂ ಕಲ್ಪಿಸಿದಂತಾಗುತ್ತದೆ. ಪ್ರತಿ ವರ್ಷ ಕನಿಷ್ಠ ಐವತ್ತು ಕೋಟಿ ರು. ಲಾಭ ಗಳಿಸಿದಂತಾಗುತ್ತದೆ. ಅಲ್ಲದೇ ಕರ್ನಾಟಕಕ್ಕೆ ದುಡಿದ ಸೇವೆಯನ್ನು ವಿನೂತನವಾಗಿ, ಶಾಶ್ವತವಾಗಿ ನೆನಪಿಸಿದಂತಾಗುತ್ತದೆ. ಈ ಕೆಲಸವನ್ನೂ ಸರಕಾರವೇ ಮಾಡಿದರೆ, 10-12 ಕೋಟಿ ರುಪಾಯಿ ವಿನಿಯೋಗವಾಗಬಹುದು. ಎರಡು ವರ್ಷಗಳಲ್ಲಿ ಒಂದು ಅದ್ಭುತ ಪ್ರವಾಸಿತಾಣವಾಗಿ ಅಚ್ಚುಕಟ್ಟಾಗಿ ರೂಪಿಸಬಹುದು.
ಮೌಂಟ್ ರಶ್‌ಮೋರ್‌ಗೆ ಹತ್ತಿರದಲ್ಲೇ ‘ಕ್ರೇಜಿ ಹಾರ್ಸ್ ಪಾರ್ಕ್’ ಎಂಬ ತಾಣವಿದೆ. ಗುಡ್ಡದ ಕಲ್ಲಿನಲ್ಲಿ ಕುದುರೆ ಮೇಲೆ ಕುಳಿತ ಸವಾರನ ವಿಗ್ರಹ. ಸವಾರನ ಮುಖ ಕೆತ್ತುವಷ್ಟರಲ್ಲಿ ಶಿಲ್ಪಿಯೇ ತೀರಿಹೋದ. ಕೆಲ ಕಾಲ ಆ ವಿಗ್ರಹದ ಕೆಲಸ ನಿಂತುಹೋಗಿತ್ತು. ಈಗ ಶುರುವಾಗಿದೆ. ಆದರೆ ಅದನ್ನು ಆಗಮಿಸುವ ಪ್ರವಾಸಿಗರ ಸಂಖ್ಯೆ ಮಾತ್ರ ನಿಂತಿಲ್ಲ. ಒಂದ ಅಪೂರ್ಣ ಕಲಾಕೃತಿಯ ತಾಣವನ್ನೂ ಜನಪ್ರಿಯ ಪ್ರವಾಸಿ ಕೇಂದ್ರವಾಗಿ ಹೇಗೆ ಪರಿವರ್ತಿಸಬಹುದು, ಅದನ್ನೂ ಹೇಗೆ ಮಾರ್ಕೆಟ್ ಮಾಡಬಹುದು ಎಂಬುದನ್ನು ಅಮೆರಿಕನ್‌ರಿಂದ ಕಲಿಯಬೇಕು. ಆ ಗುಡ್ಡದಲ್ಲಿ ಅರ್ಧಂಬರ್ಧ ಕೆತ್ತಿದ ಕುದುರೆ ಸವಾರನನ್ನೂ ನೋಡಲು ದಿನವೂ ಏಳೆಂಟು ಸಾವಿರ ಜನ ಜಗತ್ತಿನ ಎಲ್ಲೆಲ್ಲಿಂದಲೋ ಬರುತ್ತಾರೆ. ಈ ಕಲಾಕೃತಿಯನ್ನು ಪೂರ್ಣಗೊಳಿಸುವ ಮುನ್ನವೇ ನೋಡಿದರೆ, ‘ಇತಿಹಾಸದ ವ್ಯಾಖ್ಯಾನಕಾರ’ರು ನೀವೇ ಆಗುತ್ತೀರ ಎಂಬ ರೀತಿಯಲ್ಲಿ ತಲೆಯೊಳಗೆ ತುಂಬುತ್ತಾರೆ. ಅದು ಹೌದು. ಕ್ರೇಜಿ ಹಾರ್ಸ್ ವಿಗ್ರಹ ಆ ಗುಡ್ಡದಲ್ಲಿ ಇನ್ನು ಹತ್ತು ವರ್ಷಗಳೊಳಗೆ ಪೂರ್ಣಗೊಳ್ಳಬಹುದು. ಅದಾದ ಬಳಿಕ ಆ ತಾಣ ಅದ್ಭುತವಾದ ತಾಣವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕಿಂತ ಮೊದಲೇ ಆ ಪ್ರದೇಶ ಈಗಾಗಲೇ ಜಗದ್ವಿಖ್ಯಾತವಾಗಿಬಿಟ್ಟಿದೆ. ಇದು ಪ್ರವಾಸೋದ್ಯಮ ಬೆಳೆಸುವ ಪರಿ.
ಇವೆಲ್ಲ ನಮ್ಮ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಯಾವಾಗ ಅರ್ಥವಾಗುವುದೋ? ನಾವೇನೂ ಹೊಸದಾಗಿ ಚಿಂತಿಸಬೇಕಿಲ್ಲ. ನಮ್ಮ ಮುಂದೆ ಸಿದ್ಧ ಮಾದರಿಗಳಿವೆ. ಅವನ್ನು ನಾವು ನಮ್ಮಲ್ಲಿ ರೂಪಿಸಿದರಾಯಿತು. ನಮ್ಮಲ್ಲಿ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಕೆಲಸಕ್ಕೆ ಬಾರದ ನಿರರ್ಥಕ ಯೋಜನೆಗಳಿಗೆ ಸಾವಿರಾರು ಕೋಟಿ ರುಪಾಯಿಗಳನ್ನು ಸುರಿಯುತ್ತೇವೆ. ಆದರೆ ಇರುವ ಸಂಪನ್ಮೂಲವನ್ನೇ ಸರಿಯಾಗಿ ಅಭಿವೃದ್ಧಿಪಡಿಸಿ ಸಾರ್ಥಕಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ.
ನಮಗೆ ಯಾವಾಗ ಬುದ್ಧಿ ಬರುವುದೋ? ಗೊತ್ತಿಲ್ಲ.
ನಮಗೆ ಯಾವಾಗ ಬುದ್ಧಿ ಬರುವುದೋ? ಗೊತ್ತಿಲ್ಲ.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment