ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಪೀಠಗಳು ನಿರ್ಬಂಧಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಸಂಸತ್ತು ಕಾನೂನು ರೂಪಿಸಬೇಕೆಂದು ಹೇಳಿದೆ. ಪ್ರಜಾಪ್ರಭುತ್ವದ ಹಿತಾಸಕ್ತಿಗಾಗಿ, ಗಂಭೀರ ಅಪರಾಧಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಜನಪ್ರತಿನಿಧಿಗಳ ಚುನಾವಣೆ ಸ್ಪರ್ಧೆಗೆ ಸಂಸತ್ನಲ್ಲೇ ಕಡಿವಾಣ ಹಾಕಬೇಕು. ಕೋರ್ಟು ಲಕ್ಷ್ಮಣರೇಖೆಯನ್ನು ದಾಟುವುದಿಲ್ಲ ಎಂದು ಸಂವಿಧಾನಪೀಠ ಹೇಳಿತಾದರೂ, ಅಭ್ಯರ್ಥಿಗಳು ಹಾಗೂ ಟಿಕೆಟ್ ನೀಡಿದ ಪಕ್ಷವೇ ಆರೋಪಿ ಅಭ್ಯರ್ಥಿಯ ಅಪರಾಧ ಹಿನ್ನೆಲೆ ಕುರಿತಂತೆ ಕನಿಷ್ಠ ಮೂರು ಬಾರಿ ಪ್ರಮುಖ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು ಎಂದು ಸೂಚಿಸಿತು.
ಸಾರ್ವಜನಿಕ ಹಿತಾಸಕ್ತಿ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಪೀಠ ಮಂಗಳ ವಾರ ಈ ಆದೇಶ ನೀಡಿದೆ. ಇದರಿಂದ ಮೇಲ್ನೋಟಕ್ಕೆ ಆರೋಪಿ ಜನಪ್ರತಿನಿಧಿಗಳು ನಿರಾಳರಾಗುವಂತಿದ್ದರೂ ಸಾರ್ವಜನಿಕವಾಗಿ ಅಭ್ಯರ್ಥಿಗಳ ಅಪರಾಧ ಬಹಿರಂಗಪಡಿ ಸುವ ನಿರ್ದೇಶನ, ಸಂಸತ್ಗೆ ಕಾನೂನು ರಚಿಸುವ ಸಲಹೆ ಮೂಲಕ ಆದೇಶ ದೂರಗಾಮಿ ಮಹತ್ವ ಪಡೆದುಕೊಂಡಿದೆ.ಆಪಾದಿತ ಅಥವಾ ಕಳಂಕಿತ ಜನಪ್ರತಿನಿಧಿಗಳು ಅಥವಾ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿರಬಾರದೆನ್ನುವುದು ಜನಪ್ರತಿನಿಧಿ ಕಾಯ್ದೆಯ ಆಶಯವೂ ಆಗಿದೆ. ಲಿಲ್ಲಿ ಥಾಮಸ್ ಪ್ರಕರಣದಲ್ಲೂ ಈ ಕುರಿತು ಆದೇಶವಿದೆ.
ಮುಂದೇನು?
- ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಮುಂದಾಗಬಹುದು
- ಕಾಯ್ದೆ ರಚನೆಗೆ ಮೊದಲು ಕಾನೂನು ಆಯೋಗ, ತಜ್ಞರು ಮತ್ತು ರಾಜಕೀಯ ಪಕ್ಷಗಳ ಸಲಹೆ ಕೇಳಬಹುದು.
ಆಯೋಗಕ್ಕೆ ನಿರ್ದೇಶನ
- ಅಪರಾಧ ಹಿನ್ನೆಲೆ ಕುರಿತು ಅಭ್ಯರ್ಥಿಗಳು ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಬೇಕು.
- ಅಭ್ಯರ್ಥಿಯ ವಿರುದ್ಧ ಬಾಕಿ ಇರುವ ಎಲ್ಲ ಅಪರಾಧ ಪ್ರಕರಣಗಳ ವಿವರಗಳು ದಪ್ಪ ಅಕ್ಷರಗಳಲ್ಲಿರಬೇಕು.
- ಸ್ಪರ್ಧೆ ವೇಳೆ ಅಪರಾಧ ಹಿನ್ನೆಲೆ ಕುರಿತು ಕಡ್ಡಾಯವಾಗಿ ಪಕ್ಷಕ್ಕೆ ಮಾಹಿತಿ ನೀಡಬೇಕು.
- ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಕುರಿತು ಎಲ್ಲ ಪಕ್ಷಗಳು ವೆಬ್ಸೈಟ್ನಲ್ಲಿ ಮಾಹಿತಿ ನೀಡಬೇಕು.
- ನಾಮಪತ್ರ ಸಲ್ಲಿಕೆಯಾದ ಮೇಲೆ ಆಯಾ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಕುರಿತು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಕನಿಷ್ಠ 3 ಬಾರಿ ಅತಿ ಹೆಚ್ಚು ಪ್ರಸರಣ ಇರುವ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಪ್ರಮಾಣಪತ್ರದ ವಿವರದ ಜಾಹೀರಾತು ನೀಡಬೇಕು.
ಹಾಲಿ ಇರುವ ನಿಯಮವೇನು?
ಗಂಭೀರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಣೆಯಾಗಿ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ಪ್ರಕಟವಾದಲ್ಲಿ ಆ ಜನಪ್ರತಿನಿಧಿಯ ಸದಸ್ಯತ್ವ ರದ್ದಾಗುತ್ತದೆ. ಮುಂದಿನ 6 ವರ್ಷ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ.
ಸುಧಾರಣೆಗೆ ಹಿಂಜರಿಯಲ್ಲ
ಆರೋಪಿಗಳು, ಕಳಂಕಿತರನ್ನು ಚುನಾವಣೆ ವ್ಯವಸ್ಥೆಯಿಂದ ದೂರ ಇಡಲು ರಾಜಕೀಯ ಪಕ್ಷಗಳು ಹಾಗೂ ಸಂಸತ್ತಿನಿಂದಲೇ ಕಠಿಣ ಕ್ರಮವಾಗಬೇಕು. ಆದರೆ ಹಾಲಿ ಇರುವ ಕಾನೂನು ವ್ಯವಸ್ಥೆಯಲ್ಲಿ ಚುನಾವಣೆ ಆಯೋಗದ ಮೂಲಕ ಕೆಲ ಸುಧಾರಣೆ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ನಿರ್ದೇಶನ ನೀಡಲು ಕೋರ್ಟ್ ಹಿಂಜರಿಯುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆದರೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ರಾಜಕಾರಣಿಗಳನ್ನು ಚುನಾವಣೆಯಿಂದ ನಿಷೇಧಿಸುವ ಅಥವಾ ಅಂಥ ಜನಪ್ರತಿನಿಧಿಗಳ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನನ್ನು ಏಕಾಏಕಿ ನ್ಯಾಯಾಂಗ ಮಾಡಲು ಸಾಧ್ಯವಿಲ್ಲ. ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವುದು ಸಂಸತ್ತಿನ ಕೆಲಸವಾಗಿದ್ದು, ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಸಂವಿಧಾನಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರಕ್ಕೆ ಸುಪ್ರೀಂ ಸಲಹೆ
- ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವವರ ರಾಜಕೀಯ ಪ್ರವೇಶಕ್ಕೆ ನಿರ್ಬಂಧ ಹೇರಬೇಕು.
- ಸುಳ್ಳು ಪ್ರಕರಣಗಳ ಮೂಲಕ ರಾಜಕೀಯ ಷಡ್ಯಂತ್ರ ನಡೆಸುವುದನ್ನೂ ನಿಯಂತ್ರಿಸಬೇಕು.
- ರಾಜಕೀಯ ಹಾಗೂ ಆಡಳಿತ ಶುದ್ಧಿಗಾಗಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಧನಾತ್ಮಕ ಹೆಜ್ಜೆ ಇಡಬೇಕು.
- ಅಪರಾಧ ಹಿನ್ನೆಲೆಯಿಲ್ಲದ ಆಯ್ಕೆಯನ್ನು ಮತದಾರನಿಗೆ ನೀಡುವುದು ವ್ಯವಸ್ಥೆಯ ಜವಾಬ್ದಾರಿ, ಮತದಾರನ ಹಕ್ಕು ಕಾಪಾಡುವುದು ಸರ್ಕಾರದ ಕರ್ತವ್ಯ.
ಪೀಠದ ಖಡಕ್ ನಿಲುವು
- ರಾಜಕೀಯ ಹಾಗೂ ಆಡಳಿತದಲ್ಲಿ ಅಪರಾಧೀಕರಣ ಸೇರ್ಪಡೆ ಪ್ರಜಾಪ್ರಭುತ್ವಕ್ಕೆ ಅಪಾಯ.
- ಭ್ರಷ್ಟಾಚಾರ, ಅಪರಾಧೀಕರಣ ಕುರಿತು ಮತದಾರರು ಹಾಗೂ ಪ್ರಜಾಪ್ರಭುತ್ವವು ಕುರುಡು, ಕಿವುಡಾಗಿರಲು ಸಾಧ್ಯವಿಲ್ಲ.
- ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನು ನೋಡಿ ಮತದಾರನು ಇದು ತನ್ನ ಕೆಟ್ಟ ಹಣೆಬರಹ ಎಂದು ಹೇಳಿಕೊಳ್ಳಲು ಅವಕಾಶ ನೀಡಬಾರದು.
- ಉತ್ತಮ ಅಭ್ಯರ್ಥಿಯ ಮೂಲಕ ಈ ದೇಶದ ಹಣೆಬರಹವನ್ನು ಮತದಾರ ನಿರ್ಧರಿಸಬೇಕು.
- ಹಣ ಹಾಗೂ ತೋಳ್ಬಲವು ಪ್ರಜಾಪ್ರಭುತ್ವಕ್ಕಿಂತ ಹೆಚ್ಚಿನದು ಎಂಬ ಭಾವನೆ ಯಾರಿಗೂ ಬರಬಾರದು.
ಸುಪ್ರೀಂಕೋರ್ಟ್ಗೆ ಕಾನೂನು ಮಾಡುವ ಅಧಿಕಾರವಿಲ್ಲ. ಯಾವುದೇ ಅಂಶಗಳು ಅಥವಾ ಶಾಸನಸಭೆ ರೂಪಿಸಿರುವ ಕಾನೂನುಗಳು ಸಂವಿಧಾನಬದ್ಧವಾಗಿವೆಯೇ ಅಥವಾ ಇಲ್ಲವೇ ಎನ್ನುವುದನ್ನಷ್ಟೇ ಕೋರ್ಟುಗಳು ನಿರ್ಧರಿಸಬಹುದು. ರಾಜಕೀಯ ಅಪರಾಧೀಕರಣ ಮುಂತಾದ ಗಂಭೀರ ವಿಚಾರ ಬಂದಾಗ ನ್ಯಾಯಾಲಯ ವಿಮರ್ಶೆ ಮಾಡಿ ಸರ್ಕಾರಕ್ಕೆ ಮನವಿ ಅಥವಾ ನಿರ್ದೇಶನ ಮಾಡುವುದು ಸಾಮಾನ್ಯ. ಹೀಗಾಗಿ ಈ ಆದೇಶ ಉತ್ತಮವಾಗಿದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಶೇ.37, ಕಾಂಗ್ರೆಸ್ನ ಶೇ.29 ಹಾಗೂ ಜೆಡಿಎಸ್ನ ಶೇ.22 ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿದ್ದರು. ಎಲ್ಲರಿಗೂ ಅಭ್ಯರ್ಥಿಗಳ ಗೆಲುವೊಂದೇ ಮುಖ್ಯವಾಗಿರುವಾಗ ಇಂತಹ ವ್ಯವಸ್ಥೆ ಸೃಷ್ಟಿಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಹೇಳಿದಂತೆ ಕಾನೂನು ಮಾಡುವುದು ಅನಿವಾರ್ಯ. ಆದರೆ ಹೇಗೆ ಮಾಡುತ್ತಾರೋ ಗೊತ್ತಿಲ್ಲ. ಹೊಸ ಕಾಯ್ದೆ ರಚಿಸುವ ವಿಚಾರದಲ್ಲಿ ಸರ್ಕಾರ ಅಥವಾ ಎಲ್ಲ ರಾಜಕೀಯ ಪಕ್ಷಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎನ್ನಲು ಸಾಧ್ಯವಿಲ್ಲ. ಆದಾಗ್ಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಕೋರ್ಟ್ನ ಅಭಿಪ್ರಾಯವನ್ನು ಸಮಾಜಕ್ಕೆ ತಿಳಿಸಲು ಈ ಆದೇಶ ಪ್ರಮುಖವಾಗಿದೆ. ಚುನಾವಣೆ ಆಯೋಗಕ್ಕೆ ನೀಡಿರುವ 5 ನಿರ್ದೇಶನಗಳನ್ನು ಸರಿಯಾಗಿ ಪಾಲಿಸಿದರೆ ಕಳಂಕಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಬಹುದು.| ನ್ಯಾ.ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ
ಜನಪ್ರತಿನಿಧಿಗಳ ವಕೀಲಿಕೆ ಓಕೆ!
ಜನಪ್ರತಿನಿಧಿಗಳು ವಕೀಲಿ ವೃತ್ತಿಯಲ್ಲಿ ಮುಂದುವರಿಯುವುದನ್ನು ನಿಷೇಧಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಜನಪ್ರತಿನಿಧಿಗಳನ್ನು ಸರ್ಕಾರಿ ಉದ್ಯೋಗಿಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಕೋರ್ಟ್ನಲ್ಲಿ ವೃತ್ತಿಪರ ವಕೀಲರಾಗಿ ಮುಂದುವರಿಯಲು ಕಾನೂನು ತೊಡಕಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಕೆಲ ಪ್ರಮುಖ ರಾಜಕಾರಣಿ-ವಕೀಲರು: ಪಿ.ಚಿದಂಬರಂ, ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಕೆ.ಟಿ.ಎಸ್.ತುಳಸಿ, ಪಿನಾಕಿ ಮಿಶ್ರಾ, ಮೀನಾಕ್ಷಿ ಲೇಖಿ, ಕೆ.ಪರಸರನ್
ಆಧಾರ್, ಅಯೋಧ್ಯೆ ಸೇರಿ 6 ಪ್ರಕರಣ ತೀರ್ಪಿಗೆ ದಿನಗಣನೆ
ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇವಾವಧಿಯ ಕೊನೆಯ ವಾರ ಇದಾಗಿರುವುದರಿಂದ ಆಧಾರ್ ಸಾಂವಿಧಾನಿಕ ಮಾನ್ಯತೆ, ಅಯೋಧ್ಯೆ ವಿವಾದ, ಮೀಸಲು ಬಡ್ತಿ ಸೇರಿ 6ಕ್ಕೂ ಅಧಿಕ ಪ್ರಕರಣಗಳ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಆಧಾರ್ ಗುರುತಿನ ಚೀಟಿಯ ಸಾಂವಿಧಾನಿಕ ಮಾನ್ಯತೆ, ಪರಿಶಿಷ್ಟರ ಮೀಸಲು ಬಡ್ತಿ ಹಾಗೂ ಕೋರ್ಟ್ ಕಲಾಪಗಳ ನೇರ ಪ್ರಸಾರ ಕುರಿತು ಬುಧವಾರ ಆದೇಶ ಬರಲಿದೆ.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment