ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರಾಜ್ಯದ ಲಕ್ಷಾಂತರ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಜಮೀನಿನಲ್ಲಿ ಮಾಡುತ್ತಿರುವ ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡುವ ಸಂಬಂಧ ಮತ್ತೊಮ್ಮೆ ಅರ್ಜಿ ಕರೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಬಹಳ ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ರಾಜ್ಯದ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಇನ್ನಿಲ್ಲ ಭೀತಿ:
ರಾಜ್ಯ ಸರ್ಕಾರ ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನ ಕೈಬಿಟ್ಟಿದ್ದರಿಂದಾಗಿ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದ ಅರ್ಹ ರೈತರಿಗೆ ಜೈಲು ಭೀತಿ ಎದುರಾಗಿತ್ತು. ಇದೀಗ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿರುವುದು ರೈತರಿಗೆ ಖುಷಿ ತಂದಿದೆ. ಸರ್ಕಾರ ಭೂ ಕಂದಾಯ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ವಯ ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಿಯಮಾವಳಿಗಳ ಕರಡು ಪ್ರಕಟಿಸಿದೆ. ಅಂತಿಮ ನಿಯಮಾವಳಿಗಳು ಆಗಸ್ಟ್ ಮೊದಲ ವಾರ ಪ್ರಕಟವಾಗಲಿವೆ.
20 ವರ್ಷದ ಬಳಿಕ ಅರ್ಜಿ ಆಹ್ವಾನ: ಅಕ್ರಮ ಸಾಗುವಳಿ ಸಕ್ರಮಕ್ಕೆ ಸರ್ಕಾರ ಕೊನೆಯದಾಗಿ ಅರ್ಜಿ ಕರೆದು 20 ವರ್ಷಗಳಾಗಿದೆ. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅರ್ಜಿ ಕರೆಯಲಾಗಿತ್ತು. ಆ ಬಳಿಕ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅರ್ಜಿ ಕರೆಯಲು ಒಪ್ಪಿಗೆ ನೀಡಿದ್ದರು. 1998ರಲ್ಲಿ ಜೆ.ಎಚ್. ಪಟೇಲರ ಅವಧಿಯಲ್ಲೂ ಅರ್ಜಿ ಆಹ್ವಾನಿಸಲಾಗಿತ್ತು. ಆ ನಂತರ ಸಾಕಷ್ಟು ಒತ್ತಡ ಬಂದರೂ ಯಾವುದೇ ಸರ್ಕಾರಗಳು ಮುಂದಾಗಿರಲಿಲ್ಲ. ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಬಗರ್ಹುಕುಂ ಅರ್ಜಿ ಕರೆಯಲು ಎಲ್ಲ ಸಿದ್ಧತೆ ಮಾಡಿದ್ದರು.
ಲಕ್ಷಾಂತರ ರೈತರಿಗೆ ಪ್ರಯೋಜನ
ಹಿಂದೆ ಅರ್ಜಿಗಳು ತಿರಸ್ಕೃತವಾಗಿರುವ, ಕಳೆದು ಹೋಗಿರುವ ಹಾಗೂ ಹೊಸದಾಗಿ ಸಾಗುವಳಿ ಮಾಡುತ್ತಿರುವ ರೈತರು ಸೇರಿ ಒಟ್ಟಾರೆ 12-13 ಲಕ್ಷ ಮಂದಿಗೆ ಇದರಿಂದ ಅನುಕೂಲವಾಗಬಹುದೆಂಬ ಅಂದಾಜಿದೆ.
ಅರ್ಜಿ ಕಳೆದವರೂ ಸಲ್ಲಿಸಬಹುದು:
ತಾಲೂಕು ಕಚೇರಿಗಳಲ್ಲಿ ಬಾಕಿ ಇರುವ ಅರ್ಜಿಗಳಲ್ಲಿ ಸುಮಾರು 60 ಸಾವಿರ ಅರ್ಜಿಗಳು ಕಳೆದುಹೋಗಿವೆ ಎಂಬ ಅಂದಾಜಿದೆ. ಅಂತಹ ರೈತರೂ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನಿಯಮಗಳೇನು?
ಹಿಂದೆ ಫಾರಂ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದವರು ಮತ್ತೆ ಸಲ್ಲಿಸುವ ಅಗತ್ಯವಿಲ್ಲ. ಈಗ ಫಾರಂ 57ರಡಿ ಅರ್ಜಿ ಕರೆಯಲಾಗುತ್ತದೆ. ಅರ್ಜಿ ಸ್ವೀಕರಿಸುವ ತಹಸೀಲ್ದಾರರು ದಾಖಲೆ, ಸ್ಥಳ ಪರಿಶೀಲನೆ ಮಾಡಿ ವರದಿ ಸಿದ್ಧಪಡಿಸಿ ಬಗರ್ಹುಕುಂ ಸಮಿತಿಗೆ ಮೂರು ತಿಂಗಳೊಳಗೆ ಸಲ್ಲಿಸಬೇಕು. ಸಮಿತಿ ತೀರ್ಮಾನ ಮಾಡಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ನಂತರ 15 ದಿನಗಳಲ್ಲಿ ಪರಿಶೀಲನೆ ಮಾಡಿ ಅರ್ಜಿ ಮಂಜೂರು ಅಥವಾ ತಿರಸ್ಕಾರಕ್ಕೆ ಶಿಫಾರಸು ಮಾಡಬೇಕು. ಅರ್ಜಿ ತಿರಸ್ಕೃತವಾದರೆ ಅಂಥವರು ಸಹಾಯಕ ಆಯುಕ್ತರ ಹಾಗೂ ಜಿಲ್ಲಾಧಿಕಾರಿ ನೇತೃತ್ವದ ಮೇಲ್ಮನವಿ ಪ್ರಾಧಿಕಾರಗಳಲ್ಲಿ ದೂರು ದಾಖಲಿಸಬಹುದು.
ಸಮಿತಿಗಳ ರಚನೆ
ಶಾಸಕರ ಅಧ್ಯಕ್ಷತೆಯಲ್ಲಿ ಬಗರ್ಹುಕುಂ ಸಮಿತಿಗಳು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಇದೀಗ ಹೊಸದಾಗಿ ಶಾಸಕರು ಆಯ್ಕೆಯಾಗಿರುವ ಕಾರಣ ಸಮಿತಿಗಳನ್ನು ರಚನೆ ಮಾಡಬೇಕಾಗಿದೆ. ಆ ಕೆಲಸವೂ ಆಗುತ್ತಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಯಾರಿಗೆ ಅನ್ವಯ?
ಕರಡಿನ ಪ್ರಕಾರ 2005ರ ಜನವರಿಗೆ ಮುನ್ನ ಮೂರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರು ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.
ಅನ್ನದಾತರಿಗೆ ಹೊಸ ಸಾಲ ಸಿದ್ಧ
ಬೆಂಗಳೂರು: ಸಾಲದ ಭಾರ ಕರಗುತ್ತಿದ್ದಂತೆಯೇ ರೈತರ ಹೊಸ ಸಾಲದ ಚಿಂತೆಗೂ ಸರ್ಕಾರ ತೆರೆ ಎಳೆದಿದೆ. ರಾಜ್ಯದ ರೈತರಿಗೆ 3 ಲಕ್ಷ ರೂ. ವರೆಗಿನ ಶೂನ್ಯ ಬಡ್ಡಿ ದರದ ಬೆಳೆ ಸಾಲ ನೀಡಲು ಸಹಕಾರ ಸಂಘಗಳಿಗೆ ಸರ್ಕಾರ ಸೂಚಿಸಿದೆ. ಈ ಹಿಂದೆ ಸಾಲ ಪಡೆಯುತ್ತಿರುವ ರೈತರ ಜತೆಗೆ ಶೇ.25 ಹೊಸ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲು ನಿರ್ದೇಶಿಸಲಾಗಿದೆ.
ಅರ್ಜಿ ಎಷ್ಟಿವೆ?
ಹಿಂದೆ ಅರ್ಜಿ ಕರೆದಾಗ 10.94 ಲಕ್ಷ ರೈತರು 26.06 ಲಕ್ಷ ಎಕರೆ ಭೂಮಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ವಿಲೇವಾರಿಯಾಗಿರುವುದು 1.51 ಲಕ್ಷ ಅರ್ಜಿ ಮಾತ್ರ. ಶಾಸಕರ ಅಧ್ಯಕ್ಷತೆಯ ಸಮಿತಿಗಳು 5.40 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿವೆ. 4.03 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಕಳೆದ 20 ವರ್ಷಗಳಲ್ಲಿ ಹೊಸದಾಗಿ ಸಾಗುವಳಿ ಮಾಡುತ್ತಿರುವವರು 4 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎಂಬುದು ಒಂದು ಅಂದಾಜು.
ಅರ್ಜಿ ಜತೆ ಆಧಾರ್ ಸಲ್ಲಿಕೆ ಕಡ್ಡಾಯ
ಅನರ್ಹರು ಅಕ್ರಮವಾಗಿ ಭೂಮಿ ಪಡೆಯುವುದನ್ನು ತಪ್ಪಿಸುವ ಸಲುವಾಗಿ ಆಧಾರ್ ಸಂಖ್ಯೆಯನ್ನು ಅರ್ಜಿಯೊಂದಿಗೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹಿಂದೆ ಬೇಕಾಬಿಟ್ಟಿ ಮಂಜೂರಾಗಿವೆ ಎಂದು ಕೇಳಿಬಂದಿದ್ದ ದೂರುಗಳ ತನಿಖೆಗೂ ಸರ್ಕಾರ ಮುಂದಾಗಿದೆ.
No comments:
Post a Comment