ಪಿಎಫ್ - ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ ಶೈಲಿಯಲ್ಲಿ ಬಜೆಟ್ ಮಂಡಿಸಲು ಆರಂಭಿಸಿದಳು. ಮಗರಾಯ ಲೆಕ್ಕದಲ್ಲಿ ಲೆಕ್ಕಕ್ಕೆ ಮಾತ್ರ ಎಂಬುದು ಮನೆಯವರಿಗೆ ಬಿಡಿ, ನಿಮಗೂ ಗೊತ್ತಿರುವ ವಿಚಾರ! ಇಂತಿಪ್ಪ ಆಸಕ್ತಿಹೀನ ಪತಿರಾಯ ಸ್ವಲ್ಪಕಾಲ ಪತ್ನಿಯ ಭಾಷಣವನ್ನು ಕೇಳುವ ನಾಟಕ ಮಾಡಿ ಒಂದೆರಡು ಬಾರಿ ಹೆಬ್ಟಾವಿನಂತೆ ದೊಡ್ಡದಾಗಿ ಬಾಯಿ ತೆರೆದು ಎಂಜಿಎಂ ಸಿನೆಮಾ ಕಂಪೆನಿಯ ಸಿಂಹದಂತೆ ಆಂ. . .' ಎಂದು ಸಶಬ್ದವಾಗಿ ಆಕಳಿಸಿ ರಿಮೋಟನ್ನು ಹುಡುಕಲು ಹೊರಟನು. ಮಗರಾಯ ರಿಮೋಟನ್ನು ಇನ್ನಾರಿಗೂ ಸಿಗದಂತೆ ಅಪ್ಪನ ನಾತ ಹೊಡೆಯುವ ಶೂವಿನೊಳಕ್ಕೆ ಅಡಗಿಸಿಟ್ಟು ಟಾಮ್ ಐಂಡ್ ಜೆರ್ರಿಯಲ್ಲಿ ಲೀನನಾಗಿದ್ದನು. ಅತ್ತ ಗುರುಗುಂಟಿರಾಯರು ಈಸಿಚೇರಿನಲ್ಲಿ ಕುಳಿತು ಸೊಸೆಯಾಡುವ ಮಾತಿನÇÉೇನಾದರು ತನ್ನ ಪೆನ್ಶನ್ ದುಡ್ಡಿಗೆ ಹೊಸಕತ್ತರಿಗಳಿವೆಯೋ ಎಂಬ ಆತಂಕ ಮಿಶ್ರಿತ ಕುತೂಹಲದಿಂದ ಓರೆಗಣ್ಣು ಪ್ಲಸ್ ಓರೆಕಿವಿಯಾಗಿ ಕೇಳುತ್ತಿದ್ದರು. ಸೊಸೆ ತಾನು ಸ್ಕೆಚ್ ಹಾಕುತ್ತಿರುವ ಎಕ್ಕೂರು ಗುಡ್ಡೆಯ ಹೊಸ ಸೈಟಿಗೆ ತನ್ನ ಪಿಎಫ್ ದುಡ್ಡು, ಅದು-ಇದು ಅಂತ ಹೊಂದಿಸ ಲಾಗುತ್ತದೆಯೇ ಎಂಬ ಲೆಕ್ಕಾಚಾರವನ್ನು ಅನಾವರಣಗೊಳಿಸುತ್ತಿ ದ್ದುದು ರಾಯರಿಗೆ ಅರ್ಥವಾಯಿತು. ಸದ್ಯ ಅವಳ ಎಕ್ಕೂರ್ ಗುಡ್ಡೆಯ ಸೈಟಿಗೆ ತನ್ನ ಪೆನ್ಶನ್ ದುಡ್ಡಿನ ದೇಣಿಗೆ ಇಲ್ಲವಲ್ಲ ಸಾಕು, ಉಳಿದಂತೆ ಅವಳು ಇನ್ನು ಏನಾದರೂ ಮಾಡಿಕೊಳ್ಳಲಿ ಅಂತ ಸಮಾಧಾನಪಟ್ಟುಕೊಂಡು ಒಂದು ದೀರ್ಘವಾದ ನಿಟ್ಟುಸಿರು ಬಿಟ್ಟು ನಿರಾಳರಾದರು.
***
Employees Provident Fund Act,1952 ಕಾನೂನಿನ ಪ್ರಕಾರ ಸರಕಾರ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (EPF) ಎಂಬ ನಿಧಿಯನ್ನು ನೌಕರವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರು - ಈರ್ವರಿಗೂ ಸಮಾನವಾಗಿ ಅನ್ವಯಿಸುವ ಸೌಲಭ್ಯ. ನೌಕರರು ಸಾಮಾನ್ಯವಾಗಿ ತಮ್ಮ ಪಿಎಫ್ ಎನ್ನುವುದು ಇದನ್ನೇ.
ಇದು ನೀವು ಕೆಲಸ ಮಾಡುವ ಸಂಸ್ಥೆಯೊಳಗೆ ಸಂಬಳದಿಂದ ಕಡಿತಗೊಂಡು ಜಮೆಯಾಗುವ ಫಂಡು. ಹೊರಗೆ ಸ್ಟೇಟ್ ಬ್ಯಾಂಕ್/ಪೋಸ್ಟಾಫೀಸಿನಲ್ಲಿ ಸಾರ್ವಜನಿಕರಿಗಾಗಿ ಮಾಡಿಕೊಳ್ಳುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)ಗಿಂತ ಭಿನ್ನ. EPF ಮತ್ತು PPFಬೇರೆ ಬೇರೆಯಾಗಿದ್ದು ಅವುಗಳಿಗೆ ಅನ್ವಯಿಸುವ ವಿವರಗಳು, ಕಾನೂನುಗಳು, ಬಡ್ಡಿ ದರಗಳು - ಎಲ್ಲವೂ ಬೇರೆ ಬೇರೆಯಾಗಿವೆ. ಇವೆರಡರ ನಡುವೆ ಕನೂ#$Âಸ್ ಮಾಡಿಕೊಂಡು ವಿತ್ತೀಯ ಆರೋಗ್ಯ ಹಾಳುಮಾಡಿಕೊಂಡು ಚಿಕಿತ್ಸೆಗಾಗಿ ನನಗೆ ಫೋನ್ ಮಾಡುವವರಿ¨ªಾರೆ.
ಯಾರಿಗೆ ಇಪಿಎಫ್?
20ಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಒಂದು ಸಂಸ್ಥೆಯಲ್ಲಿ ಈ ರೀತಿ ಇಪಿಎಫ್ ಕಡಿತ ಮಾಡುವುದು ಕಡ್ಡಾಯ. ಅದರಿಂದ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇಪಿಎಫ್ ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ ಮಾಸಿಕ ಸಂಬಳ ರೂ. 15,000 (ಬೇಸಿಕ್+ಡಿ.ಎ)ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡಾ ಈ ಸ್ಕೀಮು ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮು ಕಡ್ಡಾಯ. ಸರಕಾರದ ಕಾನೂನುಗಳು ದುರ್ಬಲ ವರ್ಗದವರನ್ನು ರಕ್ಷಿಸುವ ದೃಷ್ಟಿಯಿಂದ ಮಾಡಿ¨ªಾಗಿರುತ್ತದೆ.
ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎÇÉಾ ಉದ್ಯೋಗಿಗಳಿಗೂ (ಅಂದರೆ, ರೂ. 15000 ಮೀರಿದ ವರ್ಗಕ್ಕೂ ಸಹಿತ) ಪಿಎಫ್ ಕಡಿತವನ್ನು ಐಚ್ಚಿಕವಾಗಿಯಾದರೂ ಉದ್ಯೋಗಿಗಳ ಹಿತದೃಷ್ಟಿಯಿಂದ ಮಾಡುತ್ತಿವೆ. ಏಕೆಂದರೆ ಪ್ರಾವಿಡೆಂಟ್ ಫಂಡ್ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಇಪಿಎಫ್ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ.
ಸಂಘಟಿತ ಉದ್ಯಮಗಳಿಗೆ ಮಾತ್ರವಲ್ಲದೆ ಕಾಂಟ್ರಾಕ್ಟ್ ನೌಕರಿಗೂ ಕೂಡಾ ಈ ಕಾನೂನು ಅನ್ವಯವಾಗುತ್ತದೆಯಾದರೂ ಅಸಂಘಟಿತ ಕ್ಷೇತ್ರದ ಬಹುಪಾಲು ಕಾರ್ಮಿಕರಿಗೆ ಈ ಸೌಲಭ್ಯ ಇನ್ನೂ ದೊರಕುತ್ತಿಲ್ಲ ಎನ್ನುವುದು ದುಃಖದ ವಿಚಾರ. ಈ ಸೌಲಭ್ಯ ಎಲ್ಲರಿಗೂ ಸಮಾನವಾಗಿ ಲಭಿಸುವಂತಹ ಕಾನೂನು ತಳಮಟ್ಟದಲ್ಲಿ ಅನುಷ್ಠಾನವಾಗಬೇಕಿದೆ. ಆ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೂಡಾ ಆಗಬೇಕಿದೆ. ಹಿಂದೆÇÉಾ ಇಪಿಎಫ್ ಇನ್ನಿತರ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಕಂಟ್ರಾಕ್ಟ್ ಮೂಲಕ ಜನರನ್ನು ನೌಕರಿಗೆ ತೊಡಗಿಸುವ ಪದ್ಧತಿ ವ್ಯಾಪಕವಾಗಿತ್ತು. ಆದರೆ ಆ ಬಳಿಕ '"ಪ್ರಿನ್ಸಿಪಲ್ ಎಂಪ್ಲಾಯರ್' ಎಂಬ ಪರಿಕಲ್ಪನೆಯ ಮೂಲಕ ಕಾಂಟ್ರಾಕ್ಟರ್ ನಡುವಿನಲ್ಲಿ ಇದ್ದರೂ ಸಹ ಮೂಲ ಉದ್ಯೋಗದಾತರೇ ಇಪಿಎಫ್ ಕಡಿತ ಮತ್ತು ಜಮಾವಣೆಗೆ ಹೊಣೆಗಾರರೆಂಬ ಕಾನೂನು ಬಂದಿದೆ.
ದೇಣಿಗೆ
ವೇತನದ (ಬೇಸಿಕ್ ಮತ್ತು ಡಿಎ) ಶೇ. 12 ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ "ಎಕೌಂಟ್ ಎ' ಅಡಿಯಲ್ಲಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಕೂಡಾ ಪ್ರತ್ಯೇಕವಾಗಿ ಇನ್ನೊಂದು ಶೇ.12 ಕಡಿತಗೊಳಿಸಿ "ಎಕೌಂಟ್ ಬಿ' ಅಡಿಯಲ್ಲಿ ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲಾಗುತ್ತದೆ. ಹಾಗಾಗಿ ಒಟ್ಟು ಜಮೆ ಶೇ.24.
ಸ್ಥೂಲವಾಗಿ ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಈ ಶೇ.24 ಸಂಪೂರ್ಣವಾಗಿ ಜಮೆ ಯಾಗುವುದಿಲ್ಲ. ಉದ್ಯೋಗದಾತರ ಶೇ.12ರಲ್ಲಿ ಎರಡು ಭಾಗಗಳಿವೆ. ಮೊದಲನೆಯದಾಗಿ ಸಂಬಳದ ಶೇ.8.33 (ಗರಿಷ್ಠ ಸಂಬಳ ಮಿತಿ ರೂ. 15000, ಅಂದರೆ ರೂ 1250) ಪಿಎಫ್ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್ ಉಪಖಾತೆಗೆ ಹೋಗುತ್ತದೆ. "ಎಂಪ್ಲಾಯಿ ಪೆನ್ಶನ್ ಸ್ಕೀಮ್ ಅಥವಾ ಇಪಿಎಸ್' ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನ್ಶನ್‌ಗಾಗಿ ಮೀಸಲಾಗಿದೆ. ಎಷ್ಟೋ ಉದ್ಯೋಗಿಗಳ ಪೆನ್ಶನ್ ಫಂಡಿಗೆ ಬರುವ ದೇಣಿಗೆ ಮಾಸಿಕ ರೂ. 1250 ಮಾತ್ರ. ಇದಲದೆ ಸರಕಾರದ ವತಿಯಿಂದ ಸಂಬಳದ ಶೇ.1.16 (ಗರಿಷ್ಠ ಸಂಬಳ ಮಿತಿ ರೂ. 15000 ಅಂದರೆ ರೂ. 174) ಸಬ್ಸಿಡಿ ರೂಪದಲ್ಲಿ ಜಮೆ ಯಾಗುತ್ತದೆ. ಹೀಗೆ ನಿಮ್ಮ ಪೆನÒನ್ ಫಂಡಿಗೆ ಜಮೆಯಾಗುವ ಒಟ್ಟು ದೇಣಿಗೆ ಸಂಬಳದ ಶೇ.9.49 (ಗರಿಷ್ಟ ರೂ. 1424). ಹಾಗಾಗಿ ಈ ಪೆನ್ಶನ್ ದೇಣಿಗೆಯಾದ ಶೇ. 8.33 ಕಳೆದು ಅಥವ ಗರಿಷ್ಠ ರೂ. 1250 ಕಳೆದು ಉಳಿದ ಮೊತ್ತ ಮಾತ್ರವೇ ಇಪಿಎಫ್ನಲ್ಲಿ ಜಮೆಯಾಗುತ್ತದೆ.
VPF ಎಂದರೇನು?
ಮೇಲೆ ಹೇಳಿದಂತೆ ಶೇ. 12 ನೌಕರನ ವತಿಯಿಂದ (ಎಕೌಂಟ್ ಎ) ಹಾಗೂ ಎಂಪ್ಲಾಯರ್ ವತಿಯಿಂದ ಶೇ. 12(ಎಕೌಂಟ್ ಬಿ) ಇಪಿಎಫ್ ಖಾತೆಯಲ್ಲಿ ಕಟ್ಟಲ್ಪಡುತ್ತದಷ್ಟೆ? ಒಬ್ಬ ನೌಕರನಿಗೆ ಸ್ವ-ಇಚ್ಚೆಯಿಂದ ತನ್ನ ಸಂಬಳದ (ಬೇಸಿಕ್+ಡಿ.ಎ) ಶೇ.100ರಷ್ಟನ್ನು ತನ್ನ ಪಿಎಫ್ ಖಾತೆಯ ಇನ್ನೊಂದು "ಎಕೌಂಟ್ ಸಿ' ಯಲ್ಲಿ ಐಚ್ಚಿಕ ಅಥವಾ ವಾಲೆಂಟರಿಯಾಗಿ ಹಾಕುವ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಪ್ರಾವಿಡೆಂಟ್ ಫಂಡಿನ ಈ ಭಾಗವನ್ನು Voluntary Provident Fund ಎಂದು ಕರೆಯುತ್ತಾರೆ. ಇದು ಒಬ್ಬನ ಪ್ರಾವಿಡೆಂಟ್ ಫಂಡ್ ಖಾತೆಯದೇ ಒಂದು ಅಂಗವಾಗಿದೆ ಹಾಗೂ ಇದಕ್ಕೆ ಎ ಮತ್ತು ಬಿ ಎಕೌಂಟಿನಷ್ಟೇ ಬಡ್ಡಿದರ, ಕರವಿನಾಯತಿ ಇತ್ಯಾದಿಗಳು ಅನ್ವಯ ಆಗುತ್ತದೆ. ಆದರೆ, ವಾಲಂಟರಿ ಜಮೆಯ ಮೇಲೆ ಎಂಪ್ಲಾಯರುಗಳ ಸರಿಸಮ ಜಮೆ ಇರುವುದಿಲ್ಲ.
ನಿಮಗೆ ಈ ರೀತಿ ಸ್ವ-ಇಚ್ಚೆಯಿಂದ "ಎಕೌಂಟ್ ಸಿ' ಯಲ್ಲಿ ವಿಪಿಎಫ್ ಜಮೆ ಮಾಡುವುದು ಉತ್ತಮ. ಹಾಗೆ ಮಾಡ ಬೇಕೆಂದಿದ್ದರೆ ಪ್ರತಿ ವಿತ್ತ ವರ್ಷದ (ಎಪ್ರಿಲ…-ಮಾರ್ಚ್)ಆರಂಭದಲ್ಲಿ ನಿಮ್ಮ ಕಂಪೆನಿಗೆ ತಿಳಿಸತಕ್ಕದ್ದು. ನಿಮ್ಮ ನಿರ್ಧಾರವನ್ನು ವರ್ಷದ ನಡುವೆ ಬದಲಿಸುವಂತಿಲ್ಲ. ಹೊಸ ವರ್ಷಕ್ಕೆ ಪುನಃ ಬದಲಾಯಿಸಬಹುದು.
ಉಸ್ತುವಾರಿ ಹೇಗೆ?
ಈ ಇಪಿಎಫ್ನ ಉಸ್ತುವಾರಿ ಎರಡು ವಿಧದಲ್ಲಿ ನಡೆಯಬಹುದು:
1 ಸರಕಾರದ ಆಧೀನದ EPO ಸಂಸ್ಥೆಯಲ್ಲಿ ಪ್ರಾವಿಡೆಂಟ್ ಫಂಡ್ ಕಮಿಶನರರ ಉಸ್ತುವಾರಿಯಲ್ಲಿ ಜಮಾ ಮಾಡುವುದು. ಹೆಚ್ಚಿನ ಚಿಕ್ಕ ಪುಟ್ಟ ಕಂಪೆನಿಗಳು ಮತ್ತು ಸರಕಾರಿ ಸಂಸ್ಥೆಗಳು ಈ ರೀತಿ ಸರಕಾರದ ಕೈಯಲ್ಲಿ ತಮ್ಮ ಪಿಎಫ್ ದುಡ್ಡನ್ನು ಠೇವಣಿ ಇಡುತ್ತಾರೆ. ಅ ದುಡ್ಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಲಪತ್ರಗಳು, ಸರಕಾರಿ ಮತ್ತು ಖಾಸಗಿ ಕಂಪೆನಿಗಳ ಬಾಂಡು ಡಿಬೆಂಚರ್‌ಗಳಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಶೇರು ಮಾರುಕಟ್ಟೆಯಲ್ಲಿಯೂ ಹೂಡಲ್ಪಡುತ್ತವೆ.
2 ಕೆಲವೊಮ್ಮೆ ದೊಡ್ಡ ದೊಡ್ಡ ಲಾಭದಾಯಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ದುಡ್ಡನ್ನು ತಾವೇ ಒಂದು ಟ್ರಸ್ಟ್ ರಚಿಸಿ ಅದನ್ನು ಹೂಡುವ ಅನುಮತಿಯನ್ನು ಸರಕಾರದಿಂದ ಪಡೆದಿರುತ್ತಾರೆ. ಇದು EPO ದಂತೆಯೇ, ಅದರ ಮಾರ್ಗಸೂಚಿಯಂತೆ ನಡೆಯುತ್ತದೆ. ಫಂಡ್ ಮ್ಯಾನೇ ಜೆ¾ಂಟ್ ಒಂದು ಬಿಟ್ಟು ಉದ್ಯೋಗಿಗಳ ಮಟ್ಟಿಗೆ ಬೇರಾವುದೇ ವ್ಯತ್ಯಾಸವಿರುವುದಿಲ್ಲ. ಹೆಚ್ಚಿನ ಪ್ರತಿಷ್ಟಿತ ಕಂಪೆನಿಗಳು ಈ ರೀತಿ ತಮ್ಮದೇ ಆದ ಸ್ವಂತ ಟ್ರಸ್ಟ್ ಅಡಿ EPF ಚಲಾಯಿಸುತ್ತವೆ. ಅವುಗಳು ಹೆಚ್ಚಾಗಿ ಈ ದುಡ್ಡನ್ನು ತಮ್ಮದೇ ಉದ್ಯಮದಲ್ಲಿ ತೊಡಗಿಸುತ್ತವೆ. ಅವುಗಳೂ ಕೂಡಾ ಸರಕಾರ ಘೋಷಿಸಿದ ಬಡ್ಡಿದರ ಮತ್ತು ನಿಯಮಾವಳಿಗೆ ಬದ್ಧವಾಗಿರುತ್ತವೆ.
ಪ್ರತಿಫಲ
ಇಪಿಎಫ್ ಸ್ಕೀಮಿನಲ್ಲಿ ಎರಡು ವಿಭಾಗಗಳಿವೆ ಎಂದು ಈ ಮೊದಲೇ ಹೇಳಲಾಗಿದೆ. ಪ್ರಾವಿಡೆಂಟ್ ಫಂಡ್ ನೀಡುವ ಇಪಿಎಫ್ ಹಾಗೂ ಪೆನ್ಶನ್ ನೀಡುವ ಇಪಿಎಸ್.
1 ಇಪಿಎಫ್ ಬಗ್ಗೆ ಹೇಳುವುದಾದರೆ ಅದರಲ್ಲಿ ಬಹಳ ಉತ್ತಮ ಬಡ್ಡಿದರವನ್ನು ಸರಕಾರ ಯಾವತ್ತೂ ಕಾಯುತ್ತಿದೆ. ಇದೊಂದು ಉತ್ತಮ ಹೂಡಿಕೆ ಎನ್ನುವುದರಲ್ಲಿ ಸಂಶಯವಿಲ್ಲ. ಸದ್ಯಕ್ಕೆ ಇಪಿಎಫ್ ಬಡ್ಡಿ ದರ ಶೇ.8.55, ಸಾಲದ್ದಕ್ಕೆ ಅದು ಕರಮುಕ್ತವೂ ಹೌದು. ಹೊರಗಿನ ಸಾರ್ವಜನಿಕ ಪಿಪಿಎಫ್ ಸದ್ಯ ನೀಡುವುದು ಕೇವಲ ಶೇ.7.6. ಬ್ಯಾಂಕಿನಲ್ಲಿ ಗರಿಷ್ಠ ನಿಮಗೆ ಸಿಗುವುದು ಶೇ.7 ಮತ್ತದು ಕರಾರ್ಹ.
2 ಇಪಿಎಸ್ ಬಗ್ಗೆ ಹೇಳುವುದಾದರೆ - ಉದ್ಯೋಗದಾತರ ಶೇ.12 ದೇಣಿಗೆಯ ಶೇ. 8.33 ಭಾಗ, ಆದರೆ ಮಾಸಿಕ ಗರಿಷ್ಟ ರೂ. 1250 ಜಮೆಯಾಗುವ ಈ ಯೋಜನೆಯಲ್ಲಿ ಪ್ರತಿಫಲ ಚೆನ್ನಾಗಿಲ್ಲ. ಪ್ರತಿ ತಿಂಗಳು ರೂ. 1250 ಕಟ್ಟುವ ಉದ್ಯೋಗಿಗಳಿಗೆ ನಮ್ಮ ಸರಕಾರ ಮಕ್ಮಲ್ ಟೋಪಿ ಹೇಗೆ ಹೊಲಿಯುತ್ತಿದೆ ಎಂದು ಗೊತ್ತಾಗಬೇಕಾದರೆ ಅದೇ ರೂ. 1250 ಅನ್ನು ಅದೇ ಸರಕಾರ ಸ್ಟೇಟ್ ಬ್ಯಾಂಕು/ಪೋಸ್ಟಾಫೀಸುಗಳ ಮೂಲಕ ನಡೆಸುವ ಪಬ್ಲಿಕ್ ಪ್ರಾವಿಡೆಂಡ್ ಫಂಡಿನಲ್ಲಿ ಅಥವಾ ಆರ್ಡಿಯಲ್ಲಿ ಹಾಕಬೇಕು.
ಪ್ರತಿ ತಿಂಗಳು ರೂ. 1250 ಅನ್ನು 35 ವರ್ಷಗಳ ಕಾಲ ಒಂದು ಪಿಪಿಎಫ್/ಆರ್ಡಿಯಲ್ಲಿ ಹಾಕಿದರೆ ಮತ್ತು ಅದಕ್ಕೆ ವಾರ್ಷಿಕ ಸರಾಸರಿ ಶೇ. 8.5 ಬಡ್ಡಿ ಸಿಕ್ಕಿದರೆ ಅವಧಿಯ ಅಂತ್ಯಕ್ಕೆ ನಿಮ್ಮ ಕೈಯಲ್ಲಿ ರೂ. 30,31,501 ಇರುತ್ತದೆ. ಅದೇ ದುಡ್ಡನ್ನು ಒಂದು ಶೇ.7 ಬಡ್ಡಿ ಬರುವ ಎಫ್ಡಿಯಲ್ಲಿ ಇಟ್ಟರೆ ತಿಂಗಳೂ ರೂ. 17,683 ಬಡ್ಡಿ ಬರುತ್ತದೆ. ಅಸಲು ಸದಾ ನಿಮ್ಮದಾಗಿಯೇ ಇರುತ್ತದೆ.
ಅದರ ಬದಲು ಇಪಿಸ್ ಎಂಬ ಟೊಪ್ಪಿ ಸ್ಕೀಮಿಗೆ ದೇಣಿಗೆ ಕಟ್ಟುತ್ತಾ ಹೋದರೆ ಅಸಲು ಮೊತ್ತವನ್ನು ಸಂಪೂರ್ಣವಾಗಿ ನುಂಗಿಹಾಕುವುದಲ್ಲದೆ, ಪಿಂಚಣಿ ಎಂದು ಸಿಗುವ ಮಾಸಿಕ ಮೊತ್ತ ರೂ. 7500 ಮಾತ್ರ. ನಿಮ್ಮ ಅಸಲು ಮೊತ್ತ ಹಿಂತಿರುಗಿ ಬಾರದಲ್ಲಿಗೆ ಹೋದದ್ದಲ್ಲದೆ ನಿಮ್ಮ ಕಿಸೆಗೆ ಬರುವ ಪಿಂಚಣಿ ಜುಜುಬಿ! ಉಳಿದ ಮೊತ್ತ ಅದೆಲ್ಲಿಗೆ ಹೋಗುತ್ತದೋ ಆ ದೇವನೇ ಬಲ್ಲ. ಅಲ್ಲದೆ, ಪೆನ್ಶನ್ ಮೂಲಕ ಬರುವ ದುಡ್ಡು ಸಂಪೂರ್ಣವಾಗಿ ಕರಾರ್ಹ ಆದಾಯವಾಗಿರುತ್ತದೆ. ಹಾಗಾಗಿ ಇಪಿಎಫ್ ಸಿಹಿಯಾದರೆ ಇಪಿಎಸ್ ಕಹಿ. ಇಪಿಎಸ್ ಬೇವಾದರೆ ಇಪಿಎಫ್ ಬೆಲ್ಲ. ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುತ್ತಿದೆಯೇ ಸರಕಾರ?
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡಿನ ಸ್ಥೂಲವಾದ ರೂಪುರೇಷೆ, ಉಸ್ತುವಾರಿ ವ್ಯವಸ್ಥೆ, ದೇಣಿಗೆ ಮತ್ತು ಬಡ್ಡಿಯ ವಿವರಗಳನ್ನು ನೀಡಿದ್ದೇನೆ. ಈ ವಾರ ಈ ಫಂಡಿನಿಂದ ದುಡ್ಡು ವಾಪಸಾತಿ, ನಿಷ್ಕ್ರಿಯ ಖಾತೆಯ ಬಗ್ಗೆ, ಕರವಿನಾಯತಿ, ನಾಮಿನೇಶನ್ ಮತ್ತು ಆನ್‌ಲೈನ್ ಚಟುವಟಿಕೆಗಳ ಬಗ್ಗೆ ತಿಳಿಯೋಣ.
UAN
ಎಲ್ಲಾ ಇಪಿಎಫ್ ಖಾತೆಗಳಿಗೆ ಈಗ Universal Account Number ಅಥವಾ UAN ನೀಡಲಾಗಿದೆ. ನಿಮ್ಮ ಸಂಸ್ಥೆ ನಿಮಗೆ ಇದನ್ನು ಮಾಡಿಸಿಕೊಡುತ್ತದೆ. ಈ ಯುಎ ನಂಬರ್ ನಿಮ್ಮ ಶಾಶ್ವತ ಖಾತೆಯ ನಂಬರ್ ಆಗಿದ್ದು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ಮೂಲಕ ಮಾಡಲು ಇದು ಸಹಾಯಕ.
ಇಪಿಎಫ್ ವಾಪಸಾತಿ
ನಿವೃತ್ತಿಯ ಸಮಯದಲ್ಲಿ ಅಥವಾ ಇರುವ ನೌಕರಿ ಬಿಟ್ಟು ಕನಿಷ್ಟ 2 ತಿಂಗಳು ನಿರುದ್ಯೋಗಿಯಾಗಿದ್ದರೆ ಮಾತ್ರ ಸಂಪೂರ್ಣ ದುಡ್ಡನ್ನು ಬಡ್ಡಿ ಸಹಿತ ವಾಪಾಸು ಪಡಕೊಳ್ಳಬಹುದು. 2 ತಿಂಗಳೊಳಗೆ ಉದ್ಯೋಗ ಬದಲಿಸಿಕೊಂಡರೆ ಹೊಸ ಕಂಪೆನಿಗೆ ಖಾತೆಯನ್ನು ವರ್ಗಾಯಿಸತಕ್ಕದ್ದು. ಇದೀಗ ಬಂದ ಹೊಸ ತಿದ್ದುಪಡಿಯ ಪ್ರಕಾರ ಕೆಲಸ ಬಿಟ್ಟು 1 ತಿಂಗಳ ಬಳಿಕ ಶೇ.75 ಹಾಗೂ 2 ತಿಂಗಳ ಬಳಿಕ ಉಳಿದ ಶೇ.25 ಹಿಂಪಡೆಯಬಹುದು. ಇಪಿಎಫ್ ಎನ್ನುವುದು ದೀರ್ಘಕಾಲಿಕ ಉಳಿತಾಯ ಯೋಜನೆಯಾಗಿದ್ದು ನಿವೃತ್ತಿಯ ಹೊತ್ತಿನಲ್ಲಿ ಸಹಾಯಕ್ಕೆ ಬರಲಿ ಎನ್ನುವುದು ಇದರ ಮೂಲ ಉದ್ದೇಶ. ಇಪಿಎಫ್ ದುಡ್ಡನ್ನು ವಾಪಾಸು ಪಡೆಯಲು ಫಾರ್ಮ್ 13 ತುಂಬಿ ನಿಮ್ಮ ಹೊಸ ಕಂಪೆನಿಯಲ್ಲಿ ಸಲ್ಲಿಸುವ ಪದ್ಧತಿ ಇತ್ತು. ಆದರೆ ಇದೀಗ ಇದನ್ನು UAN ಬಳಸಿ ಆನ್‌ಲೈನ್ ಆಗಿಯೇ ಮಾಡಲು ಬರುತ್ತದೆ. ಒಂದು ನೌಕರಿ ಬಿಟ್ಟ 2 ತಿಂಗಳೊಳಗೆ ಇನ್ನೊಂದು ಹೊಸ ಉದ್ಯೋಗಕ್ಕೆ ಸೇರಿಕೊಂಡರೂ ನಿರುದ್ಯೋಗಿಯಂತೆ ದುಡ್ಡು ಹಿಂಪಡೆದುಕೊಳ್ಳುವುದು ಪಿಎಫ್ ಕಾನೂನಿನ ವಿರುದ್ಧ. ಆದರೂ ಈ ಉಲ್ಲಂಘನೆಯನ್ನು ಲಕ್ಷಾಂತರ ಜನರು ವ್ಯಾಪಕವಾಗಿ ಮಾಡುತ್ತಿದ್ದಾರೆ ಎನ್ನುವುದು ಬೇರೆ ಮಾತು.
ಇಪಿಎಫ್ ವರ್ಗಾವಣೆ
ನೀವು ಯಾವ ನೌಕರಿಗೆ ಎಲ್ಲಿ ಸೇರಿಕೊಂಡರೂ ಈ ನಂಬರನ್ನು ನಿಮ್ಮ ಹೊಸ ಕಂಪೆನಿಗೆ ಕೊಡಿ. ನಿಮ್ಮ ಹೊಸ ಪಿಎಫ್ ದೇಣಿಗೆಗಳು ನಿಮ್ಮ ಈ ಶಾಶ್ವತ ಖಾತೆಗೆ ಸ್ವಯಂ ಜಮೆಯಾಗುತ್ತದೆ. ಮೊದಲಿನಂತೆ ಖಾತೆಯನ್ನು ಸಂಸ್ಥೆಯಿಂದ ಸಂಸ್ಥೆಗೆ ವರ್ಗಾಯಿಸುವ ಜಂಜಟ್ ಇಲ್ಲ.
ನಿಷ್ಕ್ರಿಯ ಖಾತೆ (Dormant Account)
3 ವರ್ಷಗಳವರೆಗೆ ಒಂದು ಖಾತೆ ಯಾವುದೇ ದೇಣಿಗೆ ಇಲ್ಲದೆ ವರ್ಗಾವಣೆಯೂ ಆಗದೆ ಹಾಗೆಯೇ ಬಿದ್ದಿದ್ದರೆ ಅವುಗಳನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುವುದು. ಇಂತಹ 'ಡಾರ್ಮಂಟ್ ಎಕೌಂಟು'ಗಳಿಗೆ ಆ ಬಳಿಕ ಯಾವುದೇ ಬಡ್ಡಿಯನ್ನು ಪೇರಿಸಲಾಗುವುದಿಲ್ಲ ಎಂಬ ಕಾನೂನು 2011-12 ರಲ್ಲಿ ಬಂದಿತ್ತು. ಆದರೆ ಆ ಕಾನೂನನ್ನು ಮತ್ತೆ 2016-17 ರಲ್ಲಿ ರದ್ದುಗೊಳಿಸಿದ ಸರಕಾರ ಇದೀಗ ನಿಷ್ಕ್ರಿಯ ಖಾತೆಯ ಮೇಲೂ ಕೂಡಾ ಬಡ್ಡಿಯನ್ನು ಹಿಂದಿನಂತೆ ನೀಡುತ್ತಿರಲು ನಿರ್ಧರಿಸಿದೆ. ಆದರೆ ಈ ಸೌಲಭ್ಯ ನಿವೃತ್ತಿಯಾಗುವವರೆಗೆ ಮಾತ್ರ ಲಭ್ಯವಿದೆ. ಇಪಿಎಫ್ಒ ಪ್ರಕಾರ ನಿವೃತ್ತಿಯ ವಯಸ್ಸು 55 ವರ್ಷ, ಹಾಗಾಗಿ 58 ವರ್ಷದವರೆಗೆ ಮಾತ್ರ ಒಂದು ನಿಷ್ಕ್ರಿಯ ಖಾತೆಯಲ್ಲಿ ಬಡ್ಡಿ ಬೀಳುತ್ತಿರುತ್ತದೆ.
ಆಂಶಿಕ ಹಿಂಪಡೆತ (Partial Withdrawal)
ಇಪಿಎಫ್ ಕಾನೂನಿನಲ್ಲಿ ಉದ್ಯೋಗಾವಧಿಯಲ್ಲಿ ಸಾಲ ಅಥವಾ ಲೋನ್ ಎಂಬುದಿಲ್ಲ. ಅಂದರೆ ಬಡ್ಡಿ ಸಹಿತ ಮರುಪಾವತಿ ಮಾಡುವಂತಹ ಸಾಲದ ಸೌಲಭ್ಯ ಇಲ್ಲ. ಆದರೆ ಕೆಲವು ನಿರ್ದಿಷ್ಟ ವಿಶೇಷ ಕಾರಣಗಳಿಗೆ ಖಾತೆಯಲ್ಲಿರುವ ಮೊತ್ತವನ್ನು ಭಾಗಶಃ ಹಿಂಪಡೆಯಬಹುದು. ಅದೆಷ್ಟೋ ಜನ ತಮ್ಮ ಸಂಸ್ಥೆಯಿಂದ ತಾನು ಪಿಎಫ್ ಲೋನ್ ಪಡೆದೆ ಎನ್ನುತ್ತಾರಾದರೂ ನಿಜವಾಗಿಯೂ ಅವರು ಬಳಸಿರುವುದು ಈ ಅಂಶಿಕ ಹಿಂಪಡೆತದ ಸೌಲಭ್ಯವನ್ನೇ. (ಬ್ಯಾಂಕ್/ಪೋಸ್ಟಾಫೀಸಿಗಳಲ್ಲಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗಳಲ್ಲಿ ಪಿಎಫ್ ಲೋನ್ ಸೌಲಭ್ಯ ಇರುತ್ತದೆ) ಮನೆಕಟ್ಟಿ ನೋಡುವವರಿಗೆ, ಮದುವೆ ಮಾಡಿ ನೋಡುವವರಿಗೆ ಮತ್ತು ವಿದ್ಯಾಭ್ಯಾಸದ, ಅನಾರೋಗ್ಯದ ಮತ್ತು ಇನ್ನಿತರ ಕಾರಣಕ್ಕೆ ಇಪಿಎಫ್ನಿಂದ ಅಂಶಿಕವಾಗಿ ದುಡ್ಡು ಹಿಂಪಡೆಯುವ ಸೌಲಭ್ಯ ಇದೆ.
ಕೆಲವು ಹಿಂಪಡೆಯುವ ಮುಖ್ಯ ಕಾರಣಗಳ ವಿವರಗಳು ಹೀಗಿವೆ:
1. ಮದುವೆ (ಸ್ವಂತ, ಮಕ್ಕಳು ಅಥವ ಒಡಹುಟ್ಟಿದವರಿಗೆ) ಹಾಗೂ ಮೆಟ್ರಿಕ್ ಮೇಲಿನ ವಿದ್ಯಾಭ್ಯಾಸ (ಸ್ವಂತ ಮತ್ತು ಮಕ್ಕಳಿಗೆ)
- ಕನಿಷ್ಟ 7 ವರ್ಷಗಳ ಸೇವೆ ಸಲ್ಲಿಸಿರಬೇಕು
- ಗರಿಷ್ಟ ಹಿಂಪಡೆಯಬಹುದಾದ ಮೊತ್ತ ನಿಮ್ಮ ದೇಣಿಗೆಯ ಶೇ. 50
- ವೃತ್ತಿ ಜೀವನದಲ್ಲಿ 3 ಬಾರಿ ಮಾತ್ರ ಈ ಸೌಲಭ್ಯವನ್ನು ಪಡಕೊಳ್ಳಬಹುದು
- ಇದಕ್ಕಾಗಿ ಫಾರ್ಮ್ 31ರಲ್ಲಿ ಅರ್ಜಿ ಹಾಗೂ ಮದುವೆಯ ಕರೆಯೋಲೆ ಅಥವಾ ಫೀಸ್ ಮೊತ್ತದ ದೃಢೀಕೃತ ಪ್ರತಿಯನ್ನು ನೀಡತಕ್ಕದ್ದು.
2. ವೈದ್ಯಕೀಯ ಖರ್ಚು - ಸ್ವಂತ, ಅಥವಾ ಕುಟುಂಬಕ್ಕೆ (ಗಂಡ/ಹೆಂಡತಿ, ಮಕ್ಕಳು, ಅವಲಂಬಿತ ಹೆತ್ತವರು)
- ದೊಡ್ಡ ಶಸ್ತ್ರಕ್ರಿಯೆಗೆ ಅಥವಾ ಟಿಬಿ, ಕುಷ್ಟರೋಗ, ಪಾರ್ಶ್ವವಾಯು, ಕಾನ್ಸರ್, ಮಾನಸಿಕ ಅಸ್ವಸ್ಥತೆ ಅಥವ ಹೃದ್ರೋಗಕ್ಕೆ
- ಗರಿಷ್ಠ ಅರ್ಹ ಮೊತ್ತ ಮಾಸಿಕ ಸಂಬಳದ 6 ಪಾಲು ಅಥವಾ ನೌಕರರ ದೇಣಿಗೆಯ ಮೊತ್ತ
- ಕನಿಷ್ಟ 1 ತಿಂಗಳ ಆಸ್ಪತ್ರೆಯ ದಾಖಲಾತಿ ಮತ್ತು ಅದೇ ಅವಧಿಯ ಅನಾರೋಗ್ಯದ ರಜೆಯ ಪುರಾವೆ ಸಲ್ಲಿಸತಕ್ಕದ್ದು
- ವೃತ್ತಿ ಜೀವನದಲ್ಲಿ ಅಗತ್ಯ ಬಂದಂತೆ ಎಷ್ಟು ಬಾರಿಯೂ ಈ ಸೌಲಭ್ಯ ಪಡೆಯಬಹುದು.
3. ಗೃಹ ಸಾಲದ ಮರುಪಾವತಿ (ಸ್ವಂತ,ಗಂಡ/ಹೆಂಡತಿ ಅಥವಾ ಜಂಟಿ ಹೆಸರಿನಲ್ಲಿರುವ ಮನೆಗೆ)
- ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿರಬೇಕು
- ಮಾಸಿಕ ಸಂಬಳದ 36 ಪಟ್ಟು ಹಿಂಪಡೆಯುವ ಮಿತಿ
- ವೃತ್ತಿ ಜೀವನದಲ್ಲಿ ಒಂದೇ ಬಾರಿ ಈ ಸೌಲಭ್ಯ
4. ಮನೆಯ ಸೇರ್ಪಡೆ/ಬದಲಾವಣೆ ಅಥವಾ ದುರಸ್ತಿ (ಸ್ವಂತ, ಗಂಡ/ಹೆಂಡತಿ ಅಥವ ಜಂಟಿ ಹೆಸರಿನಲ್ಲಿರುವ ಮನೆಗೆ)
- ಮನೆಯ ಖರೀದಿ/ನಿರ್ಮಾಣದ ಬಳಿಕ ಕನಿಷ್ಠ 5 ವರ್ಷಗಳ ಸೇವೆ ಅಗತ್ಯ (ದುರಸ್ತಿಗೆ 10 ವರ್ಷ)
- ಮಾಸಿಕ ಸಂಬಳದ 12 ಪಾಲಿನವರೆಗೆ ಹಿಂಪಡೆಯುವ ಮಿತಿ, ಒಂದೇ ಬಾರಿ
5. ಮನೆ/ಫ್ಲ್ಯಾಟ್ ಅಥವಾ ಜಾಗ/ಸೈಟಿನ ನಿರ್ಮಾಣ ಅಥವಾ ಖರೀದಿ (ಸ್ವಂತ, ಗಂಡ/ಹೆಂಡತಿ ಅಥವಾ ಜಂಟಿ ಹೆಸರಿನಲ್ಲಿ)
- ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು
- ಗರಿಷ್ಠ ಹಿಂಪಡೆಯುವ ಮಿತಿ ಸಂಬಳದ 36 ಪಟ್ಟು
- ಸೈಟ್ ಅಥವ ಜಾಗ ಖರೀದಿಗೆ ಮಿತಿ ಮಾಸಿಕ ಸಂಬಳದ 24 ಪಟ್ಟು
- ಸೇವೆಯ ಅವಧಿಯಲ್ಲಿ ಈ ಸೌಲಭ್ಯ ಒಂದೇ ಬಾರಿ
6. ನಿವೃತ್ತಿಪೂರ್ವ
54 ವರ್ಷಗಳನ್ನು ತಲುಪಿದ ಓರ್ವ ಉದ್ಯೋಗಿ ನಿವೃತ್ತಿಯಾಗುವ ಕನಿಷ್ಟ 1 ವರ್ಷ ಮೊದಲು ಮೊದಲೇ ತನ್ನ ಫಂಡಿನಲ್ಲಿರುವ ಒಟ್ಟು ದುಡ್ಡಿನ ಶೇ.90 ಮೊತ್ತವನ್ನು ವಾಪಾಸು ಪಡಕೊಳ್ಳಬಹುದಾಗಿದೆ. ಈ ಸೌಲಭ್ಯವನ್ನು ಒಂದೇ ಒಂದು ಬಾರಿ ಮಾತ್ರ ಉಪಯೋಗಿಸಿಕೊಳ್ಳಬಹುದಾಗಿದೆ.
7. ಅಂಗವಿಕಲರಿಗೆ
- ಅಂಗವಿಕಲರಿಗೆ ತಮ್ಮ ಸಂಕಷ್ಟಗಳನ್ನು ಕಡಿಮೆ ಮಾಡುವ ಸಲಕರಣೆಗಳನ್ನು ಖರೀದಿಸಲು ಪಿಎಫ್ನಿಂದ ದುಡ್ಡು ಪಡೆಯಬಹುದಾಗಿದೆ
- 6 ತಿಂಗಳ ಸಂಬಳ, ಫಂಡಿನಲ್ಲಿ ತನ್ನ ದೇಣಿಗೆ ಬಡ್ಡಿಸಹಿತ ಅಥವಾ ಸಲಕರಣೆಯ ವೆಚ್ಚ - ಇವುಗಳಲ್ಲಿ ಕನಿಷ್ಠ ಮೊತ್ತವನ್ನು ಪಡಕೊಳ್ಳಬಹುದಾಗಿದೆ
- ಇದಕ್ಕೆ ಮೆಡಿಕಲ್ ಸರ್ಟಿಫಿಕೇಟ್ ಅಗತ್ಯ
ಇವಲ್ಲದೆ ಪವರ್ ಕಟ್‌ನಿಂದಾಗಿ ಆದಾಯ ಕಳಕೊಂಡವರಿಗೆ ಹಾಗೂ ನೈಸರ್ಗಿಕ ಪ್ರಕೋಪಗಳಿಂದ ನಷ್ಟ ಹೊಂದಿದವರಿಗೆ ಅಲ್ಲದೆ ಲಾಕ್ ಔಟ್ ಅಥವಾ ಸಂಸ್ಥೆಯ ರದ್ಧತಿಗಳಿಗೂ ಕೂಡಾ ಫಂಡ್ ದುಡ್ಡನ್ನು ನಿಯಮಾನುಸಾರ ಹಿಂಪಡೆಯಬಹುದಾಗಿದೆ.
(ಇಲ್ಲಿ ಸಂಬಳ ಅಂದರೆ ಬೇಸಿಕ್ + ಡಿಎ)
ಕರ ವಿನಾಯತಿ
ಇದಕ್ಕೆ ಹಾಕಿದ ಎಲ್ಲಾ ದುಡ್ಡಿಗೂ (ವಿಪಿಎಫ್ ಸಹಿತ) ಸೆಕ್ಷನ್ 80ಸಿ ಅನ್ವಯ ಕರವಿನಾಯತಿ ದೊರಕುತ್ತದೆ. ಇದರಲ್ಲಿ ಉತ್ಪನ್ನವಾದ ವಾರ್ಷಿಕ ಬಡ್ಡಿಯೂ ಕರರಹಿತ ಹಾಗೂ ಇದರಿಂದ ವಾಪಾಸು ಪಡಕೊಳ್ಳುವ ಸಮಯದಲ್ಲಿ ಕೂಡಾ ಪೂರ್ಣ ಮೊತ್ತ ಕರರಹಿತ. ಹೀಗೆ ಮೂರೂ ಹಂತಗಳಲ್ಲಿ ಕರವಿನಾಯತಿ ಇರುವ ಇಂತಹ ಸ್ಕೀಂಗಳಿಗೆ Exempt & Exempt & Exempt (EEE) ಎನ್ನುತ್ತಾರೆ.
ಆದರೆ, ಖಾತೆ ಆರಂಭಿಸಿ 5 ವರ್ಷಗಳ ನಿರಂತರ ಸೇವೆಯ ಒಳಗಾಗಿ ಪಿಎಫ್ ದುಡ್ಡು ವಾಪಾಸು ತೆಗೆದುಕೊಂಡಲ್ಲಿ ಆ ಮೊತ್ತದ ಉದ್ಯೋಗದಾತರ ದೇಣಿಗೆ ಹಾಗೂ ಬಡ್ಡಿಯ ಅಂಶವು ಸಂಪೂರ್ಣವಾಗಿ ಆ ವರ್ಷದ ಆದಾಯಕ್ಕೆ ಸೇರಿಸಲ್ಪಟ್ಟು ತೆರಿಗೆಗೆ ಒಳಪಡುತ್ತದೆ. ನೌಕರನ ದೇಣಿಗೆಯ ಮೇಲೆ ಹಿಂದೆ ಕರ ವಿನಾಯಿತಿ ಪಡೆದಿದ್ದರೆ ಈಗ ಅದನ್ನೂ ಕೂಡಾ ಆದಾಯವೆಂದು ತೋರಿಸಿ ಅದರ ಮೆಲೆ ಕರ ಕಟ್ಟತಕ್ಕದ್ದು. ಅಲ್ಲದೆ ಹಿಂಪಡೆದ ಒಟ್ಟು ಮೊತ್ತ ರೂ. 50,000 ದಾಟಿದರೆ ಶೇ. 10 ಟಿಡಿಎಸ್ (ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಶೇ. 30) ಕಡಿತ ಕೂಡಾ ಇರುತ್ತದೆ (ಪಾರ್ಮ್ 15ಜಿ/ಎಚ್ ನೀಡಿದರೆ ಟಿಡಿಎಸ್ ಮಾಫ್). ಈ 5 ವರ್ಷದ ನಿರ್ಬಂಧಕ್ಕೆ ಕೂಡಾ ಕೆಲ ರಿಯಾಯಿತಿಗಳಿವೆ. ಒಂದು ವೇಳೆ ಅನಾರೋಗ್ಯದ ನಿಮಿತ್ತ, ಕಂಪೆನಿಯೇ ಬಂದ್ ಆದ ಕಾರಣಕ್ಕೆ ಅಥವಾ ನೌಕರನ ಕೈ ಮೀರಿದ ಬೇರಾವುದೇ ಕಾರಣಕ್ಕಾಗಿ ಕೆಲಸ ಕಳೆದುಕೊಂಡವರಿಗೆ 5 ವರ್ಷದ ನಿರಂತರ ಸೇವೆ ಇಲ್ಲದಿದ್ದರೂ ಆದಾಯ ತೆರಿಗೆ ಇರುವುದಿಲ್ಲ. ಅಲ್ಲದೆ ನಿವೃತ್ತಿ ಅಥವಾ ರಾಜೀನಾಮೆಯ ಬಳಿಕವೂ ಖಾತೆಯನ್ನು ಊರ್ಜಿತದಲ್ಲಿ ಇಟ್ಟಿದ್ದರೆ ಅಂತಹ ಅವಧಿಯಲ್ಲಿ ನೀಡುವ ಬಡ್ಡಿಗೆ ಕರ ವಿನಾಯಿತಿ ಇರುವುದಿಲ್ಲ. ಉದ್ಯೋಗದಲ್ಲಿ ಇಲ್ಲದ ವ್ಯಕ್ತಿಯ ಖಾತೆಗೆ ಬೀಳುವ ಬಡ್ಡಿಯ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು ಎನ್ನುವ ಆದಾಯ ತೆರಿಗೆ ಟ್ರಿಬ್ಯೂನಲ್ ತೀರ್ಪು ಇದೆ.
ನಾಮಿನೇಶನ್
ಬೇರೆಲ್ಲಾ ವಿತ್ತೀಯ ಸೊತ್ತುಗಳಿಗೆ ಇರುವಂತೆ ಇಲ್ಲೂ ನಾಮಿನೇಷನ್ ನಮೂದಿಸಿರುವುದು ಅತ್ಯಗತ್ಯ. ಖಾತೆದಾರನ ಮರಣದ ನಂತರ ಅತಿಸುಲಭವಾಗಿ ದುಡ್ಡು ನಾಮಿನಿಯ ಕೈಗೆ ಹಸ್ತಾಂತರಿಸಲ್ಪಡುತ್ತದೆ. ದಯವಿಟ್ಟು ನಿಮ್ಮ ಕಂಪೆನಿಯಲ್ಲಿ ಈ ಬಗ್ಗೆ ವಿಚಾರಿಸಿ ನಿಮ್ಮ ಖಾತೆಗೆ ನಾಮಿನೇಶನ್ ನಮೂದಿಸದೇ ಇದ್ದಲ್ಲಿ ಈ ಕೂಡಲೇ ಫಾರ್ಮ್ 2 ತುಂಬಿ ಆ ಕಾರ್ಯ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಮರಣಾನಂತರ ನಾಮಿನೇಶನ್ ಇಲ್ಲದ ಖಾತೆಯಿಂದ ದುಡ್ಡು ಪಡೆಯಬೇಕಾದರೆ ಕುಟುಂಬದವರಿಗೆ ಇನ್ನಿಲ್ಲದ ಕಾನೂನೀ ಕೆಲಸ ಮಾಡಬೇಕಾಗಿ ಬರಬಹುದು.
ಆನ್‌ಲೈನ್ ವ್ಯವಹಾರ
ಇತ್ತೀಚೆಗೆ ಎಪಿಎಫ್ಓ ತನ್ನ ಜಾಲತಾಣವನ್ನು ಹೂಡಿಕೆದಾರರಿಗಾಗಿ ತೆರೆದಿದ್ದು ಅದರಲ್ಲಿ ಬ್ಯಾಲನ್ಸ್ ವಿಚಾರಣೆ ಅಲ್ಲದೆ ಖಾತಾ ವರ್ಗಾವಣೆ, ಹಿಂಪಡೆತ ಇತ್ಯಾದಿಗಳಿಗೆ ಆನ್‌ಲೈನ್ ಅರ್ಜಿ ಗುಜರಾಯಿಸಬಹುದು. ಇದರಲ್ಲಿರುವ ಇ-ಪಾಸ್‌ಬುಕ್ ಸೌಲಭ್ಯದಿಂದ ನೀವು ನಿಮ್ಮ ಖಾತೆಯ ಪಾಸ್ ಬುಕ್ಕನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. https://unifiedportal&mem.epfindia.gov.in/memberinterface ತಾಣಕ್ಕೆ ಹೋಗಿ ನಿಮ್ಮ UAN ನಂಬರ್ ಬಳಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಿ. ಆ ಬಳಿಕ ಮೊಬೈಲ್ ಸಂದೇಶದ ಮೂಲಕ ದೊರಕಿದ ಪಿನ್ ನಂಬರ್ ಮೂಲಕ ಲಾಗ್‌ಇನ್ ಆಗಬಹುದು. ಅಲ್ಲಿ ಸೈಟಿನಲ್ಲಿರುವ ಇ-ಪಾಸ್‌ಬುಕ್ ಅಯ್ಕೆಯ ಮೂಲಕ ನಿಮ್ಮ ಪಾಸ್‌ಬುಕ್ಕನ್ನು ಡೌನ್ಲೋಡ್ ಮಾಡಬಹುದು. ನಿಧಿ ವರ್ಗಾವಣೆ ಮತ್ತು ವಾಪಸಾತಿಗೆ ಅರ್ಜಿಯನ್ನೂ ಗುಜರಾಯಿಸಬಹುದು. ಅಷ್ಟೇ ಅಲ್ಲದೆ ಇಲ್ಲಿ ಉಮಂಗ್ ಎನ್ನುವ ಮೊಬೈಲ್ ಆ್ಯಪ್ ಕೂಡಾ ಡೌನ್ಲೋಡ್ ಮಾಡಬಹುದು. ಇದು ಹೊಸ ಸೌಲಭ್ಯವಾದ ಕಾರಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯವೆಸಗುತ್ತಿಲ್ಲ. ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ನಿಮ್ಮ ಕಂಪೆನಿ ಇ-ಚಲನ್ ಮೂಲಕ ಪಿಎಫ್ ಕಂತು ಪಾವತಿ ಮಾಡಿದ್ದರೆ ಮಾತ್ರ ಇದರಲ್ಲಿ ವಿವರ ಕಾಣಿಸಬಹುದು. ಅದಲ್ಲದೆ ಈ ಸೌಲಭ್ಯ ಟ್ರಸ್ಟ್ ನಿರ್ವಹಣೆಯಲ್ಲಿ ನಡೆಯುವ ಫಂಡುಗಳಿಗೆ ಇನ್ನೂ ತೆರೆದಿಲ್ಲ. ಕ್ರಮೇಣ ಎಲ್ಲವನ್ನೂ ವಿದ್ಯುನ್ಮಾನ ವೇದಿಕೆಯಲ್ಲಿ ತೆರೆದಿಡುವ ಯೋಜನೆ ಇದೆ.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment