ಚಿಲ್ಲರೆ ಹಣದುಬ್ಬರ ಇಳಿಕೆ
ನವದೆಹಲಿ (ಪಿಟಿಐ): ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರವು 10 ತಿಂಗಳ ಹಿಂದಿನ ಮಟ್ಟವಾದ ಶೇ 3.69ಕ್ಕೆ ಕುಸಿದಿದೆ.
ತರಕಾರಿ ಮತ್ತು ಹಣ್ಣುಗಳ ಬೆಲೆ ಅಗ್ಗವಾಗಿರುವುದರಿಂದ ಈ ಇಳಿಕೆ ಕಂಡು ಬಂದಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಲ್ಲಿ ಶೇ 4.17ರಷ್ಟು ಮತ್ತು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 3.28ರಷ್ಟಿತ್ತು.
ಅಲ್ಪಾವಧಿಯಲ್ಲಿ ಹಣದುಬ್ಬರವು, ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜು ಮಾಡಿದ ಶೇ 4ರ ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರವು ಶೇ 4.8ರಷ್ಟು ಇರಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿರುವುದು, ಮುಂಗಾರು ಮಳೆ ಕೊರತೆ ಸಾಧ್ಯತೆ, ಕಚ್ಚಾ ತೈಲ ಬೆಲೆ ಹೆಚ್ಚಳ ಮತ್ತು ರೂಪಾಯಿ
ಅಪಮೌಲ್ಯದ ಕಾರಣಕ್ಕೆ ಹಣದುಬ್ಬರ ಏರಿಕೆಯಾಗಲಿದೆ ಎಂದು ಆರ್ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಅಂದಾಜಿಸಿದೆ.
ಹಣದುಬ್ಬರವು ಆರ್ಬಿಐನ ಹಿತಕರ ಮಟ್ಟಕ್ಕಿಂತ ಕಡಿಮೆ ಇರುವುದರಿಂದ, ಅಲ್ಪಾವಧಿ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಕ್ಷೀಣಗೊಂಡಿದೆ. ಅಕ್ಟೋಬರ್ 5ರಂದು ಪ್ರಕಟಗೊಳ್ಳಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ಹೆಚ್ಚಿಸುವುದನ್ನು ಆರ್ಬಿಐ ಪರಿಗಣನೆಗೆ ತೆಗೆದುಕೊಳ್ಳಲಿಕ್ಕಿಲ್ಲ ಎಂದು ಭಾವಿಸಲಾಗಿದೆ.
No comments:
Post a Comment